ಅಥವಾ
(4) (1) (4) (0) (0) (0) (0) (0) (0) (1) (0) (0) (0) (0) ಅಂ (2) ಅಃ (2) (0) (0) (1) (0) (0) (0) (0) (1) (0) (0) (0) (0) (0) (0) (0) (0) (0) (0) (0) (1) (16) (0) (0) (2) (1) (0) (0) (0) (3) (1) (2) (0) (0) (0) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಇಷ್ಟಲಿಂಗಕ್ಕೆ ತೋರಿ ಮೃಷ್ಟಾನ್ನ ಹೊಡದೆನೆಂಬುದೇನು ಆ ಇಷ್ಟಲಿಂಗ ಮುಖದಲ್ಲಿ ನಿಮಗೆ ತೃಪ್ತಿ ಆಗಲಿಲ್ಲವೆ. ಆ ಶರಣನ ಮುಖದಲ್ಲಿ ಲಿಂಗತೃಪ್ತಿ ಅಹುದಲ್ಲದೆ ಅಂಗಮುಖದಲ್ಲಿ ಶರಣತೃಪ್ತಿ ಆಗಲರಿಯದು. ''ವೃಕ್ಷಸ್ಯ ವದನಂ ಭೂಮಿಃ ಲಿಂಗಸ್ಯ ವದನಂ ಜಂಗಮಂ'' ಎಂಬ ಶ್ರುತಿ ನೋಡಿ ಮರುಳಾದ ಭಂಗಿತರಿಗೆ ಶಿವಲಿಂಗ ಮುನ್ನವಿಲ್ಲವೆಂದಾತ ನಿಮ್ಮ ಶರಣ, ಚೆನ್ನಯ್ಯಪ್ರಿಯ ನಿರ್ಮಾಯಪ್ರಭುವೆ.
--------------
ಚೆನ್ನಯ್ಯ
ಇಷ್ಟ, ಪ್ರಾಣ, ಭಾವ ತ್ರಿವಿಧಾತ್ಮ ಕಾರಣ ತಾನೆ ಶಿವಲಿಂಗವೆಂದರಿಯದೆ ಲಿಂಗ ಬೇರೆ ಶರಣ ಬೇರೆಯೆಂಬ ಭಂಗಿತರಿಗೆ ಶಿವಲಿಂಗ ಮುನ್ನವಿಲ್ಲವೆಂದ. 'ಏಕಮೂರ್ತಿಸ್ತ್ರಯೋರ್ಭಾಗಾ ತ್ರಿವಿಧಂ ಲಿಂಗಮುಚ್ಯತೇ ಕಾರ್ಯಭಿನ್ನ ಮೃಡಭಾವಂ' ಎಂದುದು ನಿಮ್ಮ ಶ್ರುತಿ, ಚೆನ್ನಯ್ಯಪ್ರಿಯ ನಿರ್ಮಾಯಪ್ರಭುವೆ.
--------------
ಚೆನ್ನಯ್ಯ
ಇಷ್ಟಲಿಂಗವೆ ಅನಾದಿಯು, ಪ್ರಾಣಲಿಂಗವೆ ಆದಿಯು. ಇದು ಮಾರ್ಗಕ್ರೀಯೆನಿಸುವುದು. ಪ್ರಾಣಲಿಂಗವೆ ಅನಾದಿಯು, ಇಷ್ಟಲಿಂಗವೆ ಆದಿಯು. ಇದು ಮೀರಿದ ಕ್ರಿಯಾಮಾರ್ಗವೆನಿಸುವುದು. ಈ ಉಭಯದ ಭೇದವ ಸದ್ಗುರು ಮುಖದಿಂ ತಿಳಿದು, ಆದಿ ಅನಾದಿಯೆಂಬ ಉಭಯವನುಳಿದು, ಒಂದೇಪರಾತ್ಪರವಸ್ತುವೆಂದು ಅರಿದು, ಸಮಭಾಜನದಿಂದ ಪ್ರಸಾದಕ್ಕೆ ಪ್ರಸಾದವನರ್ಪಿಸಿ, ಪಾದೋದಕಕ್ಕೆ ಪಾದೋದಕವನರ್ಪಿಸಿ, ತಾನುಭಯಮಧ್ಯದಲ್ಲಿ ಭಾವಲಿಂಗರೂಪದಿಂದ ಪರಿಣಾಮಪಾದೋದಕ ಪ್ರಸಾದವನಪ್ಪಿ ಅಗಲದಿಪ್ಪಾತನೆ ಮಹಾಶಿವಕಲಾಚೈತನ್ಯ ನಿಜಪ್ರಸಾದಿ ನೋಡಾ. ಭಕ್ತ ಜಂಗಮವೆಂಬ ಉಭಯಭಾವವಳಿದು, ದುರ್ಮಾರ್ಗ ಅನಾಚಾರ ಅಜ್ಞಾನವ ತ್ಯಜಿಸಿ, ಶರಣಗಣಂಗಳು ಹೋದ ಮಾರ್ಗವನರಿದು, ಉಭಯಭಾವವಳಿದು, ಸತ್ಕ್ರಿಯಾ ಸಮ್ಯಜ್ಞಾನ ಸಮರಸಾನಂದವನರಿದು, ಜಂಗಮದ ತೀರ್ಥಪ್ರಸಾದವ ಜಂಗಮಕ್ಕರ್ಪಿಸಿ, ಲಿಂಗತೀರ್ಥಪ್ರಸಾದವ ಲಿಂಗಕ್ಕರ್ಪಿಸಿ, ಉಭಯಸಂಬಂಧದಾಚರಣೆಯ ತಿಳಿದು, ಅಂಗಲಿಂಗವೆಂಬ ಉಭಯವನಳಿದು, ಅಂಗಲಿಂಗವಾದುದೊಂದೆ ವಸ್ತುವೆಂದರಿದು, ಕೊಟ್ಟು ಕೊಳಬಲ್ಲಾತನೆ ಮಹಾಪ್ರಸಾದಿ ನೋಡಾ. ಇದನರಿಯದೆ ಕೊಟ್ಟು, ಕೊಂಡು ಪಾದೋದಕ ಪ್ರಸಾದವ ಬಹಿರಂಗಕ್ಕಿಕ್ಕಿ ಅಹಂಕರಿಸುವ ಮೂಳರಿಗೆ ಮಹಾಪ್ರಸಾದವಿಲ್ಲ ಕಾಣಾ. ಅವರಿಗೆ ರೌರವನರಕ ತಪ್ಪದು ನೋಡಾ. ಅದರಿಂದ ನಿನ್ನ ನೀನರಿದು, ನಿನ್ನ ನಿಜವ ನೀ ತಿಳಿದು, ಭೋಗಿಸೆಂದಾತ ನಿಮ್ಮ ಶರಣ, ಚೆನ್ನಯ್ಯಪ್ರಿಯ ನಿರ್ಮಾಯಪ್ರಭುವೆ.
--------------
ಚೆನ್ನಯ್ಯ
ಇಷ್ಟಲಿಂಗ ಇನ್ನೂರಹದಿನಾರು ಮುಖದಿಂದ ತೃಪ್ತಿಗೊಳ್ಳುತಿಹುದು. ಪ್ರಾಣಲಿಂಗ ನೂರಾಹನ್ನೊಂದು ಮುಖವಾಗಿ ತೃಪ್ತಿಗೊಳ್ಳುತಿಹುದು. ಭಾವಲಿಂಗ ಷಡ್ವಿಧಮುಖದಿಂದ ತೃಪ್ತಿಗೊಳ್ಳುತಿಹುದು. ಈ ತ್ರಿವಿಧಲಿಂಗವು ಒಂದಾಗಿ, ವಿಶ್ವತೋಮುಖವಾಗಿ ಶರಣನ ಅಂಗದಲ್ಲಿ ಶಿವಲಿಂಗವೆ ತೃಪ್ತಿಗೊಳ್ಳುತಿಹುದು. ಈ ಭೇದವ ತಿಳಿಯದೆ ಭಿನ್ನವಿಟ್ಟು ಕೊಟ್ಟು ಕೊಂಬೆನೆಂಬ ಕುನ್ನಿಗಳಿಗೆ ಶಿವಲಿಂಗ ಮುನ್ನವಿಲ್ಲವೆಂದ ನಿಮ್ಮ ಶರಣ, ಚೆನ್ನಯ್ಯಪ್ರಿಯ ನಿರ್ಮಾಯಪ್ರಭುವೆ.
--------------
ಚೆನ್ನಯ್ಯ