ಅಥವಾ

ಒಟ್ಟು 38 ಕಡೆಗಳಲ್ಲಿ , 21 ವಚನಕಾರರು , 37 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಂಗನೆಯ ಚಿತ್ತ, ರಮಣನ ಸುತ್ತಿಮುತ್ತಿ ಅಪ್ಪಿ ಅಗಲದಿಪ್ಪಂತೆ ಜಾಗ್ರ, ಸ್ವಪ್ನ, ಸುಷುಪ್ತಿಯಲ್ಲಿ ಶರಣ ಚಿತ್ತರತಿ ಶಿವಲಿಂಗವ ಸುತ್ತಿ ಮುತ್ತಿ ಅಪ್ಪಿ ಅಗಲದಿಪ್ಪರೆ ಆ ಮಹಾತ್ಮನ ಏನೆಂದುಪಮಿಸುವೆನಯ್ಯ? ಲಿಂಗಪ್ರಾಣಿಯ, ಪ್ರಾಣಲಿಂಗಸಂಬಂದ್ಥಿಯ? ಸ್ವತಂತ್ರ ವಸ್ತುವಿನಲ್ಲಿ ಅರಿವರತು ಬೆರಗು ನಿಬ್ಬೆರಗಾದ, ಘನಲಿಂಗಪ್ರಾಣಿಗೆ ನಮೋ ನಮೋಯೆಂಬೆನಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಲಿಂಗವೇ ಪ್ರಾಣ, ಪ್ರಾಣವೇ ಲಿಂಗವಾದ ಪ್ರಾಣಲಿಂಗಿಯ ಪ್ರಾಣಲಿಂಗಕ್ಕೆ, ಧ್ಯಾನಾಮೃತ ಪಂಚಾಕ್ಷರಂಗಳ ಪಂಚಾಮೃತದಿಂ ಮಜ್ಜನಕ್ಕೆರೆದು, ಆ ಲಿಂಗಕ್ಕೆ ಮನವೇ ಪುಷ್ಪ, ಬುದ್ಧಿಯೆ ಗಂಧ, ಚಿತ್ತವೇ ನೈವೇದ್ಯ. ಅಹಂಕಾರವಳಿದ ನಿರಹಂಕಾರದ ಆರೋಗಣೆಯ ಮಾಡಿಸಿ, ಪರಿಣಾಮದ ವೀಳ್ಯವನಿತ್ತು, ಸ್ನೇಹದಿಂದ ವಂದನೆಯಂ ಮಾಡಿ, ಆ ಪ್ರಾಣಲಿಂಗಕ್ಕೆ ಬಹಿರಂಗದ ಪೂಜೆಯ ಪರಿಯಲಿ ಅಂತರಂಗದ ಪೂಜೆಯ ಮಾಡುವುದು. ಬಹಿರಂಗದ ಪೂಜೆಯ ಪ್ರಾಣಲಿಂಗಕ್ಕೆ ಅಂತರಂಗದ ವಸ್ತುಗಳೆಲ್ಲವನ್ನು ತಂದು, ಬಹಿರಂಗದ ವಸ್ತುವಿನಲ್ಲಿ ಕೂಡಿ, ಅಂತರ್ಬಹಿರುಭಯ ಲಿಂಗಾರ್ಚನೆಯ ಮಾಡಲು, ಅಂತರಂಗ ಬಹಿರಂಗ ಭರಿತನಾಗಿಪ್ಪನಾ ಶಿವನು, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.
--------------
ಉರಿಲಿಂಗಪೆದ್ದಿ
ಶಿಲೆ ಭಾವ ಹಿಂಗಿ ಕುರುಹಾಯಿತ್ತು, ಕಾರುಕನ ಕೈಯಲ್ಲಿ, ಪಾಷಾಣ ಭಾವ ಹಿಂಗಿ ಕಳೆಯಾಯಿತ್ತು. ಆಚಾರ್ಯನ ಕೈಯಲ್ಲಿ. ಕಳೆ ನೆಲೆಯಾಯಿತ್ತು, ಪೂಜಿಸುವಾತನ ಚಿತ್ತದಲ್ಲಿ. ಚಿತ್ತ ವಸ್ತುವಿನಲ್ಲಿ ಬೆರೆದು ಕಾಲಾಂತಕ ಬ್ಥೀಮೇಶ್ವರಲಿಂಗವಾಯಿತ್ತು
--------------
ಡಕ್ಕೆಯ ಬೊಮ್ಮಣ್ಣ
ನಾರೀಕೇಳ ಹುಟ್ಟಿದ ಸುಜಲವ ಅಲ್ಲಿಗೆ ಎಯ್ದಿಸಿ ಎರೆದವರಿಲ್ಲ ಅದು ಬಲಿದು ಅಲ್ಲಿಯೇ ಅರತಾಗ ಬೇರೊಂದು ಕೊಂಡುದಿಲ್ಲ. ಅಪ್ಪುವರತು ತುಪ್ಪ ತನ್ನಲ್ಲಿಯೆ ಒದಗಿದಂತೆ ನಿಶ್ಚೆ ೈಸಿದ ಮನ ವಸ್ತುವಿನಲ್ಲಿ ಕೂಡಿ ಕಾಯದ ಕರಂಡದಲ್ಲಿ ಕರಣಂಗಳರತು ಜೀವ ಕೆಟ್ಟು ಪರಮನಾದಂತೆ. ಈ ಭೇದವನರಿದು ಕಾಲನ ಗೆದ್ದು ಕಾಲಾಂತಕ ಬ್ಥೀಮೇಶ್ವರಲಿಂಗವು ತಾನಾದನು.
--------------
ಡಕ್ಕೆಯ ಬೊಮ್ಮಣ್ಣ
ಮರನುರಿದು ಬೆಂದು ಕರಿಯಾದ ಮತ್ತೆ ಉರಿಗೊಡಲಾದುದ ಕಂಡು, ಆತ್ಮ ಪರಿಭವಕ್ಕೆ ಬಪ್ಪುದಕ್ಕೆ ಇದೆ ದೃಷ್ಟ. ಕರಿ ಭಸ್ಮವಾದ ಮತ್ತೆ ಉರಿಗೊಡಲಿಲ್ಲ, ಅರಿಕೆ ನಿಂದಲ್ಲಿ ಆತ್ಮ ಪರಿಭವಕ್ಕೆ ಬರಲಿಲ್ಲ, ಉರಿಯೊಳಗೊಡಗೂಡಿದ ತಿಲಸಾರ ತುಪ್ಪ ಮರಳಿ ಅಳೆತಕ್ಕುಂಟೆ ? ವಸ್ತುವಿನಲ್ಲಿ ಕರಿಗೊಂಡ ಚಿತ್ತ, ತ್ರಿವಿಧಮಲಕ್ಕೆ ಹೊರಳಿ ಮರಳುವದೆ ? ಈ ಗುಣ ನಡೆ ನುಡಿ ಸಿದ್ಧಾಂತವಾದವನ ಇರವು, ಗಾರುಡೇಶ್ವರಲಿಂಗವ ಕೂಡಿದವನ ಕೂಟ.
--------------
ಉಪ್ಪರಗುಡಿಯ ಸೋಮಿದೇವಯ್ಯ
ಪೃಥಿವ್ಯಪ್ತೇಜೋವಾಯ್ವಾಕಾಶಂಗಳಲ್ಲಿ ಪೃಥಿವ್ಯಪ್ತೇಜಸ್ಸುಗಳು ಸಾಕರಾಗಳೂ ವಾಯ್ವಾಕಾಶಂಗಳು ನಿರಾಕಾರಗಳೂ ಆಗಿ, ಸ್ಥೂಲ ಸೂಕ್ಷ್ಮಕಾರಣಂಗಳಾಗಿಹವು. ಪೃಥ್ವಿಯಲ್ಲೈದು ಗುಣಗಳೂ ಜಲದಲ್ಲಿ ನಾಲ್ಕು ಗುಣಗಳೂ ಅಗ್ನಿಯಲ್ಲಿ ಮೂರು ಗುಣಗಳೂ ವಾಯುವಿನಲ್ಲಿರಡು ಗುಣಗಳೂ ಇರ್ಪವು. ಆಕಾಶದಲ್ಲೊಂದು ಗುಣವಿರ್ಪುದು. ಆತ್ಮನು ನಿರ್ಗುಣಮಾಗಿ ಸಕಲಗುಣಂಗಳಿಗೂ ತಾನು ಕಾರಣಮಾಗಿಹನು. ಅದೆಂತೆಂದೊಡೆ : ನಿರ್ಗುಣಮಾದ ಬಿಂದುಪದಾರ್ಥವು ಸಗುಣರೂಪಮಾದ ಮನುಷ್ಯರಿಗೆ ತಾನು ಕಾರಣಮಾಗಿರ್ಪಂದದಿ ಆತ್ಮನಿಹನು. ಪಂಚವರ್ಣಂಗಳು ಸತ್ವರಜಸ್ತಮೋಗುಣಂಗಳು. ನಾದ ಬಿಂದು ಕಲೆಗಳು ಬಾಲ್ಯ ಯೌವನ ಕೌಮಾರ ವಾರ್ಧಕ್ಯಂಗಳು. ಇವೆಲ್ಲವೂ ಪ್ರಪಂಚಕ್ಕೆ ಗುಣಂಗಳಲ್ಲದೆ ಆತ್ಮನ ಗುಣವಲ್ಲ. ಅಂತಪ್ಪ ಆತ್ಮನೇ ಶಿವನು, ಆಕಾಶವೇ ವಿಷ್ಣು, ವಾಯುವೇ ಬ್ರಹ್ಮನು. ಸಾಕಾರದಲ್ಲಿ ಅಗ್ನಿಯೇ ರುದ್ರನು, ಜಲವೇ ವಿಷ್ಣು. ಪೃಥ್ವಿಯೇ ಬ್ರಹ್ಮನು. ಇವು ಒಂದಕ್ಕೊಂದು ಸೃಷ್ಟಿ ಸ್ಥಿತಿ ಸಂಹಾರಹೇತುಗಳಾಗಿ, ಎಲ್ಲವೂ ಆತ್ಮನಲ್ಲಿ ಲಯವನೈದುತ್ತಿಹವು. ಅಂತಪ್ಪ ಆತ್ಮಸ್ವರೂಪಮೆತೆಂದೊಡೆ : ದೃಷ್ಟಿಗೋಚರಮಲ್ಲ, ಒಂದು ವಸ್ತುವಿನಲ್ಲಿ ಸಾಮ್ಯಗೋಚರಮಲ್ಲ. ಅದೆಂತೆಂದೊಡೆ : ವಾಯ್ವಾಕಾಶಾತ್ಮಸ್ವರೂಪಿಗಳಾದ ತ್ರಿಮೂರ್ತಿಗಳು. ವಾಯುರೂಪಮಾದ ಬ್ರಹ್ಮನೇ ಲಕ್ಷ್ಮಿಯು, ಆಕಾಶರೂಪಮಾದ ವಿಷ್ಣುವೇ ಮಹಾದೇವಿಯು, ಆv್ಮÀರೂಪಮಾದ ಶಿವನೇ ಶಾರದೆಯು. ವಾಯುರೂಪಮಾದ ಬ್ರಹ್ಮನು ಆತ್ಮರೂಪಮಾದ ಶಾರದೆಯನ್ನು ಕೂಡಿಹನು. ಆಕಾಶರೂಪಮಾದ ವಿಷ್ಣುವು ವಾಯುರೂಪಮಾದ ಲಕ್ಷ್ಮಿಯಂ ಕೂಡಿಹನು. ಆತ್ಮÀರೂಪಮಾದ ಶಿವನು ಆಕಾಶರೂಪಮಾದ ಮಹಾದೇವಿಯಂ ಕೂಡಿಹನು. ಆತ್ಮನೇ ವಿವೇಕವೆಂದು ತಿಳಿವುದು, ವಿವೇಕವೇ ಸತ್ಯಜ್ಞಾನಾಂದಸ್ವರೂಪು, ವಿವೇಕದಿಂದ ಸಕಲಪ್ರಪಂಚವೆಲ್ಲಾ ಮಿಥ್ಯೆಯಾಗಿಹುದು. ಅಂತಪ್ಪ ಸಕಲಪ್ರಪಂಚಮೆಲ್ಲವೂ ಮಿಥ್ಯವೆಂದು ತಿಳಿದು ಆ ಪ್ರಪಂಚದಲ್ಲಿ ಹೊಂದಿರ್ಪ ವಿವೇಕವೇ ಮುಕ್ತಿಯು, ಆಮುಕ್ತಿಯೇ ಶಿವನು. ಅಂತಪ್ಪ ವಿವೇಕದಲ್ಲಿನಾಹಂಭಾವವಡಗಿ, ಅಂತಪ್ಪ ವಿವೇಕವೇ ಮಹಾಲಿಂಗವು, ಅಂತಪ್ಪ ವಿವೇಕಮಿರ್ದಲ್ಲಿ ಪಾಪಗಳು ಹೊಂದದೇ ಇಹವು. ಅದುಕಾರಣ, ತಾನು ತಾನಾಗಿರ್ಪ ನಿಜಾನಂದಸುಖದೊಳೋಲಾಡುತಿರ್ಪಂತೆ ಮಾಡಾ ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ.
--------------
ಮುಮ್ಮಡಿ ಕಾರ್ಯೇಂದ್ರ /ಮುಮ್ಮಡಿ ಕಾರ್ಯ ಕ್ಷಿತೀಂದ್ರ
`ಪ್ರಾಣಲಿಂಗ, ಲಿಂಗ ಪ್ರಾಣ'ವೆಂಬ ಧ್ಯಾನಾಮೃತದಿಂದ ಪಂಚಾಕ್ಷರಂಗಳ ಪಂಚಾಮೃತದಿಂದ ಮಜ್ಜನಕ್ಕೆರೆದಡೆ ಆ ಲಿಂಗಕ್ಕೆ ಮನವೇ ಪುಷ್ಪ, ಬುದ್ಧಿಯೇ ಗಂಧ ಚಿತ್ತವೇ ನೈವೇದ್ಯ, ನಿರಹಂಕಾರದಿಂದಾರೋಗಣೆಯ ಮಾಡಿಸಿ, ಪರಿಣಾಮದ ವೀಳೆಯವನಿತ್ತು ಸ್ನೇಹದಿಂದ ವಂದನೆಯಂ ಮಾಡಿ ಪ್ರಾಣಲಿಂಗಕ್ಕೆ ಅಂತರಂಗಪೂಜೆಯ ಮಾಡುವುದು. ಅಂತರಂಗದ ವಸ್ತುಗಳನೆಲ್ಲವನೂ ಬಹಿರಂಗದ ವಸ್ತುವಿನಲ್ಲಿ ಕೂಡಿ ಲಿಂಗಾರ್ಚನೆಯಂ ಮಾಡಲು ಅಂತರಂಗಬಹಿರಂಗದಲ್ಲಿ ಭರಿತನಾಗಿಪ್ಪನು ಶಿವನು ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಅಂತರಂಗದಲ್ಲಿ ವಸ್ತುವ ಕಂಡೆನಯ್ಯ. ಬಹಿರಂಗದಲ್ಲಿ ಆಚಾರವಿರಬೇಕಯ್ಯ. ಆ ಆಚಾರವಿಡಿದು ಗುರು ಲಿಂಗ ಜಂಗಮ ಪಾದೋದಕ ಪ್ರಸಾದವ ಸ್ವೀಕರಿಸಬೇಕಯ್ಯ. ಆ ಪಾದೋದಕ ಪ್ರಸಾದವನರಿತು ಆ ವಸ್ತುವಿನಲ್ಲಿ ಕೂಡಬಲ್ಲಾತನೆ ಒಳಗೆ ಲಿಂಗಮಯ, ಹೊರಗೆ ಲಿಂಗಮಯ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ತನುವಿನಲ್ಲಿ ಗುರು ಭರಿತವಾದುದೇ ಭರಿತಬೋನ. ಮನದಲ್ಲಿ ಲಿಂಗ ಭರಿತವಾದುದೇ ಭರಿತಬೋನ. ಧನದಲ್ಲಿ ಜಂಗಮ ಭರಿತವಾದುದೇ ಭರಿಬೋನ. ಪ್ರಾಣದಲ್ಲಿ ಪ್ರಸಾದ ಭರಿತವಾದುದೇ ಭರಿತಬೋನ. ಅಂತರಂಗ ಬಹಿರಂಗದಲ್ಲಿ ಪರಿಪೂರ್ಣವಸ್ತು ಭರಿತವಾಗಿ ಎಡೆ ಕಡೆಯಿಲ್ಲದ ವಸ್ತುವಿನಲ್ಲಿ ತಾ ಭರಿತವಾದುದೇ ಭರಿತಬೋನ. ಹೀಂಗಲ್ಲದೆ: ಪುರುಷಾಹಾರಪ್ರಮಾಣಿನಿಂದ ಓಗರವ ಗಡಣಿಸಿಕೊಂಡು ಲಿಂಗಾರ್ಪಿತಮಾಡಿ ಪ್ರಸಾದವೆಂದು ಕೊಂಡು ಎಂಜಲುಯೆಂದು ಕಳೆದು ಬಂದ ಪದಾರ್ಥವ ಮುಟ್ಟಿ ಲಿಂಗಾರ್ಪಿತವ ಮಾಡಲಮ್ಮದವರಿಗೆ ಲಿಂಗಾರ್ಪಿತವಿಲ್ಲ. ಲಿಂಗಾರ್ಪಿತವಿಲ್ಲವಾಗಿ ಪ್ರಸಾದವಿಲ್ಲ. ಪ್ರಸಾದವಿಲ್ಲವಾಗಿ ಮುಕ್ತಿಯೆಂಬುದು ಇಲ್ಲ. ಇವರ ಲಿಂಗಾಂಗಸಂಬಂಧಿಗಳೆಂತೆಂಬೆನಯ್ಯ? ಲಿಂಗಾಂಗಿಯ ಅಂಗದಲ್ಲಿ ಸಂದೇಹ ಸೂತಕ ಉಂಟೇ? ಈ ಭಂಗಿತರ ಮುಖವ ನೋಡಲಾಗದು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ದಂಡಕ್ಕಂಜಿ, ಜಂಗಮಕ್ಕೆ ಇಕ್ಕುವ ದೋಷಕ್ಕಂಜಿ ಧರ್ಮವ ಮಾಡುವ, [ಬೇಡುವ] ಕಾಟಕ್ಕಂಜಿ, ತ್ರಿವಿಧವ ಕೊಡುವ ನಾಟರಿಗೇಕೊ ಸದ್ಭಕ್ತಿ ? ಜಗದ ಘಾತಕರ ಘಾತಿಸದೆ, ವಿಷಯವನರಿಯದೆ, ಆಶೆಯಲ್ಲಿ ಸುಳಿವ ಭ್ರಾಂತು ಮಾರಿಗಳನೇನೆಂದರಿಯದೆ, ವಸ್ತುವಿನಲ್ಲಿ ಓತಿರ್ಪ ಸಾತ್ವಿಕರನರಿದು ಸದ್ಭಕ್ತಿಯ ಮಾಡುವುದು. ಅರಿದುದಕ್ಕೆ ಇದೇ ಕುರುಹೆಂದು, ಮರೆಯೊಳಡಗಿ ಮೊರೆಯಿಡುತ್ತಿದ್ದೇನೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ತಾರಕ ನುಂಗಿದ ಜಲವ, ಬೇರೆ ಶೋಧಿಸಲುಂಟೆ ಅಯ್ಯಾ ? ಉರಿಯುಂಡ ಘೃತವ ಅಳೆವುದಕ್ಕೆ ಈಡುಂಟೆ ಅಯ್ಯಾ ? ನಿಶ್ಚಯ ನಿಜವ ಗೊತ್ತಿಂಗೆ ತರಬಹುದೆ ಅಯ್ಯಾ ? ಇಷ್ಟ ವಸ್ತುವಿನಲ್ಲಿ ಲೇಪವಾಗಿ ಮತ್ತೊಂದು ಕುರುಹಿಲ್ಲ, ಏಣಾಂಕಧರ ಸೋಮೇಶ್ವರಲಿಂಗಕ್ಕೆ.
--------------
ಬಿಬ್ಬಿ ಬಾಚಯ್ಯ
ಪಾಕವನರಿತು ಮಾಡುವ ಗರತಿಯಂತೆ, ಲಾಗವನರಿತು ಲಂಘಿಸುವ ವನಚರನಂತೆ, ಮೇಘವನರಿತು ಕರೆವ ಭೇಕನಂತೆ, ಉಚಿತಕಾಲಂಗಳಲ್ಲಿ ಮಾಡುವ ಸತ್ಕ್ರೀ, ಲಿಂಗಕ್ಕೆ. ಅರಿದು ಕೂಡುವುದು, ಘನ ವಸ್ತುವಿನಲ್ಲಿ. ಉಭಯಭಾವದಲ್ಲಿ ನಿಂದು ಮತ್ತೆರಡಳಿಯಬೇಕು, ಆ ಕುರುಹಿನಲ್ಲಿ, ಐಘಟದೂರ ರಾಮೇಶ್ವರಲಿಂಗವನರಿವುದಕ್ಕೆ.
--------------
ಮೆರೆಮಿಂಡಯ್ಯ
ಕೂಟದಲ್ಲಿ ಸುಖಿಯಾದ ಮತ್ತೆ ಬೇಟ ಕೂಟವೇಕೆ ? ಕೂಟವ ಮಾಡಿದ ಮತ್ತೆ ವಸ್ತುವಿನಲ್ಲಿ ಕೂಡಿದೆನೆಂಬ ಅರಿವೇಕೆ ? ನಿತ್ಯಸುಖಿಯಾದ ಮತ್ತೆ ಒಚ್ಚಿ ಹೊತ್ತಿಂಗೊಂದು ಪರಿಯಾಗಲೇಕೆ ? ನಿಜನಿತ್ಯಘನದೊಳಗೈಕ್ಯನಾದಾತ ಭಕ್ತಿಮುಕ್ತಿಗೆ ದೂರ, ನಿಃಕಳಂಕ ಮಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಬೇಟದಲ್ಲಿ ಸುಖಿಯಾದ ಮತ್ತೆ ಕೂಟದ ಆಟವೇಕೆ ? ಜಂಗಮದಲ್ಲಿ ಕೂಟ ಕೂಡಿದ ಮತ್ತೆ, ವಸ್ತುವಿನಲ್ಲಿ ಕೂಡಿಹೆನೆಂಬ ಆತುರವೇಕೆ? ನಿತ್ಯಸುಖಿಯಾದ ಮತ್ತೆ ಬಚ್ಚೊತ್ತಿಗೊಂದು ಪರಿಯಾಗಲೇಕೊ? ಈ ಸಚ್ಚಿದಾನಂದನವರಿದಡೆ, ಭಕ್ತಿ ಮುಕ್ತಿಗೆ ದೂರ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಅರಿದು ಅರುಹಿಸಿಕೊಂಬುದಾದ ಕಾರಣ ಉಭಯನಾಮವಾಯಿತ್ತು. ಅದರ ಭೇದದಿಂದ ತಿಳಿಯೆ ಮೂರಾಯಿತ್ತು. ಮೂರು ಮುಮ್ಮೊಖದಲ್ಲಿ ತಿಳಿಯೆ ಆರಾಯಿತ್ತು. ಇವೆಲ್ಲವು ಒಡಗೂಡಿ ನೋಡೆ ನೂರೊಂದಾಯಿತ್ತು. ಭಿನ್ನಭಾವಿಯ ಭೇದದಿಂದ ಸೂತ್ರದ ದಾರ ನಾಳವೊಂದರಲ್ಲಿ ಅಡಗಿಪ್ಪಂತೆ ಸ್ಥಲ ಕುಳಂಗಳು ವಸ್ತುವಿನಲ್ಲಿ ಅಡಗಿ ತೋರುವವು, ಏಣಾಂಕಧರ ಸೋಮೇಶ್ವರಲಿಂಗದಲ್ಲಿ ಉಭಯನಾಮ ನಷ್ಟವಾದವಂಗೆ.
--------------
ಬಿಬ್ಬಿ ಬಾಚಯ್ಯ
ಇನ್ನಷ್ಟು ... -->