ಅಥವಾ

ಒಟ್ಟು 23 ಕಡೆಗಳಲ್ಲಿ , 18 ವಚನಕಾರರು , 23 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಚಿನ್ನ ವಿಶೇಷ ಮಣ್ಣು ಅಧಮವೆಂದಡೆ, ಅದು ನಿಂದು ಕರಗುವುದಕ್ಕೆ ಮಣ್ಣಿನ ಕೋವೆಯೆ ಮನೆಯಾಯಿತ್ತು. ಇಷ್ಟವನರಿವ ವಸ್ತುವ ನೆಮ್ಮುವುದಕ್ಕೆ ಇದೇ ದೃಷ್ಟ, ಐಘಟದೂರ ರಾಮೇಶ್ವರಲಿಂಗವನರಿವುದಕ್ಕೆ.
--------------
ಮೆರೆಮಿಂಡಯ್ಯ
ಬಣ್ಣವಿಲ್ಲದೆ ಚಿನ್ನ ನಾಮಕ್ಕರ್ಹನಾದ ಪರಿ ಇನ್ನೆಂತಯ್ಯಾ. ಹೂವೊಣಗಿ ವಾಸನೆ ಮುಡಿದ ಠಾವಿನಲ್ಲಿ ವಾಸನೆ ನಿಂದುಲ್ಲವೆ? ಅಯ್ಯಾ. ಕ್ರೀಶುದ್ಧವಾದದಲ್ಲಿ ಕಪಿಲಸಿದ್ಧಮಲ್ಲಿಕಾರ್ಜುನಂಗವು ಭಾವಶುದ್ಧವಾಗಿರ್ಪನು.
--------------
ಸಿದ್ಧರಾಮೇಶ್ವರ
ಗುರುಲಿಂಗಜಂಗಮದ ಭಕ್ತನಾದೆನೆಂದು, ಪಂಚವಿಧ ಪತಾಕಿಯ ಮುಂದೆ ನಿಲಿಸಿ ಮಾತನಾಡುವರಯ್ಯಾ. ಪಂಚಾಂಗವ ಕೇಳಿ ನಡೆದಲ್ಲಿ ಗುರುದ್ರೋಹಿಯೆಂಬೆ. ಅನ್ಯ ಸ್ಥಾವರ ಘನವೆಂದು ನಡೆದಲ್ಲಿ ಲಿಂಗದ್ರೋಹಿಯೆಂಬೆ. ಅಪಾತ್ರ ದ್ರವ್ಯನಿತ್ತಲ್ಲಿ ಜಂಗಮದ್ರೋಹಿಯೆಂಬೆ. ತದ್ದಾದಿ ಕುಷ್ಟರೋಗಕ್ಕೆ ಕಸಮಲೌಷಧ ಹಚ್ಚಿದಲ್ಲಿ ಭಸ್ಮದ್ರೋಹಿ. ಚಿನ್ನ ಬೆಳ್ಳಿ ಮೊದಲಾದ ಸಕಲಾಭರಣವ ಧರಿಸಿದಲ್ಲಿ ರುದ್ರಾಕ್ಷಿದ್ರೋಹಿ. ತೀರ್ಥಯಾತ್ರೆ ಘನವೆಂದುಕೊಂಡಲ್ಲಿ ಪಾದೋದಕದ್ರೋಹಿ. ಸಕಲರಿಂದೆ ಔಷಧವ ಭಕ್ಷಿಸಿದಲ್ಲಿ ಪ್ರಸಾದದ್ರೋಹಿ. ಯಂತ್ರ ಮಂತ್ರ ತಂತ್ರಗಳಿಂದೆ ಚರಿಸಿದಲ್ಲಿ ಪಂಚಾಕ್ಷರಿದ್ರೋಹಿ. ಇಂತು ಅಷ್ಟಾವರಣವ ಹೊತ್ತು ಅಷ್ಟದ್ರೋಹಿಯಾದ ಭ್ರಷ್ಟಭವಿಗಳಿಗೆತ್ತಣ ಮುಕ್ತಿಯಯ್ಯಾ ಗುರುನಿರಂಜನ ಚನ್ನಬಸವಲಿಂಗಾ ?
--------------
ದೇಶಿಕೇಂದ್ರ ಸಂಗನಬಸವಯ್ಯ
ನಿತ್ಯ ನಿರ್ಗುಣನು ನಿರ್ವಿಕಾರಿ ನಿರ್ವಿಕಲ್ಪ ನಿತ್ಯಾತ್ಮಕನು `ಏಕಮೇವಾ ನ ದ್ವಿತೀಯ ಪರಾಪರವೆ' ಶರಣ ಲಿಂಗವೆಂದು ತೋರಿತ್ತು ಕಾಣಾ. ಎಂದರೆ, ಆ ಅಂಗ ಲಿಂಗಕ್ಕೆ ಬ್ಥಿನ್ನವೆಲ್ಲಿಯದೋ? ಅದೆಂತೆಂದಡೆ: ಚಿನ್ನ ಬಣ್ಣದಂತೆ, ಶಿವಶಕ್ತಿಯಂತೆ, ಶುದ್ಧ ಪರಾಪರವೆ ಶರಣನು ನೋಡಾ, ಮಹಾಲಿಂಗಗುರು ಶಿವಸಿದ್ದೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಚಿನ್ನದೊಳಗಣ ಬಣ್ಣವ ಆ ಚಿನ್ನ ತನ್ನ ತಾನರಿವುದೆ? ಕಬ್ಬು ರುಚಿಸಬಲ್ಲುದೆ ತನ್ನ ತಾನೆ? ಈ ಪರಿಯಂತೆ ನರರರಿವರೆ ಕ್ರಿಯಾಜ್ಞಾನ ಭೇದವ?ರಾಮನಾಥ.
--------------
ಜೇಡರ ದಾಸಿಮಯ್ಯ
ಮನ ಮನವ ಬೆರೆಸಿ, ಸ್ನೇಹ ಬಲಿದ ಬಳಿಕ, ನಿನ್ನ ನೆನವುತ್ತಿಪ್ಪೆ ನಾನು, ನನ್ನ ನೆನೆವುತ್ತಿಪ್ಪೆ ನೀನು. ನನಗೂ ನಿನಗೂ ಏನೂ ಹೊರೆಯಿಲ್ಲ. ಇದ ನೀ ಬಲ್ಲೆ, ನಾ ಬಲ್ಲೆ, ನಿನ್ನನಗಲದಿಪ್ಪೆ ನಾನು, ನನ್ನನಗಲದಿಪ್ಪೆ ನೀನು, ಚಿನ್ನ ಬಣ್ಣದಂತೆ ಇಪ್ಪೆವಾಗಿ ಇನ್ನು ಬ್ಥಿನ್ನವುಂಟೇ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ.
--------------
ಸ್ವತಂತ್ರ ಸಿದ್ಧಲಿಂಗ
ಮಣ್ಣಿನೊಳಗೆ ಚಿನ್ನ ಹುಟ್ಟಿ ಮಣ್ಣ ಬಿಟ್ಟಂತಿರಬೇಕು, ಕಲ್ಲಿನೊಳಗೆ ಕಾಂತಿ ಹುಟ್ಟಿ [ಕಲ್ಲ] ಬಿಟ್ಟಂತಿರಬೇಕು, ಕ್ರೀ ಭಾವದಲ್ಲಿ ಅರಿವು ನೆಲೆಗೊಂಡು. ಸಾಳಿಸಸಿಯ ತುದಿಯಲ್ಲಿ ತುಷ ಮೇಲುಗಳೆದು ನಿಂದಂತೆ, ಕ್ರೀ ನಿಂದು ಅರಿವು ತಲೆದೋರಬೇಕು, ಸದಾಶಿವಮೂರ್ತಿಲಿಂಗವನರಿವುದಕ್ಕೆ.
--------------
ಅರಿವಿನ ಮಾರಿತಂದೆ
ಇಂತಪ್ಪ ದಿವ್ಯಚಕ್ರಮಂಬುಜ ಪತ್ರೆ ಚಿನ್ನ ಬೆಳ್ಳಿ ತಾಮ್ರ ಮೊದಲಾದವರ ತಗಡುಗಳೊಳಗರು ಚಂದನ ಕುಂಕುಮ ಕರ್ಪೂರ ಗೋರೋಚನಾದಿ ದ್ರವ ದ್ರವ್ಯಂಗಳಿಂ ಬರೆದು ಕಂಡಿಕೆಯಂ ಮಾಡಿ ಶಿರದೊಳ್ತಳೆಯೆ ಸಮಸ್ತ ವಶ್ಯ ರೋಗಾಪಹರಣ ಭೋಗ ಮೋಕ್ಷಾದಿಗಳಪ್ಪವೆಂದುಸಿರ್ದೆಯಯ್ಯಾ, ಪರಮ ಶಿವಲಿಂಗೇಶ್ವರ ಫಣೀಶ್ವರ ಕಂಕಣ ಕರಾ.
--------------
ಇಮ್ಮಡಿ ಮುರಿಘಾ ಗುರುಸಿದ್ಧ / ಗುರುಸಿದ್ಧಸ್ವಾಮಿ
ಚಿನ್ನದೊಳಗಣ ಬಣ್ಣದಂತೆ, ಬಣ್ಣ ನುಂಗಿದ ಬಂಗಾರದಂತೆ, ಅನ್ಯ ಭಿನ್ನವಿಲ್ಲದ ಲಿಂಗೈಕ್ಯವು. ಲಿಂಗಾಂಗವಾದಲ್ಲಿ, ಅಂಗ ಲಿಂಗವಾದಲ್ಲಿ ಹಿಂಗದ ಭಾವ ಚಿನ್ನ ಬಣ್ಣದ ತೆರ. ಇದು ಪ್ರಾಣಲಿಂಗಯೋಗ, ಸ್ವಾನುಭಾವ ಸಮ್ಮತ. ಉಭಯ ನಾಶನ ಐಕ್ಯಲೇಪ ನಾರಾಯಣಪ್ರಿಯ ರಾಮನಾಥಾ
--------------
ಗುಪ್ತ ಮಂಚಣ್ಣ
ಆ ಪರಶಿವನ ಅಷ್ಟಾಂಗದಿಂದಾದ ಬ್ರಹ್ಮಾಂಡದ ಸ್ಥಿರ ಚರ ಪ್ರಾಣಿಗಳ ಲಯವ ನೋಡಿ ಚಿಂತೆಯೊಳಗಾಗಿ, ಕಂತುಹರನ ಧ್ಯಾನವ ಮಾಡಲು, ಆ ಹರ ಗುರುರೂಪವ ತಾಳ್ದು ಬಂದು, ತನ್ನ ಚಿಂತಿಸಿದ ಸುಜ್ಞಾನಿಗಳಿಗೆ, ಮನವನೊಬ್ಬುಳಿಗೊಳಿಸುವುದಕ್ಕೆ ಕಾರಣವೆಂದು ಹೇಳಿದ ಷಣ್ಮುಖ, ಶಾಂಭವಿ, ಖೇಚರಿ, ಭೂಚರಿ, ಸಾಚರಿ, ಕುರಂಗ, ಪಾಲೋತಕ, ಹಠ, ಲಯ, ಲಂಬಿಕ, ಮೊದಲಾದ ಅನಂತ ಮುದ್ರೆಗಳ ಸಾಧಿಸಿ, ಆ ಮುದ್ರೆ ಸಾಧನದಲ್ಲಿ ಕಂಡ, ಮಾಯ, ಛಾಯ, ಅಭ್ರಛಾಯ, ಪುರುಷಛಾಯ, ಮಿಂಚಿನ ಛಾಯ, ಬಳ್ಳಿಮಿರುಪಿನ ಛಾಯ, ಆರು ವರ್ಣದ ಛಾಯ, ಮೃತ್ಯುವಿನ ಛಾಯ, ಜೀವ ಜಪ ಮರಣ ಚಿನ್ನ ಕನಸಸಂಭ್ರಮ, ಕುಂಡಲಿನೋಟ, ಘೋಷಲಂಪಟ, ಮಾನಸಪೂಜೆ, ಬೈಲವಾಣಿ, ಪಶ್ಚಿಮಕೋಣೆ, ಆತ್ಮಭೆಟ್ಟಿ, ಮಂತ್ರಪಾಠ, ಒಳಬೆಳಗು, ಹೊರಬೆಳಗು ಪರಿಪರಿಯ ಬೆರಗುಗಳ ತಿಳಿದು, ಇದೇ ನಿಜಬ್ರಹ್ಮವೆಂದು ಹೆಮ್ಮೆ ೈಸಿ, ಆಸೆವೊಡಿಯದೆ, ಕ್ಲೇಶ ಕಡಿಯದೆ, ಘಾಶಿಯಾಗಿ ಹೇಸಕಿಯೊಳಗೆ ಮುಳಿಗಿ ಮುಂದುಗಾಣದೇ ಹೋದರು ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ.
--------------
ಮಡಿವಾಳಪ್ಪ / ಕಡಕೋಳ ಮಡಿವಾಳಪ್ಪ
ಸಾಂದ್ರವಾಗಿ ಹರಗಣಭಕ್ತಿಯ ಮಾಳ್ಪನೆಂತೊ ಮಾದಲಾಂಬಿಕಾನಂದನನು ? ಸಾಂದ್ರವಾಗಿ ಬಿಜ್ಜಳನರಮನೆಯ ನ್ಯಾಯ ನೋಳ್ಪನೆಂತೊ ಮಾದರಸನ ಮೋಹದ ಮಗನು ? ಸಾಂದ್ರವಾಗಿ ಲಿಂಗಾರ್ಚನೆ ಲಿಂಗತೃಪ್ತಿ ಅನುಗೆಯ್ವನೆಂತೊ ಗಂಗಾಪ್ರಿಯ ಕೂಡಲಸಂಗನ ಶರಣ ಚಿನ್ನ ?
--------------
ಗಂಗಾಂಬಿಕೆ
ಸಕಲ ವ್ಯಾಪಾರವ ಬಿಟ್ಟು ನಿಮಗೆ ನಾನು ಮರುಳಾಗಿರ್ಪೆನಯ್ಯಾ. ಸಕಲ ವ್ಯಾಪಾರವ ಬಿಟ್ಟು ನನಗೆ ನೀವು ಮರುಳಾಗಿರ್ಪಿರಯ್ಯಾ ನಿಮಿಷ ನಿಮಿಷಾರ್ಧ ನಾ ನಿಮ್ಮನಗಲದಿರ್ಪೆನಯ್ಯಾ. ನೀವೆನ್ನ ನಿಮಿಷ ನಿಮಿಷಾರ್ಧವಗಲದಿರ್ಪಿರಯ್ಯಾ. ಚಿನ್ನ ಬಣ್ಣದಂತೆ ನಾವಿಬ್ಬರು ಕೂಡಿ ಎಂದೆಂದಿಗೂ ಅಗಲದಂತಿರ್ಪೆವಯ್ಯಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ತನ್ನ ತಾನರಿದವರು ಎಂತಿಪ್ಪರೆಂದರೆ, ಕನ್ನಡಿಗೆ ಕನ್ನಡಿಯ ತೋರಿದಂತಿಪ್ಪರು. ಕಣ್ಣಿಲಿ ನೋಡಿದರೆ ಮನದಲ್ಲಿ ಹಳಚದಂತಿಪ್ಪರು. ಕುಂದಣದ ಚಿನ್ನವ ಪುಟಕೆ ಹಾಕಿದಂತಿಪ್ಪರು. ಅದಂತಿರಲಿ, ಮುಂದೆ ಮೀರಿದ ಘನವು ಅಗಮ್ಯವಾಯಿತ್ತು. ಇದನರಿಯಬಾರದು. ಇನ್ನು ತನ್ನ ತಾನರಿಯದವರು ಎತ್ತಿಪ್ಪರೆಂದರೆ, ಕೇಳಿ. ಚಿನ್ನ ಬಣ್ಣವಿಟ್ಟಂತಿಪ್ಪರು ಕಾಣಾ. ಬಸವಪ್ರಿಯ ಕೂಡಲಚೆನ್ನಬಸವಣ್ಣಾ.
--------------
ಹಡಪದ ಅಪ್ಪಣ್ಣ
ಪ್ರಥಮದಲ್ಲಿ ನಿರಾಕಾರ ಪರವಸ್ತು ತಾನೊಂದೆ. ಆ ನಿರಾಕಾರ ಪರವಸ್ತುವಿನಲ್ಲಿ ಮಹಾಜ್ಞಾನ ಉದಯವಾಗಿ, ಆ ಮಹಾಜ್ಞಾನವೇ ಅನಾದಿ ಶರಣರೂಪಾಗಿ, ಆ ನಿರಾಕಾರ ಪರವಸ್ತುವಿಗೆ ಆಧಾರವಾಗಿ, ಚಿನ್ನ ಬಣ್ಣದ ಹಾಂಗೆ ಭಿನ್ನವಿಲ್ಲದಿಪ್ಪುದ ನೀ ಬಲ್ಲೆಯಲ್ಲದೆ ಮತ್ತಾರು ಬಲ್ಲರು ಹೇಳು?. ಆ ನಿರಾಕಾರ ಪರವಸ್ತುವೆ ನಿಃಕಲಲಿಂಗವಾದಲ್ಲಿ, ಆ ನಿಃಕಲಲಿಂಗದಿಂದ ಜ್ಞಾನಚಿತ್ತುದಯವಾಗಿ, ಆ ಜ್ಞಾನಚಿತ್ತುವೆ ಶರಣರೂಪಾಗಿ, ಆ ನಿಃಕಲಲಿಂಗಕ್ಕಾಶ್ರಯವಾಗಿ, ಚಿದಂಗಸ್ವರೂಪನಾಗಿಪ್ಪುದ ನೀ ಬಲ್ಲೆಯಲ್ಲದೆ ಮತ್ತಾರು ಬಲ್ಲರು ಹೇಳು?. ಆ ನಿಃಕಲಜ್ಞಾನಚಿತ್ತುವೆ ಬಲಿದು ಚಿಚ್ಛಕ್ತಿಯಾದಲ್ಲಿ, ಆ ಚಿಚ್ಛಕ್ತಿಯ ಸಂಗದಿಂದ ನೀನು ಮಹಾಲಿಂಗವಾದಲ್ಲಿ, ಆ ಶಾಂತ್ಯತೀತೋತ್ತರೆಯೆಂಬ ಕಲೆಯಿಂದ ನಾನುದಯವಾಗಿ, ಆ ಮಹಾಲಿಂಗಕ್ಕಾಶ್ರಯವಾಗಿ, ಐಕ್ಯನಾಗಿಪ್ಪುದ ನೀ ಬಲ್ಲೆಯಲ್ಲದೆ ಮತ್ತಾರು ಬಲ್ಲರು ಹೇಳು? ಆ ಚಿಚ್ಛಕ್ತಿಯಿಂದ ಪರಶಕ್ತಿ ಉದಯವಾಗಿ, ಆ ಪರಶಕ್ತಿಯ ಸಂಗದಿಂದ ನೀನು ಪ್ರಸಾದಲಿಂಗವಾದಲ್ಲಿ, ಆ ಶಾಂತ್ಯತೀತೆಯೆಂಬ ಕಲೆಯಲ್ಲಿ ನಾನುದಯವಾಗಿ, ಆ ಪ್ರಸಾದಲಿಂಗಕ್ಕಾಶ್ರಯವಾಗಿ, ಶರಣರೂಪಾಗಿಪ್ಪುದ ನೀ ಬಲ್ಲೆಯಲ್ಲದೆ ಮತ್ತಾರುಬಲ್ಲರು ಹೇಳು? ಆ ಪರಶಕ್ತಿಯಿಂದ ಆದಿಶಕ್ತಿ ಉದಯವಾಗಿ, ಆ ಆದಿಶಕ್ತಿಯ ಸಂಗದಿಂದ ನೀನು ಶುದ್ಧ ಸುಜ್ಞಾನವೆಂಬ ಜಂಗಮಲಿಂಗವಾದಲ್ಲಿ ಆ ಶಾಂತಿಯೆಂಬ ಕಲೆಯಲ್ಲಿ ನಾನುದಯವಾಗಿ, ಆ ಜಂಗಮಲಿಂಗಕ್ಕಾಶ್ರಯವಾಗಿ, ಪ್ರಾಣಲಿಂಗಿಯಾಗಿಪ್ಪುದ ನೀ ಬಲ್ಲೆಯಲ್ಲದೆ ಮತ್ತಾರು ಬಲ್ಲರು ಹೇಳು?. ಆ ಆದಿಶಕ್ತಿಯಿಂದ ಇಚ್ಛಾಶಕ್ತಿ ಉದಯವಾಗಿ, ಆ ಇಚ್ಛಾಶಕ್ತಿಯ ಸಂಗದಿಂದ ನೀನು ದಿವ್ಯ ಶಿವಲಿಂಗಾಕಾರವಾದಲ್ಲಿ ಆ ವಿದ್ಯೆಯೆಂಬ ಕಲೆಯಲ್ಲಿ ನಾನುದಯವಾಗಿ, ಆ ಶಿವಲಿಂಗಕ್ಕಾಶ್ರಯವಾಗಿ, ಪರಮ ಪ್ರಸಾದಿಯಾಗಿಪ್ಪುದ ನೀ ಬಲ್ಲೆಯಲ್ಲದೆ ಮತ್ತಾರು ಬಲ್ಲರು ಹೇಳು?. ಆ ಇಚ್ಛಾಶಕ್ತಿಯಿಂದ ಸುಜ್ಞಾನಶಕ್ತಿ ಉದಯವಾಗಿ ಆ ಸುಜ್ಞಾನಶಕ್ತಿಯ ಸಂಗದಿಂದ ನೀನು ಗುರುಲಿಂಗವಾದಲ್ಲಿ ಆ ಪ್ರತಿಷೆ*ಯೆಂಬ ಕಲೆಯಲ್ಲಿ ನಾನುದಯವಾಗಿ, ಆ ಗುರುಲಿಂಗಕ್ಕಾಶ್ರಯವಾಗಿ, ಮಹೇಶ್ವರನಾಗಿಪ್ಪುದ ನೀ ಬಲ್ಲೆಯಲ್ಲದೆ ಮತ್ತಾರು ಬಲ್ಲರು ಹೇಳು?. ಆ ಸುಜ್ಞಾನಶಕ್ತಿಯಿಂದ ಕ್ರಿಯಾಶಕ್ತಿ ಉದಯವಾಗಿ, ಆ ಕ್ರಿಯಾಶಕ್ತಿಯ ಸಂಗದಿಂದ ನೀನು ಆಚಾರಲಿಂಗವಾದಲ್ಲಿ ಆ ನಿವೃತ್ತಿಯೆಂಬ ಕಲೆಯಲ್ಲಿ ನಾನುದಯವಾಗಿ, ಆ ಆಚಾರಲಿಂಗಕ್ಕಾಶ್ರಯವಾಗಿ, ಸದ್ಭಕ್ತನಾಗಿಪ್ಪುದ ನೀ ಬಲ್ಲೆಯಲ್ಲದೆ ಮತ್ತಾರು ಬಲ್ಲರು ಹೇಳು?. ನೀ ನಿನ್ನ ಸ್ವಲೀಲೆಯಿಂದ ನಾನಾರೂಪವಾದಲ್ಲಿ ನಿನ್ನ ಬೆಂಬಳಿವಿಡಿದು ನಾನು ನಾನಾರೂಪಗುತ್ತಿರ್ದೆನಯ್ಯಾ. ನೀನಾವಾವ ರೂಪಾದೆ ನಾನು ಆ ಆ ರೂಪಾಗುತ್ತಿರ್ದೆನಯ್ಯಾ. ಇದು ಕಾರಣ, ಶರಣ ಲಿಂಗವೆರಡಕ್ಕೂ ಭಿನ್ನವಿಲ್ಲವೆಂಬುದನು ಸ್ಥಾನುಭಾವವಿವೇಕದಿಂದ ಅರಿದುದು ಅರುಹಲ್ಲದೆ ಆಗಮಯುಕ್ತಿಯಿಂದ ಅರಿದುದು ಅರುಹಲ್ಲ. ಅದೇನುಕಾರಣವೆಂದೊಡೆ; ಶ್ರುತಜ್ಞಾನದಿಂದ ಸಂಕಲ್ಪಭ್ರಾಂತಿ ತೊಲಗದಾಗಿ, ಈ ಷಡುಸ್ಥಲಮಾರ್ಗವನು ದ್ವೆ ೈತಾದ್ವೆ ೈತದೊಳಗೆ ಕೂಡಲಿಕ್ಕಿ ನುಡಿಯಲಾಗದು. ಈ ಲಿಂಗಾಂಗಸಂಬಂಧ ಸಮರಸೈಕ್ಯವ ತಿಳಿದ ಬಳಿಕ ನಿತ್ಯನಿರಂಜನ ಪರತತ್ವವು ತಾನೆ ನೋಡಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಚಿನ್ನದ ಗಿರಿಯಲ್ಲಿ ಚಿನ್ಮಯಮೂರ್ತಿಯ ಕಂಡೆನಯ್ಯ. ಚಿನ್ನ ಕಾರ್ಮಿಕವಲ್ಲ; ಚಿನ್ಮಯ ಮೂರ್ತಿಯಲ್ಲ; ಇದರನ್ವಯವೇನು ಹೇಳಾ ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಇನ್ನಷ್ಟು ... -->