ಅಥವಾ

ಒಟ್ಟು 26 ಕಡೆಗಳಲ್ಲಿ , 17 ವಚನಕಾರರು , 25 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶುಕ್ಲಶೋಣಿತಾತ್ಮಸಂಬಂಧವಾದ ಮಾತಾ ಪಿತರುಗಳ ಕಾಮವಿಕಾರದಿಂದ ಪುಟ್ಟಿದ ಪಿಂಡಕ್ಕೆ, ಅಂಗೈಯೊಳಗೆ ಇರುವ ಪರಿಯಂತರವಾಗಿ ಜಡೆಯ ಕೂಸೆಂಬುವರು. ಅಂಬೆಗಾಲಲಿ ನಡೆಯುವಾಗ ಹುಡುಗನೆಂಬುವರು. ಎದ್ದು ಕಾಲಲಿ ನಡೆಯುವಾಗ ಪೋರನೆಂಬುವರು ಒಳ ಹೊರಗೆ ಓಡಾಡುವಾಗ ಹೆಸರುಗೊಂಡು ಬಾರಲೇ ಹೋಗಲೆಯೆಂಬುವರು. ಷೋಡಶವರುಷಕ್ಕೆ ತಮ್ಮಾ ಅಪ್ಪಾ ಎಂದು ಕರೆವರು. ಪಂಚವಿಂಶತಿವರುಷಕ್ಕೆ ಅಣ್ಣಾ ಅಪ್ಪಾ ಎಂದು ಕರೆವರು. ಮೂವತ್ತುವರುಷದಿಂ ಐವತ್ತುವರುಷತನಕ ಅಪ್ಪನವರು ಎಂದು ಕರೆವರು, ನೆರೆಯೊಡೆದ ಮೇಲೆ ಹಿರಿಯರೆಂಬುವರು. ಹಲ್ಲುಬಿದ್ದ ಮೇಲೆ ಮುದುಕನೆಂಬುವರು. ಬೆನ್ನುಬಾಗಿ ಕಣ್ಣು ಒಳನಟ್ಟು ಗೂಡುಗಟ್ಟಿ ಗೂರಿಗೂರಿ ಮುಕುಳಿ ನೆಲಕ್ಕೆಹತ್ತಲು ಮುದೋಡ್ಯಾ ಎಂಬುವರು. ಇಂತೀ ನಾಮಂಗಳು ಆತ್ಮಂಗೆ ದೇಹಸಂಗದಿಂದ ಪುಟ್ಟಿದವಲ್ಲದೆ ಆ ದೇಹದೊಳಗಿರುವ ಆತ್ಮನು ಕೂಸಲ್ಲ, ಪೋರನಲ್ಲ, ಹಿರಿಯನಲ್ಲ, ಮುದುಕನಲ್ಲ. ಈ ಭೇದವ ನಿಮ್ಮ ಶರಣರು ಬಲ್ಲರಲ್ಲದೆ ಈ ಲೋಕದ ಗಾದಿಮನುಜರೆತ್ತ ಬಲ್ಲರಯ್ಯಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ರುದ್ರ ದೈವವಾದಡೆ ಕಪಾಲವ ಹೊತ್ತು ತಿರುಗಲೇಕೆ? ವಿಷ್ಣು ದೈವವಾದಡೆ ದಶಾವತಾರಕ್ಕೊಳಗಾಗಲೇಕೆ? ಬ್ರಹ್ಮ ದೈವವಾದಡೆ ಶಿರವ ಹೋಗಾಡಲೇಕೆ? ಇಂತೀ ಮೂರು ಅಳಿವಿಂಗೊಳಗು. ಅನಾದಿ ಚಿಚ್ಛಕ್ತಿಯ ಅಂಶೀಭೂತ ಮಾಯಿಕ ಸಂಬಂಧ ದೇಹಿಕರು; ಅವತಾರಮೂರ್ತಿಗಳಾದ ರಣಜಗದ ದೈವಂಗಳಿವರು. ಇವರ ಭೇದ ದರ್ಪಣದ ಒಳ ಹೊರಗಿನಂತಪ್ಪ ಭೇದ. ನಿಶ್ಚಯವಂತರು ತಿಳಿದು ನೋಡಿರಣ್ಣಾ, ತಿಳಿದಡೆ ಇರವು ಉದಕದೊಳಗಣ ವಿಕಾರದಂತೆ ಬಯಲೊಳಗಣ ಮರೀಚಿಯಂತೆ ಹಿಂಗದ ವಸ್ತು ನಾರಾಯಣಪ್ರಿಯ ರಾಮನಾಥನಲ್ಲಿ ಗುಣವಿರಹಿತ ಶರಣಂಗೆ.
--------------
ಗುಪ್ತ ಮಂಚಣ್ಣ
ನಿಶ್ಚಿಂತ ನಿರಾಕಾರ ಪರಂಜ್ಯೋತಿ ಪರಮಪ್ರಕಾಶ ಆನಂದ ಸ್ವರೂಪನೆ ಜಂಗಮಲಿಂಗ. ಚೈತ್ಯರೂಪವೆ ಲಿಂಗಜಂಗಮ, ಸತ್ವರೂಪವೆ ಗುರುಲಿಂಗ. ಸತ್ತು ಚಿತ್ತಾನಂದವೆ ಸದ್ಭಕ್ತನಲ್ಲಿ ಉದಯ ಇಂತಿವರ ನೆಲೆಯ ವೇದಾಗಮ ಶಾಸ್ತ್ರ ಪುರಾಣಗಳು ಕಾಯದೆ ವಾಗತೀತಃ ಮನೋತೀತಃ ಭಾವಾತೀತಃ ಪರಃ ಶಿವಃ ಸರ್ವಶೂನ್ಯ ನಿರಾಕಾರಂ ನಿತ್ಯತ್ವಂ ಪರಮಂ ಪದಂ || ಎಂದುದಾಗಿ, ಇಂತಪ್ಪ ಶ್ರುತಿ ಒಳ ಹೊರಗಿಪ್ಪ ಜಂಗಮಲಿಂಗವೆ ಜಗತ್ಪಾವನ ಜಂತು ಜಯ ಶರಣಾಗು. ಬಸವಪ್ರಿಯ ಕೂಡಲಸಂಗಮದೇವಾ ಮಾಂ ತ್ರಾಹಿ ತ್ರಾಹಿ ಕರುಣಾಕರನೆ.
--------------
ಹಡಪದ ಅಪ್ಪಣ್ಣ
ನಡುರಂಗದ ಜ್ಯೋತಿ ಕವಲುವಟ್ಟೆಯಲ್ಲಿ ಕುಡಿವರಿದು ಎಡಬಲದಲ್ಲಿ ಬೆಳಗುವ ಪರಿಯ ನೋಡಾ. ಒಳ ಹೊರಗೆ ತಾನೊಂದೆಯಾಗಿ ಪರಿಪೂರ್ಣಬೆಳಗು ಪಸರಿಸಿ ಬೆಳಗುವ ಪರಿಯ ನೋಡಾ. ಅಖಂಡಾದ್ವಯ ವಿಶ್ವತೋಚಕ್ಷುಮಯವಾಗಿ ಬೆಳಗುವ ಪರಿಯ ನೋಡಾ. ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನೆಂಬ ಪರಂಜ್ಯೋತಿ, ಬೆಳಗುವ ಪರಿಯ ನೋಡಾ.
--------------
ಸ್ವತಂತ್ರ ಸಿದ್ಧಲಿಂಗ
ಮೂರು ಕೋಲ ಬ್ರಹ್ಮಂಗೆ ಅಳದು ಕೊಟ್ಟೆ; ನಾಲ್ಕು ಕೋಲ ವಿಷ್ಣುವಿಂಗೆ ಆಳದು ಕೊಟ್ಟೆ; ಐದು ಕೋಲ ರುದ್ರಂಗೆ ಅಳದು ಕೊಟ್ಟೆ; ಆರು ಕೋಲ ಈಶ್ವರಂಗೆ ಅಳದು ಕೊಟ್ಟೆ; ಒಂದು ಕೋಲ ಸದಾಶಿವಂಗೆ ಅಳದು ಕೊಟ್ಟೆ. ಇಂತೀ ಐವರು ಕೋಲಿನ ಒಳಗು ಹೊರಗಿನಲ್ಲಿ ಅಳಲುತ್ತ ಬಳಲುತ್ತ ಒಳಗಾದರು. ಇಂತೀ ಒಳ ಹೊರಗ ಸೋಧಿಸಿಕೊಂಡು ಅಳಿವು ಉಳಿವಿನ ವಿವರವನರಿಯಬೇಕು, ಧಾರೇಶ್ವರಲಿಂಗವನರಿವುದಕ್ಕೆ.
--------------
ಕಾಮಾಟದ ಭೀಮಣ್ಣ
ಆದಿ ಅನಾದಿಯೆಂಬವು ನಾದಕ್ಕೆ ಬಾರದ ಮುನ್ನ, ಶೂನ್ಯ ನಿಃಶ್ಶೂನ್ಯ ಸುರಾಳವೆಂಬವು ಸುಳುಹುದೋರದ ಮುನ್ನ, ಬೆಳಗು ಕತ್ತಲೆಯಿಲ್ಲದ ಮುನ್ನ, ಅಳಿವು ಉಳಿವು ಸುಳುವು ಸೂತ್ರ ಜಂತ್ರ ಜಡ ಅಜಡವಿಲ್ಲದ ಮುನ್ನ, ಕಡೆ ನಡು ಮೊದಲಿಲ್ಲದ ಅಡಿಯಲಾಧಾರ ಹಿಡಿವರೆ ರೂಹಿಲ್ಲದ ಮುನ್ನ, ಒಡೆಯನಿಲ್ಲ ಬಂಟನಿಲ್ಲ ನಡೆಯಿಲ್ಲ ನುಡಿಯಿಲ್ಲ ಬೆಡಗಿಲ್ಲ ಒಡಲಿಲ್ಲದ ಮುನ್ನ, ಪೃಥ್ವಿ, ಅಪ್ಪು, ತೇಜ, ವಾಯು, ಆಕಾಶ, ಚಂದ್ರ, ಸೂರ್ಯರು ತಲೆದೋರದ ಮುನ್ನ, ದೇವನಿಲ್ಲ ಭಕ್ತನಿಲ್ಲದ ಮುನ್ನ, ನೀನು ನಾನುಯಿಲ್ಲದ ಮುನ್ನ, ಆಕಾರ ನಿರಾಕಾರವೇನೂಯಿಲ್ಲದ ಮುನ್ನ, ತಾನು ತಾನೆಂಬ ತಲ್ಲಣವಿಲ್ಲದಂದು, ಆ ಬಟ್ಟಬಯಲ ಬ್ರಹ್ಮವೆ ಘಟ್ಟಿಯಾದ ಘನವೆಂತೆಂದಡೆ: ನಿಮ್ಮನುವ ನೀವರಿದ ಘನಮಹಿಮರು ತಿಳಿದು ನೋಡಿರಣ್ಣ. ಆ ಬಟ್ಟಬಯಲೆಂದಡಾರು ಬಸವ, ಆ ಬಸವನೆಂದಡಾರು ಬಟ್ಟಬಯಲು. ಆ ಬ್ರಹ್ಮನೆಂದಡಾರು ಬಸವ, ಬಸವನೆಂದಡಾರು ಬ್ರಹ್ಮ. ಅಂತಪ್ಪ ಬಸವನ ಆ ಮೂಲವ ಬಲ್ಲವರು ನೀವು ಕೇಳಿರಣ್ಣ. ಬಸವ ಎಂಬ ಮೂರಕ್ಷರವೆ ಮೂಲಪ್ರಣವ. ಅದೆಂತೆಂದಡೆ:ಬಯೆಂಬುದೆ ಚಿನ್ನಾದ ಆಕಾರವಾಯಿತ್ತು, ಸಯೆಂಬುದೆ ಚಿದ್ಬಿಂದುವಾಯಿತ್ತು, ಮತ್ತಂ ಬಯೆಂಬುದೆ ಅಕಾರವಾಯಿತ್ತು, ಸ ಎಂಬುದೆ ಉಕಾರವಾಯಿತ್ತು. ವಾ ಯೆಂಬುದೆ ಚಿತ್ಕಳೆಯಾಯಿತ್ತು. ಮತ್ತಂ ಬಯೆಂಬುದೆ ಆಕಾರವಾಯಿತ್ತು, ಸ ಎಂಬುದೆ ಉಕಾರವಾಯಿತ್ತು. ವಾಯೆಂಬುದೆ ಮಕರವಾಯಿತ್ತು. ಮತ್ತೆ ಬಯೆಂಬುದೆ ನಾದವಾಯಿತ್ತು, ಸಯೆಂಬುದೆ ಬಿಂದುವಾಯಿತ್ತು, ವಾಯೆಂಬುದೆ ಕಳೆಯಾಯಿತ್ತು. ಮತ್ತೆ ಬ ಎಂಬುದೆ ಗುರುವಾಯಿತ್ತು, ಸಯೆಂಬುದೆ ಅಂಗವಾಯಿತ್ತು, ವಾ ಎಂಬುದೆ ಜಂಗಮವಾಯಿತ್ತು. ಬ ಎಂಬ ನಾದವೆತ್ತಲು, ಸ ಎಂಬ ಬಿಂದು ಕೂಡಲು, ವಾಯೆಂಬ ಕಳೆ ಬೆರೆಯಲು, ಗೋಳಕಾಕಾರವಾಗಿ ಆದಿಪ್ರಣಮವೆನಿಸಿತ್ತು. ಆದಿಪ್ರಣಮ, ಅನಾದಿಪ್ರಣಮ, ಅಂತ್ಯಪ್ರಣಮವೆಂಬವು ನಮ್ಮ ಬಸವಣ್ಣನ ಸ್ಥೂಲ ಸೂಕ್ಷ್ಮ ಕಾರಣ ಕಾಣಿರೆ. ಇಂತಪ್ಪ ಬಸವಣ್ಣ ಬಯಲಬ್ರಹ್ಮವನೆ ಮೆಯಿದು, ಮೆಲುಕಿರಿದು ಗೋಮಯವಿಕ್ಕಲು ಪೃಥ್ವಿಯಾಯಿತ್ತು. ಇಂತಪ್ಪ ಬಸವಣ್ಣ ಜಲವ ಬಿಡಲು ಅಪ್ಪುಮಯವಾಯಿತ್ತು. ಇಂತಪ್ಪ ಬಸವಣ್ಣನ ತೇಜವೆ ಅಗ್ನಿಯಾಯಿತ್ತು. ಇಂತಪ್ಪ ಬಸವಣ್ಣನ ಉಚ್ಛ್ವಾಸ ನಿಶ್ವಾಸವೆ ವಾಯುವಾಯಿತ್ತು. ಇಂತಪ್ಪ ಬಸವಣ್ಣನ ಶಬ್ದವೆ ಆಕಾಶವಾಯಿತ್ತು. ಇಂತಪ್ಪ ಬಸವಣ್ಣನ ಕಂಗಳ ಬೆಳಗೆ ಚಂದ್ರ ಸೂರ್ಯರಾದರು. ಇಂತಪ್ಪ ಬಸವಣ್ಣನ ಬುದ್ಧಿಯೆ ಆತ್ಮವೆನಿಸಿ, ಅಷ್ಟತನುಮೂರ್ತಿಯೆ ತನುವೆನಿಸಿ, ಪಿಂಡ ಬ್ರಹ್ಮಾಂಡ ಕೋಟ್ಯಾನುಕೋಟಿ ಅಂಡಪಿಂಡಾಂಡಂಗಳಿಗೆ ಒಡಲಾಗಿ, ಅಡಿಮುಡಿಗೆ ತಾನೆ ಆದಿಯಾಗಿ, ಸರ್ವವೂ ನಮ್ಮ ಬಸವಣ್ಣನ ಒಡಲಲ್ಲಿ ಹುಟ್ಟುತ್ತ ಬೆಳೆಯುತ್ತ ಅಳಿವುತಿಪ್ಪವು ಕಾಣಿರೆ. ಇಂತಪ್ಪ ಸಕಲಪ್ರಾಣಿಗಳಿಗೆ ನಮ್ಮ ಬಸವಣ್ಣನ ಗೋಮಯದಲ್ಲಿ ಹುಟ್ಟಿದ ಪೃಥ್ವಿಯೆ ಪದಾರ್ಥವೆ ಆದಿಜಲದಿಂದ ಹುಟ್ಟಿದ ಉದಕವೆ ಸಾರ. ತೇಜದಿಂದ ಹುಟ್ಟಿದ ಅಗ್ನಿಯೆ ಕಳೆ. ಉಚ್ಛ್ವಾಸ ನಿಶ್ವಾಸದಿಂದ ಹುಟ್ಟಿದ ಚಂದ್ರಸೂರ್ಯರೇ ಅರಿವು ಮರವೆ. ಬುದ್ಧಿಯಿಂದ ಹುಟ್ಟಿದ ಆತ್ಮನೆ ಚೈತನ್ಯಾತ್ಮ. ಇಂತೀ ಸರ್ವಪ್ರಾಣಿಗಳಿಗೆ ನಮ್ಮ ಬಸವಣ್ಣನೆ ಆದಿ ಕಾಣಿರೇ. ಆದಿಯಲ್ಲಿ ಹುಟ್ಟಿ, ಮಧ್ಯದಲ್ಲಿ ಬೆಳೆದು, ಅಂತ್ಯದಲ್ಲಿ ಲಯವನೆಯ್ದಿದರೆ, ಮತ್ತೆ ನಿಲ್ಲುವದಕ್ಕೆ ನಮ್ಮ ಬಸವಣ್ಣನೆ ಆದಿ ಕಾಣಿರೆ. ಇಂತೀ ಒಳ ಹೊರಗೆ ಕೈಕೊಂಬರೆ, ದೇವರು ಬೇರೊಬ್ಬರುಂಟಾದರೆ ಬಲ್ಲರೆ ನೀವು ಹೇಳಿ ತೋರಿರೆ. ಅಲ್ಲದಿರ್ದರೆ ನಿಮ್ಮ ವೇದಾಗಮಶಾಸ್ತ್ರಪುರಾಣಗಳ ಕೈಯಲ್ಲಿ ಹೇಳಿಸಿರೆ. ಇಂತೀ ಅನಾದಿಸಂಸಿದ್ಧ ಬಟ್ಟಬಯಲಬ್ರಹ್ಮವೆ ಬಸವನೆಂಬುದಂ ಕಾಣುತಿರ್ದು ಕೇಳುತಿರ್ದು ಹೇಳುತಿರ್ದು ಅರಿದಿರ್ದು, ಮತ್ತೆ ಕೀಳುದೈವಂಗಳನಾರಾಧಿಸಿ ಅರ್ಚನೆ ಪೂಜೆಯ ಹಲವು ಚಂದದಲ್ಲಿ ಮಾಡಿ, ಹಲವು ಜಾತಿ ಹಲವುದರುಶನವೆನಿಸಿಕೊಂಡುಸ ಹೊಲಬುದಪ್ಪಿದಿರಿ, ಹುಲುಮನುಜರಿರಾ. ಇನ್ನಾದರೂ ಅರಿದು ನೆನದು ಬದುಕಿ, ನಮ್ಮ ಬಸವಪ್ರಿಯ ಕೂಡಲ[ಚೆನ್ನ]ಸಂಗಮದೇವನ ಶ್ರೀಪಾದಪದ್ಮವ.
--------------
ಸಂಗಮೇಶ್ವರದ ಅಪ್ಪಣ್ಣ
ತನುವಿನ ಮೇಲಿಪ್ಪುದು ಇಷ್ಟಲಿಂಗವೆಂದೆಂಬರು. ಆತ್ಮನ ನೆನಹಿನಲ್ಲಿಪ್ಪುದು ಪ್ರಾಣಲಿಂಗವೆಂದೆಂಬರು. ಇಂತೀ ಘಟಕ್ಕೂ ಆತ್ಮಕ್ಕೂ ಉಭಯ ಲಿಂಗವುಂಟೆ ? ಹೊರಗಳ ಅಸ್ಥಿ ಚರ್ಮಕ್ಕೆ ಬೇರೊಂದು ಅಸುವ ಕಲ್ಪಿಸಬಹುದೆ ? ಒಳಗಳ ಕರುಳು, ಮಜ್ಜೆ, ಮಾಂಸಕ್ಕೆ ಬೇರೊಂದು ಅಸುವಿನ ಕಲೆಯುಂಟೆ ? ಇದಕ್ಕೆ ದೃಷ್ಟವ ಕಂಡಡೆ ಇಷ್ಟಲಿಂಗ ಪ್ರಾಣಲಿಂಗವೆಂಬುದಕ್ಕೆ ಕಟ್ಟುಂಟು. ಅದು ಅಚೇತನವಪ್ಪ ನಿರವಯಕ್ಕೆ ಅಚೇತನವಪ್ಪುದೊಂದು ದೃಷ್ಟ; ನಿರವಯ ಸಾವಯವದಲ್ಲಿ ಸಂಬಂಧಿಸಿ ಕುರುಹಾದ ಭೇದ. ಆ ಕಾಯದ ಒಳ ಹೊರಗಿನ ನೋವಿನ ಭೇದದಂತೆ, ಆ ಉಭಯವನರಿವ ಆತ್ಮ ಒಂದೆಯಾಗಿ, ಇಂತೀ ಕಾಯದ ಇಷ್ಟವೆಂದು, ಆತ್ಮನ ಅರಿವೆಂದು, ಎರಡೆನಿಸುವ ಲಿಂಗವೆಂಬುದೊಂದು ಕುರುಹಿಲ್ಲ. ಅದು ಏಕ ಏವ ಸ್ವರೂಪು; ಅದು ಚಿದ್ಘನ ಸ್ವರೂಪು; ಅದು ಘಟಮಠದ ಬಯಲಿನ ಗರ್ಭದಂತೆ, ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನಲಿಂಗವು ಅತ್ಯತಿಷ್ಠದ್ದಶಾಂಗುಲನಾಗಿಪ್ಪನು.
--------------
ಮೋಳಿಗೆ ಮಹಾದೇವಿ
ಒಳಗ ಹೊರಗು ನುಂಗಿ, ಹೊರಗ ಒಳಗು ನುಂಗಿ, ಒಳ ಹೊರಗೆ ಇಲ್ಲದೆ, ಬೆಳಗಿಂಗೆ ಬೆಳಗು ನುಂಗಿ, ಬೆಳಗು ತನ್ಮಯವಾಯಿತ್ತು ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಅರಿವುದೊಂದು ವಾಯು, ಮರೆವುದೊಂದು ವಾಯು. ಉಭಯದಿಂ ತೋರುವ ವಾಯು ಒಂದೆಯಾಗಿ, ವಾಳುಕದ ಒಳ ಹೊರಗಿನ ನೀರಿನಂತೆ ವೆಗ್ಗಳಿಸಿದಡೆ ನಿಂದು ತೆಗೆದಡೆ ಅಲ್ಲಿಯ ಅಡಗುವಂತೆ, ಅರಿದು ನುಡಿದು ನಡೆದಡೆ ಜ್ಞಾನಿ, ನುಡಿದ ನುಡಿಗೆ ನಡೆಯಡಗೆ ಆತನೆ ಜೀವಭಾವಿ ಎಂದನಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಎನ್ನ ಕನ್ನಡಿ ಒಳ ಹೊರಗಿಲ್ಲ. ಎನ್ನ ಘಳಿಹ ಮುಟ್ಟನೊಳಕೊಂಡ ಚಿರ ಹಡಪಕ್ಕೆ ಅಳವಲ್ಲ. ಕತ್ತಿಯ ಬಸವಣ್ಣ ಕೊಟ್ಟ. ಕತ್ತರಿಯ ಚೆನ್ನಬಸವಣ್ಣ ಕೊಟ್ಟ. ಕಿತ್ತುಹಾಕುವ ಚಿಮ್ಮಟಿಕೆಯ ಪ್ರಭುರಾಯ ಕೂಟ್ಟ. ಮಿಕ್ಕಾದ ಎನ್ನಯ ಮುಟ್ಟ ಸತ್ಯಶರಣರು ಕೊಟ್ಟರು. ದೃಷ್ಟವ ತೋರಿ ಅಡಗುವ ಮುಕುರವ ಕೊಟ್ಟವರ ಹೇಳುವೆನು ದೃಷ್ಟ ಪ್ರಸಿದ್ಧ ಆಪ್ರತಿಮ ಪ್ರಸನ್ನ ಚೆನ್ನಬಸವಣ್ಣ ಪ್ರಿಯ ಕಮಳೇಶ್ವರಲಿಂಗವು ಎನಗೆ ದೃಷ್ಟವ ಕೊಟ್ಟು ತಾ ಬೆಳಗಿನೊಳಗಾದ!
--------------
ಶ್ರೀಗುರು ಪ್ರಭುನ್ಮುನೀಶ್ವರ
ಎಮ್ಮೆ ಕೋಣನ ಚರ್ಮವ ತೆಗೆದು, ಸುಣ್ಣವಿಲ್ಲದೆ ಆಕಾಶದ ರಂಜಣಿಗಿಯಲಿಕ್ಕಲು ಮೂರಾರಕ್ಕೆ ಹದ ಬಂದು, ಒಳ ಅಟ್ಟೆಗೆ ಮೂರುಹೊಲಿಗೆ, ಹೊರ ಅಟ್ಟೆಗೆ ಆರುಹೊಲಿಗೆ, ಉಂಗುಷ*ಕ್ಕೆ ಸೂರ್ಯನ ಹೊಲಿಗೆ, ಚಂಡಿಕೆಗೆ ಚಂದ್ರನಹೊಲಿಗೆ, ಹಿಮ್ಮಡಕ್ಕೆ ಅಗ್ನಿಯಹೊಲಿಗೆ, ಶತವೊಂದು ಬಾರ ಬಂಧಿಸಿದ ಮೆಟ್ಟು ಹಣವ ಕೊಟ್ಟೊಡೆ ಕೊಡೆ, ಮಲವ ಕೊಟ್ಟೊಡೆ ಕೊಟ್ಟು ಕಾಯಕವ ಮಾಡುತಿರ್ದನಯ್ಯಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಒಳಗೆ ಹೊರಗಾಯಿತ್ತು, ಹೊರಗೆ ಒಳಗಾಯಿತ್ತು. ತಿಳಿದು ನೋಡಲು ಒಳಹೊರಗೆಂಬುದಿಲ್ಲ ನೋಡಾ. ಒಳ ಹೊರಗು ಕೂಡಿದ ತ್ರಿಮಂಡಲದ ಬೆಡಗಿನ ತಾವರೆಯ ಒಳಗೆ ಥಳಥಳಿಸುವ ದಿವ್ಯಪೀಠದ ಮೇಲೆ ಹೊಳೆವ ಲಿಂಗವದು. ಒಳ ಹೊರಗು ಬೆಳಗುತಿಪ್ಪ ಶುದ್ಧ ಜ್ಯೋತಿ ನೋಡಯ್ಯಾ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ನಿಲುವು ತಾನೆ ನೋಡಾ.
--------------
ಸ್ವತಂತ್ರ ಸಿದ್ಧಲಿಂಗ
ಆನು ಭಕ್ತನೆಂಬೆ. ಹೊಸ ಹಚ್ಚೆ ಒಳ ಬೊಳ್ಳೆಯಾನಯ್ಯಾ. ತನುಮನಭಕ್ತಿ ಇನಿಸಿಲ್ಲ ನಿಮಗಾನು ಮಚ್ಚಲರಿಯೆ ಕಂಡಯ್ಯಾ. ಬೇರೆ ಬಲ್ಲವರಿಗೆ ಎಲೆಯ ಬಣ್ಣಿಸುವಂತೆ ನಿಮಗಾನು ಮಚ್ಚಿದರೆ ಗತಿಯೊಳವೆ? ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಅನುಪಮನೆ, ಅಪ್ರಮೇಯನೆ, ನಿತ್ಯತೃಪ್ತನೆ, ಇರವು ನಿನಗೆಲ್ಲ ಹೇಳೆಂದು ನುಡಿದು, ಪರೀಕ್ಷಿಸುವ ಇರವಿಲ್ಲ ಇತ್ತ ಬಾಯೆಂದು ಲಿಂಗತ್ರಯವ ಕರದಲ್ಲಿ ಪಿಡಿದು, ಒಳ ಹೊರಗುಯೆಂದೆನ್ನದಾನತದ ನಿಷ್ಕಲದ ಪರಿಯರುಹಿದ ಶಿವನು ಶಿಷ್ಯ ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಪತಿಮೋಹಪೂರ್ಣೆ ಅತಿ ಉನ್ನತೆಯೆನಿಸುವಳು ಒಳ ಹೊರಗೆ, ಲಿಂಗ ಮೋಹಭರಿತ ಭಕ್ತ ಗತಿಮತಿಗಂಭೀರನೆಂದುಲಿದು ಹೊರಳುವರು ಅಂತರ್ಬಾಹ್ಯಶರಣರು, ಆನು ಅಂಗೋಪಚಾರಿ, ಗುರುನಿರಂಜನ ಚನ್ನಬಸವಲಿಂಗ ಪ್ರಾಣ, ಮತ್ತೇನುಯಿಲ್ಲ.
--------------
ದೇಶಿಕೇಂದ್ರ ಸಂಗನಬಸವಯ್ಯ
ಇನ್ನಷ್ಟು ... -->