ಅಥವಾ

ಒಟ್ಟು 48 ಕಡೆಗಳಲ್ಲಿ , 28 ವಚನಕಾರರು , 40 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕ್ರೀವಿಡಿದು ಗುರುಸಂಬಂದ್ಥಿಯಾಗಿ, ಜಾÕನವಿಡಿದು ಲಿಂಗಸಂಬಂದ್ಥಿಯಾಗಿ. ಘನವಿಡಿದು ಮಹಾಜಾÕನಿಯಾಗಿ, ಅರಿವು ಆಚರಣೆಯ ಕಂಡು, ಜಾÕನ ಮುಕುರವೆಂಬ ಮುಂದಣ ಶ್ರೀಸಂಬಂದ್ಥಿಯಾಗಿ, ಆಚಾರದಲ್ಲಿ ಸಂಪನ್ನನಾಗಿ, ಮಹೇಶ್ವರಸ್ಥಲವನರಿದು, ಅದೇ ಜಂಗಮವಾದ ಬಳಿಕ ನಿರಾಕುಳನಾಗಿ ಆಚರಿಸಿದರೆ ಅನಾದಿ ಜಂಗಮವೆಂಬೆ. ಸಾಮವೇದೇ- ವಿವಚಾಸೋವಿಚಾ ಲಿಂಗಾಲಿಂಗಿ ಚ ಫಲಾದಿ ಬ್ರಹ್ಮರಾಕ್ಷಸ ಸೋವಿಸಂಗಶ್ಚ | ಸೂಕರ ಶತಕೋಟಿ ಜನ್ಮ ಚ ಸೋಪಿ ಕ್ರೀಡಾಲಿಂಗ ಮಲಮೂತ್ರ ಮಾಂಸ ಭುಂಜಿತಃ | ಬ್ರಹ್ಮೇನ ಕೋಟಿ ರಾಕ್ಷಸಃ ಸೋಸಂಗೇನ ಶತಕೋಟಿಗಾರ್ದಭ ಜನ್ಮ ಚ | ಅದೇ ದಾಸಿ ದಾಸೇ ಸೂಕರ ಸಂಗಶಃ ಚ ನಾಃ | ಸೋವ ಮಾತ್ರವೆಂದು ತಂದ ಸ್ತ್ರೀಗಳನು ಶಿಷ್ಯಾದಿ ಪುತ್ರರ ಕೈಯ ಗುರು ತಾಯಿ ಎಂಬ ನಾಮಕರಣಂಗಳನುಂಟುಮಾಡಿ, ತನ್ನ ಅಂಗವಿಕಾರಕ್ಕೆ ತಂದ ಸಂತೆಯ ಡೊಂಬಿತಿಯ ತಂದು, ಹಿರಿಯರಲ್ಲಿ ಸರಿಮಾಡುವ ಜಂಗಮವೆ ಗುರುವೆ? ಅಜಾÕನ ಪುರುಷನಲ್ಲ, ಅವ ಹಿರಿಯತನಕ್ಕೆ ಸಲ್ಲ, ಅವಂಗೆ ಗುರುವಿಲ್ಲ ಲಿಂಗವಿಲ್ಲ, ಜಂಗಮ ಮುನ್ನವೆಯಿಲ್ಲ. ಅವ ಘಟಾತ್ಮನು ಸೋವಿಯ ಸಂಗ ಬೇಡ ಬಿಡಿರಣ್ಣಾ, ಸೋವಿಯ ಸಂಗವ ಮಾಡಿದರೆ ಶತಕೋಟಿ ದಾಸಿಯ ಬಸುರಲ್ಲಿ ಬಂದು, ಹೇಸಿಕೆಯಿಲ್ಲದೆ ಮಲಮೂತ್ರವನು ಹೇಗೆ ಸೂಕರ ಭುಂಜಿಸುವುದೊ ಹಾಂಗೆ ಭುಂಜಿಪನು. ನಾನಾ ಯೋನಿಯ ನರಕುವದು. ಸೋವಿ ಮಾತ್ರೇಣ ಆ ಲಿಂಗನಂ ಗುರು ತಾಯ ಅಪಮಾನ ಸಾಮಾನ್ಯವೆಂದು ಸೋವಿಯ ಸಂಗವ ಮಾಡಿದಡೆ ಎಪ್ಪತ್ತೇಳುಕೋಟಿ ಶ್ವಪಚಯೋನಿ ತಪ್ಪದಯ್ಯ. ಹನ್ನೆರಡು ಕಂಬ ಸಾಕ್ಷಿಯಾಗಿ, ಕಳಕನ್ನಡಿ ಸಾಕ್ಷಿಯಾಗಿ, ತೆಳೆಮಲು ಕಟ್ಟಿ ಸಾಕ್ಷಿಯಾಗಿ, ಆಯಿರಣೆಕೋಲು ಸಾಕ್ಷಿಯಾಗಿ, ಮುತ್ತೈದೆತನದಲ್ಲಿ ಶ್ರೇಷ್ಠಯಾಗಿ, ಜಾÕನ ದೃಕ್ಕಿನಿಂ ತಿಳಿದು, ಅನುಭಾವದ ಮುಖವನರಿದಂತೆ, ಆ ಜಾÕನನೇತ್ರವ ಅರಿದು ಧಾರೆಯನೆರೆಸಿಕೊಂಡು, ಅರಿವಿನಲ್ಲಿ ಇರದೆ ಕುರಿಯ ಹೇಲ ತಿಂಬಂತೆ, ಬಾಯಿಗೆ ಬಂದಂತೆ ಸೋವಿಯ ಸಂಗವ ಮಾಡುವವರ ಸರ್ವಾಂಗವೆಲ್ಲ ಗಣಿಕೆಯ ಯೋನಿಯ ಬಸುರ ನೋಡಾ. ಧಾರೆಯನೆರೆಸಿಕೊಂಡು ಕ್ರೀವಿಡಿದು ನಡೆಯದೆ, ತೊತ್ತಿನ ಮಗನಿಗೆ ಪಟ್ಟ ಕಟ್ಟಿದರೆ ಹಾದಿಯ ಎಲುವ ಕಂಡು ಓಡಿಹೋಗಿ ಗಡಗಡನೆ ಕಡಿವಂತೆ, ಸೋವಿಯ ಎಂಜಲ ತಿಂದವಂಗೆ ಗುರುವಿಲ್ಲ. ಅವ ದೇವಲೋಕ ಮತ್ರ್ಯಲೋಕ ಎರಡಕ್ಕೆ ಸಲ್ಲ. ಆವಾಗಮದಲ್ಲಿ ಉಂಟು, ಗಳಹಿ ಹೇಳಿರೊ, ಮಕ್ಕಳಿರಾ. ನೀವು ಬಲ್ಲರೆ ಕಾಳನಾಯ ಹೇಲ ತಿಂಬಂಗೆ ಹಿರಿಯನೆಂದು, ಹೋತನಂತೆ ಗಡ್ಡವ ಬೆಳಸಿಕೊಂಡು ಗುಡರಗುಮ್ಮನಂತೆ ಸುಮ್ಮನಿರುವಿರಿ. ಗರ್ವತನಕ್ಕೆ ಬಂದು ಹಿರಿಯರೆಂದು ಆಚರಣೆ ನ್ಯಾಯವ ಬಗಳುವಿರಿ. ಸೋವಿಸಂಗದಿಂದ ಕನಿಷ್ಠ ನರಕ ಕಾಣಿರಣ್ಣಾ. ಸೋವಿಯ ಸಂಗವ ಬಿಟ್ಟು ಧಾರೆಯ ಸ್ತ್ರೀಯಳ ನೆರದರೆ, ಆಚಾರವಿಡಿದು ನಡೆದು ಆಚರಣೆಯ ನುಡಿದರೆ ಶುದ್ಧವಾಗುವದಲ್ಲದೆ ತೊತ್ತಿನ ಮಗನಾಗಿ ಎಡೆಯ ಸಮಗಡಣವ ಬೇಡುವ ಪಾತಕರ, ಅವರ ಜಂಗಮವೆಂಬೆನೆ? ಸೋವಿಯ ಸಂಗದಿಂದ ಬಂದುದು ಬ್ರಹ್ಮೇತಿ. ಅಥರ್ವಣ ಸಾಮವೇದ ಯಜುರ್ವೇದ ಋಗ್ವೇದ ಇಂತಪ್ಪ ನಾಲ್ಕು ವೇದದಲ್ಲಿ ಶ್ರುತಿ ಸ್ಮøತಿಗಳಲ್ಲಿ ಆಗಮ ಪುರಾಣಂಗಳಲ್ಲಿ ಸೋವಿಯ ವಾಚ್ಯವೆಂಬುದುಂಟೆ ಪರಮಪಾತಕರಿರಾ? ನೂತನವ ಗಂಟಿಕ್ಕಿ ಜಗಲಿಯೆನ್ನದೆ ಪಟ್ಟಶಾಲೆಯೆಂಬಿಂ ತೊಂಡರಿರಾ. ತೊತ್ತನೊಯ್ದು ತೊತ್ತೆದಾಸಿ ಬಾಯೆನ್ನದೆ ಹೋವಿಯೆಂದು ಬಗಳುವಿರಿ. ಕಲಿಯುಗದಲ್ಲಿ ನೂತನದ ಸೂಳೆಯ ಮಕ್ಕಳು ನೀವು. ಸೋವಿಯ ಸಂಗವ ಮಾಡಿದವನು ಅರಿವುಳ್ಳ ಪುರುಷನಾದರೂ ಆಗಲಿ, ಅರಿದು ಮತ್ತೆ ಅರೆಮರುಳಾದ ಹಿರಿಯರನೇನೆಂಬೆನಯ್ಯಾ. ಅವನು ಪಾತಕನಘೋರಿಗಳು. ಅವರು ಇವರುವನರಿಯದ ಅಘೋರಿಗಳೆಂಬ ಇಂತಪ್ಪ ಸೋವಿಯ ಸಂಗವ ಮಾಡುವ ಬ್ರಹ್ಮೇತಿಕಾರ ಪಂಚಮಹಾಪಾತಕರು ಇಹಪರಕ್ಕೆ ಸಲ್ಲರೆಂದುದು. ನಿಮ್ಮಾಣೆ ನಿಮ್ಮ ಪ್ರಮಥರಾಣೆ, ಇಹವಿಲ್ಲ ಪರವಿಲ್ಲ, ಮುಕ್ತಿಯ ಫಲವಿಲ್ಲ, ಅಘೋರವಲ್ಲದೆ ಮತ್ತೇನೂ ಇಲ್ಲ. ನಿಮ್ಮಾಣೆ ಬ್ಥೀಮಬಂಕೇಶ್ವರಾ.
--------------
ಭೀಮಬಂಕೇಶ್ವರ
ಕ್ರೀ ಆಚರಣೆ ಶುದ್ಧವಾದಲ್ಲಿ ಇಷ್ಟಲಿಂಗಪೂಜೆ. ರೂಪು ರುಚಿ ಏಕವಾದಲ್ಲಿ ಪ್ರಾಣಲಿಂಗಪೂಜೆ. ರೂಪು ನಿರೂಪೆಂಬ ಉಭಯವಳಿದಲ್ಲಿ ಐಕ್ಯನ ಅನುಭವ ತೃಪ್ತಿ. ಕೂಡುನ್ನಬರ ನೋಟ ಸುಖಿಯಾಗಿ, ಬೇಟದ ನೋಟ ಕೂಟದಲ್ಲಿ ಅಳಿದ ಮತ್ತೆ, ಉಭಯದೃಷ್ಟ ಏಕವಾಯಿತ್ತು. ಚರ ಅಚರವಾದಲ್ಲಿ ಉಭಯನಾಮರೂಪು ನೀನೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಬಹುರೂಪು ತೊಟ್ಟಾಡಿದ ದೇಹ ಒಂದೇ. ವೇಷ ರೂಪಿನ ಪಲ್ಲಟವಲ್ಲದೆ ವೇಷಕ್ಕೆ ತಕ್ಕ ಭಾಷೆ. ಭಾಷೆಗೆ ತಕ್ಕ ವೇಷ, ಅರಿವು ಆಚರಣೆ ಒಂದಾಗಬೇಕು, ಬಂಕೇಶ್ವರಲಿಂಗವನರಿವುದಕ್ಕೆ.
--------------
ಸುಂಕದ ಬಂಕಣ್ಣ
ವಿಷದೇಹಿಗೆ ಆಹಾರ ಒದಗದೆ ? ನಸು ಸುಳುಹ ಭುಂಜಿಸುವಂತೆ, ಕ್ರೀ ಶುದ್ಧತೆಯಲ್ಲಿ ಒದಗಲರಿಯದಿರೆ, ಮಾಡುವ ಆಚರಣೆ ಮಾರ್ಗವಾಗಬೇಕು. ಎಯ್ದದಿರೆ ಮಾನ್ಯರ ಕಂಡು ಮನ್ನಣೆಯಾಗಿರಬೇಕು. ಈ ಭಾವವೇನೂ ಇಲ್ಲದಿರೆ, ಐಘಟದೂರ ರಾಮೇಶ್ವರಲಿಂಗಕ್ಕೆ ದೂರ.
--------------
ಮೆರೆಮಿಂಡಯ್ಯ
ನಾನು ನೀನೆಂಬ ಉಭಯ ತನುಗುಣ ನಾಸ್ತಿಯಾಗಿ ಅರುಹು ಮರಹೆಂಬುಭಯದ ಮರೆಹು ಅಳಿಯಿತ್ತಯ್ಯ. ಮರೆಹು ಅಳಿಯಿತ್ತಾಗಿ, ಮಹದರುಹಿನ ಆಚರಣೆ ಕರಿಗೊಂಡಿತ್ತಯ್ಯ. ಮಹದರುಹಿನ ಆಚರಣೆ ಕರಿಗೊಂಡಿತ್ತಾಗಿ, ಮಹಾಲಿಂಗದ ಬೆಳಗು ಒಳಕೊಂಡಿತ್ತಯ್ಯ. ಮಹಾಲಿಂಗದ ಬೆಳಗು ಒಳಕೊಂಡಿತ್ತಾಗಿ, ಮಂಗಳಮಯ ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವಿನಲ್ಲಿ, ಪರಮ ಪರಿಣಾಮ ನೆಲೆಗೊಂಡಿತ್ತಯ್ಯಾ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಓಂ ಎಂಬುದು ಬ್ರಹ್ಮಾಕ್ಷರ. ನ ಎಂಬುದು ನಾರಾಯಣಬೀಜ. ಮ ಎಂಬುದು ಮಹಾದೇವನ ಬೀಜಾಕ್ಷರ. ಇಂತೀ ತ್ರಿವಿಧ ಭೇದ ಕೂಡಿದಲ್ಲಿ ಈಶ್ವರತತ್ವ. ಇಂತೀ ಭೇದ : ಪಂಚವಿಂಶತ್ತತ್ವವಾಗಲಾಗಿ ಆಚಾರ್ಯನ ಅಂಗಭೇದ. ಇಂತೀ ಕ್ರೀಮಾರ್ಗದ ನಿಜ ಅರಿವಿನ ಆಚರಣೆ, ಉಭಯವು ಏಕವಾದಲ್ಲಿ ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗವು ಸಯರೂಪಾದಂಗ.
--------------
ಪ್ರಸಾದಿ ಭೋಗಣ್ಣ
ಅಂಗದಲ್ಲಿ ಅರಿದು ನಡೆವ ಆಚರಣೆ, ನೆನಹಿನಲ್ಲಿ ಕುರುಹುಗೊಂಡು ನಿಂದು, ಆ ನೆನಹೆ, ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗಕ್ಕೆ ಸಲೆ ಸಂದುದು.
--------------
ಶಿವಲೆಂಕ ಮಂಚಣ್ಣ
ದೃಕ್ಕಿನ ದೃಶ್ಯಕ್ಕೆ ಕಾಬತನಕ ಕಂಡು ಅಲ್ಲಿಂದಾಚೆ ಏನೂ ಇಲ್ಲಾ ಎಂಬುದು ದೃಷ್ಟಿಯ ಭೇದವೊ? ಜಗದ ಭೇದವೊ? ಇಂತೀ ಭೇದವ ತಿಳಿದು ತನ್ನ ದೃಷ್ಟಕ್ಕೆ ತಕ್ಕ ಸ್ಥಲವ ಮೆಟ್ಟಿ, ಸ್ಥಲಕ್ಕೆ ತಕ್ಕ ಆಚರಣೆಯಲ್ಲಿ ನಿಂದು, ಆ ಆಚರಣೆ ಆದಿಯಾಗಿ ಅನಾದಿಯಿಂದತ್ತಣವನ ಭೇದಿಸಿ ಹಿಡಿದು ಸದ್ಯೋಜಾತಲಿಂಗದಲ್ಲಿ ವೇಧಿಸಬೇಕು.
--------------
ಅವಸರದ ರೇಕಣ್ಣ
ಅಮೃತದ್ರವ್ಯದಲ್ಲಿ ಅಮೃತವಿಶೇಷವ ಮಾಡಲಿಕ್ಕಪ್ಪುದಲ್ಲದೆ ಕಹಿ ಕಟುಕಂಗಳಲ್ಲಿ ಮಧುರಸಾರಕ್ಕೆ ಕ್ರಮಗುಣವುಂಟೆ ? ಇಂತೀ ಭಾವಕ್ರೀ ವರ್ತನಶುದ್ಧವುಳ್ಳವರಲ್ಲಿ ಅಲ್ಲದೆ ವರ್ತನಹೀನರಲ್ಲಿ ಉಂಟೆ ಸ್ವಯಜ್ಞಾನಸಂಬಂಧ ? ಇಂತಿವು ಕುಲವಂಶದಲ್ಲಿ ಅಲ್ಲದೆ ಸತ್ಕುಲ ತದ್ರೂಪಿಲ್ಲ. ಇಂತೀ ಆಚರಣೆ ಆಶ್ರಿತದ ಭೇದ. ಈ ಆತ್ಮನ ಭೇದವನರಿತು ಭೇದಿಸಬೇಕು, ಸದ್ಯೋಜಾತಲಿಂಗದಲ್ಲಿ.
--------------
ಅವಸರದ ರೇಕಣ್ಣ
ಶೈವವಾರು, ವೀರಶೈವ ಮೂರು, ಗುರುಸ್ಥಲವೈದು, ಆಚಾರ್ಯನಂಗ ನಾಲ್ಕು, ಆಚಾರಕ್ಕೆ ಅಂಗವಾರು. ಆತ್ಮಂಗೆ ಅರಿವು ಮೂರು. ಮತ್ತಿವರೊಳಗಾದ ಷಡ್ದರುಶನಭೇದ. ಆಚರಣೆ ಆಶ್ರಯಂಗಳು ವಿಶ್ವತೋಮುಖವಾಗಿಹವು. ಚೀರದ ಬಾಯಿದಾರದಂತೆ ಕಟ್ಟುವುದು ಒಂದೆ ಭೇದ, ಬಿಡುವುದು ಒಂದೆ ಭೇದ. ಇಂತೀ ಸ್ಥಳಕುಳಂಗಳಲ್ಲಿ ಭೇದಂಗಳನರಿವುದು ಆಚಾರ್ಯನಿರವು. ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗ ವಿಭೇದವಾದಭೇದ.
--------------
ಪ್ರಸಾದಿ ಭೋಗಣ್ಣ
ತನುವಿಂಗೆ ಕ್ರೀ, ಆತ್ಮಂಗೆ ವ್ರತ. ಆ ವ್ರತಕ್ಕೆ ನಿಶ್ಚಯ ಕರಿಗೊಂಡು ಬಾಹ್ಯದ ಕ್ರೀ, ಅರಿವಿನ ಆಚರಣೆ, ಭಾಷೆ ಓಸರಿಸದೆ ನಿಂದಾತನೆ ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವು ತಾನೆ.
--------------
ಅಕ್ಕಮ್ಮ
ಕ್ರೀಯ ನುಡಿವಲ್ಲಿ ಸ್ಥಲ, ಸ್ಥಲವ ನುಡಿವಲ್ಲಿ ಆಚರಣೆ, ಆಚರಣೆ ಆಧರಿಸಿದಲ್ಲಿ ಜ್ಞಾನ, ಜ್ಞಾನವನಾಧರಸಿದಲ್ಲಿ ದಿವ್ಯಜ್ಞಾನ, ದಿವ್ಯಜ್ಞಾನ ಆಧರಿಸಿ ನಿಂದಲ್ಲಿ ಮಹದೊಡಲು ಅದು, ಮಹಾಮಯ ಲೇಪವಾದಲ್ಲಿ ಅದು ಐಕ್ಯಪದ ಸದ್ಯೋಜಾತಲಿಂಗದಲ್ಲಿ.
--------------
ಅವಸರದ ರೇಕಣ್ಣ
ಅಂದಿನವರು! ಇಂದಿನವರು! ಎಂಬ ಸಂದೇಹಿಗಳಿಗೆ ಸಂದೇಹ ಮುಂದುಗೊಂಡಿಪ್ಪುದು ನೋಡ! ಅಂದೊಂದು ಪರಿ, ಇಂದೊಂದು ಪರಿಯೆ? ಗುರುಲಿಂಗಜಂಗಮ ಅಂದೊಂದು ಪರಿ, ಇಂದೊಂದು ಪರಿಯೆ? ಪಾದೋದಕ ಪ್ರಸಾದ ಅಂದೊಂದು ಪರಿ, ಇಂದೊಂದು ಪರಿಯೆ? ಶರಣಲಿಂಗಸಂಬಂಧ ಅಂದೊಂದು ಪರಿ, ಇಂದೊಂದು ಪರಿಯೆ? ಅರಿವು ಆಚರಣೆ ಅಂದೊಂದು ಪರಿ, ಇಂದೊಂದು ಪರಿಯೆ? ಸ್ಥಲಕುಲಂಗಳು ಅಂದೊಂದು ಪರಿ, ಇಂದೊಂದು ಪರಿಯೆ? ಸೌರಾಷ್ಟ್ರ ಸೋಮೇಶ್ವರಲಿಂಗವು ಅಂದೊಂದು ಪರಿ, ಇಂದೊಂದು ಪರಿಯೆ?
--------------
ಆದಯ್ಯ
ಆರುಸ್ಥಲ ವರ್ಣಿಸುವಲ್ಲಿ ಭಕ್ತಂಗೆ ಮಾಹೇಶ್ವರಂಗೆ ಪ್ರಸಾದಿಗೆ ಪ್ರಾಣಲಿಂಗಿಗೆ ಶರಣಐಕ್ಯಂಗೆ. ಸ್ಥಲವಾರು ಲಿಂಗವೊಂದೆ; ವರ್ಣವಾರು ಪಟವೊಂದೆ; ಅಕ್ಷರವಾರು ಬೀಜವೊಂದೆ; ದಳವಾರು ಆತ್ಮವೊಂದೆ. ಇಂತೀ ಭೇದಂಗಳು ಭಿನ್ನವಾಗಿ; ನಿಚ್ಚಣಿಗೆಯ ಮೆಟ್ಟಿನಂತೆ, ಮೊದಲು ತುದಿಯಾದಿಯಾಗಿ ತುದಿಕಡೆಯಾದಿಯಾಗಿ ಎಡೆತಾಕುವ ತೆರದಂತೆ, ಸ್ಥಲವೆರಡು ಆಚರಣೆ ನಾಲ್ಕು. ಇಂತೀ ಭೇದವಾರರಲ್ಲಿ ಷಡುಸ್ಥಲ ಸಂದು, ಸಂಗನ ಬಸವಣ್ಣ ಚನ್ನಬಸವಣ್ಣನಿಂದ ಪ್ರವಾಹವಾಗಿ ಭಕ್ತಿ ರೂಪಾಯಿತ್ತು. ಶಂಭುವಿನಿಂದಿತ್ತ ಸ್ವಯಂಭವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು.
--------------
ದಾಸೋಹದ ಸಂಗಣ್ಣ
ಶರೀರವ ಕುರಿತಲ್ಲಿ ಸಾಧಕಾಂಗವ ನುಡಿಯಬೇಕು. ಆತ್ಮನ ಕುರಿತಲ್ಲಿ ಚಿದ್ಘನದಲ್ಲಿ ನಿಂದು ಒದಗಿ ಅಡಗಿರುವಠಾವ ನುಡಿಯಬೇಕು. ಇಂತೀ ಉಭಯದಿರವ ತಾನರಿತು ಅಂಗಕ್ಕೆ ಶಿಲೆ, ಆತ್ಮಂಗೆ ಓಗರವಾದಂತೆ, ಲೌಕಿಕಕ್ಕೆ ಆಚರಣೆ ಪರಮಾರ್ಥಕ್ಕೆ ಪರಂಜ್ಯೋತಿ ಪ್ರಕಾಶವಾಗಿರಬೇಕು, ಸದಾಶಿವಮೂರ್ತಿಲಿಂಗಕ್ಕೆ ಅಂಗವಾಗಿ ನಿರಂಗಕ್ಕೆ ಸಂಗವನೆಯ್ದಬೇಕು.
--------------
ಅರಿವಿನ ಮಾರಿತಂದೆ
ಇನ್ನಷ್ಟು ... -->