ಅಥವಾ

ಒಟ್ಟು 118 ಕಡೆಗಳಲ್ಲಿ , 38 ವಚನಕಾರರು , 106 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಂಗ ಪ್ರಾಣ ಸಂಗವುಳ್ಳನ್ನಕ್ಕ, ಲಿಂಗಪೂಜೆಯೆಂಬ ದಂದುಗ ಬಿಡದು. ಈ ಹೊರಗು ಒಳಗಾಗಿಯಲ್ಲದೆ, ಪ್ರಾಣಲಿಂಗಿಯೆಂಬ ಸಂಬಂದ್ಥಿಯಲ್ಲ. ಲಿಂಗಕ್ಕೆ ಪ್ರಾಣ, ಪ್ರಾಣಕ್ಕೆ ಲಿಂಗ ಉಭಯಸಂಬಂಧವಾದಲ್ಲಿ, ಉರಿ ಕೊಂಡ ಕರ್ಪುರಕ್ಕೆ ತೊಡರುವುದಕ್ಕೆ ಠಾವಿಲ್ಲ, ಕಾಮಧೂಮ ಧೂಳೇಶ್ವರಾ.
--------------
ಮಾದಾರ ಧೂಳಯ್ಯ
ಆನೆತ್ತಲಯ್ಯಾ, ಕ್ರಿಮಿಕೀಟಕನಾಗಿ ಹುಟ್ಟುವನ ಹುಟ್ಟ ಕೆಡಿಸಿದೆ. ಇನ್ನಹುದಾನೇನರಿದು ಹೇಳಾ, ಎಲೆ ಅಯ್ಯಾ. ಶುದ್ಧಸಿದ್ಧಪ್ರಸಿದ್ಧವನು ತೋರಿ ಪ್ರಾಪ್ತಭೋಕ್ತಭುಕ್ತಿಯೆಂಬುದಕ್ಕೆ ಹೊರಗು ಮಾಡಿದೆ. ಇನ್ನು ನಾನಿನಪ್ಪುದೇನರಿದೈ, ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಅಂಗಲಿಂಗ ಸಹವಾಗಿ, ಆತ್ಮನರಿವು ಸಹವಾಗಿ, ಇಷ್ಟಪದಾರ್ಥವ ಇಷ್ಟ ಲಿಂಗಸಹವಾಗಿ, ರುಚಿಪದಾರ್ಥವ ಆತ್ಮಲಿಂಗಸಹವಾಗಿ, ರಸ ಗಂಧ ರೂಪ ಶಬ್ದ ಸ್ಪರ್ಶ ಪಂಚೇಂದ್ರಿಯಗಳಲ್ಲಿ ದೃಷ್ಟಪದಾರ್ಥವ ಇಷ್ಟಲಿಂಗಸಹವಾಗಿ, ಸ್ಥೂಲ ಸೂಕ್ಷ್ಮ ಕಾರಣದಲ್ಲಿ ಒಳಗು ಹೊರಗು ಸಹವಾಗಿ, ಅಳಿವು ಉಳಿವು ಸಹವಾಗಿ, ಕಾಬುದು ಕಾಣಿಸಿಕೊಂಬುದು ಸಹವಾಗಿ, ರಸವ ಕೊಂಡವನಂತೆ,ಅಸಿಯ ಮೊನೆ ಹರಿದಲ್ಲಿ ರಸ ಬಂದು ನಿಂತಂತೆ, ಎಲ್ಲಿ ಅರ್ಪಿತಕ್ಕೆ ಅಲ್ಲಿ ವಸ್ತು ಸಹವಾಗಿ ಎಲ್ಲಾ ಎಡೆಯಲ್ಲಿ ಪರಿಪೂರ್ಣ ಸಹವಾಗಿ, ಇಪ್ಪುದು ಸಹಭೋಜನಸ್ಥಲ. ಹೀಗಲ್ಲದೆ ಓಗರ ಮೇಲೋಗರವ ಲಾಗುಲಾಗಿಗೆ ತೋರುತ್ತ ಸಕಲಸಂಸಾರದ ಸಾಗರದಲ್ಲಿ ಮುಳುಗುತ್ತ, ಮರವೆ ಅಜ್ಞಾನದಲ್ಲಿ ಮರಳಿ ತಿರುಗುತ್ತ ನಾನಾವಿಕಾರತ್ರಯಗಳಿಂದ ಹುಟ್ಟುತ್ತ ಸಾವುತ್ತ, ಮತ್ತೆ ಸಾವಧಾನ ಸಹಭೋಜನವೆಂದಡೆ ನಾಚಿತ್ತು ಎನ್ನ ಮನ. ಆಚಾರವೆ ಪ್ರಾಣವಾದ ರಾಮೇಶ್ವರಲಿಂಗಕ್ಕೆ ಉಭಯವನಳಿದು ಏಕವಾದುದು ಸಹಭೋಜನಸ್ಥಲ.
--------------
ಅಕ್ಕಮ್ಮ
ಜ್ಞಾನ ಸದ್ಭಕ್ತಿ ಸನ್ನಹಿತವಾಗಿ, ಲಿಂಗ ಮುಂತಾಗಿ ಮಾಡಿದ ಕ್ರೀ ಲಿಂಗಕ್ರೀ. ಧ್ಯಾನ ಪೂಜೆ ಭಕ್ತಿಯರ್ಪಿತ ಪ್ರಸಾದ ಮುಕ್ತಿ- ಇವೆಲ್ಲವು ತನ್ನೊಳಗೆ, ಅಜ್ಞಾನ ಅಭಕ್ತಿ ಮರವೆ ಮುಂತಾದ ಕ್ರೀ ಅಂಗಕ್ರೀ, ಅದು ಹೊರಗು. ಇದು ಕಾರಣ, ಜ್ಞಾನ ಸದ್ಭಕ್ತಿ ಸನ್ನಹಿತವಾದುದೆ ಮುಕ್ತಿ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.
--------------
ಉರಿಲಿಂಗಪೆದ್ದಿ
ತನ್ನ ತಾನರಿತು ಮಾಡುವಲ್ಲಿ ತಾ ಬೇಡದೆ ಅನ್ಯರಿಗೆ ಹೇಳಿ ಈಸಿಕೊಂಬ ಡಾಳಕತನವೇಕೆ? ಅದು ಗುರುಚರಕ್ಕೆ ಅರಿವಿನ ಮತವಲ್ಲ. ಇಂತಿವನರಿದು ಮರಳಿ ಕಾಡುವ ಶಬರವೇಷಿಗಳು ಸದಾಶಿವಮೂರ್ತಿಲಿಂಗಕ್ಕೆ ಹೊರಗು.
--------------
ಅರಿವಿನ ಮಾರಿತಂದೆ
ಎಲೆ ಶಿವನೆ, ನೀನು ಎನ್ನ ಮೆಚ್ಚಿ ಕೈವಿಡಿದ ಕಾರಣ ಎಮ್ಮವರು ಸಕಲಗಣಂಗಳ ಸಾಕ್ಷಿಯಮಾಡಿ ನಿನಗೆ ಎನ್ನ ಮದುವೆಯಮಾಡಿಕೊಟ್ಟರು. ನೀನು ಎನ್ನನಗಲಿದಡೆ ಗುರುದ್ರೋಹಿ. ಆನು ನಿನ್ನನಗಲಿದಡೆ ಸಮಯಕ್ಕೆ ಹೊರಗು. ಅದೆಂತೆಂದೊಡೆ : ಮುನ್ನ ಶ್ರೀಗುರುಸ್ವಾಮಿ ಎನ್ನ ಪ್ರಾಣದೊಳಗೆ ನಿನ್ನ ಪ್ರಾಣವ ಹುದುಗಿಸಿ, ನಿನ್ನ ಪ್ರಾಣದೊಳಗೆ ಎನ್ನ ಪ್ರಾಣವ ಹುದುಗಿಸಿ ಎಂದೆಂದೂ ಅಗಲಬೇಡೆಂದು ನಿರೂಪಿಸಿದನು. ಆ ನಿರೂಪವನು ಮಹಾಪ್ರಸಾದವೆಂದು ಕೈಕೊಂಡ ಬಳಿಕ ನಾವಿಬ್ಬರು ಎಂದೆಂದಿಗೂ ಅಗಲದಿರಬೇಕಯ್ಯಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಹಾಲ ನೇಮವ ಹಿಡಿದಾತ ಬೆಕ್ಕಾಗಿ ಹುಟ್ಟುವ. ಕಡಲೆಯ ನೇಮವ ಹಿಡಿದಾತ ಕುದುರೆಯಾಗಿ ಹುಟ್ಟುವ. ಆಗ್ಘವಣಿಯ ನೇಮವ ಹಿಡಿದಾತ ಕಪ್ಪೆಯಾಗಿ ಹುಟ್ಟುವ. ಪುಷ್ಪದ ನೇಮವ ಹಿಡಿದಾತ ತುಂಬಿಯಾಗಿ ಹುಟ್ಟುವ ... ಇವು ಷಡುಸ್ಥಲಕ್ಕೆ ಹೊರಗು. ನಿಜಭಕ್ತಿ ಇಲ್ಲದವರ ಕಂಡಡೆ ಮೆಚ್ಚನು ಗುಹೇಶ್ವರನು.
--------------
ಅಲ್ಲಮಪ್ರಭುದೇವರು
ತನ್ನಯ ಬಾಯ ಶೇಷವ ಲಿಂಗಕ್ಕೆ ತೋರಿ, ಲಿಂಗದ ಶೇಷವ ತಾ ಕೊಂಡೆನೆಂದು ಕೊಂಡುದು ಪ್ರಸಾದ. ಇದ್ದುದು ಸಯಿದಾನವೆಂದು ಉಂಡು ಉಂಡು ಲಿಂಗಕ್ಕೆ ಕೊಡಬಹುದೆ ಅಯ್ಯಾ? ಅದು ಮುನ್ನವೆ ಲಿಂಗಾರ್ಪಿತ. ತನ್ನಯ ಸಂದೇಹಕ್ಕೆ ಕೊಟ್ಟುಕೊಂಡೆನೆಂಬ ಭೇದವಲ್ಲದೆ, ಇಂತೀ ಗುಣ ಸದಾಶಿವಮೂರ್ತಿಲಿಂಗಕ್ಕೆ ಹೊರಗು.
--------------
ಅರಿವಿನ ಮಾರಿತಂದೆ
ಅನಾದಿ ಪರಶಿವನಿಂದಾಕಾರವಾದ ಆದಿಬಿಂದು ಅನಾದಿಬಿಂದು ಚಿದ್ಬಿಂದು ಪರಬಿಂದುವೆ ಜಗದ ಮಧ್ಯದಲ್ಲಿ ಸ್ವಯ, ಚರ, ಪರ, ಭಕ್ತ, ಮಹೇಶ್ವರ, ಪ್ರಸಾದಿ ಪೂಜ್ಯ ಪೂಜಕತ್ವದಿಂದ ಚರಿಸುತ್ತಿರಲು, ಆ ಸಮಯದಲ್ಲಿ ಪ್ರಮಾದವಶದಿಂದ ಲಿಂಗಾಂಗಕ್ಕೆ ಸುಯಿಧಾನ ತಪ್ಪಿ ವಿಘ್ನಾದಿಗಳು ಬಂದು ತಟ್ಟಿ ಶಂಕೆ ಬಂದಲ್ಲಿ ಭಕ್ತ ಮಹೇಶ್ವರ ಶರಣಗಣಂಗಳು ವಿಚಾರಿಸಿ ನೋಡಿದಲ್ಲಿ ಸ್ಥೂಲವಾದಡೆ ಸದಾಚಾರಕ್ಕೆ ಹೊರಗು ಸೂಕ್ಷ್ಮವಾದಡೆ ಶರಣಗಣಂಗಳ ಸಮೂಹಮಧ್ಯದಲ್ಲಿ ಭೃತ್ಯಭಾವದಿಂದ ಹತ್ತು ಹನ್ನೊಂದ ಕೊಳತಕ್ಕುದಲ್ಲ ನೋಡಾ (ಕೊಳತಕ್ಕುದಲ್ಲದೆ?) ಕರ್ತೃತ್ವದಿಂದ ಹತ್ತು ಹನ್ನೊಂದ ಕೊಡತಕ್ಕುದಲ್ಲ ನೋಡಾ ! ಸ್ಥೂಲ ಸೂಕ್ಷ್ಮದ ವಿಚಾರವೆಂತೆಂದಡೆ: ಪರಶಿವಸ್ವರೂಪವಾದ ಇಷ್ಟಲಿಂಗದ ಷಟ್‍ಸ್ಥಾನದೊಳಗೆ ಆವ ಮುಖದಿಂದಾದಡೆಯು ಸುಯಿಧಾನ ತಪ್ಪಿ ಪೆಟ್ಟುಹತ್ತಿ ಭಿನ್ನವಾದಡೆ, ಭಕ್ತ ಮಹೇಶ್ವರ ಶರಣಗಣಂಗಳು ವಿಚಾರಿಸಿ ನೋಡಿ ಸ್ಥೂಲ ಸೂಕ್ಷ್ಮಕ್ಕೆ ತಕ್ಕ ಹರಗುರುವಚನ ವಿಚಾರಿಸಿರಿ ಸ್ಥೂಲ ಸೂಕ್ಷ್ಮಕ್ಕೆ ತಕ್ಕ ಪ್ರತಿಜ್ಞೆಯ ಮಾಡುವುದು, ಶಕ್ತಿ ಸ್ವರೂಪವಾದ ಅಂಗದ ಅವಯವಂಗಳಿಗೆ ಶಿವಾನುಕೂಲದಿಂದ ವ್ಯಾಘ್ರ ಭಲ್ಲೂಕ ದಂಷ್ಟ್ರ ಕರ್ಕಟ ವಾಜಿ ಮಹಿಷ ಸಾಗರದುಪ್ಪಿ ಗಜ ಶುನಿ ಶೂಕರ ಮಾರ್ಜಾಲ ಹೆಗ್ಗಣ ಉರಗ ಮೊದಲಾದ ಮಲಮಾಂಸಭಕ್ಷಕ ಪ್ರಾಣಿಗಳು ಮೋಸದಿಂದ ಪಾದ ಪಾಣಿ ಗುದ ಗುಹ್ಯ ದೇಹವ ಕಚ್ಚಿದಡೆ ಸ್ಥೂಲವೆನಿಸುವುದಯ್ಯಾ ! ಅದರಿಂದ ಮೇಲೆ ಜಿಹ್ವೆ ನಾಸಿಕ ನೇತ್ರ ಲಲಾಟ ಶ್ರೋತ್ರಂಗಳ ಕಚ್ಚಿದಡೆ ಸೂಕ್ಷ್ಮವೆನಿಸುವುದಯ್ಯಾ ! ಈ ಪ್ರಕಾರದಲ್ಲಿ ಲಿಂಗಾಂಗಕ್ಕೆ ಅಪಮೃತ್ಯು ಬಂದು ತಟ್ಟಿದಲ್ಲಿ ಆಚಾರಕ್ಕೆ ಹೊರಗಾದವರು ಗಣಮಧ್ಯದಲ್ಲಿ ಪ್ರಾಣವ ಬಿಡುವುದಯ್ಯಾ, ಇಂತಪ್ಪ ಆಚಾರಕ್ರಿಯಾನಿಷ್ಠನ ಭಕ್ತ ಮಹೇಶ್ವರ ಶರಣಗಣಂಗಳು ಜಂಗಮದ ಪಾದದಲ್ಲಿ ಸಮಾಧಿಯ ಮಾಡುವುದಯ್ಯಾ ಪ್ರಾಣತ್ಯಾಗವ ಮಾಡಲಾರದಿರ್ದಡೆ, ಭಕ್ತ ಮಹೇಶ್ವರ ಶರಣಗಣಂಗಳ ಮಹಾನೈಷ್ಠೆಯಿಂದ ಸಾಕ್ಷಾತ್ಪ್ರಭುವೆಂದು ನಂಬಿ ಅವರು ತೋರಿದ ಸೇವೆಯ ಮಾಡಿ, ಅವರು ಕೊಟ್ಟ ಧಾನ್ಯಾದಿಗಳ ಸ್ವಪಾಕವ ಮಾಡಿ ಮಹಾಪ್ರಸಾದವೆಂದು ಭಾವಿಸಿ ಪಾತಕಸೂತಕಂಗಳ ಹೊದ್ದದೆ ಆಚರಿಸಿದಾತಂಗೆ ಅವಸಾನಕಾಲದಲ್ಲಿ ಮಹಾಗಣಂಗಳು ಲಿಂಗಮುದ್ರಾಭೂಮಿಯಲ್ಲಿ ಪಾದದಳತೆಯಿಲ್ಲದೆ ನೋಟಮಾತ್ರ ಪ್ರಮಾಣಿಸಿ ಸಹಜಸಮಾಧಿಯ ಮಾಡಿ ಲಿಂಗಾಕೃತಿಪ್ರಣವಸಂಬಂಧವಾದ ತಗಡ ಸಂಬಂಧ ಮಾಡದೆ ಪುಷ್ಪಾಂಜಲಿಯ ಮಾಡದೆ, ಆ ನಿಕ್ಷೇಪ ಸ್ಥಾನದಲ್ಲಿ ಜಂಗಮದ ಪಾದವಿಟ್ಟು ಆ ಮರಣಸನ್ನದ್ಧನ ನಿಕ್ಷೇಪನ ಮಾಡುವುದಯ್ಯಾ. ಈ ರೀತಿಯಿಂದಾಚರಿಸಿದಡೆ ಮರಳಿ ಗುರುಕರಜಾತನಾಗಿ ಸದ್ಭಕ್ತಿ ಜ್ಞಾನಾಚಾರ ಕ್ರೀಯಲ್ಲಿ ನಡೆನುಡಿಸಂಪನ್ನನಾಗಿ ಷಟ್‍ಸ್ಥಲದ ಬ್ರಹ್ಮವ ಕೂಡಿ ಘನಸಾರದಂತೆ ಸರ್ವಾಂಗವೆಲ್ಲ ಜ್ಯೋತಿರ್ಮಯಲಿಂಗದಲ್ಲಿ ನಿರವಯವಪ್ಪುದು ನೋಡಾ ! ಇಂತು ಗುರುಮಾರ್ಗಾಚಾರವ ಮೀರಿ, ಅವಧೂತಮಾರ್ಗದಲ್ಲಿ ನಡೆದಡೆ, ಇರುವೆ ಮೊದಲಾನೆ ಕಡೆಯಾದ ಸಮಸ್ತ ಯೋನಿಯಲ್ಲಿ ಜನಿಸಿ, ಸುಖ-ದುಃಖ, ಪುಣ್ಯ-ಪಾಪ, ಸ್ವರ್ಗ-ನರಕವನನುಭವಿಸಿ ಕಾಲಕಾಮಾದಿಗೊಳಗಾಗಿ ಗುರುಮಾರ್ಗಾಚಾರಕ್ಕೆ ಹೊರಗಾಗಿ ಹೋಹರು ನೋಡಾ, ಕೂಡಲಚೆನ್ನಸಂಗಮದೇವಾ !
--------------
ಚನ್ನಬಸವಣ್ಣ
ತನುಗುಣನಾಸ್ತಿ ಮನಗುಣನಾಸ್ತಿ ಧನಗುಣನಾಸ್ತಿಯಾದಡೇನು ? ಭಾವನಾಸ್ತಿಯಾಗಿರಬೇಕು. ಭಾವನಾಸ್ತಿಯಾದಲ್ಲದೆ ಅರಿವು ನೆಲೆಗೊಳ್ಳದು. ಅರಿವು ನೆಲೆಗೊಂಡಲ್ಲಿ ಕುರುಹಿಂಗೆ ಹೊರಗು ಕುರುಹಳಿದು ಕೂಡುವ ಪರಮಸುಖವು, ಗುಹೇಶ್ವರಲಿಂಗದಲ್ಲಿ ನಿನಗೆ ಸಾಧ್ಯವಾದ ಪರಿಯ ಹೇಳಾ ಮಡಿವಾಳ ಮಾಚಯ್ಯಾ ?
--------------
ಅಲ್ಲಮಪ್ರಭುದೇವರು
ಹಸುವಿಗೆ ಹಾಗ, ಎತ್ತಿಗೆ ಹಣವಡ್ಡ, ಕರುವಿಗೆ ಮೂರು ಹಣ, ಎಮ್ಮೆ ಕೋಣಕುಲವ ನಾ ಕಾಯಲಿಲ್ಲ. ಅವು ಎನ್ನ ತುರುವಿಗೆ ಹೊರಗು. ತೊಂಡು ಹೋಗದಂತೆ ಕಾದೊಪ್ಪಿಸುವೆ ಗೋಪತಿನಾಥ ವಿಶ್ವೇಶ್ವರಲಿಂಗಕ್ಕೆ.
--------------
ತುರುಗಾಹಿ ರಾಮಣ್ಣ
ವಂದಿಸಿ ನಿಂದಿಸಿ ಮತ್ತೆ ಅದಾರಿಂಗೆ ಕೇಡೆಂಬುದನರಿತು ತಾ ನೋಯಲೇತಕೆ? ಕಟ್ಟಿದ ತಟಾಕವನೊಡೆಯ ಕುಕ್ಕಿದ ಮತ್ತೆ ಆರನುಭವದ ನಷ್ಟ ಅದಾರಿಗೆ ಹೇಳಾ? ಭೂಮಿಯ ಬಡತನಕ್ಕೆ ಬೀಜವಿಲ್ಲ ಪತ್ರಭಾಜನ ಹಸಿಯಿತ್ತೆಂದು ಓಗರವಿಲ್ಲ. ಮಾಟಕೂಟದಲ್ಲಿ ಇಕ್ಕಿ ಎರೆದು ಕೊಟ್ಟು ಕೊಂಡು ಚಿತ್ತ ಶುದ್ಧವಿಲ್ಲಾಯೆಂದು ನುಡಿಯಲೇತಕ್ಕೆ? ಬೆಳೆದ ಬೆಳಸ ಕಳದಲ್ಲಿ ಕಡೆಗಾಣಿಸಿದ ಮತ್ತೆ ಹೋದ ಹೊಲಬ ಬಳಸಲೇತಕ್ಕೆ ತನ್ನ ತಾನರಿದು? ಜಗ ತನಗನ್ಯವಿಲ್ಲೆಂದು ಅರಿದ ಮತ್ತೆ ಪ್ರತಿಮೂದಲೆಗೊಡಲಿಲ್ಲ. ಆತ ಉಭಯ ಶುದ್ಧಾತ್ಮನು. ತ್ರಿಗುಣರಹಿತನು, ತ್ರಿಗುಣಾತ್ಮಭರಿತನು. ಆತ ಕೂಗಿನ ದನಿಗೆ ಹೊರಗು ಮಹಾಮಹಿಮ ಮಾರೇಶ್ವರಾ.
--------------
ಕೂಗಿನ ಮಾರಯ್ಯ
ಕಾಯದ ಕಕ್ಕುಲತೆಗಾಗಿ ಜೀವಿಗಳ ಬಾಗಿಲ ಕಾಯದೆ, ಈಷಣತ್ರಯಕ್ಕಾಗಿ ಭವದುಃಖಿಗಳ ಬಾಗಿಲಲ್ಲಿ ನಿಂದು ವೇಳೆಯ ಕಾವಂಗೆ ಭಾವರಹಿತ ಬ್ರಹ್ಮವೇಕೆ? ಅದು ನಾಣ್ನುಡಿಗಳೊಳಗು, ಸದಾಶಿವಮೂರ್ತಿಲಿಂಗಕ್ಕೆ ಹೊರಗು.
--------------
ಅರಿವಿನ ಮಾರಿತಂದೆ
ಗುರುಚರಮೂರ್ತಿ ಪೂಜಿಸಿಕೊಂಬಲ್ಲಿ ತಮ್ಮ ವಿವರವ ತಾವರಿಯಬೇಕು. ಹೆಣ್ಣು ಹೊನ್ನು ಮಣ್ಣು ಹೊರಗೆಂದು ಕೆಲವರಿಗೆ ಹೇಳಿ ಗನ್ನದಿಂದ ತಾವು ಗಳಿಸಿ ಕೂಡುವುದು, ಅದು ತಾನೆ ಅನ್ಯಾಯವಲ್ಲವೆ? ಬಿರಿದ ಕಟ್ಟಿದ ಬಂಟ ಭಾಷೆಗೆ ತಪ್ಪಿದಡೆ, ರಾಜನ ಮುಖಕ್ಕೆ ಏರಿದಡೆ, ಅದೆ ಭಂಗ. ಇಂತಿವನರಿಯದೆ ಮೂಗ ಕೊಯಿದು ಮಾರಿ, ಹಣ್ಣ ಮೆಲುವ ಅಣ್ಣಗಳಿಗೇಕೆ ಗುರುಚರಸ್ಥಲ? ಇಂತಿವರೆಲ್ಲರು ಸದಾಶಿವಮೂರ್ತಿಲಿಂಗಕ್ಕೆ ಹೊರಗು.
--------------
ಅರಿವಿನ ಮಾರಿತಂದೆ
ಪರ್ವತಕ್ಕೆ ಕಂಬಿ ಕಾವಡಿಯ ಜೀಯರು ದ್ವಿಜರೊಯ್ವರಲ್ಲದೆ ಜಂಗಮದೇವರೊಯ್ವರೆ? ಆ ಜಂಗಮದೇವರ ಮೇಲೆ ಹೊರಿಸುವನೆ ಭಕ್ತ ? ಅವರು ಭಕ್ತರೊಡೆಯರಲ್ಲ. ಅವರು ದೇವಲೋಕ ಮತ್ರ್ಯಲೋಕಕ್ಕೆ ಹೊರಗು. ಹೊಯ್ಯೋ ಡಂಗುರವ, ಕಲಿದೇವರು ಸಾಕ್ಷಿಯಾಗಿ.
--------------
ಮಡಿವಾಳ ಮಾಚಿದೇವ
ಇನ್ನಷ್ಟು ... -->