ಅಥವಾ

ಒಟ್ಟು 54 ಕಡೆಗಳಲ್ಲಿ , 24 ವಚನಕಾರರು , 48 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಣ್ಣ, ಕಾಡುವ ಗುಂಗುರ ತಿಂದು, ಬಾಯ, ಕಾಡುವ ಕೈಯ ತಿಂದು, ಆಪ್ಯಾಯನವಡಸಿದ ಹೊಟ್ಟೆಯ ತಿಂದು, ಮತ್ತಿವರ ಹುಟ್ಟು ಮೆಟ್ಟನರಿಯಲೇಕೆ ? ಅರ್ಕೇಶ್ವರಲಿಂಗವನರಿಯಿರಣ್ಣಾ.
--------------
ಮಧುವಯ್ಯ
ಹೃದಯಕಮಲಮಧ್ಯದಲ್ಲಿ ಅಷ್ಟದಳ ಕಮಲವ ಮೆಟ್ಟಿಪ್ಪ ಹಂಸನ ಕಟ್ಟಬೇಕೆಂಬರು. ಈ ಹೊಟ್ಟೆಯ ಕೂಳ ಅಣ್ಣಗಳೆಲ್ಲರೂ ಕಟ್ಟಬಲ್ಲರೆ ನಿಜಹಂಸನ ? ಬೆಟ್ಟಬೆಟ್ಟವನೇರಿದ ಭೃಗು ದದ್ಥೀಚಿ ಅಗಸ್ತ್ಯ ಕಶ್ಯಪ ರೋಮಜ ಕೌಂಡಿಲ್ಯ ಚಿಪ್ಪಜ ಮುಂತಾದ ಸಪ್ತ ಋಷಿಗಳೆಲ್ಲರೊಳಗಾದ ಋಷಿಜನಂಗಳು, ಬೆಟ್ಟವನೇರಿ ಕಟ್ಟಿದುದಿಲ್ಲ. ಮತ್ತೆಯೂ ಬಟ್ಟೆಗೆ ಬಂದು ಮತ್ತರಾದರಲ್ಲದೆ, ಸುಚಿತ್ತವನರಿದುದಿಲ್ಲ. ವಿಷರುಹಕುಸುಮಜನ ಕಪಾಲವ ಹಿಡಿದಾತನ ಕೈಯಲ್ಲಿ ಗಸಣೆಗೊಳಗಾದರು. ಆತ್ಮನ ರಸಿಕವನರಿಯದೆ, ಈ ಹುಸಿಗರ ನೋಡಿ ದೆಸೆಯ ಹೊದ್ದೆನೆಂದೆ, ಪಶುಪತಿದೂರ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಕಾಶಿಯಲ್ಲಿಪ್ಪ ಈಶನನರಿಯದ ಮೂವರ ಕೊರಳು ಕೈಗಳು ಮುರಿದು ಬಿದ್ದವು. ಕೈಲಾಸದಲ್ಲಿಪ್ಪ ಈಶನನರಿಯದ ಮೂವರ ದೇಹ ಕಾಲು ಕೈಗಳು ಮುರಿದುಬಿದ್ದವು. ಶ್ರೀಶೈಲದಲ್ಲಿಪ್ಪ ಈಶನನರಿಯದ ಮೂವರ ದೇಹ ಕರುಳು ತೊಗಲುಗಳು ಉದುರಿಬಿದ್ದವು. ಸಮುದ್ರದಲ್ಲಿಪ್ಪ ಈಶನನರಿಯದಿಬ್ಬರು ಒಬ್ಬರ ಹೊಟ್ಟೆಯ ಒಬ್ಬರು ಹೊಕ್ಕು ಬಿದ್ದರು. ಇಂತೀ ದೇವ ದಾನವ ಮಾನವರು ಮೊದಲಾದ ಸಕಲರೂ ಮಹಾದಾನಿ ಸೊಡ್ಡಳನನರಿಯದೆ ತರ್ಕಿಸಿ, ಕೆಟ್ಟುಹೋದರು.
--------------
ಸೊಡ್ಡಳ ಬಾಚರಸ
ಅರಮನೆಯ ಕೂಳನಾದಡೆಯು ತಮ್ಮುದರದ ಕುದಿಹಕ್ಕೆ ಲಿಂಗಾರ್ಪಿತವೆಂದೆಡೆ ಅದು ಲಿಂಗಾರ್ಪಿತವಲ್ಲ ಆನರ್ಪಿತ. ಅದೆಂತೆಂದೆಡೆ : ಅರ್ಪಿತಂಚ ಗುರೋರ್ವಾಕ್ಯಂ ಕಿಲ್ಬಿಷಸ್ಯ ಮನೋ[s]ರ್ಪಿತಂ ಅನರ್ಪಿತಸ್ಯ ಭುಂಜಿಯಾನ್ ರೌರವಂ ನರಕಂ ವ್ರಜೇತ್ ಎಂದುದಾಗಿ ತನ್ನ ಒಡಲಕಕ್ಕುಲತೆಗೆ ಆಚಾರವನನುಸರಿಸಿ ಭವಿಶೈವ ದೈವ ತಿಥಿವಾರಂಗಳ ಹೆಸರಿನಲ್ಲಿ ಅಟ್ಟಿ ಕೂಳತಂದು ತಮ್ಮ ಇಷ್ಟಲಿಂಗಕ್ಕೆ ಕೊಟ್ಟು ಹೊಟ್ಟೆಯ ಹೊರೆವ ಆಚಾರಭ್ರಷ್ಟ ಪಂಚಮಹಾಪಾತಕರಿಗೆ ಗುರುವಿಲ್ಲ ಲಿಂಗವಿಲ್ಲ ಜಂಗಮವಿಲ್ಲ ಪಾದೋದಕವಿಲ್ಲ ಪ್ರಸಾದವಿಲ್ಲ, ಪ್ರಸಾದವಿಲ್ಲವಾಗಿ ಮುಕ್ತಿಯಿಲ್ಲ. ಮುಂದೆ ಅಘೋರ ನರಕವನುಂಬರು. ಇದನರಿದು ನಮ್ಮ ಬಸವಣ್ಣನು ತನುವಿನಲ್ಲಿ ಆಚಾರಸ್ವಾಯತವಾಗಿ. ಮನದಲ್ಲಿ ಅರಿವು ಸಾಹಿತ್ಯವಾಗಿ ಪ್ರಾಣದಲ್ಲಿ ಪ್ರಸಾದ ಸಾಹಿತ್ಯವಾಗಿ ಇಂತೀ ತನು-ಮನ-ಪ್ರಾಣಂಗಳಲ್ಲಿ ಸತ್ಯ ಸದಾಚಾರವಲ್ಲದೆ ಮತ್ತೊಂದನರಿಯದ ಭಕ್ತನು ಭವಿಶೈವ ದೈವ ತಿಥಿ ಮಾಟ ಕೂಟಂಗಳ ಮನದಲ್ಲಿ ನೆನೆಯ. ತನುವಿನಲ್ಲಿ ಬೆರಸ ಭಾವದಲ್ಲಿ ಬಗೆಗೊಳ್ಳ ಏಕಲಿಂಗ ನಿಷ್ಠಾಪರನು ಪಂಚಾಚಾರಯುಕ್ತನು ವೀರಶೈವ ಸಂಪನ್ನ ಸರ್ವಾಂಗಲಿಂಗಿ ಸಂಗನಬಸವಣ್ಣನು ಈ ಅನುವ ಎನಗೆ ಅರುಹಿಸಿ ತೋರಿದ ಕಾರಣ ನಾನು ಬದುಕಿದೆನು ಕಾಣಾ ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ಹೊಟ್ಟೆಯ ಹೊರೆಯಲಾರದೆ ಕಟ್ಟು ಸಂಸಾರವ ಕಡೆಗಿಟ್ಟು ನೆಟ್ಟನೆ ಜಂಗಮವೇಷವ ಹೊತ್ತು, ಬಟ್ಟೆಯ ಬೆಳಗನರಿಯದೆ ಕಟ್ಟು ಕ್ರಿಯಾರಾಧನೆಯ ತೋರಿ, ಪಡೆದುಂಬ ಭಕ್ತರನರಸಿ, ಕುಟಿಲವೈರಾಗ್ಯದಿಂದವರ ದ್ರವ್ಯವ ಸೆಳೆದುಕೊಂಡು ಮಾಡಿ ನೀಡಿ ಕೊಂಬ ದಾಸೋಹಿಜಂಗಮವೆನಿಸಿ ನಡೆವವರನೆಂತು ಜಂಗಮಲಿಂಗವೆನ್ನಬಹುದು? ಕೆಟ್ಟೊಡಲ ನಷ್ಟಜಂಗುಳಿಗಳ ಎನ್ನತ್ತ ತೋರದಿರಾ ಗುರುನಿರಂಜನ ಚನ್ನಬಸವಲಿಂಗಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಅಣ್ಣನ ಮೂರು ಕುತ್ತಿನಲ್ಲಿ, ಅಕ್ಕ ಮೂರು ಮಕ್ಕಳ ಹೆತ್ತು, ಅಪ್ಪನ ಕೈಯಲ್ಲಿ ಕೊಟ್ಟಳು. ಅಣ್ಣ ಹಣ್ಣಿದ ಜಗಳ. ಅಕ್ಕನ ಹೊಟ್ಟೆಯ ಕೇಡು. ಅಕ್ಕನ ಕೂಸು ಅಪ್ಪನ ತಿಂದು, ಎತ್ತ ಹೋಯಿತ್ತೆಂದರಿಯೆ. ಅರ್ಕೇಶ್ವರಲಿಂಗವ ಕೇಳುವ ಬನ್ನಿ.
--------------
ಮಧುವಯ್ಯ
ಗುರುವು ಉಂಡು ಉಟ್ಟನು, ಇಟ್ಟು ತೊಟ್ಟನು, ಕೊಟ್ಟು ಕೊಂಡಾಡುತಾನೆಂದು ಹೊಟ್ಟೆಯ ಹೊಟ್ಟೆಯ ಹೊಸಕೊಂಬ ಕೆಟ್ಟ ಹೊಲೆಯರ ಮನೆಯ ಅನ್ನ ಸುಟ್ಟ ಸುಡುಗಾಡೊಳಗಣ ಅರೆವೆಣ ಕೊರೆವೆಣನೆಂದು ಮುಟ್ಟರು ಗುರುಪಾದನಿಷ್ಠೆವುಳ್ಳವರು ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ ಶಿವಸಾಕ್ಷಿಯಾಗಿ.
--------------
ಕುಷ್ಟಗಿ ಕರಿಬಸವೇಶ್ವರ
ಲಿಂಗನಿಷ್ಪತ್ತಿಗಳಾಚರಣೆಯ ಕಂಡು, ಸಂಗಹೇಯ ಮಾಡದೆ, ಗುರುಮುಟ್ಟಿ ಗುರುವಾದೆವೆಂದು ಬಿಟ್ಟು ಹಿಡಿದು ಹಿಡಿದು ಬಿಟ್ಟು ಹೊಟ್ಟೆಯ ಹೊರೆಯಲೋಸುಗ ನಂಟುಬಿಚ್ಚಿ ಗಂಟಿಕ್ಕುವ ತುಂಟು ಹೊಯ್ಮಾಲಿಗಳನೆಂತು ಶರಣರೆನ್ನಬಹುದು ? ಕಾಸಿನಾಸೆಗೆ ದೇಶವ ತಿರುಗಿ, ಬೇಸರಿಲ್ಲದೆ ಬೇಡಿ ಬೇಡಿ ಘಾಸಿಯಾಗಿ, ಮುಂದಣ ಹೇಸಿಕೆ ಕಂಡು ಕಂಡು ಬೀಳುವ ಖೂಳ ಕುಟಿಲ ಕಾಳಮಾನವರನೆಂತು ಶರಣರೆನ್ನಬಹುದು ? ಬಾಳಿ ಬದುಕಲರಿಯದೆ ಕೇಳಿ ಮೇಳವ ಮಾಡಿ ಹಾಳುಗೋಷಿ*ಯಕಲಿತು, ಕಲಿಯುಪಾಧಿಯೊಳು ನಿಂದು ನಿಜಭಕ್ತಿ ಸುಜ್ಞಾನ ಪರಮವೈರಾಗ್ಯವನರಿಯದೆ ಹಿರಿಯರೆನಿಸಿಕೊಂಡು, ಹೋಗಿ ಬಂದುಂಬ ಕುರಿಗಳನೆಂತು ಶರಣರೆನ್ನಬಹುದು ? ನಮ್ಮ ಗುರುನಿರಂಜನ ಚನ್ನಬಸವಲಿಂಗದಂಗವೆಂಬ ಘನಪ್ರಸಾದವ ಹಿಂಗದಿರ್ದ ತ್ರಿವಿಧಶೂನ್ಯಶರಣರಂತಲ್ಲದ ಮರುಳುಗಳನೆಂತು ಶರಣರೆನ್ನಬಹುದು ?
--------------
ದೇಶಿಕೇಂದ್ರ ಸಂಗನಬಸವಯ್ಯ
ಅನುಭಾವಿ ಅನುಭಾವಿಗಳೆಂಬ ಅಜ್ಞಾನಿಗಳ ಮುಖವ ನೋಡಲಾಗದು. ಕಂಗಳ ಮುಂದಣ ಕಾಮ, ಮನದ ಮುಂದಣ ಆಸೆ, ಅಂಗದಲ್ಲಿ ಅಹಂಕಾರವಾಗಿಪ್ಪವರ ಅನುಭಾವಿಗಳೆಂಬೆನೆ ? ಸೂಳೆಯ ಮನೆಯಲ್ಲಿಪ್ಪ ಗವುಡಿಯಂತೆ ತಮ್ಮ ತಮ್ಮ ಹಿರಿಯತನವ ಮುಂದುಗೊಂಡು ಕುರಿಗಳಂತೆ ತಿರುಗುವ ಜಡರುಗಳ ಅನುಭಾವಿಗಳೆಂಬೆನೆ ? ಹತ್ತೈದ ಕೂಡಿಕೊಂಡು ಇಕ್ಕಿ ಎರೆವವರ ಮನೆಗೆ ಹೋಗಿ, ಭಕ್ತಿಬಿನ್ನಹವ ಕೈಕೊಂಡಡೆ ಬೆಕ್ಕು ಹಾಲುಕುಡಿದಂತೆ. ಅತ್ಯತ್ತಿಷ್ಠದ್ದಶಾಂಗುಲನೆಂದು ಘಟವ ಹೊರೆವ ಮಿಟ್ಟೆಯ ಭಂಡರು ಕಟ್ಟಿಗೆ ಮಣ್ಣ ಹಾಕಿ ಹೊಟ್ಟೆಯ ಹೊರೆವವನಂತೆ. ಇಷ್ಟಲಿಂಗವನರಿಯದೆ ಸತ್ಯರೆಂದು ಘಟವ ಹೊರೆವ ಘಟಕರ್ಮಿಗಳ ಮುಖವ ನೋಡಲಾಗದು ಅಮುಗೇಶ್ವರಲಿಂಗವೆ.
--------------
ಅಮುಗೆ ರಾಯಮ್ಮ
ಅಯ್ಯಾ ನಾ ಹುಟ್ಟಿದಂದಿಂದ ಎನ್ನ ಹೊಟ್ಟೆಗೆ ಕಾಣದೆ, ಮೂರುವಟ್ಟೆಯನೆ ಕಾದಿರ್ದೆನಯ್ಯಾ. ಹೊಟ್ಟೆಯ ಒಡೆಯರು ಹೊಟ್ಟೆಯ ಹೊಡೆದುಹೋದರೆ, ಎನ್ನ ಹೊಟ್ಟೆ ಏಕೆ ತುಂಬಿತ್ತೆಂದು ನೋಡಿದರೆ, ಅಲ್ಲಿ ಬಟ್ಟಬಯಲಾಗಿರ್ದಿತ್ತು ಕಾಣಾ, ಬಸವಪ್ರಿಯ ಕೂಡಲಚೆನ್ನಬಸವಣ್ಣಾ.
--------------
ಹಡಪದ ಅಪ್ಪಣ್ಣ
ಅಯ್ಯ, ಗುರುಕರಜಾತನಾಗಿ ಪ್ರಮಥರಾಚರಿಸಿದ ಸನ್ಮಾರ್ಗದಲ್ಲಾಚರಿಸಿ, ಮಹಾಲಿಂಗೈಕ್ಯಾನುಭಾವಿಯಾದ ಮೇಲೆ ಆಯುಃ ಕರ್ಮ [ಚ] ವಿತ್ತಂ ಚ ಎಂದು ಇದಕ್ಕಂಜಿ ಉಮ್ಮಳಿಸುವ ಮಾಯಾಪ್ರಸೂತಿ ಮನವ ನೋಡ. ಆಯುಷ್ಯವೆ ಚಿದ್ಘನಮಹಾಲಿಂಗ, ಶ್ರೀಯೆ ಚಿದ್ಘನಮಹಾಜಂಗಮ, ನಿಧಿನಿಧಾನವೆ ಚಿದ್ಘನ ಮಹಾಪ್ರಮಥಗನ ಶರಣರ ಭೃತ್ಯಭಕ್ತಿ ವಿದ್ಯವೆ ಪಂಚಾಕ್ಷರ-ಷಡಾಕ್ಷರ ಮೊದಲಾದ ಮಹಾಶಿವಯಂತ್ರ. ದೇಹವೆ ಗುರುಚರಪರಕ್ಕೆ ಅಷ್ಟವಿಧಾರ್ಚನೆ-ಷೋಡಶೋಪಚಾರವಾಗಲೆಂದು ಶ್ರೀಗುರುಬಸವಲಿಂಗ ಬರದನಾಗಿ ಹೊಟ್ಟೆಯ ಶಿಶುವಿಂಗೆ ಬೇರೆ ನೈವೇದ್ಯವುಂಟೇನೋ? ಶಾಂತಚಿದ್ಘನಮಹಾಲಿಂಗದಲ್ಲಿ ಸಂತೃಪ್ತನಾದ ಅಯೋನಿಸಂಭವ ನಿಜಶರಣ ನಿತ್ಯಮುಕ್ತಂಗೆ ನೋಡ ಸಂಗನಬಸವೇಶ್ವರ.
--------------
ಗುರುಸಿದ್ಧದೇವರು
ವಿಪ್ರರ ಕರೆದು `ನೃಪರುಗಳು ಇಪ್ಪರೆ ತಮ್ಮ ಶಿಶುವಿನೊಡನೆ'ಂದು ಬೆಸಗೊಂಡಡೆ, `ಇಪ್ಪರು, ಇಪ್ಪರು, ತಾವು ಬಿತ್ತಿದ ಫಲಂಗಳ ತಾವು ಉಣ್ಣದವರುಂಟೆ ಎಂದು ಕಣ್ಣ ಕಾಣದೆ ಹೇಳಿದರು, ಅಣ್ಣಗಳು, ಕರ್ಮದ ಬಟ್ಟೆಯನು. ಅಂತೆಂದ ಮಾತ ಶಿಶು ಕೇಳಿ, ಕೆಟ್ಟೋಡಿ ಬಂದು, ಲಿಂಗದ ಹೊಟ್ಟೆಯ ಹೊಗಲು, ಅಟ್ಟಿಬಂದು ಖಂಡೆಯವ ಕಳೆದುಕೊಂಡು ಮಂಡೆಯನೊಡೆಯಲು, ಮಂಡೆ ಒಡೆದು ಭೂಮಂಡಲವರಿಯೆ ನಾಲ್ಕು ಪುರವಾಗಲು, ಘಟಸರ್ಪನ ತುಡುಕಿ ನಾಗನಾಥನಾಗಿ, ಇಪ್ಪತ್ತೇಳು ಬಸದಿಯನೊಡೆಯನೆ ಆಗಳಂತೆ ಎನ್ನ ಮಾಡಿದ ಕರ್ಮ ನಿಮ್ಮ ಕೈಯಲು ಕೆಡಿಸುವರು. ಮುನ್ನೊಬ್ಬ ಕೆಡಿಸಿಹನೆಂದು ಬಂದು ತುತ್ತನಿಟ್ಟು ಮರಳಿ ಕೈಯಿಡ ಹೋದಡೆ ತುತ್ತು ಹುಳುಗುಪ್ಪೆಯಾಗದೆ ಶಿವಧರ್ಮವ ಕೆಡಿಸಿದವನು ಅಧರ್ಮಕ್ಕಿಳಿವನು. ಕೂಡಲಸಂಗಮದೇವ ಸಾಕ್ಷಿಯಾಗಿ ಮಕರಭೋಜನವಾಗನೆ ವಿನಾಶಕ್ತಿರಾಯನು.
--------------
ಬಸವಣ್ಣ
ಶ್ರೇಷ* ಶಿವಭಕ್ತರೆಂದು ಇಷ್ಟಲಿಂಗವ ಕೆಳಗೆ ಮಾಡಿ, ಸೃಷ್ಟಿಯೊಳಿಟ್ಟ ಸ್ಥಾವರಕ್ಕೆರಗಿ, ಮುಟ್ಟಿಹಾರುವ, ಜೈನ, ರಾಜ, ಮಂತ್ರಿ, ಹಿರಿಯರುಗಳೆಂದು ಪೆಟ್ಟುಪೆಟ್ಟಿಗೆ ಶರಣೆಂದು ಹೊಟ್ಟೆಯ ಹೊರೆದು ನರಕಸಮುದ್ರದೊಳ್ಮುಳುಗಾಡುವ ದುರ್ಭವಿಗಳಿಗೆತ್ತಣ ಲಿಂಗಭಕ್ತಿಯಯ್ಯಾ ಗುರುನಿರಂಜನ ಚನ್ನಬಸವಲಿಂಗಾ ?
--------------
ದೇಶಿಕೇಂದ್ರ ಸಂಗನಬಸವಯ್ಯ
ತಂಗುಳು ಬುತ್ತಿಯ ಕಟ್ಟಿ ಹೊಟ್ಟೆಯ ಮೇಲಿಕ್ಕಿಕೊಂಡಿರ್ದಡೆ ಹಸಿವು ಹೋಗಿ ಅಪ್ಯಾಯನವಹುದೆ ? ಅಂಗದ ಮೇಲೆ ಲಿಂಗವಿದ್ದಲ್ಲಿ ಫಲವೇನು ? ಅಂಗವೂ ಲಿಂಗವೂ ಕೂಡವ ಭೇದವನರಿಯದವರು ಗುರುತಲ್ಪಕರು, ಪಂಚಮಹಾಪಾತಕರು_ಅದೆಂತೆಂದಡೆ: ದ್ವೈತಭಾವಿತದುಃಖಾನಾಮದ್ವೈತಂ ಪರಮಂ ಪದಂ ಭಾರಮನ್ನಂ ಪಥಿ ಶ್ರಾಂತೇ ತಸ್ಮಿನ್ ಭುಕ್ತೇ ಸುಖಾವಹಂ ಮತ್ತೆಯೂ_ಅಂಗಾನಾಂ ಲಿಂಗಸಂಬಂಧೋ ಲಿಂಗಾನಾಮಂಗಸಂಯುತಿಃ ನಿಮಿಷಾರ್ಧ ವಿಯೋಗೇನ ನರಕೇ ಕಾಲಮಕ್ಷಯಂ ಎಂದುದಾಗಿ, ಅಂಗದಲ್ಲಿ ಲಿಂಗ ಒಡಗಲಸಬೇಕು, ಲಿಂಗದಲ್ಲಿ ಅಂಗ ಒಡಗಲಸಬೇಕು. ಇದು ಕಾರಣ_ಎಲ್ಲರೂ ಅಂಗಸಂಬಂಧಿಗಳಲ್ಲದೆ ಲಿಂಗಸಂಬಂಧಿಗಳಪೂರ್ವ ಕಾಣಾ_ಕೂಡಲಚೆನ್ನಸಂಗಮದೇವಾ
--------------
ಚನ್ನಬಸವಣ್ಣ
ಇಷ್ಟಲಿಂಗವ ತೋರಿ ನಾವು ನಿಷೆ*ವಾನರು, ನಾವು ಲಿಂಗಾಂಗಿಗಳೆಂದು ಹೊಟ್ಟೆಯ ತುಂಬಿಕೊಳಬಹುದಲ್ಲದೆ ಸರ್ವಾಂಗವನೂ ಲಿಂಗನಿಷೆ*ಯಲ್ಲಿ ಘಟ್ಟಿಗೊಳಿಸಬಾರದು ಕಾಣಿರಣ್ಣ. ಹೊಟ್ಟೆಯಾರ್ಥವುಳ್ಳವಂಗೆ ನಿಷೆ*ಯೆಲ್ಲಿಯದೊ? ನಿಷೆ* ಹೀನರಿಗೆ ನೀವು ಕನಸಿನೊಳಗೂ ಇಲ್ಲ ನೋಡಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಇನ್ನಷ್ಟು ... -->