ಅಥವಾ

ಒಟ್ಟು 42 ಕಡೆಗಳಲ್ಲಿ , 19 ವಚನಕಾರರು , 36 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

`ಸರ್ವಂ ಶಿವಮಯಂ ಜಗತ್' ಎಂಬುದ ತಿಳಿಯದೆ ನುಡಿದವರ ನುಡಿಯಂತೆ ನಡೆಯದಿರಾ ಮನವೆ. `ಸರ್ವಂ ಶಿವಮಯಂ ಜಗತ್' ಎಂದು ತಿಳಿದು ತಿಳಿದು ಸುಖಿಯಾಗು ಮನವೆ. ಪಿಂಡ ಬ್ರಹ್ಮಾಂಡಕ್ಕೆ `ತಿಲಷೋಡಶಭಾಗೇನ ಭೇದೋ ನಾಸ್ತಿ ವರಾನನೇ' ಎಂಬುದು ಪುಸಿಯಲ್ಲ ನೋಡಾ ಮನವೆ. ಈಶ್ವರನ ಪಂಚಮುಖಂದ ಪಂಚತತ್ವಗಳುದಯಿಸಿದವು. ಈ ತತ್ವಂಗಳೊಂದೊಂದು ಕೂಡಿ ತನ್ನ ಚೈತನ್ಯ ಬೆರಸಿದಲ್ಲಿ, ಪಿಂಡ ಬ್ರಹ್ಮಾಂಡವೆನಿಸಿತ್ತು ನೋಡಾ ಮನವೆ. ತನ್ನ ತಾನರಿದು ನೋಡಿದಡೆ, `ಸರ್ವಂ ಶಿವಕಪಿಲಸಿದ್ಧಮಲ್ಲಿಕಾರ್ಜುನಮಯಂ ಜಗತ್' ಎಂದರಿದು ಬಂದಿತ್ತು ನೋಡಾ ಮನವೆ.
--------------
ಸಿದ್ಧರಾಮೇಶ್ವರ
ಇನ್ನು ವಿಭೂತಿಸ್ಥಲವದೆಂತೆಂದಡೆ : ಶ್ರೀ ವಿಭೂತಿಯು ಮೊದಲಲ್ಲಿ ಗೂಢನಿರ್ನಾಮವಾಗಿದ್ದಿತ್ತು. ಎರಡನೆಯಲ್ಲಿ ಜ್ಞಾನಸ್ವರೂಪವಾಗಿದ್ದುದು, ಮೂರನೆಯಲ್ಲಿ ಜ್ಞಾನವಹನವಾಗಿದ್ದುದು. ನಾಲ್ಕನೆಯಲ್ಲಿ ಭಸ್ಮವಾಗಿ ಧರಿಸಿದರು ಶ್ರೀ ವಿಭೂತಿಯ. ಇದಕ್ಕೆ ಈಶ್ವರ ಉವಾಚ : ``ಪ್ರಥಮಂ ಗೂಢನಿರ್ನಾಮಂ ದ್ವಿತೀಯಂ ಚಿತ್ಸ್ವರೂಪಕಂ | ತೃತೀಯಂ ಚಿದ್ವಿಲಾಸಂ ಚ ಚತುರ್ಥಂ ಭಸ್ಮಧಾರಣಂ || ಅನಾದಿ ಶಾಶ್ವತಂ ನಿತ್ಯಂ ಚೈತನ್ಯಂ ಚಿತ್ಸ್ವರೂಪಕಂ | ಚಿದಂಗಂ ವೃಷಭಾಕಾರಂ ಚಿದ್ಭಸ್ಮಂ ಲಿಂಗಧಾರಣಂ ||'' ಇಂತೆಂದುದಾಗಿ, ಈ ಮಹಾಭಸ್ಮಕ್ಕೆ ನಮಸ್ಕಾರ ನೋಡಾ. ``ಭಸ್ಮ ಜ್ಯೋತಿಸ್ವರೂಪಾಯ ಶಿವಾಯ ಪರಮಾತ್ಮನೇ | ಷಟ್ತ್ರಿಂಶತತ್ವಬೀಜಾಯ ನಮಃ ಶಾಂತಾಯ ತೇಜಸೇ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಅನಾದಿಶಾಶ್ವತಂ ನಿತ್ಯಂ ಚೈತನ್ಯಂ ಚಿತ್‍ಸ್ವರೂಪಕಂ ಚಿದಂಗಂ ವೃಷಭಾಕಾರಂ ಚಿದ್ಭಸ್ಮ ಲಿಂಗಧಾರಣಂ ಪ್ರಥಮಂ ಗೂಢನಿರ್ನಾಮ ದ್ವಿತೀಯಂ ಚಿತ್ಸ್ವರೂಪಕಂ ತೃತೀಯ ಚಿದ್ವಿಲಾಸಂ ಚ ಚತುರ್ಥಂ ಭಸ್ಮಧಾರಣಂ ರೋಮೇ ರೋಮೇ ಚ ಲಿಂಗಂ ತು ವಿಭೂತಿಧೂನಾದ್ಭವೇತ್ ಎಂದುದಾಗಿ, ಬಸವ ಬಸವಾ ಎನುತಿಪ್ಪವರೆಲ್ಲರು ಬಸವನ ಘನವನಾರೂ ಅರಿಯರಲ್ಲಾ. ಅನಾದಿಪರಶಿವನಲ್ಲಿ ಅಂತರ್ಗತಮಾಗಿರ್ದ ಮಹಾಪ್ರಕಾಶವೇ ಬಹಿಷ್ಕರಿಸಿ ಚಿತ್ತು ಎನಿಸಿತ್ತು. ಆ ಚಿತ್ತು ಚಿದಂಗಬಸವ. ಆ ಚಿದಂಗಬಸವನಿಂದುದಯಿಸಿದ ಚಿದ್ವಿಭೂತಿಯನೊಲಿದು ಧರಿಸಿದ ಶರಣರೆಲ್ಲರೂ ಜ್ಯೋತಿರ್ಮಯಲಿಂಗವಪ್ಪದು ತಪ್ಪುದು ಕಾಣಾ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಜಲದೊಳಗಣ ಬೊಬ್ಬುಳಿಕೆ ಜಲ ಘಟ್ಟಿಗೊಂಡಲ್ಲಿ ಅಡಗುವ ತೆರನ ಬಲ್ಲಡೆ ಬಲ್ಲೆ. ಮಹೇಂದ್ರ ಜಾಲವು ಮರೀಚಿಕಾ ಜಲವು. ಎಲ್ಲಿ ಹುಟ್ಟಿ ಎಲ್ಲಿ ಅಡಗುವ ತೆರನ ಬಲ್ಲಡೆ ಬಲ್ಲೆ. ಮಹಾನಾದ ಸುನಾದ, ಸುನಾದಕ್ಕೆ ಕೈಗೈದು ಆ ಸುನಾದವು ಮಹಾನಾದದೊಡನೆ ಮಥನಿಸಿ ಇವೆರಡರ ಪ್ರಾಣ ಚೈತನ್ಯ ಒಂದಾಗಿ ಹುಟ್ಟಿ ಅಡಗುವ ಭೇದವ ಬಲ್ಲೆನಾಗಿ, ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ಎಂದುದಾಗಿ.
--------------
ಘಟ್ಟಿವಾಳಯ್ಯ
ರೂಪು ಲಿಂಗವೋ ನಿರೂಪು ಲಿಂಗವೋ ಎಂಬುದ ವಿವರಿಸಿ ತಿಳಿದು ನೋಡೆ, ರೂಪು ಲಿಂಗದಲ್ಲಿ ತ್ರಿಭುವನಾಧಾರವಾದ ಶಿವ ಕಲಾ ರೂಪ ಚೈತನ್ಯ. ನಿರೂಪಲಿಂಗವ ಭಾವಿಸಿ, ಧ್ಯಾನಪೂಜೆಯ ಮಾಡಿ; ಕೋಟಿ ಸೂರ್ಯ ಪ್ರಕಾಶ ಚಿದ್ರೂಪ ಶಿವಲಿಂಗವ ನೆನಹಿನ ಕೊನೆಯ ಮೇಲಿರಿಸಿ ನೆನೆದು ನಿತ್ಯ ತೃಪ್ತನಾದ ಪರಾನಂದರೂಪ ಶಿವಯೋಗಿಯ ಯೋಗನಿದ್ರಾಮುದ್ರೆಯಲ್ಲಿ ತಾನಿದಿರೆಂಬುದ ಮರೆದು ಬ್ಥಿನ್ನವಿಲ್ಲದೆ ಶಿವಸುಖದೊಳಗಿಹನು ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ, ನಿಮ್ಮ ಶರಣನು.
--------------
ಸ್ವತಂತ್ರ ಸಿದ್ಧಲಿಂಗ
ಇನ್ನು ಆ ಶುಕ್ಲ ಸ್ತ್ರೀ ಪುರುಷರ ಸಂಯೋಗದಿಂದ ಮಾರುತ ನೂಂಕಲು ಚೈತನ್ಯ ಬೀಜವು ಆ ಶುಕ್ಲವು ಸ್ತ್ರೀಯ ಶೋಣಿತದಲ್ಲಿ ಬಿದ್ದು ಏಕೀಭೂತವಾಯಿತ್ತು ನೋಡಾ. ಇದಕ್ಕೆ ಈಶ್ವರ ಉವಾಚ : ``ಚೈತನ್ಯಂ ಬೀಜರೂಪಂ ಚ ಶುಕ್ಲಂ ರಕ್ತಂ ತಥಾ ಜಲಂ | ಏಕೀಭೂತಂ ಯಥಾ ಕಾಲೇ ತಥಾ ಕಾಲೇ ಪ್ರರೋಪತೇ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಪ್ರಣವಮಂತ್ರರೂಪ ಪರಶಿವನ ಚೈತನ್ಯ ಎಲ್ಲಾ ಮಂತ್ರಂಗಳಿಗೆ ಚೈತನ್ಯವು. ಎಲ್ಲಾ ತಂತ್ರಂಗಳಿಗೆ ಚೈತನ್ಯವು. ಓಂಕಾರಂ ವ್ಯಾಪ್ತಿ ಸರ್ವತ್ರಂ ಓಂಕಾರಂ ಗೋಪ್ಯ ಮಾನವಂ | ಓಂಕಾರಂ ನಾದರೂಪಂ ಚ ಓಂಕಾರಂ ಮಂತ್ರರೂಪಕಂ || ಎಂದು, ಎಲ್ಲಾ ವೇದಂಗಳಿಗೆ ತಾನೆ ಚೈತನ್ಯವು. ಇಂತಲ್ಲದಡೆ, ಎಲ್ಲಿಹದು ಜ್ಞಾನಸಾಮಥ್ರ್ಯವು. ಅದು ಕಾರಣ, ಮಂತ್ರವೆ ಅವಯವವು ರೇಕಣ್ಣಪ್ರಿಯ ನಾಗಿನಾಥಂಗೆ.
--------------
ಬಹುರೂಪಿ ಚೌಡಯ್ಯ
ಒಂದು ಎರಡಹುದೆ ? ಎರಡು ಒಂದಹುದೆ ? ಒಂದು ಒಂದೇ, ಎರಡು ಎರಡೇ. ಅದು ಕಾರಣ, ಶಿವನು ತನ್ನ ಲೀಲಾಕಾರಣವಾಗಿ ಮಾಯಾ ನಿರ್ಮಿತವಂ ಮಾಡಿ, ಆ ಮಾಯಾರಚನೆಯಿಂದಾದ ಬ್ರಹ್ಮಾಂಡ ಸಂದೋಹ, ಹರಿ ವಿರಿಂಚಿ ಸುರಪತಿ ಸುರಾಸುರರು ನರನಿಕರ, ಖಗಮೃಗ ಜೀವರಾಶಿಗಳೆಲ್ಲವೂ ಶಿವನಿಂದಲಾಗಿ, ಶಿವನಿಂದ ಹೊರೆಯಿಸಿಕೊಂಡು, ಶಿವನಿಂದವೆ ಹೋದವೆಂದಡೆ, ಅವರ ಆಗು ಹೋಗು ಇರವು ಹೋಗಿನೊಳಗೆ ಲಯ ಗಮನ ಸ್ಥಿತಿ ಶಿವಂಗುಂಟೆ, ಎಲೆ ಮರುಳಗಳಿರಾ ? ಗಗನದಲ್ಲಿ ತೋರಿದ ಮೇಘವು ಗಗನದಲ್ಲಿ ಅಡಗಿದವೆಂದಡೆ, ಆ ಗಗನ ತಾ ಮೇಘವೆ ? ತನ್ನಾದ್ಥೀನಶಕ್ತಿದಂಡದಿಂ ಕುಂಬಾರ ಚಕ್ರವ ತಿರುಗಿಸಲು, ಆ ಚಕ್ರಭ್ರಮಣ ಚೈತನ್ಯವು ಆ ಕುಂಬಾರನೆ, ಮರುಳುಗಳಿರಾ ? ಆ ಚೈತನ್ಯ ಅಡಗುವುದೆ ? ನಿಲ್ಲು ಮಾಣು. ಬಿಲ್ಲ ನಾರಿಗೆ ಅಂಬಂ ಸಂಧಾನಿಸಿ ಎಸೆಯಲಾ, ಅಂಬು ಹರಿದ ಚೈತನ್ಯ ಬಿಲ್ಲು ಕಾರಣವೆ ? ಅಲ್ಲ , ನಿಲ್ಲು , ಮಾಣು. ಇವೆಲ್ಲವು ಚೈತನ್ಯಂಗಳು. ಅಂತು ಸರ್ವವೆಲ್ಲವು ತೋರಿಯಡಗುವುದು. ಸರ್ವೇಶ್ವರನು, ಸರ್ವಕರ್ತೃ, ಸರ್ವಚೈತನ್ಯ, ಸೂತ್ರಯಂತ್ರವಾಹಕ ಶಿವನು. ಸರ್ವಲಯ ಗಮನ ಸ್ಥಿತಿ ತನಗುಂಟೆ ? ನಿಲ್ಲು , ಮಾಣಿರೆ, ಎಲೆ ಜಡಜೀವಿಗಳಿರಾ. ಗಗನದ ರವಿ ಕಿರಣದಿಂದ ಸಕಲರೂಪಿತ ದ್ರವ್ಯಪದಾರ್ಥಂಗಳಲ್ಲಿ ಪ್ರತಿಪ್ರಭೆ ತೋರಲು, ಆ ಪ್ರತಿಪ್ರಭೆಯ ಆಗುಹೋಗಿನ ಸ್ಥಿತಿಗತಿ ಆ ಗಗನದ ಸೂರ್ಯಂಗುಂಟೆ, ಎಲೆ ಜಡಜೀವಿಗಳಿರಾ ? ಈ ಪರಿಯಲೆ ವಿಶ್ವವೆಲ್ಲವಕ್ಕೂ ತಾನಲ್ಲದ ತಾನಿಲ್ಲದ ಪ್ರೇರಣ ಚೈತನ್ಯವೇ ವಿಶ್ವದ ನಯನ, ವಿಶ್ವದ ಮುಖ, ವಿಶ್ವದ ಬಾಹು, ವಿಶ್ವದ[ಚ]ರಣ, ಸ್ವರ್ಗಮತ್ರ್ಯ ಭುವನಾದ್ಯಂಗಳ ಮೂಲಚೈತನ್ಯಸೂತ್ರ ತಾನಲ್ಲದೆ, ತಾನಿಲ್ಲದೆ ಆಡಿಸುವ ಸೂತ್ರಾತ್ಮಕನಲ್ಲದೆ ಅವರಾಗು ತನಗುಂಟೆ, ಎಲೆ ಭ್ರಮಿತರಿರಾ ? `ವಿಶ್ವತಶ್ಚಕ್ಷುರುತ ವಿಶ್ವತೋಮುಖೋ ವಿಶ್ವತೋ ಬಾಹುರುತ ವಿಶ್ವತಸ್ಪಾ ಪಾತ್ | ಸಂ ಬಾಹುಭ್ಯಾಂಧಮತಿ ಸಂಪತತ್ರೈದ್ರ್ಯಾವಾ ಭೂಮೀ ಜನಯನ್ ದೇವ ಏಕಃ ಎನಲು, `ಈಶಾನಃ ಶಿವ ಏಕೋದೇವಃ ಶಿವಂ ಕರಃ ತತ್ಸರ್ವಮನ್ಯತ್ ಪರಿತ್ಯಜೇತ್' ಎನಲು, `ಏಕ ಏವ ರುದ್ರೋ ನ ದ್ವಿತೀಯಾಯ ತಸ್ಥು' ಎನಲು, ಶಿವನೊಬ್ಬನೇ, ಇಬ್ಬರಿಲ್ಲ . `ನ ಯಥಾಸ್ತಿ ಕೂರ್ಮರೋಮಾಣಿ, ಶೃಂಗಂ ನ ನರಮಸ್ತಕೇ ನ ಯಥಾಸ್ತಿ ವಿಯತ್ಪುಷ್ಪಂ ನ ತಥಾಸ್ತಿ ಪರಾತ್ಪರಃ |' ನಾಲ್ಕು ವೇದಂಗಳು ಬಿನ್ನವಿಸಿದವು ಕೇಳಿರೇ ಎಲೆ ವಿಪ್ರರಿರಾ. ಇದನರಿದು, ಬಸವಪ್ರಿಯ ಕೂಡಲಚೆನ್ನಸಂಗಯ್ಯನನೆ ಧ್ಯಾನಿಸಿ, ನಿರೀಕ್ಷಿಸಿ, ಸ್ತುತಿಸಿ, ಯಜಿಸಿ ಕೃತಾರ್ಥರಾಗಿರೆ ಎಲೆ ಮರುಳು ವಿಪ್ರರಿರಾ.
--------------
ಸಂಗಮೇಶ್ವರದ ಅಪ್ಪಣ್ಣ
ಒತ್ತೆಯ ಕಾರ್ಯಕ್ಕಾಗಿ ಮಿಥ್ಯವನರಿದಲ್ಲಿ ತಥ್ಯತಪ್ಪಿತ್ತು. ಸಗುಣಕಳೆ ನಿರ್ಗುಣಕ್ಕೆ ಸಲ್ಲದು, ನಿರ್ಗುಣ ಚೈತನ್ಯ ಬೆಳಗ ಕಾಣಲಿಲ್ಲ. ಗುರುನಿರಂಜನ ಚನ್ನಬಸವಲಿಂಗ ತಾನೆಂದೆನಲಿಲ್ಲ.
--------------
ದೇಶಿಕೇಂದ್ರ ಸಂಗನಬಸವಯ್ಯ
ಗುರು ಸ್ವಾಯುತವಾಯಿತ್ತು, ಎಂಟುಭಾವ ಸ್ವಾಯುತವಾಯಿತ್ತು. ಹದಿನಾರುತೆರನ ಭಕ್ತಿ ಸ್ವಾಯುತವಾಯಿತ್ತು. ಅಷ್ಟವಿಧಾರ್ಚನೆ ಸ್ವಾಯುತವಾಯಿತ್ತು. ತ್ರಿವಿಧದ ಅರಿವು ಸ್ವಾಯುತವಾಯಿತ್ತು. ಮಹಾಲಿಂಗದ ನಿಲವು, ಮಹಾಜಂಗಮದ ನಿಜವು ಸ್ವಾಯುತವಾಯಿತ್ತು. ಶುದ್ಭ ಪ್ರಸಾದ ತನು ಸ್ವಾಯುತವಾಯಿತ್ತು. ಸಿದ್ಧಪ್ರಸಾದ ಚೈತನ್ಯ ಸ್ವಾಯುತವಾಯಿತ್ತು. ಪ್ರಸಿದ್ಧಪ್ರಸಾದ ಮನ ಸ್ವಾಯುತವಾಯಿತ್ತು. ವಾಮಭಾಗದಲ್ಲಿ ಮಹವು ಉದಯವಾಯಿತ್ತು. ನಿಜಸ್ಥಾನದಲ್ಲಿ ನಿಂದಿತ್ತು, ಕ್ಷೀರಸ್ಥಾನದಲ್ಲಿ ಸಾರಾಯವಾಯಿತ್ತು. ಅನುಭಾವದಲ್ಲಿ ಘನಾಗಮವೆನಿಸಿತ್ತು. ಸ್ವಾನುಭಾವದಲ್ಲಿ ನಿಮ್ಮ ಬಸವಣ್ಣಂಗೆ ಶರಣೆಂದಿತ್ತು. ನೆಮ್ಮುಗೆವಿಡಿದು ಬಸವಣ್ಣನ ಪ್ರಸಾದವ ಕೊಂಡಿತ್ತು. ನಿಮ್ಮ ಬಸವಣ್ಣನ ಪ್ರಸಾದದಿಂದ ಇಂತಹ ಘನ ಸ್ವಾಯುತವಾಯಿತ್ತು. ನೀವು ಬಸವಣ್ಣನಿಂದಾದಿರಾಗಿ, ಬಸವಣ್ಣಂಗೆ ನಮೋ ನಮೋ ಎನುತಿರ್ದೆನು ಕಾಣಾ, ಕಲಿದೇವರದೇವಾ.
--------------
ಮಡಿವಾಳ ಮಾಚಿದೇವ
ಶಿವಶಿವಾಯೆಂಬ ಮಂತ್ರವೆನಗೆ ಅಮೃತಾರೋಗಣೆಯೋ ಎನ್ನ ತಂದೆ. ಹರ ಹರಾ ಎಂಬ ಮಂತ್ರವೆನಗೆ ಅಮೃತಾರೋಗಣೆಯೋ ಎನ್ನ ತಂದೆ. ಶ್ರೀ ವಿಭೂತಿ ರುದ್ರಾಕ್ಷಿ ಭಕುತಿಯ ಮುಕುತಿಗೆ ಸಾಧನವೋ ಎನ್ನ ತಂದೆ, ಎನಗಿದೆ ಗತಿಮತಿ ಚೈತನ್ಯ, ಕೂಡಲಸಂಗಮದೇವಯ್ಯಾ, ನಿಮ್ಮ ನಾಮದ ರುಚಿ ತುಂಬಿತ್ತೊ ಎನ್ನ ತನುವ.
--------------
ಬಸವಣ್ಣ
ಕಾಯ ಮುನ್ನವೊ, ಕಾಯದಲ್ಲಿಪ್ಪ ಮನ ಮುನ್ನವೊ? ಮನ ಮುನ್ನವೊ, ಮನದಲ್ಲಿಪ್ಪ ಚೈತನ್ಯ ಮುನ್ನವೊ? ಚೈತನ್ಯ ಮುನ್ನವೊ, ಚೈತನ್ಯಾತ್ಮಕ ಮಾಯೆ ಮುನ್ನವೊ? ಅವು ಮುನ್ನವಲ್ಲ, ಮುನ್ನವಲ್ಲ ; ನಿನ್ನ ನಿರಾಳ ನಿಜದ ನಿರ್ವಯಲಿನ ಶೂನ್ಯಾಶೂನ್ಯವೆ ಮುನ್ನ ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಪ್ರಸಾದಿಯಾದಾತ ಪ್ರಳಯಕ್ಕೊಳಗಾಗ, ಇಂದ್ರಿಯಗಳ ಹರಿಯೀಯ, ಬಂದುದನ್ಕಗಳೆಯ - ಅದು ಲಿಂಗಮುಖದಿಂ ಬಂದುದಾಗಿ, ಆತನ ಅಂಗ ಸರ್ವಾಂಗಲಿಂಗಾಂಗ; ಆತನ ನಡೆ-ನುಡಿ ಚೈತನ್ಯ ಸಾಕ್ಷಾತ್ ಅಯ್ಯನ ಸದ್ಭಾವ. ಕಪಿಲಸಿದ್ಧಮಲ್ಲಿಕಾರ್ಜುನಯ್ಯನ ಕೂಡಿದ ನಿತ್ಯಪ್ರಸಾದಿಯ ಪರಿಯಿಂತುಂಟು.
--------------
ಸಿದ್ಧರಾಮೇಶ್ವರ
ಕಡುಜಲಕ್ಕೆ (ಹರಿವ ಜಲಕ್ಕೆ ?) ಇದಿರಾಗಿ ಹರಿವ ಸ್ವಾಮಿಯ ಬರವ ಕಂಡು, ಬಿಡದೆ ಬೆಂಬತ್ತಿಸುವ ಪರಿಯ ನೋಡಾ. ನಡೆ ನುಡಿ ಚೈತನ್ಯ ಒಡಲನೊಂದನು ಮಾಡಿ ಬಿಡದೆ ವೇಧಿಸುವ ಬೆಡಗ ಕಂಡೆನಯ್ಯಾ ! ಕಡೆಗೆ ಸೂಸದ ದೃಷ್ಟಿ, ಹಿಡಿದು ತೊಲಗದ ಹಸ್ತ, ಬೇಡ ಬೇಡ ತನಗೆನ್ನದ ಸಜ್ಜನ ಮಡದಿ, ತನ್ನ ಗಂಡನ ಅಡಗಿ ಕೂಡುವ ಭೇದ !_ ನಡುವಿರುಳು ಕೂಡಿ ನಿಮಿರೆ ಬೆಳಗಾಯಿತ್ತು. ಮಾಡಿ ನೀಡುವನ ಕಂಡು ನಾಡು ಬೀಡೆಲ್ಲ ನೆರೆದು ಕೊಡ ಕೈಯಲ್ಲಿ ಕೊಟ್ಟಡೆ ತೃಪ್ತರಾಗಿ, ಮಾಡುವರು ಹರಸುವರು ನೋಡುವರು ಮನದಣಿಯೆ ಕೊಡುವರು ಕೋಟಿ, ಸಹಜ ಒಂದೆ ಎಂದು ! ಜೋಡ ತೊಡದಾತನ ಮೈಯಲ್ಲಿ, ಕೂಡೆ ಘಾಯವಿಲ್ಲದುದ ಕಂಡು, ನೋಡಿರೆ ಮಸೆ ಮುಟ್ಟದ ಮಹಾಂತನ ! ಬೇಡುವೆನು ಕರುಣವನು, ಪಾದ [ವ]ನೊಸಲಲ್ಲಿ ಸೂಡುವೆನು ಗುಹೇಶ್ವರನ ಶರಣ ಬಸವಣ್ಣಂಗೆ ನಮೋ ನಮೋ ಎಂಬೆನು.
--------------
ಅಲ್ಲಮಪ್ರಭುದೇವರು
ವಿಭೂತಿ ರುದ್ರಾಕ್ಷಿಯ ಧರಿಸಿ ಷಡಕ್ಷರಿಯಂ ಜಪಿಸಿ ಗುರು ಲಿಂಗ ಜಂಗಮದ ಆದ್ಯಂತವನರಿಯದೆ ಏನೆಂದು ಪೂಜಿಸುವಿರಿ, ಆರಾಧಿಸುವಿರಿ? ಅದೆಂತೆಂದಡೆ: ನೆಲದ ಮೇಲಣ ಶಿಲೆಯ ಕಲ್ಲುಕುಟಿಕ ಕಡಿದು ಖಂಡಿಸಿ ಹರದನ ಕೈಯಲ್ಲಿ ಕೊಟ್ಟು ಮಾರಿಸಿಕೊಂಡುದು ಲಿಂಗವಾದ ಪರಿ ಹೇಂಗೆ? ಸಕಲ ವ್ಯಾಪಾರ ಅಳುವಿಂಗೆ ಒಳಗಾಗಿ ತೊಡಿಸಿ ಬರೆಸಿಕೊಂಡುದು ಮಂತ್ರವಾದ ಪರಿ ಹೇಂಗೆ? ಅಜ್ಞಾನಿ ಮೃಗ ಪಶುವಿನ ಸಗಣಿಯ ಸುಟ್ಟುದು ವಿಭೂತಿಯಾದ ಪರಿ ಹೇಂಗೆ? ಪಂಚಭೂತಿಕದಿಂದ ಜನಿಸಿದ ವೃಕ್ಷದ ಫಲ ರುದ್ರಾಕ್ಷಿಯಾದ ಪರಿ ಹೇಂಗೆ? ಸಕಲ ಜೀವವೆರಸಿ ಕರಗಿದ ಆಸಿಯ ಜಲ ತೀರ್ಥವಾದ ಪರಿ ಹೇಂಗೆ? ಸಕಲ ಪ್ರಾಣಿಗಳಾಹಾರ ಹದಿನೆಂಟು ಧಾನ್ಯ ಕ್ಷುಧಾಗ್ನಿಯಲ್ಲಿ ಜನಿಸಿ ಪಚನವಾದುದು ಪ್ರಸಾದವಾದ ಪರಿ ಹೇಂಗೆ? ಅದೆಂತೆಂಡೆ: ನಿಗಮ ಶಾಸ್ತ್ರಕ್ಕೆ ಅಗಣಿತವಾದ ನಾದಬಿಂದುವಿಗೆ ನಿಲುಕದ ನಿತ್ಯತೃಪ್ತ ಪರಂಜ್ಯೋತಿಲಿಂಗದ ವೈಭವಕ್ಕೆ ಅಂಗವಾದುದು ಈ ಗುರುವಲ್ಲಾ ಎಂದು ಅರಿದು ಆ ಲಿಂಗದ ಚೈತನ್ಯ ಈ ಲಿಂಗವಲ್ಲಾ ಎಂದು ಅರಿದು ಮಾಡೂದು ತನು ಮನ ಧನ ವಂಚನೆಯಳಿದು. ಗುರುಭಕ್ತಿ ಸನ್ನಿಹಿತವಾಗಿ ಆ ಲಿಂಗದ ವದನ ಈ ಜಂಗಮವಲಾ ಎಂದರಿದು ಮಾಡೂದು ಆ ತನು ಮನ ಧನ ವಂಚನೆಯಳಿದು. ಜಂಗಮಭಕ್ತಿ ಸನ್ನಿಹಿತವಾಗಿ ಆ ಲಿಂಗದ ಕಾಯಕಾಂತಿಯ ಬೆಳಗಿನ ಐಶ್ವರಿಯಲ್ಲ ಎಂದರಿದು ಧರಿಸೂದು ಶ್ರೀ ವಿಭೂತಿಯ. ಆ ಲಿಂಗದ ಶೃಂಗಾರದ ಹರಭರಣವಲಾ ಎಂದರಿದು ಅಳವಡಿಸೂದು ರುದ್ರಾಕ್ಷಿಯನು. ಆ ಲಿಂಗದ ಉತ್ತುಂಗ ಕಿರಣಚರಣಾಂಬುಜವಲಾ ಎಂದು ಧರಿಸೂದು, ಕೊಂಬುದು ಪಾದೋದಕವನು. ಆ ಲಿಂಗದ ನಿತ್ಯಪದ ಸಂಯೋಗ ಶೇಷವ ತಾ ಎಂದರಿದು ಕೊಂಬುದು ಪ್ರಸಾದವನು. ಇಂತಿವೆಲ್ಲವನರಿದುದಕ್ಕೆ ಸಂತೋಷವಾಗಿ ಚರಿಸುವಾತನೆ ಸದ್ಭಕ್ತ. ಆತನ ಕಾಯ ಕರಣ ಪ್ರಾಣ ಭಾವಾದಿಗಳು ಸೋಂಕಿದೆಲ್ಲವೂ ಲಿಂಗದ ಸೋಂಕು, ಲಿಂಗದ ಕ್ರೀ, ಲಿಂಗದ ದಾಸೋಹ. ಇಂತೀ ತ್ರಿವಿಧವ ಸವೆದು ಅಳಿದುಳಿದ ಸದ್ಭಕ್ತನ ಶ್ರೀಪಾದಕ್ಕೆ ನಮೋ ನಮೋ ಎಂಬೆನು ಕಾಣಾ, ಬಸವಣ್ಣಪ್ರಿಯ ನಿಃಕಳಂಕ ಸೋಮೇಶ್ವರನೆ.
--------------
ನಿಃಕಳಂಕ ಚೆನ್ನಸೋಮೇಶ್ವರ
ಇನ್ನಷ್ಟು ... -->