ಅಥವಾ

ಒಟ್ಟು 304 ಕಡೆಗಳಲ್ಲಿ , 54 ವಚನಕಾರರು , 265 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮೆಲ್ಲಮೆಲ್ಲನೆ ಭಕ್ತ, ಮೆಲ್ಲಮೆಲ್ಲನೆ ಮಾಹೇಶ್ವರ, ಮೆಲ್ಲಮೆಲ್ಲನೆ ಪ್ರಸಾದಿ, ಮೆಲ್ಲಮೆಲ್ಲನೆ ಪ್ರಾಣಲಿಂಗಿ, ಮೆಲ್ಲಮೆಲ್ಲನೆ ಶರಣ, ಮೆಲ್ಲಮೆಲ್ಲನೆ ಐಕ್ಯರಾದೆವೆಂಬರು_ ನಿಮ್ಮ ಶರಣರು ತಾವೇನು ಮರುಜವಣಿಯ ಕೊಂಡರೆ ? ಅಮೃತಸೇವನೆಯ ಮಾಡಿದರೆ ? ಆವ ಸ್ಥಲದಲ್ಲಿ ನಿಂದರೂ ಆ ಸ್ಥಲದಲ್ಲಿ ಷಡುಸ್ಥಲ ಅಳವಡದಿದ್ದರೆ, ಆ ಭಕ್ತಿಯ ಬಾಯಲ್ಲಿ ಹುಡಿಯ ಹೊಯ್ದು ಹೋಗುವೆನೆಂದ ಕೂಡಲಚೆನ್ನಸಂಗಮದೇವರ
--------------
ಚನ್ನಬಸವಣ್ಣ
ಎತ್ತಿಕೊಳ್ಳಲೇಕೆ, ಮತ್ತಿಳುಹಲೇಕಯ್ಯಾ ಧರಧುರ ಭಕ್ತಿಯ ಮಾಡಲೇಕಯ್ಯಾ ನಿಂದಿಸಲೇಕೆ ಸ್ತುತಿುಸಲೇಕೆ ಹೋಗಬಿಟ್ಟು ಜಂಗಮವ ಹಿಂದೆಯಾಡುವನ ಬಾಯಲ್ಲಿ ಮೆಟ್ಟಿ ಹುಡಿಹೊಯ್ಯದೆ ಮಾಬನೆ ಕೂಡಲಸಂಗಮದೇವ 420
--------------
ಬಸವಣ್ಣ
ಅರಿಕೆ ಉಳ್ಳನ್ನಕ್ಕ ಅರಿವು, ಅರಿವು ಉಳ್ಳನ್ನಕ್ಕ ಕುರುಹು, ಕುರುಹು ಉಳ್ಳನಕ್ಕ ಸತ್ಕಿೃೀ ಮಾರ್ಗಂಗಳು. ಆ ದೆಸೆಯಿಂದ ತ್ರಿವಿಧಸ್ಥಲ ರೂಪಾದವು. ಇಂತೀ ತ್ರಿವಿಧ ತ್ರಿವಿಧದಿಂದ ಷಡುಸ್ಥಲ ರೂಪಾಗಿ ಮೂಲ ಮೊಳೆಯೊಂದರಲ್ಲಿ ಹಲವು ಶಾಖೆ ಹೊಲಬಾದಂತೆ, ಇದು ನಿಜವಸ್ತುವಿನ ವಸ್ತುಕ. ಈ ಗುಣ ನಿರ್ಭಾವ ಭಾವವಾದ ಸಂಬಂಧ. ಇದು ವರ್ತಕ ಭಕ್ತಿಯ ಬ್ಥಿತ್ತಿ. ಉತ್ತರ ಪೂರ್ವದಲ್ಲಿ ಬೆರಸಿ ನಿರುತ್ತರವಾದ ಸಂಬಂಧ. ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು.
--------------
ದಾಸೋಹದ ಸಂಗಣ್ಣ
ಕುಲಗೆಟ್ಟಡೆ ಕೆಡಬಹುದಲ್ಲದೆ ಛಲಗೆಡಬಾರದು, ಛಲಗೆಟ್ಟಡೆ ಕೆಡಬಹುದಲ್ಲದೆ ಭಕ್ತಿಯ ಅನು ಕೆಡಬಾರದು, ಭಕ್ತಿಯ ಅನು ಕೆಟ್ಟಡೆ ಕೆಡಬಹುದಲ್ಲದೆ ಆಯತ ಕೆಡಬಾರದಯ್ಯಾ, ಆಯತ ಕೆಟ್ಟಡೆ ಕೆಡಬಹುದಲ್ಲದೆ ಸ್ವಾಯತ ಕೆಡಬಾರದಯ್ಯಾ. ಎಲೆ ಕೂಡಲಸಂಗಮದೇವಯ್ಯಾ, ಮುನ್ನ ಮುಟ್ಟಿತ್ತೆ ಮುಟ್ಟಿತ್ತು, ಇನ್ನು ಮುಟ್ಟಿದೆನಾದಡೆ ನಿಮ್ಮ ರಾಣಿವಾಸದಾಣೆ.
--------------
ಬಸವಣ್ಣ
ಒಳಗೆ ತಿಳಿಯದೆ ಹೊರಗೆ ಮಾಡುವ ಮಾಟವೆಲ್ಲ ಅಜ್ಞಾನದ ಗಡಣದೊಳಗು. ಒಳಗೆ ಗುರುಲಿಂಗಜಂಗಮದ ಪಾದತೀರ್ಥಪ್ರಸಾದವ ಕೊಂಡೆವೆಂದು ಹೊರಗೆ ಮಾಡುವ ಭಕ್ತಿಯ ಬಿಟ್ಟರೆ ಮುಂದೆ ಒದಗುವ ಮುಕ್ತಿಯ ಕೇಡು. ಅದೆಂತೆಂದೊಡೆ : ಅಸಲು ಕಳೆದ ಬಳಿಕ ಲಾಭವುಂಟೇ ? ಇಲ್ಲ ಇಲ್ಲ, ಮಾಣು. ಒಳಗಣ ಕೂಟ, ಹೊರಗಣ ಮಾಟವನರಿಯದೆ ಕೆಟ್ಟರು ನೋಡಾ ಹಿರಿಯರೆಲ್ಲರು ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಲಿಂಗ ಬೇರೆ, ಶರಣ ಬೇರೆಂದು ಹಂಗಿಸಿ ನುಡಿಯಲಾಗದು. ಲಿಂಗ ಬೇರೆ, ಶರಣ ಬೇರೆಯೇ? ಶಿವಶಿವ ಒಂದೇ ಕಾಣಿರಣ್ಣ. ಸುವರ್ಣ ಆಭರಣವಾಯಿತ್ತೆಂದಡೆ, ಅದು ನಾಮ ರೂಪಭೇದವಲ್ಲದೆ ವಸ್ತುಭೇದವಲ್ಲ. ಭಕ್ತಿಯ ವೈಭವದಿಂದ ಶರಣ ಸಕಾಯನಾಗಿ ಅವತರಿಸಿದೆನೆಂದಡೆ ಬೇರಾಗಬಲ್ಲನೇ? ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನೆಂಬ ಲಿಂಗವೆಂದಡೂ ಶರಣನೆಂದಡೂ ಒಂದೇ ಕಾಣಿರಣ್ಣಾ.
--------------
ಸ್ವತಂತ್ರ ಸಿದ್ಧಲಿಂಗ
ಕಾಣಬಾರದ ಲಿಂಗ ಕೈಗೆ ಬಂದಿತ್ತಾಗಿ ಮಾಡಬಾರದ ಭಕ್ತಿಯ ಮಾಡುತಲಿರ್ದೆನು. ನಡೆಯಬಾರದ ನಡೆಯ ನಡೆವೆ, ಮತ್ತೊಂದನರಿಯೆ, ನೋಡಬಾರದ ನಡೆ ಕಣ್ಣಮುಂದೆ ಬಂದಿತ್ತಾಗಿ ಅದ್ವೈತನಡೆಯ ಕಾಣಲಿಲ್ಲ. ಗುರುನಿರಂಜನ ಚನ್ನಬಸವಲಿಂಗದಲ್ಲಿ ಕಷ್ಟಕರ್ಮದ ಬಟ್ಟೆಯ ಬೆಳಗಿನೊಳಗಿರ್ಪ ಹೊಟ್ಟೆಹೊರಕರ ಮಾತನೆಣಿಸಲಿಲ್ಲ.
--------------
ದೇಶಿಕೇಂದ್ರ ಸಂಗನಬಸವಯ್ಯ
ತನುವಿನ ವಿಕಾರದ ಕತ್ತಲೆಯಲ್ಲಿ ಸಿಲ್ಕಿ, ಕಂಗೆಟ್ಟು ಕಳವಳಿಸಿ ತೊಳಲಿ ಬಳಲಿದೆನಯ್ಯ. ಮನದ ವಿಕಾರದ ಮರವೆಯಲ್ಲಿ ಸಿಲ್ಕಿ, ಮಣ್ಣುಮಸಿಯಾಗಿ ಬಣ್ಣಗೆಟ್ಟೆನಯ್ಯ. ಈ ತನುಮನದ ವಿಕಾರವ ಮಾಣಿಸಿ, ನಿಮ್ಮ ಭಕ್ತಿಯ ವಿಕಾರದಲ್ಲಿರಿಸಿ ಸಲಹಯ್ಯ ಎನ್ನ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಭಕ್ತಿಯ ಕುಳವನು ಬಸವಣ್ಣನೇ ಬಲ್ಲನು. ಪ್ರಸಾದದ ನೆಲೆಯನು ಬಸವಣ್ಣನೇ ಬಲ್ಲನು. ಬಸವಣ್ಣ ನಡೆದುದೇ ಮಾರ್ಗ, ಅಖಿಳಗಣಂಗಳಿಗೆ, ಬಸವಣ್ಣ ನುಡಿದುದೇ ವೇದ, ಮಹಾಪುರುಷರಿಗೆ, ಬಸವಣ್ಣನನಾದಿ, ಲಿಂಗವಾದಿ ಎಂದರಿದೆನಾಗಿ, ಬಸವಣ್ಣನ ನೆನೆವುತಿರ್ದೆನಯ್ಯಾ. ಬಸವಣ್ಣನ ಪಾದವಿಡಿದೆನಾಗಿ, ಲಿಂಗವೇದಿಯಾದೆನು. ಬಸವಣ್ಣನ ಬಾಗಿಲ ಕಾಯ್ದೆನಾಗಿ, ಪ್ರಸಾದ ಸಾಧ್ಯವಾಯಿತ್ತು. ಬಸವಣ್ಣನ ಕರುಣದಿಂದ ಪ್ರಭುದೇವರ ನಿಲವ ಕಂಡೆನು. ಬಸವಣ್ಣನ ಬೋಧೆಯಿಂದ ಜಂಗಮವೇ ಲಿಂಗವೆಂದರಿದೆನು. ಆ ಜಂಗಮ ಮುಖದಿಂದಲ್ಲದೆ ಲಿಂಗತೃಪ್ತಿಯಾಗದು. ಪ್ರಸಾದಸಿದ್ಧಿಯಾದಲ್ಲದೆ ಭವಂ ನಾಸ್ತಿಯಾಗದು. ಇದು ಕಾರಣ, ಶುದ್ಧಸಿದ್ಧ ಪ್ರಸಿದ್ಧ ಪ್ರಸನ್ನ ಪ್ರಭುವೆ ಶಾಂತಚೆನ್ನಮಲ್ಲಿಕಾರ್ಜುನದೇವಯ್ಯಾ, ನಿಮ್ಮ ಶರಣ ಬಸವಣ್ಣನ ನಂಬಿ, ನಾನು ಕೆಟ್ಟು, ಬಟ್ಟಬಯಲಾಗಿ ಹೋದೆನೆಯ್ಯಾ, ನಿಮ್ಮ ಧರ್ಮ ನಿಮ್ಮ ಧರ್ಮ ನಿಮ್ಮ ಧರ್ಮ.
--------------
ಮರುಳಶಂಕರದೇವ
ಗುರುಕರುಣಾಮೃತವಿಲ್ಲದ ಭಕ್ತಿಯ ಅನು, ಮನದಲನುಕರಿಸುವ ಜೀವಿಗಿನ್ನೆಲ್ಲಿಯದೊ ? ಸತ್ಕ್ರಿಯೆ ಸತ್ಪಥವಿನ್ನೆಲ್ಲಿಯದೊ ? ಇದು ಕಾರಣ, ಮಹಾಲಿಂಗ ಕಲ್ಲೇಶ್ವರದೇವ ಲಿಂಗ ಜಂಗಮ ಕರುಣವಿಲ್ಲದ ಜಡಮತಿಗಿನ್ನೆಲ್ಲಿಯದೊ ?
--------------
ಹಾವಿನಹಾಳ ಕಲ್ಲಯ್ಯ
ಆವಾವ ದ್ರವ್ಯಪದಾರ್ಥಂಗಳನು ಶಿವಲಿಂಗಕ್ಕರ್ಪಿಸಿ ಪ್ರಸಾದವಾದಲ್ಲದೆ ಕೊಳ್ಳೆವೆಂಬ ಪ್ರಸಾದಿಗಳಿರಾ ನೀವು ಅರ್ಪಿಸಿದ ಪರಿಯೆಂತು ? ಪ್ರಸಾದವ ಕೊಂಡ ಪರಿಯೆಂತು ಹೇಳಿರೆ ? ರೂಪಾರ್ಪಿತವಾಯಿತ್ತು ನೇತ್ರದಿಂದ, ಮೃದು, ಕಠಿಣ, ಶೀತೋಷ್ಣಂಗಳು ಅರ್ಪಿತವಾದವು ಸ್ಪರ್ಶನದಿಂದ. ನೇತ್ರ ಹಸ್ತವೆರಡಿಂದ್ರಿಯಂಗಳಿಂದವೂ ರೂಪು ಸ್ಪರ್ಶನವೆಂಬೆರಡೆ ವಿಷಯಂಗಳರ್ಪಿತವಾದವು. ನೀವಾಗಳೇ ಪ್ರಸಾದವಾಯಿತ್ತೆಂದು ಭೋಗಿಸತೊಡಗಿದಿರಿ. ಇಂತು ದ್ರವ್ಯಂಗಳ ರಸವನೂ, ಗಂಧವನೂ, ಶಬ್ದವನೂ, ಶ್ರೋತೃ, ಘ್ರಾಣ, ಜಿಹ್ವೆಗಳಿಂದ ಮೂರು ವಿಷಯಂಗಳನೂ ಅರ್ಪಿಸದ ಮುನ್ನ ಪ್ರಸಾದವಾದ ಪರಿ ಎಂತೊ ? ಅರ್ಪಿತವೆಂದನರ್ಪಿತವ ಕೊಂಬ ಪರಿ ಎಂತೊ ? ಪ್ರಸಾದಿಗಳಾದ ಪರಿ ಎಂತೊ ಶಿವ ಶಿವಾ. ಪಂಚೇಂದ್ರಿಯಂಗಳಿಂದವೂ, ಶಿವಲಿಂಗಪಂಚೇಂದ್ರಿಯ ಮುಖಕ್ಕೆ ಪಂಚವಿಷಯಂಗಳನೂ ಅರ್ಪಿಸಬೇಕು. ಅರ್ಪಿಸಿ ಪ್ರಸಾದವ ಕೊಂಡಡೆ ಪ್ರಸಾದಿ. ಅಲ್ಲದಿರ್ದಡೆ ಅಷ್ಟವಿಧಾರ್ಚನೆ ಷೋಡಶೋಪಚಾರ ಕ್ರಿಯೆ ಅಲ್ಲ. ಪ್ರಸಾದಿಯಲ್ಲ, ಭಕ್ತಿಯ ಪರಿಯೂ ಅಲ್ಲ. ಪೂಜಕರೆಂಬೆನೆ ಪೂಜೆಯ ಒಪ್ಪವಲ್ಲ. ಸಾಧಾರಣ ಪೂಜಕರಪ್ಪರು ಕೇಳಿರಣ್ಣಾ. ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರನ ಸಾವಧಾನಾರ್ಪಿತದಲ್ಲಿ ಸ್ವಯವಾಗರಯ್ಯ.
--------------
ಉರಿಲಿಂಗಪೆದ್ದಿ
ಮಕ್ಕಳು ಮರಿಗಳು ಸತ್ತು ನಷ್ಟವಾಗಿ, ಕಷ್ಟ ದುಃಖ ನೆಲೆಗೊಂಡಿತ್ತೆಂದು ತನ್ನಿಷ್ಟಲಿಂಗಪೂಜೆಯನಗಲಿಸಿ, ಬಿಟ್ಟಿಯ ಮಾಡಬಹುದೇನಯ್ಯಾ? ಜಂಗಮವು ಬಂದು ತನ್ನ ವ್ರತ ನೇಮಕ್ಕೆ ಬೇಡಿದಡೆ ನಿಮ್ಮ ಉಪದ್ರವೇನೆಂದು ಭಕ್ತಿಯ ಮಾಡಬಹುದೇನಯ್ಯಾ? ಸಕಲದುಃಖಂಗಳು ತಮ್ಮಿಂದ ತಾವೇ ಬರಲರಿಯವು. ಭಕ್ತಿಯನ್ನು ಮರೆದು, ಮರವೆಯಲ್ಲಿ ಬೆರೆದು, ಭವಭವದಲ್ಲಿ ಬರುವುದು ಅದೇ ದುಃಖವು, ನಿಶ್ಚಯವೆಂದಾತ ನಮ್ಮ ಅಂಬಿಗರ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಮುಕ್ತಿಯ ಕೂಟಕ್ಕೆ ಮೂಗ ನೀನೆ ಬಸವಾ. ಭಕ್ತಿಯ ತನುಸಂಬಂದ್ಥಿ ನೀನೆ ಬಸವಾ. ಎನಿತೆನಿತು ಜರಿದಡೂ `ಬಸವಾ' ಎಂಬುದ ಮಾಣುವೆನೆ ಅಯ್ಯಾ? ಎನಿತೆನಿತು ಕಡಿದಡೂ `ಬಸವಾ' ಎಂಬುದ ಮಾಣುವೆನೆ ಅಯ್ಯಾ? ಕಪಿಲಸಿದ್ಧಮಲ್ಲಿನಾಥಯ್ಯಾ.
--------------
ಸಿದ್ಧರಾಮೇಶ್ವರ
ಹೆಂಡಿರು_ಮಕ್ಕಳಿಗೆ ಕುಲದೈವ ಮನೆದೈವವಲ್ಲದೆ ಎನಗೆ ಕುಲದೈವ ಮನೆದೈವವಿಲ್ಲೆಂಬ ಭಂಡನ ಭಕ್ತಿಯ ಪರಿಯ ನೋಡಾ. [ಆ] ಯುಕ್ತಿಶೂನ್ಯಂಗೆ ಮುಂದೆ ದೃಷ್ಟವ ಹೇಳಿಹೆನು: ತನ್ನ ಹೆಂಡತಿ ಮತ್ತೊಬ್ಬನ ಮೆಚ್ಚಿಕೊಂಡು ಹೋಗುತ್ತಿರೆ, ಹೋದರೆ ಹೋಗಲಿ ಎಂದು ಸೈರಿಸಬಲ್ಲಡೆ ತಾನವರೊಳಗಲ್ಲ. ಅಕಟಕಟಾ ಲೌಕಿಕಕ್ಕೆ ಆಜ್ಞೆಯುಂಟು ಪಾರಮಾರ್ಥಕ್ಕೆ ಆಜ್ಞೆಯಿಲ್ಲವೆ ! ಇದು ಕಾರಣ_ಕೂಡಲಚೆನ್ನಸಂಗಯ್ಯಾ ಭಕ್ತನಾಗಿ ಭವಿಯ ಬೆರಸುವ ಅನಾಚಾರಿಯ ತೋರದಿರಯ್ಯಾ.
--------------
ಚನ್ನಬಸವಣ್ಣ
ಬಸವಾ ಬಸವಾ, ನಿಮ್ಮಿಂದ ಕಂಡೆನಯ್ಯಾ ಭಕ್ತಿಯ. ಬಸವಾ ಬಸವಾ, ನಿಮ್ಮಿಂದ ಕಂಡೆನಯ್ಯಾ ಜ್ಞಾನವ. ಬಸವಾ ಬಸವಾ, ನಿಮ್ಮಿಂದ ಕಂಡೆನಯ್ಯಾ ವೈರಾಗ್ಯವ. ಕರುಣಿ ಕಪಿಲಸಿದ್ಧಮಲ್ಲಿನಾಥಯ್ಯಾ, ನಿಮಗೂ ಎನಗೂ ಬಸವಣ್ಣನೆ ಶಿವಪಥಿಕನಯ್ಯಾ.
--------------
ಸಿದ್ಧರಾಮೇಶ್ವರ
ಇನ್ನಷ್ಟು ... -->