ಅಥವಾ
(7) (1) (4) (0) (0) (0) (0) (0) (0) (0) (0) (0) (0) (0) ಅಂ (1) ಅಃ (1) (0) (0) (1) (1) (0) (1) (0) (0) (0) (0) (0) (0) (0) (0) (0) (1) (0) (0) (0) (3) (11) (0) (0) (0) (2) (0) (0) (0) (0) (2) (5) (0) (3) (1) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಶಿವಶರಣಗಣಾರಾಧ್ಯರು ನಿರಾಕಾರ ಚಿತ್ಪಾದೋದಕದಾಚರಣೆಯ ಮಾರ್ಗಕ್ರಿಯೆ ಮುಗಿದ ಮೇಲೆ, ಸಾಕಾರಚಿತ್ಪ್ರಸಾದವ ಆ ಪಾದತೀರ್ಥದಾಚರಣೆಯಂತೆ ತಟ್ಟಿ, ಬಟ್ಟಲಗಳೊಳ್ ಪರಿಪೂರ್ಣತೃಪ್ತಿಯನೈದುವುದು. ಆ ನಿಲುಕಡೆಯೆಂತೆಂದೊಡೆ : ನಿರಾಭಾರಿವೀರಶೈವಸಂಪನ್ನ ಸದ್ಭಕ್ತ ಜಂಗಮಮೂರ್ತಿಗಳು ಪಾದೋದಕದಿಂದ ಅವರ ಭಾಂಡಕ್ಕೆ ಹಸ್ತಸ್ಪರಿಶನವ ಮಾಡುವುದು. ಉಳಿದ ವಿಶೇಷ ವೀರಶೈವಸನ್ಮಾರ್ಗಿ ಭಕ್ತಜಂಗಮವು ತಮ್ಮ ತಮ್ಮ ತಂಬಿಗೆ ತಟ್ಟೆ ಬಟ್ಟಲಿಗೆ ಪಾದೋದಕ ಹಸ್ತಸ್ಪರಿಶನವ ಮಾಡಿ, ಕೇವಲಪರಮಾನಂದದ ಚಿದ್ಗರ್ಭೋದಯ ಶುದ್ಧಪ್ರಸಾದವೆಂದು ಭಾವಿಸಿ, ಅತಿವಿಶೇಷ ಮಹಾಸುಯ್ದಾನದಿಂದ ಸಮಸ್ತ ಜಂಗಮ ಭಕ್ತ ಮಹೇಶ್ವರ ಶರಣಗಣಾರಾಧ್ಯರಿಗೆ ಎಡೆಮಾಡಿ, ಅಷ್ಟಾಂಗ ಹೊಂದಿ, ಎಡಬಲ ಗಣತಿಂತಿಣಿಯ ಪೂರ್ಣಾನಂದದ ನಿಜದೃಷ್ಟಿಯಿಂ ನೋಡಿ, ನಿರೀಕ್ಷಿಸಿ, ಶರಣಾರ್ಥಿ ಸ್ವಾಮಿ, ನಿಮ್ಮ ದಯದಿಂದುದಯವಾದ ಪರಿಪೂರ್ಣರಸಾಮೃತವ ಮಹಾಲಿಂಗಾರ್ಪಣವ ಮಾಡಬೇಕೆಂದು ಅಭಿವಂದಿಸಿ, ಪರಮಪತಿವ್ರತತ್ವದಿಂದ ಗುರುಚರವರಸ್ಥಲಕ್ಕೆ ತನುಮನಧನಂಗಳ ಸಮರ್ಪಿಸುವಲ್ಲಿ ನಿರ್ವಂಚಕವಾಗಿ, ಭಕ್ತಲಿಂಗಜಂಗಮವೆಂದು ಉಭಯ ನಾಮರೂಪ ಕ್ರಿಯಾಕಾಯವಳಿದು, ಕ್ಷೀರ ಕ್ಷೀರವ ಕೂಡಿದಂತೆ ಪರುಷ ಮುಟ್ಟಿ ಪರುಷವಾದಂತೆ, ಪರಮಾನಂದಾಬ್ಧಿ ಚಿದ್ರಸಾಮೃತ ಅಷ್ಟಾವರಣದ ಸತ್ಕ್ರಿಯಾಜ್ಞಾನಾಚಾರಂಗಳ ಅನುಭಾವದೊಳ್ ಕೂಟಸ್ಥದಿಂದೊಡಲಾಗಿ, ನಿರಾಕಾರ ನಿಃಶಬ್ದಲೀಲೆಪರ್ಯಂತರವು ಆ ಗುರುಲಿಂಗಜಂಗಮ ಚಿತ್ಪ್ರಭಾಂಗ ಭಸ್ಮಮಂತ್ರಾದಿಗಳೆ ಮುಂದಾಗಿ, ಸತ್ಯಶುದ್ಧ ನಡೆನುಡಿ ಕ್ರಿಯಾಜ್ಞಾನಾನುಭಾವ ಪಾದೋದಕ ಪ್ರಸಾದಸೇವನೆಯೆ ಹಿಂದಾಗಿ, ಸಮಸ್ತ ಕಾರಣಕ್ಕೂ ಸಾವಧಾನ ಸಪ್ತವಿಧ ಸದ್ಭಕ್ತಿಗಳಿಂದ ಮಾರ್ಗಾಚಾರವುಳ್ಳ ಕ್ರಿಯಾರ್ಪಣ, ದ್ರವ್ಯಮೀರಿದಾಚಾರವುಳ್ಳ ಜ್ಞಾನಾರ್ಪಣದ್ರವ್ಯಂಗಳಂ ಪರಿಪೂರ್ಣಾನುಭಾವದಿಂದ ನಿಜನೈಷಾ*ನುಭಾವಸಂಬಂಧಿಗಳೆ ಅಚ್ಚಪ್ರಸಾದಿ ನಿಚ್ಚಪ್ರಸಾದಿ ಸಮಯಪ್ರಸಾದಿ ಚಿತ್ಕಲಾಪ್ರಸಾದಿ ಸೇವಿತಕ್ಕೆ ಯೋಗ್ಯರಾದ ಘನಕ್ಕೆ ಘನವೆಂದವರಾಳಿನಾಳಾಗಿರ್ಪೆ ಕಾಣಾ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ.
--------------
ಮೂರುಸಾವಿರ ಮುಕ್ತಿಮುನಿ
ಶ್ರೀಗುರುಕರುಣಕಟಾಕ್ಷೆಯಿಂದ ತಮ್ಮ ತಾವರಿದ ನಿತ್ಯಮುಕ್ತ ನಿಜೋತ್ತಮ ಸದ್ಭಕ್ತ ಮಹೇಶ್ವರರು, ಹಿಂದೆ ಹೇಳಿದ ಬಹಿರಂಗ ಪಂಚಪಾತಕಮಂ ನಿರಸನಂಗೈದು ಮಾರ್ಗಕ್ರಿಯೆ ಶುದ್ಧರೆನಿಸಿ, ಅಂತರಂಗದ ಗುಪ್ತಪಾತಕಮಂ ನಿರಸನಗೈವ ವಚನಸೂತ್ರವದೆಂತೆಂದೊಡೆ : ತನಗುಳ್ಳ ಗಂಧ ರಸ ಮೊದಲಾದ ಸುಪದಾರ್ಥದ್ರವ್ಯಗಳ ಗುರು ಚರ ಪರ ಸ್ಥಿರ ತಂದೆ ತಾಯಿ ಘನಲಿಂಗ ಸಮ್ಮೇಳಕ್ಕೆ ಮಾಡದೆ ನಿರವಯಪರಿಪೂರ್ಣ ನಿರಂಜನ ಗುರುಲಿಂಗಜಂಗಮ ಪ್ರಸನ್ನೋದಯವಾದ ಚಿತ್ಪಾದೋದಕ ಪ್ರಸಾದ ವಿಭೂತಿ ರುದ್ರಾಕ್ಷಿ ಮಂತ್ರ ಮಹಾಮಂತ್ರ ಕೊನೆಮೊನೆಯಲ್ಲುದಯವಾದ ಮಹದರಿವು ಮಹಾಜ್ಞಾನ ಮಹಾನುಭಾವಾಚಾರ ಸಂಬಂಧದಾಚರಣೆಗಳೆ ಕೇವಲ ಎನ್ನ ಜನನಾಂಕುರದ ಮುಕ್ತಿದ್ವಾರವಾಗಿರುವ ಸ್ಥಿತಿಯ ಗೊತ್ತಿನ ಹಕ್ಕೆ, ನಾ ನಿರವಯಲಾಗುವ ಲಯಸ್ಥಾನದ ಉಳುವೆಯ ಮಹಾಮನೆಯೆಂದು ಭಾವಭರಿತವಾಗಿ ಹಿಂದುಮುಂದಣ ಫಲಪದದ ಭೋಗಮೋಕ್ಷದಾಪೇಕ್ಷೆಗಳಂ ನೆರೆನೀಗಿ, ಬಯಲಬ್ರಹ್ಮದಿರವ ಹೊದ್ದಲೊಲ್ಲದೆ ಪಾಪದಪುಂಜ, ಕರ್ಮದೋಕುಳಿ, ಮಲದಾಗರ, ಅನಾಚಾರದಕ್ರಿಯೆ, ಅಜ್ಞಾನ ವಿಷಯಾತುರದ ಭವಜೀವಿಗಳಾಗಿರುವ ಪರಮಪಾತಕರ ಮೋಹವಿಟ್ಟು, ನನ್ನ ಪೂರ್ವಾಶ್ರಯವೆಂದು, ಅತಿ ಪ್ರೇಮದಿಂದ ತನುಮನಧನವ ಸವೆದು, ಅವರೊಡಗೂಡಿ ತೀರ್ಥಯಾತ್ರೆಗಳಂ ಮಾಡಿ, ತಾ ಸ್ವೀಕರಿಸಿದ ಪ್ರಸಿದ್ಧಪ್ರಸಾದ ಪಾದೋದಕಪ್ರಸಾದಮಂ ಆ ತ್ರಿವಿಧ ದೀಕ್ಷಾಚಾರಹೀನವಾದ ಭೂಪ್ರತಿಷಾ*ದಿಗಳಿಗೆ ಕೊಟ್ಟು ಕೊಂಬುವ ಭ್ರಷ್ಟ ನಡಾವಳಿಯೆ ಅಂತರಂಗದ ಪ್ರಥಮಪಾತಕ ಕಾಣಾ ನಿರವಯಪ್ರಭು ಮಹಾಂತ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ.
--------------
ಮೂರುಸಾವಿರ ಮುಕ್ತಿಮುನಿ
ಶ್ರೀಗುರುಕರಜಾತರೆನಿಸಿ, ನಿಜಮೋಕ್ಷಾಪೇಕ್ಷನೆನಿಸಿ, ಸ್ವಯಚರಪರ ಭಕ್ತಗಣಾರಾಧ್ಯರ ಅರ್ಚನೆ ಪೂಜನೆ ಮಾಡಿ, ದಾಸೋಹಂಭಾವದಿಂದ ಪರತರಬ್ರಹ್ಮಪರಿಪೂರ್ಣಾನಂದವಸ್ತುವೆಂದು ಸಮರಸಾಚರಣೆಯಿಂದ ಹತ್ತುಹನ್ನೊಂದು ಕೊಟ್ಟು ಕೊಂಡ ಮೇಲೆ, ಸಂಕಲ್ಪಭಾವ ತಥ್ಯಮಿಥ್ಯಗಳಿಂದ ಆಸೆ ಆಮಿಷದ ಪಾಶಬದ್ಧ ಜಡಜೀವಿಗಳ ಹುಸಿಮಾತನಾಲಿಸಿ, ವಿವೇಕತಪ್ಪಿ, ನಸುಗುನ್ನಿಕಾಯಂತೆ ಮೋರೆಯಾಗಿ, ತುಮುರೆಕಾಷ*ದಂತೆ ನುಡಿಯಾಗಿ, ವಾರೆನೋಟಗಳಿಂದ ಸಮರಸವನುಳಿದು, ಭಿನ್ನಭಾವದಿಂದ ಕುಂದುನಿಂದ್ಯವ ನುಡಿವುದೊಂದು ದುರಾಚಾರ. ನುಡಿಸೂಸಿದ ಮೇಲೆ ಒಬ್ಬರೊಬ್ಬರು ಅವಿಚಾರಿಗಳಾಗಿ, ಬಾಜಾರಕ್ಕೆ ನಿಂತು, ತನಗಿಂದ ಸ್ವಲ್ಪ ಮನುಷ್ಯರನಾಶ್ರಯಿಸಿ, ಪಂಥಪರಾಕ್ರಮಿಗಳಿಂದ ತಥ್ಯಮಿಥ್ಯವ ನುಡಿದು, ಅರ್ಚನಾರ್ಪಣಗಳ ತೊರೆದು, ದೋಷಾರ್ಥಿಯಾಗಿ ವರ್ತಿಸುವುದೊಂದು ದುರಾಚಾರ. ಭಕ್ತಗಣಂಗಳು ವಾರಬಡ್ಡಿಗಳ ಕೊಟ್ಟು ಕೊಂಡು ವ್ಯವಹರಿಸಿ, ಈಷಣತ್ರಯದ ಅಂಗವಿಷಯದಿಂದ ದ್ರವ್ಯವ್ಯಾಪಾರಿಯಾಗಿ, ದುರಾತ್ಮರಂತೆ ಬಾಜಾರಕ್ಕೆ ಬಿದ್ದು ಕಠಿಣನುಡಿಗಳ ಬಳಸುವುದೊಂದು ದುರಾಚಾರ. ಹೊನ್ನು ಹೆಣ್ಣು ಮಣ್ಣು ಧಾನ್ಯ ವಸ್ತ್ರಗಳಿಗೆ ಹೊಣೆ ಜಾವಿೂನುಗಳಾಗಿ ಅಸನ ವಸನದಿಚ್ಛೆಗೆ ಮಿತಿದಪ್ಪಿದಲ್ಲಿ , ಸಾಕ್ಷಿ ವಾದಕ್ಕೆ ನಿಂತು, ಆಡಬಾರದ ಮಾತನಾಡುವುದೊಂದು ದುರಾಚಾರ. ಗುರುಹಿರಿಯ ಪಿತ-ಮಾತೆಗಳಿಗೆ ತಾ ಗಳಿಸಿದ ದ್ರವ್ಯವ ವಂಚಿಸಿ, ಇದ್ದೂ ಇಲ್ಲಯೆಂದು ಹುಸಿನುಡಿಯ ನುಡಿವುದೊಂದು ದುರಾಚಾರ. ಗುರುಚರಲಿಂಗಮೂರ್ತಿಗಳು ಹಸಿವಿಗನ್ನ, ಶೀತಕ್ಕೆ ವಸ್ತ್ರ, ಪಾದಕ್ಕೆ ವಾಹನವಾದುದ ಬೇಡಿದಲ್ಲಿ ತನಗೆ ತ್ರಾಣಿದ್ದು ಅವರಿಗೆ ಈಗ ದೊರೆಯದೆಂದು ಪ್ರಪಂಚನುಡಿಯ ನುಡಿವುದೊಂದು ದುರಾಚಾರ. ಈ ದುರಾಚಾರ ಹುಸಿನುಡಿಗಳನಳಿದುಳಿದು, ಭ್ರಾಂತುಭ್ರಮೆಗಳ ನೀಗಿ, ತನ್ನ ನಡೆನುಡಿಗಳು ತನಗೆ ಪ್ರಮಾಣವಾಗಿ, ನಿರ್ವಂಚಕತನದಿಂದ ಶ್ರುತಿಗುರುಸ್ವಾನುಭಾವವಿಡಿದು, ತಥ್ಯಮಿಥ್ಯವನಡಿಮೆಟ್ಟಿ, ಕಿಂಕರಭಾವದೊಳು ಗುರುಹಿರಿಯರ ಪ್ರಮಾದವಶದಿಂದ ಪ್ರಮಥಗಣಮಾರ್ಗವ ಬಿಟ್ಟಾಚರಿಸುವದ ಪರಶಿವಲಿಂಗಮೂರ್ತಿ ಹರಗಣಸಾಕ್ಷಿಯಾಗಿ ತಾನು ಕಂಡಲ್ಲಿ , ಅವರನಾಚರಿಸದಾಚಾರದ ಸ್ಥೂಲಸೂಕ್ಷ್ಮವಾದೊಡೆ ಹರಗಣಂಗಳೊಡನೆ ಅವರಿಗೆ ಶರಣುಹೊಕ್ಕು, ಹರಗುರುವಾಕ್ಯಪ್ರಮಾಣವಾಗಿ ಮೃದುತರ ನುಡಿಗಳಿಂದ ತಾವು ಅವರೊಡನೆ ಏಕಭಾವದಿಂದ ಕ್ರಿಯಾಲೀಲೆಯ ಸಮಾಪ್ತವ ಮಾಡುವುದು. ಇದಕ್ಕೆ ಮೀರಿ ಸ್ಥೂಲವಾದೊಡೆ ಮೌನಧ್ಯಾನದಿಂದ ಪರಶಿವಲಿಂಗಸಾಕ್ಷಿಯಾಗಿ, ಹರಗಣಕ್ಕೊಪ್ಪಿಸಿ, ಹತ್ತು ಹನ್ನೊಂದರ ಸಮರಸಾನುಭಾವವ ತ್ಯಜಿಸಿ, ಆಪ್ಯಾಯನಕ್ಕನ್ನ, ಸೀತಕ್ಕೆ ವಸ್ತ್ರ, ಲಾಂಛನಕ್ಕೆ ಶರಣೆಂದು ಬಯಲಿಗೆ ಬೀಳದೆ ಸುಮ್ಮನಿರ್ಪುದೆ ಪ್ರಮಥಗಣಮಾರ್ಗವು. ಈ ಸನ್ಮಾರ್ಗವನುಳಿದು ಕಿರಾತರಂತೆ ಹುಸಿಶಬ್ದ, ಹೊಲೆಶಬ್ದ , ಹೇಸಿಕೆಶಬ್ದ, ವಾಕರಿಕೆಶಬ್ದ, ಬಾಂಡಿಕಶಬ್ದ, ನೀಚರನುಡಿ, ಷಂಡರಮಾತು, ಕಳ್ಳರನುಡಿ, ಜಾರರನುಡಿ, ಜೂಜುಗಾರರನುಡಿ, ಆಟಕಾರರನುಡಿ, ಬೇಟೆಗಾರರನುಡಿ, ಕುಲಛಲಗಾರರನುಡಿ, ಲಾಹರಿಗಾರರನುಡಿ, ಅಶನಘಾತಕರನುಡಿ, ಲಂಚಗಾರರನುಡಿ, ರಿಣಪಾತಕರನುಡಿ, ಮೋಸಗಾರರನುಡಿ, ಭ್ರಾಂತರನುಡಿ, ಕೋಪಿಗರನುಡಿ, ಆಚಾರಹೀನ ನಡೆಗೆಟ್ಟರನುಡಿ, ಬಳ್ಳದತುದಿಹೀನ ಶಬ್ದದಂತೆ ತುಂಟ ತುಡುಗುಣಿ ಹಲವು ಮಾತುಗಳ ಬಳಕೆಯುಳ್ಳುದೆ ಚತುರ್ಥಪಾತಕವು. ಇದಕ್ಕೆ ಹರವಾಕ್ಯ ಸಾಕ್ಷಿ : ``ಕುಶಬ್ದಂ ಹೀನಶಬ್ದಂ ಚ ಚಾಂಡಾಲಃ ಶ್ವಪಚೋýಪಿ ವಾ | ಹೀನಶಬ್ದಸ್ಯ ಪಾಪಾಚ್ಚ ನರಕೇ ಕಾಲಮಕ್ಷಯಂ || ಅನೃತಂ ಚಾಪಶಬ್ದಂ ಚ ನಿಂದಕೋ ಗುರುತಲ್ಪಗಃ | ಗಣಾದಿವಾದದೂಷ್ಯಶ್ಚ ವೇಶ್ಯಾಪುತ್ರಸ್ತಥೈವ ಚ || ಪರನಿಂದಾವಂದನಾಶ್ಚ ಲಿಂಗಸಂಗಿವಿವರ್ಜಿತಂ | ಪ್ರಮಾದಂ ಕುರುತೇ ವಾಣ್ಯಾ ಮೋಕ್ಷೋ ನಾಸ್ತಿ ಮಹೇಶ್ವರಿ || ಅನ್ಯದೋಷೇಣ ನಿಂದ್ಯಮಾಸ್ತು ಸ್ವದೋಷಗುಪ್ತಪಾತಕಃ | ಗುರುಭ್ರಷ್ಟಸ್ಯ ಚಾಂಡಾಲೋ ರೌರವಂ ನರಕಂ ವ್ರಜೇತ್ ||'' ಇಂತೆಂದುದಾಗಿ, ಪರಮಾರಾಧ್ಯ ಶ್ರೀಗುರುಕಟಾಕ್ಷೆಯಿಂದ ತನ್ನ ತಾನರಿದು, ಈ ಲಿಂಗಾಂಗಸಂಗಸಂಬಂಧದಾಚರಣೆಯ ಸುಖವು ಏನು ತಪಸ್ಸಿನ ಫಲವೋಯೆಂದರಿದು ಮರೆದರೆ ಇನ್ನೀ ನಿಜಮೋಕ್ಷವು ದೊರೆಯದೆಂದು ಗುರುಹಿಯರ ನಡೆನುಡಿಗಳಾಲಿಸಿ, ನಡೆನುಡಿಭಿನ್ನವಾಗದಂತೆ ಚತುರ್ಥಪರಮದ್ರೋಹದ ಪಾತಕಮಂ ನಿರಸನಂಗೈದು ನಿಜಪರಶಿವಘನಕ್ಕೆ ಘನವೆನಿಸಿರ್ಪುದು ಕಾಣಾ ನಿರವಯಪ್ರಭು ಮಹಾಂತ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ.
--------------
ಮೂರುಸಾವಿರ ಮುಕ್ತಿಮುನಿ
ಶ್ರೀಗುರುಕರುಣಕಟಾಕ್ಷದೊಳ್ ಚಿದ್ಘನಲಿಂಗ ಅಂಗಸಂಬಂಧದಾಚರಣೆಯ ಸರ್ವಾಚಾರಸಂಪದವೆಂಬ ಪರಮಾಮೃತಮಂ ಸವಿದುಂಡುಪವಾಸಿ ಬಳಸಿಬ್ರಹ್ಮವಾಗಿ, ಪರಮಪಾತಕವೆಂಬ ಕಾಲ ಕಾಯ ಮಾಯಾಪಾಶ ಭವಸಾಗರವ ದಾಂಟಿ, ದೃಢಚಿತ್ತಿನೊಳ್ ನಿಂದ ನಿತ್ಯಸುಖಿಗಳು, ತಮ್ಮ ನಡೆ ನುಡಿ ತಮಗೆ ಸ್ವಯವಾಗಿ, ಸತ್ಯಶುದ್ಧದಿಂದ ಹಸ್ತಪಾದವ ದುಡಿಸಿ, ಮಾಡುಂಬ ಭಕ್ತನಾಗಲೀ, ಬೇಡುಂಬ ಮಹೇಶನಾಗಲೀ, ಅಂಗವಿಕಾರದ ಕಾಮ ಕ್ರೋಧ ಲೋಭ ಮೋಹ ಮದ ಮತ್ಸರವೆಂಬ ಅವಲಕ್ಷಣಮಂ ಜರಿದು ಮರೆದು ನಿರಾಸತ್ವದಿಂದ, ದೇಹಮೋಹಮನ್ನಳಿದುಳಿದು, ಅಪರಾಧ ಪ್ರಾಣಿಗಳಾಗಲಿ, ನಿರಪರಾಧ ಪ್ರಾಣಿಗಳಾಗಲಿ, ಕೊಲ್ಲದಿರ್ಪುದೆ ಧರ್ಮ, ಗಂಧ ರಸ ಮೊದಲಾದ ಪರದ್ರವ್ಯ ಒಲ್ಲದಿಪ್ಪುದೆ ಶೀಲ, ಗುರುಹಿರಿಯರುಗಳಿಗೆ ಪ್ರತಿ ಉತ್ತರವ ಕೊಡದಿಪ್ಪುದೆ ವ್ರತ, ಕ್ಷುತ್ತು ಪಿಪಾಸಾದಿಗಳಿಗೆ ಅಳುಕದಿಪ್ಪುದೆ ನೇಮ, ಕುಲಾದಿ ಅಷ್ಟಮದಗಳಿಗೆಳಸದಿಪ್ಪುದೆ ನಿತ್ಯ. ಇಂತೆಸೆವ ಪಂಚಪರುಷವ ಬಾಹ್ಯಾಂತರಂಗದಲ್ಲಿ ಪರಿಪೂರ್ಣಭಾವದಿಂದ ತುಂಬಿತುಳುಕಾಡುತ, ಶ್ರಿಗುರುಲಿಂಗಜಂಗಮದ ಷಟ್ಸಾ ್ಥನದಲ್ಲಿ ಷಡ್ವಿಧಲಿಂಗ ಮಂತ್ರಪ್ರಣಮಂಗಳು ಸಂಬಂಧವಾಗಿಪ್ಪುದ ಶ್ರುತಿಗುರುಸ್ವಾನುಭಾವದಿಂದರಿದು, ತನ್ನ ಬಳಿವಿಡಿದು ಬಂದ ಸುಪದಾರ್ಥವ ಆ ಗುರುಚರಪರಕ್ಕೆ ಪುಷ್ಪ ಮೊದಲಾದ ಸುಗಂಧವ ಪವಿತ್ರಮುಖದಿಂದ ನಿವೇದಿಸಿದಲ್ಲಿ ಆಚಾರಲಿಂಗಕ್ಕೆ ಸಮರ್ಪಣೆಯಾಗಿಪ್ಪುದು. ಹಣ್ಣು ಮೊದಲಾದ ಸುರಸದ್ರವ್ಯವ ಸುಪವಿತ್ರಗಳಿಂದ ಸುಪವಿತ್ರಮುಖದೊಳ್ ಸಮರ್ಪಿಸಿದಲ್ಲಿ ಗುರುಲಿಂಗಕ್ಕೆ ಸಮರ್ಪಣೆಯಾಗಿಪ್ಪುದು. ಪೀತ ಶ್ವೇತ ಮೊದಲಾದ ಸಮಸ್ತ ಚಿತ್ರವಿಚಿತ್ರಂಗಳ ಸ್ವರೂಪವನು ಮಹಾಜ್ಞಾನಸೂತ್ರವಿಡಿದು ಯೋಗ್ಯವೆನಿಸಿ ನಿವೇದಿಸಿದಲ್ಲಿ ಶಿವಲಿಂಗಕ್ಕೆ ಸಮರ್ಪಣೆಯಾಗಿರ್ಪುದು. ಕೌಪ ಕಟಿಸೂತ್ರ ಮೊದಲಾದ ವಸ್ತ್ರಾಭರಣಗಳ ಯೋಗ್ಯವೆನಿಸಿ ತಟ್ಟುವ ಮುಟ್ಟುವ ಶೀತುಷ್ಣಾದಿ ಸತ್ಕ್ರಿಯವಿಡಿದು ಸಮರ್ಪಿಸಿದಲ್ಲಿ ಚರಲಿಂಗಕ್ಕೆ ಸಮರ್ಪಣೆಯಾಗಿರ್ಪುದು. ಶಿವಾನುಭಾವಪ್ರಸಂಗ ಘಂಟೆ ತಂತಿ ಚರ್ಮ ಮೊದಲಾದ ಸುಶಬ್ದಂಗಳ ಸತ್ಯಶುದ್ಧ ತ್ರಿಕರಣವಿಡಿದು ಪವಿತ್ರತೆಯಿಂದ ನಿವೇದಿಸಿದಲ್ಲಿ ಪ್ರಸಾದಲಿಂಗಕ್ಕೆ ಸಮರ್ಪಣೆಯಾಗಿರ್ಪುದು. ಈ ಸಕಲ ಸಂತೋಷವಾದ ಮತ್ತೆ ಹೊನ್ನು ಹೆಣ್ಣುಗಳ ಗಣಸಾಕ್ಷಿಯಾಗಿ, ಸತ್ಯಸಾವಧಾನದಿಂದೆ ಧಾರೆಯನೆರೆದು, ಶಿವದೀಕ್ಷೋಪದೇಶಗಳಿಂದ ಸುಪವಿತ್ರವೆಂದೆನಿಸಿ ನಿವೇದಿಸಿದಲ್ಲಿ ಮಹಾಲಿಂಗಕ್ಕೆ ಸಮರ್ಪಣೆಯಾಗಿರ್ಪುದು. ಈ ಪ್ರಕಾರದಿಂದ ಸತ್ಯಶುದ್ಧಕಾಯಕದೊಳು ತನಗುಳ್ಳ ಸುಪದಾರ್ಥದ್ರವ್ಯವ ನಿಜೇಷ್ಟಾರ್ಪಣ ಪರದಿಂದೆ ಲಿಂಗಾರ್ಪಣವ ಸಮರ್ಪಿಸಬಲ್ಲಾತನೆ ಷಟ್‍ಸ್ಥಲಭಕ್ತ ಮಹೇಶ್ವರರೆಂಬೆನು. ಈ ಷಡ್ವಿಧ ದ್ರವ್ಯಪದಾರ್ಥಂಗಳು ದೊರೆಯದಿದ್ದರೆ ಮೂಲಚಿತ್ತ ಮೊದಲಾದ ಅಂಗ ಮನ ಪ್ರಾಣ ಇಂದ್ರಿಯ ಕರಣ ವಿಷಯಂಗಳ ಆ ಶ್ರೀಗುರುವಿಂಗೆ ಜಂಗಮದ ಸೊಮ್ಮುಸಂಬಂಧದಲ್ಲಿ ನಿಲಿಸುವುದೆ ಸರ್ವಾಂಗಲಿಂಗಾರ್ಪಣವಾಗಿರ್ಪುದು. ಇದರೊಳಗೆ ತನು ನೋಯದೆ, ಮನ ಕರಗದೆ, ಭಾವ ಬಳಲಿಸದೆ, ಅತಿ ಸುಯಿಧಾನದಿಂದ ನಿಃಕಳಂಕ ಪರಶಿವ ಪಾದೋದಕ ಪ್ರಸಾದ ಮಂತ್ರದ ಪರಶಿವತತ್ವದಲ್ಲಿ ಪರಿಪೂರ್ಣರಾಗಿರ್ಪುದೆ ಅನಾದಿಪ್ರಮಥಗಣಮಾರ್ಗವು. ಇಂತೆಸೆವ ಸಚ್ಚಿದಾನಂದದ ಪರಮಾನುಭಾವ ಸನ್ಮಾರ್ಗವನುಳಿದು ಸರ್ವಾಚಾರಸಂಪನ್ನ ಬಾಹ್ಯರಾದ ಕಿರಾತರಂತೆ, ಭಂಗಿ ಗಾಂಜಿ ಗುಡಾಕು ತಂಬಾಕದ ಚಿಲುಮೆ ಕಡ್ಡಿ ಹುಡಿ ನಾಸಿಬುಕುಣಿಯೆಂದು ಭುಂಜಿಸಿ, ಹುಚ್ಚನಾಯಿ ಎಲುವ ಕಚ್ಚಿದಂತೆ, ದಿವರಾತ್ರಿಗಳಲ್ಲಿ ಪಾದೋದಕಪ್ರಸಾದದ್ವಾರವಾಗಿ ಪರಿಶೋಭಿಸುವಂತೆ ಪರಶಿವ ಪ್ರಾಣಲಿಂಗದ ಭೋಗಾಂಗದಲ್ಲಿಟ್ಟುಕೊಂಡು, ಭ್ರಾಂತು ಭೋಗಿಗಳಾಗಿ, ನಿಜಗೆಟ್ಟು, ತಮ್ಮ ತಾವರಿಯದೆ, ಪಿಶಾಚಿಮಾನವರಂತೆ ಇಂದ್ರಾದಿ ಹರಿಸುರಬ್ರಹ್ಮಾದಿಗಳು ಹೊಡೆದಾಡಿದ ಕರ್ಮದೋಕುಳಿಯಲ್ಲಿ ಬಿದ್ದೊದ್ದಾಡಿ ತೊಳಲುವ, ವನಿತಾದಿ ಆಸೆ, ಭೋಗದ ಆಸೆ ಪಾಶದೋಕುಳಿಯೆಂದರಿದು ಮರೆದು ನರಗುರಿಗಳಾಗಿ, ಬಾಯಿಗೆ ಬಾಯಿ ಹಚ್ಚಿ ಬೊಗಳಾಡುವುದೊಂದು ದುರಾಚಾರ. ರಾಜರಿಗೆ ರೊಕ್ಕವ ಕೊಟ್ಟು, ಯಂತ್ರ ಮಂತ್ರ ತಂತ್ರಗಳಿಂದೋಲೈಸಿ, ಮಲತ್ರಯವಿದೂರರೆಂದು ಪತ್ರ ಉತ್ರಗಳಲ್ಲಿ ಹೆಮ್ಮೆ ಹಿರಿತನಕ್ಕೆ ಬಿದ್ದು, ಅಂದಿನವರೆ ಇಂದಿನವರೆಂದು ಒಪ್ಪವಿಟ್ಟು, ನುಡಿನಡೆಹೀನರಾಗಿ, ಬಿಟ್ಟಿಮಲವನುಸರಿಸಿ, ತಥ್ಯ ಮಿಥ್ಯ ತಾಗುದ್ವೇಷಗಳಿಂದೆ ದಿವರಾತ್ರಿಗಳಲ್ಲಿ ತ್ರಿವಿಧವಸ್ಥೆಗಳ ಕಳೆದು, ಒಬ್ಬರೊಬ್ಬರು ಹೊಡೆದಾಡುವುದೊಂದು ದುರಾಚಾರ. ಇಂತಲ್ಲದೆ, ಮಿಲಂಚರಾಕ್ಷಸರ ಅರವತ್ತುನಾಲ್ಕು ವಿದ್ಯೆ ಬತ್ತೀಸಾಯುಧಗಳ ಕಟ್ಟಿ, ತಳ್ಳಿತಗಾದಿಗಳಿಂದ ಹೊಲ ಗದ್ದೆ ಬಣಮೆಗಳ ಸುಟ್ಟು, ಅನಂತ ಹಿಂಸೆಗಳ ಮಾಡಿ, ಊರು ಕೇರಿ ಪೇಟೆ ಪಟ್ಟಣಗಳ ಸುಲಿದು, ಹಾದಿ ಬೀದಿಯ ಬಡಿದು, ಮತ್ತೆ ನಾಚಿಕೆಯಿಲ್ಲದೆ ನಾವು ವೀರಶೈವಘನದ ಭಕ್ತಮಹೇಶ್ವರರೆಂದು, ನಡೆಗೆಟ್ಟು ನುಡಿಯ ನುಡಿವುದೊಂದು ಅತಿಕಠಿಣವಾದ ದುರಾಚಾರವು. ವಿಭೂತಿ ರುದ್ರಾಕ್ಷಿ ಗುಣತ್ರಯಗಳಳಿದುಳಿದ ಶಿವಲಾಂಛನ ಮುದ್ರಾಧರ್ಮಗಳ ಹೊದೆದು, ಜಡೆ ಮಕುಟಗಳ ಬಿಟ್ಟು, ಕೌಪ ಕಟಿಸೂತ್ರವ ಧರಿಸಿ, ನಿಜಮೋಕ್ಷಪದವನರಿಯದೆ, ಅರ್ಥೇಷಣ ಪುತ್ರೇಷಣ ಧಾರೇಷಣ ಈಷಣತ್ರಯದ ಮೋಹಾಭಿರತಿಯಿಂದ, ಅಂತಜ್ರ್ಞಾನ ಬಹಿಕ್ರ್ರಿಯಾಚಾರವ ಮೆರೆದು, ಕಾಲತ್ರಯ ಕಾಮತ್ರಯ ಕರ್ಮತ್ರಯ ದೋಷತ್ರಯ ಪಾಪತ್ರಯ ರೋಗತ್ರಯ ಅಜ್ಞಾನತ್ರಯ ಅನಾಚಾರತ್ರಯ ಮೊದಲಾದ ಭವಪಾಶದಲ್ಲಿ ಮುಳುಗುಪ್ಪಿಯಾಗಿ ಭರಿಸುವಂಥಾದ್ದೆ ಐದನೆಯ ಪಾತಕವು. ಇದಕ್ಕೆ ಹರನಿರೂಪ ಸಾಕ್ಷಿ : ``ತಸ್ಕರಂ ಪರದಾರಂಚ ಅನ್ಯದೈವಮುಪಾಸನಂ | ಅನೃತಂ ಇಂದಕಶ್ಚೆ ೈವ ತಸ್ಯ ಚಾಂಡಾಲವಂಶಜಃ || ಪರಾರ್ಥಹಿಂಸಕಶ್ಚೈವ ಭಕ್ತದ್ರೋಹೀ ಚ ನಿಂದಕಃ | ಪ್ರಾಣಘಾತಕದೇಹಾನಾಂ ತಸ್ಮಾತ್‍ಚಾಂಡಾಲವಂಶಜಃ || ಅಲ್ಪಜೀವೀ ಭವಪ್ರಾಣೀ ಅಲ್ಪಭೋಗನಿರರ್ಥಕಃ | ಅಲ್ಪಾಶ್ರಯಂ ನ ಕರ್ತವ್ಯಂ ಮಹದಾಶ್ರಯಃ || ಅಜ್ಞಾನಾಚ್ಚ ಕೃತಂ ಪಾಪಂ ಸುಜ್ಞಾನಾಚ್ಚ ವಿನಶ್ಯತಿ | ಸುಜ್ಞಾನಾಚ್ಚ ಕೃತಾತ್ ಪಾಪಾತ್ ರೌರವಂ ನರಕಂ ವ್ರಜೇತ್ ||'' ಎಂದುದಾಗಿ, ಪರಿಪೂರ್ಣ ಶ್ರೀಗುರುಮಾರ್ಗಾಚಾರ ನಡೆನುಡಿಯಿಂದಾಚರಿಸಿ, ನಿಜಮುಕ್ತಿಮಂದಿರವ ಸೇರಬೇಕೆಂಬ ಸದ್ಭಕ್ತಮಹೇಶ್ವರರು ಸತ್ತುಚಿತ್ತಾನಂದ ನಿತ್ಯಪರಿಪೂರ್ಣತ್ವವನೈದಿ, ಪರಮಪಾತಕಂಗಳಿಗೆ ಮಹಾಜ್ಞಾನಾಯುಧವ ಹಿಡಿದು, ನಿತ್ಯ ನಿತ್ಯ ಇತರೇತರ ದುಶ್ಚಾಷ್ಟಿ ಬಿಟ್ಟು ಘನಲಿಂಗಾಂಗಸಮರಸಮನೋಲ್ಲಾಸ ಸದ್ಭಕ್ತಿ ಜ್ಞಾನವೈರಾಗ್ಯ ನಿಜನಿಷಾ*ಪರತ್ವಮಂ ಸಾಧಿಸಿ, ತಮ್ಮ ತಾವರಿತವರೆ ಪರಶಿವಯೋಗಾನಂದಭರಿತರೆಂಬೆ ಕಾಣಾ ನಿರವಯಪ್ರಭು ಮಹಾಂತ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ.
--------------
ಮೂರುಸಾವಿರ ಮುಕ್ತಿಮುನಿ
ಶ್ರೀಗುರು ಪರಮಾರಾಧ್ಯ ಪ್ರಮಥಗಣ ಸಾಕ್ಷಿಯಾಗಿ, ಮನ ಕೊರಗಿ, ಹಸ್ತ ಪಾದ ಬಳಲಿ, ತೃಣಕಾಷ*ವೆ ಮೊದಲು ನವರತ್ನಂಗಳೆ ಕಡೆಯಾದ ಸಮಸ್ತ ವ್ಯವಹಾರದಿಂದ, ಸತ್ಯಶುದ್ಧದಿಂದ ಗುರುಹಿರಿಯರಿಗೆ ಖೊಟ್ಟಿಯಾಗದೆ, ಲಿಂಗನಡೆ ಲಿಂಗನುಡಿ ಲಿಂಗನೋಟ ಲಿಂಗಕೂಟ ಲಿಂಗಬೇಟ ಲಿಂಗರತಿ ಲಿಂಗಭೋಗ ಲಿಂಗಾಭಿಮಾನ ಲಿಂಗಾರಾಧನೆ ಲಿಂಗಾರ್ಪಣ ಲಿಂಗಾನುಭಾವ ಲಿಂಗಾಸನ ಲಿಂಗಸೋಂಕು ಲಿಂಗನಂಟು ಲಿಂಗಗತಿಮತಿ ಲಿಂಗಸತಿಪತಿ ಲಿಂಗಮಾತೆ ಲಿಂಗಪಿತ ಲಿಂಗಬಂಧು ಲಿಂಗಪದಾರ್ಥ ಲಿಂಗದ್ರವ್ಯ ಲಿಂಗಧನಧಾನ್ಯ ಲಿಂಗಾಭರಣ ಲಿಂಗಶಿಶುವು ಲಿಂಗಮೋಹ ಲಿಂಗಾಚಾರ ಲಿಂಗಲಯ ಲಿಂಗಪರೋಪಕಾರಿ ಲಿಂಗದಾಸೋಹ ಲಿಂಗಾಂಗಸಂಗಸಮರತಿಯಿಂದ ಪರಶಿವಯೋಗಸಂಪನ್ನರಾಗಿ, ಗುರುಕೃಪಾನಂದದಲ್ಲಿ ಚಿತ್ತವಚ್ಚೊತ್ತಿದಂತೆ ಕಾಯಕವ ಮಾಡಿ, ಕುಟಿಲ ಕುಹಕಂಗಳಳಿದುಳಿದು, ಅನಾಚಾರಿಗಳನ್ನೋದಕವ ಕೊಳ್ಳದೆ, ಉಪಾಧಿ ನಿರುಪಾಧಿ ಸಹಜಜಂಗಮಸ್ಥಲದ ವರ್ಮಾದಿವರ್ಮವನರಿದು, ಮಾಡಿ ಮಾಟವ ಮರೆದು, ಕೂಡಿ ಕೂಟವ ಕಳೆದುಳಿದು, ಸತ್ಪಾತ್ರ ಅಪಾತ್ರವ ಎಚ್ಚರದಿಂ ನೋಡಿ, ತನುಮನಧನ ವಂಚನೆಯಿಲ್ಲದೆ, ರಿಣಾತುರವೆಂಬ ಹಿಂದಣಮಾರ್ಗವ ಮೆಟ್ಟದೆ, ಸೋಹಂ ಕೋಹಂ ನಾಹಂಭಾವವಳಿದುಳಿದು, ಶಿವಾಚಾರಸಮರತಿ ದಾಸೋಹಂಭಾವದಿಂದಾಚರಿಸುವಾತನೆ ಭವಿಮಾಟಕೂಟವಳಿದುಳಿದು ನಿಜಸದ್ಭಕ್ತ ಆಚಾರಲಿಂಗಪ್ರಸನ್ನಪ್ರಸಾದಿ. ಇಂತಪ್ಪ ಸದ್ಭಕ್ತನಂಗಳವೆ ಕೈಲಾಸವೆಂದು ಹರಗುರುವಾಕ್ಯವರಿದು, ಭಾವಭರಿತವಾಗಿ, ಸತ್ವಗುಣವಳಿದುಳಿದು, ಮಹಾಜ್ಞಾನದಂಡಾಗ್ರಮಂ ಪಿಡಿದು, ಸತ್ಯಶುದ್ಧ ನುಡಿಯೆಂಬ ಪ್ರಣಮನಾದಗಂಟೆಯಂ ಕಟ್ಟಿ, ರಜೋಗುಣವ ಹೊದ್ದದೆ, ಮಹದರುವೆಂಬ ಕಮಂಡಲವ ಧರಿಸಿ, ತಮೋಗುಣ ನಷ್ಟವಾದ ಪರಮಪರುಷರಸದ ಜೋಳಿಗೆಯಂ ಪಿಡಿದು, ಕರಣೇಂದ್ರಿಗಳ ಹಸಿವು ತೃಷೆ ವಿಷಯ ವ್ಯಸನಗಳ ಛೇದಿಸಿದ ಜಂಗಿನ ಗೆಜ್ಜೆಗಳಂ ಧರಿಸಿ, ಪರಮಪಾವನ ನಿಜಮೋಕ್ಷಮಂದಿರವೆಂಬ ಮಂತ್ರಸ್ಮರಣೆಯೊಳ್ `ಶ್ರೀಗುರುಧರ್ಮ ಕೋರಧನಧಾನ್ಯದ ಭೀಕ್ಷಾ'ಯೆಂದು ಭಕ್ತಗಣಂಗಳಿಂಗಿತವರಿತು, ಘನಮನ ಕಲಕದಂತೆ ಸುಯಿಧಾನದಿಂದ ಸುಳಿಗಾಳಿಯಂತೆ ಸುಳಿದು, ಅತಿರತಿಮೋಹದಿಂದ ಪರಮಹರುಷಾನಂದದೊಳ್ ಬೇಡಿತಂದು, ನಿರ್ವಂಚಕನಾಗಿ, ಸತ್ಯಶುದ್ಧ ದೃಢಚಿತ್ತದಿಂದ, ಘನಲಿಂಗಸಂಗಸಮಪತಿಗಳೊಳ್ ಕೂಡೆರಡಳಿದುಳಿದು, ಹಿಗ್ಗು-ಹೆಮ್ಮೆ , ಸಿರಿ-ದರಿದ್ರ, ಸುಖ-ದುಃಖ, ಸ್ತುತಿ-ನಿಂದೆ, ಪುಣ್ಯ-ಪಾಪ, ಭೋಗ-ಯೋಗ, ಕಾಮ-ಕ್ರೋಧ, ಲೋಭ-ಮೋಹ, ಮದ-ಮತ್ಸರ, ಆಸೆ-ಆಮಿಷಗಳ, ಹಸಿವು-ತೃಷೆಗಳ ನೀಗಿ, ಸದ್ಭಕ್ತಗಣಸಮ್ಮೇಳದಿಂದ ಗುರುಚರಪರಕ್ಕೆ ತ್ರಿವಿಧಾರ್ಚನೆಗಳರಿದು, ಒಂದೂಡಲಾಗಿ, ಪರಿಣಾಮವೆ ಭಕ್ತಿ ವಿರಕ್ತಿ ಜ್ಞಾನಾನುಭಾವ, ಪರಿಣಾಮವೆ ಚಿದಂಗಲಿಂಗಮುಖ ಶಕ್ತಿ ಶುಚಿರುಚಿ ಹಸ್ತಪದಾರ್ಥಪ್ರಸಾದ, ಘನಸಮ್ಮತ ವಿಚಾರಮಂ ಅರಿದಾನಂದದಿಂದ ಪರಿಪೂರ್ಣ ನಡೆನುಡಿ ಕೊಟ್ಟುಕೊಂಬುವ ದಾನಿಯೆ ಸದ್ವೀರಮಹೇಶ್ವರನು. ಇಂತೆಸೆವ ಪ್ರಮಥಗಣ ಭಕ್ತಮಹೇಶ್ವರರಾಚರಣೆಯ ಘನಮಾರ್ಗವನರಿಯದೆ, ಆಡಂಬರವೇಷಮಂ ಧರಿಸಿ, ಕುಟಿಲ ಕುಹಕತನದಿಂದ ಅನಾಚಾರ ರಾಜರನೋಲೈಸಿ, ಚಾಡಿಚಿತಾರಿಕೆ ಸಾಕ್ಷಿ ವಾದ ಸಹಜವ ಹುಸಿಮಾಡಿ, ಹುಸಿಯನೆ ಸಹಜವ ಮಾಡಿ, ಕುಂಟಣಿತನದಿಂದ ಧನಧಾನ್ಯಾಭರಣವ ಗಳಿಸಿ, ಈಷಣತ್ರಯಮೋಹದಿಂದ ಒಡಲುಪಾಧಿವಿಡಿದು, ಭಕ್ತಮಹೇಶ್ವರರೆಂದು ಬೊಗಳುವದೊಂದು ದುರಾಚಾರ. ತಳ್ಳಿ ತಗಾದಿ ಜಾರತನ ಪಂಚಪಕ್ಷ ಮೊದಲಾದ ಗಾರುಡವಿದ್ಯೆಗಳಿಂದ ಧನ ಧಾನ್ಯ ವಸ್ತ್ರಾಭರಣವ ಗಳಿಸಿ ಅಕ್ರಿಯೆ ಅನಾಚಾರದಿಂದ ದೇಹವಿಡಿದಿಪ್ಪುದೊಂದು ದುರಾಚಾರ. ಹಲಾಯುಧನ ಹೊಲಮನೆ ಮೊದಲಾದ ಸಮಸ್ತ ವ್ಯವಹಾರಗಳಲ್ಲಿ ಆರೂ ಕಾಣದಂತೆ ಅಣುರೇಣುತೃಣಕಾಷ*ವಾಗಲಿ, ಮೋಸಗಾರಿಕೆಯಿಂದ ಒಡಲುಪಾಧಿವಿಡಿದಾಚರಿಸುವದೊಂದು ದುರಾಚಾರ. ಆಯುಧವ ಕಟ್ಟಿ, ರಣಾಗ್ರಕ್ಕೆ ಹೋಗಿ, ಜೀವಹಿಂಸೆಗಳಿಂದ ಧನಧಾನ್ಯವಸ್ತ್ರಾಭರಣವ ಗಳಿಸಿ, ರೂಪಲಾವಣ್ಯದಿಂದ ಒಡಲುಪಾಧಿಹೊರೆವುದೊಂದು ಅತಿ ಕಠಿಣವಾದೊಂದು ದುರಾಚಾರ. ಸತ್ಯಶುದ್ಧ ವ್ಯವಹಾರಗಳಲ್ಲಿ ಪತ್ರವ ಬರೆದುಕೊಟ್ಟು, ಮೃದುನುಡಿಯಿಂದ ಧನಧಾನ್ಯವ ತಂದು, ಪುತ್ರಮಿತ್ರ ಕಳತ್ರಯಕೆ ಮಾಡಿ, ಮತ್ತವರು ಬೇಡಿದರೆ ತಿರುಗಿ ಹುಸಿನುಡಿಯ ನುಡಿದು, ಅವರ ಪದಾರ್ಥವ ಚಾಗೆಯ ಮಾಡಿ, ನಿಂದೆ ಕುಂದು ಕೊರತೆಗಳಿಂದ ದೂಷಿಸುವುದೊಂದು ದುರಾಚಾರ. ಇಂತು ಪಂಚವಿಧಪಾಶಬದ್ಧರಾಗಿ, ಅವಿಚಾರದಿಂದ ಭಕ್ತಮಹೇಶ್ವರರೆಂದು ನುಡಿದು, ಅನಾಚಾರ ನಡೆಯ ನಡೆವುದು ತೃತೀಯ ಪಾತಕವು. ಇದಕ್ಕೆ ಹರವಾಕ್ಯ ಸಾಕ್ಷಿ : ``ಪರದ್ರವ್ಯಂ ಪರಾರ್ಥಂ ಚ ವರ್ಜಯೇತ್ ಭಾವಶುದ್ಧಿಮಾನ್ | ಪ್ರಮಾದಾತ್ ಸ್ಪರ್ಶನಾಚ್ಚೈವ ರೌರವಂ ನರಕಂ ವ್ರಜೇತ್ || ಅನ್ನಸ್ಯ ಧನಧಾನ್ಯಸ್ಯ ಲಿಂಗಭಕ್ತಿವಿವರ್ಜಿತಃ | ತಸ್ಕರಃ ಅಪಹಾರಾತ್ ಶ್ವಾನಜನ್ಮನಿ ಜಾಯತೇ || ಸತ್ಯಂ ಧರ್ಮೋ ಯಥಾರ್ಥಂ ಚ ಶಿವಧರ್ಮೇಣ ಸುಖಂ ಭವೇತ್ | ಅನ್ಯತ್ರ ಚಿಂತಿತಾತ್ ಕಾರ್ಯಾತ್ ಮೋಕ್ಷೋ ನಾಸ್ತಿ ವರಾನನೇ || ಉತ್ತಮಾರಣ್ಯಪುಷ್ಪಂ ಚ ಮಧ್ಯಮಂ ವನಪುಷ್ಪಯೋಃ | ಕನಿಷ*ಂ ಯಾಚಿತಂ ಪುಷ್ಪಂ ಚೋರಪುಷ್ಪಂತು ನಿಷ್ಫಲಂ ||'' ಇಂತೆಂದುದಾಗಿ, ಶ್ರೀಗುರುಕಟಾಕ್ಷೆಯಿಂದ ತನ್ನ ತಾನರಿದು ಸ್ವಾತ್ಮಾನುಭಾವದೊಳ್ ಸತ್ಯಶುದ್ಧನಾಗಿ, ಪರರೊಡವೆಯೆಂಬುದೆ ಕೇಡು, ಕಾಯಾರ್ಜಿತವೆಂಬುದೆ ನಿಜಮೋಕ್ಷವೆಂದರಿದಾನಂದದಿಂದ ಆ ತೃತೀಯಪಾತಕಮಂ ನಿರಸನಂಗೈದು ದುರಿತಕರ್ಮವಂ ಒರೆದೊರೆದು ಕಂಡ್ರಿಸಿ, ಕಳೆದುಳಿದ ನಿಜಮುಕ್ತನೆ ಶಿವಯೋಗ ಸನ್ಮಾರ್ಗಿ ಸದ್ಭಕ್ತ ಮಹೇಶ ಕಾಣಾ ನಿರವಯಪ್ರಭು ಮಹಾಂತ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ.
--------------
ಮೂರುಸಾವಿರ ಮುಕ್ತಿಮುನಿ