ಅಥವಾ
(4) (5) (0) (0) (1) (0) (0) (0) (1) (0) (0) (0) (0) (0) ಅಂ (0) ಅಃ (0) (5) (0) (5) (0) (0) (1) (0) (0) (0) (0) (0) (0) (0) (0) (0) (1) (0) (0) (0) (2) (0) (0) (4) (4) (0) (0) (0) (0) (0) (2) (1) (0) (2) (3) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಬೀಜ ಹುಟ್ಟುವ ತತ್ಕಾಲವೆಂತೆಂದಡೆ: ಹೊಯ್ದಿದ್ದ ಹೊಯಿಗಿಲದಲ್ಲಿಯೆ ಬೇರು ಬಿಟ್ಟು, ಸಸಿ ಬೆಳೆದು ಎಲೆ ನೀಡಿ ಫಲ ಬೆಳೆದುದುಂಟೆ ? ಸಕಲ ಸ್ಥಲ ಕುಳವನರಿತ ಬ್ರಹ್ಮಿ ತಾನೆಂದಡೆ ಅರ್ಚನೆ ಅರತು, ಪೂಜೆ ನಿಂದು, ಸತ್ಯ ಕೆಟ್ಟು ಭಕ್ತಿ ಹಾರಿದಲ್ಲಿ, ಆತ ನಿಜತತ್ವಜ್ಞನಪ್ಪನೆ ? ಇದು ವಿಶ್ವಾಸದ ಭಿತ್ತಿ, ವಿರಕ್ತಿಯ ನಿಳಯ. ಸಂಗನಬಸವಣ್ಣ ಭಕ್ತಿ ವಿರಕ್ತಿಗಿಕ್ಕಿದ ಕಟ್ಟು. ಬ್ರಹ್ಮೇಶ್ವರಲಿಂಗವ ಮುಟ್ಟುವ ಮುಟ್ಟು.
--------------
ಬಾಹೂರ ಬೊಮ್ಮಣ್ಣ
ಬಾಗಿಲವಾಡವ ಬಳಸಿ ಬಂಧದಲ್ಲಿಕ್ಕಿದಡೂ ಮರೆಯ ಭೇದವಲ್ಲದೆ ನಿಳಯಕ್ಕೆ ಹೋಹುದ ತಪ್ಪದು. ತತ್ವಂಗಳ ವಿಚಾರಿಸಿ, ಸ್ಥಲಂಗಳ ವಿಸ್ತರಿಸಿ ಪರಿಪೂರ್ಣ ಪೂರ್ಣಂಗಳೆಂಬಲ್ಲಿ ವಿಶ್ರಮಿಸಿ ಅರಿವುದೊಂದು ಅರುಹಿಸಿಕೊಂಬುದೊಂದು. ಉಭಯವನೇಕೀಕರಿಸಿ ನಿಂದಾತನೆ ಪರಮಸುಖಿ. ಇದು ಸಂಗನಬಸವಣ್ಣನಿಕ್ಕಿದ ಭಿತ್ತಿ. ಬ್ರಹ್ಮೇಶ್ವರಲಿಂಗದಲ್ಲಿ ಎಯ್ದುವ ಸುಪಥದ ಪಥ.
--------------
ಬಾಹೂರ ಬೊಮ್ಮಣ್ಣ
ಬಯಲು ಬೆಳಗುಳ್ಳನ್ನಕ್ಕ ಮುಂದೊಂದು ಕುರುಹಿನ ಕುಲ ಬಿಡದು. ಕುರುಹುಳ್ಳನ್ನಕ್ಕ ಅರಿದೆಹೆನೆಂಬ ಭಾವ. ಆ ಅರಿಕೆಯೆಂಬುದು ವಿಶ್ವಾಸದಿಂದಲ್ಲದೆ ಕಾಣಬಾರದು. ಇದು ಸಂಗನಬಸವಣ್ಣ ಸಂಧಿಸಿದ ಸಂಬಂಧ. ಬ್ರಹ್ಮೇಶ್ವರಲಿಂಗವ ವಿಶ್ವಾಸದಿಂದಲ್ಲದೆ ಸಂಬಂಧಿಸಬಾರದು.
--------------
ಬಾಹೂರ ಬೊಮ್ಮಣ್ಣ
ಬಾಯಿ ಮುಚ್ಚಿ ನಾಸಿಕದಲ್ಲಿ ಉಣಬಹುದೆ ? ನಾಸಿಕವ ಮುಚ್ಚಿ ಬಾಯಲ್ಲಿ ವಾಸಿಸಬಹುದೆ ? ಕಣ್ಣು ಮುಚ್ಚಿ ಕಿವಿಯಲ್ಲಿ ನೋಡಬಹುದೆ ? ಕಿವಿಯ ಮುಚ್ಚಿ ಕಣ್ಣಿನಲ್ಲಿ ಕೇಳಬಹುದೆ ? ಇಂತೀ ಇವಕೆ ಆತ್ಮ ಒಂದೆಂದಡೆ ತಮ್ಮ ತಮ್ಮ ಸ್ವಸ್ಥಾನಂಗಳಲ್ಲಿ ಅಲ್ಲದೆ ದೃಷ್ಟವ ಕಾಣಬಾರದು. ಆವ ಸ್ಥಲ ನೆಮ್ಮಿದಡೂ ಆ ಸ್ಥಲಕ್ಕೆ ವಿಶ್ವಾಸಬೇಕು. ಇದು ಸಂಗನಬಸವಣ್ಣನ ಭಕ್ತಿ ಬ್ರಹ್ಮೇಶ್ವರ ಲಿಂಗವನರಿವುದಕ್ಕೆ ಇಕ್ಕಿದ ಭಿತ್ತಿ.
--------------
ಬಾಹೂರ ಬೊಮ್ಮಣ್ಣ