ಅಥವಾ
(4) (1) (4) (0) (0) (0) (0) (0) (0) (1) (0) (0) (0) (0) ಅಂ (2) ಅಃ (2) (0) (0) (1) (0) (0) (0) (0) (1) (0) (0) (0) (0) (0) (0) (0) (0) (0) (0) (0) (1) (16) (0) (0) (2) (1) (0) (0) (0) (3) (1) (2) (0) (0) (0) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಲಿಂಗಾಂಗಿ ಲಿಂಗಪ್ರಾಣಿಗಳು ಪ್ರಸಾದಕಾಯ ಮಂತ್ರಮೂರ್ತಿಗಳು. ಅವರು ನೋಡಿದುದೆಲ್ಲ ಲಿಂಗದೃಷ್ಟಿ, ಅವರು ಕೇಳಿದುದೆಲ್ಲ ಲಿಂಗಸ್ತೋತ್ರ. ಅವರು ಮುಟ್ಟಿದುದೆಲ್ಲ ಲಿಂಗಹಸ್ತ, ಅವರು ಘ್ರಾಣಿಸುವುದೆಲ್ಲ ಲಿಂಗಘ್ರಾಣ. ಅವರು ರುಚಿಸುವುದೆಲ್ಲ ಲಿಂಗಜಿಹ್ವೆ. ಅವರ ಸರ್ವೇಂದ್ರಿಯಮುಖದಲ್ಲಿ ಪರಿಣಮಿಸುವುದು ಲಿಂಗ ತಾನೆ. ಇಂತು ಶರಣಗಣಂಗಳಿಗೆ ಲಿಂಗಕ್ಕೆ ಕೊಟ್ಟು ಕೊಡಲಿಲ್ಲವೆಂಬ ಭಂಗಿತರುಗಳಿಗೆ ಶಿವಲಿಂಗ ಮುನ್ನವಿಲ್ಲವೆಂದ, ಚೆನ್ನಯ್ಯಪ್ರಿಯ ನಿರ್ಮಾಯಪ್ರಭುವೆ.
--------------
ಚೆನ್ನಯ್ಯ
ಲಿಂಗಸೋಂಕಿ ಲಿಂಗವಾಗದಿದ್ದರೆ ಅದು ಲಿಂಗವಲ್ಲ. ಪ್ರಸಾದಸೋಂಕಿ ಪ್ರಸಾದವಾಗದಿದ್ದರೆ ಅದು ಪ್ರಸಾದವಲ್ಲ, ಅದು ಅಶುದ್ಭ. ಮಂತ್ರಸೋಂಕಿ ಮಂತ್ರಮೂರ್ತಿಯಾಗದಿದ್ದರೆ ಅದು ಮಂತ್ರವಲ್ಲ, ಅದರ ಭಾವ ಬೇರೆ. ಈ ತ್ರಿವಿಧ ಭೇದವನರಿಯದ ವೇಷಧಾರಿಗಳು ಭಕ್ತರಲ್ಲ. ದೇವಭಕ್ತರಾದರೇನು, ಮಲದೇಹಿ ಮಾಂಸಪಿಂಡ ಇರುವದು. ತಮ್ಮ ದೇಹ ಕಲ್ಲುಸೋಂಕಿ ಹಸ್ತ ಸುಚಿತ್ತವಾಯಿತೆಂದು ಪುಕಳಿಯನೊರೆಸುವ ಅರಿವೆಯಲ್ಲಿ ಮಗಿ ಹಿಡಿದು ನೀರು ಹೊಯ್ದುಕೊಂಡು ಶುದ್ಧವಾಯಿತೆಂಬವರು, ಅವರು ಮಲದೇಹಿ, ಅವನ ಹಸ್ತ ಶುದ್ಧವಲ್ಲ, ಅದು ಅಶುದ್ಧ. ಆ ಕೈಯಲಿ ಲಿಂಗವ ಹಿಡಿದುದು ಲಿಂಗವಲ್ಲ, ಅದು ಪ್ರೇತಲಿಂಗ. 'ಸಂಸಾರೀ ಭೂತಃ ಪ್ರಾಣೇನ ಜಾಯತೇ ಪ್ರಾತಃಕಾಲೇ | ಮುಖಂ ದೃಷ್ಟ್ವಾ ಕೋಟಿ ಜನ್ಮನಿ ಸೂಕರಃ||' ಇಂತಪ್ಪ ತಮ್ಮ ಅಂಗದ ಅಶುದ್ಧವ ಕಳೆಯಲಾರದೆ ಲಿಂಗಾಂಗಿ ಲಿಂಗಪ್ರಾಣಿಗಳೆಂದೆನಿಸುವ ವೇಷಧಾರಿಗಳಿಗೆ ಹಂದಿಯ ಜನ್ಮ ತಪ್ಪದೆಂದ ನಿಮ್ಮ ಶರಣ, ಚೆನ್ನಯ್ಯಪ್ರಿಯ ನಿರ್ಮಾಯಪ್ರಭುವೆ.
--------------
ಚೆನ್ನಯ್ಯ
ಲಿಂಗಾಂಗಿ ಲಿಂಗಪ್ರಾಣಿ ಲಿಂಗಾತ್ಮಕ ಲಿಂಗಚೈತನ್ಯ ಶರಣನ ಇಂಗಿತವನರಿಯದೆ ದೂಷಿಸುವ ವೇಷಧಾರಿಗಳೆ ಕೇಳಿರೊ. ಲಿಂಗವ ಪೂಜಿಸಿ ಲಿಂಗಾಂಗಿಗಳ ದೂಷಿಸಿದರೆ ಆ ಲಿಂಗ ನಿಮಗೆ ಕಾಲಾಗ್ನಿರುದ್ರನು. ನಿಮ್ಮ ನಾಲಿಗೆ ಹೆಡದೆಲೆಯಲ್ಲಿ ತೆಗೆದು ಭುಂಜಿಸುವನು. ಎಚ್ಚತ್ತು ನುಡಿಯಿರಿ ದೋಷಕಾರಿಗಳೆಂದ ನಿಮ್ಮ ಶರಣ, ಚೆನ್ನಯ್ಯಪ್ರಿಯ ನಿರ್ಮಾಯಪ್ರಭುವೆ.
--------------
ಚೆನ್ನಯ್ಯ