ಅಥವಾ

ಒಟ್ಟು 28 ಕಡೆಗಳಲ್ಲಿ , 16 ವಚನಕಾರರು , 25 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆದಿ ಅನಾದಿ ಎಂಬೆರಡರ ಮೂಲವನೆತ್ತಿ ತೋರಿದನಯ್ಯಾ ಬಸವಣ್ಣನು. ಆದಿ ಲಿಂಗ ಅನಾದಿ ಜಂಗಮವೆಂಬ (ಶರಣನೆಂಬ?) ಭೇದವ, ವಿವರಿಸಿ ತೋರಿದನಯ್ಯಾ ಬಸವಣ್ಣನು. ಕಾಯದ ಜೀವದ ಸಂಬಂಧವ, ಅಸಂಬಂಧವ ಮಾಡಿ ತೋರಿದನಯ್ಯಾ ಬಸವಣ್ಣನು. ಎನ್ನ ಆದಿ ಅನಾದಿಯನು ಬಸವಣ್ಣನಿಂದರಿದು ಗುಹೇಶ್ವರಲಿಂಗದಲ್ಲಿ ಸುಖಿಯಾದೆನು ಕಾಣಾ ಚನ್ನಬಸವಣ್ಣ.
--------------
ಅಲ್ಲಮಪ್ರಭುದೇವರು
ಅಂಗೈಯ ಲಿಂಗದಲ್ಲಿ ಕಂಗಳ ನೋಟ ಸ್ವಯವಾದ ಇರವ ನೋಡಾ ! ತನ್ನ ಸ್ವಾನುಭಾವದ ಉದಯದಿಂದ ತನ್ನ ತಾನರಿದ ನಿಜಶಕ್ತಿಯ ನೋಡಾ ! ಭಿನ್ನವಿಲ್ಲದರಿವು, ಮನ್ನಣೆಯ ಮಮಕಾರವ ಮೀರಿದ ಭಾವ ! ತನ್ನಿಂದ ತಾನಾದಳು ! ನಮ್ಮ ಗುಹೇಶ್ವರಲಿಂಗದಲ್ಲಿ ಸ್ವಯಲಿಂಗವಾದ ಮಹಾದೇವಿಯಕ್ಕಗಳ ನಿಲವಿಂಗೆ ನಮೋ ನಮೋ ಎನುತಿರ್ದೆನು ಕಾಣಾ ಚನ್ನಬಸವಣ್ಣ.
--------------
ಅಲ್ಲಮಪ್ರಭುದೇವರು
ಶ್ರೀಪತಿ ಶಿವಲೆಂಕ ಪಂಡಿತಾರಾಧ್ಯ ಏಕಾಂತದರಾಮ ಇಂತೀ ಪ್ರಥಮದ ಆಚಾರ್ಯರು ಇಟ್ಟ ಮತಂಗಳಿಂದ ಗುರುಸ್ಥಲ ಲಿಂಗಸ್ಥಲ ಉಭಯಮಾರ್ಗ ಆಚಾರ್ಯಸ್ಥಲ ಷಡುಸ್ಥಲ ಒಳಗಾದ ನಾನಾಸ್ಥಲಜ್ಞರುಗಳಲ್ಲಿ ವರಪ್ರಸಾದಿ ಚನ್ನಬಸವಣ್ಣ ಅವರ ಕಾರುಣ್ಯಪ್ರಸಾದ ಎನಗಾಯಿತ್ತು. ಸಂಚಿತ ಪ್ರಾರಬ್ಧ ಆಗಾಮಿಗಳಲ್ಲಿ ಉಪಚಕ್ಷು ನೀನಾಗಿ ಸಲಹಿದೆಯಲ್ಲಾ ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗದಲ್ಲಿ.
--------------
ಪ್ರಸಾದಿ ಭೋಗಣ್ಣ
ಹೃದಯದ ಕೊನೆಯ ಮೇಲೆ ಬಂದ ಪರಿಣಾಮದ ತೃಪ್ತಿಯ ಸುಖವ, ಹೃದಯದ ಮನದ ಕೊನೆಯ ಮೊನೆಯ ಮೇಲೆ, ಮಹಾಲಿಂಗಕ್ಕೆ ಸಮರ್ಪಿಸಬೇಕು. ಶ್ರೋತ್ರದ ಕೊನೆಯಲ್ಲಿ ಬಂದ ಸಂಗೀತದ ಪರಿಣಾಮವ, ಅವಧಾನದ ಶ್ರೋತ್ರದ ಕೊನೆಯ ಮೊನೆಯ ಮೇಲೆ, ಪ್ರಸಾದಲಿಂಗಕ್ಕೆ ಅರ್ಪಿಸಬೇಕು. ನೇತ್ರದ ಕೊನೆಯಲ್ಲಿ ಬಂದ ಸುಲಕ್ಷಣ ಸುರೂಪಿನ ಪರಿಣಾಮವ, ಅವಧಾನದ ಮನದ ಕೊನೆಯ ಮೊನೆಯ ಮೇಲೆ, ಶಿವಲಿಂಗಕ್ಕೆ ಸಮರ್ಪಿಸಬೇಕು. ನಾಸಿಕದ ಕೊನೆಯಲ್ಲಿ ಬಂದ ಸುಗಂಧದ ಪರಿಣಾಮವ, ಅವಧಾನದ ಮನದ ಕೊನೆಯ ಮೊನೆಯ ಮೇಲೆ, ಆಚಾರಲಿಂಗಕ್ಕೆ ಅರ್ಪಿಸಬೇಕು. ಜಿಹ್ವೆಯ ಕೊನೆಯಲ್ಲಿ ಬಂದ ಸುಸ್ವಾದುವಿನ ಪ್ರಸಾದದ ರುಚಿಯ ಪರಿಣಾಮವ, ಅವಧಾನದ ಮನದ ಕೊನೆಯ ಮೊನೆಯ ಮೇಲೆ, ಗುರುಲಿಂಗಕ್ಕೆ ಸಮರ್ಪಿಸಬೇಕು. ತ್ವಕ್ಕಿನ ಕೊನೆಯಲ್ಲಿ ಬಂದ ಸುಪರ್ಶನದ ಸುಖದ ಪರಿಣಾಮವ, ಅವಧಾನದ ಮನದ ಕೊನೆಯ ಮೊನೆಯ ಮೇಲೆ, ಜಂಗಮಲಿಂಗಕ್ಕೆ ಸಮರ್ಪಿಸಬೇಕು. ಮನದಲ್ಲಿ ತಟ್ಟುವ ಮುಟ್ಟುವ ತಾಗುನಿರೋಧವೆಲ್ಲವನೂ ಅವಧಾನದ ಮನದ ಕೊನೆಯ ಮೊನೆಯ ಮೇಲೆ, ಮಹಾಘನಲಿಂಗಕ್ಕೆ ಸಮರ್ಪಿಸಬೇಕು. ಈ ಕ್ರಮವನರಿದು ಸರ್ವಾವಧಾನಿಯಾಗಿ, ಗುರುಲಿಂಗಜಂಗಮಮುಖದಲ್ಲಿ ತನುಮನಧನವನರ್ಪಿಸಿ, ಆ ಶುದ್ಧಸಿದ್ಧಪ್ರಸಿದ್ಧಪ್ರಸಾದದ ರೂಪುರುಚಿತೃಪ್ತಿಯ ಆದಿಮಧ್ಯಾಂತವನರಿದು, ಸಾವಧಾನಭಕ್ತಿಯಿಂ ಇಷ್ಟಪ್ರಾಣಭಾವಲಿಂಗಕ್ಕರ್ಪಿಸಿ, ಮಹಾಪ್ರಸಾದಿಯಾಗಿಪ್ಪಾತ, ನಮ್ಮ ಚನ್ನಬಸವಣ್ಣ ಕಾಣಿರಯ್ಯಗಳಿರಾ. ಈ ಪ್ರಕಾರದ ಅವಧಾನ ಮನದ ಕೊನೆಯ ಮೊನೆಯ ಮೇಲೆ, ಸರ್ವಾರ್ಪಿತಕ್ರಮವನರಿದು ಪ್ರಸಾದಭೋಗಿಯಾಗಿಪ್ಪಾತನು, ನಮ್ಮ ಸಂಗನಬಸವಣ್ಣನು ಕೇಳಿರಣ್ಣಗಳಿರಾ. ಈ ಬಸವಣ್ಣನ ಪ್ರಸಾದವ ಕೊಂಡು ನಾನು ಬದುಕಿದೆನು ಕಾಣಾ, ಶುದ್ಧಸಿದ್ಧ ಪ್ರಸಿದ್ಧ ಪ್ರಸನ್ನ ಪ್ರಭುವೆ ಶಾಂತಚೆನ್ನಮಲ್ಲಿಕಾರ್ಜುನದೇವಯ್ಯಾ. ಮತ್ತೀ ಕ್ರಮವನರಿದು, ಅರ್ಪಿತಮುಖವನರಿದು ಅರ್ಪಿಸಿ, ತೃಪ್ತಿಯನೈದಬಲ್ಲ ಶರಣರ ಮಹಾತ್ಮೆಯ ನೀವೆ ಬಲ್ಲಿರಲ್ಲದೆ ನಾನೆತ್ತ ಬಲ್ಲೆನಯ್ಯಾ, ನಿಮ್ಮ ಧರ್ಮ ನಿಮ್ಮ ಧರ್ಮ ನಿಮ್ಮ ಧರ್ಮ.
--------------
ಮರುಳಶಂಕರದೇವ
ಬಸವಣ್ಣ ಎನ್ನ ತಂದೆಯಾಗಿ ಬಂದನಯ್ಯಾ, ಚನ್ನಬಸವಣ್ಣ ಎನ್ನಜ್ಜನಾಗಿ ಬಂದನಯ್ಯಾ, ಪ್ರಭುದೇವರು ಎನ್ನ ಮುತ್ತಯ್ಯನಾಗಿ ಬಂದನಯ್ಯಾ, ಈ ಮೂವರ ಮುಂದಣಾಭರಣ ಹೊದಿದುಕೊಂಡು ಗುರುನಿರಂಜನ ಚನ್ನಬಸವಲಿಂಗದೊಳಡಗಿರ್ದೆನಯ್ಯಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ನಿಚ್ಚಪ್ರಸಾದ ಅಚಲನಿರ್ವಯಲಕ್ಕೆ ಪೆಸರು. ಅಚ್ಚಪ್ರಸಾದ ಅಚಲ-ಅದ್ವಯ-ಅಭಿನ್ನ-ಅಪ್ರಮಾಣಕ್ಕೆ ಪೆಸರು. ಈ ಉಭಯಸಂಬಂಧವೇ ಸುಮಯವೆನಿಸುವುದು. ಆ ಸಮಯಪ್ರಸಾದವೆ ಸಚ್ಚಿದಾನಂದ, ಸಮ್ಯಜ್ಞಾನ, ಸತ್ಕ್ರಿಯಾ ಸದಮಲಾನಂದಕ್ಕೆ ಪೆಸರು. ಈ ವಿಚಾರವ ಶ್ರುತಿ-ಗುರು-ಸ್ವಾನುಭಾವದಿಂದರಿದು ಈ ತ್ರಿವಿಧಪ್ರಸಾದವ ಭೋಗಿಸುವ ಶರಣನೆ ನಿಜಪ್ರಸಾದ ನೋಡ. ಈ ಚತುರ್ವಿಧಪ್ರಸಾದವ ಭೋಗಿಸಬಲ್ಲಾತನೆ ಸದ್ಗುರುಲಿಂಗಜಂಗಮ ಸ್ವರೂಪು. ಈ ಸ್ವರೂಪದಿಂದ ಪಡದನುಭವಿಸಬಲ್ಲಾತನೆ ಆದಿಪ್ರಸಾದಿ, ಅಂತ್ಯಪ್ರಾದಿ, ಸೇವ್ಯಪ್ರಸಾದಿ, ಮಹಾನಿಜಪ್ರಸಾದಿ ನೋಡ. ಈತನೇ ಪಿಂಡಬ್ರಹ್ಮಾಂಡ ಸಕಲಲೋಕಂಗಳಿಗೆ, ಸಕಲತತ್ವಂಗಳಿಗೆ ಸಕಲಾಗಮಶಾಸ್ತ್ರಂಗಳಿಗೆ, ಏಕಮೇವಪರಬ್ರಹ್ಮ ಸ್ವರೂಪ ನೋಡ. ಅವರಾರೆಂದಡೆ :ಬಸವಣ್ಣ, ಚನ್ನಬಸವಣ್ಣ, ಪ್ರಭುದೇವರು, ಮರುಳಶಂಕರ, ಸಿದ್ಧರಾಮಯ್ಯ, ಅಜಗಣ್ಣ ಮುಖ್ಯವಾದ ಅಸಂಖ್ಯಾತಮಹಾಗಣಂಗಳು ನೋಡಾ, ಸಂಗನಬಸವೇಶ್ವರ.
--------------
ಗುರುಸಿದ್ಧದೇವರು
ಎನ್ನ ಸತ್ಕಿ ್ರೀ ಸಂಗನಬಸವಣ್ಣ ಎನ್ನ ಸುಜ್ಞಾನವೇ ಚನ್ನಬಸವಣ್ಣ ಈ ಎರಡರ ಏಕೀಭಾವವೇ ಪ್ರಭುವೆ ನೀವು ನೋಡಾ! ನಿಮ್ಮೆಲ್ಲರ ನೈಷೆ*ಯೇ ಮಡಿವಾಳಯ್ಯನು! ಇಂತೀ ಚತುರ್ವಿಧವೆನಗೆ ಬೇಕಾದ ಕಾರಣ ಇಷ್ಟಲಿಂಗದ ಸೇವೆ ಚರಲಿಂಗದ ದಾಸೋಹವೆಂಬುದನು ಬಸವಣ್ಣಪ್ರಿಯ ಚಂದೇಶ್ವರಲಿಂಗದಲ್ಲಿ ಚನ್ನಬಸವಣ್ಣನ ಕೈಯಲ್ಲಿ ಎನಗೆ ತಿಳುಹಿಕೊಡಾ ಪ್ರಭುವೇ!
--------------
ನುಲಿಯ ಚಂದಯ್ಯ
ಎನ್ನ ಘ್ರಾಣ ಶುದ್ಧವಾಯಿತ್ತಯ್ಯಾ, ಏಕೋರಾಮಿತಂದೆಗಳ ಧರ್ಮದಿಂದ. ಎನ್ನ ಜಿಹ್ವೆ ಶುದ್ಧವಾಯಿತ್ತಯ್ಯಾ, ಪಂಡಿತಾರಾಧ್ಯರ ಧರ್ಮದಿಂದ. ಎನ್ನ ನೇತ್ರ ಶುದ್ಧವಾಯಿತ್ತಯ್ಯಾ. ರೇವಣಸಿದ್ಧೇಶ್ವರದೇವರ ಧರ್ಮದಿಂದ. ಎನ್ನ ತ್ವಕ್ಕು ಶುದ್ಧವಾಯಿತ್ತಯ್ಯಾ, ಸಿದ್ಧರಾಮೇಶ್ವರದೇವರ ಧರ್ಮದಿಂದ. ಎನ್ನ ಹೃದಯ ಶುದ್ಧವಾಯಿತ್ತಯ್ಯಾ. ಮರುಳಸಿದ್ಧೇಶ್ವರದೇವರ ಧರ್ಮದಿಂದ ಸಕಳೇಶ ಮಾದಿರಾಜಯ್ಯಗಳ ಧರ್ಮದಿಂದ. ಎನ್ನ ಅಂತರಂಗ ಶುದ್ಧವಾಯಿತ್ತಯ್ಯಾ, ತೆಲುಗುಜೊಮ್ಮಯ್ಯಗಳ ಧರ್ಮದಿಂದ. ಎನ್ನ ಬಹಿರಂಗ ಶುದ್ಧವಾಯಿತ್ತಯ್ಯಾ, ಕೇಶಿರಾಜಯ್ಯಗಳ ಧರ್ಮದಿಂದ. ಎನ್ನ ಸರ್ವಾಂಗ ಶುದ್ಧವಾಯಿತ್ತಯ್ಯಾ, ಬಸವಣ್ಣ, ಚನ್ನಬಸವಣ್ಣ, ಪ್ರಭು, ವೀರಮಡಿವಾಳಯ್ಯಗಳ ಧರ್ಮದಿಂದ. ಐಘಟದೂರ ರಾಮೇಶ್ವರಾ, ನಿಮ್ಮ ಶರಣರ ಧರ್ಮದಿಂದ ನಾನು ಶುದ್ಧನಾದೆನಯ್ಯಾ.
--------------
ಮೆರೆಮಿಂಡಯ್ಯ
ಒಂದು ಪಟ್ಟಣದೊಳಗೆ ಛಪ್ಪನ್ನ ಗೃಹಕ್ಕೆ ಒಂದೆ ಕೀಲಾಗಿ, ಆ ಕೀಲಿನ ಸಕೀಲವನಾರಿಗೂ ಕಾಣಬಾರದೆಂದೂ_ ಭಾವಿಸಿ ಕಂಡರು ಒಂದೆ ಮನದವರು. ಉಳಿದವರೆಲ್ಲ ಆ ಕೀಲಿನೊಳಗಾಗಿ ಜೀವ ಜೀರ್ಣವಾಯಿತ್ತು. ಹದಿನೆಂಟು ಸ್ಥಾನದ ಕೀಲಗಳ ಸಂಗವನಳಿದು, ಸುಸಂಗವಾಗಿ ಶೃಂಗಾರ ಭೃಂಗಾರವಾಗದೆ ಒಂದು ಮುಖದಲ್ಲಿ ನಿಂದು ಗುಹೇಶ್ವರಾ_ನಿಮ್ಮ ಶರಣ ಚನ್ನಬಸವಣ್ಣ ಹೊರಗಾದ !
--------------
ಅಲ್ಲಮಪ್ರಭುದೇವರು
ನಾಲ್ಕು ಇಪ್ಪತ್ತುನಾಲ್ಕು ಲಕ್ಷ ಯೋಜನ ಪ್ರಮಾಣದೊಳಗೆ ಛಪ್ಪನ್ನದೇಶ ಮಂಡಲದಲ್ಲಿ ಮಿಗೆ ಒಪ್ಪುತಿರ್ಪುದೊಂದು ಸೊಬಗಿನ ಕಲ್ಯಾಣ. ಅಂತಪ್ಪ ಕಲ್ಯಾಣಮಧ್ಯದಲ್ಲಿ ಮುಂತೆಸೆವ ಸಿಂಹಪೀಠಾಗ್ರದ ಪವಳ ಪೊಸಮುತ್ತು ನೀಲಪ್ರಕಾಶದೊಬ್ಬುಳಿಯೊಳೊಪ್ಪುವ ಬಸವಣ್ಣ, ಚನ್ನಬಸವಣ್ಣ ಪ್ರಭುಸ್ವಾಮಿಗಳವರ ವರಚರಣವನರಿದು ಕರ ಮನ ಭಾವದಲ್ಲಿ ಹೆರೆಹಿಂಗದರ್ಚಿಸುವ ಪರಮ ಶಿವಯೋಗಿಯ ಪಾದಕ್ಕೆ ನಮೋ ನಮೋ ಎಂದು ಬದುಕಿದೆನಯ್ಯಾ ಗುರುನಿರಂಜನ ಚನ್ನಬಸವಲಿಂಗಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಭಕ್ತ ಮಾಹೇಶ್ವರ ಪ್ರಸಾದಿ ಈ ತ್ರಿವಿಧ ಒಂದೆ ಬೀಜ; ತಲೆವಿಡಿಯಿಲ್ಲ ಪ್ರಾಣಲಿಂಗಿ ಶರಣ ಐಕ್ಯ ಇಂತೀ ತ್ರಿವಿಧ ಒಂದೇ ಬೀಜ; ತಲೆವಿಡಿಯಿಲ್ಲ್ಲ್ಲ. ವಸ್ತು-ವಸ್ತುಕದಂತೆ, ಶಿಲೆ-ಕಾಂತಿಯಂತೆ, ಕುಸುಮ-ಗಂಧದಂತೆ, ಪತಿ-ಸತಿಯಂತೆ ಭಕ್ತಿ ಘಟ; ಅರಿವೆ ವಸ್ತುಸ್ವರೂಪವಾಗಿ ಷಡಸ್ಥಲವನವಗವಿಸಿ ನಿಂದ ಸ್ವರೂಪ; ಬಸವಣ್ಣ ಚನ್ನಬಸವಣ್ಣ ಶರಣತತಿ ಮುಂತಾದ ಸಿದ್ಧಾಂತ ಉಭಯಸ್ಥಲ ನಿರ್ವಾಹ. ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು. || 66 ||
--------------
ದಾಸೋಹದ ಸಂಗಣ್ಣ
ಪ್ರಸಾದ ಪ್ರಸಾದವೆಂದು ನುಡಿವಿರಿ; ಎಲ್ಲರಿಗೆಲ್ಲಿಹದೊ ಪ್ರಸಾದ ? ಈ ಪ್ರಸಾದದ ಭೇದವ ಬಲ್ಲರೆ ಚನ್ನಬಸವಣ್ಣ. ಈ ಪ್ರಸಾದದ ಭೇದವ ಬಲ್ಲರೆ ಬಸವಣ್ಣ. ಈ ಪ್ರಸಾದದ ಭೇದವ ಬಲ್ಲರೆ ಪ್ರಭುದೇವರು. ಈ ಪ್ರಸಾದದ ಭೇದವ ಬಲ್ಲರೆ ಮರುಳಶಂಕರದೇವ ಸಿದ್ಧರಾಮ ಅಜಗಣ್ಣ ಮುಕ್ತಾಂಗನೆ ಅಕ್ಕಮಹಾದೇವಿ. ಮಿಕ್ಕಿನ ಜಡಜೀವಜಾಳುಗಳಿಗೆಲ್ಲಿಹದೊ ಪ್ರಸಾದ ? ಗಡಿಗೆಯೊಳಗಿದ್ದಾಗ ಬೋನ, ಹರಿವಾಣಕ್ಕೆ ಬಂದಾಗ ನೈವೇದ್ಯ, ಜಂಗಮ ಮುಟ್ಟಿ ಗ್ರಹಿಸಿದಾಗಳೆ ಪ್ರಸಾದವೆಂದು ಕೊಂಡು, ತಮ್ಮ ಉದರಕ್ಕೆ ಹೊಂದಿದಲ್ಲಿಯೆ ದುರ್ಗಂಧವಾಯಿತ್ತೆಂದು, ಜಲ ಮಲವ ಬಿಟ್ಟುಬಂದೆವು ಹೊರಗಗ್ಘಣಿಯ ತನ್ನಿಯೆಂಬ ಹೊಲೆಮಾದಿಗರ ಮೂಗ ಕೊಯ್ದು, ನಿಂಬೆಹುಳಿಯ ಹಿಂಡದೆ ಮಾಣ್ಬನೆ [ನಿಮ್ಮ ಶರಣ] ಚನ್ನಯ್ಯಪ್ರಿಯ ನಿರ್ಮಾಯಪ್ರಭುವೆ ?
--------------
ಚೆನ್ನಯ್ಯ
ಎಲೆ ಸಿದ್ಧರಾಮಯ್ಯಾ, ಬಸವಣ್ಣನೆ ಶಿವನು, ಶಿವನೆ ಬಸವಣ್ಣನಾದನಯ್ಯಾ. ಬಸವಣ್ಣ ಚನ್ನಬಸವಣ್ಣ ಪ್ರಭುದೇವರು ಮಡಿವಾಳಯ್ಯ ಮುಖ್ಯವಾದ ಏಳ್ನೂರೆಪ್ಪತ್ತಮರಗಣಂಗಳ ಶ್ರೀಪಾದಕ್ಕೆ ಅಹೋರಾತ್ರಿಯಲ್ಲಿ ನಮೋ ನಮೋ ಎನುತಿರ್ದೆನಯ್ಯಾ, ಬಸವಣ್ಣಪ್ರಿಯ ಕೂಡಲಚೆನ್ನಸಂಗಮದೇವಾ.
--------------
ಸಂಗಮೇಶ್ವರದ ಅಪ್ಪಣ್ಣ
ನೀಲಲೋಚನೆಯಮ್ಮನ ಗರ್ಭದಿಂದುದಯವಾಗಿ ಬಂದವ ನಾನೆಂದು ಬಸವಣ್ಣನ ಮನೆಗೆ ಶರಣೆನ್ನಹೋದರೆ ಮಡಿವಾಳತಂದೆ, ಚನ್ನಬಸವಣ್ಣ, ಸಿದ್ಧರಾಮದೇವರು, ಪ್ರಭುಸ್ವಾಮಿ, ಅಜಗಣ್ಣಯ್ಯಗಳು ಸಹವಾಗಿ ಬಸವಣ್ಣನ ಪಾದದಲ್ಲಿ ಕಂಡು ಶರಣೆಂದು ಸುಖಿಯಾದೆನು. ಮಡಿವಾಳತಂದೆಯ ಮನೆಗೆ ಶರಣೆನ್ನ ಹೋದರೆ ಚನ್ನಬಸವಣ್ಣ, ಸಿದ್ಧರಾಮಯ್ಯ, ಪ್ರಭುದೇವರು, ಅಜಗಣ್ಣ ತಂದೆ, ಬಸವಣ್ಣ ಸಹವಾಗಿ ಮಡಿವಾಳ ತಂದೆಯ ಪಾದದಲ್ಲಿ ಕಂಡು ಶರಣೆಂದು ಸುಖಿಯಾದೆನು. ಚನ್ನಬಸವಣ್ಣನ ಮನೆಗೆ ಶರಣೆನ್ನಹೋದರೆ ಸಿದ್ಧರಾಮಯ್ಯತಂದೆ, ಪ್ರಭುದೇವರು, ಅಜಗಣ್ಣಯ್ಯಗಳು, ಬಸವರಾಜದೇವರು, ಮಡಿವಾಳಯ್ಯಗಳು ಸಹವಾಗಿ ಚನ್ನಬಸವಣ್ಣನ ಪಾದದಲ್ಲಿ ಕಂಡು ಶರಣೆಂದು ಸುಖಿಯಾದೆನು. ಸಿದ್ಧರಾಮಯ್ಯನ ಮನೆಗೆ ಶರಣೆನ್ನಹೋದರೆ ಪ್ರಭುದೇವ, ಅಜಗಣ್ಣಯ್ಯಗಳು, ಬಸವಣ್ಣ, ಮಡಿವಾಳಯ್ಯ, ಚನ್ನಬಸವಣ್ಣನವರು ಸಹವಾಗಿ ಸಿದ್ಧರಾಮಯ್ಯನ ಪಾದದಲ್ಲಿ ಕಂಡು ಶರಣೆಂದು ಸುಖಿಯಾದೆನು. ಪ್ರಭುವಿನ ಸ್ಥಲಕ್ಕೆ ಶರಣೆನ್ನಹೋದರೆ ಅಜಗಣ್ಣ, ಬಸವಣ್ಣ, ಮಡಿವಾಳ, ಚನ್ನಬಸವಣ್ಣ, ಸಿದ್ಧರಾಮಯ್ಯಗಳು ಸಹವಾಗಿ ಪ್ರಭುವಿನ ಪಾದದಲ್ಲಿ ಕಂಡು ಶರಣೆಂದು ಸುಖಿಯಾದೆನು. ಅಜಗಣ್ಣಯ್ಯನ ಮನೆಗೆ ಶರಣೆನ್ನಹೋದರೆ ಬಸವರಾಜ, ಮಡಿವಾಳತಂದೆ, ಚನ್ನಬಸವಣ್ಣ, ಸಿದ್ಧರಾಮ, ಪ್ರಭುದೇವರು ಸಹವಾಗಿ ಅಜಗಣ್ಣಯ್ಯಗಳ ಪಾದದಲ್ಲಿ ಕಂಡು ಶರಣೆಂದು ಸುಖಿಯಾದೆನು. ಇಂತು ಬಲ್ಲಂತೆ ಕಂಡು ಶರಣೆಂದು ಸುಖಿಯಾದೆನು ಗುರುನಿರಂಜನ ಚನ್ನಬಸವಲಿಂಗದಲ್ಲಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ಊರು ಕೆಟ್ಟು ಸೂರೆಯಾಡುವಲ್ಲಿ ಆರಿಗಾರೂ ಇಲ್ಲ. ಬಸವಣ್ಣ ಸಂಗಮಕ್ಕೆ, ಚನ್ನಬಸವಣ್ಣ ಉಳುವೆಗೆ, ಪ್ರಭು ಕದಳಿಗೆ, ಮಿಕ್ಕಾದ ಪ್ರಮಥರೆಲ್ಲರೂ ತಮ್ಮ ತಮ್ಮ ಲಕ್ಷಭಾವಕ್ಕೆ ಮುಕ್ತಿಯನೆಯ್ದಿಹರು. ನನಗೊಂದು ಬಟ್ಟೆಯ ಹೇಳಾ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಇನ್ನಷ್ಟು ... -->