ಅಥವಾ

ಒಟ್ಟು 172 ಕಡೆಗಳಲ್ಲಿ , 29 ವಚನಕಾರರು , 137 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆಚಾರಲಿಂಗಾನುಭಾವದಿಂದ ಪೃಥ್ವಿಯ ಪೂರ್ವಾಶ್ರಯವನಳಿದ ಸದಾಚಾರನಿಷ್ಠನ ನೋಡಾ! ಸದ್ಗುರುರತಿಯಿಂದ ಅಪ್ಪುತತ್ವದ ಪೂರ್ವಾಶ್ರಯವನಳಿದು ಸದ್ಗುರುನಿಷ್ಠನ ನೋಡಾ! ಶಿವಲಿಂಗದ ಸಂಗದಿಂದ ಅಗ್ನಿಯ ಪೂರ್ವಾಶ್ರಯವನಳಿದ ಶಿವಲಿಂಗಪ್ರೇಮಿಯಾದ ಶಿವಾಚಾರನಿಷ್ಠನ ನೋಡಾ! ಚರಲಿಂಗದ ಸಂಗದಿಂದ ವಾಯುವಿನ ಪೂರ್ವಾಶ್ರಯವನಳಿದ ಜಂಗಮಲಿಂಗಗ್ರಾಹಕನ ನೋಡಾ! ಪ್ರಸಾದಲಿಂಗದ ಸೇವಕತ್ವದಿಂದ ಕರ್ಮತ್ರಯವನಳಿದ ನಿರ್ಮಲ ನಿರಾವರಣನ ನೋಡಾ! ಮಹಾಲಿಂಗದ ಸಂಗದಿಂದ ಜೀವಭಾವವಳಿದ ಮಹಾಮಹಿಮನ ನೋಡಾ! ಲಿಂಗನಿಷ್ಠೆಯಿಂದ ಅಂಗಗುಣಂಗಳೆಲ್ಲವ ಕಳೆದುಳಿದ ನಿರಂಗಸಂಗಿಯ ನೋಡಾ! ಇಂತಪ್ಪ ಮಹೇಶ್ವರಂಗೆ ನಮೋನಮೋಯೆಂಬೆನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಹರಗುರುವಾಕ್ಯ ಪ್ರಮಾಣವರಿಯದೆ ಅಜ್ಞಾನವಾವರಿಸಿ ವಾರ ತಿಥಿಯೆಂದು, ಸಂಕ್ರಾಂತಿ ಅಮವಾಸ್ಯೆಯೆಂದು ನೇಮಿಸಿ, ಮಾಡಿ ನೀಡಿ ಕರ್ಮ ಕಳೆದೆನೆಂಬ ವರ್ಮಗೇಡಿಗಳ ನೋಡಾ! ಮತ್ತೊಂದು ವೇಳೆ ಜಂಗಮ ಮನೆಗೆ ಬಂದರೆ ಅಡ್ಡಮೋರೆಯಿಕ್ಕುವ ಗೊಡ್ಡು ಮಾದಿಗರ ಶಿವಭಕ್ತರೆಂದರೆ ಅಘೋರ ನರಕವೈ ಗುರುನಿರಂಜನ ಚನ್ನಬಸವಲಿಂಗಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಬತ್ತಲೆ ಬಯಲಾದ ಹೆಂಗಸು ನಿತ್ಯವಾದ ಕೇರಿಗಳಲ್ಲಿ ಸುಳಿದಾಡುತಿಪ್ಪಳು ನೋಡಾ! ಮೇಲಾದ ದಾರಿಯಲ್ಲಿ ಸಾಧಕನೆಂಬ ಮೂರ್ತಿ ಬಂದು ಬತ್ತಲೆ ಬಯಲಾದ ಹೆಂಗಸ ನೆರೆದು ನಿಶ್ಚಿಂತ ನಿರಾಕುಳವೆಂಬ ಲಿಂಗದಲ್ಲಿ ಅಡಗಿಪ್ಪ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಹಾವ ಹೊತ್ತುಕೊಂಡು ಹೋಗುತ್ತ ಹಾವಾಡಿಗ ನಡೆಯಲ್ಲಿ ಹಾವ ಕಂಡು ಮರಳುವ ಗಾವಿಲತನವ ನೋಡಾ! ತನ್ನಿಂದನ್ಯವೆಂದಡೆ ಬ್ಥಿನ್ನ ವ್ಯತಿಕರವಾಯಿತ್ತು. ತನ್ನ ಪರಮಾರ್ಥ ತನ್ನಲ್ಲಿ ಸಿಮ್ಮಲಿಗೆಯ ಚೆನ್ನರಾಮನೆಂಬ ಲಿಂಗ ಮಾಯಾಮರ್ಕಟ, ಜಡವೆ!
--------------
ಚಂದಿಮರಸ
ಈರೇಳು ಲೋಕವನೊಳಕೊಂಡ ಮಹಾಘನಲಿಂಗವು ಭಕ್ತನ ಕರಸ್ಥಲಕ್ಕೆ ಬಂದು ಪೂಜೆಗೊಂಬ ಪರಿಯ ನೋಡಾ. ಅಗಮ್ಯ ಅಗೋಚರ ಅಪ್ರಮಾಣ ಲಿಂಗಸಂಗದಲ್ಲಿ ಇರಬಲ್ಲಾತನೇ ಭಕ್ತನು. ಹೀಗಲ್ಲದೆ ಕೇಡಿಲ್ಲದೆ ಲಿಂಗಕ್ಕೆ ಕೇಡ ಕಟ್ಟಿ ಹೋದೀತೋ ಇದ್ದೀತೋ ಅಳಿದೀತೋ ಹೇಗೋ ಎಂತೋ ಎಂದು ಚಿಂತಿಸಿ ನುಡಿವರು ಬ್ಥಿನ್ನವಿಜ್ಞಾನಿಗಳು. ಆ ಲಿಂಗದೊಳಗೆ ಅಖಿಳಾಂಡಕೋಟಿ ಬ್ರಹ್ಮಾಂಡಗಳಡಗಿದವು. ಸಾಕ್ಷಿ : 'ಲಿಂಗಮಧ್ಯೇ ಜಗತ್ಸರ್ವಂ ತ್ರೈಲೋಕ್ಯಂ ಸಚರಾಚರಂ | ಲಿಂಗಬಾಹ್ಯಾತ್ ಪರಂ ನಾಸ್ತಿ ತಸ್ಮಾಲ್ಲಿಂಗಂ ಪ್ರಪೂಜಯೇತ್ ||' ಎಂದುದಾಗಿ, ಇಂತಪ್ಪ ಘನಲಿಂಗವ ಶ್ರೀಗುರು ಭಕ್ತಂಗೆ ಕರ-ಮನ-ಭಾವಕ್ಕೆ ಪ್ರತ್ಯಕ್ಷವಾಗಿ ಮಾಡಿಕೊಟ್ಟ ಬಳಿಕ ಎಂದಿಗೂ ಅಗಲಬೇಡಿಯೆಂದು ಗಣಸಾಕ್ಷಿಯಾಗಿ ಮಾಡಿಕೊಟ್ಟ ಬಳಿಕ ಅಗಲಲುಂಟೆ ? ಅಗಲಿದಡೆ ಲಿಂಗವು ಗುರುತಲ್ಪಕವೆ ಸರಿ. ಆವ ಶಾಸ್ತ್ರ ಆವ ಆಗಮ ಆವ ವಚನ ಹೇಳಿಲ್ಲವಾಗಿ, ಮತ್ತಂ, ಸಂಪಿಗೆಯ ಪುಷ್ಪದ ಪರಿಮಳ ಬೇರೆ ಆಗಲುಂಟೆ ? ಇಂತಪ್ಪ ಮಹಾಘನಲಿಂಗವು ಹೇಗಿಪ್ಪುದೆಂದಡೆ : ಅವರವರ ಮನ ಭಾವ ಹೇಗಿಪ್ಪುದೊ ಹಾಗಿಪ್ಪುದು. ಇದಕ್ಕೆ ದೃಷ್ಟಾಂತ : ಉದಕ ಒಂದೇ, ಹಲವು ವೃಕ್ಷದ ಹಣ್ಣು ಮಧುರ ಒಗರು ಖಾರ ಹುಳಿ ಕಹಿ ಸವಿ. ಉದಕ ಒಂದೇ, ಶ್ವೇತ ಪೀತ ಹರಿತ ಮಾಂಜಿಷ್ಟ ಕಪೋತ ಮಾಣಿಕ್ಯ. ಈ ಆರು ವರ್ಣಂಗಳಲ್ಲಿ ಬೆರೆದುದು ಅಭ್ರಕ ಒಂದೇ! ಈ ಅಭ್ರಕ ಹೇಗೊ ಹಾಗೆ ಮನ, ಹಾಗೆ ಮಹಾಲಿಂಗ. ಹೀಗೆಂದರಿದಾತ ನಮ್ಮ ಶಾಂತಕೂಡಲಸಂಗಮದೇವ ಬಲ್ಲನಲ್ಲದೆ ಬ್ಥಿನ್ನಜ್ಞಾನಿಗಳು ಎತ್ತ ಬಲ್ಲರು ನೋಡಾ!
--------------
ಗಣದಾಸಿ ವೀರಣ್ಣ
ಐದು ಮುಖದ ಅಂಗನೆಗೆ ಹದಿನೈದು ದೇಹ ನೋಡಾ! ಆ ಅಂಗನೆಯ ಮನೆಯೊಳಗಿರ್ದು, ತಾವಾರೆಂಬುದನರಿಯದೆ; ಬಾಯ್ಗೆ ಬಂದಂತೆ ನುಡಿವರು, ಗುಹೇಶ್ವರಾ ನಿಮ್ಮನರಿಯದ ಜಡರುಗಳು.
--------------
ಅಲ್ಲಮಪ್ರಭುದೇವರು
ತಪ್ಪಿಸಿ ಒಪ್ಪಿಸಿ ಒಲಿಸಿಕೊಂಡು ಬಂದು ನಡೆವ ಮಡದಿಯ ಸಡಗರವ ನೋಡಾ! ಕಡುಲೋಬ್ಥಿ ಮನೆಯಗಂಡನೊಂದಿಗೆ ಬಾಳಿ ಅರಳುಪ್ಪರಿಗೆಯಲ್ಲಿ ಸುಪ್ಪತ್ತಿಗೆಯ ಮೇಲೆ ಸುಳಿದಾಡುವ, ಶುದ್ಧನ ಕಳೆಯ ನೆರೆದಪ್ಪಿ ಕಾಣುವಳು ಗುರುನಿರಂಜನ ಚನ್ನಬಸವಲಿಂಗಕ್ಕಂಗವಾಗಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ಗಿರಿಗಳೆಲ್ಲ ಕೂಡಿ ಮೇರುಗಿರಿಗೆ ಸರಿಯಾಗಬಲ್ಲವೆ? ತರುಗಳೆಲ್ಲ ಕೂಡಿ ಕಲ್ಪತರುವಿಗೆ ಸರಿಯಾಗಬಲ್ಲವೆ? ಸರಿಯಿಲ್ಲ ನೋಡಾ ನಮ್ಮ ಭಕ್ತರಿಗೆ ನರರು ಸುರರು ಸರಿಯಲ್ಲ ನೋಡಾ! ಪರುಷಕ್ಕೆ ಪಾಷಾಣ ಸರಿಯೆ? ಮರುಜವಣಿಗೆ ಔಷಧ ಸರಿಯೇ? ಇದು ಕಾರಣ, ಶಿವಭಕ್ತರ್ಗೆ ಲೋಕದವರು ಸರಿಯೆಂದರೆ ನರಕ ತಪ್ಪದಯ್ಯಾ, ರಾಮಾನಾಥ.
--------------
ಜೇಡರ ದಾಸಿಮಯ್ಯ
ಹರಿತವರ್ಣದ ಮರಕ್ಕೆ ಶ್ವೇತವರ್ಣದ ಕೊಂಬೆಗಳು ಹುಟ್ಟಿದವು ನೋಡಾ! ಆ ಕೊಂಬೆಗೆ ಸ್ಫಟಿಕವರ್ಣದ ಕಡ್ಡಿಗಳಿಪ್ಪವು ನೋಡಾ ! ಅವಕ್ಕೆ ಸಾಸಿರದಳ ಎಲೆಗಳು ಹತ್ತಿಪ್ಪವು ನೋಡಾ ! ತುಟ್ಟತುದಿಯಲೊಂದು ಬಟ್ಟಬಯಲ ಹಣ್ಣಾಗಿಪ್ಪುದು ನೋಡಾ ! ಆ ಹಣ್ಣಿನ ಬೆಳಗಿನೊಳಗೆ ಐಕ್ಯಗಣಂಗಳು, ಶರಣಗಣಂಗಳು, ಪ್ರಾಣಲಿಂಗಿಗಣಂಗಳು, ಪ್ರಸಾದಿಗಣಂಗಳು, ಮಹೇಶ್ವರಗಣಂಗಳು, ಭಕ್ತಗಣಂಗಳು ತಿಂಥಿಣಿಯಾಗಿಪ್ಪರಯ್ಯ ಆ ಬೆಳಗಿನೊಳು ಕೂಡಿ ನಿಃಪ್ರಿಯವೆನಿಸಿತ್ತು ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಶರೀರವೇ ಹೇಯದಮೊಟ್ಟೆ ದುರ್ಗಂಧವೇ ನೈಜ, ಸುಗಂಧವೆಲ್ಲಾ ಆರೋಪಿತವಲ್ಲದೆ ನಿಜವಲ್ಲವಾಗಿ ಹೇಯವೇ ನೈಜ. ಮನಸ್ಸೇ ದುಃಖದಮೊಟ್ಟೆ, ಆ ದುಃಖವೇ ನೈಜ, ಸುಖವೇ ಆರೋಪಿತ, ಶರೀರದಲ್ಲಿರ್ಪ ಹೇಯವು ಪ್ರಬಲಗಳಾದ ವ್ಯಾದ್ಥಿಪೀಡೆಗಳನನುಭವಿಸುತ್ತಿರಲು, ಅದೇ ಜೀವನಿಗಿಹಲೋಕದಯಾತನೆಯಾಯಿತ್ತು. ದುಃಖದಮೊಟ್ಟೆಯಾಗಿರ್ಪ ಮನಸ್ಸನ್ನು ದುರ್ಗುಣಂಗಳು ಬಂದು ಅನುಭವಿಸುತ್ತಿರಲ್ಲದೇ ಜೀವನಿಗೆ ಪರಲೋಕಮಾಯಿತ್ತು. ಇಂತಪ್ಪ ಶರೀರದಲ್ಲಿ ಬಿಂದುವನ್ನೂ ಮನದಲ್ಲಿ ನಾದವನ್ನೂ ಇಹಪರಕೃತ್ಯಂಗಳಿಗೆ ಸಾಧಕಭೂತಮಾಗಿ ಪರಮಾತ್ಮನಿಟ್ಟಿರ್ಪನು. ಅಂತಪ್ಪ ಬಿಂದುವೇ ಆನಂದಸ್ವರೂಪು, ನಾದವೇ ಜ್ಞಾನಸ್ವರೂಪು, ಆ ಆನಂದಬಿಂದುವು ಶರೀರಕ್ಕೆ ಕಾರಣಮಾಗಿಹುದು, ಈ ನಾದಬಿಂದುಗಳ ಉತ್ತರಮಾರ್ಗವೇ ಮನಶ್ಶರೀರಗಳಿಗೆ ಸುಖ, ನಿಜಪ್ರಕಟವಂ ಮಾಡುತ್ತಿರ್ಪುದು. ದಕ್ಷಿಣಮಾರ್ಗವೇ ದುಃಖ, ಮಿಥ್ಯಾಪ್ರಕಟವಂ ಮಾಡುತ್ತಿಹುದು. ಇವೆರಡರ ಸಂಬಂಧವಿಲ್ಲದ ವಸ್ತುವಿಗೆ ಕೋಟಲೆಗೊಂಡು ಕುದಿವುತ್ತಿರ್ಪ ಜೀವನ ಪರಿಯ ನೋಡಾ! ಜೀವನಿಗೆ ನಿಜವೇ ಭಾವ. ಆ ಭಾವದಲ್ಲಿರ್ಪುದು ಕಳಾಪದಾರ್ಥವು, ಆ ಕಳಾಮಯವಾಗಿರ್ಪುದು ಸತ್ಯವು. ಅಂತಪ್ಪ ಸತ್ಯವಂ ಹಿಡಿದು ಈ ಮಿಥ್ಯಾರೂಪಮಾದ ಸ್ಥೂಲ ಸೂಕ್ಷ್ಮಂಗಳಂ ಬಿಟ್ಟಲ್ಲಿ, ಜೀವನೇ ಪರಮನಪ್ಪನು ಕಾಣಾ ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ.
--------------
ಮುಮ್ಮಡಿ ಕಾರ್ಯೇಂದ್ರ /ಮುಮ್ಮಡಿ ಕಾರ್ಯ ಕ್ಷಿತೀಂದ್ರ
ಸ್ವಪ್ನದ ಸುಖದಣ್ಣಗಳು ಜಾಗ್ರದ ಸುಖವನರಿಯರು, ಮೂರು ಬಣ್ಣದ ಮನೆಯೊಳಿಪ್ಪ ನಾರಿಯ ಸಂಗವ ತೊರೆದು ಮೂರುಪರ್ವತವ ಹಿಡಿದಾಡುವ ಕರಿಯ ಪರಿಯ ಮೋಹದಲ್ಲೆಸೆವರು ನೋಡಾ! ಕಾಲಸಂದಿನ ಬಾಲೆಯೊಳು ಸಿಲ್ಕಿ ಮೇಲು ಕಾಸಾರ ಪದ್ಮಪ್ರಭೆಯೊಳಿರ್ದೆನೆಂಬ ಶಬ್ದಜಾಲಿಗಳನೊದ್ದು ಕೆಡಹುವರು ಕಾಲನವರು, ಗುರುನಿರಂಜನ ಚನ್ನಬಸವಲಿಂಗದತ್ತ ಬರಗೊಡದೆ.
--------------
ದೇಶಿಕೇಂದ್ರ ಸಂಗನಬಸವಯ್ಯ
ಕಾಗೆಯ ತಿಂದವ ಕಮ್ಮಾರ, ಎಮ್ಮೆಯ ತಿಂದವ ಸಮಗಾರ, ಹಸುವ ತಿಂದವ ಪಶುಪತಿಯ ಶರಣ; ಇವರ ಮೂವರ ತಿಂದ ಅಂದವ ನೋಡಾ! ಇದರ ಸಂಗವಾರಿಗೂ ಅರಿದು, ನಿಸ್ಸಂಗ ನಿರ್ಲೇಪ ನಾರಾಯಣಪ್ರಿಯ ರಾಮನಾಥ.
--------------
ಗುಪ್ತ ಮಂಚಣ್ಣ
ಶಿಶುವಿನ ಗರ್ಭದೊಳಗೆ ಈರೇಳು ಭುವನಂಗಳಿರ್ಪವು. ಆ ಭುವನಂಗಳನೆಲ್ಲ ಒಂದು ನಕ್ರ ನುಂಗಿರ್ಪುದು. ಆ ನಕ್ರನ ತಲೆಯೊಳಗೆ ಒಂದು ಬೆಲೆಯಿಲ್ಲದ ರತ್ನ ಇರ್ಪುದು. ಆ ರತ್ನಕ್ಕೆ ಇಬ್ಬರು ಹೆಣಗಾಡುತ್ತಿರ್ಪರು ನೋಡಾ! ಹೆಳವ ನಡದ, ಅಂಧಕ ಕಂಡ, ಕೈಯಿಲ್ಲದವ ಪಿಡಿದುದ ಕಂಡು ನಾ ಬೆರಗಾದೆನಯ್ಯಾ. ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ತಾ ಮಾಡಿದ ಹೆಣ್ಣು ತನ್ನ ತಲೆಯನೇರಿತ್ತು ತಾ ಮಾಡಿದ ಹೆಣ್ಣು ತನ್ನ ತೊಡಯನೇರಿತ್ತು ತಾ ಮಾಡಿದ ಹೆಣ್ಣು ಬ್ರಹ್ಮನ ನಾಲಗೆಯನೇರಿತ್ತು ತಾ ಮಾಡಿದ ಹೆಣ್ಣು ನಾರಾಯಣನ ಎದೆಯನೇರಿತ್ತು ಅದು ಕಾರಣ, ಹೆಣ್ಣು ಹೆಣ್ಣಲ್ಲ ಹೆಣ್ಣು ರಾಕ್ಷಸಿಯಲ್ಲ ; ಹೆಣ್ಣು ಪ್ರತ್ಯಕ್ಷ ಕಪಿಲಸಿದ್ಧಮಲ್ಲಿಕಾರ್ಜುನ ನೋಡಾ!
--------------
ಸಿದ್ಧರಾಮೇಶ್ವರ
ಒಬ್ಬ ಸಹಜಗಳ್ಳನು ನಿಟಿಲಮುಂದಳ ಚಾವಡಿಯಲ್ಲಿ ನಿಂದು ರಾಜಿಸುತಿಪ್ಪನು ನೋಡಾ! ಆ ಕಳ್ಳನ ಹೆಜ್ಜೆಯ ಒಬ್ಬ ತಳವಾರ ಎತ್ತಿ ನೋಡಲು ಹೆಜ್ಜೆ ಹೋದವು. ಅಂಗಲಿಂಗಸಂಗಸಮರಸವೆಂಬ ಲಿಂಗದ ಗುಡಿಯಲ್ಲಿ ಅಡಗಿಪ್ಪವಯ್ಯ. ಆ ತಳವಾರನು ಹೆಜ್ಜೆಯನೆತ್ತಿ ಆ ಕಳ್ಳನ ಹೆಜ್ಜೆಯ ಹಿಡಿದ ಭೇದವ ನಿಮ್ಮ ಶರಣರೆ ಬಲ್ಲರಲ್ಲದೆ ಉಳಿದವರೆತ್ತ ಬಲ್ಲರಯ್ಯ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಇನ್ನಷ್ಟು ... -->