ಅಥವಾ
(4) (1) (4) (0) (0) (0) (0) (0) (0) (1) (0) (0) (0) (0) ಅಂ (2) ಅಃ (2) (0) (0) (1) (0) (0) (0) (0) (1) (0) (0) (0) (0) (0) (0) (0) (0) (0) (0) (0) (1) (16) (0) (0) (2) (1) (0) (0) (0) (3) (1) (2) (0) (0) (0) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಪ್ರಸಾದ ಸೋಂಕಿದ ತನುವೆಲ್ಲ ಲಿಂಗಮಯ, ರೋಮರೋಮವೆಲ್ಲ ಲಿಂಗ. ಆ ಭಕ್ತಂಗೆ ಆಧಾರಸ್ಥಾನವೆ ನಿಜಸ್ಥಾನ. ಆಧಾರಚಕ್ರದಲ್ಲಿ ನಾಲ್ಕೆಸಳಿನ ತಾವರೆ ಕಮಲದ ಮಧ್ಯದಲ್ಲಿ ಬಾಲಾರ್ಕಕೋಟಿ ಸೂರ್ಯಪ್ರಕಾಶನುಳ್ಳುದು ಆಚಾರಲಿಂಗ. ಆ ಭಕ್ತನ ಗುಹ್ಯದಲ್ಲಿ ಗುರುಲಿಂಗ, ಆ ಭಕ್ತನ ಮಣಿಪೂರಕದಲ್ಲಿ ಶಿವಲಿಂಗ. ಆ ಭಕ್ತನ ಅನಾಹತದಲ್ಲಿ ಜಂಗಮಲಿಂಗವಿಹುದು. ಆ ಭಕ್ತನ ವಿಶುದ್ಧಿಚಕ್ರದಲ್ಲಿ ಪ್ರಸಾದಲಿಂಗವಿಹುದು. ಆ ಭಕ್ತನ ಭ್ರೂಮಧ್ಯದಲ್ಲಿ ಮಹಾಲಿಂಗವಿಹುದು. ಆ ಭಕ್ತನ ಆಧಾರದಲ್ಲಿ ನಕಾರ ಪ್ರಣಮದ ಜನನವು. ಆಣವಮಲ, ಮಾಯಾಮಲ, ಕಾರ್ಮಿಕಮಲ ಅನಂತಕೋಟಿಗಳಿಗೆ ನಕಾರವೇ ಮೂಲ. ಇನ್ನೂರು ಹದಿನಾರು ಭುವನಂಗಳು ಆ ಭಕ್ತನ ಗುದದಲ್ಲಿ ಬಿದ್ದಿದ್ದವಷ್ಟು ಹದಿನೆಂಟುಧಾನ್ಯಕ್ಕೆ ಶಾಕಪತ್ರ ಕಂದಮೂಲ ಫಲಾದಿಗಳಿಗೆ ಭೂಮಿ ಎಂದುದಾಗಿ. ಉಂಬುವದು ಅಗ್ನಿ, ಉಡುವದು ಪೃಥ್ವಿ ಎಂದುದಾಗಿ. ಈ ಜಗವೆಲ್ಲ ಮಲವನೆ ಭುಂಜಿಸಿ ಮಲವನೆ ವಿಸರ್ಜನೆಯಂ ಮಾಡುವರು. ಇದು ಕಾರಣ ಇದ ಕೊಂಬುವದು ಪ್ರಸಾದವಲ್ಲ. ಕೊಟ್ಟಾತ ಗುರುವಲ್ಲ, ಕೊಂಡಾತ ಸದ್ಭಕ್ತನಲ್ಲ. ಈ ಪ್ರಸಾದವ ಕೊಳ್ಳಬಲ್ಲರು ನಮ್ಮ ಶರಣರು. ಪ್ರಸಾದವೆಂತೆಂದಡೆ : ಅವರ್ಣ, ಆದಿ, ಅವ್ಯಕ್ತ. ಆ ನಾಮವು, ಭರ್ಗೋದೇವಾದಿ ಪಂಚಮೂರ್ತಿಗಳಿಗೆ ಆಶ್ರಯವಾಯಿತು. ಕರಣಚತುಷ್ಟಯಂಗಳಿಗೆ ನಿಲುಕದು. ಪ್ರಾಣಾದಿ ವಾಯುಗಳಿಗೆ, ಶ್ರೋತ್ರಾದಿ ಜ್ಞಾನೇಂದ್ರಿಯಂಗಳಿಗೆ ಅಗಮ್ಯ. ವಾಕ್ಕಾದಿ ಕರ್ಮೇಂದ್ರಿಯಗಳಿಗೆ ತೋರದು. ನಿಜಾನಂದ ನಿತ್ಯಪರಿಪೂರ್ಣ ಪ್ರಸಾದವು ಚೆನ್ನಯ್ಯಪ್ರಿಯ ನಿರ್ಮಾಯ ಪ್ರಭುವೆ, ನಿಮ್ಮ ಶರಣರಿಗಲ್ಲದೆ ಉಳಿದ ಜಡಜೀವಿಗಳಿಗೆ ಅಸಾಧ್ಯ.
--------------
ಚೆನ್ನಯ್ಯ
ಪ್ರಸಾದವ ಕೊಂಡ ಶರಣನ ಸರ್ವಾಂಗವೆಲ್ಲ ಪ್ರಸಾದ ತಾನಾಯಿತ್ತು. ಕಾರಣ ಅಸ್ಥಿ ಸೌಮ್ಯವಾಯಿತ್ತು. ಮಾಂಸ[ಪಿಂಡ] ಮಂತ್ರರೂಪವಾಯಿತ್ತು. ಚರ್ಮ ಚಿದ್ರೂಪವಾಯಿತ್ತು, ನಾಡಿ ನಿರಂಜನವಾಯಿತ್ತು, ರೋಮ ಓಂ ರೂಪವಾಯಿತ್ತು. ಇಂತೀ ಪಂಚಭೂತಕಾಯ ಪ್ರಸಾದ[ಕಾಯ]ವಾಯಿತ್ತು. ಮಾಂಸಪಿಂಡ ಮಂತ್ರಪಿಂಡವಾಯಿತ್ತು. ವಾಯು ಪ್ರಾಣಲಿಂಗ ಪ್ರಾಣವಾಯಿತ್ತು. ನರರೂಪ ಹರರೂಪವಾಯಿತ್ತು. ಹರರೂಪ ಗುರು ಚರ ಪರಮ ಪ್ರಸಾದವಾಯಿತ್ತು. ದೇವಭಕ್ತನ ಪ್ರಸಾದವೆ ಭಕ್ತಿ ಮುಕ್ತಿಪ್ರಸಾದ ತಾನೆ, ನಿಮ್ಮ ಶರಣ ಚೆನ್ನಯ್ಯಪ್ರಿಯ ನಿರ್ಮಾಯಪ್ರಭುವೆ.
--------------
ಚೆನ್ನಯ್ಯ
ಪ್ರಸಾದ ಪ್ರಸಾದವೆಂದು ಒಪ್ಪಕ್ಕೆ ಕೊಂಬ ಬೊಪ್ಪಗಳು ನೀವು ಕೇಳಿರೊ. ಕಾಯಪ್ರಸಾದವನರಿದು, ಕರಣಪ್ರಸಾದವನರಿದು, ಜೀವಪ್ರಸಾದವನರಿದು, ನಿಜಪ್ರಸಾದವನರಿದು ಕೊಳಬಲ್ಲರೆ ಪ್ರಸಾದಿ. ಕೊಂಬವರ ಕಂಡು ಪ್ರಸಾದವ ಕೈಕೊಂಡರೆ ಕಂಡವರ ಕಂಡು ಕೌದಿಯ ಹೊಲಿಯ ಹೋದರೆ ಕುಂಟೆಳೆ ಬಿದ್ದಂತೆ. ನವಿಲು ಕುಣಿಯಿತ್ತೆಂದು ಶಾಬಕ ಕುಣಿದು ಪುಚ್ಚವ ಕಳಕೊಂಡಂತೆ. ಸಿಂಹ ಲೆಂಘಣಿಸಿತ್ತೆಂದು ಸೀಳನಾಯಿ [ಲೆಂಘಣಿಸಿ] ಸೊಂಟವ ಕಳಕೊಂಡಂತೆ. ಸದ್ಭಕ್ತರ ಕಂಡು ನಾನು ಸದ್ಭಕ್ತನೆಂದು ಓಗರವ ನೀಡಿಸಿಕೊಂಡು ಅಯ್ಯಾ, ಹಸಾದ, ಮಹಾಪ್ರಸಾದವ ಪಾಲಿಸಿರೆಂದು ತನ್ನಾದಿ ಕ್ರಿಯಾದೀಕ್ಷೆ, ತನ್ನ ಮಧ್ಯೆ ಜ್ಞಾನದೀಕ್ಷೆ, ತನ್ನವಸಾನ ಮಹಾಜ್ಞಾನ ದೀಕ್ಷೆಯ ತಿಳಿಯದೆ ತನ್ನ ಪೂರ್ವಾಪರ, ತನ್ನ ಉದಯಾಸ್ತಮಾನವರಿಯದೆ, ಅರ್ಪಿತಾವಧಾನಭಕ್ತಿಯನರಿಯದೆ, ಗುರು ಲಿಂಗ ಜಂಗಮದ ನಿಲುಕಡೆಯನರಿಯದೆ, ಕಾಂಚನವ ಕೊಟ್ಟು, ಕೈಯಾಂತು ಪಡಕೊಂಬ ಭಕ್ತನ ಅಂಗವಿಕಾರವು ಮುನ್ನಿನಂತೆ. ಆ ಭಕ್ತನ ಆಚಾರ ವಿಚಾರ ನಡೆ ನುಡಿ ದೀಕ್ಷಾತ್ರಯಂಗಳ ವಿಚಾರಿಸದೆ ಪ್ರಸಾದವ ಕೊಟ್ಟ ಗುರುವಿನ ವಿಚಾರವು ಮುನ್ನಿನಂತೆ. ಈ ಉಭಯತರು, ಬಟ್ಟೆಗುರುಡನ ಕೈಯ ಬಟ್ಟೆಗುರುಡ ಹಿಡಿದು ಹಳ್ಳವ ಬಿದ್ದಂತೆ ಕಾಣಾ, ಚೆನ್ನಯ್ಯಪ್ರಿಯ ನಿರ್ಮಾಯಪ್ರಭುವೆ.
--------------
ಚೆನ್ನಯ್ಯ
ಪಂಚತತ್ತ್ವದೊಳು ಪಂಚಕೃತಿಯೊಳು ಪಂಚತತ್ತ್ವ. ಶರಣನ ಪಂಚೇಂದ್ರಿಯ ಶಿವನ ಪಂಚಮುಖವೆಂದರಿಯದೆ ಹಂಚು ಹಿಡಿದು ಹಲ್ಲು ತೆರೆವಂತೆ ಕಲ್ಲು ಹಿಡಿದು ತನ್ನ ಕಂಡೆನೆಂಬ ಖುಲ್ಲದೇಹಿಗಳಿಗೆ ಶಿವಲಿಂಗ ಮುನ್ನವೆ ಇಲ್ಲವೆಂದ ನಿಮ್ಮ ಶರಣ ಚೆನ್ನಯ್ಯಪ್ರಿಯ ನಿರ್ಮಾಯಪ್ರಭುವೆ.
--------------
ಚೆನ್ನಯ್ಯ
ಪ್ರಸಾದವೆಂದು ನುಡಿವಿರಿ, ಪ್ರಸಾದದ ಭೇದವ ಬಲ್ಲವರಾರು, ಈ ಪ್ರಸಾದದ ಭೇದವ ತಿಳಿದವರಾರು. ಪ್ರಸಾದವೆಂಬ ಮೂರಕ್ಷರದ ಭೇದವ ಬಲ್ಲವರಾರು. ಆಕಾರ ನಿರಾಕಾರ ಸಾಕಾರ ಈ ಮೂರು ಪ್ರಕಾರವಾಯಿತ್ತು. ಈ 'ಪ್ರ'ಕಾರದ ಭೇದವ ಬಲ್ಲವರಾರು. ಸಕಲ ನಿಃಕಲ ನಿರಂಜನನಾದ ಭೇದವ ಬಲ್ಲರೆ 'ಸಾ'ಕಾರದ ಭೇದವ ಬಲ್ಲವರೆ, 'ದ'ಕಾರದ ಭೇದವನರಿದವರೆ, ಆದಿ ಆಧಾರ ಅನಾದಿ ಈ ತ್ರಿವಿಧವ ಬಲ್ಲವರು. ಇಂತೀ ಪ್ರಸಾದವೆಂಬ ಸದ್ಭಾವದ ನಿರ್ಣಯವನರಿಯದೆ ಪ್ರಸಾದವ ಕೊಟ್ಟಾತನು ಕೊಂಡಾತನು ಇವರಿಬ್ಬರ ಭೇದವೆಂತೆಂದರೆ: ಹುಟ್ಟುಗುರಡನ ಕೈಯ ತೊಟ್ಟಿಗುರುಡ ಹಿಡದಂತಾಯಿತು. ಈ ಭೇದವೆಂತೆಂದರೆ :ಇಷ್ಟ ಪ್ರಾಣ ಭಾವ 'ಪ್ರ'ಕಾರವಾಯಿತು. 'ಸಾ'ಕಾರವೆ ಜಂಗಮಲಿಂಗ ಪ್ರಸಾದಲಿಂಗ ಸೋಂಕಿ ನವಪೀಠಗಳಾಗಿ ನವಲಿಂಗ ಸೋಂಕಿ ನವಪೀಠ ಪ್ರಸಾದವಾಯಿತು. ನವಪ್ರಸಾದ ನವಪ್ರಣಮವೆ ನವಬೀಜವಾಯಿತು. ನವಹಸ್ತಗಳ ನೆಲೆಗೊಳಿಸಿ ಶಿವಲಿಂಗಧಾರಣಮಂ ಮಾಡಿ ನವಲಿಂಗಮುಖವನರಿದು ನವನೈವೇದ್ಯವಂ ಮಾಡಿ ನವಮುಖಕ್ಕಿತ್ತ ನವಪ್ರಸಾದಿಯಾದ ಶರಣನು ನವಚಕ್ರಗಳೆಲ್ಲ ನವಜಪ ಪ್ರಸಾದವೆ ತಾನೆ ಆಗಿ ನವರತ್ನಪ್ರಭೆ ಏಕರವಿರಶ್ಮಿಯಾದಂತೆ, ನವಕೋಟಿ ಸೋಮಸೂರ್ಯರ ಪ್ರಭೆ ಒಂದಾಗಿ ದಿವ್ಯಜ್ಯೋತಿರ್ಲಿಂಗ ತಾನಾದ ಶರಣನು. ಅರಿವೆ ಶಿವಲಿಂಗ, ಸತ್ತುಚಿತ್ತಾನಂದ ನಿತ್ಯಪರಿಪೂರ್ಣ ತಾನೆ ಆಯಿತು. ನವ ಅಸ್ಥಿಗಳಡಗಿ ನವಲಿಂಗ ಒಂದೆ ಅಂಗವಾಗಿ ಬೆಳಗುತಿಹ ಶರಣಂಗೆ ಇಹಲೋಕವೇನು, ಪರಾತ್ಪರಲೋಕವೇನು ? ಸಗುಣವೇನು ನಿರ್ಗುಣವೇನು ? ನಿರಂಜನವೇನು, ನಿಷ್ಕಳವೇನು, ನಿರ್ಮಾಯವೇನು ? ಆತಂಗೆ ಭಕ್ಷವಿಲ್ಲ ಅಭ್ಯಕ್ಷವಿಲ್ಲ ಅರ್ಪಿತವಿಲ್ಲ ಅನರ್ಪಿತವಿಲ್ಲ. ಆತ ರುಚಿಸಿದ್ದೆಲ್ಲ ಪ್ರಸಾದ, ಅತ ಸೋಂಕಿದ್ದೇ ಪಾವನ. ಆತ ಮೆಟ್ಟಿದ ಭೂಮಿಯೆಲ್ಲ ಪುಣ್ಯಕ್ಷೇತ್ರಂಗಳಾದವು. ಆತ ಜಲಮಲವ ಬಿಟ್ಟು ಬಂದ, ಸಂಚಮನವ ಮಾಡಿದ ಸ್ಥಾನಾದಿಗಳೆಲ್ಲ ಪುಣ್ಯತೀರ್ಥಂಗಳಾದವು. ಇಂತೀ ನಿಮ್ಮ ಶರಣನ ಸರ್ವಾಂಗವೆಲ್ಲ ಶಿವಮಂದಿರವು ಚೆನ್ನಯ್ಯಪ್ರಿಯ ನಿರ್ಮಾಯಪ್ರಭುವೆ.
--------------
ಚೆನ್ನಯ್ಯ
ಪಾದೋದಕ ಪಾದೋದಕವೆಂದು ಒಪ್ಪವಿಟ್ಟು ನುಡಿವಿರಿ. ಪಾದೋದಕದ ಭೇದವ ಬಲ್ಲರೆ ಹೇಳಿರಿ, ಅರಿಯದಿರ್ದರೆ ಕೇಳಿರಿ. ಪಾದೋದಕವೆ ಪರಾತ್ಪರಾನಂದವು. ಆ ಆನಂದವೆ ಚಿದ್ಬಿಂದು; ಆ ಚಿದ್ಬಿಂದುವೆ ಪಾದೋದಕ. ಆ ಪಾದೋದಕವ ಶ್ರೀಗುರು ಲಿಂಗ ಜಂಗಮದ ದ್ವಿಪಾದದ ಭ್ರೂಮಧ್ಯಸ್ಥಾನದಲ್ಲಿರ್ದುದನರಿದರ್ಚಿಸಿದ ಪರಿಣಾಮವೆ ಚಿದಾನಂದಬಿಂದು ತೊಟ್ಟಿಟ್ಟುದೆ ಪಾದೋದಕವು. ಈ ಭೇದವನರಿದು ಕೊಳಬಲ್ಲರೆ ಪಾದೋದಕವೆನಬಹುದು. ಇದನರಿಯದೆ ಕೆರೆ ಬಾವಿ ಹಳ್ಳ ಹೊಳೆ ಚಿಲುಮೆ ನೀರ ತಂದು ಮನೆಗೆ ಬಂದಲ್ಲಿ ಅಗ್ಗಣಿಯೆಂಬಿರಿ. ಜಂಗಮದ ಪಾದದ ಮೇಲೆರದರೆ ತೀರ್ಥವೆಂಬಿರಿ. ತೀರ್ಥವೆಂದುಕೊಂಡು ತೃಷೆಯನಡಗಿಸಿ, ಕಡೆಯಲ್ಲಿ ಮೂತ್ರವ ಬಿಟ್ಟುಬಂದೆವು ಹೊರಗಗ್ಗಣಿಯ ತನ್ನಿ ಎಂಬ ಜಲವು ತೀರ್ಥವಲ್ಲ. ಕೊಟ್ಟಾತ ಗುರುವಲ್ಲ, ಕೊಂಡಾತ ಭಕ್ತನಲ್ಲ. ಇವರಿಬ್ಬರ ನಡತೆ ಎಂತಾಯಿತ್ತೆಂದಡೆ: ಎಕ್ಕಲ ಅಮೇಧ್ಯವ ತಿಂದು ಒಂದರ ಮೋರಿಯ ಒಂದು ಮೂಸಿ ನೋಡಿದಂತಾಯಿತ್ತೆಂದಾತ, ನಿಮ್ಮ ಶರಣ, ಚೆನ್ನಯ್ಯಪ್ರಿಯ ನಿರ್ಮಾಯಪ್ರಭುವೆ.
--------------
ಚೆನ್ನಯ್ಯ
ಪ್ರಸಾದವೆಂಬುದು ನಿರ್ಮಳಮುಖದಿಂದ ಉದ್ಭವವಾದದ್ದು. ಚಿತ್‍ಶಕ್ತಿಯಿಂದ ಮಹಾಲಿಂಗರೂಪವಾಯಿತು. ಮಹಾಲಿಂಗಪ್ರಸಾದದಿಂದ ಪ್ರಸಾದಲಿಂಗ ಉದ್ಭವವಾಯಿತು. ಪ್ರಸಾದಲಿಂಗದಿಂದ ಜಂಗಮಲಿಂಗ ಉದ್ಭವವಾಯಿತು. ಜಂಗಮಲಿಂಗಪ್ರಸಾದದಿಂದ ಶಿವಲಿಂಗ ಉದ್ಭವವಾಯಿತು. ಶಿವಲಿಂಗಪ್ರಸಾದದಿಂದ ಗುರುಲಿಂಗಪ್ರಸಾದ ಉದ್ಭವವಾಯಿತು. ಗುರುಲಿಂಗಪ್ರಸಾದದಿಂದ ಅಚಾರಲಿಂಗ ಉದ್ಭವವಾಯಿತು. ಇಂತೀ ಷಡ್ವಿಧಲಿಂಗವು ಪ್ರಸಾದದಿಂದ ಉದ್ಭವಿಸಿದವು. ಲಿಂಗದಿಂದ ಜಗತ್ತು ಉದ್ಭವಿಸಿದವು. 'ಲಿಂಗಮಧ್ಯೇ ಜಗತ್ಸರ್ವಂ ತ್ರೆೃಲೋಕ್ಯಂ ಸಚರಾಚರಂ | ಲಿಂಗ ಬಾಹ್ಯಾತ್ ಪರಂ ನಾಸ್ತಿ [ತಸ್ಮಾತ್] ಲಿಂಗಂ ಪ್ರಪೂಜಯೇತ್ || ಲೀಯಾಲೀಯ ಸಂಪ್ರೋಕ್ತಂ ಸಕಾರಂ ಸ್ಫಟಿಕಮುಚ್ಯತೇ ! ಲಯರ್ನಾಗಮಶ್ಯನಂ ಲಿಂಗಶಬ್ದಮೇವಚೇತ್ || ಲೀಯತೇ ಗಮ್ಯತೇ ಯತ್ರಯೋನಿಃ ಸರ್ವಚರಾಚರಂ | ತದೀಯಂ ಲಿಂಗಮಿತ್ಯುಕ್ತಂ ಲಿಂಗತತ್ವಪರಾಯಣೈಃ ||'' ಸರ್ವ ಸಚರಾಚರವೇ ಪ್ರಸಾದರೂಪ. ಅನಂತಕೋಟಿ ಬ್ರಹ್ಮಾಂಡಗಳಿಗೆ ಪ್ರಸಾದವೆ ಕಾಯ ಜೀವ ಪ್ರಾಣವಾಯಿತು, ಕಾಯ ಇಷ್ಟಲಿಂಗವಾಯಿತು, ಜೀವ ಪ್ರಾಣಲಿಂಗವಾಯಿತು, ಭಾವವೇ ತೃಪ್ತಿಲಿಂಗವಾಯಿತು. ಪೃಥ್ವಿ ಅಪ್ಪುಗಳೆರಡು ಕಾಯವಾಯಿತು. ಅಗ್ನಿ ವಾಯುಗಳೆರಡು ಪ್ರಾಣಲಿಂಗವಾಯಿತು. ಅಕಾರ ಓಂಕಾರವೇ ಭಾವವಾಯಿತು. ಇಂತೀ ಪಂಚತತ್ವಪ್ರಸಾದವೆನಿಸಿದ ಪ್ರಣಮವು [ಹೀಗೆ ಕಾಯ ಜೀವ ಪ್ರಾಣ ಪ್ರಸಾದವಾಯಿತ್ತು] ಚೆನ್ನಯ್ಯಪ್ರಿಯ ನಿರ್ಮಾಯಪ್ರಭುವೆ.
--------------
ಚೆನ್ನಯ್ಯ
ಪಾದೋದಕ ಪ್ರಸಾದ ಅರ್ಪಿತ ಅವಧಾನವ ತಿಳಿದು, ತಾ ಕೊಂಡು, ಕೊಡಬಲ್ಲಾತನೆ ಗುರುಲಿಂಗಜಂಗಮವು. ಅಂತಪ್ಪ ಗುರುಲಿಂಗಜಂಗಮವ ಭೇದಿಸಿ ಕೊಳಬಲ್ಲಾತನೆ ಸದ್ಭಕ್ತಪ್ರಸಾದಿಶರಣ. ಗುರುಲಿಂಗಜಂಗಮದ ಪಾದತೀರ್ಥವಾದ ಮೇಲೆ ತಾ ಸವಿದು ಲಿಂಗಕ್ಕರ್ಪಿಸಿ, ಲಿಂಗ ಸವಿದು, ತಾ ತೃಪ್ತನಾಗಿ ಆಚರಿಸುವುದೆ ಅದೇ ಉತ್ತಮೋತ್ತಮ ಲಿಂಗಾರ್ಪಣ ಶರಣಸಂತೃಪ್ತಿಯೆಂದಾತ ನಿಮ್ಮ ಶರಣ. ಚೆನ್ನಯ್ಯಪ್ರಿಯ ನಿರ್ಮಾಯಪ್ರಭುವೆ, ನೀವೆ ಬಲ್ಲಿರಿ.
--------------
ಚೆನ್ನಯ್ಯ
ಪ್ರಸಾದ ಪ್ರಸಾದವೆಂದು ನುಡಿವಿರಿ; ಎಲ್ಲರಿಗೆಲ್ಲಿಹದೊ ಪ್ರಸಾದ ? ಈ ಪ್ರಸಾದದ ಭೇದವ ಬಲ್ಲರೆ ಚನ್ನಬಸವಣ್ಣ. ಈ ಪ್ರಸಾದದ ಭೇದವ ಬಲ್ಲರೆ ಬಸವಣ್ಣ. ಈ ಪ್ರಸಾದದ ಭೇದವ ಬಲ್ಲರೆ ಪ್ರಭುದೇವರು. ಈ ಪ್ರಸಾದದ ಭೇದವ ಬಲ್ಲರೆ ಮರುಳಶಂಕರದೇವ ಸಿದ್ಧರಾಮ ಅಜಗಣ್ಣ ಮುಕ್ತಾಂಗನೆ ಅಕ್ಕಮಹಾದೇವಿ. ಮಿಕ್ಕಿನ ಜಡಜೀವಜಾಳುಗಳಿಗೆಲ್ಲಿಹದೊ ಪ್ರಸಾದ ? ಗಡಿಗೆಯೊಳಗಿದ್ದಾಗ ಬೋನ, ಹರಿವಾಣಕ್ಕೆ ಬಂದಾಗ ನೈವೇದ್ಯ, ಜಂಗಮ ಮುಟ್ಟಿ ಗ್ರಹಿಸಿದಾಗಳೆ ಪ್ರಸಾದವೆಂದು ಕೊಂಡು, ತಮ್ಮ ಉದರಕ್ಕೆ ಹೊಂದಿದಲ್ಲಿಯೆ ದುರ್ಗಂಧವಾಯಿತ್ತೆಂದು, ಜಲ ಮಲವ ಬಿಟ್ಟುಬಂದೆವು ಹೊರಗಗ್ಘಣಿಯ ತನ್ನಿಯೆಂಬ ಹೊಲೆಮಾದಿಗರ ಮೂಗ ಕೊಯ್ದು, ನಿಂಬೆಹುಳಿಯ ಹಿಂಡದೆ ಮಾಣ್ಬನೆ [ನಿಮ್ಮ ಶರಣ] ಚನ್ನಯ್ಯಪ್ರಿಯ ನಿರ್ಮಾಯಪ್ರಭುವೆ ?
--------------
ಚೆನ್ನಯ್ಯ
ಪಂಚಮೂರ್ತಿಯ ತತ್ವಶರಣ ತಾನೇ ಇಷ್ಟಲಿಂಗವೆಂದರಿಯದೆ, ಸೃಷ್ಟಿಯೆ ಇಷ್ಟಲಿಂಗವೆಂದರಿದು ತಮ್ಮ ಹುಸಿ ಮಾಡುವ ಭ್ರಷ್ಟರಿಗೆ ಶಿವಲಿಂಗ ಇಲ್ಲವೆಂದ ನಿಮ್ಮ ಶರಣ ಚೆನ್ನಯ್ಯಪ್ರಿಯ ನಿರ್ಮಾಯಪ್ರಭುವೆ.
--------------
ಚೆನ್ನಯ್ಯ
ಪ್ರಸಾದವ ಕೊಂಡ ಶರಣನ ಸರ್ವಾಂಗವೆಲ್ಲ ಪ್ರಸಾದ. ಆತ ಘ್ರಾಣಿಸಿದ್ದು ಆಚಾರಲಿಂಗಪ್ರಸಾದ. ಆತ ರುಚಿಸಿದ್ದೆಲ್ಲ ಗುರುಲಿಂಗಪ್ರಸಾದ. ಆತ ನೋಡಿದ್ದೆಲ್ಲ ಶಿವಲಿಂಗಪ್ರಸಾದ. ಆತ ಸ್ಪರ್ಶನಮಾಡಿದ್ದೆಲ್ಲ ಜಂಗಮಲಿಂಗಪ್ರಸಾದ. ಆತ ಕೇಳಿದ್ದೆಲ್ಲ ಪ್ರಸಾದಲಿಂಗಪ್ರಸಾದ. ಆತನ ಸರ್ವೇಂದ್ರಿಯವೆಲ್ಲ ಪರಿಪೂರ್ಣವಾದದ್ದೆಲ್ಲ ಮಹಾಲಿಂಗಪ್ರಸಾದ. ಇಂತೀ ಪ್ರಸಾದವೆಲ್ಲವ ಕೊಂಡ ಸರ್ವಾಂಗಪ್ರಸಾದಿ ನಿಮ್ಮ ಶರಣ, ಚೆನ್ನಯ್ಯಪ್ರಿಯ ನಿರ್ಮಾಯಪ್ರಭುವೆ.
--------------
ಚೆನ್ನಯ್ಯ
ಪ್ರಸಾದವ ಕೊಂಡ ಶರಣನ ಸರ್ವಾಂಗವೆಲ್ಲ ಪ್ರಸಾದವು. ಪ್ರಸಾದವೆ ಕೋಟಿಲಿಂಗವೆಂದರಿವುದು. ಪ್ರಸಾದಮೂರ್ತಿಯಾದ ಶರಣನ ರೋಮ ರೋಮಂಗಳು ಕೋಟಿಲಿಂಗವೆಂದುಚ್ಚರಿಸುವರಲ್ಲಾ ! ಘ್ರಾಣಮುಖ ನಾಸಿಕ ಆಚಾರಲಿಂಗವಾಗಿ, ಗಂಧದ್ರವ್ಯವ ಗ್ರಹಿಸಿ ಗಂಧವಾದ ಪ್ರಸಾದವೆ ಬಿಂದು, ಸರ್ವಾಂಗಮಯವಾದ ಮಹೇಶ್ವರನ ಷಡುರಸವ ಭುಂಜಿಸುವ ಜಿಹ್ವೆಯೆ ಗುರುಲಿಂಗ. ಷಡಕ್ಷರಿಮಂತ್ರನಾದ ಪ್ರಸಾದಿ, ಅಗ್ನಿಯೇ ಚರ್ಮ ಸ್ವರ ಸರ್ವಾಂಗಮೂರ್ತಿ ಶಿವಲಿಂಗ. ದೃಶ್ಯಾದೃಶ್ಯ ದೃಕ್ಕು ಜಾತಿ ಜ್ಯೋತಿಸ್ವರೂಪು ತಾನಾದ ಪ್ರಸಾದಿ. ಸ್ಥಾವರ ಜಂಗಮ ಪ್ರಣಮಸ್ವರೂಪು ತ್ವಕ್ಕು ಸರ್ವಾಂಗ ಸ್ಪರ್ಶನ ಜಂಗಮಲಿಂಗನಾದ ಪ್ರಸಾದಿ. ಆಕಾಶ, ಘಟಾಕಾಶ, ಮಠಾಕಾಶ, ಬಿಂದ್ವಾಕಾಶ, ಚಿದಾಕಾಶ, ವ್ಯೋಮಾಕಾಶ ಗೋತ್ರ ಸಹಲಿಂಗನಾದ ಪ್ರಸಾದಿ. ಜೀವಾತ್ಮ ಅಂತರಾತ್ಮ ಪರಮಾತ್ಮ ಸರ್ವೇಂದ್ರಿಯ ತೃಪ್ತಿಯಾದ ಮಹಾಲಿಂಗನಾದ ಪ್ರಸಾದಮೂರ್ತಿ ನಿಮ್ಮ ಶರಣ ಚೆನ್ನಯ್ಯಪ್ರಿಯ ನಿರ್ಮಾಯಪ್ರಭುವೆ.
--------------
ಚೆನ್ನಯ್ಯ
ಪಾದೋದಕವ ಕೊಂಡೆವೆಂಬ ಅಣ್ಣಗಳಿರಾ, ನೀವು ಕೇಳಿರೊ. ಪಾದೋದಕದ ನಿಲವ ನೀವು ಬಲ್ಲರೆ ಹೇಳಿರೊ. ಅರಿಯದಿರ್ದರೆ ಕೇಳಿರೊ. ಅದೆಂತೆಂದಡೆ: 'ಪಾ'ಕಾರವೆ ಪರಾತ್ಪರ ನಾಮವುಳ್ಳುದು, ಪರಬ್ರಹ್ಮವು ಪರಮಾನಂದ ಸ್ವರೂಪವು. 'ದೋ'ಕಾರವೆ ದಯದೋರಿತ್ತುವೆಂಬ ನಾಮವನ್ನುಳ್ಳ ದುರಿತ ವಿನಾಶನವು. 'ದ'ಕಾರವೆ ದಶದಿಶಭರಿತ ಪೂರ್ಣಚಿದಾಂಬುಧಿಯ ಪರಮಜ್ಞಾನವ ತೋರಿತ್ತು. 'ಕ'ಕಾರವೆ ಕರ್ಮವಿನಾಶನವೆನಿಸಿತ್ತು. ಇಂತಪ್ಪ ಪಾದೋದಕವ ನೀಡಿದಾತನೆ ಗುರುಲಿಂಗಜಂಗಮವೆನಿಸಬಹುದು; ಕೊಂಡಾತ[ನೆ] ಸದ್ಭಕ್ತನೆನಬಹುದು. ಇಂತೀ ಭೇದಾಭೇದವನರಿದು ಕೊಟ್ಟು ಕೊಂಡುದುದಕ್ಕೆ ಕಾಯಶುದ್ಧ, ಕರಣಶುದ್ಧ, ಜೀವಶುದ್ಧ, ಭಾವಶುದ್ಧ. ಈ ಚತುರ್ವಿಧ ಶುದ್ಧವಾಯಿತ್ತೆಂದಡೆ, ಕಾಯ ಸುದ್ಧಪ್ರಸಾದವಾಯಿತ್ತು, ಕರಣ ಸಿದ್ಧಪ್ರಸಾದವಾಯಿತ್ತು. ಜೀವ ಪ್ರಸಿದ್ಧಪ್ರಸಾದವಾಯಿತ್ತು, ಭಾವ ಪರಾತ್ಪರಪ್ರಸಾದವಾಯಿತ್ತು. ಈ ಚತುರ್ವಿಧ ಶುದ್ಧವ ಮಾಡಿದಾತ ನಿಮ್ಮ ಶರಣ. ಹೀಗಲ್ಲದೆ ಜಲವ ತೊಳೆದು ಕುಡಿವ ಮಲದೇಹಿಗಳ ಮುಖವ ನೋಡಲಾಗದಯ್ಯಾ. ಇದಕ್ಕೆ ಸಾಕ್ಷಿ: 'ಪಾಕಾರಂ ಪರಮಾನಂದಂ ದೋಕಾರಂ ದೋಷನಾಶನಂ | ದಕಾರಂ ದಹತೇ ಜನ್ಮ ಕಕಾರಂ ಕರ್ಮbs್ಞೀದನಂ ||' ಎಂದುದು, ಚೆನ್ನಯ್ಯಪ್ರಿಯ ನಿರ್ಮಾಯಪ್ರಭುವಿನ ವಚನವು.
--------------
ಚೆನ್ನಯ್ಯ
ಪ್ರಸಾದ ಪ್ರಸಾದವೆಂಬುವುದು ಎಲ್ಲರಿಗೆಲ್ಲಿಹದೊ? ಪ್ರಸಾದವೆಂಬುವುದು ಅಚಲಾನಂದ ಅವಿನಾಶನ ಅವಿರಳ ದ್ವಂದ್ವಾತೀತ ಬಂಧಮೋಕ್ಷಕ್ಕೆ ಅತೀತವು ನೋಡಾ. ಓಗರ ಪ್ರಸಾದವಲ್ಲ. ಓಗರ ಪ್ರಸಾದವೆಂದು ಕೊಟ್ಟಾತ ಗುರುವಲ್ಲ, ಕೊಂಡಾತ ಶಿಷ್ಯನಲ್ಲ. ಓಗರ ಪ್ರಸಾದವೆಂದು ಕೊಂಡು, ಮಲಮೂತ್ರ ಮಾಡಿಬಿಡುವ ಹೊಲೆ ಮಾದಿಗರ ಮೂಗ ಕೊಯ್ಯದೆ ಮಾಣ್ಬನೆ [ನಿಮ್ಮ ಶರಣ] ಚೆನ್ನಯ್ಯಪ್ರಿಯ ನಿರ್ಮಾಯಪ್ರಭುವೆ?
--------------
ಚೆನ್ನಯ್ಯ
ಪ್ರಸಾದದಿಂದ ತೋರಿತ್ತು ಷಡ್ವಿಧಹಸ್ತವು. ಪ್ರಸಾದದಿಂದ ತೋರಿತ್ತು ಷಡ್ವಿಧಚಕ್ರಂಗಳು ಷಡ್ವಿಧಸಾದಾಖ್ಯ, ಷಡ್ವಿಧಬೀಜಾಕ್ಷರವೆ ಷಡ್ವಿಧಲಿಂಗವಾಯಿತ್ತು. ಷಡ್ವಿಧಹಸ್ತವೆ ಷಡ್ವಿಧ ಕೈಗಳು ಪ್ರಸಾದಕಲೆ ಎನಿಸಿತ್ತು. ಷಡ್ವಿಧಸಾದಾಖ್ಯವೆ ಷಡ್ವಿಧಮುಖವೆನಿಸಿತ್ತು. ಷಡ್ವಿಧಹಸ್ತಮುಖವೆ ಷಡ್ವಿಧಲಿಂಗವೆನಿಸಿತ್ತು. ಷಡ್ವಿಧದ್ರವ್ಯವೇ ಷಡ್ವಿಧಪ್ರಸಾದ. ಷಡ್ವಿಧಪ್ರಸಾದವೆ ಷಡ್ವಿಧತೃಪ್ತಿ ಎನಿಸಿತ್ತು. ಷಡ್ವಿಧತೃಪ್ತಿಯನರಿದಾತ ಷಡ್ವಿಧದ್ರವ್ಯವೇ ನಿಮ್ಮ ಶರಣ ಚೆನ್ನಯ್ಯಪ್ರಿಯ ನಿರ್ಮಾಯಪ್ರಭುವೆ.
--------------
ಚೆನ್ನಯ್ಯ
ಪ್ರಸಾದ[ವ ಕೊಂಡೆ] ಪ್ರಸಾದ[ವ ಕೊಂಡೆ]ನೆಂಬಿರಿ ಪ್ರಸಾದ ಕೆಡುವುದೆ? ಪ್ರಸಾದ ಒಮ್ಮೆ ಸುಗಂಧ, ಒಮ್ಮೆ ದುರ್ಗಂಧವೆ ? ಪ್ರಸಾದವು ಶಬ್ದ ಸ್ಪರ್ಶನ ರೂಪು ರಸ ಗಂಧಕ್ಕೆ ಅತೀತವು. ಓಗರ ಪ್ರಸಾದವೆಂದು ಕೊಂಡು ರೋಗ ಬಂದಿತ್ತೆಂದು ವೈದ್ಯಕಾರರ ಬಳಿಗೆ ಹೋಗಿ ವೈದ್ಯವ ಕೊಂಡು, ಮಲಬದ್ಧ ಭಾಂಡವ ತೊಳೆದು ರೋಗವು ಹೋಯಿತ್ತೆಂದು ನಲಿನಲಿದಾಡಿ ಭಕ್ತ ಜಂಗಮರು ತಾವೆಂದು ನುಡಿವ ಮುಚ್ಚಟ ಮುದಿನಾಯಿಗಳ ಮೂಗ ಕೊಯ್ಯದೆ ಮಾಣ್ಬನೆ ನಿಮ್ಮ ಶರಣ ಚೆನ್ನಯ್ಯಪ್ರಿಯ ನಿರ್ಮಾಯಪ್ರಭುವೆ.
--------------
ಚೆನ್ನಯ್ಯ