ಅಥವಾ
(7) (1) (4) (0) (0) (0) (0) (0) (0) (0) (0) (0) (0) (0) ಅಂ (1) ಅಃ (1) (0) (0) (1) (1) (0) (1) (0) (0) (0) (0) (0) (0) (0) (0) (0) (1) (0) (0) (0) (3) (11) (0) (0) (0) (2) (0) (0) (0) (0) (2) (5) (0) (3) (1) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಪರಮಗುರು ಲಿಂಗಜಂಗಮವ ನಿಜವಿಶ್ವಾಸ ನೈಷ್ಠೆಯೊಳ್ ಮೂರ್ತಿಗೊಳಿಸಿ ಅರ್ಚಿಸುವ ಸುಚಿತ್ತಕಮಲದಳಂಗಳೆಲ್ಲ ಒಂದೊಡಲಾಗಿ, ಭಕ್ತನ ಕರಕಮಲ, ಜಂಗಮದ ಚರಣಕಮಲ, ಈ ನಾಲ್ಕರಲ್ಲಿ ಸಂಬಂಧವಾದ ಪ್ರಣಮದೊಳ್ ಕೂಡಿದ ನೇತ್ರಕಮಲ ಒಂದಾದ, ಸಮರಸೈಕ್ಯವಾಗಿ ಕೂಡಿದ ತ್ರಿಕೂಟಸಂಗಮಸ್ಥಾನವಿದೆ. ಅಷ್ಟಾಷಷ್ಟಿವರಕೋಟಿ ತೀರ್ಥಸ್ಥಾನವಿದೆ. ದೇವಗಂಗೆ ನೀಲಗಂಗೆ ಶಿವಗಂಗಾ ಸರಸ್ವತಿ ಯಮುನಾಸ್ಥಾನವಿದೆ. ಚಿತ್ಸೂರ್ಯ ಚಂದ್ರಾಗ್ನಿಮಂಡಲವಿದೆ. ಜ್ಯೋತಿರ್ಮಂಡಲ ಅಖಂಡಜ್ಯೋತಿರ್ಮಂಡಲ ಅಖಂಡಮಹಾಪರಿಪೂರ್ಣಜ್ಯೋತಿರ್ಮಂಡಲ ಸ್ಥಾನವಿದೆ. ರೋಷವೆಂಬ ಕಾಲರತಿಕ್ರೀಡಾಭ್ರಾಂತೆಂಬ ಕಾಮ ಆಸೆ ಆಮಿಷ ಲೋಭ ಮೋಹ ಮದ ಮತ್ಸರವೆಂಬ ಮಾಯಾ ಸಂಸಾರಸಂಕಲ್ಪ ವಿಕಲ್ಪಂಗಳ ಹಿಂದುಳಿದು, ಆದ್ಯರು ಭೇದ್ಯರು ವೇದ್ಯರು ಸಾಧ್ಯರುಯೆಂದವತರಿಸಿ, ಜಿಹ್ವಾತುರ ಗುಹ್ಯಾತುರ ಅರ್ಥಾತುರ ತ್ಯಾಗಾತುರ ಭೋಗಾತುರ ಯೋಗಾತುರ ಕಡೆಯಾದ ಅನಂತ ಆತುರಗಳೆಂಬ ಷಡಿಂದ್ರೀಕರಣ ವಿಷಯವ್ಯಾಪಾರಂಗಳ ಜೊಳ್ಳುಮಾಡಿ ತೂರಿ, ಜಗದಾದಿ ಗಟ್ಟಿಬೀಜವಾಗಿ, ನಿಂದ ನಿಲುಕಡೆಯ ಉಳಿದ ಉಳುವೆಯ ಮಹಾಘನದುನ್ಮನಿಸ್ಥಾನವಿದೆ. ಎನ್ನ ಭಕ್ತಿ-ಜಾÕನ-ವೈರಾಗ್ಯ-ಕ್ರಿಯಾಚಾರ ಸತ್ಯಶುದ್ಧ ನಿಜನಡೆನುಡಿಗಳ ಕರುಣಿಸಿ, ಅಂಗ-ಮನ-ಪ್ರಾಣ-ಭಾವ-ಕರಣೇಂದ್ರಿಗಳ ಪಾವನವೆನಿಸಿ ಸಲಹಿದ ಪರಮಾಮೃತಸುಧೆಯಿದೆ. ಭಕ್ತಸ್ಥಲ ವಿರಕ್ತಸ್ಥಲ ಪ್ರಸಾದಿಸ್ಥಲ ಪ್ರಾಣಲಿಂಗಿಸ್ಥಲ ಶರಣಸ್ಥಲ ಐಕ್ಯಸ್ಥಲ ನಿಃಕಳಂಕಸ್ಥಲ ನಿರ್ಮಾಯಸ್ಥಲ ನಿರಾಲಂಬಸ್ಥಲ ನಿಃಪ್ರಪಂಚಸ್ಥಲ ನಿಜಾನಂದಸ್ಥಲ ನಿರೂಪಾದ್ಥಿಕಸ್ಥಲ ನಿರ್ನಾಮಕಸ್ಥಲ ನಿರ್ಗುಣಸ್ಥಲ ಸಗುಣಸ್ಥಲ ನಿತ್ಯತೃಪ್ತಸ್ಥಲ ಕಾಯಾರ್ಪಣಸ್ಥಲ ಕರಣಾರ್ಪಣಸ್ಥಲ ಭಾವಾರ್ಪಣಸ್ಥಲ ಪರಿಪೂರ್ಣಾರ್ಪಣಸ್ಥಲ ನಿರವಯಸ್ಥಲವೆ ಕಡೆಯಾದ ಏಕವಿಂಶತಿ ದೀಕ್ಷಾನುಭಾವ ಏಕವಿಂಶತಿ ಯುಗಂಗಳನೊಳಗೊಂಡು ಅಣುವಿಂಗೆ ಪರಮಾಣುವಾಗಿ, ಮಹತ್ತಿಂಗೆ ಘನಮಹತ್ತಾಗಿ, ಸೃಷ್ಟಿ ಸ್ಥಿತಿಲಯಂಗಳಿಗೆ ಕಾರಣಾರ್ಥ ಕಾಮಧೇನು ಕಲ್ಪವೃಕ್ಷ ಚಿಂತಾಮಣಿ ಪರಮಾನಂದ ಪಂಚಪರುಷದ ಖಣಿಯಿದೆಯೆಂದು ಪೂರ್ಣಾನುಭಾವಭರಿತವಾದ ನಿರ್ದೇಹಿಗಳೆ ನಿರವಯಪ್ರಭು ಮಹಾಂತಘನವೆಂಬೆ ಕಾಣಾ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ.
--------------
ಮೂರುಸಾವಿರ ಮುಕ್ತಿಮುನಿ
ಪರಾತ್ಪರ ಚಿದ್ಬ್ರಹ್ಮಪರಶಿವಮೂರ್ತಿಯು ಮನು-ಮುನಿ, ಸಿದ್ಧ-ಸಾಧಕ, ಯಕ್ಷ-ರಾಕ್ಷಸ, ಯತಿ-ವ್ರತಿ, ಶೀಲ-ನೇಮಗಳ ಭಾವಾಭಾವಕ್ಕೆ ಮೆಚ್ಚಿ, ಅವರವರ ಕಾಂಕ್ಷೆಗಳಂತೆ ಫಲಪದದಾಯುಷ್ಯಕ್ಕೆ ಯೋಗ್ಯರಾಗಿ, ಅಷ್ಟಮಹದೈಶ್ವರ್ಯದಿಂದ ಬ್ರಹ್ಮನ ಉತ್ಪತ್ತಿ, ವಿಷ್ಣುವಿನ ಸ್ಥಿತಿ, ರುದ್ರನ ಲಯ, ಈಶ್ವರನ ತಿರೋಧಾನ, ಸದಾಶಿವನ ಅನುಗ್ರಹಕ್ಕೆ ಕಾರಣರಾಗಿ, ಶೈವಮಾರ್ಗದಿಂದೆ ನಿಜಮೋಕ್ಷವ ಕಾಣದೆ, ಅಷ್ಟಾವರಣದ ಚಿದ್ಬೆಳಗ ಸೇರಿದ ಸದ್ಭಕ್ತಿ-ಜ್ಞಾನ-ವೈರಾಗ್ಯ, ಸತ್ಯ-ಸದಾಚಾರವನರಿಯದೆ, ಇಹಲೋಕದ ಭೋಗವ ಪರಲೋಕದ ಮೋಕ್ಷಾಪೇಕ್ಷೆಯಿಂದ ಎಡೆಯಾಡುತ್ತ, ಪುಣ್ಯ-ಪಾಪ, ಸುಖ-ದುಃಖ, ಸ್ತುತಿ-ನಿಂದೆ, ಸಿರಿ-ದರಿದ್ರ. ಆಶೆ-ಆಮಿಷ, ರೋಗ-ರುಜಿನಗಳಿಂದ, ಶಿವನೆ ಹರನೆ ಭವನೆಯೆಂದು ಗೋಳಿಡುವವರಿಗೆ, ನಿರಾಕಾರಪರಿಪೂರ್ಣ ಪರಶಿವನು ಆಗಳು ಹಿಂದಾಗಿ, ಶಿವಗಣವ ಸೇರುವಂತೆ ಯೋಗಾಭ್ಯಾಸವ ತೋರಿ, ಅನಂತಮಣಿಮಾಲೆ ಜಪಕ್ರಿಯಾನುಷ್ಠಾನ ಮಂತ್ರ-ತಂತ್ರ-ಯಂತ್ರ-ಯಜ್ಞಾದಿಗಳ ಹೇಳಿ, ಪರಮಾರಾಧ್ಯ ನಿರವಯಪ್ರಭು ಮಹಾಂತನ ಗಣಾಚಾರಕ್ಕೆ ಅಯೋಗ್ಯರೆನಿಸಿರ್ಪರು ಕಾಣಾ ಸಿದ್ಧಮಲ್ಲಿಕಾರ್ಜುಲಿಂಗೇಶ್ವರ.
--------------
ಮೂರುಸಾವಿರ ಮುಕ್ತಿಮುನಿ
ಪರಮಪವಿತ್ರ ಹರಗಣಸಾಕ್ಷಿಯಾಗಿ, ಸೂತ್ರ ಗೋತ್ರ ಪರಿಪೂಜ್ಯತ್ವವುಳ್ಳಂಥ ಕ್ರಿಯಾಶಕ್ತಿಯ ಸರ್ವೇಂದ್ರಿಮುಖದವಯವಂಗಳನು ಕೂನಗಳ ವಿಚಾರಕತ್ವದಿಂ ಘನಲಿಂಗಮೂರ್ತಿ ಶ್ರೀಗುರುವಿನ ಕರುಣಕಟಾಕ್ಷ ಶಿವದೀಕ್ಷೆಗಳಿಂದ ಪವಿತ್ರಕಾಯವೆನಿಸಿ, ಶಿವಧರ್ಮಾಂತರಾಳವೆಂಬ ದಂಡಕಮಂಡಲಗಳೆ ಕಂಭ ಕುಂಭ ಹಂದರ ಮುತ್ತೈದೆ ಬಾಸಿಂಗದೆ ಸಾಕ್ಷಿಯಾಗಿ, ಪಂಚಕಳಸ ಆರಾಧ್ಯಗಣಸಮೂಹವೆಲ್ಲ ಸಂತೋಷಂಗೈದು, ಇಷ್ಟಲಿಂಗವೆಂಬ ರಮಣಂಗೆ ಪ್ರಾಣಲಿಂಗವೆಂಬ ರಮಣಿಗೆ ಸುಹಸ್ತಗಳ ಕೂಡಿಸಿ, ಅರ್ಚಿಸಿ, ನವಸೂತ್ರವೆಂಬ ಕಂಕಣವ ಕಟ್ಟಿ, ಸ್ಥಿರಸೇಸೆಯನೆರೆದು, ಭಾವಭರಿತವಾಗಿ, ಸಮರಸಾಚರಣೆಗಳಿಂದ ಪರತತ್ವಲಿಂಗಲೋಲುಪ್ತರಾಗಿ, ಜಂಗಮಾರಾಧನೆ ದಾಸೋಹಂಭಾವದಿಂದ ಶಿವಯೋಗಸಂಪನ್ನರಾಗಿರಿಯೆಂದು ಅಭಯಕರವಿತ್ತು ಶರಣಮಹಾರುದ್ರ ಗಂಟೆಹೊಡೆದಂಥ ಕ್ರಿಯಾಶಕ್ತಿಗಳೆಷ್ಟಾದರೂ ರತಿವಿರತಿಗಳೊಳ್ ಬಳಸಿಬ್ರಹ್ಮವಾಗಿರ್ಪುದೆ ಸತ್ಯಸದ್ಧರ್ಮಿಗಳ ಸನ್ಮಾರ್ಗವು. ಈ ಸನ್ಮಾರ್ಗವನುಳಿದು, ವಿಷಯಾತುರ ಹೆಚ್ಚಿ, ಒಬ್ಬರು ಭೋಗಿಸಿದ ಎಂಜಲಸ್ತ್ರೀಯರ ಆಲಿಂಗಿಸಿ, ತನ್ನ ರಾಣಿಯೆಂದು ನುಡಿಗಣದಿಂದ ಭಾವಿಸುವುದೊಂದು ದುರಾಚಾರ. ಜಿಹ್ವೆಯಿಂದ ಮಾತುಮಾತಿಗೆ ಹೆಂಡತಿ ಅಕ್ಕ ಅವ್ವ ತಂಗಿಯೆಂದು ಬೊಗಳುವುದೊಂದು ದುರಾಚಾರ. ಪರಪುರಷಂಗೆ ರಾಣಿಯಾದ ಸ್ತ್ರೀಯಳ ಹಾವಭಾವ ವಿಲಾಸಗಳ ನೋಡಿ, ವಿಭ್ರಮಣೆಗೊಂಡು, ಅಂತರಂಗದಲ್ಲಿ ಕಳವಳಿಸಿ, ಹಾಸ್ಯರಹಸ್ಯವ ಮಾಡಬೇಕೆಂಬುದೊಂದು ದುರಾಚಾರ. ಇಂತು ತ್ರಿವಿಧರತಿಗಳಿಂದ ವರ್ತಿಸುವುದೆ ದ್ವಿತೀಯಪಾತಕ. ಇದಕ್ಕೆ ಹರನಿರೂಪ ಸಾಕ್ಷಿ : ``ಪರಸ್ತ್ರೀಣಾಂ ಚ ಸಂಸರ್ಗಾತ್ ಮೋಕ್ಷೋ ನಾಸ್ತಿ ವರಾನನೇ | ಜಪಹಾನಿಃ ತಪೋಹಾನಿಃ ರೌರವಂ ನರಕಂ ವ್ರಜೇತ್ ||'' ``ಹರಿಣಪಾದಮಾತ್ರೇಣ ಬಂಧಿತಂ ಚ ಜಗತ್ರಯಂ | ತತ್ಸುಖಂ ಬಿಂದುಮಾತ್ರೇಣ ದುಃಖಂ ಪರ್ವತಮೇವ ಚ ||'' ಇಂತೆಂಬ ಹರಗುರುವಾಕ್ಯ ಪ್ರಮಾಣವಾಗಿ, ಸದ್ಭಕ್ತ ಮಹೇಶ್ವರರು ಪರರೆಂಜಲಸ್ತ್ರೀಯಳ ಭೋಗಿಸಿದಡೆ ಹಿಂದಣ ಭವಪಾಶ ಬೆನ್ನಬಿಡದುಯೆಂದು ದ್ವಿತೀಯ ಪಾತಕಂಗಳ ನಿರಸನಂಗೈದು, ತ್ರಿಕರಣಶುದ್ಧವಾಗಿ, ನಡೆದಂತೆ ನುಡಿದು, ನುಡಿದಂತೆ ನಡೆದು, ದೃಢಚಿತ್ತರಾಗಿ, ಜಾಗ್ರ ಜಾಗ್ರ ಇನ್ನು ತಿರುಗಿ ಭವಕ್ಕೆ ಬಂದಡೆ ನಿಮ್ಮಾಣೆ, ನಿಮ್ಮ ಪ್ರಮಥರಾಣೆಯೆಂದು ತ್ರಿವಿಧಬಿಂದುಗಳ ತಡೆದು, ಸಾಕ್ಷಿ : ``ಕಾಮಃ ಕ್ರೋಧಶ್ಚ ಲೋಭಶ್ಚ ದೇಹೇ ತಿಷ*ಂತಿ ತಸ್ಕರಾಃ | ಜ್ಞಾನರತ್ನಾಪಹಾರಾಯ ತಸ್ಮಾತ್ತ್ವಂ ಜಾಗೃತೋ ಭವ ||'' ಎಂದರಿದು, ಅರುವಿನ ಮಹಾಜ್ಞಾನರತ್ನವ ಕಳೆದು, ಮತಿಭ್ರಷ್ಟ ಕ್ರಿಮಿಕೀಟ ಜನ್ಮಕ್ಕೆ ಬೀಳದಂತೆ ನಿಜೇಷ್ಟಲಿಂಗಾಂಗಸಮರತಿಯುಳ್ಳ ನಿಷ್ಟನಾಗಿ, ಪರರ ಸಂಗವ ಭವಸಂಗವೆಂದರಿದಾನಂದದಿಂದ ಸತ್ಯಶುದ್ಧನಾಗಿ, ಗುರುಹಿರಿಯರಿಗೆ ಖೊಟ್ಟಿಯಾಗದೆ, ಕಾಲಕಾಮರಟ್ಟುಳಿಯ ಕಾಡಾರಣ್ಯಕ್ಕೆ ಮಹಾಜ್ಞಾನವೆಂಬ ಕಿಚ್ಚನಿಕ್ಕಿ, ಚಿತ್ಪ್ರಭಾಬೆಳಗಿಂಗೆ ಮಹಾಬೆಳಗಾಗಿರ್ಪುದು ಕಾಣಾ ನಿರವಯಪ್ರಭು ಮಹಾಂತ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ.
--------------
ಮೂರುಸಾವಿರ ಮುಕ್ತಿಮುನಿ
ಪಾವನಾರ್ಥವಾಗಿ ಮಹದರುವೆಂಬ ಶ್ರೀಗುರುಕರಕಮಲೋದಯದಿಂದ ಚಿದ್ಘನಲಿಂಗಮಂ ಧರಿಸಿ, ಲಿಂಗಭಕ್ತ ಭಕ್ತಲಿಂಗ ಲಿಂಗಜಂಗಮ ಜಂಗಮಲಿಂಗವೆಂಬುಭಯಲೀಲೆಗಳಿಂದ ಸರ್ವಾಚಾರಸಂಪದವೆಂಬ ಷಡುಸ್ಥಲಮಾರ್ಗವನೊಡಗೂಡಿ, ನಿರಾಭಾರಿವೀರಶೈವ ಸತ್ಕ್ರಿಯೆ ಸಮ್ಯಜ್ಞಾನಾನುಭಾವ ಸದಾಚಾರ ನಡೆನುಡಿ ಭಿನ್ನವಾಗದಂತೆ, ತಮ್ಮ ತನುಮನಪ್ರಾಣಾನುಭಾವಂಗಳಿಗೆ ಗಣಾಚಾರ ಶರಣ ಸಾಕ್ಷಿಯಾಗಿ, ಘನಮಾರ್ಗವ ಬಿಟ್ಟಾಚರಿಸಿದೊಡೆ ಭವಬಂಧನ ಬಿಡದು, ತದನಂತರ ನರಕ ತಪ್ಪದು. ಅದು ಕಾರಣದಿಂದ ಮಹದರುವೆಂಬ ಪಾವುಡವ ಕೈಕೊಂಡು, ಪ್ರಸನ್ನಪ್ರಸಾದ ಷಟ್‍ಸ್ಥಲವರ್ಮದಿ ವರ್ಮವ ಮೆರೆದು, ದುಷ್ಕøತ ್ಯದಲ್ಲಿ ಹೋಗುವುದ ಕಂಡು ಆಪ್ತರಾದ ಗಣಾರಾಧ್ಯರ ಹರಗುರೋಕ್ತಿಯಿಂ, ನಡೆಯಲ್ಲದ ನಡೆ, ನುಡಿಯಲ್ಲದ ನುಡಿಗಳ ಬಳಸಿ, ಜನ್ಮ ಜರೆ ಮರಣಗಳೊಳ್ ತೊಳಲಿ ತೊಳಲಿ ಭವಕ್ಕೆ ಬೀಳುವಂಥ ಅಜ್ಞಾನಮರವೆಯ ವಿಡಂಬಿಸಿ, ತನುಮನಪ್ರಾಣಭಾವಂಗಳ ಹೊಡೆಹೊಡೆದು, ಪ್ರತಿಜ್ಞೆ ಪ್ರಮಾಣಗಳೊಳ್ ಬಾಹ್ಯಾಂತರಂಗದಲ್ಲಿ ಪರಿಪಕ್ವವ ಮಾಡಬಲ್ಲ ಮಹಾಜ್ಞಾನಿಗಳೆ ಪರಮಪವಿತ್ರರೆಂಬೆ ಕಾಣಾ ನಿರವಯಪ್ರಭು ಮಹಾಂತ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ.
--------------
ಮೂರುಸಾವಿರ ಮುಕ್ತಿಮುನಿ
ಪರಮಬೆಳಗಿನಿಂದೆಸೆವ ನಿಜವೀರಶೈವ ಭಕ್ತಜಂಗಮಲಿಂಗ ಘನಗಂಭೀರರು ಪಂಚಾಭಿಷೇಕ ಮೊದಲಾದ ಅನಂತ ಅಭಿಷೇಕ ಪತ್ರಿ ಪುಷ್ಪ ಫಲಹಾರ ಪಂಚಕಜ್ಜಾಯ ಪರಮಾನ್ನ ಪಾಯಸ ಮೊದಲಾದ ಕಟ್ಟಳೆಗಳ ಮಾಡದೆ, ವಾರ ತಿಥಿ ನಕ್ಷತ್ರ ವ್ಯತಿಪಾತ ವೈಧೃತಿ, ಚಂದ್ರಸೂರ್ಯಗ್ರಹಣ ಹುಣ್ಣಿಮೆ ಅಮವಾಸ್ಯೆ ಸತ್ತ ಹೆತ್ತ ಕರ್ಮದ ತಿಥಿಗಳು, ಕಾರ್ತೀಕ ಮಾಘ ಶ್ರಾವಣ ಶಿವರಾತ್ರಿ ನವರಾತ್ರಿ ಸಂಕ್ರಾಂತಿ ಕತ್ತಲರಾತ್ರಿ ದಿನರಾತ್ರಿಗಳೆಂಬ ದಿವಾರ್ಚನೆ ಸಾಮಾನ್ಯದಾರ್ಚನೆ ಮೊದಲಾದ ಶೈವಜಡಕರ್ಮಗಳ ಹೊದ್ದಲೀಯದೆ, ಸತ್ಯಶುದ್ಧ ನಡೆನುಡಿಯಿಂದ ಕೇವಲ ನಿಜಗುರುಲಿಂಗಜಂಗಮಮೂರ್ತಿಗಳ ಬಂದ ಬರವ ನಿಂದ ನಿಲುಗಡೆಯನರಿದು, ಅಷ್ಟವಿಧಾರ್ಚನೆ ಷೋಡಶೋಪಚಾರಗಳೊದಗಿದಂತೆ ನಿಜಾನಂದಭರಿತದಿಂದರ್ಚನಂಗೈದು, ಪರಶಿವಯೋಗಾನುಸಂಧಾನದಿಂದಾಚರಿಸುವುದೇ ನಿರವಯಪ್ರಭು ಮಹಾಂತನ ಪ್ರತಿಬಿಂಬರೆಂಬೆ ಕಾಣಾ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ.
--------------
ಮೂರುಸಾವಿರ ಮುಕ್ತಿಮುನಿ
ಪರಮಾರಾಧ್ಯಜಂಗಮಾರಾಧನೆಯಂ ಮಾಡಿ, ನಮಸ್ಕಾರವಾದ ಮೇಲೆ, ಆ ಪ್ರಸಾದ ಗಂಧಾಕ್ಷತೆ ಪುಷ್ಪ ಪತ್ರಿಗಳ ಲಿಂಗಜಂಗಮ ಜಂಗಮಲಿಂಗಶರಣರು ಪರಿಣಾಮತೃಪ್ತರಾಗಿ ನಿರ್ಮಾಲ್ಯವ ಮಾಡಿ, ನಿಕ್ಷೇಪದಿಂದ ಸಮಾಪ್ತವ ಮಾಡಬೇಕಲ್ಲದೆ, ಉಳಿವಿ ಕಡೆಗಿಟ್ಟು, ತೀರ್ಥವ ಸಲಿಸಿ, ಪ್ರಸಾದ ಮುಗಿವ ಮಧ್ಯದಲ್ಲಿ ಲಿಂಗಾರ್ಚನೆಗಳ ಮಾಡಲಾಗದು, ಅಥವಾ ತನಗೆ ಅಷ್ಟವಿಧಾರ್ಚನೆ ಷೋಡಶೋಪಚಾರದ ಭ್ರಾಂತುವಿದ್ದರೆ, ತೀರ್ಥವ ಪಡೆದುಕೊಂಡ ಸ್ಥಳವ ಬಿಟ್ಟು, ಏಕಾಂತಸ್ಥಳದಲ್ಲಿ ತಮ್ಮ ಸ್ಥಳವಿದ್ದಂತೆ ಆಚರಿಸುವುದು. ಆ ಭ್ರಾಂತಿಗಳೆಲ್ಲ ಲಿಂಗಜಂಗಮ ಜಂಗಮಲಿಂಗಶರಣರು ಪ್ರಸಾದ ಪಾದೋದಕದಲ್ಲಿ ಉಪಚಾರಗಳನಳಿದುಳಿದು, ನಿಭ್ರಾಂತಗಳಾದೀಶ್ವರರು ಚಮತ್ಕಾರವಾಗಿ, ಜಂಗಮಪಾದಸ್ಪರಿಶನದಿಂದುದಯವಾದ ದೀಕ್ಷಾಪಾದೋದಕದಿಂದ ಲಿಂಗಾಂಗಸ್ನಾನಂಗೈದು, ಚುಳುಕುಮಾತ್ರವಾಗಿ, ಪಾದೋದಕ ಭಸ್ಮೋದಕ ಶುದ್ಧೋದಕದಿಂದ ಲಿಂಗಮಜ್ಜನವ ಮಾಡಿ, ಆ ಪ್ರಸಾದಪುಷ್ಪವ ಸ್ವಲ್ಪಮಾತ್ರವ ಧರಿಸಿ, ಒಂದು ವೇಳೆ ಹಸ್ತಜಪಮಂ ಮಣಿಗಳ ದ್ವಾದಶವನ್ನು ಪ್ರದಕ್ಷಿಸಿ, ನವಲಿಂಗಮೂರ್ತಿಗಳ ಧ್ಯಾನದಿಂದ ಘನಪಾದತೀರ್ಥಪ್ರಸಾದವ ಮುಗಿದು, ಪ್ರಸನ್ನಪ್ರಸಾದದಲ್ಲಿ ನಿಜಲೋಲುಪ್ತರಾದವರೆ ನಿರವಯಪ್ರಭು ಮಹಾಂತಗಣವೆಂಬೆ ಕಾಣಾ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ.
--------------
ಮೂರುಸಾವಿರ ಮುಕ್ತಿಮುನಿ
ಪರಮಪವಿತ್ರನಿರ್ಮಲವೆನಿಸಿ, ಕ್ರಿಮಿಕೀಟಕ ಮೃತ್ ಕಾಷ* ಪಾಷಾಣ ಮಸ್ತಕ ದೃಢಬೀಜಗಳು ಮೊದಲಾದ ಶೋಧಕತ್ವದಿಂದ ಮುಚ್ಚಿ, ಬೈಚಿಟ್ಟು, ಶುಚಿ-ರುಚಿ ಪಾಕವ, ಸತಿ-ಪತಿ, ಪಿತ-ಮಾತೆ, ಗುರು-ಶಿಷ್ಯ, ಪುತ್ರ-ಮಿತ್ರ, ಬಂಧು,-ಬಳಗ ಸಹೋದರರೊಂದೊಡಲಾಗಿ, ಲಿಂಗಜಂಗಮವೆ ತನ್ನ ಮನೆ, ತನ್ನ ಕಾಯಕಂಗಳು, ತನ್ನ ಕರ ವಾಚಂಗಳಿಗೆ ತತ್ಪ್ರಾಣವಾಗಿ, ಜಂಗಮಲಿಂಗದ ಪಾದಪೂಜೆಯಾದರೂ ಸರಿಯೆ, ಲಿಂಗಪೂಜೆಯಾದರೂ ಸರಿಯೆ, ವಿಭೂತಿ ರುದ್ರಾಕ್ಷಿಗಳ ತನ್ನ ಕರದಲ್ಲಾಗಲಿ, ತೊಡೆಯಮೇಲಾಗಲಿ ಇಟ್ಟುಕೊಂಡು, ಲಿಂಗನಿರೀಕ್ಷಣದಿಂದರ್ಚಿಸಿ, ಸ್ನಾನ ಧೂಳನ ಧಾರಣ ಗುರುಮುಖದಿಂದರಿದು ಮಾಡಿದ ಬಳಿಕ, ರುದ್ರಾಕ್ಷಿಗಳ ಛಿನ್ನಭಿನ್ನಗಳ ತೆಗೆದು, ನೂನುಕೂನುಗಳ ನೋಡಿ, ವಿಚಾರತ್ವದಿಂದ ಸಾವಧಾನದೊಳ್ ಸ್ಥಾನಸ್ಥಾನಂಗಳಲ್ಲಿ ಧಾರಣಂಗೈದು ಚರಿಸುವರೆ ನಿರವಯಪ್ರಭು ಮಹಾಂತನ ಚಿತ್ಕಳಾಮೂರ್ತಿಯೆಂಬೆ ಕಾಣಾ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ.
--------------
ಮೂರುಸಾವಿರ ಮುಕ್ತಿಮುನಿ
ಪರಮಾನಂದಲಿಂಗಪಾದೋದಕವ ಭಸ್ಮಮಿಶ್ರಂಗೈದು, ಕಂಡಿತವ ಮಾಡಿ, ಇಪ್ಪತ್ತೊಂದುಪ್ರಣಮವ ಸಂಬಂಧಿಸಿ, ತನ್ನ ಚಿದ್ಬೆಳಗಿನ ಚಿತ್ಪ್ರಭೆಯೆಂದರ್ಚಿಸಿ, ಜಂಗಮಲಿಂಗವು ಇಷ್ಟಲಿಂಗಮಂತ್ರಸ್ನಾನಂಗೆಯ್ದು, ಪ್ರಾಣಲಿಂಗಮಂತ್ರಧೂಳನಮಂ ಮಾಡಿ, ಭಾವಲಿಂಗಮಂತ್ರದೊಡನೆ ನಾಲ್ವತ್ತೆಂಟು ಸ್ಥಾನಂಗಳಲ್ಲಿ ಧಾರಣಂಗೈದು, ಮೇಲೆ ತಾನು ಶರಣುಹೊಕ್ಕು, ಆ ಜಂಗಮಲಿಂಗ ದೇವನೊಕ್ಕುಮಿಕ್ಕ ಮಹಾಶೇಷಭಸಿತಮಂ ಬೆಸಗೊಂಡು ; ಆ ಹಿಂದೆ ಹೇಳಿದ ನಾದಬಿಂದುಕಳಾಪ್ರಣಮದೊಳ್ ಜಂಗಮಲಿಂಗದಂತೆ ಸ್ನಾನಂಗೈದು, ಚಿನ್ನಾದ ಚಿದ್ಬಿಂದು ಚಿತ್ಕಳಾಪ್ರಣಮದೊಳ್ ಧೂಳನಂ ಮಾಡಿ, ಪರನಾದಬಿಂದುಕಳಾಪ್ರಣಮದೊಳ್ ಧ್ಯಾನಾರೂಢನಾಗಿ, ತಾನನಾದಿಯಲ್ಲಿ ಧರಿಸಿಬಂದ ಮೂಲಪ್ರಣಮಲಿಂಗಾಂಗದ ಷಡುಸ್ಥಾನಗಳ ಘನಗುರುಮುಖದಿಂದರಿದು, ಅಷ್ಟವಿಧಸಕೀಲಂಗಳಿಂದ ಜಂಗಮಲಿಂಗದೇವನಂತೆ ಧಾರಣಂಗೈದು, ಚಿದ್ಬೆಳಗಿನೊಳಗೆ ಮಹಾಬೆಳಗಾಗಿರ್ಪವರೆ, ನಿರವಯಪ್ರಭು ಮಹಾಂತನ ಪ್ರತಿಬಿಂಬ ಕಾಣಾ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ.
--------------
ಮೂರುಸಾವಿರ ಮುಕ್ತಿಮುನಿ
ಪ್ರಥಮದಲ್ಲಿ ಪೀಠಿಕಾಸೂತ್ರವದೆಂತೆಂದೊಡೆ : ಶೈವಪಾಷಂಡಿಗಳು ಆಚರಿಸಿದ ಪಿಪೀಲಿಕಜ್ಞಾನ, ವಿಹಂಗಜ್ಞಾನ, ಮರ್ಕಟಜ್ಞಾನ, ಗಜಜ್ಞಾನ, ಕುಕ್ಕುಟಜ್ಞಾನ, ಶ್ವಾನಜ್ಞಾನ, ವೇದಾಂತಜ್ಞಾನ, ಸಿದ್ಧಾಂತಜ್ಞಾನ, ಭಿನ್ನಯೋಗ, ಚರ್ಯಾ-ಕ್ರಿಯಾ-ಕರ್ಮಜ್ಞಾನಂಗಳನ್ನು ತೊರೆದು ಕೇವಲ ಸುಜ್ಞಾನವೆ ಚಿತ್ಪಿಂಡಾಕೃತಿಯ ಧರಿಸಿ, ಆ ಪಿಂಡಮಧ್ಯದಲ್ಲಿ ಮಹಾಜ್ಞಾನವೆ ಚಿತ್ಪ್ರಾಣವಾಗಿ ಶೋಭಿಸಿ, ಅವೆರಡರ ಮಧ್ಯವೆ ಪರಿಪೂರ್ಣ ಸ್ವಾನುಭಾವ, ಉನ್ಮನಜ್ಞಾನವೇ ಸಾಕಾರಲೀಲೆಯ ಧರಿಸಿ, ಪರಮಜ್ಞಾನಾಂಜನ ಸದ್ವಾಸನಪರಿಮಳವೆ ಕ್ರಿಯಾಭಕ್ತಿ, ಜ್ಞಾನಭಕ್ತಿ, ಮಹಾಜ್ಞಾನಭಕ್ತಿ , ನಿರವಯಭಕ್ತಿ , ಸಚ್ಚಿದಾನಂದಭಕ್ತಿ, ಪರಿಪೂರ್ಣಭಕ್ತಿ ಮೊದಲಾದ ಷಡ್ವಿಧಭಕ್ತಿ ಯೆ ಅಂತರಂಗದ ಸುಚಿತ್ತ ಸುಬುದ್ಧಿ ನಿರಹಂಕಾರ ಸುಮನ ಸುಜ್ಞಾನ ಸದ್ಭಾವಂಗಳಲ್ಲಿ, ಕ್ಷೀರದೊಳು ಘೃತ, ಬೀಜದೊಳು ವೃಕ್ಷ, ಪಾಷಾಣದೊಳಗ್ನಿ ಅಡಗಿಪ್ಪಂತೆ, ಅಂಗಾಪ್ತಸ್ಥಾನ ಸದ್ಭಾವವೆಂಬ ಚತುರ್ವಿಧಭಕ್ತಿಯೆ ಸಾಕಲ್ಯವಾಗಿ, ಪುಷ್ಪದೊಳು ಪರಿಮಳ, ಫಲಾದಿಗಳಲ್ಲಿ ಫಳರಸವೆಸೆದಂತೆ, ಘಟಸರ್ಪ ತನ್ನ ಮಾಣಿಕ್ಯದ ಬೆಳಕಿನಲ್ಲಿ ಆಹಾರವ ಕೊಂಡಂತೆ, ಸಾಕಾರವಾಗಿ ಪರಿಶೋಭಿಸಿ, ಗುರುಚರಮಾರ್ಗದಿಂದ ಅಷ್ಟವಿಧಭಕ್ತಿವಿಡಿದು ಬೆಳಗುವ ಮಹಾಲಿಂಗಶರಣನ ವಿವರವೆಂತೆಂದಡೆ : ಮಹದರುವೆಂಬ ಗುರುವಿನಲ್ಲಿ ಶ್ರದ್ಧೆ, ಮಹಾಜ್ಞಾನವೆಂಬ ಲಿಂಗದಲ್ಲಿ ನೈಷೆ* , ಪೂರ್ಣಾನುಭಾವವೆಂಬ ಜಂಗಮದಲ್ಲಿ ಸಾವಧಾನ, ಕರುಣಾಮೃತವೆಂಬ ಪಾದೋದಕದಲ್ಲಿ ಅನುಭಾವ, ಕೃಪಾನಂದರಸವೆಂಬ ಪ್ರಸಾದದಲ್ಲಿ ಆನಂದ, ಚಿದ್ಬೆಳಗಿನ ಪ್ರಕಾಶವೆಂಬ ಭಸಿತದಲ್ಲಿ ಸಮರಸ, ದೃಗ್ದೃಷ್ಟಿ ಪುಂಜರಂಜನೆಯೆಂಬ ಮಣಿಮಾಲೆ ಕುಕ್ಷಿಗಳಲ್ಲಿ , ನಿಃಕಳಂಕ ಆನಂದಮಯವೆಂಬ ಚಿದ್ಘೋಷ ಮಂತ್ರದಲ್ಲಿ , ನಿರವಯಭಕ್ತಿ ಕಡೆಯಾದ ಅಷ್ಟವಿಧಭಕ್ತಿಯೆ ನಿಧಿನಿಧಾನವಾಗಿ, ಜಗಜಗಿಸಿ ಬೆಳಗುವ ಮಹಾಲಿಂಗಶರಣಚರಗುರುಗಳ ತನ್ನ ಸ್ವಾನುಭಾವಜ್ಞಾನದಿಂದರಿದು, ಅಂಗ ಮನಪ್ರಾಣಭಾವನಿಷಾ*ಚಾರದಲ್ಲಿ ಸಾಕಾರಲೀಲೆಗೆ ಪಾವನಾರ್ಥವಾಗಿ, ಷೋಡಶಭಕ್ತಿ ಜ್ಞಾನ ವೈರಾಗ್ಯ ಸ್ಥಳ ಕುಳ ಸಕೀಲ ಸಂಬಂಧಾಚರಣೆಯ ವೀರಶೈವ ಪರಿವರ್ತನೆ ಅರ್ಪಿತಾವಧಾನ ಕೊಟ್ಟುಕೊಂಬ ನಿಲುಕಡೆ, ಸಗುಣ ನಿರ್ಗುಣ ಸತ್ಯಶುದ್ಧಕಾಯಕ, ಸದ್ಧರ್ಮ ನಡೆನುಡಿ, ಘನಗಂಭೀರ ಪರುಷಸೋಂಕುಗಳೆ ಸಾರಿ ತೋರಿ ಬೀರಿ ಊರಿ ಜಾರಿ ಹಾರಿ ಸೈರೆಮೀರಿ ಮಹಾಬಯಲೊಳಗೆ ಬಯಲಾಗಿ ತೋರುವ ನಿಃಕಳಂಕ ನಿರಾಲಂಬ ನಿಃಪ್ರಪಂಚ ನಿರಾತಂಕ ನಿರುಪಾಧಿಕ ನಿರ್ಭೇದ್ಯ ನಿಶ್ಚಿಂತ ನಿಃಕಾಮ ನಿಃಫಲದಾಯಕ ನಿಃಕ್ರೋಧ ನಿರಾಸಿಕ ನಿರ್ವಾಣಿ ನಿರ್ಮರಣ ನಿರ್ಜಾತ ನಿಜಾನಂದಭರಿತಚರಿತ ನಿರಹಂಕಾರ ನಿರ್ದೇಹ ನಿರ್ಲಂಪಟ ನಿರ್ವ್ಯಸನಿ ನಿರ್ಭಾಗ್ಯ ನಿಃಸಂಸಾರಿ ನಿವ್ರ್ಯಾಪಾರಿ ನಿರ್ಮಲ ನಿಸ್ಸಂಗ ನಿಃಶೂನ್ಯ ನಿರಂಜನ ನಿರವಯ ಘನಗಂಭೀರ ಪರಾತ್ಪರ ಅಗಮ್ಯ ಅಪ್ರಮಾಣ ಅಗೋಚರ ಅನಾಮಯ ಅಗಣಿತ ಅಚಲಾನಂದ ಅಸಾಧ್ಯಸಾಧಕ ಅಭೇದ್ಯಭೇದಕ ಅನಾದಿಭಕ್ತ ಮಹೇಶ ಪ್ರಸಾದಿ ಪ್ರಾಣಲಿಂಗಿ ಶರಣೈಕ್ಯ ನಿರವಯಪ್ರಭು ಮಹಾಂತ ತಾನೇ ನೋಡಾ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ.
--------------
ಮೂರುಸಾವಿರ ಮುಕ್ತಿಮುನಿ
ಪರಮಪವಿತ್ರಪರಿಣಾಮೋದಕವನ್ನು ಕ್ರಿಯಾಜ್ಞಾನಯುಕ್ತವಾದ ಜಂಗಮಮೂರ್ತಿಯು ಎರಡುಪದರಿನ ಪಾವುಡದಿಂದ ಶೋಧಿಸಿದುದಕವನ್ನು ಆ ಜಂಗಮದ ಅಡಿಪಾದ ಮೂರುಮೂರುವೇಳೆ, ಪಂಚಪಂಚಾಂಗುಲಗಳೊಂದೊಂದುವೇಳೆ, ಮೂಲಪಂಚಾಕ್ಷರಧ್ಯಾನದಲ್ಲಿ ಮನಘನವಾಗಿ ಸ್ಪರಿಶನಂಗೈದು, ದೀಕ್ಷಾಪಾದೋದಕವನ್ನು ಚರಲಿಂಗಕ್ಕೆ ಮುಖಮಜ್ಜನವ ಮಾಡಬೇಕು ಸ್ವಾಮಿಯೆಂದಲ್ಲಿ, ಹರಹರಾಯೆಂದು ಕೈಕೊಂಡು, ಲಿಂಗಾಭಿಷೇಕ ಮುಖಮಜ್ಜನವ ಮಾಡಿದ ಚರಲಿಂಗದ ಪಾದಕ್ಕೆ ಪಾವಗೊರಡ ಮೆಟ್ಟಿಸಿ, ಹಸ್ತವ ಹಿಡಿದು, ಬಹುಪರಾಕು ಎಚ್ಚರವೆಚ್ಚರ ಮಹಾಲಿಂಗದಲ್ಲಿ ಸ್ವಾಮಿಯೆಂದು ಸ್ತುತಿಸುತ್ತ ಗರ್ದುಗೆಯ ಮೇಲೆ ಮೂರ್ತಮಾಡಿದ ಬಳಿಕ ಉಭಯಪಾದಾಭಿಷೇಕಂಗೈದುದಕವ ಲಿಂಗಾಂಗಕ್ಕೆ ಸಂಪ್ರೋಕ್ಷಿಸಿದ ತದನಂತರದಲ್ಲಿ, ಮುಖಮಜ್ಜನಕ್ಕೆ ಮಾಡಿದಂಥ ಗುರುಪಾದೋದಕ ತಂಬಿಗೆಯನ್ನು ಭಾಂಡಕ್ಕೆ ಹಸ್ತಸ್ಪರಿಶನ ಧಾರಣವಿದ್ದರೆ ಆ ಉದಕವ ಶೋಧಿಸಿದ ಭಾಂಡಂಗಳಿಗೆ ಸಮ್ಮಿಶ್ರವ ಮಾಡುವುದು. ಇಲ್ಲವಾದಡೆ ತಮ್ಮ ಅರ್ಚನ ಅರ್ಪಣಗಳಿಗೆ ಮಡುಗಿಕೊಂಡು, ದಿವರಾತ್ರಿಗಳೆನ್ನದೆ ಚರಲಿಂಗಪಾದೋದಕಪ್ರಾಣಿಗಳೆ ನಿರವಯಪ್ರಭು ಮಹಾಂತನ ಪ್ರತಿಬಿಂಬ ಕಾಣಾ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ.
--------------
ಮೂರುಸಾವಿರ ಮುಕ್ತಿಮುನಿ
ಪರಮಾನುಭಾವಜಂಗಮಾರಾಧನೆಗೆಂದು ಒಂದೆ ಪಶ್ಚಿಮಾದ್ರಿ ಏಕದಳಪದ್ಮವ ಸಮರ್ಪಿಸಿ, ಬಚ್ಚಬರಿಯಾನಂದಾಬ್ಧಿಯಲ್ಲಿ ಲೋಲುಪ್ತರಾಗಿರ್ಪರು ಸದ್‍ಭಕ್ತ ಶರಣಗಣಾರಾಧ್ಯರು. ಈ ಪೂಜಾಸ್ಥಾನದಲ್ಲಿ ಅಷ್ಟವಿಧಾರ್ಚನೆ ಷೋಡಶೋಪಚಾರಗಳಿಲ್ಲವು. ಅದೇನು ಕಾರಣವೆಂದಡೆ : ಸಗುಣ-ನಿರ್ಗುಣ, ಸಾಕಾರ-ನಿರಾಕಾರ, ಆದಿಲಿಂಗ ಅನಾದಿಶರಣಸಂಬಂಧವಿಡಿದು, ಸರ್ವೋಪಚಾರಪೂಜೆಗಳೆರಡು ನಿತ್ಯವಾದ ಅಂತರಂಗದ ಪರಿಪೂರ್ಣದ್ರವ್ಯ ನಿರಂಜನಪೂಜೆಯೆಂದು ಇಲ್ಲಿಗೆ ಸದ್ರೂಪವಾದ ಗುರು, ಚಿದ್ರೂಪವಾದ ಲಿಂಗ, ಚಿನ್ಮಯರೂಪವಾದ ಜಂಗಮಾರ್ಚನೆ. ಈ ಮೂರು ಸಂಬಂಧಾಚರಣೆಯಾಗಿರ್ಪುವು. ಈ ನಿಲುಕಡೆಯ ಮೀರಿ ಶೈವಭಿನ್ನಕರ್ಮಿಗಳಂತೆ ತೀರ್ಥದಲ್ಲಿ ಪೂಜೆಯೊಂದ ಮಾಡಲಾಗದು. ಅದೇನುಕಾರಣವೆಂದಡೆ : ಶರಣನ ಸದ್ರೂಪವಾದ ಚಿತ್ಕಾಯದಲ್ಲಿ ಸಂಬಂಧವಾದ ನಿಜೇಷ*ಲಿಂಗ ವೃತ್ತಗೋಳಕಮುಖಂಗಳಲ್ಲಿ ದೀಕ್ಷಾಗುರು ಮೋಕ್ಷಾಗುರು ಶಿಕ್ಷಾಗುರುಸ್ಥಲವಾದ ಸಾಕಾರಗುರುಲಿಂಗಜಂಗಮವಾಗಿ ನೆಲಸಿರ್ಪುದುದರಿಂದ ಆ ಇಷ್ಟಲಿಂಗಸೂತ್ರವಿಡಿದು, ಅಷ್ಟವಿಧಾರ್ಚನೆ ಷೋಡಶೋಪಚಾರವ ಮಾಡುವುದೆ ಸಗುಣಾರ್ಚನೆಯೊಳಗಿನ ಕ್ರಿಯಾರ್ಚನೆಯು. ಇದೀಗ ಅನಾದಿಪ್ರಮಥಗಣ ಸುಕರಾರ್ಚನೆ ಸೂತ್ರವು. ಶರಣನ ಚಿದ್ರೂಪವಾದ ಚಿತ್‍ಪ್ರಾಣದಲ್ಲಿ ಸಂಬಂಧವಾದ ಚಿತ್ಪ್ರಾಣಲಿಂಗ ತಾರಕಾಕೃತಿ, ದಂಡಕಾಕೃತಿ, ಕುಂಡಲಾಕೃತಿ, ಅರ್ಧಚಂದ್ರಾಕೃತಿ, ದರ್ಪಣಾಕೃತಿ, ಜ್ಯೋತಿರಾಕೃತಿಗಳಲ್ಲಿ ಕಾಯಾನುಗ್ರಹ ಪ್ರಾಣಾನುಗ್ರಹ ಇಂದ್ರಿಯಾನುಗ್ರಹಸ್ಥಲವಾದ ನಿರಾಕಾರ ಚಿದ್ವಿಭೂತಿ ರುದ್ರಾಕ್ಷಿ ಮಂತ್ರವಾಗಿ ನೆಲಸಿರ್ಪುದುದರಿಂದ ಆ ಪ್ರಾಣಲಿಂಗಸೂತ್ರವಿಡಿದು, ಮಂತ್ರ ಧ್ಯಾನ ಜಪಸ್ತೋತ್ರಂಗಳಿಂದ ಸೂಕ್ಷ್ಮಾರ್ಚನೆಯ ಮಾಡುವುದೆ ಸಗುಣಾರ್ಚನೆಯೊಳಗಿನ ಜ್ಞಾನಾರ್ಚನೆಯು. ಇದೀಗ ಅನಾದಿಪ್ರಮಥಗಣ ನಿರಾರ್ಚನ ಸೂತ್ರವು. ಶರಣಚಿನ್ಮಯರೂಪವಾದ ಚಿತ್ಸೂರ್ಯಚಂದ್ರಾಗ್ನಿಮಂಡಲತ್ರಯಂಗಳಲ್ಲಿ ಪರಮಾಣುಮೂರ್ತಿ ಭಾವಲಿಂಗ ಅಖಂಡಜ್ಯೋತಿರಾಕೃತಿ ಅಖಂಡಮಹಾಜ್ಯೋತಿರಾಕೃತಿಗಳಲ್ಲಿ ಅಖಂಡಮಹಾಚಿಜ್ಜ್ಯೋತಿರಾಕೃತಿಗಳಲ್ಲಿ ಕಾಯಾರ್ಪಣ ಕರಣಾರ್ಪಣ ಭಾವಾರ್ಪಣ ಪರಿಣಾಮಾರ್ಪಣಸ್ಥಲವಾದ ನಿರವಯಚಿತ್ಪಾದೋದಕ ಚಿತ್ಪ್ರಸಾದವಾಗಿ ನೆಲಸಿರ್ಪುವುದರಿಂದ ಆ ಭಾವಲಿಂಗಸೂತ್ರವಿಡಿದು ಮನೋರ್ಲಯ ನಿರಂಜನವಾದ ಘನಮನದಿಂದ ಕರಣಾರ್ಚನೆಯ ಮಾಡುವುದೆ ಸಗುಣಾರ್ಚನೆಯೊಳಗಿನ ಮಹಾಜ್ಞಾನಿಯು. ಇದೀಗ ಅನಾದಿಪ್ರಮಥಗಣ ನಿರವಯಾರ್ಚನೆಯ ಸೂತ್ರವು. ಈ ನಿಲುಕಡೆಗಳಿಂದ ಪ್ರಮಥಗಣ ಹೋದ ಮಾರ್ಗವ ತಿಳಿದು, ಸಾಕಾರವಾದ ಕಾಯವಿಡಿದು ಬಂದ ರೂಪಾದ ಅಷ್ಟವಿರ್ಧಾಚನೆ ಷೋಡಶೋಪಚಾರವ ಗುರುಲಿಂಗಜಂಗಮಕ್ಕೆ ಮಾಡುವುದೇ ಕಾಯಾರ್ಚನೆಯೆನಿಸುವುದು. ನಿರಾಕಾರವಾದ ಕರಣವಿಡಿದು ಬಂದ ಚಿದ್ರೂಪವಾದ ಮಂತ್ರ ಧ್ಯಾನ ಜಪಸ್ತೋತ್ರಂಗಳ ಚಿದ್ವಿಭೂತಿ ರುದ್ರಾಕ್ಷಿ ಮಂತ್ರಕ್ಕೆ ಮಾಡುವುದೆ ಕರಣಾರ್ಚನೆಯೆನಿಸುವುದು. ನಿರವಯವಾದ ಭಾವವಿಡಿದು ಬಂದ ಚಿನ್ಮಯರೂಪಾದ ಮನೋರ್ಲಯ ನಿರಂಜನ ಘನಮನೋಲ್ಲಾಸ ಚಿದ್ಬೆಳಗುಗಳ ಚಿತ್ಪಾದತೀರ್ಥ ಪ್ರಸಾದಕ್ಕೆ ಮಾಡುವುದೆ ಭಾವಾರ್ಚನೆಯೆನಿಸುವುದು. ಹೀಂಗೆ ಪೂರ್ವಪುರಾತನೋಕ್ತಿಯಿಂದ ಸಾಕಾರವಾದ ಕಾಯಾರ್ಚನೆಯ ಕರಸ್ಥಲದ ಇಷ್ಟಲಿಂಗಕ್ಕೆ, ಆ ಇಷ್ಟಲಿಂಗಕ್ಕೆ ಚೈತನ್ಯವಾದ ಚರಲಿಂಗಪಾದಕ್ಕೆ ಮಾಡುವುದು ಸಾಧ್ಯ. ಗಣಂಗಳು ನಿರಾಕಾರವಾದ ಕರಣಾರ್ಚನೆಯ ಚರಜಂಗಮಲಿಂಗದ ಚರಣಾಬ್ಜದ ಕೊನೆಮೊನೆಯೊಳಗೆ ಮೂಲಮಂತ್ರಮೂರ್ತಿ ಚಿನ್ಮಂಡಲಾಧಿಪತಿ ಪ್ರಾಣಲಿಂಗಸೂತ್ರಂಗಳೊಳ್ ಚಿತ್ಕರಣಂಗಳೊಂದುಗೂಡಿ ಪಶ್ಚಿಮಾದ್ರಿ ಏಕಕುಸಮದೊಳು ಹುದುಗಿ ನಿಜದೃಷ್ಟಿ ಕಡೆ ಸೂಸಲೀಯದೆ, ನಿರಂಜನಜಂಗಮಾರ್ಚನೆಯು ಮೊದಲಾದ ಚಿದ್ವಿಭೂತಿರುದ್ರಾಕ್ಷಿ ಮಂತ್ರಬ್ರಹ್ಮಕ್ಕೆ ಮಾಡುವುದು ಸಾಧ್ಯ. ಗಣಂಗಳು ನಿರವಯವಾದ ಭಾವಾರ್ಚನೆಯ ಚರಜಂಗಮ ಜಂಗಮಲಿಂಗ ಲಿಂಗಶರಣ ಶರಣ ವಿಭೂತಿ ರುದ್ರಾಕ್ಷಿ ಮಂತ್ರ, ಆ ಚಿದ್ವಿಭೂತಿ ರುದ್ರಾಕ್ಷಿ ಮಂತ್ರವೆ ಪರಮಪರುಷಾಂಬುಧಿ ಪರಮಪರುಷಾನಂದದ ಖಣಿ ಚಿತ್ಪಾದೋದಕ ಪ್ರಸಾದ. ಆ ಚಿತ್ಪಾದೋದಕಪ್ರಸಾದ ಮಂತ್ರಮಣಿ ವಿಭೂತಿ ಶರಣಲಿಂಗಜಂಗಮಚರವೆ ಘನಕ್ಕೆ ಮಹಾಘನವೆಂದಾರಾಧಿಸಿ, ಕೂಡಿ ಎರಡಳಿದು ಭಕ್ತನೆಂಬೆರಡಕ್ಷರವೆ ಪಾವನಾರ್ಥಚಿದಂಗ, ಆ ಚಿದ್ಘನಲಿಂಗವೆಂದಷ್ಟಾವರಣಸ್ವರೂಪ. ಚಿದ್ಘ ನಗುರು ತಾನೆ ತಾನಾದ ಬಯಲಪೂಜೆಗಳರಿದಾನಂದಿಸುವವರೆ ನಿರವಯಪ್ರಭು ಮಹಾಂತನ ಘನಕ್ಕೆ ಘನವೆಂದವರ ಆಳಿನಾಳಾಗಿರ್ಪೆ ಕಾಣಾ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ.
--------------
ಮೂರುಸಾವಿರ ಮುಕ್ತಿಮುನಿ