ಅಥವಾ

ಒಟ್ಟು 39 ಕಡೆಗಳಲ್ಲಿ , 16 ವಚನಕಾರರು , 27 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ವಿಕಾರ ಈ ಜನ್ಮದ ಹೊರೆಯ ಕಳೆವುದೆಂದು, ಭೂಕಾರ ಭೂತ ಪಿಶಾಚಿಗಳ ಗ್ರಹಗಳ ನಿಟ್ಟೊರಸುವ ಅರಿಯೆಂದು, ತಿಕಾರ ಅಂತರಂಗದ ಒಳಹೊರಗೆ ಇಡಿದಿಹ ತಿಮಿರಕೆ ಜ್ಯೋತಿಸ್ವರೂಪವೆಂದು ಶ್ರೀ ವಿಭೂತಿಯ ಧರಿಸ ಕಲಿಸಿದನಯ್ಯಾ ಶ್ರೀಗುರು. ಪಂಚಗವ್ಯ ಗೋಮಯದಿಂದುದಯವಾದ ಶ್ರೀವಿಭೂತಿ ಪಂಚಭೂತದ ಪೂರ್ವಗ್ರಹವ ಕಳೆವುದೆಂದು ನಿರೂಪಿಸಿ ಧರಿಸಿದನಯ್ಯಾ. ಇಂತಪ್ಪ ಶ್ರೀ ವಿಭೂತಿಯ ಸಂತತ ಧರಿಸಿ ನಿಶ್ಚಿಂತನಾಗಿದ್ದೆನು ಕಾಣಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಕಾಯವಿಕಾರ ಕಾಡಿಹುದಯ್ಯಾ, ಮನೋವಿಕಾರ ಕೂಡಿಹುದಯ್ಯಾ. ಇಂದ್ರಿಯ ವಿಕಾರ ಸುಳಿವುದಯ್ಯಾ ! ಸುಳುವಿನೊಳಗೆ ಸುಳಿವುತ್ತಲಿದ್ದೇನೆ, ಸಿಲುಕಿಸದಿರಯ್ಯಾ ! ಅನ್ಯ ಚಿತ್ತದಲ್ಲಿರಿಸದಿರಯ್ಯಾ, ನಿಮ್ಮ ಚಿತ್ತದಲ್ಲಿರಿಸಯ್ಯಾ. ಅನುಪಮಸುಖಸಾರಾಯ ಶರಣರಲ್ಲಿ- ಕೂಡಲಸಂಗಮದೇವಯ್ಯಾ, ಇದನೆ ಬೇಡುವೆನಯ್ಯಾ. 48
--------------
ಬಸವಣ್ಣ
ಕೈ[ಯ]ಮರೆದು ಕಾದುವ ಕಾಳಗವದೇನೋ? ಮೈಮರೆದು ಮಾಡುವ ಮಾಟವದೇನೋ? ಬಾಯಿ ಮರೆದು ಉಂಬ ಊಟವದೇನೋ? ಸನ್ಮಾನ ಸಾವಧಾನ ಸನ್ನಹಿತವಿಲ್ಲದ ಲಿಂಗಸಂಧಾನ ಜನ್ಮದ ಮೃತ್ಯು ನೋಡಾ. ಎಚ್ಚರಿಕೆಯಿಲ್ಲದ ಅರ್ಪಿತ ವಿಕಾರ ನೋಡಾ. ಸಂಕಲ್ಪ ವಿಕಲ್ಪವಿಲ್ಲದೆ ಮನ ಲಿಂಗಸಾಹಿತ್ಯವಾದರೆ ಅರ್ಪಿತ; ಅದು ಪ್ರಸಾದ ನೋಡಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಅಷ್ಟಮದಕ್ಕೂ ಒಂದರ ಹೆಚ್ಚಿಗೆ. ನಾನಾ ವಿಕಾರಕ್ಕೂ ಒಂದೇ ವಿಕಾರ. ನಾನಾ ಬುದ್ಧಿಗೂ ಒಂದೇ ಬುದ್ಧಿ. ಒಂದು ಘಟ್ಟದಲ್ಲಿ ತೋರುವ ತಂತುವಿನ ದನಿಬ್ಥಿನ್ನದಂತೆ, ಅದು ಬಿಗಿವ, ಸಡಿಲಿಸುವ ತಂತ್ರದ ಭೇದ. ಅರಿವು ಮರವೆಯಿಂದಾದ ಮದವ ನೆರೆ ಹೊತ್ತುಬಂದೆ. ಕೊಂಡಡೆ ಲೇಸು, ಕಂಡಡೆ ಲೇಸು, ಕಾಣದಿರ್ದಡೆ ಕರಲೇಸು, ಧರ್ಮೇಶ್ವರ[ಲಿಂಗಾ].
--------------
ಹೆಂಡದ ಮಾರಯ್ಯ
ವಿಕಾರದೊಳು ವಿಕಾರ ಕಪಿವಿಕಾರ. ವಿಕಾರದೊಳು ವಿಕಾರ ಸುರೆಗುಡಿದವನ ವಿಕಾರ. ವಿಕಾರದೊಳು ವಿಕಾರ ದತ್ತೂರಿಯ ಸವಿದ ವಿಕಾರ. ಇಂತೀ ಎಲ್ಲಕೆ ಗುರು ಮನೋವಿಕಾರವೆಂಬುದು. ಸುರೆ ದತ್ತೂರಿಯ ಸವಿದವನದು ಒಂದಿನಕಾದರೂ ಪರಿಹಾರವಾಗುವದು. ಮನೋವಿಕಾರದ ದತ್ತೂರಿ ಅನುದಿನ ತಲೆಹೇರಿಕೊಂಡು ಮುಳುಗಿತ್ತು. ಭೂಲೋಕದ ಯತಿ ಸಿದ್ಧ ಸಾಧ್ಯರ ಕೊಂಡು ಮುಳುಗಿತ್ತು. ದೇವಲೋಕದ ದೇವಗಣ ಅಜಹರಿಸುರರ ಜನನಮರಣವೆಂಬ ಅಣಲೊಳಗಿಕ್ಕಿತ್ತು ಮನೋವಿಕಾರ. ಮನೋವಿಕಾರದಿಂದ ತನುವಿನಕಾರ, ಮನೋವಿಕಾರದಿಂದ ಮಾಯಾಮದ. ಮನೋವಿಕಾರದಿಂದ ಪಂಚಭೂತ ಸಪ್ತಧಾತು ದಶವಾಯು ಅರಿಷಡ್ವರ್ಗ ಅಷ್ಟಮದ ಪಂಚೇಂದ್ರಿಯ, ಅಂಗದೊಳು ಚರಿಸುವ ಜೀವ ಪ್ರಾಣ ಕರಣಾದಿ ಗುಣಂಗಳೆಲ್ಲಕ್ಕೆಯು ಮನವೆ ಮುಖ್ಯ ನೋಡಾ. ಮನೋವಿಕಾರವನಳಿದು ಶಿವವಿಕಾರದೊಳು ಇಂಬುಗೊಂಡಾತ ಮೂರುಲೋಕಾರಾಧ್ಯನೆಂಬೆನು ಕಾಣಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಗುರುಸ್ಥಲ ಲಿಂಗಸ್ಥಲ ಜಂಗಮಸ್ಥಲ. ಈ ತ್ರಿವಿಧಭೇದವ ವಿವರಿಸಿ ಹೇಳೆಹೆ ಕೇಳಿರಣ್ಣಾ. ಗುರುಸ್ಥಲ ವೇದಾಂತ, ಲಿಂಗಸ್ಥಲ ಸಿದ್ಧಾಂತ, ಜಂಗಮಸ್ಥಲ ಪ್ರಸಿದ್ಧಾಂತ. ಇಂತೀ ತ್ರಿವಿಧಭೇದ ಐಕ್ಯವಹ ತೆರ ಸಮರ್ಪಣವೆಂತಾದುದಣ್ಣಾ ? ಗುರುಸ್ಥಲ ಸಂಗನಬಸವಣ್ಣನಾದ, ಲಿಂಗಸ್ಥಲ ಚೆನ್ನಬಸವಣ್ಣನಾದ. ಜಂಗಮಸ್ಥಲ ಪ್ರಭುವಾಗಿ ಬಂದ. ಬಂದ ಅಂದವ ತಿಳಿದು ನೋಡು. ಗುರುಲಿಂಗಜಂಗಮವೆಂಬ ಸಂದೇಹದಲ್ಲಿ ನಿಂದು, ಆನಂದಿಸುತ್ತಿರ್ಪ ಭಾವದ ಬಳಲಿಕೆಯ ಅಣ್ಣಗಳು ಕೇಳಿರೊ. ಕಾಯ ಬಸವಣ್ಣನಾದ, ಜೀವ [ಚೆನ್ನ]ಬಸವಣ್ಣನಾದ. ಅದರ ಅರಿವು ಕಳೆ ಪರಿಪೂರ್ಣ ಪರಂಜ್ಯೋತಿ ಪ್ರಭುವಾದ. ಇಂತೀ ತ್ರಿವಿಧಭೇದವ ಕೊಟ್ಟು ಬಂದು, ಭಕ್ತಿ ಮುಕ್ತಿ ವಿರಕ್ತಿಯಿಂದ ಮಹಾಮನೆಯಲ್ಲಿ ಮಾಡಿ ಕೆಟ್ಟ ಬಸವಣ್ಣ. ಹೇಳಿ ಕೆಟ್ಟ ಚೆನ್ನಬಸವಣ್ಣ, ಉಂಡೆಹೆನೆಂದು ಗರ್ವದಲ್ಲಿ ಕುಳಿತು ಕೆಟ್ಟ ಪ್ರಭುದೇವರು. ಅಂತುಕದಲ್ಲಿರ್ದ ಸಂಗನಬಸವಣ್ಣ, ಸಂಕಲ್ಪದಲ್ಲಿರ್ದ ಚೆನ್ನಬಸವಣ್ಣ. ಸಂದೇಹದಂಗವ ತಾಳಿರ್ದ ಪ್ರಭುದೇವರು. ಇಂತಿವರಂಗದಲ್ಲಿ ಲಿಂಗವುಂಟೆಂಬೆನೆ, ಜ್ಞಾನಕ್ಕೆ ದೂರ. ಇಲ್ಲವೆಂಬೆನೆ ಸಮಯಕ್ಕೆ ದೂರ. ಇಂತೀ ಉಭಯದ ಸಂದನಳಿದರೆಂಬೆನೆ, ಪ್ರಭು ಸಂದೇಹಿಯಾದ. ಇವರೆಲ್ಲರೂ ಅಡುವ ಲಂದಣಗಿತ್ತಿಯ ಮನೆಯ ಉಂಬಳಿಕಾರರಾದರು. ಇದು ಸಂದೇಹವಿಲ್ಲ. ಗುರುವೆಂದಡೆ ಸರ್ವರಿಗೆ ಬೋಧೆಯ ಹೇಳಿ, ಕರ್ಮಕಾಂಡಿಯಾದ. ಲಿಂಗವೆಂದಡೆ ಯುಗಯುಗಂಗಳಿಗೊಳಗಾದ, ಪ್ರಳಯಕ್ಕರುಹನಾದ. ಪ್ರಭುದೇವರು ಜಂಗಮವೆಂಬೆನೆ ಗೆಲ್ಲ ಸೋಲಕ್ಕೆ ಹೋರಿ, ಕಾಯದೊಳು ನಾನಿಲ್ಲವೆಂದು ಚೌವಟಗೊಳಗಾದ. ಎಲ್ಲಿಯೂ ಕಾಣೆ, ಲೀಲೆಗೆ ಹೊರಗಾದವನ. ಭಕ್ತಿ ಮುಕ್ತಿ ವಿರಕ್ತಿ ಲೇಪವಾಗಿ, ನಾನೆನ್ನದೆ ಇದಿರೆನ್ನದೆ, ಜಗದಲ್ಲಿ ತಾನೇನೂ ಎನ್ನದಿರ್ಪುದೆ ತ್ರಿವಿಧ ಸಮರ್ಪಣ ಆಚಾರ. ಭಾವರಹಿತ ವಿಕಾರ, ನಿರುತ ಪರಿಪೂರ್ಣನಾದೆಯಲ್ಲಾ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಮರನುಳ್ಳನ್ನಕ್ಕ ಎಲೆ ಉಲಿವುದು ಮಾಬುದೆ ? ಶರೀರವುಳ್ಳನ್ನಕ್ಕ ವಿಕಾರ ಮಾಬುದೆ ? ಅಯ್ಯಾ ಸುಳುಹುಳ್ಳನ್ನಕ್ಕ ಸೂತಕ ಹಿಂಗೂದೆ ಗುಹೇಶ್ವರಾ ?
--------------
ಅಲ್ಲಮಪ್ರಭುದೇವರು
ತತ್ವಮೂವತ್ತಾರ ಮೀರಿ ನಾದಬಿಂದುಕಳಾತೀತನಾದ ಶಿವನು ಜಗನ್ಮಯನಾದ ಆಗಿಯೂ ಜಗದ ಸ್ಥಿತಿಗತಿ ತನಗಿಲ್ಲವದೆಂತೆಂದಡೆ: ಏಕ ಏವ ಹಿ ಭೂತಾತ್ಮಾ ಭೂತೇಷು ಸುವ್ಯವಸ್ಥಿತಃ ಏಕಧಾ ಬಹುಧಾ ಚೈವ ದೃಶ್ಯತೇ ಜಲಚಂದ್ರವತ್ ಎಂದುದಾಗಿ, ಜಲದೊಳಗೆ ಸೂರ್ಯನ ಪ್ರತಿಬಿಂಬ ವಿಕಾರಿಸುತಿರ್ದಡೇನುರಿ ಆ ವಿಕಾರ ಜಲಕ್ಕಲ್ಲದೆ ಸೂರ್ಯಂಗಿಲ್ಲದಂತಿಪ್ಪನಯ್ಯಾ ಸೌರಾಷ್ಟ್ರ ಸೋಮೇಶ್ವರಾ.
--------------
ಆದಯ್ಯ
ಆಸ್ತಿ ಜಾಯತೇ ವಿಪರಿಣಮತೇ ವಿವರ್ಧತೇ ಅಪಕ್ಷೀಯತೇ ವಿನಶೃತಿ ಎಂಬ ಷಡ್ಭಾವವಿಕಾರಂಗಳು ಕೆಡುವುದಕ್ಕೆ ವಿವರವೆಂತೆಂದಡೆ; ಶ್ರೀಗುರುವಿನ ಕೃಪಾಗರ್ಭದ ಮಧ್ಯದಲ್ಲಿರ್ದವ ನಾನಹುದೆಂದರಿದಾಗವೆ ಅಸ್ತಿ ಎಂಬ ವಿಕಾರ ಕೆಟ್ಟಿತ್ತು. ಗುರುಕರದಲ್ಲಿ ಜನಿಸಿದೆನಾಗಿ ನಾ ಮಾಯಾಯೋನಿಜನವಲ್ಲವೆಂದು ಅರಿದಾಗವೆ ಜಾಯತೇ ಎಂಬ ವಿಕಾರ ಕೆಟ್ಟಿತ್ತು. ಗುರುವಿನ ಸದ್ಭಾವಜಾತಲಿಂಗವನಂಗದಲ್ಲಿ ಧರಿಸಿ ಪರಮಪರಿಣಾಮದಲ್ಲಿ ಪರಿಣಮಿಸುತ್ತಿರ್ದ ಕಾರಣ ವಿಪರಿಣಮತೇ ಎಂಬ ವಿಕಾರ ಕೆಟ್ಟಿತ್ತು. ಗುರುವಿನ ಆಚಾರ ಜ್ಞಾನಮಾರ್ಗದಲ್ಲಿ ಆಚರಿಸಿ ಬೆಳೆವುತ್ತಿದ್ದ ಕಾರಣ ವಿವರ್ಧತೇ ಎಂಬ ವಿಕಾರ ಕೆಟ್ಟಿತ್ತು. ದೇಹೇಂದ್ರಿಯಾದಿಗಳೆಲ್ಲ ಲಿಂಗದಲ್ಲಿ ಅಡಗಿ ಶಿಥಿಲವಾಗಲು ಅಪಕ್ಷೀಯತೇ ಎಂಬ ವಿಕಾರ ಕೆಟ್ಟಿತ್ತು. ಲಿಂಗಾಂಗದ ಐಕ್ಯವನರಿದು ಲಿಂಗದಲ್ಲಿ ಲೀಯವಾಗಲು ವಿನಶ್ಯತಿ ಎಂಬ ವಿಕಾರ ಕೆಟ್ಟಿತ್ತು. ಇಂತೀ `ಲಿಂಗಸಂಗದಿಂದ ಷಡ್ಭಾವವಿಕಾರಂಗಳಳಿದು ನಿಮ್ಮವಿಕಾರವೆಡೆಗೊಂಡಿತ್ತು' ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ, ನಿಮ್ಮಭಕ್ತಂಗೆ.
--------------
ಸ್ವತಂತ್ರ ಸಿದ್ಧಲಿಂಗ
ಕೈ ಬಾಯಿ ಆಡುವನ್ನಕ್ಕ ಕೆಳಗಣ ಹೂರಿನ ದ್ವಾರವನರಸಿತ್ತು. ಅದು ಸಾಕಾರದ ನೆಳಲು, ಭೀತಿಯ ಕೇಳದೆ ವಿಕಾರ, ಸ್ವಪ್ನದಲ್ಲಿ ಸೋರುವ ಮನೆ. ಇದಾರಿಗೂ ಅಸಾಧ್ಯ, ಮಾರಮಥನ ಮಾರೇಶ್ವರಾ.
--------------
ನಗೆಯ ಮಾರಿತಂದೆ
ಸಹಜವುಳ್ಳ ಭಕ್ತರಿಗೆ ಕಾಮುಕರಾಗಿ ಕೆಡಬೇಡೆಂದು ಅಜ್ಞಾನಕ್ಕೆ ಗುರಿಯಾದಿರಿ. ಮುಂದೆ ಜ್ಞಾನವೆಂಬುದೆಲ್ಲವಾಗಿ ಗುರುಪಾದವ ಹಿಡಿದು ಜ್ಞಾನಮುಕ್ತನಾಗಿ ಮೋಕ್ಷಾರ್ಥವ ಹಾರೈಸಿಕೊಂಡು ತನುವ ಗುರುವಿಗೆ ಅರ್ಪಿಸಬೇಕು, ಮನವ ಲಿಂಗಕ್ಕೆ ಅರ್ಪಿಸಬೇಕು, ಧನವ ಜಂಗಮಕ್ಕೆ ಅರ್ಪಿಸಬೇಕು. ತಮ್ಮ ಭಾವದಿಂದ ಬೋಧಿಸಿ ನುಡಿಯಲ್ಕೆ ಶಿಷ್ಯ ಸುಬುದ್ಧಿಯಿಂದ 'ಗುರುವೇ ನೀನು ಅಧಿಕಾರನು ನಿನ್ನ ಪಾದ ಸೋಂಕಿತೆಂದು' ನುಡಿಯಲಾಗಿ, ಆ ಶಿಷ್ಯಂಗೆ ಮನಮುಖ್ಯವಾದ ಬೋಧೆಯ ಬೋಧಿಸಿ ಆತಂಗೆ ಕಟ್ಟಳೆಯ ಮಾಡಿ ಹೆಣ್ಣು ಹೊನ್ನು ಮಣ್ಣು ಮೂರು ಗುರುವಿಗೆ ಅರ್ಪಿತ ಮಾಡಬೇಕೆಂದು ನುಡಿಯಲಾಗಿ, ಅವನು ವಿಕಾರಿಯಾಗಿ 'ಸ್ವಾಮಿ, ಹೆಣ್ಣು ಹೊನ್ನು ಮಣ್ಣು ಸರ್ವವೂ ನಿಮಗೆ ಸಮರ್ಪಣವೆಂದು' ನುಡಿಯಲಾಗಿ, ಬೋಧಿಸುವ ಆ ಗುರುವಿಂಗೆ ಒಂದು ವಿಕಾರ ಹೋಗಿ ಐದು ವಿಕಾರಗಳಾಗಿ ಪಂಚಭೂತ ಮದಂಗಳೇರಿ ತನುವಿಕಾರಿಯಾಗಿ ಮನವಿಕಾರಿಯಾಗಿ ಆಚಾರ ವಿಚಾರ ಬಿಟ್ಟು ಅನಾಚಾರಿಯಾಗಿ ಕಚ್ಚಡಕನಾಗಿ ಕೊಳ್ಳದ ಆಹಾರಂಗಳ ಕೊಂಡು ಕೆಟ್ಟ ವೇಷಡಂಭಕರ ತೋರದಿರಯ್ಯಾ. ಇಂಥ ತೊಟ್ಟೆ ಕುಡಿಯುವ ಮೆಚ್ಚು ಮಾರಿಗೆ ಎತ್ತಣ ಸ್ವಯಂಭು ಎತ್ತಣ ನಿಜವು. ತೊತ್ತು ದೊರೆಯಾಗುವುದೇನಯ್ಯಾ ? ನಿತ್ಯವನರಿಯದ ಮೃತ್ಯುಮಾರಿಗಳಿಗೆ ಎತ್ತಣ ಬ್ರಹ್ಮವು ? ಬ್ರಹ್ಮವೆತ್ತ, ತಾನೆತ್ತ, ಹೋಗತ್ತ. ಇಂಥ ಭ್ರಾಂತುಯೋಗಿಗಳು ಕೆಟ್ಟ ಕೇಡಿಂಗೆ ಕಡೆಯಿಲ್ಲ. ವಿದೇಹಿ ತಾನಾದ ವರನಾಗನ ಗುರುವೀರನೆ ಪರಂಜ್ಯೋತಿ ಮಹಾವಿರಕ್ತಿ.
--------------
ಪರಂಜ್ಯೋತಿ
ಉದಕದೊಳಗಣ ವಿಕಾರ ಪವನನಿಂದಲ್ಲದೆ, ಉದಕ ಸಹಜಬೀಜವೆಂದರಿಯಬಹುದೆ ? ದೇಹ ಪ್ರಪಂಚಂಗಳು ವಾಯುವಿಂದಲ್ಲದೆ, ದೇಹದಲ್ಲಿ ಬೇರೊಂದು ಗುಣವನರಸುವರೆ ? ಮಂಜಿನ ಗುರಿಯ ಬಿಸಿಲ ಅಂಬಿನಲ್ಲಿ ಎಚ್ಚಡೆ, ಕರ ಹೊಸತಾಯಿತ್ತಲ್ಲಾ ! ಸಹಜದ ನಿಲವು ಜೀವ ಪರಮಾತ್ಮನೆಂದು ಎರಡನು ನುಡಿಯಲಿಲ್ಲ. ಬೇರೆ ನೆನೆವ ಮನ ತಾನೆಯಾಗಿ ತೆರಹಿಲ್ಲದ ಘನ. ಗಗನದ ಸೂರ್ಯ ಜಲದಲ್ಲಿ ತೋರುವಂತೆ, ಹಲವು ರವಿಯೆಂದು ಮತ್ತೆಣಿಸಲುಂಟೆ ? ಒಳಹೊರಗು ಎಂದೆನ್ನದೆ ಮುಟ್ಟಿಯೂ ಮುಟ್ಟದಿಪ್ಪ, ಬಯಲೊಳಡಗಿದ ನಿರಾಳವನು ಕೇಳುವ ಕೀರುತಿಯಲ್ಲ ನೋಡುವ ಮೂರುತಿಯಲ್ಲ ಪರಿಪೂರ್ಣ ಪರಂಜ್ಯೋತಿ ನಿರ್ಗುಣ ಮಹಿಮ. ಭಾವವಿಲ್ಲದ ಶಬ್ದವನು ಕೇಳಬಲ್ಲವನೊಬ್ಬನೆ, ಕೂಡಲಚೆನ್ನಸಂಗಮದೇವರಲ್ಲಿ ಪ್ರಭುವೆ ನೀನೆ ಬಲ್ಲೆ.
--------------
ಚನ್ನಬಸವಣ್ಣ
ಅಂಗದ ಕಳವಳ, ಮನದ ಸಂಚಲ, ಭಾವದ ಭ್ರಾಂತು, ಅರುವಿನ ಮರಹು, ಭಕ್ತಿಯ ಭಿನ್ನ, ಜ್ಞಾನದ ಕಳಂಕು ಪ್ರಾಣನ ಪ್ರಕೃತಿ, ಸ್ಥಾನಮಾನವೆಂಬ ಲಕ್ಷ, ಇಹಪರಂಗಳ ತೃಷ್ಣೆ, ಭವರೋಗಂಗಳ ಬಂಧ, ಇಂದ್ರಿಯಂಗಳಿಚ್ಛೆ, ತಾಪತ್ರಯಂಗಳ ಸುಖದುಃಖ, ಮಲತ್ರಯಂಗಳಾಸೆ, ಪಂಚಮಲಂಗಳ ಸಂಚ, ಅಷ್ಟಮದಂಗಳ ಘಟ್ಟಿ, ಷಡೂರ್ಮಿಗಳ ವಿಕಾರ ಇಂತಪ್ಪ ಅಖಿಳದೊಳು ಸಿಲುಕದ ಅಕಳಂಕರಪ್ಪ, ಸಮ್ಯಜ್ಞಾನ, ಸಹಜಸಮಾಧಾನಯೋಗದೊಳಿರ್ಪ, ಮಹಾಶರಣರ ತೋರಿಸಿ ಬದುಕಿಸಾ, ಸೌರಾಷ್ಟ್ರ ಸೋಮೇಶ್ವರಾ, ನಿಮ್ಮ ಧರ್ಮ ನಿಮ್ಮ ಧರ್ಮ.
--------------
ಆದಯ್ಯ
ಕಂಗಳ ನೋಟ ಕರಸ್ಥಲದ ಪ್ರಾಣ. ಅಂಗದ ವಿಕಾರ ನಿರ್ವಿಕಾರವಾಗಿತ್ತು. ಸಂಗಸುಖ ನಿಸ್ಸಂಗವಾಯಿತ್ತು. ಹೆಂಗೂಸೆಂಬ ಭಾವ ಬಯಲ ಬೆರಸಿತ್ತು. ಕಲಿದೇವರದೇವಾ, ನಿಮ್ಮನೊಲಿಸಿ ಒಚ್ಚತವೋದ ಮಹಾದೇವಿಯಕ್ಕನ ಪಾದವ ನೆನೆದು ನಾನು ಬದುಕಿದೆನು.
--------------
ಮಡಿವಾಳ ಮಾಚಿದೇವ
ದುರ್ಗುಣಿ ದುರಾಚಾರಿಯಯ್ಯ ನಾನು. ದುರ್ಬುದ್ಧಿ ದುರ್ನೀತಿಯುಳ್ಳವನಯ್ಯ ನಾನು. ದುಷ್ಟಾತ್ಮ ದುಷ್ಕರ್ಮಿಯಯ್ಯ ನಾನು. ತಿಪ್ಪೆಯ ಕೆದರಿದಂತೆ ಶತಕೋಟಿ ಕೆಟ್ಟ ಗುಣದವನಯ್ಯ ನಾನು. ಎನ್ನಲ್ಲಿ ಸದ್ಗುಣವನರಸಿದಡೇನು ಹುರುಳಿಲ್ಲವಯ್ಯ. ಮನದಲ್ಲಿ ವಿಕಾರ ಹುಟ್ಟಿ ತನುವನಂಡಲೆದು ವಿಷಯಾತುರನಾಗಿ ತಲೆಹುಳಿತ ಶ್ವಾನನಂತೆ ದೆಸೆದೆಸೆಗೆ ಹರಿದಾಡಿದೆನಲ್ಲದೆ, ನಿಮ್ಮನರಿವುತ್ತ ಬೆರೆವುತ್ತ ಭಕ್ತಿಜ್ಞಾನವೈರಾಗ್ಯದಲ್ಲಿ ಸುಳಿಯಲಿಲ್ಲವಯ್ಯ ನಾನು ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಇನ್ನಷ್ಟು ... -->