ಅಥವಾ

ಒಟ್ಟು 33 ಕಡೆಗಳಲ್ಲಿ , 18 ವಚನಕಾರರು , 29 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಿನ್ನಾಳಿ ಕುಂಬಾರನ ಕೆಲಸದೋಪಾದಿ; ಉದಕದ ಶೈತ್ಯವನೆ ಕೊಟ್ಟು, ನೂಲೆಳೆಯಲ್ಲಿ ಗೋಣ ಕೊಯ್ದು, ವಾಯುವಿನ ಶೈತ್ಯದಲ್ಲಿ ಆರಿಸಿ, ಅಗ್ನಿಮುಖದಲ್ಲಿ ಬೇರೆ ಭಾಂಡವೆಂದೆನಿಸಿದಂತೆ ಕೂಡಲಸಂಗಮದೇವಾ.
--------------
ಬಸವಣ್ಣ
ಪಾದಪೂಜೆಯ ಮಾಡಿ ಪಾದತೀರ್ಥವ ಪಡೆದುಕೊಂಬ ಕ್ರಮವು ಎಂತೆಂದಡೆ : 'ದೇಶಿಕಸ್ಯ ಪದಾಂಗುಷ್ಠೇ ಲಿಖಿತಾ ಪ್ರಣವಂ ತತಃ | ಪಾದಪೂಜಾವಿಧಿಂ ಕೃತ್ವಾ ವಿಶೇಷಂ ಶೃಣು ಪಾರ್ವತಿ ||' ಎಂದುದಾಗಿ, ಭಯಭಕ್ತಿ ಕಿಂಕುರ್ವಾಣದಿಂದೆ ಜಂಗಮಕ್ಕೆ ಪಾದಾರ್ಚನೆಯಂ ಮಾಡಿ ಗದ್ದುಗೆಯನಿಕ್ಕಿ ಮೂರ್ತವ ಮಾಡಿಸಿ ತನ್ನ ಕರಕಮಲವಂ ಮುಗಿದು ಅಯ್ಯಾ, ಹಸಾದ ಮಹಾಪ್ರಸಾದ ಪೂರ್ವಜನ್ಮ ನಿವಾರಣಂ ದೀಕ್ಷಾಗುರು ಶಿಕ್ಷಾಗುರು ಮೋಕ್ಷಗುರು ಗುರುವಿನಗುರು ಪರಮಗುರು ಪರಮಾರಾಧ್ಯ ಶ್ರೀಪಾದಗಳಿಗೆ ಶರಣು ಶರಣಾರ್ಥಿಯೆಂದು 'ಪ್ರಣಮ್ಯ ದಂಡವದ್ಭೂಮೌ ಇಷ್ಟಮಂತ್ರಂ [ಸದಾಜಪೇತ್] ಶ್ರೀ ಗುರೋಃ ಪಾದಪದ್ಮಂ ಚ ಗಂಧಪುಷ್ಪಾsಕ್ಷತಾದಿಭಿಃ ||' ಎಂದುದಾಗಿ, ದೀರ್ಘದಂಡ ನಮಸ್ಕಾರವಂ ಮಾಡಿ ಪಾದಪೂಜೆಗೆ ಅಪ್ಪಣೆಯಂ ತಕ್ಕೊಂಡು ಮೂರ್ತವಂ ಮಾಡಿ ಲಿಂಗವ ನಿರೀಕ್ಷಿಸಿ ತನ್ನ ಅಂಗೈಯಲ್ಲಿ ಓಂಕಾರ ಪ್ರಣವಮಂ ವಿಭೂತಿಯಲ್ಲಿ ಬರೆದು ಆ ಜಂಗಮದ ಎರಡು ಪಾದಗಳ ತನ್ನ ಕರಕಮಲದಲ್ಲಿ ಲಿಂಗೋಪಾದಿಯಲ್ಲಿ ಪಿಡಿದುಕೊಂಡು ಎರಡು ಅಂಗುಷ್ಠಗಳಲ್ಲಿ ಪ್ರಣವಮಂ ಬರೆದು, ಅಷ್ಟವಿಧಾರ್ಚನೆ ಷೋಡಶೋಪಚಾರವ ಮಾಡಿ ನಮಸ್ಕರಿಸಿ, ಆ ಪೂಜೆಯಂ ಇಳುಹಿ ಬಟ್ಟಲೊಳಗೆ ಪ್ರಣವಮಂ ಬರೆದು ಬ್ರಹ್ಮರಂಧ್ರದಲ್ಲಿರ್ದ ಸತ್ಯೋದಕವೆಂದು ಭಾವಿಸಿ, ಆ ಉದಕದ ಬಲದಂಗುಷ್ಠದ ಮೇಲೆ ನೀಡುವಾಗ ಆಱುವೇಳೆ ಷಡಕ್ಷರವ ನುಡಿದು ಇಷ್ಟಲಿಂಗವೆಂದು ಭಾವಿಸಿ, ಎಡದಂಗುಷ್ಠದ ಮೇಲೆ ನೀಡುವಾಗ ಐದುವೇಳೆ ಪಂಚಾಕ್ಷರವ ನುಡಿದು ಪ್ರಾಣಲಿಂಗವೆಂದು ಭಾವಿಸಿ, ಎರಡಂಗುಷ್ಠದ ಮಧ್ಯದಲ್ಲಿ ಉದಕವ ನೀಡುವಾಗ ಒಂದು ವೇಳೆ 'ಓಂ ಬಸವಲಿಂಗಾಯನಮಃ' ಎಂದು ಸ್ಮರಿಸಿ, ಭಾವಲಿಂಗವೆಂದು ಭಾವಿಸಿ ದ್ರವನೆಲ್ಲವ ತೆಗೆದು ಮತ್ತೆ ಪೂಜೆಯ ಮಾಡಿ ನಮಸ್ಕರಿಸಿ ಶರಣಾರ್ಥಿಯೆಂದು ಆ ಜಂಗಮವು ಸಲ್ಲಿಸಿದ ಮೇಲೆ ತಾನು ಪಾದತೀರ್ಥವ ಸಲ್ಲಿಸುವುದು. ಪಂಚಾಂಗುಲಿ ಪಂಚಾಕ್ಷರಿಯಿಂದಲಿ ಲಿಂಗಕರ್ಪಿಸಿ ಆ ಪಂಚಾಂಗುಲಿಯುತ ಜಿಹ್ವೆಯಿಂದ ಸ್ವೀಕರಿಸುವುದು ಗುರುಪಾದೋದಕ. ಲಿಂಗವನೆತ್ತಿ ಅಂಗೈಯಲ್ಲಿರ್ದ ತೀರ್ಥವ ಸಲ್ಲಿಸಿದುದು ಲಿಂಗಪಾದೋದಕ. ಬಟ್ಟಲೊಳಗಿರ್ದ ತೀರ್ಥವ ಸಲಿಸಿದುದು ಜಂಗಮಪಾದೋದಕ. ಈ ತ್ರಿವಿಧ ಪಾದೋದಕ ಒಂದೇ ಎಂದರಿವುದು. ಹೀಗೆ ಕ್ರಮವರಿದು ಸಲಿಸುವರ್ಗೆ ಮುಕ್ತಿಯಾಗುವುದಕ್ಕೆ ತಡವಿಲ್ಲವೆಂದಾತ ನಮ್ಮ ಶಾಂತಕೂಡಲಸಂಗಮದೇವ.
--------------
ಗಣದಾಸಿ ವೀರಣ್ಣ
ಆದಿ ಮಧ್ಯ ಅವಸಾನ ಉಚಿತದ ಸಾವಧಾನವ ಎಚ್ಚರಿಕೆಯಲ್ಲಿ ಅಸು ಅಡರುವಾಗ ದೆಸೆದಿಕ್ಕಿನಲ್ಲಿ ಕುಚಿತ್ತ ಭಾವವಿಲ್ಲದೆ ಅಂತರಿಕ್ಷ ಸುಮಾನತೆಯಲ್ಲಿ, ದ್ವಾರದಲ್ಲಿ ನೀರೆಯ್ದುವಂತೆ, ಸ್ಫಟಲದಲ್ಲಿ ಪನ್ನಗ ಹೋಹಂತೆ, ಕುಸುಮದಲ್ಲಿ ಗಂಧ ಸಂಚಾರದಲ್ಲಿ ಸಂಗವ ಮಾಡಿದಂತೆ, ಮಿಂಚಿನಲ್ಲಿ ತೋರಿದ ಕುಡಿವೆಳಗಿನ ಗೊಂಚಲ ಸಂಚಲದಂತೆ, ಅಂಚೆ ಸೇವಿಸುವ ಪಯ ಉದಕದ ಹಿಂಚುಮುಂಚನರಿದಂತಿರಬೇಕು. ಸಂಚಿತ ಆಗಾಮಿ ಪ್ರಾರಬ್ಧಕ್ಕೆ ಹೊರಗಾದ ಮಹಂತನ ಐಕ್ಯದಿರವು. ಕಂಚಿನ ನಾದ ಸಂಚಾರ ಮುಂಚಿದಲ್ಲಿಯೆ ಲಯ ನಾರಾಯಣಪ್ರಿಯ ರಾಮನಾಥಾ.
--------------
ಗುಪ್ತ ಮಂಚಣ್ಣ
ಜಗತ್ರಯದ ಹೊ[ಲೆ]ಯನೆಲ್ಲವನು ಉದಕ ಒಳಕೊಂಬುವುದು. ಉದಕದ ಪೂರ್ವಾಶ್ರಯವ ಕಳೆವಡಾರಳವಲ್ಲ. ಅದೆಂತೆಂದಡೆ; ಯದಾ ಪೃಥ್ವೀಶ್ಮಶಾನಂ ಚ ತದಾ ಜಲಂ ನಿರ್ಮಲಿನಕಂ ಮಹಾಲಿಂಗಂ ತು ಪೂಜಾನಾಂ ವಿಶೇಷಂ ಪಾಕಂ ಭವೇತ್ ಎಂದುದಾಗಿ. ಅದಕ್ಕೆ ಮತ್ತೆಯು; ಪ್ರಥಮಂ ಮಾಂಸತೋಯಾನಾಂ ದ್ವಿತೀಯಂ ಮಾಂಸಗೋರಸಃ ತೃತೀಯಂ ಮಾಂಸನಾರೀಣಾಂ ಕಸ್ಯ ಶೀಲಂ ವಿಧೀಯತೇ ಎಂದುದಾಗಿ, ಯಥಾ ಉದಕದಿಂದಲಿ ಅಗ್ನಿಯಿಂದಲಿ ಪಾಕವಾದ ದ್ರವ್ಯಪದಾರ್ಥಂಗಳೆಲ್ಲವು ಜೀವಮಯವೆಂದು ಹೇಳುತಿರ್ದವಾಗಿ, ಆ ದೋಷದಿಂದಲಾದ ಭೋಜನವನು ಲಿಂಗಕ್ಕೆ ಸಮರ್ಪಿಸಲಾಗದು. ಅದೆಂತೆಂದಡೆ; ಭೂಮಿದ್ರ್ರವ್ಯಂ ಯಥಾ ಮಾಂಸಂ ಪ್ರಾಣಿದ್ರವ್ಯಂ ಯಥಾ ಮಧು ಸರ್ವಭೂತಮಯಂ ಜೀವಂ ಜೀವಂ ಜೀವೇನ ಭಕ್ಷಿತಂ ಎಂದುದಾಗಿ ಇಂಥ ಉದಕದ ಪೂರ್ವಾಶ್ರಯವು, ಬೋನದ ಪೂರ್ವಾಶ್ರಯವು, ಹೇಗೆ ಹೋಹುದಯ್ಯಾ ಎಂದಡೆ: ಉದಕದ ಪೂರ್ವಾಶ್ರಯವು ಜಂಗಮದ ಪಾದತೀರ್ಥ ಮುಖದಿಂದ ಹೋಯಿತ್ತು, ಬೋನದ ಪೂರ್ವಾಶ್ರಯವು ಜಂಗಮದ ಪ್ರಸಾದದ ಮುಖದಿಂದ ಹೊಯಿತ್ತು. ಇದು ಕಾರಣ, ಈ ವರ್ಮ ಸಕೀಲವು ಪ್ರಭುದೇವರ ವಳಿ ಬಸವಣ್ಣನ ವಂಶಕ್ಕಲ್ಲದೆ ಮತ್ತಾರಿಗೂ ಅಳವಡದು ಕಾಣಾ ಕೂಡಲಸಂಗಮದೇವಾ.
--------------
ಬಸವಣ್ಣ
ಉದಕದ ಕೊಡನ ಹೊತ್ತಾಡುವ ಗೊರವಿತಿಯ ಕೈಯಲ್ಲಿ ಕಂಕಣ, ಉಲಿವ ಗೆಜ್ಜೆ ಚರಣದಲ್ಲಿ. ಉರಿಯ ಗೊರವನ ನೆರೆವ ಭರವಸದಿಂದ ಬಂದಿರಲು ಬಹಳ ಮುಳ್ಳಡ್ಡಲಾದವಲ್ಲಾ ! ಕಂಕಣದುಲುಹು ನಂದಿ, ಕಣ್ಣುದೆರೆದಾ ಮುಳ್ಳಳಿಯಲು ಕಾಡುಗಿಚ್ಚೆದ್ದು ಕರಡವ ಸುಟ್ಟಂತೆ ಪ್ರಾಣಗುಣ ಪ್ರಧ್ವಂಸಕಂಗೆ ಅನ್ಯೋನ್ಯ ಭಾವತ್ರಯವುಂಟೆ ? ಶರಣಲಿಂಗಕ್ಕೆ ಸಂದಿಲ್ಲ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಜಗತ್ತಿನ ಹೊಲೆಯನೆಲ್ಲವನು ಉದಕ ಕೊಳುವುದು, ಆ ಉದಕದ ಹೊಲೆಯ ಕಳೆದಲ್ಲದೆ ಲಿಂಗಕ್ಕೆ ಮಜ್ಜನಕ್ಕೆರೆವ ಲಿಂಗದ್ರೋಹಿಗಳ ಮಾತಕೇಳಲಾಗದು. ಮೇಘಬಿಂದುವಿನಿಂದಾದ ಉದಕ, ಸೂರ್ಯನ ಮುಖದಿಂದಾಗಿ ದ್ರವ್ಯ, ಅಗ್ನಿಯ ಮುಖದಿಂದಾದ ಪಾಕ_ಇಂತಿವರ ಪೂರ್ವಾಶ್ರಯವ ಕಳೆದಲ್ಲದೆ ಭಕ್ತ ಮಾಹೇಶ್ವರರೂ ಶೀಲಪರರೂ ಮೊದಲಾದ ನಾನಾ ವ್ರತಿಗಳು ಲಿಂಗಕ್ಕೆ ಮಜ್ಜನವ ಮಾಡಲಾಗದು, ಅರ್ಪಿಸಲಾಗದು, ಅದೆಂತೆಂದಡೆ: ಉದಕದ ಪೂರ್ವಾಶ್ರಯವನು, ದ್ರವ್ಯದ ಪೂರ್ವಾಶ್ರಯವನು, ಕಳೆದಲ್ಲದೆ ಲಿಂಗಕ್ಕೆ ಅರ್ಪಿಸಬಾರದು. ಇಂತೀ ತ್ರಿವಿಧದ ಪೂರ್ವಾಶ್ರಯವ ಕಳೆವ ಪರಿಯೆಂತೆಂದಡೆ: ಉದಕದ ಪೂರ್ವಾಶ್ರಯವ ಮಂತ್ರಯುಕ್ತವಾಗಿ ಜಂಗಮದ ಪಾದೋದಕದಿಂದ ಕಳೆದು ಪಾಕಪ್ರಯತ್ನವ ಮಾಡುವುದು. ದ್ರವ್ಯದ ಪೂರ್ವಾಶ್ರಯ ಜಂಗಮದ ಹಸ್ತ ಪರುಷದಿಂದ ಹೋದುದಾಗಿ ಅಗ್ನಿಯಲಾದ ಪಾಕದ ಪೂರ್ವಾಶ್ರಯವು ಜಂಗಮದ ಪ್ರಸಾದದಿಂದ ಹೋಯಿತ್ತು. ಈ ಶಿವನ ವಾಕ್ಯಗಳನರಿದು, ಮತ್ತೆ ಜಂಗಮದ ಪಾದೋದಕದಿಂದ ಪಾಕಪ್ರಯತ್ನವ ಮಾಡಲಾಗದು, ಲಿಂಗಕ್ಕೆ ಮಜ್ಜನಕ್ಕೆರೆಯಲಾಗದೆಂಬ ಶೈವ ಬೌದ್ಧ ಚಾರ್ವಾಕ ಚಾಂಡಾಲ ಶಿವದ್ರೋಹಿಯ ಮಾತಕೇಳಿ, ಬಿಟ್ಟನಾದರೆ,_ಅವ ವ್ರತಭ್ರಷ್ಟ ಅವನ ಮುಖವ ನೋಡಲಾಗದು. ಸಾಕ್ಷಿ:``ಸರ್ವಾಚಾರಪರಿಭ್ರಷ್ಟಃ ಶಿವಾಚಾರೇನ ಶುಧ್ಯತಿ ಶಿವಾಚಾರ ಪರಿಭ್ರಷ್ಟಃ ರೌರವಂ ನರಕಂ ವ್ರಜೇತ್''_ ಇಂತೆಂದುದಾಗಿ, ಸಮಸ್ತವಾದ ವ್ರತಂಗಳಲ್ಲಿ ಭ್ರಷ್ಟರಾದವರ ಶಿವಾಚಾರದಲ್ಲಿ ಶುದ್ಧನ ಮಾಡಬಹುದು, ಶಿವಾಚಾರದಲ್ಲಿ ಭ್ರಷ್ಟರಾದವರಿಗೆ ರೌರವ ನರಕ ತಪ್ಪದು. ಅವಗೆ ಪ್ರಾಯಶ್ಚಿತ್ತವಿಲ್ಲಾಗಿ ಅವನ ಮುಖವ ನೋಡಲಾಗದು, ಮತ್ತಂ ``ವ್ರತಭ್ರಷ್ಟಮುಖಂ ದೃಷ್ಟ್ವಾಶ್ವಾನಸೂಕರವಾಯಸಂ ಅಶುದ್ಧಸ್ಯ ತಥಾದೃಷ್ಟಂ ದೂರತಃ ಪರಿವರ್ಜಯೇತ್''_ಇಂತೆಂದುದಾಗಿ, ವ್ರತಶೀಲಗಳಲ್ಲಿ ನಿರುತನಾದ ಶಿವಶರಣನು ಪಥದಲ್ಲಿ ಆಚಾರಭ್ರಷ್ಟನ ಕಂಡಡೆ ಮುಖವ ನೋಡಿದಡೆ ನಾಯ ಕಂಡಂತೆ ಸೂತಕನ ಕಂಡಂತೆ ಕಾಗೆಯ ಕಂಡಂತೆ ಹೇಸಿಗೆಯ ಕಂಡಂತೆ ತೊಲಗುವುದು. ಆ ವ್ರತವ ಬಿಡಿಸಿದವನು, ಅವನ ಮಾತ ಕೇಳಿ ಬಿಟ್ಟವನು ಇಬ್ಬರಿಗೂ ಗುರುಲಿಂಗಜಂಗಮ ಪಾದೋದಕ ಪ್ರಸಾದಕ್ಕೆ ಹೊರಗಾಗಿ ಅನಂತಕಾಲ ನರಕವನೈದುವರು. ಆ ಪಾಪಿಗಳ ಮುಖವ ನೋಡಲಾಗದು, ನುಡಿಸಲಾಗದು ವ್ರತನಿಷ್ಠೆಯುಳ್ಳವರು ಕಾಣಾ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಲೋಕದ ಹೊಲೆ ಉದಕದಿಂದ ಹೋಹುದೆಂಬಿರಿ, ಉದಕದ ಹೊಲೆ ಏತರಿಂದ ಹೋಹುದು? ವಾಕು ಪ್ರಮಾಣಿನಿಂದ ಅಗ್ಛಣಿಯೆನಿಸಿತ್ತು. ಸಾಹಿತ್ಯವರಿದು ಕೊ(ಡ)ಳಬಲ್ಲ ಚೆನ್ನನ ಪ್ರಸಾದ ಲಿಂಗಕ್ಕೆ ಓಗರವಾಯಿತ್ತು ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ಉದಕದ ಕೈಯ ಕರಗದಲ್ಲಿ ಬೆಂಕಿಯ ಸುಜಲವ ತುಂಬಿ, ಆರಂಗ ಮೂರಂಗನ ಕೂಡೆ ನಿಂದುದೆ ಮಜ್ಜನ ಪಾತ್ರೆ. ತೋರಲಿಲ್ಲದ ಪದಾರ್ಥವ ಘನಮುಕ್ತಿಯೆಂಬ ಕೈಯಿಂದ ನಿಮಗರ್ಪಿತವ ಮಾಡುವೆನಯ್ಯಾ. ಸಗರದ ಬೊಮ್ಮನೊಡೆಯ ಎನ್ನ ತನುಮನ ಅಂಗಲಿಂಗವಸ್ತು ನಿಮಗರ್ಪಿತವಯ್ಯಾ.
--------------
ಸಗರದ ಬೊಮ್ಮಣ್ಣ
ಉದಕದ ತಂಪವ ತಾವರೆಯಲ್ಲದೆ ಹೊರಗಣ ಕೊರಡೆತ್ತಬಲ್ಲುದೊ ? ಹೂವಿನ ಪರಿಮಳವ ತುಂಬಿಯಲ್ಲದೆ ಹೊರಗಣ ನೊಣನೆತ್ತಬಲ್ಲುದೊ ? ಕ್ಷೀರದ ರುಚಿಯ ಹಂಸೆಯಲ್ಲದೆ ಕೆಲದಲ್ಲಿ ಬಕನೆತ್ತವಬಲ್ಲುದೊ ? ಮಾವಿನ ಹಣ್ಣಿನ ರುಚಿಯನರಗಿಳಿಗಳು ಬಲ್ಲವಲ್ಲದೆ ಹೊರಗಣ ಕೋಳಿಗಳೆತ್ತ ಬಲ್ಲವೊ ? ಊಟದ ರುಚಿಯನು ನಾಲಗೆಯಲ್ಲದೆ ಕಲಸುವ ಕೈ ತಾನೆತ್ತ ಬಲ್ಲುದೊ? ಕೂಟದ ಸುಖವನು ಯೌವನೆಯಲ್ಲದ ಬಾಲೆ ತಾನೆತ್ತ ಬಲ್ಲಳೊ ? ಚಂದ್ರಸೂರ್ಯರÀಂತರಾಂತರವÀ ಖೇಚರರು ಬಲ್ಲರಲ್ಲದೆ ಗಗನದೊಳಗಾಡುವ ಹದ್ದುಗಳು ತಾವೆತ್ತ ಬಲ್ಲವೊ ? ಎಲೆ ಮಹಾಲಿಂಗ ಕಲ್ಲೇಶ್ವರಯ್ಯಾ. ನಿಮ್ಮ ನಿತ್ಯನಿಜೈಕ್ಯರ ನಿಲುವನು ಮಹಾನುಭಾವಿಗಳು ಬಲ್ಲರಲ್ಲದೆ ಲೋಕದ ಜಡಜೀವಿಗಳೆನಿಸುವ ಮಾನವರೆತ್ತ ಬಲ್ಲರೊ ?
--------------
ಹಾವಿನಹಾಳ ಕಲ್ಲಯ್ಯ
ಉದಕದ ಬಾಯಲಲಿ ಒಂದು ರಸದ ಗಿರಿ ಹುಟ್ಟಿ, ಹೊಸಮಾಣಿಕ್ಯವ ನುಂಗಿತ್ತ ಕಂಡೆ. ನುಂಗುವಾಗ ಒಂದು, ಗುಟುಕಿಸುವಾಗ ಎರಡು, ಸ್ವಸ್ಥಾನದಲ್ಲಿ ನಿಂದಾಗ ಮೂರು, ಅದರಂಗವ ತಿಳಿದು ಕಳೆಯಬಲ್ಲಡೆ ನಿಃಕಳಂಕ ಮಲ್ಲಿಕಾರ್ಜುನ ಲಿಂಗವ ಬಲ್ಲವ.
--------------
ಮೋಳಿಗೆ ಮಾರಯ್ಯ
ಬ್ರಹ್ಮಕಲ್ಪಿತವಾದ ತ್ರಿಪುರನುರುಹಬೇಕೆಂದು, ಪರಮೇಶ್ವರನು ತ್ರಿಯಕ್ಷಿಯಿಂದ ನೋಡುತ್ತಿರಲು, ಆ ಮೂರು ನೇತ್ರಂಗಳಿಂದ ಉದಕದ ಬಿಂದುಗಳು, ಭೂಮಿಯ ಮೇಲೆ ಪತನವಾಗಲು, ಸರ್ವಾನುಗ್ರಹಾರ್ಥವಾಗಿ, ರುದ್ರಾಕ್ಷಿಯ ವೃಕ್ಷಂಗಳು ಹುಟ್ಟಿದವಂದು ನೋಡಾ. ಆ ರುದ್ರಾಕ್ಷಿಯ ವೃಕ್ಷದ ಬೀಜಂಗಳ ಧರಿಸಿದವರು, ಸ್ಮರಿಸಿದವರು, ಕೊಂಡಾಡಿದವರು, ರುದ್ರಾಕ್ಷಿಯಲ್ಲಿ ಜಪವ ಮಾಡಿದವರು, ಕೈವಲ್ಯವನಿತೆಗೆ ವಲ್ಲಭರಾಗಿ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ಕೂಡಿ ಸುಖದಿಹರು ನೋಡಾ.
--------------
ಸ್ವತಂತ್ರ ಸಿದ್ಧಲಿಂಗ
ಉದಕದ ರಸದಂತೆ, ಅಗ್ನಿಯ ಉಭಯದಂತೆ, ವಿಷ ನಿರ್ವಿಷದಂತೆ ಕಾಬ, ಕಾಣಿಸಿಕೊಂಬ ಭೇದ. ತನುವಿನ ಮೇಲಿನ ಲಿಂಗದ ನೆನಹು, ಪ್ರಾಣನ ಮೇಲಿಹ ಭಾವದ ಸಂಚು. ಆ ಉಭಯವನೊಳಕೊಂಡ ಜ್ಞಾನದ ಬಿಂದು, ಸದಮಲ ಬೆಳಗಿನೊಳಗೆಯ್ದಿದ ಮತ್ತೆ ಬಿಡುಮುಡಿ ಎರಡಿಲ್ಲ. ಅದು ಶರಣನ ನಿಜದೈಕ್ಯ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಉದಕದ ಬರವು ವಿಶ್ವಕ್ಕೆ ಹೊಸಪರಿ ಎಂಬಂತೆ ಮಾಟವ ಮಾಡುವನು ಜಂಗಮಕ್ಕೆ, ನಿರವಯದ ಸುಳುಹು ನಿಬ್ಬೆರಗಿನ ಬರವಿಂಗೆ. ಕೂಡಲಸಂಗಮದೇವ ಕೇಳಯ್ಯಾ, ಇಂತಲ್ಲದೆ ನಿಮ್ಮ ನಿಜವನರಿಯಬಾರದೆನಗೆ.
--------------
ಬಸವಣ್ಣ
ಬಟ್ಟಬಯಲಲೊಂದು ದೃಷ್ಟವಪ್ಪ ಮೂರುತಿಯಾಗಿ ನಾನೊಂದು ಅಷ್ಟತನುವ ಪಡೆದೆ. ಬಾಳೆಯ ದಿಂಡು ಲಾಳಿಲು ನೂಲು ಘಳಿಯ ಶಬುದ ಉದಕದ ಬಿಂದು ಓ ಓ ಬಾಳೆ ಮಹಾಲಿಂಗ ಗಜೇಶ್ವರನಲ್ಲಿ ಉದಕ ದಿಟವೆಂದೆನು.
--------------
ಗಜೇಶ ಮಸಣಯ್ಯ
ಕಂಬಳಿಯಲ್ಲಿ ಕೂಳ ಕಟ್ಟಿ, ಕೂದಲ ಸೋದಿಸಬಹುದೆ ಅಯ್ಯಾ ? ಸಂಸಾರಕ್ಕಂಗವನಿತ್ತು, ಮೋಹಕ್ಕೆ ಮನವವಿತ್ತು, ಮನುಜರ ಗುಣ ತಮಗೊಂದೂ ಬಿಡದೆ, ಘನವನರಿತೆಹೆನೆಂಬ ಬಿನುಗಾಟದ ಮಾತೇಕೆ ? ಹಸಿವು ತೃಷೆ ವ್ಯಸನ ವ್ಯಾಪ್ತಿ ಜಾಗ್ರ ಸ್ವಪ್ನ ಸುಷುಪ್ತಿಯಲ್ಲಿ ಲಯವಾಗುತ್ತಿರ್ದು, ದ್ವೈತಾದ್ವೈತದ ಮಾತಿನ ಬಣಬೆಯ ವೇಷಗಳ್ಳಗೇಕೆ ಪರದೇಶಿಗನ ಸುದ್ದಿ ? ಅರಿದವನ ಅಂಗ ದಗ್ಧಪಟದಂತೆ, ಬೆಂದ ನುಲಿಯಂತೆ, ಬೆಳಗಿನ ರೂಪಿನಂತೆ, ಉದಕದ ಪ್ರತಿಬಿಂಬದಂತೆ, ಅದು ತೋರಲಿಲ್ಲವಾಗಿ, ಅದು ಅಂಗಲಿಂಗಪ್ರಾಣಸಂಯೋಗ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಇನ್ನಷ್ಟು ... -->