ಅಥವಾ

ಒಟ್ಟು 24 ಕಡೆಗಳಲ್ಲಿ , 13 ವಚನಕಾರರು , 22 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಕ್ಕಿ ಬೇಳೆ ಬೆಲ್ಲ ಉಪ್ಪು ಮೆಣಸು ಅಡಕೆ ಫಲ ರಸ ದ್ರವ್ಯ ಮುಂತಾದ ದ್ರವ್ಯಕ್ಕೆ ವ್ರತವೊ ? ಮುಟ್ಟುವ ತಟ್ಟುವ ಸೋಂಕುವ ಚಿತ್ತಕ್ಕೆ ವ್ರತವೊ ? ಇವು ಬಾಹ್ಯದಲ್ಲಿ ಮಾಡುವ ಸೌಕರಿಯವಲ್ಲದೆ ವ್ರತಕ್ಕೆ ಸಲ್ಲ. ವ್ರತವಾವುದೆಂದಡೆ ತನ್ನಯ ಸ್ವಪ್ನದಲ್ಲಿ ತನಗಲ್ಲದುದ ಕಂಡಡೆ, ತಾ ಮುಟ್ಟದುದ ಮುಟ್ಟಿದಡೆ, ತಾ ಕೊಳ್ಳದುದ ಕೊಂಡಡೆ, ಆ ಸೂಕ್ಷ್ಮತನುವಿನಲ್ಲಿ ಆ ತನುವಂ ಬಿಟ್ಟು ನಿಂದುದು ವ್ರತ. ಸ್ಥೂಲತನುವಿನಲ್ಲಿ ಸರ್ವರ ನಿಂದೆಗೊಡಲಾಗದೆ, ಮಾಡಿಕೊಂಡ ನೇಮಕ್ಕೆ ಕೇಡುಬಂದಲ್ಲಿ ಆ ಅಂಗಕ್ಕೆ ಓಸರಿಸದೆ ನಿಂದುದು ಆಚಾರ. ಇಂತೀ ಅಂತರಂಗದಲ್ಲಿ ವ್ರತ, ಬಹಿರಂಗದಲ್ಲಿ ಆಚಾರ, ಇಂತೀ ಉಭಯ ಸಿದ್ಭವಾಗಿ ನಡೆವುದೆ ವ್ರತ ಆಚಾರz ಇಂತಿವನರಿದು ಮರೆದಲ್ಲಿ, ತಾ ಮಾಡಿಕೊಂಡ ಕುತ್ತಕ್ಕೆ ಹಾಡಿ ಮದ್ದನರೆದಂತೆ, ಜಗಕ್ಕೆ ಭಕ್ತನಾಗಿ ಆತ್ಮಂಗೆ ಅನುಸರಣೆಯಾದಲ್ಲಿ ಆಚಾರವೆ ಪ್ರಾಣವಾದ ರಾಮೇಶ್ವರಲಿಂಗಕ್ಕೆ ಸಲ್ಲದ ನೇಮ.
--------------
ಅಕ್ಕಮ್ಮ
ಮಾತಿನ ಗೂಢವ ನುಡಿದಡೆ, ನೀತಿವಂತರು ಅರಿಯರು. ಜ್ಞಾತೃಜ್ಞೇಯ ಭಾವವ ನುಡಿದಡೆ, ಪ್ರಖ್ಯಾತ ಆಗಮಯುಕ್ತಿ ಅವರರಿಯರು. ಇಂತಿವ ಹೇಳಿದಡೆ ಜಗದ ತೊಡಕು, ಉಳಿದಡೆ ಚಿತ್ತಕ್ಕೆ ವಿರೋಧ. ಇದರಚ್ಚುಗ ಬೇಡ, ಗುಡಿಯ ಗುಮ್ಮಟನಾಥನ ಅಗಮ್ಯೇಶ್ವರಲಿಂಗವೆ.
--------------
ಮನುಮುನಿ ಗುಮ್ಮಟದೇವ
ಮನವೇ, ನಿನ್ನ ನೆನಹು ಸಿದ್ಧಿಯಾದುದಲ್ಲಾ, ಪರಶಿವನೇ ಶ್ರೀಗುರುರೂಪಾಗಿ ನಿನ್ನ ಮನಕ್ಕೆ ಬಂದನು. ಬುದ್ಧಿಯೇ ನಿನ್ನ ಬುದ್ಧಿ ಸುಬುದ್ಧಿಯಾದುದಲ್ಲಾ, ಶ್ರೀಗುರುವೇ ಶಿವ[ಲಿಂಗ]ರೂಪಾಗಿ ನಿನ್ನ ಬುದ್ಧಿಗೆ ಬಂದನು. ಚಿತ್ತವೇ ನೀ ನಿನ್ನ ಚಿತ್ತ ನಿಶ್ಚಿಂತವಾದುದಲ್ಲಾ, ಶಿವಲಿಂಗವೇ ಜಂಗಮರೂಪಾಗಿ ನಿನ್ನ ಚಿತ್ತಕ್ಕೆ ಬಂದನು. ಅಹಂಕಾರವೇ, ನಿನ್ನಹಂಕಾರ ನಿಜವಾದುದಲ್ಲಾ, ಶ್ರೀ ಗುರು ಲಿಂಗ ಜಂಗಮ ತ್ರಿವಿಧವು ಏಕೀಭವಿಸಿ ನಿನಗೆ ಪ್ರಸನ್ನಪ್ರಸಾದವ ಕರುಣಿಸಿದನು. ಆ ಪ್ರಸಾದಲಿಂಗಸ್ವಾಯತವಾಗಿ ನಿಮಗೆ ನಾಲ್ವರಿಗೂ ಪರಿಣಾಮವಾಯಿತ್ತು ಕಾಣಾ. ಪ್ರಾಣವು ನಿನಗೆ ಲಿಂಗಪ್ರಾಣವಾದುದಲ್ಲಾ, ನಮ್ಮೆಲ್ಲರನೂ ಗಬ್ರ್ಥೀಕರಿಸಿಕೊಂಡಿಪ್ಪ ಅಂಗವೇ ಲಿಂಗವಾದುದಲ್ಲಾ. ಪ್ರಾಣವೇ ನಿನ್ನ ಸಂಗದಿಂದ ನಿನ್ನನಾಶ್ರಯಿಸಿಕೊಂಡಿಪ್ಪ ಸರ್ವತತ್ತ್ವಂಗಳೂ ಸರ್ವಪಂಚಾದ್ಥಿಕಾರಿಗಳೂ ಸರ್ವಯೋಗಿಗಳೆಲ್ಲ ಶಿವಪದಂಗಳ ಪಡೆದರಲ್ಲಾ. ಅಹಂಗೆ ಅಹುದು ಕಾಣಾ, ಪ್ರಾಣವೇ ಇದು ದಿಟ, ನೀನೇ ಮಗುಳೆ ಮಹಾಬಂಧುವಾಗಿ ನಿನಗೊಂದು ಏಕಾಂತವ ಹೇಳುವೆನು ಕೇಳು. ನಾನು ನೀನು ಅನೇಕ ಕಲ್ಪಂಗಳಲ್ಲಿಯೂ ಅನೇಕ ಯೋನಿಗಳಲ್ಲಿಯೂ ಜನಿಸಿ ಸ್ಥಿತಿ ಲಯಂಗಳನೂ ಅನುಭವಿಸಿ, ಪಾಪಪುಣ್ಯಂಗಳನುಂಡುದ ಬಲ್ಲೆ. ಅವೆಲ್ಲವನೂ ಕಳೆದುಳಿದು, ಶ್ರೀಗುರುವಿನ ಕರುಣ ಮೇರೆವರಿದು ಮಹಾಪದವಾಯಿತ್ತು. ಶ್ರೀಗುರುವಿನ ಹಸ್ತದಲ್ಲಿ ಜನನವಾಯಿತ್ತು. ಶ್ರೀಗುರುವಿನ ಕರುಣವಾಯಿತ್ತು. ಶಿವಲಿಂಗ ಸ್ವಾಯತವಾಯಿತ್ತು. ಜಂಗಮವೆಂದರಿದು ಜ್ಞಾನವಾಯಿತ್ತು. ಶ್ರೀಗುರು ಲಿಂಗ ಜಂಗಮದಿಂದ ಪ್ರಸಾದವ ಪಡೆದು ಪ್ರಸಾದವನು ಗ್ರಹಿಸಿ ಶಿವಮಹಾಮುಕ್ತಿಪದವಾಯಿತ್ತು. ಇನ್ನೊಂದ ನಾ ನಿಮ್ಮ ಬೇಡಿಕೊಂಬೆನು : ಮಾಯಾಂಗನೆ ಆಸೆ ಮಾಡಿಕೊಂಡು ಬಂದಹಳು, ಅವರಿಬ್ಬರೂ ಹೋಗಲೀಸದಿರಿ, ನಿಮಗೆ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರನಾಣೆ ಎನಗೆಯೂ ಅದೇ ಆಣೆ.
--------------
ಉರಿಲಿಂಗಪೆದ್ದಿ
ಆನಂದಸ್ಥಳದಲ್ಲಿ ಊಧ್ರ್ವ ಕಂಜಕನ್ನಿಕೆಗೆ ಇಂದುವಿನ ಕೊಡನ ಹೊತ್ತಾಡುತ್ತೈದಾಳೆ. ಮೂಲಪಟ್ಟಣದಲ್ಲಿ ಮೂವರಿಗೆ ರತಿಯ ಹುಟ್ಟಿಸುತ್ತೈದಾಳೆ. ಅಪರಪಟ್ಟಣದಲ್ಲಿ ಹಲವರಿಗೆ ಆಶ್ರಯವಾಗಿ ಐದಾಳೆ. ಮಧ್ಯಮಪಟ್ಟಣದಲ್ಲಿ ಮಹಾಮಹೀಶ್ವರರಿಗೆ ಮಹಾದಾಶ್ರಯವಾಗಿ ಐದಾಳೆ. ಇಂತು ಪಟ್ಟಣ ಹದಿನೆಂಟಕ್ಕ ಸೀಮೆ ಇಪ್ಪತ್ತೈದು, ಗ್ರಾಮ ಮೂವತ್ತಾರು ಸಂಯೋಗವೆಂಬ ನಗರಿಯಲ್ಲಿ ನಿತ್ಯಸಾನಂದನೆಂಬಾತ ಕುಳ್ಳಿದ್ದು, ಪಟ್ಟಣ ಹನೆಂಟರ ವ್ಯಾಪ್ತಿಯ ತಳವಾರರೆಂಟು ಮಂದಿಯ ಗ್ರಾಮ ಬಂಧನೆಯ ಮಾಡಲೀಯದೆ ಸುಚಿತ್ತದಿಂ ನಡಸುತ್ತೈದಾನೆ. ನೆನೆವ ಮನಸ್ಸಿನಲ್ಲಿ ಅವಿತಥವಿಲ್ಲದೆ ಚಿತ್ತವೃತ್ತಿಯನ್ನರಿತು ಮಹಾಲೋಕದಲಿಪ್ಪ ಮೂನ್ನೂರ ಮೂವತ್ತಮೂರು ಕುಲದುರ್ಗಂಗಳಂ ಪಾಟಿಸಿ ಸುಯಿಧಾನಿಯಾಗಿರುತ್ತೈದಾನೆ. ಅಜಲೋಕದಲ್ಲಿ, ಶುದ್ಧಸಂಯೋಗ ಸಂಗಮನೆಂಬ ಗೃಹದಲ್ಲಿ, ಮೂಲಕ ಮುಕ್ತಕಾ ರುದ್ರಕ ಅನುಮಿಷಕ ಆಂದೋಳಕ ವಿಚಿತ್ರಕ ಸಕಲ ಮುಕ್ತ್ಯಕ್ಕ, ಸಾನಂದ ಸತ್ಯಕ್ಕ ಇಂತಪ್ಪ ಮಹಾಸ್ತ್ರೀಯರ ಚಿತ್ತಕ್ಕೆ ಸಗುಣವಪ್ಪುದನೊಂದನೆ ಕೂಡಿ ಭೋಗಿಸುತ್ತೈದಾನೆ. ಅವರು ಸ್ತ್ರೀಯರು, ತಾ ಪುರುಷನಾಗಿ ಕೂಡುತ್ತೈದಾನೆ, ಅವಿತಥವಿಲ್ಲದೆ ಆ ಕೂಟದ ಸುಖವನು ಶಿಶು ಬಲ್ಲ, ಶಿಶುವಿನ ಜನನವನು ಅವ್ವೆ ಬಲ್ಲಳು. ಅವ್ವೆಯ ಇಚ್ಛಾ ಮಾತ್ರದಲ್ಲಿದ್ದು ಕಪಿಲಸಿದ್ಧಮಲ್ಲಿಕಾರ್ಜುನಯ್ಯನೆಂಬ ತೈಲಿಂಗಕ್ಕೆ ಮೂಲವಾದಳವ್ವೆ.
--------------
ಸಿದ್ಧರಾಮೇಶ್ವರ
ಮನದೊಡೆಯ ಮನೆಗೆ ಬಹಡೆ, ಮನ ಮನದಲಚ್ಚೊತ್ತಿದಂತಿರ್ಪುದು ನೋಡಯ್ಯಾ. ಮನಕ್ಕೆ ಮನೋಹರ, ಚಿತ್ತಕ್ಕೆ ಮನೋಹರವಾಗಿರ್ಪುದಯ್ಯಾ. ಮಹಾದಾನಿ ಸೊಡ್ಡಳನ ಬರವಿಂಗೆ, ಶುಭಸೂಚನೆ ಮೆಯಿದೋರುತ್ತಿದೆ. ಪ್ರಭುದೇವರ ಬರವನೀಗಳೆ ತೋರುವೆನಯ್ಯಾ ಸಂಗನಬಸವಣ್ಣಾ.
--------------
ಸೊಡ್ಡಳ ಬಾಚರಸ
ಭ್ರಾಮಕದಲ್ಲಿ ಮಾಡದೆ, ಆಢ್ಯತನಕ್ಕೆ ಮಚ್ಚದೆ ಸ್ತುತಿ ನಿಂದೆಗಳ ಗುರುಲಿಂಗ ಜಂಗಮದಲ್ಲಿ ವಿಚಾರಿಸದೆ ತಾ ಮಾಡುವ ದ್ರವ್ಯಕ್ಕೆ ವಿಶ್ವಾಸದ ಚಿತ್ತಕ್ಕೆ ಉಭಯವನರಿದು ಮಾಡುವ ಭಕ್ತನ ಬಾಗಿಲೆ ಕಾಲಾಂತಕ ಬ್ಥೀಮೇಶ್ವರಲಿಂಗದ ಆಶ್ರಯ.
--------------
ಡಕ್ಕೆಯ ಬೊಮ್ಮಣ್ಣ
ಹೆಸರಿಡಬಾರದ ಘನತರ ಲಿಂಗವ ಹೆಸರಿಟ್ಟು, ವಾಙ್ಮನಕ್ಕಗೋಚರವಪ್ಪ ಲಿಂಗವ ವಾಕ್ಯಕ್ಕೆ ತಂದು, `ಅತ್ಯ್ಕತಿಷ್ಠದ್ದಶಾಂಗುಲಂ' ಎಂಬ ಲಿಂಗವ ಚಿತ್ತಕ್ಕೆ ತಂದು, ಸುತ್ತಿರ್ದ ಮಾಯಾಪ್ರಪಂಚವ ಬಿಡಿಸಿದ ಬಸವಣ್ಣ; ಚಿತ್ತಶುದ್ಧನ ಮಾಡಿದ ಬಸವಣ್ಣ. ಮಲತ್ರಯಂಗಳ ಹರಿದು, ಶುದ್ಧ ತಾತ್ಪರ್ಯವರುಹಿ, ಮುಕ್ತನ ಮಾಡಿದ ಗುರು ಬಸವಣ್ಣ. ಕಪಿಲಸಿದ್ಧಮಲ್ಲಿಕಾರ್ಜುನಯ್ಯನೆನ್ನ ಕಾರಣ ಧರೆಗೆ ಬಂದ.
--------------
ಸಿದ್ಧರಾಮೇಶ್ವರ
ಉಭಯವನರಿವ ಚಿತ್ತಕ್ಕೆ ಅರಿವೆ ಇಷ್ಟಲಿಂಗಕ್ಕೆ ಗೊತ್ತು. ಉಭಯದಂಗ ಏಕೀಕರವಾದಲ್ಲಿ ಜಲ ಬಲಿದು ಶುಕ್ತಿಯಾದಂತೆ, ಕರಂಡಗರ್ಭದಲ್ಲಿ ಬಲಿದು ಕರಂಡವನೊ[ಡೆ]ದರಿದಂತೆ, ಅಂಗದಲ್ಲಿದ್ದರಿದು, ಘನಲಿಂಗವನರಿಯಬೇಕು. ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವೆಂಬ ಕುರುಹಾಯಿತ್ತು.
--------------
ಶಿವಲೆಂಕ ಮಂಚಣ್ಣ
ಸಂಜೀವನದ ನೆಳಲಲ್ಲಿ ನಿಲಲಾಗಿ ಅಂಗದ ಆಪ್ಯಾಯನವರತಂತೆ ಸಿದ್ಧರಸದಲ್ಲಿ ಪ್ರಸಿದ್ಧರಸ ಕೂಡೆ ಅದ ಹೊದ್ದಿಹ ಗುಣವೆಲ್ಲವು ಹೇಮವಾದಂತೆ ಮಾಡುವ ಮಾಟ ನಿಜವಾಗಿ, ಪೂಜಿಸುವ ದೃಷ್ಟವಾಗಿ, ಸಂಗಂಧದ ಮಂದಿರದಲ್ಲಿ ಸಂಧಿಸಿದಂತೆ ಉಭಯ ಭಾವಕ್ಕೆ ಮಾಟಕೂಟಕ್ಕೆ ಚಿತ್ತಕ್ಕೆ ಭಿನ್ನವಿಲ್ಲದೆ ನಿಂದುದು ಕಾಲಾಂತಕ ಭೀಮೇಶ್ವರಲಿಂಗವ ಸಲೆ ಸಂದಿಲ್ಲದೆಅರಿದುದು.
--------------
ಡಕ್ಕೆಯ ಬೊಮ್ಮಣ್ಣ
ಅನ್ಯಶಬ್ದಕ್ಕೆ ಜಿಹ್ವಾಬಂಧನ, ದುರ್ಗಂಧಕ್ಕೆ ನಾಸಿಕಬಂಧನ, ನಿಂದೆಗೆ ಕರ್ಣಬಂಧನ, ದೃಕ್ಕಿಂಗೆ ಕಾಮ್ಯಬಂಧನ, ಚಿತ್ತಕ್ಕೆ ಆಶಾಬಂಧನ, ಅಂಗಕ್ಕೆ ಅಹಂಕಾರ ಬಂಧನ. ಇಂತೀ ಷಡ್ಭಾವಬಂಧಂಗಳ ಹರಿದಲ್ಲದೆ ಅರುವತ್ತುನಾಲ್ಕು ಶೀಲಕ್ಕೆ ಸಂಬಂಧಿಯಲ್ಲ. ಹೀಂಗಲ್ಲದೆ ಕಾಂಬವರ ಕಂಡು, ಅಲ್ಲಿ ಒಂದ ತಂದು, ಇಲ್ಲಿ ಒಂದ ಕೊಟ್ಟಿಹೆನೆಂದು ಕಳ್ಳನ ತಾಯಂತೆ ಅಲ್ಲಿ ಇಲ್ಲಿ ಹಾರೈಸುತ್ತ ಇಂತೀ ಸಜ್ಜನಗಳ್ಳರ ಕಂಡು ಬಲ್ಲವರೊಪ್ಪುವರೆ ಕಳ್ಳರ ವ್ರತವ ? ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವು ಅವರುವನೆಲ್ಲಿಯು ಒಲ್ಲನಾಗಿ.
--------------
ಅಕ್ಕಮ್ಮ
ಕಾಜಿನ ಮಣಿ ಪಚ್ಚದಂದವಿರೆ, ಕಾಜಿನ ಮಣಿಯೆ ಪ್ರಸಿದ್ಧ. ಲೋಕದ ಮಾನವ ಯೋಗಿಯಂತಿರೆ, ಲೋಕದ ಮಾನವನೆ ಪ್ರಸಿದ್ಧ. ಬಾಹ್ಯವರ್ಣ ಜನಪ್ರಸಿದ್ಧವಲ್ಲದೆ, ಕಪಿಲಸಿದ್ಧಮಲ್ಲಿಕಾರ್ಜುನನ ಚಿತ್ತಕ್ಕೆ ಪ್ರಸಿದ್ಧವಲ್ಲ.
--------------
ಸಿದ್ಧರಾಮೇಶ್ವರ
ಸುರಗಿಯಲ್ಲಿ ತಟ್ಟುಚ್ಚಿರಿದ ಮತ್ತೆ ಧಾರೆ ಮೊನೆತಾಗಿತಲ್ಲಾ ಎಂಬೀ ಹೆಡ್ಡರ ಮಾತ ಕೇಳಲಾಗದು. ಅರಿವ ಗ್ರಹಿಸಿದ ಚಿತ್ತಕ್ಕೆ ಮರವೆಗೆ ತೆರನುಂಟೆ? ನಿಷೆ*ಯಲ್ಲಿ ನಿಷೆ* ಹುಟ್ಟಿದ ಮತ್ತೆ ನಿಷೆ*ಯಾಚರಣೆ ಘಟ್ಟಿಸದು. ಎಲ್ಲಕ್ಕೆ ಶರಣೆಂದು ಎಲ್ಲರಾಲಯದಲ್ಲಿ ಭಿಕ್ಷವ ತೆಗೆದುಕೊಂಡು, ಸಲ್ಲಲಿತ ಭಾವದಲ್ಲಿಪ್ಪ ಶರಣಂಗೆ ಗೋಣಿಯ ಮರೆಯ ಸಿಕ್ಕುದೊಡಕಿಲ್ಲ. ಕೇಟೇಶ್ವರಲಿಂಗವು ತಾನು ತಾನಾದ ಶರಣ.
--------------
ಬೊಕ್ಕಸದ ಚಿಕ್ಕಣ್ಣ
ಎನ್ನ ಚಿತ್ತಕ್ಕೆ ಆಚಾರಲಿಂಗವಾದಾತ, ಬಸವಣ್ಣ. ಎನ್ನ ಬುದ್ಧಿಗೆ ಗುರುಲಿಂಗವಾದಾತ, ಬಸವಣ್ಣ. ಎನ್ನ ಅಹಂಕಾರಕ್ಕೆ ಶಿವಲಿಂಗವಾದಾತ, ಬಸವಣ್ಣ. ಎನ್ನ ಮನಕ್ಕೆ ಜಂಗಮಲಿಂಗವಾದಾತ, ಬಸವಣ್ಣ. ಎನ್ನ ಜೀವಕ್ಕೆ ಪ್ರಸಾದಲಿಂಗವಾದಾತ, ಬಸವಣ್ಣ. ಎನ್ನ ಅರುವಿಂಗೆ ಮಹಾಲಿಂಗವಾದಾತ, ಬಸವಣ್ಣ. ಎನ್ನ ಸ್ಥೂಲತನುವಿಂಗೆ ಇಷ್ಟಲಿಂಗವಾದಾತ, ಬಸವಣ್ಣ. ಎನ್ನ ಸೂಕ್ಷ್ಮತನುವಿಂಗೆ ಪ್ರಾಣಲಿಂಗವಾದಾತ, ಬಸವಣ್ಣ. ಎನ್ನ ಕಾರಣತನುವಿಂಗೆ ತೃಪ್ತಿಲಿಂಗವಾದಾತ, ಬಸವಣ್ಣ. ಇಂತೆಂದರಿದೆನಾಗಿ, ಗವರೇಶ್ವರಲಿಂಗದಲ್ಲಿ ಆನು ಸುಖಿಯಾಗಿರ್ದೆನಯ್ಯಾ |
--------------
ಮೇದರ ಕೇತಯ್ಯ
ಆನು ಮಾಡಿದ ತಪ್ಪನೆಣಿಸಿಹೆನೆಂದಡೆ ಗಣನೆಯಿಲ್ಲ. ನಡೆದು ತಪ್ಪುವೆ, ನುಡಿದು ತಪ್ಪುವೆ, ಮಾಡಿ ತಪ್ಪುವೆ, ನೀಡಿ ತಪ್ಪುವೆ, ಅರಿದು ತಪ್ಪುವೆ, ಮರೆದು ತಪ್ಪುವೆ, ಎನ್ನ ತಪ್ಪನೊಪ್ಪವಮಾಡಿಕೊಂಬುದಲ್ಲದೆ ಚಿತ್ತಕ್ಕೆ ತರಲಾಗದು. ಕೂಡಲಸಂಗಯ್ಯನೆಂಬ ಗಂಡನೆನ್ನ ಬೆರಸಬೇಕೆಂದು ಕರೆಯಲಟ್ಟಿದನು, ಶಿವಶರಣರೆಲ್ಲರಿಗೆ ಶರಣೆಂದು ಬೀಳ್ಕೊಂಬ ತವಕದಲ್ಲಿದ್ದೆನು.
--------------
ಬಸವಣ್ಣ
ಐಕ್ಯ ಶರಣಸನ್ಮತವಾಗಿ, ಶರಣ ಪ್ರಾಣಸನ್ಮತವಾಗಿ, ಪ್ರಾಣ ಪ್ರಸಾದಸನ್ಮತವಾಗಿ, ಪ್ರಸಾದ ಮಾಹೇಶ್ವರಸನ್ಮತವಾಗಿ, ಮಾಹೇಶ್ವರ ಭಕ್ತಸನ್ಮತವಾಗಿ, ಆ ಭಕ್ತ ಸಮ್ಯಕ್ರೀ ಸನ್ನದ್ಧವಾಗಿ, ಕ್ರೀಯಿಕ್ಕಿದ ಕಿಚ್ಚಿನಂತೆ, ಅರ್ಕ ಚಂದ್ರನಂತೆ, ಆರಾರ ಚಿತ್ತಕ್ಕೆ ಹೆಚ್ಚುಕುಂದಿಲ್ಲದೆ ನಿಶ್ಚಿಂತನಾದೆಯಲ್ಲಾ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಇನ್ನಷ್ಟು ... -->