ಅಥವಾ

ಒಟ್ಟು 536 ಕಡೆಗಳಲ್ಲಿ , 66 ವಚನಕಾರರು , 397 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ವಾರಿದ್ಥಿಯ ಹೊಯ್ದು ಬೇರ್ಪಡಿಸಬಹುದೆ ? ಫಲದೊಳಗಣ ಬೀಜ ಬಲಿವುದಕ್ಕೆ ಮೊದಲೆ ತೆಗೆಯಬಹುದೆ ? ಮಹಾಘನವನರಿವುದಕ್ಕೆ ಮೊದಲೆ, ಭಕ್ತ ಮಾಹೇಶ್ವರ ಪ್ರಸಾದಿ ಪ್ರಾಣಲಿಂಗಿ ಶರಣ ಐಕ್ಯನಹ ಪರಿ ಇನ್ನೆಂತೊ ? ಇಕ್ಷುದಂಡ ಬಲಿವುದಕ್ಕೆ ಮೊದಲೆ ತನಿರಸ ಬಹುದೆ ? ನಾನೆಂಬುದಕ್ಕೆ ಸ್ಥಾಣು, ಅಹುದಕ್ಕೆ ಭಾವದ ಬಲಿಕೆ ಇನ್ನಾವುದು, ನಿಃಕಳಂಕ ಮಲ್ಲಿಕಾರ್ಜುನಾ ?
--------------
ಮೋಳಿಗೆ ಮಾರಯ್ಯ
ಮೆಲ್ಲಮೆಲ್ಲನೆ ಭಕ್ತ, ಮೆಲ್ಲಮೆಲ್ಲನೆ ಮಾಹೇಶ್ವರ, ಮೆಲ್ಲಮೆಲ್ಲನೆ ಪ್ರಸಾದಿ, ಮೆಲ್ಲಮೆಲ್ಲನೆ ಪ್ರಾಣಲಿಂಗಿ, ಮೆಲ್ಲಮೆಲ್ಲನೆ ಶರಣ, ಮೆಲ್ಲಮೆಲ್ಲನೆ ಐಕ್ಯರಾದೆವೆಂಬರು_ ನಿಮ್ಮ ಶರಣರು ತಾವೇನು ಮರುಜವಣಿಯ ಕೊಂಡರೆ ? ಅಮೃತಸೇವನೆಯ ಮಾಡಿದರೆ ? ಆವ ಸ್ಥಲದಲ್ಲಿ ನಿಂದರೂ ಆ ಸ್ಥಲದಲ್ಲಿ ಷಡುಸ್ಥಲ ಅಳವಡದಿದ್ದರೆ, ಆ ಭಕ್ತಿಯ ಬಾಯಲ್ಲಿ ಹುಡಿಯ ಹೊಯ್ದು ಹೋಗುವೆನೆಂದ ಕೂಡಲಚೆನ್ನಸಂಗಮದೇವರ
--------------
ಚನ್ನಬಸವಣ್ಣ
ಭವಬಂಧನಂಗಳ ಹಿಂಗಿಸಬೇಕೆಂಬಣ್ಣಗಳು ನೀವು ಬಲ್ಲರೆ ಹೇಳಿರಿ, ಅರಿಯದಿದ್ದರೆ ಕೇಳಿರಿ. ಶ್ರೀಗುರುಪುತ್ರನಾಗಿ ಅವರು ತಮ್ಮ ಅಂತಃಕರಣ ಕೃಪೆಯಿಂದ ಪೇಳಿದ ಪ್ರಸಾದವಾಕ್ಯವನು ಅವರ ದಯದಿಂದ ಪೇಳುತಿರ್ದೆನು ಕೇಳಿರಯ್ಯ. ಅದೆಂತೆಂದಡೆ : ಆಶೆ ಆಮಿಷ ತಾಮಸದೊಡನೆ ಕೂಡಿ ಕ್ಲೇಶಪಡುತಿರ್ದಂತೆ ಗುರುಗಳಲ್ಲಿ ಅಥವಾ ಜಂಗಮಲಿಂಗಿಗಳಲ್ಲಿ ಇಂತೀ ಉಭಯ ಪಾಶಬದ್ಧರ ಕೈಯಿಂದ ಅಹಂಕಾರ ಮಮಕಾರದಲ್ಲಿ ಆಣವಮಲ, ಮಾಯಾಮಲ, ಕಾರ್ಮಿಕಮಲವೆಂಬ ಮಲತ್ರಯಂಗಳ ಕಚ್ಚಿ, ಸಂಸಾರವಿಷಯದಲ್ಲಿ ಲಂಪಟರಾದ ಭಕ್ತಜನಂಗಳು ಅಥವಾ ಶಿಷ್ಯೋತ್ತಮನಾದಂಥವರು ಇಂತಪ್ಪವರು ಲಿಂಗವ ಪಡೆದು, ಉಪದೇಶವ ಹಡದು, ಆಚರಿಸುವರ ಆಚರಣೆಯೆಂತಾಯಿತ್ತೆಂದಡೆ, ತಲೆಯಿಲ್ಲದ ಪುರುಷನ ಸಂಗ, ಕಣ್ಣಿಲ್ಲದ ಸ್ತ್ರೀ ಸಂಯೋಗವ ಮಾಡಿ, ಜೀವವಿಲ್ಲದೊಂದು ಮಗನ ಹಡದಂತಾಯಿತ್ತಯ್ಯ. ಅಂತಪ್ಪ ದೇವ ಭಕ್ತ ಗುರು ಶಿಷ್ಯರೆಂಬ ಈ ಚತುರ್ವಿಧ ಪುರುಷರಿಗೆ ಭವಹಿಂಗದು, ಮುಕ್ತಿ ಎಂದಿಗೂ ತೋರದು. ಅದೇನು ಕಾರಣವೆಂದಡೆ : ತಾವ್ಯಾರು, ತಮ್ಮ ಸ್ವರೂಪವಾವುದು ಎಂಬ ನಿಲುಕಡೆಯ ತಿಳಿಯದ ಕಾರಣ. ಮತ್ತಂ ಪೇಳ್ವೆ : ತಮ್ಮ ನಿಜವ ತಾವರಿದು, ಸರ್ವಾಚಾರಸಂಪತ್ತು ಅಳವಟ್ಟು, ಸರ್ವಾಂಗಲಿಂಗಮಯವಾಗಿರುವಂಥ ನಿಃಕಲ ಸದ್ರೂಪಸ್ವರೂಪರಾದ ಆಚಾರ್ಯಂಗಳಲ್ಲಾಗಲಿ, ಅಥವಾ ಸತ್ತುಚಿತ್ತಾನಂದ ನಿತ್ಯಪರಿಪೂರ್ಣಭರಿತನಾದ ನಿಃಕಲಪರಮಾನಂದಸ್ವರೂಪರಾದ ನಿರಂಜನಜಂಗಮದಲ್ಲಾಗಲಿ ಇಂತೀ ಉಭಯ ಪರಮೂರ್ತಿಗಳ ಕರುಣಕೃಪೆಯಿಂದ ಶಿವಜ್ಞಾನೋದಯವಾಗಿ ಸಕಲಪ್ರಪಂಚವನೆಲ್ಲವ ನಿವೃತ್ತಿಯ ಮಾಡಿ ಲಿಂಗಾಂಗಸಮರಸದನುಭವವಳವಟ್ಟು ತ್ರಿವಿಧ ವಂಚನೆಯಿಲ್ಲದೆ ಕ್ಷಮೆ, ದಮೆ, ಶಾಂತಿ, ಸೈರಣೆ ಗುಣವುಳ್ಳಂಥ ಸದ್ಭಕ್ತ ಶರಣಜನಂಗಳಲ್ಲಾಗಲಿ ಅಥವಾ ಶಿಷ್ಯೋತ್ತಮನಾದಂಥವರುಗಳಲ್ಲಾಗಲಿ ಇಂತೀ ಉಭಯ ಭಕ್ತಗಣಂಗಳು ಚಿದ್ಘನಮಹಾಲಿಂಗವೆಂಬ ಇಷ್ಟಲಿಂಗವ ಕರಸ್ಥಲಕ್ಕೆ ಪಡಕೊಂಡು, ತಾರಕಮಂತ್ರವೆಂಬ ಮಂತ್ರೋಪದೇಶವ ಹಡಕೊಂಡು, ಆಚರಿಸುವ ಸದ್ಭಕ್ತ ಶರಣಜನಂಗಳ ಆಚರಣೆಯೆಂತಾಯಿತ್ತಯ್ಯಯೆಂದಡೆ: ಸೂರ್ಯಪ್ರಕಾಶವನುಳ್ಳಂಥ ಕನ್ಯಕುಮಾರ ರಾಜನಸಂಗ ಚಂದ್ರಕಾಂತಿಪ್ರಕಾಶವನುಳ್ಳಂಥ ಕನ್ಯಸ್ತ್ರೀಯಳು ಸಂಯೋಗವ ಮಾಡಿ ಅಗ್ನಿಕಾಂತಿಪ್ರಕಾಶವನುಳ್ಳಂಥ ಪುತ್ರನ ಹಡೆದಂತಾಯಿತ್ತಯ್ಯ. ಇಂತಪ್ಪ ಆಚಾರವನುಳ್ಳ ಗುರು ಶಿಷ್ಯರು ದೇವ ಭಕ್ತರೆಂಬ ಈ ನಾಲ್ಕು ಪರಪುರುಷರಿಗೆ ಭವಹಿಂಗುವುದು. ಮುಕ್ತಿಯೆಂಬುದು ಕರತಳಾಮಳಕವಾಗಿ ತೋರುವುದು. ಮತ್ತಂ, ಲಿಂಗಾಂಗಸಂಬಂದ್ಥಿಯಾಗಿ ಸರ್ವಾಚಾರ ನೆಲೆಗೊಂಡು ಸರ್ವಾಗಲಿಂಗಿಯಾದಂಥ ವೀರಮಾಹೇಶ್ವರರಾಗಲಿ, ಅಥವಾ ಗುರುಗಳಾಗಲಿ, ಸದ್ಭಕ್ತ ಶರಣಜನಂಗಳಾಗಲಿ, ಇಂತಪ್ಪ ತ್ರಿವಿಧಶಿವಜ್ಞಾನಿಗಳ ಚರಣಕಮಲಕ್ಕೆ ದೀರ್ಘದಂಡನಮಸ್ಕಾರಮಂ ಮಾಡಿ ಸುಜ್ಞಾನೋದಯವಾಗಿ ಮೋಕ್ಷವ ಹಡೆಯಬೇಕೆಂಬ ಜ್ಞಾನಕಲಾತ್ಮರಾದಂಥವರು ಲಿಂಗಾಂಗಸಮರಸದನುಭಾವವ ವಿಚಾರಿಸಿಕೊಳ್ಳಬೇಕು. ಅಂತಪ್ಪ ಪರಶಿವಮೂರ್ತಿಗಳಾದ ಗುರುಗಳಲ್ಲಾಗಲಿ, ಅಥವಾ ಜಂಗಮಲಿಂಗಿಗಳಲ್ಲಾಗಲಿ, ಅಥವಾ ಇಂತಹ ಶಿವಜ್ಞಾನಿಗಳಾದ ಭಕ್ತರಲ್ಲಾಗಲಿ, ಶಿಷ್ಯೋತ್ತಮರಲ್ಲಾಗಲಿ, ಇಂತಪ್ಪವರಿಗೆ ಲಿಂಗಾಂಗಸಮರಸವ ತೋರಬೇಕು, ತೋರದಿದ್ದರೆ ಪ್ರಮಥರು ಮೆಚ್ಚರು. ಇಂತಪ್ಪ ತ್ರಿಮೂರ್ತಿಗಳು ಹೇಳಿದ ಹಾಂಗೆ ಕೇಳಿ ವಿಶ್ವಾಸದಿಂದ ಆಚರಿಸದಿದ್ದರೆ ಭವಹಿಂಗದು ಮುಕ್ತಿಯೆಂಬುದು ಎಂದೆಂದಿಗೂ ತೋರದು ಎಂದನಯ್ಯಾ ನಿಮ್ಮ ಶರಣ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಪೃಥ್ವಿಯನರಿಯಲುಬಾರದು ನಕಾರ, ಅಪ್ಪುವನರಿಯಲುಬಾರದು ಮಕಾರ, ಅಗ್ನಿಯನರಿಯಲುಬಾರದು ಶಿಕಾರ, ವಾತವನರಿಯಲುಬಾರದು ವಕಾರ, ಅಂಬರವನರಿಯಲುಬಾರದು ಯಕಾರ, ಭಾವವನರಿಯಲುಬಾರದು ಓಂಕಾರ. ಇದು ಕಾರಣ ಷಡ್ಬ್ರಹ್ಮರೂಪ ಚನ್ನಬಸವಲಿಂಗ ಅರಿದು ಅರಿಯದಿರಲುಬೇಕು ಭಕ್ತ.
--------------
ದೇಶಿಕೇಂದ್ರ ಸಂಗನಬಸವಯ್ಯ
ಮನದಲ್ಲಿ ಉಕಾರಸ್ವರೂಪವಾದ ಇಷ್ಟಲಿಂಗವನರಿದರ್ಚಿಸಬಲ್ಲಾತನೆ ಭಕ್ತ. ಮನದಲ್ಲಿ ಸಕಾರಸ್ವರೂಪವಾದ ಪ್ರಾಣಲಿಂಗವನರಿದರ್ಚಿಸಬಲ್ಲಾತನೆ ಭಕ್ತ. ಮನನೀಯದಲ್ಲಿ ಕ್ಷಕಾರಸ್ವರೂಪವಾದ ಭಾವಲಿಂಗವನರಿದರ್ಚಿಸಬಲ್ಲಾತನೆ ಭಕ್ತ. ತ್ರಿವಿಧಲಿಂಗವನರಿದರ್ಚಿಸಬಲ್ಲಾತಂಗಲ್ಲದೆ ಭಕ್ತಿಸ್ಥಲವಿಲ್ಲ ಕಾಣಾ ಗುರುನಿರಂಜನ ಚನ್ನಬಸವಲಿಂಗಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಸದ್ಗುರುಕಾರುಣ್ಯವ ಪಡೆದು ಲಿಂಗಾಂಗಸಮರಸವುಳ್ಳ ವೀರಶೈವ ಭಕ್ತ ಮಹೇಶ್ವರರೆನಿಸಿಕೊಂಡ ಬಳಿಕ ತಮ್ಮಂಗದ ಮೇಲಣ ಲಿಂಗವು ಷಟ್‍ಸ್ಥಾನಂಗಳಲ್ಲಿ ಬ್ಥಿನ್ನವಾದಡೆ ಆ ಲಿಂಗದಲ್ಲಿ ತಮ್ಮ ಪ್ರಾಣವ ಬಿಡಬೇಕಲ್ಲದೆ, ಮರಳಿ ಆ ಬ್ಥಿನ್ನವಾದ ಲಿಂಗವ ಧರಿಸಲಾಗದು. ಅದೇನು ಕಾರಣವೆಂದಡೆ : ತಾನು ಸಾಯಲಾರದೆ ಜೀವದಾಸೆಯಿಂದೆ ಆ ಬ್ಥಿನ್ನವಾದ ಲಿಂಗವ ಧರಿಸಿದಡೆ ಮುಂದೆ ಸೂರ್ಯಚಂದ್ರರುಳ್ಳನ್ನಕ್ಕರ ನರಕಸಮುದ್ರದಲ್ಲಿ ಬಿದ್ದು ಮುಳುಗಾಡುವ ಪ್ರಾಪ್ತಿಯುಂಟಾದ ಕಾರಣ, ಇದಕ್ಕೆ ಸಾಕ್ಷಿ : ``ಶಿರೋ ಯೋನಿರ್ಗೋಮುಖಂ ಚ ಮಧ್ಯಂ ವೃತ್ತಂ ಚ ಪೀಠಕಂ | ಷಟ್‍ಸ್ಥಾನೇ ಛಿದ್ರಯೋಗೇ ತು ತಲ್ಲಿಂಗಂ ನೈವ ಧಾರಯೇತ್ | ತಥಾಪಿ ಧಾರಣಾತ್ ಯೋಗೀ ರೌರವಂ ನರಕಂ ವ್ರಜೇತ್ ||'' -ಸೂP್ಷ್ಞ್ಮ ಗಮ. ಇಂತಪ್ಪ ನರಕಜೀವಿಗಳ ಎನ್ನತ್ತ ತೋರದಿರಯ್ಯಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಮಾಡಿದ ಮಾಟವನರಿಯದ ಭಕ್ತ. ಕೂಡಿದ ಕೂಟವನರಿಯದ ಭಕ್ತ. ಮಾಟ ಕೂಟವೆಂಬ ಕೋಟಲೆಯನುಳಿದ ನಿಸ್ಸಂಗತ್ವ ನಿರಾಭಾರಿ ನಿಸ್ಸೀಮ ನಿರ್ದೇಹಿ ನಿಜದಲ್ಲಿ ಅಡಗಿದ ನಿತ್ಯ ಮುಕ್ತನಯ್ಯಾ ಭಕ್ತನು, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಹರತೇರು ಬಿತ್ತಿದ ಗಿಡವಿನ ಹೂವ್ವ ಕೊಯ್ದು ಊರೆಲ್ಲ ಕಟ್ಟಿದ ಕೆರೆ ನೀರ ತಂದು ನಾಡೆಲ್ಲ ನೋಡಿರಿಯೆಂದು ಪೂಜಿಸುವ ಪುಣ್ಯ ನೀರಿಗೊ ಹುವ್ವಿಗೊ ನಾಡೆಲ್ಲಕ್ಕೊ ಪೂಜಿಸಿದಾತಗೊ ಇದ ನಾನರಿಯೆ ನೀ ಹೇಳೆಂದಾತ ನಮ್ಮ ದಿಟ್ಟ ವೀರಾದ್ಥಿವೀರ ನಿಜ ಭಕ್ತ ಅಂಬಿಗರ ಚವುಡಯ್ಯನು
--------------
ಅಂಬಿಗರ ಚೌಡಯ್ಯ
ಭಕ್ತ ಮಹೇಶ್ವರರು ಆರಾದರೂ ಆಗಲಿ ಶಿವಗಣಂಗಳಲ್ಲಿ ಕುಲವನರಸಿದರೆ ಅವರು ಕುಲಸೂತಕರೆಂದು ಶಿವನು ಯಮನ ಕೈಯಲ್ಲಿ ಕೊಟ್ಟು ಅಘೋರ ನರಕದೊಳು ಹಾಕೆಂದನು ಕಾಣಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಆನು ಭಕ್ತ, ಆನು ಶರಣ, ಆನು ಲಿಂಗೈಕ್ಯನೆಂದೊಡೆ ಲಿಂಗವು ನಗದೆ? ಪಂಚೇಂದ್ರಿಯಂಗಳು ನಗವೆ? ಅರಿಷಡ್ವರ್ಗಂಗಳು ನಗವೆ? ಎನ್ನ ತನುವಿನೊಳಗಣ ಸತ್ವರಜತಮೋ ಗುಣಂಗಳು ನಗವೆ? ಹೇಳಯ್ಯಾ ಉಳಿಯುಮೇಶ್ವರಾ?
--------------
ಉಳಿಯುಮೇಶ್ವರ ಚಿಕ್ಕಣ್ಣ
ಹುಸಿಯ ನುಡಿಯನು ಭಕ್ತ, ವ್ಯಸನಕ್ಕೆಳಸನು ಭಕ್ತ, ವಿಷಯಂಗಳಾತಂಗೆ ತೃಣವು ನೋಡಾ, ಬಯಸುವವನಲ್ಲ ಭಕ್ತ. ದಯೆಯೆಂಬುದು ತನ್ನ ಕೈಯಲ್ಲಿ, ಸ್ಮರಣೆಯೆಂಬುದು ತನಗೆ ತೊತ್ತಾಗಿಪ್ಪುದು. ಕೋಪವೆಂಥದೆಂದರಿಯ, ತಾಪತ್ರಯಂಗಳು ಮುಟ್ಟಲಮ್ಮವು, ವ್ಯಾಪ್ತಿಗಳಡಗಿದವು. ಲಿಂಗವನೊಳಕೊಂಡ ಪರಿಣಾಮಿ. ಆತನ ಪಥ ಲೋಕಕ್ಕೆ ಹೊಸತು, ಲೋಕದ ಪಥವಾತನಿಗೆ ಹೊಸತು. ತನಗೊಮ್ಮೆಯು ಲಿಂಗಧ್ಯಾನ, ಲಿಂಗಕೊಮ್ಮೆಯು ತನ್ನ ಧ್ಯಾನ. ಘನಘನಮಹಿಮೆಯ ಹೊಗಳಲೆನ್ನಳವಲ್ಲ. ಪನ್ನಗಧರ ಕೇಳಯ್ಯಾ, ಚೆನ್ನ ಹಂಪೆಯ ವಿರುಪಯ್ಯಾ, ನಿಮ್ಮ ನಂಬಿದ ಸತ್ಯಶರಣ ಪರಿಣಾಮಿ.
--------------
ಅಗ್ಘವಣಿ ಹಂಪಯ್ಯ
ಭಕ್ತ ಭಕ್ತನೆಂಬರು, ಪೃಥ್ವಿಯ ಪೂರ್ವಾಶ್ರಯವ ಕಳೆಯನಲರಿಯಫದನ್ನಕ್ಕ, ಅಪ್ಪುವಿನ ಪೂರ್ವಾಶ್ರಯವ ಕಳೆಯಲರಿಯದನ್ನಕ್ಕ, ತೇಜದ ಪೂರ್ವಾಶ್ರಯವ ಕಳೆಯಲರಿಯದನ್ನಕ್ಕ, ವಾಯುವಿನ ಪೂರ್ವಾಶ್ರಯವ ಕಳೆಯಲರಿಯದನ್ನಕ್ಕ, ಆಕಾಶದ ಪೂರ್ವಾಶ್ರಯವ ಕಳೆಯಲರಿಯದನ್ನಕ್ಕ, ಸೋಮಸೂರ್ಯರ ಕಳೆಗಳ ಪೂರ್ವಾಶ್ರಯವ ಕಳೆಯಲರಿಯದನ್ನಕ್ಕ, ಆತ್ಮನ ಪೂರ್ವಾಶ್ರಯವ ಕಳೆಯಲರಿಯದನ್ನಕ್ಕ,_ ಭಕ್ತರೆಂದು ಲಿಂಗವ ಪೂಜಿಸುವವರ ಕಂಡು ನಾನು ಬೆರಗಾದೆ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಕಬ್ಬಿನ ಮೇಲೆ ಜೇನಿಟ್ಟಿತ್ತೆಂಬರು, ಅವು ಒಂದರ ಸಿಹಿಯನೊಂದರಿಯವು. ಭಕ್ತ ಜಂಗಮದ ನಡುವೆ ಅರ್ಥಪ್ರಾಣ ಅಬ್ಥಿಮಾನವೆಂಬ ಸಿಗುರು ಕಾಡಿತ್ತು ಕಾಣಾ, ಕೂಡಲಸಂಗಮದೇವಾ.
--------------
ಬಸವಣ್ಣ
ದೇವಸಹಿತ ಭಕ್ತ ಮನೆಗೆ ಬಂದಡೆ ಕಾಯಕವಾವುದೆಂದು ಬೆಸಗೊಂಡೆನಾದಡೆ ನಿಮ್ಮಾಣೆ ! ನಿಮ್ಮ ಪುರಾತರಾಣೆ ! ತಲೆದಂಡ ! ತಲೆದಂಡ ! ಕೂಡಲಸಂಗಮದೇವಾ, ಭಕ್ತರಲ್ಲಿ ಕುಲವನರಸಿದಡೆ ನಿಮ್ಮ ರಾಣಿವಾಸದಾಣೆ. 453
--------------
ಬಸವಣ್ಣ
ಅರ್ಪಿತವೆಂಬೆನೆ ದೇವರೊಂದಿಲ್ಲವಾಗಿ, ಅರ್ಪಿಸುವ ಭಕ್ತ ಮುನ್ನವೆ ಇಲ್ಲ. ಅರ್ಪಿತ ಅನರ್ಪಿತ ನೀನೆ ಎಂಬೆ, ಕೂಡಲಸಂಗಮದೇವಾ.
--------------
ಬಸವಣ್ಣ
ಇನ್ನಷ್ಟು ... -->