ಅಥವಾ

ಒಟ್ಟು 49 ಕಡೆಗಳಲ್ಲಿ , 24 ವಚನಕಾರರು , 43 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶಿವಶಿವಾ, ಎನ್ನ ಮನವು ನಿಮ್ಮ ನೆನೆಯಲೊಲ್ಲದೆ ಅನ್ಯಕ್ಕೆ ಹರಿವುತಿರ್ಪುದು ನೋಡಾ. ಗುರು ಚರ ಲಿಂಗದ ಸೇವೆಯೆಂದೊಡೆ ಹಿಂದುಳಿವುತಿರ್ಪುದು ನೋಡಾ. ಅನ್ಯರ ಒಡವೆಯಾದ ಹೊನ್ನು ಹೆಣ್ಣು ಮಣ್ಣೆಂದೊಡೆ ಮುಂದುವರಿದು ಓಡುತಿರ್ಪುದು ನೋಡಾ. ಈ ಮನದ ಉಪಟಳವು ಘನವಾಯಿತ್ತು. ಇನ್ನೇನು ಗತಿಯಯ್ಯ ಎನಗೆ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಆರು ನೆಲೆ ಮಂಟಪದ ಕೋಣೆಯಲ್ಲಿ ಆರು ಜ್ಯೋತಿಯ ಮುಟ್ಟಿಸಿ ಆ ಜ್ಯೋತಿಯ ಬೆಳಗಿನಲ್ಲಿ ಆರು ಲಿಂಗವ ನಿರ್ಮಿಸಿ ಆರು ಲಿಂಗದ ಪ್ರತುಮೆಯಲ್ಲಿ ಆರು ಹಂತದ ಸೋಪಾನದಲ್ಲಿ ಮಹಾ ನಿರ್ಮಳವೆಂಬ ದುರ್ಗಮಂ ನಿರ್ಮಿಸಿ ಆ ದುರ್ಗದಲ್ಲಿ ಅರಸಂಗೆ ಕಾಲಿಲ್ಲದಾಕೆಯ ಮದುವೆಯ ಮಾಡಿ ತೂತಿಲ್ಲದ ಭೋಗಕ್ಕೆ ಕೂಡಿ ಬಿಂದುವಿಲ್ಲದೆ ಮಕ್ಕಳಾದ ಪರಿಯ ನೋಡಾ. ತೊಟ್ಟಿಲಿಲ್ಲದೆ ಹಾಸಿ ಮಲಗಿಸಿ ನಿದ್ರೆಗೆಯ್ಸಿದ ಶರಣನಾಚರಣೆಯನೆಂತೆಂಬೆನು. ಇದ ಕಂಡು ನಡೆಯಲರಿಯದೆ, ತಮ್ಮ ಮನ ಬಂದಂತೆ ನಡೆವರು. ಶಿವಯೋಗಕ್ಕೆ ದೂರವಾದರು ನೋಡಾ. ಹೊನ್ನ ಕಟ್ಟಿ ವಿರಕ್ತನು ಬ್ಥಿಕ್ಷೆಯೆನಲಾಗದು. ಭಕ್ತನ ಗೃಹವೆಂದು ಜಂಗಮವು ಹೋದಲ್ಲಿ ಆ ಭಕ್ತನು ಎದ್ದು ನಮಸ್ಕರಿಸಿ ತನ್ನಲ್ಲಿರ್ದ ಪದಾರ್ಥವಂ ತಾನು ಸಹವಾಗಿ ಶಿವಾರ್ಪಣವ ಮಾಡ[ಬ]ಹುದಲ್ಲದೆ. ಇದಲ್ಲದೆ, ಜಂಗಮವ ಬೇರೆ ಕುಳ್ಳಿರಿಸಿ ಉಂಡನಾದರೆ ಅವನಿಗೆ ದೀಕ್ಷೆಯ ಕೊಟ್ಟ ಗುರುವಿಗೆ ತನ್ನ ಮಾರ್ಗವ ಬಿಟ್ಟು ಶಿವಭಕ್ತನಾದರೆ ಮೋಕ್ಷವಿಲ್ಲವಾಗಿ. ಕೋಳಿ ಒಂದು ಕುಟುಕ ಕಂಡರೆ ತನ್ನ ಮರಿಗೆ ತೋರದುಳಿವುದೆ? ಕಾಗೆ ಒಂದಗುಳ ಕಂಡರೆ ತನ್ನ ಬಳಗವ ಕರೆಯದುಳಿವುದೆ? ಶಿವಭಕ್ತನಾಗಿ ತನ್ನ ಲಿಂಗವ ಪೂಜಿಸಿ ಜಂಗಮವ ಮರೆದವನಾದರೆ ಸತ್ತ ದನವಿಗೆ ನರಿ ಹೋದಂತಾಯಿತ್ತು. ಆ ನರಿ ಹೋದ ನೆನಹಿನಲ್ಲಿ ನಾಯಿ ಹೋದಂತಾಯಿತ್ತು. ಇಷ್ಟಕ್ಕಿಂದ ಕರಕಷ್ಟವೆ ಶಿವಭಕ್ತರು? ಷಟ್ಚಕ್ರದ ಭಾವದಲ್ಲಿವೊಪ್ಪಿರುವ ಶಿವಶರಣರು ತಮ್ಮ ನಡೆ ನುಡಿಗಳ ಬಿಡದೆ ನಡೆವುದು. ಅದ ಕಂಡು ಕಣ್ದೆರೆದು ನೋಡಿದೆನಯ್ಯ. ಆವ ವರ್ತನೆಯಲ್ಲಿ ತಾನಿದ್ದರೇನು? ಆವ ಭಾವ ಹೇಂಗಿದ್ದರೇನು? ನಮ್ಮಾಚರಣೆ ನಮಗೆ ಶುದ್ಧ. ಗುರು ಕಲ್ಪಿತನಾದರು ಅವನು ಹಿಂದೆ ಸಂಬಂಧವಾದ ಕಾರಣ, ಅವನಿಗೆ ಬಂಧ ದೊರಕುವದಲ್ಲದೆ ನನಗೆ ದೊರಕದೆಂದು ತಾನು ನಿಶ್ಚೆಸಿದರೆ ತನಗೆ ದೊರಕಬಲ್ಲದೆ? ತಾನು ಪೂರ್ವದಲ್ಲಿ ತಾ ಪಡದುದು ತನಗೆ ತಪ್ಪುವದೆ? ಪ್ರಾಣಿಹಿಂಸೆಯ ಮಾಡುವಾತನಾದರೆಯು ಅವನಿಗೆ ಕಲ್ಪಿತವೇತಕ್ಕೆ? ಹಿಂದೆ ಅವನು ಶಿವನಪ್ಪಣೆವಿಡಿದು ಬಂದ ಕಾರಣ ಅವನಿಗೆ ಬಂದಿತಲ್ಲದೆ ಗಗನದ ಮಂಟಪದ ಮೇಲೆ ಊಧ್ರ್ವಮುಖದ ಗದ್ದುಗೆಯ ಮಾಡಿ ಮಹಾಪ್ರಕಾಶವೆಂಬ ಬೆಳಗಂ ತೋರಿ ಓಂಕಾರವೆಂಬ ಲಿಂಗವ ಮೂರ್ತಮಾಡಿಸಿ ಅದಕ್ಕೆ ಸದ್ಭಾವವೆಂಬ ಪುಷ್ಪವ ತಂದು ಜ್ಞಾನಪ್ರಕಾಶವೆಂಬ ಜ್ಯೋತಿಯಂ ಪೊತ್ತಿಸಿ ಸದ್ಭಕ್ತಿಯೆಂಬ ನೈವೇದ್ಯಮಂ ಮಾಡಿ ನಿರ್ಮಳವೆಂಬ ಪೂಜಾರಿಯಾಗಿರ್ಪನು. ಇದನರಿಯದೆ ತಮ್ಮ ಮನ ಬಂದಂತೆ ಇಪ್ಪವರ ಲಿಂಗಹೋದವನಾದರು ಅವನ ಕಣ್ಣಲ್ಲಿ ಕಂಡು ಅವನಷ್ಟಕ್ಕಲ್ಲದೆ ಅನ್ಯರ ಗೃಹವ ಬಿಡಲೇತಕ್ಕೇ? ಪಾಪವ ಮಾಡಿದನಾರು ಅವನ ಗೃಹಕ್ಕಲ್ಲದೆ ಅವನೊಂದಿಗೆ ಬೆರಸಿದವನಾದರು ಅವನಿಗೆ ಪಾಪ ಸಂಭವಿಸುವುದುಂಟೇ? ಇದ ಸಂಕಲ್ಪವ ಮಾಡಿ ಬಿಡಲೇತಕ್ಕೆ? ಒರ್ವಾನೊಬ್ಬನು ಭವಿಯ ಒಡನಾಡಲು ಅವನ ಪಾಪವು ಅವನಲ್ಲಿಪ್ಪುದಲ್ಲದೆ ಮಿಕ್ಕಿನ ಗೃಹಕ್ಕೆ ಸಂಬಂಧವೇನು? `ಮಾಡಿದವರನಲ್ಲದೆ ಮಿಕ್ಕಿನವರ ಸಂಕಲ್ಪವ ಮಾಡಲಾಗದು'ಯೆಂಬುದು ಗುರುವಚನ. ಹೆಣ್ಣು ಬಿಂದು ಸಂಬಂಧವಾಗಲು ಆ ಭೋಗಕ್ಕೆ ಶರಣನು ಅದನು ಮನದಲ್ಲಿ ಕಂಡು ಸಂತೋಷವಾಗಿಪ್ಪ. ಇಂತೀ ಭಾವಶುದ್ಧವುಳ್ಳಾತನು ಮತ್ರ್ಯಲೋಕಕ್ಕೆ ಮರಳಿ ಬಾರನೆಂಬುದು. ಶರಣ ಸಕಲವಿದ್ಯವ ಕಲಿತು ಫಲವೇನು? ನಿಂದ್ಯನೆ ದೊರಕೊಂಡಮೇಲೆ? ಹುಣ್ಣು ಹುಗಳು ಕೋಷ್ಠವಾಗಿರಲು, ಅವರ ಕಂಡು ಜರಿಯಲಾರದೆಂಬುದೆನ್ನ ಭಾಷೆ. ಇಂದ್ರಿಯಸುಖಕ್ಕೆ ಹೋಗಿ ಬಿದ್ದು ಶಿವಮಾಡಿದರಾಯಿತ್ತೆಂಬ ಅವಿಚಾರದ ನುಡಿಯ ಕೇಳಲಾಗದು. ತನ್ನ ಮನವು ಶುದ್ಧವಾದ ಮೇಲೆ, ಸಕಲ ಸುಖಂಗಳು ತನಗುಂಟಲ್ಲದೆ, ಜ್ಞಾನಿಗೆ ಕತ್ತಲೆಯಿಲ್ಲ. ಅಜ್ಞಾನಿಗೆ ಪಾಪವಿಲ್ಲ. ಇದನರಿದು, ಮುಂದುಗೊಂಡು ತಿರುಗುವ, ಅಣ್ಣಗಳ ಕಂಡು, ನಗುತಿರ್ಪರು ನಿಮ್ಮ ಶರಣರು, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ.
--------------
ಸ್ವತಂತ್ರ ಸಿದ್ಧಲಿಂಗ
ಒಡಲಾಸೆಗೆ ಅನ್ಯರ ಸೇವೆಯ ಮಾಡುವ ಕಡುಪಾಪಿಮನವೆ ಕೇಳು. ದದ್ಥಿಯ ಮಥನವ ಮಾಡೆ ಪಂಚಾಮೃತವ ಕೊಡುವುದಲ್ಲದೆ, ಉದಕವ ಕಡೆಯಲೇನ ಕೊಡದ ತೆರದಲ್ಲಿ ಅನ್ಯರನಾಸೆಗೈದರೆ- ಪರುಷ ಮನೆಯೊಳಿರೆ ಪರರ ಹಣವ ಬೇಡಿ ಚಾಲಿವರಿವ ಮರುಳುಮಾನವನಂತೆ, ವರ ಅಮೃತಬಾವಿ ಗೃಹದೊಳಿರೆ ಸವುಳು ನೀರಿಂಗೆ ಚಾಲಿವರಿವ ಹೆಡ್ಡಮನುಜನಂತೆ, ಸರ್ವರ ಮನ ಧರ್ಮ ಕರ್ಮವನರಿವ ಪರಮಾತ್ಮ ನಿನ್ನ ಅಂಗೈಕರದೊಳಿರೆ ಪರರಾಸೆಗೈಯದಿರು, ಆಸೆಗೈಯದಿರು. ಆಸೆಗೈ ಆಸೆಗೈ ನಮ್ಮ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವನಾಸೆಗೈದರೆ ನಿನಗೆ ಮುಕ್ತಿಯುಂಟು ಕೇಳಲೆ ಮನುಜ.
--------------
ಹೇಮಗಲ್ಲ ಹಂಪ
ಜ್ಞಾನಿಗಳು ತಾವಾದ ಬಳಿಕ, ಅನ್ಯರ ಸ್ತೋತ್ರಕ್ಕೆ ಒಳಗಾಗಬಾರದು. ಜ್ಞಾನಿಗಳು ತಾವಾದ ಬಳಿಕ, ಗುರುಹಿರಿಯರಿಗಂಜಿ ನಡೆಯಬೇಕು. ಜ್ಞಾನಿಗಳು ತಾವಾದ ಬಳಿಕ, ಅನ್ಯಸ್ತ್ರೀ ತನ್ನ ಮಾತೆಯಂತಿರಬೇಕು ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಮಾಡುವ ನೀಡುವ ಭಕ್ತನ ಕಂಡಡೆ ನಿದ್ಥಿ ನಿಧಾನವ ಕಂಡಂತಾಯಿತ್ತು, ಪಾದೋದಕ ಪ್ರಸಾದಜೀವಿಯ ಕಂಡಡೆ ಹೋದ ಪ್ರಾಣ ಬಂದಂತಾಯಿತ್ತು. ಅನ್ಯರ ಮನೆಗೆ ಹೋಗಿ, ತನ್ನ ಉದರವ ಹೊರೆಯದ ಅಚ್ಚ ಶರಣರ ಕಂಡಡೆ ನಿಶ್ಚಯವಾಗಿ ಕೂಡಲಸಂಗಯ್ಯನೆಂಬೆನು.
--------------
ಬಸವಣ್ಣ
ಒಂದು ಶರೀರ ನಾನಾ ಲಾಗ ಕಲಿತು, ಆಡುವ ಭೇದ ಬೇರಾದಂತೆ, ಆಡುವವ ತಾನೊಬ್ಬನೆಯಾಗಿ, ಆದುದ ಕಂಡು ಅನ್ಯರ ಕೇಳಲೇಕೆ? ಇದಿರಿಗೆ ಹೇಳಲೇಕೆ? ವಸ್ತುವಾಟ ಒಂದು, ವರ್ತನ ಬೇರೆ, ಉಭಯವೂ ತಾನೆ ಸದಾಶಿವಮೂರ್ತಿಲಿಂಗದ ಅಂಗ.
--------------
ಅರಿವಿನ ಮಾರಿತಂದೆ
ಅಜ್ಞಾಸಿದ್ಧನನರ್ಚಿಸುವ ಆನಂದಮಯ ಶರಣರ ಧ್ಯಾನ ಮೌನ ಸಮಾದ್ಥಿಗಳ[ದ್ಹೆಂ]ಗೆಂದೊಡೆ; ಪ್ರಸಾದವ ಬಯಸಿ ಪರವನರಿಯಹುದೆ ಧ್ಯಾನ; ಶಿವನಲ್ಲದೆ ಅತಃಪರವಿಲ್ಲೆಂದು ಅನ್ಯರ ಕೂಡೆ ನುಡಿಯಪ್ಪುದೆ ಮೌನ; ವ್ರತವಾರರಲ್ಲಿ ತದ್ಗತವಾಗಿಪುದೀಗ ಸಮಾದ್ಥಿ, ಇಂತಪುದೀಗ ಶಿವಯೋಗ. ಇಂತಪ್ಪವರ ತೋರು, ನಿನ್ನರ್ಚನೆಯನೊಲ್ಲೆ; ಅವರ ಗಡಣ ಸಂಗಮಾತ್ರದಲ್ಲಿ ನಿನ್ನ ಪದವಯ್ಯಾ ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಜ್ಞಾನಿಗಳಾದ ಬಳಿಕ ಪರಿಪೂರ್ಣ ಜಗತ್ತೆಂದರಿಯಬೇಕು. ಜ್ಞಾನಿಗಳಾದ ಬಳಿಕ ಪಾಪವಾಸನೆ ತೊರೆದಿರಬೇಕು. ಜ್ಞಾನಿಗಳಾದ ಬಳಿಕ ಅನ್ಯರ ನುಡಿಗೆ ಒಳಗಾಗಬಾರದು. ಜ್ಞಾನಿಗಳಾದ ಬಳಿಕ ಅನ್ಯರ ನಿಂದೆಗೆ ಒಳಗಾಗಬಾರದು, ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಎತ್ತು ನಿಮ್ಮ ದಾನ; ಬಿತ್ತು ನಿಮ್ಮ ದಾನ. ಸುತ್ತಿ ಹರಿವ ಸಾಗರವೆಲ್ಲ ನಿಮ್ಮ ದಾನ. ನಿಮ್ಮ ದಾನವನುಂಡು ಅನ್ಯರ ಹೊಗಳುವ ಕುನ್ನಿಗಳನೇನೆಂಬೆ ಹೇಳ? ರಾಮನಾಥ.
--------------
ಜೇಡರ ದಾಸಿಮಯ್ಯ
ಅನ್ಯರ ದ್ರವ್ಯವ ಅಪಹರಿಸಿಕೊಂಡಲ್ಲಿ ಅದು ತನಗೆ ಅನ್ಯದೈವ. ತನ್ನ ಕ್ರೀಯಲ್ಲದಲ್ಲಿ ಮನ ಮುಟ್ಟಿ ನೆನೆದಾಗವೆ ಅದು ಅನ್ಯಾಹಾರ. ಇದಿರ ಉಪಚರಿಯಕ್ಕೆ ನಾನೊಂದು ವ್ರತವ ಹಿಡಿದು ನಡೆದೆಹೆನೆಂಬುದೆ ಪರಪಾಕದ ಪಾಕುಳ. ಇಂತಿವರಲ್ಲಿ ಮನ ಹೇಸಿ, ತನು ಕರಗಿ, ಪಕ್ಷಪಾತವೆಂಬ ಪಾತಕವ ಬಿಟ್ಟು, ನಿಶ್ಚಯದಲ್ಲಿ ನಿಂದ ವ್ರತಾಂಗಲಿಂಗಿ ಮತ್ರ್ಯರ ಸುಗುಣ ದುರ್ಗುಣವನೊಲ್ಲ, ನಿತ್ಯಾನಿತ್ಯವ ಮುಟ್ಟಿ ಮತ್ರ್ಯರ ಕರ್ಕಶವನೊಲ್ಲ. ಭಕ್ತಿಯಲ್ಲಿ ತಿಳಿದು, ಜ್ಞಾನದಲ್ಲಿ ನಿಂದು, ವೈರಾಗ್ಯದಲ್ಲಿ ಸಲೆಸಂದು- ಇಂತೀ ತ್ರಿವಿಧದಲ್ಲಿ ನಿಧಾನಿಸಿ ನಿಂದು, ಕ್ರೀಯೇ ಘಟವಾಗಿ, ಆಚಾರವೇ ಆತ್ಮವಾಗಿ, ಅನುಸರಣೆಯಿಲ್ಲದ ನಿಶ್ಚಯವೇ ನಿಜತತ್ವಕೂಟವಾಗಿ ತೊಳಗಿ ಬೆಳಗುತ್ತಿರಬೇಕು, ಏಲೇಶ್ವರಲಿಂಗದಲ್ಲಿ.
--------------
ಏಲೇಶ್ವರ ಕೇತಯ್ಯ
ಕಾಮವು ಲಿಂಗಮುಖವಾಗಿ, ಕ್ರೋಧವು ಲಿಂಗಮುಖವಾಗಿ, ಲೋಭವು ಲಿಂಗಮುಖವಾಗಿ, ಮೋಹವು ಲಿಂಗಮುಖವಾಗಿ, ಮದವು ಲಿಂಗಮುಖವಾಗಿ, ಮತ್ಸರವು ಲಿಂಗಮುಖವಾಗಿ ಇಪ್ಪಾತನೆ ನಿರ್ಮೋಹಿ. ಅದು ಎಂತೆಂದೊಡೆ : ಪರಧನ ಪರಸ್ತ್ರೀಯ ಕಾಮಿಸುವಂತೆ ಲಿಂಗವ ಕಾಮಿಸುವುದೆ ಕಾಮ. ಪರರೊಳು ಕ್ರೋದ್ಥಿಸುವಂತೆ ಕರ್ಮವಿರಹಿತನಾದರೆ ಕ್ರೋಧ. ಅರ್ಥ ಸ್ತ್ರೀಯರ ಮೇಲೆ ಲೋಭವಿಡುವಂತೆ ಲಿಂಗದೊಡನೆ ಲೋಭವಿಟ್ಟು ಲಿಂಗವ ಕೂಡಬಲ್ಲರೆ ಲೋಭ. ಅನ್ಯರ ಮೋಹಿಸುವಂತೆ ಲಿಂಗವ ಮೋಹಿಸಬಲ್ಲರೆ ಮೋಹ. ಅನ್ನಮದ ಪ್ರಾಯಮದ ತಲೆಗೇರುವಂದದಿ ಲಿಂಗಮದನಾಗಿರಬಲ್ಲರೆ ಮದ. ಅನ್ಯರೊಡನೆ ಮತ್ಸರಿಸುವಂತೆ ಲಿಂಗದೊಡನೆ ಮತ್ಸರಿಸಿ ಶರಣಕೃಪೆಯ ಪಡೆಯಬಲ್ಲರೆ ಮತ್ಸರ. ಇಂತಪ್ಪ ಕಾಮ ಕ್ರೋಧ ಲೋಭ ಮೋಹ ಮದ ಮತ್ಸರದಲ್ಲಿ ಲಿಂಗಮುಖವಾಗಿಪ್ಪ ಶರಣರ ಪಾದಕ್ಕೆ ನಮೋ ನಮೋ ಎಂಬೆನಯ್ಯಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ನೆರೆದರೆ ಗಣಂಗಳು! ಹರದಡೆ ಕಂಚುಗಾರರು! ಲಿಂಗವ ಮಾರಿ ಉಂಬ ಭಂಗಾರರು! ತಮ್ಮ ತಳಿಗೆಯ ಕೊಂಡು ಹೋಗಿ ಅನ್ಯರ ಮನೆಯಲುಂಬ ಕುನ್ನಿಗಳನೇನೆಂಬೆ?ರಾಮನಾಥ.
--------------
ಜೇಡರ ದಾಸಿಮಯ್ಯ
ದೇಹದೊಡನೆ ತ್ರಿದೋಷಗಳು, ವಾತ ಪಿತ್ತ ಶ್ಲೇಷ್ಮ-ಇವು ಮೂರುಕೂಡಿ ದೇಹ ಹುಟ್ಟಿತು. ಇದರ ವಿವರವು : ವಾತ 81, ಪಿತ್ತ 64, ಶ್ಲೇಷ 215. ಇವು ಕೂಡಿ 360 ವ್ಯಾಧಿಗಳಾದವು. ಇವು ಶಿವನ ಅಪ್ಪಣೆಯಿಂದ ಬಂದುವಲ್ಲದೆ, ಮನುಷ್ಯನ ಯತ್ನವಿಲ್ಲವು. ಅದಕ್ಕೆ ಮನುಷ್ಯರು ವೈದ್ಯವ ಮಾಡಿದಡೆ ಲೋಕ ಏಕೆ ಸಾವುದು ? ಅದಕ್ಕೆ ಸೊಕ್ಕಿದವರಿಗೆ, ಗುರುತಲ್ಪಕರಿಗೆ, ಭಕ್ತರ ನಿಂದ್ಯವ ಮಾಡಿದವರಿಗೆ, ತಂದೆಗೆ ಮಗ ಬೈದರೆ, ಅತ್ತೆಗೆ ಸೊಸೆ ಸೊಕ್ಕಿ ನುಡಿದಡೆ, ಅನಾಚಾರಿಗಳಿಗೆ, ಆಸೆಯ ಕೊಟ್ಟು ಭಾಷೆಗೆ ತಪ್ಪಿದವರಿಗೆ, ಶಿವಸದ್ವರ್ತನೆ ಸದ್ಧರ್ಮ ಸದಾಚಾರವಿಲ್ಲದವರಿಗೆ ಈ ವ್ಯಾಧಿಗಳು ಕಾಡುತ್ತಿಹವು. ತಲೆಶೂಲೆ, ಪಕ್ಕಶೂಲೆ, ಜ್ವರ, ಉರಿ -ಇವು ಕಣ್ಣಿಗೆ ಕಾಣಿಸದೆ ಬಂದಂಥ ವ್ಯಾಧಿಗಳು ; ಶಿವನ ಅಂಶಿಕವು. ತದ್ದು ತುರಿ ಕೆಮ್ಮು ಭಗದಳ ಕುಷ* ಗಂಡಮಾಲೆ ಕುರು ಬಾವು ಹುಣ್ಣುಗಳು ಕಣ್ಣಿಗೆ ಕಾಣಿಸುವಂಥ ಬೇನೆಗಳು ; ಪಾರ್ವತಿಯ ಅಂಶಿಕವು. ಇವು ಎಲ್ಲ ವ್ಯಾಧಿಗಳು ಅವರಿಗೆ ತಕ್ಕಷ್ಟು ಶಿಕ್ಷೆ ಮಾಡಿಸುತ್ತಿಹವು. ಮತ್ತೆ ಗುರುಮಾರ್ಗಾಚಾರವಿಡಿದು ಆಚರಿಸುವ ಪ್ರಸಾದಿಗಳಿಗೆ ಅವೇ ವ್ಯಾಧಿಗಳು ಹಿತವಾಗಿಹವು. ಮತ್ತೆ ಸರ್ಪ ಕಚ್ಚಿದಡೆ, ಸ್ತ್ರೀಯು ಹಡೆಯಲಾರದಿದ್ದಡೆ, ಯಾವ ಕುಲದವನಾಗಲಿ ವಿಚಾರಿಸದೆ ಅವರು ಮಂತ್ರಿಸಿದ ಉದಕವ ಕುಡಿವುದು. ಮತ್ತೆ ಅವರ ಕುಲಕ್ಕೆ ಭಕ್ತರ ಕುಲಕ್ಕೆ ಹೇಸುವುದು. ಅನ್ಯಕುಲದ ವೈದ್ಯನ ಕೈಯಲ್ಲಿ ಮದ್ದು ಮಾಡಿಸಿಕೊಂಬರು. ಭಕ್ತರು ಅಡುಗೆಯ ಮಾಡಿದಡೆ, ಯಾವ ಕುಲವೆಂಬರು ? ಅವರಿಗೆ ಎಂದೆಂದಿಗೂ ಮುಕ್ತಿಯಿಲ್ಲವಯ್ಯಾ. ಮತ್ತೆ ಪ್ರಸಾದವ ಕೊಂಬುವರು ಮದ್ದು ಕೇಳಲಾಗದು. ಅದೇನುಕಾರಣವೆಂದಡೆ- ಪ್ರಸಾದಕ್ಕಿಂತ ಮದ್ದು ಹಿತವಾಯಿತಲ್ಲ ! ಶಿವಮಂತ್ರ ಕಾಯಕ್ಕೆ ಅನ್ಯರ ಕೈಯಲ್ಲಿ ಮಂತ್ರಿಸಿ ಕೇಳಲಾಗದು. ಅದೇನು ಕಾರಣವೆಂದಡೆ - ಶಿವಮಂತ್ರಕ್ಕಿಂತ ಅನ್ಯರ ಮಂತ್ರ ಅಧಿಕವಾಯಿತ್ತಲ್ಲ ! ಮತ್ತೆ ವೈದ್ಯಕಾರನಿಂದ ಮಂತ್ರಗಾರನಿಂದ ಮನುಷ್ಯರ ಪ್ರಾಣ ಉಳಿವುದೆಂದು ಯಾವ ಶಾಸ್ತ್ರ ಹೇಳುತ್ತದೆ ? ಯಾವ ಆಗಮ ಸಾರುತ್ತದೆ ? ಹೇಳಿರಿ. ಅರಿಯದಿದ್ದಡೆ ಕೇಳಿರಿ : ಭಕ್ತಗಣಂಗಳು ಪಾದೋದಕ ಪ್ರಸಾದ ವಿಭೂತಿ ಶಿವಮಂತ್ರಗಳಿಂದೆ ಲೆಕ್ಕವಿಲ್ಲದೆ ಹೋಹ ಪ್ರಾಣವ ಪಡೆದರು - ಎಂದು ಬಸವೇಶ್ವರ ಪುರಾಣದಲ್ಲಿ ಕೂಗ್ಯಾಡುತ್ತದೆ. ಇಂತಪ್ಪ ದೃಷ್ಟವ ಕಂಡು ನಂಬದಿರ್ದಡೆ ಆವಿನ ಕೆಚ್ಚಲೊಳಗೆ ಉಣ್ಣೆಯಿದ್ದು ಹಾಲು ಬಿಟ್ಟು ರಕ್ತವ ಸೇವಿಸುವಂತಾಯಿತ್ತು ಎಂದಾತ ನಮ್ಮ ಶಾಂತಕೂಡಲಸಂಗಮದೇವ.
--------------
ಗಣದಾಸಿ ವೀರಣ್ಣ
ಮೂಲದ ಮೊಳೆಯ ಮುರಿದಲ್ಲಿ ಬೇರೊಂದು ಮರ ಶಾಖೆ ಫಲವುಂಟೆ? ಅರಿವು ಸಂಬಂಧ ನೆರೆ ನಿಂದಲ್ಲಿ ಕ್ರಿಯೆ ನೆರೆ ಮಾಡುವುದಕ್ಕೆ ಬೇರೊಂದೊಡಲುಂಟೆ? ತನ್ನಯ ಶಂಕೆ ಅನ್ಯರ ಮಚ್ಚು ಇದು ಭಿನ್ನಭಾವ; ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ.
--------------
ಕೋಲ ಶಾಂತಯ್ಯ
ಕೆಡೆ ನಡೆಯದೆ, ಕೆಡೆ ನುಡಿಯದೆ, ಅನ್ಯರ ಪ್ರತಿಪಾದಿಸದಿದ್ದಡೆ ಏನ ಮಾಡನಯ್ಯಾ ಲಿಂಗವು ಏನ ಕೊಡನಯ್ಯಾ ತಾನು ಏನ ಬೇಡಿದುದನೀವನಾಗಿ, ನಂಬುಗೆಯುಳ್ಳ ಶಿವಭಕ್ತಂಗೆ ಇದೇ ದಿಬ್ಯ, ಕೂಡಲಸಂಗಮದೇವಾ. 236
--------------
ಬಸವಣ್ಣ
ಇನ್ನಷ್ಟು ... -->