ಅಥವಾ

ಒಟ್ಟು 8 ಕಡೆಗಳಲ್ಲಿ , 7 ವಚನಕಾರರು , 8 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ವೇದವೆಂಬುದು ವೇದ್ಯರಿಗಲ್ಲದೆ ಸಾಧ್ಯವಲ್ಲ. ಅದೆಂತೆಂದಡೆ : ಬಿಂದು ವ್ಯಂಜನ ಗುರು ಲಘು ಸಮಾಸ ವಿಭಕ್ತಿಯ ನೇಮ ಬೀಜಾಕ್ಷರ ಐವತ್ತೆರಡರ ಭೇದದೊಳಗಲ್ಲದೆ, ಇಂತಿವೆಲ್ಲವೂ ಒಂದರಲ್ಲಿ ಹುಟ್ಟಿ, ಒಂದರಲ್ಲಿ ಬೆಳೆದು, ಒಂದರಲ್ಲಿ ಲಯವಹ ಕಾರಣ, ಇಂತೀ ವೇದಿಗಳೆಲ್ಲರೂ ವೇದಾಂತ ಸಿದ್ಧಾಂತದನುವನರಿಯದೆ, ಯಾಗವ ಮಾಡಿಹೆವೆಂದು ತಿಲ ಘೃತ ಸಮಿದೆ ಮೊದಲಾದ ಅಜಹತ ದಿಗ್ಭಂಧನಂಗಳಲ್ಲಿ ಪ್ರವರ್ತನ ಗ್ರಹಂಗಳಲ್ಲಿ ಕರ್ಮವ ಮಾಡಿ, ಅಗ್ನಿಗಾಹುತಿ ಕೊಟ್ಟಲ್ಲಿ , ಆತ ವೇದಾಂತನೆ ಬಲುರೋಗಾಂತನಲ್ಲದೆ ? ಇನ್ನು ವೇದಾಂತಸಿದ್ಧಿಯ ಕೇಳಿರೊ : ಪೂರ್ವದಲ್ಲಿ ಹುಟ್ಟುವದನರಿದು, ಮಧ್ಯದಲ್ಲಿ ಬೆಳೆವುದ ನಿಧಾನಿಸಿ, ಉತ್ತರದಲ್ಲಿ ಕಟ್ಟಕಡೆ ಎಂಬುದ ವಿಚಾರಿಸಿ ಲಕ್ಷಿಸಿ, ಇಂತೀ ತ್ರಿವಿಧದ ಭೇದವ ಕಿತ್ತುಹಾಕಿ, ಒಂ ಎಂಬ ಅರ್ಥವ ತಿಳಿದು, ನಯೆಂಬ ನಕಾರಮಂ ತಿಳಿದು, ನಾನಾರೆಂಬುದ ಭಾವಿಸಿ, ಮಯೆಂಬ ಮದರೂಪಂ ವರ್ಜಿಸಿ, ಶಿಯೆಂಬ ಶಿಕಾರವ ಸ್ವೀಕರಿಸಿ, ಯಯೆಂಬ ಯಕಾರವ ನಾಲ್ಕರಲ್ಲಿ ಏಕೀಕರಿಸಿದ ಮತ್ತೆ , ವೇದವೇದ್ಯನು ನೋಡಾ, ಲಲಾಮಬ್ಥಿಮಸಂಗಮೇಶ್ವರಲಿಂಗವು.
--------------
ವೇದಮೂರ್ತಿ ಸಂಗಣ್ಣ
ಹೊಲೆಯೊಳಗೆ ಹುಟ್ಟಿ ಕುಲವನರಸುವೆ, ಎಲವೊ, ಮಾತಂಗಿಯ ಮಗ ನೀನು. ಸತ್ತುದನೆಳೆವನೆತ್ತಳ ಹೊಲೆಯ ಹೊತ್ತು ತಂದು ನೀವು ಕೊಲುವಿರಿ. ಶಾಸ್ತ್ರವೆಂಬುದು ಹೋತಿಂಗೆ ಮಾರಿ, ವೇದವೆಂಬುದು ನಿಮಗೆ ತಿಳಿಯದು. ನಮ್ಮ ಕೂಡಲಸಂಗನ ಶರಣರು. ಕರ್ಮವಿರಹಿತರು, ಶರಣಸನ್ನಿಹಿತರು, ಅನುಪಮಚಾರಿತ್ರರು. ಅವರಿಗೆ ತೋರಲು ಪ್ರತಿಯಿಲ್ಲವೋ.
--------------
ಬಸವಣ್ಣ
ವೇದದಿಂದ ವೆಗ್ಗಳವಿಲ್ಲವೆಂಬಿರಿ, ವೇದ ಶಿವನ ಕಂಡುದಿಲ್ಲ. ಶಾಸ್ತ್ರದಿಂದ ವೆಗ್ಗಳವಿಲ್ಲ]ವೆಂಬಿರಿ, ಶಾಸ್ತ್ರ ಶಿವನ ಕಂಡುದಿಲ್ಲ. ವೇದವೆಂಬುದು ವಿಪ್ರರ ಬೋಧೆ. ಶಾಸ್ತ್ರವೆಂಬುದು ಸಂತೆಯ ಗೋಷಿ*. ಅನುಭಾವದಿಂದ ತನ್ನೊಳಗಣ ತನುವ, ತಾನರಿತಂಥ ಭಕ್ತರಿಂದ ವೆಗ್ಗಳವಿಲ್ಲವೆಂದ, ಕಲಿದೇವರದೇವಯ್ಯ.
--------------
ಮಡಿವಾಳ ಮಾಚಿದೇವ
ವೇದವೆಂಬುದು ಓದಿನ ಮಾತು; ಶಾಸ್ತ್ರವೆಂಬುದು ಸಂತೆಯ ಸುದ್ದಿ. ಪುರಾಣವೆಂಬುದು ಪುಂಡರ ಗೋಷಿ*, ತರ್ಕವೆಂಬುದು ತಗರ ಹೋರಟೆ. ಭಕ್ತಿ ಎಂಬುದು ತೋರಿ ಉಂಬ ಲಾಭ. ಗುಹೇಶ್ವರನೆಂಬುದು ಮೀರಿದ ಘನವು
--------------
ಅಲ್ಲಮಪ್ರಭುದೇವರು
ವೇದವೆಂಬುದು ವಾದ, ವೈದಿಕತ್ವ ಮಾಯಾಭೇದ. ದೇವತಾ ದೇವತೆ ಕುಲ ಋಷಿ ಪ್ರಯೋಗಯಾಗಕ್ರಮ ದಿಗ್ವಳಯ ಬಂಧನ, ಗ್ರಹಸಂಬಂಧಯೋಗ. ಇಂತಿವು ಮೊದಲಾದ ಕರ್ಮಂಗಳಲ್ಲಿ ವ[ತಿರ್]ಸಿ ನಿಂದ ಸ್ವಯವಾವುದು ? ಧರ್ಮಶಾಸ್ತ್ರವ ತಿಳಿದು, ಶಿಲ್ಪ ವೈದಿಕ ಜೋಯಿಸ ಇವು ಮುಂತಾದ ನಾನಾ ಭೇದಂಗಳ ಹೇಳಿ ತನ್ನ ಅಳಿವು ಉಳಿವು ಕಂಡುದಿಲ್ಲ. ಪುರಾಣವನೋದಿ ಕೆಲರ್ಗೆ ಹೇಳಿ ಪೂರ್ವಯಥ್ಞಿಕಥನ ಮುಂತಾದ ರಾಮರಾವಣಾದಿಗಳು ಚಕ್ರವರ್ತಿಗಳು ಮುಂತಾದ ಧರ್ಮಕರ್ಮಂಗಳನೋದಿ ಬೋಧಿಸಿದಲ್ಲಿಯೂ ಸಫಲವಾದುದಿಲ್ಲ. ಇಂತಿವನ್ನೆಲ್ಲವನರಿತು, ಉಭಯಸಂಧಿಯ ಉಪೇಕ್ಷಿಸಿದಲ್ಲಿ ಬಿಡುಮುಡಿ ಉಭಯದ ಭೇದವ ತಾನರಿತು ಮಲತ್ರಯಕ್ಕೆ ದೂರಸ್ಥನಾಗಿ ತ್ರಿವಿಧಾತ್ಮಕ್ಕೆ ಅಳಿವು ಉಳಿವನರಿತು ಆರಾರ ಮನ ಧರ್ಮಂಗಳಲ್ಲಿ ಭೇದವಿಲ್ಲದೆ ನುಡಿದು ಅಭೇದ್ಯಮೂರ್ತಿಯ ತೋರಿ, ವಿಭೇದವ ಬಿಡಿಸಿ ತರಣಿಯ ಕಿರಣದಂತೆ, ವಾರಿಯ ಸಾರದಂತೆ 'ಖಲ್ವಿದಂ ಬ್ರಹ್ಮವಸ್ತು'ವೆಂದಲ್ಲಿ, ಏಕಮೇವನದ್ವಿತೀಯನೆಂದಲ್ಲಿ 'ಓಂ ಭರ್ಗೋ ದೇವಸ್ಯ ಧೀಮಹಿ' ಯೆಂದಲ್ಲಿ ಆದಿ ಪರಮೇಶ್ವರನೆಂದಲ್ಲಿ, ಆದಿ ಪುರುಷೋತ್ತಮನೆಂದಲ್ಲಿ ಆರಾರ ಭೇದಕ್ಕೆ ಭೇದ. ತ್ರಿಮೂರ್ತಿಗಳ ಜಗಹಿತಾರ್ಥವಾಗಿ ಸಂಶಯಸಿದ್ಧಿಯಿಂದ ತಿಳಿವುದು. ಸರ್ವಶಾಸ್ತ್ರದಿಂದ ಈ ಗುಣವಾಚಕರಿಗೆ ದೂಷಣದಿಂದ ನುಡಿವರಿಗೆ ಹಾಕಿದ ಮುಂಡಿಗೆ ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗವಲ್ಲದಿಲ್ಲಾ ಎಂಬೆನು.
--------------
ಪ್ರಸಾದಿ ಭೋಗಣ್ಣ
ವೇದವೆಂಬುದು ಮಾಯಿಕದ ಕೈಯ ವಿಕಾರದಲ್ಲಿ ಹುಟ್ಟಿತ್ತು. ಆಗಮವೆಂಬುದು ಮಾಯಿಕದ ಬಾಯವಿಕಾರದಲ್ಲಿ ಹುಟ್ಟಿತ್ತು. ಶಾಸ್ತ್ರವೆಂಬುದು ಮಾಯಿಕದ ದೇಹವಿಕಾರದಲ್ಲಿ ಹುಟ್ಟಿತ್ತು. ಇದು ಕಾರಣ, ಇವ ತೂರಿ ಕಳೆದು ಮಹಾಸ್ಥಲದಲ್ಲಿ ನಿಂದವರುಗಳನಲ್ಲದೆ, ಮಹಾಲಿಂಗ ಕಲ್ಲೇಶ್ವರದೇವರು[ವೊ]ಲ್ಲರು.
--------------
ಹಾವಿನಹಾಳ ಕಲ್ಲಯ್ಯ
ವೇದವಾವುದು, ವೇದ್ಯವಾವುದು? ವೇದವಿಧಾನವಾವುದೆಂದರಿವವರು ನೀವು ಕೇಳಿರೆ! ವೇದವೆಂಬುದು ಬರಿಯರಿವು. ಮಹಾಲಿಂಗವನರಿದಾತನೆ ವೇದ್ಯನೆಂದು ಶಬ್ದಾದಿ ಸಕಲವಯ್ಯಾ. ವೇದ ವೇದ್ಯರೂಪ ವೇದವಿದನು ಸಿಮ್ಮಲಿಗೆಯ ಚೆನ್ನರಾಮಾ.
--------------
ಚಂದಿಮರಸ
ವೇದವೆಂಬುದು ಮಾಯಿಕದ ಕೈಯವಿಕಾರದಲ್ಲಿ ಹುಟ್ಟಿತ್ತು. ಆಗಮವೆಂಬುದು ಮಾಯಿಕದ ಬಾಯವಿಕಾರದಲ್ಲಿ ಹುಟ್ಟಿತ್ತು. ಶಾಸ್ತ್ರವೆಂಬುದು ಮಾಯಿಕದ ವೇಷವಿಕಾರದಲ್ಲಿ ಹುಟ್ಟಿತ್ತು. ಪುರಾಣವೆಂಬುದು ಮಾಯಿಕದ ಕಾಲವಿಕಾರದಲ್ಲಿ ಹುಟ್ಟಿತ್ತು. ಇದು ಕಾರಣ, ಇವ ತೋರಿ ಕಳೆದು, ಮಹಾಸ್ಥಲದಲ್ಲಿ ನಿಂದವರುಗಳಲ್ಲದೆ, ಮಹಾಲಿಂಗ ಕಲಿದೇವರದೇವನೊಲ್ಲನು.
--------------
ಮಡಿವಾಳ ಮಾಚಿದೇವ
-->