ಅಥವಾ

ಒಟ್ಟು 19 ಕಡೆಗಳಲ್ಲಿ , 13 ವಚನಕಾರರು , 17 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಒಂದು ಹುತ್ತಕ್ಕೆ ಒಂಬತ್ತು ಬಾಗಿಲು. ಒಂದು ಸರ್ಪ ಒಂಬತ್ತು ಬಾಗಿಲಲ್ಲಿಯೂ ನೋಡುತ್ತಿಪ್ಪುದು. ಒಂಬತ್ತು ಬಾಗಿಲಿಗೆ ಕದವನಿಕ್ಕಿ, ಒಂದು ಬಾಗಿಲ ಅಗುಳಿ ದಾರವಂದವನಿಕ್ಕಿ ಬಲಿಯಲು, ತಿರುಗುವುದಕ್ಕೆ ಠಾವ ಕಾಣದೆ, ಇರುವುದಕ್ಕೆ ಇಂಬ ಕಾಣದೆ, ನಿಲುವುದಕ್ಕೆ ಎಡೆಯ ಕಾಣದೆ, ಉರಿ ಎದ್ದು ಊರ್ದ್ವಕ್ಕೇರಲು, ಶರಧಿ ಬತ್ತಿತ್ತು, ಅಲ್ಲಿದ್ದ ಖಗಮೃಗವೆಲ್ಲ ದಹನವಾದವು. ಸರೋವರವೆಲ್ಲ ಉರಿದು ಹೋದವು, ಕತ್ತಲೆ ಹರಿಯಿತ್ತು. ಮುಂದೆ ದಿಟ್ಟಿಸಿ ನೋಡುವನ್ನಕ್ಕ ಇಟ್ಟೆಡೆಯ ಬಾಗಿಲು ಸಿಕ್ಕಿತ್ತು. ಆ ಇಟ್ಟೆಡೆಯ ಬಾಗಿಲ ಹೊಕ್ಕು ಹೊಡೆಕರಿಸಿ, ಪಶ್ಚಿಮದ ಕದವ ತೆಗೆದು, ಬಟ್ಟ ಬಯಲಲ್ಲಿ ನಿಂದು ನಾನೆತ್ತ ಹೋದೆಹೆನೆಂದರಿಯೆನಯ್ಯಾ ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ.
--------------
ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ
ಉರಿದು ಬೇವದು ಉರಿಯೋ, ಮರನೋ ? ಹರಿದು ಕೊರೆವದು ನೆಲನೋ, ನೀರೋ ? ನೆಲ ನೀರಿನಂತಾದುದು ಅಂಗಲಿಂಗಸಂಬಂಧ. ಉರಿ ಮರನಂತಾದುದು ಪ್ರಾಣಲಿಂಗಸಂಬಂಧ. ಈ ನಾಲ್ಕರ ಗುಣ ಉಭಯಕೂಟವಾದುದು ಶರಣಸ್ಥಲ. ಆ ಸ್ಥಲ ಸುರಧನುವಿನ ಕೆಲವಳಿಯಂತೆ, ಮರೀಚಿಕಾಜಲವಳಿಯಂತೆ, ಮಂಜಿನ ರಂಜನೆಯ ಜಂಝಾಮಾರುತನಂತೆ, ಆ ಸಂಗ ನಿಸ್ಸಂಗ ಐಕ್ಯಸ್ಥಲ, ನಿಃಕಳಂಕ ಮಲ್ಲಿಕಾರ್ಜುನ ರೂಪಳಿದು ನೀರಾದಂತೆ ಅಂಗಲಿಂಗಸಂಬಂಧಿ ಏಣಾಂಕಧರ ಸೋಮೇಶ್ವರಲಿಂಗದಲ್ಲಿ.
--------------
ಬಿಬ್ಬಿ ಬಾಚಯ್ಯ
ಉರಿದು ಸತ್ತುದು, ಮತ್ತುರಿದು, ನಾನಾ ಭೇದಂಗಳ ಘಟಮಟಂಗಳ ಆಶ್ರಯಕ್ಕೊಡಲಾಗಿ, ಮತ್ತೆ ಭಸ್ಮವಾಗಿ, ಒಡಲಗಿಡದ ತೆರದಂತೆ. ಇಂತೀ ತ್ರಿವಿಧದ ಕುರುಹಿನ ಲಕ್ಷದ ಭೇದ ಒಪ್ಪಿರಬೇಕು, ನಿಃಕಳಂಕ ಮಲ್ಲಿಕಾರ್ಜುನಲಿಂಗದಲ್ಲಿ.
--------------
ಮೋಳಿಗೆ ಮಾರಯ್ಯ
ಆವ ಬಗೆ ಭಾವ ಬಲ್ಲತನ ಅಳವಟ್ಟಲ್ಲಿ ರಾಗವಿರಾಗವೆಂಬುದಿಲ್ಲ. ಸುಖ ಸುಮ್ಮಾನ ರುಜೆ ರೋಗ ತಾಗು ನಿರೋಧ ಬಂದಲ್ಲಿ ಶೋಕ ಮೋಹಾದಿಗಳು ವರ್ತಿಸಿದಲ್ಲಿ ಜ್ಯೋತಿಯ ಬುಡದಂತೆ; ರಜ್ಜು ತೈಲ ಅಗ್ನಿ ಉಳ್ಳನ್ನಕ್ಕ ಉರಿದು ಆ ಬುಡ ಹೊದ್ದದಂತೆ. ಈ ಸಂಸಾರದ ಬುಡದಲ್ಲಿ ನಾನಾ ವಿಕಾರತ್ರಯದ ಗುಣದಲ್ಲಿ ನೀರಿನೊಳಗಿರ್ದು ಈಸುವನಂತೆ ಬಂಧ ಮೋಕ್ಷ ಕರ್ಮಂಗಳಲ್ಲಿ ದ್ವಂದ್ವಿತನಲ್ಲದೆ, ನಿಂದ ನಿಜೈಕ್ಯಂಗೆ ಹಿಂದು ಮುಂದೆಂಬ ಬಂಧವಿಲ್ಲ. ಗೋರಕ್ಷಪಾಲಕ ಮಹಾಪ್ರಭು ಸಿದ್ಧಸೋಮನಾಥ-ಲಿಂಗವಾದವಂಗೆ.
--------------
ಗೋರಕ್ಷ / ಗೋರಖನಾಥ
ಮನ ಮಂಕಾಯಿತ್ತು; ತನು ಮರೆಯಿತ್ತು; ವಾಯು ಬರತಿತ್ತು. ಉರಿ ಎದ್ದಿತ್ತು, ಹೊಗೆ ಹರಿಯಿತ್ತು, ಸರೋವರವೆಲ್ಲ ಉರಿದು ಹೋಯಿತ್ತು. ಒಳಕ್ಕೆ ಹೊಕ್ಕು ಕದವ ತೆಗೆದು ಬಯಲು ನೋಡಿ ಬೆಳಗ ಕೂಡಿದಲ್ಲದೆ ನಿಜಮುಕ್ತಿ ಇಲ್ಲವೆಂದರು, ನಮ್ಮ ಅಪ್ಪಣ್ಣಪ್ರಿಯ ಚೆನ್ನಬಸವಣ್ಣ.
--------------
ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ
ಶಿವಯೋಗಿಗೆ ಕರ್ಮವಿಲ್ಲ, ಶಿವಶರಣರ ಪಥ ಲಿಂಗಾಧೀನ. ಮತ್ತಾ ಲಿಂಗವಶನಾಗಿ ಆಯತ ಸ್ವಾಯತದಲ್ಲಿ ಲಿಂಗಮಯವಾಗಿಪ್ಪ ಶಿವಜ್ಞಾನಿಗಳಿಗೆ ಕರ್ಮವೆಡೆವೋಗಲೆಡೆಯಿಲ್ಲ. ಹಿಂದಣ ಕರ್ಮ ಜ್ಞಾನಾಗ್ನಿಯಿಂದ ಉರಿದು ಭಸ್ಮವಾಯಿತ್ತು. ಮುಂದಣ ಕರ್ಮ ನಿಂದೆವಂದಕರಲ್ಲಿ ಅಳಿಯಿತ್ತು, ಇಂದಿನ ಕರ್ಮ ನಿಸ್ಸಂದೇಹದಲ್ಲಿ ಕೆಟ್ಟಿತ್ತು. ``ಜ್ಞಾನಾಗ್ನಿಃ ಸರ್ವಕರ್ಮಾಣಿ ಭಸ್ಮಸಾತ್‍ಕುರುತೇ ಮಮಱಱ ಎಂದುದಾಗಿ, ಸೌರಾಷ್ಟ್ರ ಸೋಮೇಶ್ವರನ ಶರಣರು ನಿಃಕರ್ಮಿಗಳಾಗಿ ಲಿಂಗಸುಖಿಗಳು.
--------------
ಆದಯ್ಯ
ಆಡು ಕುರಿಯ ನುಂಗಿ ಬೆಕ್ಕಿನ ಹೊಟ್ಟೆಯ ಹೊಕ್ಕಿತ್ತು, ಬೆಕ್ಕು ಕಪ್ಪೆಯ ನೆರೆದು ಬಾವಿಯ ಹಾಲು ಕುಡಿಯುತ್ತಿರಲು ಕಟವಾಯಿಂದೆ ಕ್ಷೀರ ಸುರಿದು ಭೂಮಿಯಸೋಂಕಿ ಕಾಂತಾರ ಉರಿದು ವ್ಯಾಘ್ರನಳಿಯಿತ್ತು. ಮೃಗಾದಿ ಸಕಲ ಜನಿತ ತಮ್ಮ ಸ್ಥಲವ ಬಿಟ್ಟು ನೋಡುತ್ತ ನೋಡುತ್ತ ಅಡಗಿ ಒಂದೂ ಕಾಣದ ಬಯಲ ಬೆಡಗನೇನೆಂದುಪಮಿಸುವೆನಯ್ಯಾ ಗುರುನಿರಂಜನ ಚನ್ನಬಸವಲಿಂಗಾ ?
--------------
ದೇಶಿಕೇಂದ್ರ ಸಂಗನಬಸವಯ್ಯ
ಏಳು ಸುತ್ತಿನ ಐದು ವರ್ಣದ ಪಟ್ಟಣಕ್ಕೆ ಒಂಭತ್ತು ಬಾಗಿಲು. ಹೊರವೊಳಯದಲೆರಡಗುಸೆಯ ಬಾಗಿಲು. ಮಂದೇಳು ದ್ವಾರ, ತುಂಬಿದ ವ್ಯಾಪಾರ, ಸರಕ ಕೊಳುಕೊಡೆಗಳುಂಟು. ಅದೆಂತೆಂದೊಡೆ : ಎರಡು ಬಾಗಿಲಲ್ಲಿ ತಳವಾರನ ವಾಸನೆಯನರಿದು ಮಾರುವದು. ಮತ್ತೆರಡು ಬಾಗಿಲಲ್ಲಿ ರಮ್ಯವಾದಖಿಳಜೀನಸು ಮಾರುವದು ಕೊತವಾಲನ ಮುಂದಿಟ್ಟು. ಮತ್ತೆರಡು ಬಾಗಿಲಲ್ಲಿ ಊರಹಿರಿಯನ ಮಾತಕೇಳಿ ಸಕಲವ ಮಾರುವದು. ಮತ್ತೊಂದು ಬಾಗಿಲಲ್ಲಿ ಶೆಟ್ಟಿ ಮುಂತಾಗಿ ಬೇಕಾದಂತೆ ಮಾರುವದು. ಇಂತು ಹೊರಗೊಳಗಿರ್ದ ಜನರು ಲೆಕ್ಕವಿಲ್ಲದೆ ಪಟ್ಟಣಶೆಟ್ಟಿಯ ಮಾತಿನೊಳಗಿರ್ದರು. ಎಂಟು ಕೊತ್ತಲ ಸುತ್ತಿ ವ್ಯಾಪಾರ ಮಾಡುವಲ್ಲಿ ಕಂಟಕ ಬಂದುದನೇನೆಂಬೆನಯ್ಯಾ! ಅಂಗೈಯೊಳರಳಿದ ಬೆಂಕಿ ಪಟುವಾಗಿ ಅಂಗಳದಲ್ಲಿ ಉರಿಯಿತ್ತು. ಪಟ್ಟಣ ಬೆಂದು, ಮಳಿಗೆಗಳು ಸುಟ್ಟು ಜನರೆಲ್ಲ ಉರಿದು ಕೊತ್ತಲೆಂಟಕ್ಕಾವರಿಸಲು ಶೆಟ್ಟಿ ಮಧ್ಯಬುರುಜನೇರಲು, ಬೆಂದ ತಲೆ ಉರಿದು ನಿಂದು ನೋಡಲು ಗುರುನಿರಂಜನ ಚನ್ನಬಸವಲಿಂಗದಲ್ಲಿ ಪ್ರಾಣಲಿಂಗಸಂಬಂಧವದು ಕಾಣಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಸಾಮವೇದಿಗಳು ಶ್ವಪಚಯ್ಯಗಳ ಹಸ್ತದಲ್ಲಿ ಗುರುಕಾರುಣ್ಯವ ಪಡೆದು, ಅವರೊಕ್ಕುದ ಕೊಂಡು ಕೃತಾರ್ಥರಾದಂದು ಎಲೆ ವಿಪ್ರರಿರಾ ನಿಮ್ಮ ಕುಲಂಗಳೆಲ್ಲಿಗೆ ಹೋದವು ? ಕೆಂಬಾವಿ ಭೋಗಯ್ಯಗಳ ಮನವ ಶಿವನಂದು ನೋಡಲೆಂದು ಅನಾಮಿಕ ವೇಷವ ಧರಿಸಿ ಬರಲು, ಅವರನಾರಾಧಿಸಲು, ಭೋಗತಂದೆಗಳ ನೆರೆದ ದ್ವಿಜರೆಲ್ಲರು ಪುರದಿಂದ ಪೊರಮಡಿಸಲು, ಪುರದ ಲಿಂಗಗಳೆಲ್ಲವು ಬೆನ್ನಲುರುಳುತ್ತ ಪೋಗಲು, ದುರುಳ ವಿಪ್ರರೆಲ್ಲರು ಬೆರಳ ಕಚ್ಚಿ ತ್ರಾಹಿ ತ್ರಾಹಿ, ಕರುಣಾಕರ ಮೂರ್ತಿಯೆಂದು ಶರಣುಹೊಕ್ಕು ಮರಳಿ ಬಿಜಯಂಗೈಸಿಕೊಂಡು ಬಾಹಂದು, ನಿಮ್ಮ ಕುಲಾಭಿಮಾನವೆಲ್ಲಿಗೆ ಹೋದವು ಹೇಳಿರೆ ? ಈಶನೊಲಿದು ಚೆನ್ನಯ್ಯಗಳ ಏಕೋನಿಷೆ*ಯ ಸ್ಥಾನದಾನ ಸಮರ್ಪಣಭಾವ ಬಲಿದು, ಅಭವ ಪ್ರತ್ಯಕ್ಷನಾಗಿ ಕೈದುಡುಕಿ ಸಹಭೋಜನವ ಮಾಡುವಂದು, ನಿಮ್ಮ ವೇದಾಗಮ ಶ್ರುತಿಮಾರ್ಗದಾಚಾರವೆಲ್ಲಿಗೆ ಹೋದವು ಹೇಳಿರೆ ? ಬೊಬ್ಬೂರಲ್ಲಿ ಬಿಬ್ಬಿ ಬಾಚಯ್ಯಗಳು ಹರನ ಗಣಂಗಳ ನೆರಹಿ, ಪರಮಾನಂದದಿಂ ಗಣಪರ್ವವಂ ಮಾಡಿ, ಗಣಪ್ರಸಾದಮಂ ಪುರದವೀಥಿಗಳೊಳು ಮೆರಸುತ್ತ ಬರಲು, ನೆರೆದ ವಿಪ್ರರೆಲ್ಲರು ಉಚ್ಛಿಷ್ಟಾ ಚಾಂಡಾಲವೆಂದು ದೂಷಿಸಿ, ಬಂಡಿಯಂ ಮುರಿದು ತಂಡತಂಡದ ಭಕ್ತರನೆಲ್ಲನವಗಡಿಸುತ್ತಿರಲು, ಹರಹರ ಮಹಾದೇವ ಮಹಾಪ್ರಸಾದ ಪರಂಜ್ಯೋತಿಯೆಂದು ಪ್ರಸಾದಮಂ ಕೈಯೆತ್ತಿ ಸೂಸಲು, ಪುರವೆಲ್ಲ ಬೆಂದು ಗಡ್ಡದ ಜನರೆಲ್ಲರು ಘರಿಘರಿಲ್ಲದೆ ಉರಿದು ಕರಿಯಾಗಲು, ಉಳಿದ ವಿಪ್ರರೆಲ್ಲರೂ ತ್ರಾಹಿ ತ್ರಾಹಿ, ಶರಣಾಗತ ರಕ್ಷಕರಿರಾ ಒಮ್ಮೆಗೆ ಕಾವುದೆಂದು ಧರೆಯೊಳು ಬಿದು ಬೆರಳಕಚ್ಚುವಂದು, ಅಂದು ನಿಮ್ಮ ಆಗಮಾರ್ಥದ ಕುಲಾಚಾರ ಮಾರ್ಗವೆಲ್ಲಿಗೆ ಹೋದವು ಹೇಳಿರೆ. ಸಾಕ್ಷಿ: ಸ್ತ್ರೀ ವಾಚsಧಪುರುಷಃ ಷಂಡಶ್ಚಾಂಡಾಲೋ ದ್ವಿಜವಂಶಜಃ | ನ ಜಾತಿಭೇದೋ ಲಿಂಗಾರ್ಚೇ ಸರ್ವೇ ರುದ್ರಗಣಾಃ ಸ್ಮೃತಾಃ || ಇದು ಕಾರಣ, ಶರಣರಿಗೆ ಪ್ರತಿಯಿಲ್ಲ. ಬೆರಳನೆತ್ತದೆ ಇಕ್ಕಿದ ಮುಂಡಿಗೆಯನಾ ಸರ್ವರೆತ್ತಿಕೊಳ್ಳರೆ ದ್ವಿಜರು, ಬಸವಪ್ರಿಯ ಕೂಡಲಚೆನ್ನಸಂಗಯ್ಯನೊಬ್ಬನೆಂದು.
--------------
ಸಂಗಮೇಶ್ವರದ ಅಪ್ಪಣ್ಣ
ಹೆಂಗಳೊಲವೆಂಬುದು ಅಂಗಜನ ಅರಮನೆ: ಭಂಗಂಬಡುತ್ತಿದ್ದಾರೆ ನೋಡಾ ತ್ರೆ ೈಜಗವೆಲ್ಲ ಇದು ಕಾರಣ, ನಿಮ್ಮ ಶರಣನು ಲಿಂಗನೆನಹೆಂಬ ಕಿಚ್ಚ ಹಿಡಿಯಲು ಅಂಗಜನ ಅರಮನೆ ಉರಿದು, ಭವ ಹೆರೆಹಿಂಗಿತ್ತು ನೋಡ, ಇದೇ ಲಿಂಗದೊಲವು; ನಿಜೈಕ್ಯಪದ. ಉಳಿದವೆಲ್ಲಾ ಹುಸಿ ಭ್ರಮೆ ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಏನು ಮನ ಶುದ್ಧವಾದಡೆ ಸ್ವಲ್ಪದ್ರವ್ಯ ಘನತರವಾಯಿತ್ತು ನೋಡಿರೆ ಮೋಳಿಗೆಯ ಮಾರತಂದೆಗೆ, ನುಲಿಯ ಚಂದಯ್ಯಂಗೆ ಆಯ್ದಕ್ಕಿಯ ಮಾರಣ್ಣಗಳಿಗೆ. ತನು ಮನ ಶುದ್ಧವಲ್ಲದಡೆ ಬಹಳತರ ಮಹದೈಶ್ವರ್ಯ ಸ್ವಲ್ಪವಾಗಿ ಕರಗಿ ಕೆಟ್ಟು ಹೋಗದೆ ರಾವಣಂಗೆರಿ ಇಂಗಿ ಹೋಗದೆ ದಕ್ಷಂಗೆರಿ ಉರಿದು ಉರಿದು ಹೋಗದೆ ತ್ರಿಪುರದಾನವರಿಗೆರಿ ಇದನರಿತು ತನು ಮನ ಶುದ್ಧವಾಗಲು ತೃಣ ಮಹಾಮೇರುಪರ್ವತವಪ್ಪುದಯ್ಯಾ. ಇಹದಲೂ ಮಹಾಗ್ರಾಸ, ಪರದಲೂ ಮಹಾಮುಕ್ತಿ, ಮಹಾಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಅನಾಚಾರ ಅಳವಟ್ಟು ಗುರುವನರಿಯಬೇಕು. ಅನಾಮಿಕನಾಗಿ ಲಿಂಗವ ಗ್ರಹಿಸಬೇಕು. ಸರ್ವಪಾತಕ ಪ್ರಸನ್ನನಾಗಿ ಜಂಗಮವ ಭಾವಿಸಬೇಕು. ಇಂತೀ ತ್ರಿವಿಧ ಪಾತಕಂಗಳಲ್ಲಿ ಪವಿತ್ರಂಗಳನರಿದು ಇರವಿನಲ್ಲಿ ಇರವನಿಂಬಿಟ್ಟು ಉರಿ ಎಣ್ಣೆಯ ವೇಧಿಸಿ ಉರಿದು ಯೋಗ ನಿಂದಲ್ಲಿ, ಮಾಡುವ ಕ್ರೀ ಮಾಡಿಸಿಕೊಂಬ ವಸ್ತು ಉಭಯ ನಷ್ಟವಹನ್ನಕ್ಕ ನೀ ಎನ್ನಲ್ಲಿ ನಾ ನಿಮ್ಮಲ್ಲಿ ಎಂಬನ್ನಕ್ಕ ಅದು ಭಿನ್ನಭಾವ. ಈ ಉಭಯದ ಗನ್ನ ಬೇಡ, ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನಾ, ಎನ್ನಲ್ಲಿ ತಲ್ಲೀಯವಾಗಿರು.
--------------
ಮೋಳಿಗೆ ಮಹಾದೇವಿ
ಉದುಮದಾಕ್ಷರದಲ್ಲಿ ಉರಿದು ಸಾವ ಪ್ರಾಣಿಗಳು ಅಖಂಡ ಪರಿಪೂರ್ಣಜ್ಞಾನವನವರೆತ್ತ ಬಲ್ಲರೊ? ಕುಲುಮೆಯಾಕಾರಕ್ಕೆ ಬಾಯಿಗೆ ಬಹವರೆಲ್ಲಾ ಕಾಲನ ಕಮ್ಮಟ್ಟಕ್ಕೆ ಗುರಿಯಾದರು. ತತ್ವ ತೂರ್ಯಾತೀತದಿಂದತ್ತತ್ತಲಾದ ಅಘಟಿತ ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ಎನುತಿದ್ದನು.
--------------
ಘಟ್ಟಿವಾಳಯ್ಯ
ಉರಿದು ಬೇವುದು ಉರಿಯೋ, ಮರನೋ? ಹರಿದು ಕೊರೆವುದು ನೆಲನೋ, ನೀರೊ? ನೆಲ ನೀರಂತಾದುದು ಅಂಗಲಿಂಗಸಂಬಂಧ. ಉರಿ ಮರೆದಂತಾದುದು ಪ್ರಾಣಲಿಂಗಸಂಬಂಧ. ಇಂತೀ ನಾಲ್ಕರ ಗುಣ ಉಭಯಕೂಟವಾದುದು ಶರಣಸ್ಥಲ. ಆ ಸ್ಥಲ ಸುರಧನುವಿನ ಕೆಲವಳಿಯಂತೆ, ಮರೀಚಿಕಾಜಲದ ವಳಿಯಂತೆ, ಮಂಜಿನ ರಂಜೆಯ ಝಂಝಾಮಾರುತನಂತೆ. ಆ ಸಂಗ ನಿಸ್ಸಂಗ ಐಕ್ಯಸ್ಥಲ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಪೃಥ್ವಿಶೂನ್ಯ ಅಪ್ಪುಶೂನ್ಯ ತೇಜಶೂನ್ಯ ವಾಯುಶೂನ್ಯ ಆಕಾಶಶೂನ್ಯ. ಇಂತೀ ಪಂಚಭೌತಿಕ ಶೂನ್ಯದ ಗುಣದ ವಿವರದ ಪರಿಭೇದದ ದೇವರ, ಸದ್ಯೋಜಾತ ಮುಖದಲ್ಲಿ ಉದಕ ಉರಿದು ಬೆಂಕಿ ನುಂಗಿತ್ತ ಕಂಡೆ, ನಿಧಾನ ನೆಲನ ನುಂಗಿತ್ತ ಕಂಡೆ. ಮಡಕೆ ಕರಗಿ ಬೆಣ್ಣೆ ಉಳಿಯಿತ್ತು ನೋಡಾ. ಉಳಿದುದ ಮತ್ತೆಣಿಸಲುಂಟೆ ಅಯ್ಯಾ ? ಬೀಜದೊಳಗಣ ವೃಕ್ಷ ಗಾಳಿಗೆ ಉರುಳಿ ಬೀಳುವ ತೆರನುಂಟೆ ? ಶಿಲೆಯೊಳಗಣ ಪಾವಕ ಸುಡಬಲ್ಲುದೆ ಅಯ್ಯಾ ? ಜೀವ ಸತ್ತು, ಕಾಯವಳಿದ ಮತ್ತೆ ಕಾಯ ಸತ್ತು, ಜೀವ ಉಳಿದ ಮತ್ತೆ ಕಾಬುದಿನ್ನೇನೋ ? ಕಾಯದ ಗುಣದಿಂದ ಜೀವವ ಮರೆದು ಕಾಬುದಿನ್ನೇನೊ ? ಜೀವಗುಣದಲ್ಲಿ ಕಾಯದ ಜೀವದ ಹಂಗಿನೊಳಗಿದ್ದು ಸಾವ ಲಿಂಗವ ದೇವರೆಂದು ಪೂಜಿಸುತಿಪ್ಪರು ನೋಡಾ. ಕರ್ತಾರನ ಕಮ್ಮಟದಲ್ಲಿ ಚಿಕ್ಕಮಕ್ಕಳ ಕೈಯ ಇಕ್ಕುಗೋಳಿನೊಳಗಾಯಿತ್ತು ನೋಡಾ. ನಿತ್ಯತೃಪ್ತನೆಂಬ ಲಿಂಗ ಸಿಕ್ಕಿತ್ತಯ್ಯ. ಭವದಾಶೆಗೊಡಲಾಗಿ ನಿತ್ಯತ್ವವನರಿಯದೆ, ಇಷ್ಟದೊಳಗೆ ಸಿಕ್ಕಿ ಕೆಟ್ಟರಲ್ಲ. ಜಗವೆಲ್ಲ ಕೆಟ್ಟ ಕೇಡ ನೋಡಾ. ತುಟ್ಟತುದಿಯಲ್ಲಿ ನಿಂದು ಬಿಟ್ಟೆನಯ್ಯಾ. ಮತ್ರ್ಯದ ಮಹಾಗಣಂಗಳ ಕಟ್ಟಿಗೆಯ ಹೊತ್ತು ಸತ್ತವರಿಗನ್ನೆತ್ತಣ ಮುಕ್ತಿಯೊ, ನಿಃಕಳಂಕ ಮಲ್ಲಿಕಾರ್ಜುನಾ ?
--------------
ಮೋಳಿಗೆ ಮಾರಯ್ಯ
ಇನ್ನಷ್ಟು ... -->