ಅಥವಾ

ಒಟ್ಟು 440 ಕಡೆಗಳಲ್ಲಿ , 48 ವಚನಕಾರರು , 360 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಾಯವಿಲ್ಲದ ಶರಣಂಗೆ ಕರ್ಮವಿಲ್ಲ ; ಕರ್ಮಶೂನ್ಯವಾದಲ್ಲಿ ಭಾವನಾಸ್ತಿ ಕಾಣಾ. ಭಾವನಾಸ್ತಿಯಾಗಿ ನಿರ್ಭಾವ ನಿಂದು ನಿಜವಾದಲ್ಲಿ ನೋಡಲಿಲ್ಲ ನುಡಿಯಲಿಲ್ಲ ಕೂಡಲಿಲ್ಲ ಅಗಲಲಿಲ್ಲ. ಗುರುನಿರಂಜನ ಚನ್ನಬಸವಲಿಂಗ ತಾನು ತಾನಾಗಿರ್ದ ಸುಖವ ತಂದು ಹೇಳುವರಾರೂ ಇಲ್ಲ ಈ ಮೂರುಲೋಕದೊಳಗೆ.
--------------
ದೇಶಿಕೇಂದ್ರ ಸಂಗನಬಸವಯ್ಯ
ಕದ್ದಡೆ ಕಳವ ಕೊಟ್ಟಿದ್ದವರಿದ್ದಂತೆ ಆಚೆಯಲ್ಲಿ ಇದ್ದವರಿಗೇನು? ಹುಸಿ ಕೊಲೆ ಕಳವು ಹಾದರ ಇಂತಿವನೆಸಗಿ ಮಾಡುವ ಪಾಪಿಯ ಎದುರಿಗೆ ಹೇಳಿ ಹೇಸದೆ ಬಿಡಲೇತಕ್ಕೆ? ಇಂತೀ ರಸಿಕವನರಿದವಂಗೆ ಎಸಕವಿಲ್ಲದ ಮಾತು, ಶಶಿಧರನ ಶರಣಂಗೆ ಹಸುಳೆಯ ತೆರನಂತೆ, ನಸುಮಾಸದ ಪಿಕದಂತೆ, ಶಬರನ ಸಂದಣಿಯಂತೆ, ಉಲುಹಡಗಾ ಕಲಹಪ್ರಿಯ ಕಂಜಳಧರ ರಾಮನಾಥಾ.
--------------
ಗುಪ್ತ ಮಂಚಣ್ಣ
ಅಗ್ಘವಣಿ ಸುಯಿದಾನವಾದ ಶರಣಂಗೆ, ತನು ಸುಯಿದಾನವಾಗಬೇಕು. ತನು ಸುಯಿದಾನವಾದ ಶರಣಂಗೆ ಮನ ಸುಯಿದಾನವಾಗಬೇಕು. ಮನ ಸುಯಿದಾನವಾದ ಶರಣಂಗೆ ಪ್ರಾಣದ ಮೇಲೆ ಲಿಂಗ ಸಯವಾಗಬೇಕು. ಪ್ರಾಣದ ಮೇಲೆ ಲಿಂಗ ಸಯವಾಗದಿರ್ದಡೆ ಇದೆಲ್ಲ ವೃಥಾ ಎಂದಿತ್ತು ಕೂಡಲಚೆನ್ನಸಂಗಯ್ಯನ ವಚನ
--------------
ಚನ್ನಬಸವಣ್ಣ
ಕಕ್ಷೆ ಭಕ್ತನ ಸೋಂಕು. ಮುಖಸಜ್ಜೆ ಮಾಹೇಶ್ವರನ ಸೋಂಕು. ಕರಸ್ಥಲ ಪ್ರಾಣಲಿಂಗಿಯ ಸೋಂಕು. ಉತ್ತಮಾಂಗ ಶರಣನ ಸೋಂಕು. ಅಮಳೋಕ್ಯ ಐಕ್ಯನ ಸೋಂಕು. ಭಕ್ತಂಗೆ ಆಚಾರಲಿಂಗ, ಮಾಹೇಶ್ವರಂಗೆ ಸದಾಚಾರಲಿಂಗ, ಪ್ರಸಾದಿಗೆ ವಿಚಾರಲಿಂಗ, ಪ್ರಾಣಲಿಂಗಿಗೆ ಸರ್ವವ್ಯವಧಾನ ಸನ್ನದ್ಧಲಿಂಗ, ಶರಣಂಗೆ ಅವಿರಳ ಸಂಪೂರ್ಣಲಿಂಗ, ಐಕ್ಯಂಗೆ ಪರಮ ಪರಿಪೂರ್ಣಲಿಂಗ ಇಂತೀ ಆರುಸ್ಥಲ ಷಟ್ಕರ್ಮ ಷಡ್ವಿಧಲಿಂಗ ಭೇದಂಗಳಲ್ಲಿ ಮುಂದಣ ವಸ್ತುವೊಂದುಂಟೆಂದು ಸಂಗವ ಮಾಡುವುದಕ್ಕೆ ಆರಂಗದ ಪಥಗೂಡಿ ಕಾಬಲ್ಲಿ ವಸ್ತುವನೊಡಗೂಡುವುದೊಂದೆ ಭೇದ. ಇಂತೀ ಸ್ಥಲವಿವರ ಕೂಟಸಂಬಂಧ. ಏಕಮೂರ್ತಿ ತ್ರಿವಿಧಸ್ಥಲವಾಗಿ, ತ್ರಿವಿಧಮೂರ್ತಿ ಷಡುಸ್ಥಲವಾಗಿ ಮಿಶ್ರಕ್ಕೆ ಮಿಶ್ರ ತತ್ವಕ್ಕೆ ತತ್ವ ಬೊಮ್ಮಕ್ಕೆ ಪರಬ್ರಹ್ಮವನರಿತಡೂ, ಹಲವು ಹೊಲಬಿನ ಪಥದಲ್ಲಿ ಬಂದಡೂ ಪಥ ಹಲವಲ್ಲದೆ ನಗರಕ್ಕೆ ಒಂದೆ ಒಲಬು. ಇಂತೀ ಸ್ಥಲವಸ್ತುನಿರ್ವಾಹ. ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು.
--------------
ದಾಸೋಹದ ಸಂಗಣ್ಣ
ತೆರಹಿಲ್ಲದ ನಡೆ, ತೆರಹಿಲ್ಲದ ನುಡಿ ತೆರಹಿಲ್ಲದ ಸಂಭಾಷಣೆ ಸುಖವು. ತೆರಹಿಲ್ಲದೆ ನಂಬಿದೆ, ಸ್ವಾನುಭಾವ ಸುಖವು, ತೆರಹಿಲ್ಲದ ಮಹಿಮೆ, ತೆರಹಿಲ್ಲದ ವಿಚಾರ ಕೂಡಲಸಂಗಮದೇವಾ, ನಿಮ್ಮ ಶರಣಂಗೆ !
--------------
ಬಸವಣ್ಣ
ಇಷ್ಟಲಿಂಗ ಸಂಬಂಧವಾದ ಬಳಿಕ ಕಾಯಗುಣ ಕೆಟ್ಟು ಲಿಂಗವಾಯಿತ್ತು. ಪ್ರಾಣಲಿಂಗ ಸಂಬಂಧವಾದ ಬಳಿಕ ಕರಣಗುಣ ಕೆಟ್ಟು ಲಿಂಗಕರಣಂಗಳಾದುವು. ಭಾವಲಿಂಗ ಸಂಬಂಧವಾದ ಬಳಿಕ ಇಂದ್ರಿಯಗುಣ ಕೆಟ್ಟು ಲಿಂಗೇಂದ್ರಿಯಗಳಾದುವು. ಇದು ಕಾರಣ- ಶರಣಂಗೆ ಬೇರೆ ಲಿಂಗವಿಲ್ಲ, ಬೇರೆ ಅಂಗವಿಲ್ಲ. ಅರ್ಪಿತ ಅನರ್ಪಿತವೆಂಬ ಉಭಯ ಶಂಕೆ ಹಿಂಗಿತ್ತು, ಕೂಡಲಚೆನ್ನಸಂಗಯ್ಯಾ ನಿನ್ನೊಳಡಗಿದ ನಿಜೈಕ್ಯಂಗೆ
--------------
ಚನ್ನಬಸವಣ್ಣ
ಕಾಮದಲ್ಲಿಮುಳುಗಿ ನುಡಿವರು ಶರಣಂಗೆ ಕಾಮಿಯೆಂದು, ಕ್ರೋಧದಲ್ಲಿಮುಳುಗಿ ನುಡಿವರು ಶರಣಂಗೆ ಕ್ರೋದ್ಥಿಯೆಂದು, ಲೋಭದಲ್ಲಿಮುಳುಗಿ ನುಡಿವರು ಶರಣಂಗೆ ಲೋಬ್ಥಿಯೆಂದು, ಮೋಹದಲ್ಲಿಮುಳುಗಿ ನುಡಿವರು ಶರಣಂಗೆ ಮೋಹಿಯೆಂದು, ಮದದಲ್ಲಿಮುಳುಗಿ ನುಡಿವರು ಶರಣಂಗೆ ಮದಭರಿತನೆಂದು, ಮತ್ಸರದಲ್ಲಿಮುಳುಗಿ ನುಡಿವರು ಶರಣಂಗೆ ಮತ್ಸರಭರಿತನೆಂದು, ಅರಿಷಡ್ವರ್ಗದಲ್ಲಿರ್ದು ಒಂದೊಂದು ನುಡಿದರೆ ಸಂದೇಹವಿಲ್ಲ ಶರಣಂಗೆ. ನಿಂದೆಯನಾಡುವ ನರನಿಗೆ ಸೂಕರಜನ್ಮವು ಇದು ಸತ್ಯ ಗುರುನಿರಂಜನ ಚನ್ನಬಸವಲಿಂಗದ ವಚನ.
--------------
ದೇಶಿಕೇಂದ್ರ ಸಂಗನಬಸವಯ್ಯ
ಸಚರಾಚರವೆಂಬುದೊಂದು ಕಿಂಚಿತ್ತು. ಚತುರ್ಯುಗವೆಂಬುದೊಂದು ಕಿಂಚಿತ್ತು. ಅಪ್ಪುದೆಂಬುದೊಂದು ಕಿಂಚಿತ್ತು, ಆಗದೆಂಬುದೊಂದು ಕಿಂಚಿತ್ತು. ತಾನು ಶುದ್ಧವಾದ ಶರಣಂಗೆ ಗುಹೇಶ್ವರನೆಂಬುದೊಂದು ಕಿಂಚಿತ್ತು.
--------------
ಅಲ್ಲಮಪ್ರಭುದೇವರು
ಅನುಭಾವಲಿಂಗದ ಮರ್ಮವನರಿವುದರಿದು, ಲಿಂಗಸಂಜ್ಞೆಯನರಿವುದರಿದು, ಲಿಂಗವೆಂದಾದುದೆಂದರಿವುದರಿದು, ಲಿಂಗವಂತಹುದಿಂತಹುದೆಂದರಿವುದರಿದು ನೋಡಾ. ಲಿಂಗದಲ್ಲಿಯೆ ಅಗಮ್ಯವಯ್ಯ. ಭೂಮಿಯೆ ಪೀಠಕೆ, ಆಕಾಶವೆ ಲಿಂಗವೆಂದರಿದಾತನು ಲಿಂಗವನರಿದಾತನಲ್ಲ. ಲಿಂಗದಲ್ಲಿ[ಯೆ] ಅಗಮ್ಯವಯ್ಯ. ಲಿಂಗದ ಆದಿ ಬ್ರಹ್ಮ, ಮಧ್ಯ ವಿಷ್ಣು, ಅಂತ್ಯ ರುದ್ರ. ಇಂತೀ ತ್ರಿಮೂರ್ತಿಲಿಂಗವೆಂದರಿದಾತನು ಲಿಂಗವನರಿದವನಲ್ಲ. ಲಿಂಗದಲ್ಲಿ[ಯೆ] ಅಗಮ್ಯವಯ್ಯ. ಲಿಂಗಮಧ್ಯೇ ಜಗತ್ಸರ್ವಂ ತ್ರೈಲೋಕ್ಯಂ ಸಚರಾಚರಂ ಲಿಂಗಬಾಹ್ಯಾತ್ ಪರಂ ನಾಸ್ತಿ ತಸ್ಮೈ ಶ್ರೀಗುರವೇ ನಮಃ ಎಂಬ ಭಾವರಹಿತ ಲಿಂಗವು `ಬ್ರಹ್ಮ ವಿಷ್ಣ್ವಾದಿದೇವಾನಾಮಪ್ಯಗೋಚರಂ' ಎಂದು ಇದಂ ಮಾಹೇಶ್ವರಂ ಜ್ಯೋತಿರಾಪಾತಾಲೇ ವ್ಯವಸ್ಥಿತಂ ಅತೀತಂ ಸತ್ಯಲೋಕಾದೀನನಂತಂ ದಿವ್ಯಮೀಶ್ವರಂ ಲಲಾಟಲೋಚನಂ ಚಾಂದ್ರೀ ಕಲಾಪಂ ಚತುರ್ದಶಂ ಅಂತರ್ವತೇಹ ನಿರ್ದೇಹಂ ಗುರುರೂಪಂ ವ್ಯವಸ್ಥಿತಂ ಪಾದಭಿನ್ನಂ ಹಿ ಲೋಕೇನ ಮೌಳಿಬ್ರಹ್ಮಾಂಡಭಿತ್ತಯೇ ಭುಜಪ್ರಾಂತದಿಗಂತಾನಾಂ ಭೂತಾನಾಂ ಪತಯೇ ನಮಃ ನಾದಲಿಂಗಮಿತಿಜ್ಞೇಯಂ ಬಿಂದುಪೀಠಮುದಾಹೃತಂ ನಾದಬಿಂದುಯುತಂ ರೂಪಂ ಲಿಂಗಾಕಾರಮಿಹೋಚ್ಯತೇ ಎಂಬ ಲಿಂಗಮೆಂದು ಲಿಯತೇ ಗಮ್ಯತೇ ಯತ್ರ ಯೇನಸರ್ವಂ ಚರಾಚರಂ ತದೇತಲ್ಲಿಂಗಮಿತ್ಯುಕ್ತಂ ಲಿಂಗತತ್ತ್ವಪರಾಯಣೈಃ ಲಕಾರಂ ಲಯಸಂಪ್ರೋಕ್ತಂ ಗಕಾರಂ ಸೃಷ್ಟಿಮೇವ ಚ ಲಯಾನಾಂ ಗಮನಶ್ಚೈವ ಲಿಂಗಾಕಾರಮಿಹೋಚ್ಯತೇ ಎಂದರಿದಾತನು ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರನೆಂದರಿದ ಶರಣಂಗೆ ಸುಲಭ, ಮಿಕ್ಕಿನವರಿಗಳಿಗಲಭ್ಯವಯ್ಯಾ.
--------------
ಉರಿಲಿಂಗಪೆದ್ದಿ
ನೋಡುವಲ್ಲಿ ನೆರೆ ಶೃಂಗಾರವಲ್ಲದೆ, ಕೂಡುವಲ್ಲಿ ಉಂಟೆ ? ನುಡಿವಲ್ಲಿ ಮಾತಿನ ಬಲುಮೆಯಲ್ಲದೆ, ಸಂಸಾರವ ಸಾಧನವ ಮಾಡುವಲ್ಲಿ ಮುಟ್ಟದಿಪ್ಪುದುಂಟೆ ? ನಡೆ ನುಡಿ ಸಿದ್ಧಾಂತವಾದ ಶರಣಂಗೆ ಪಡಿಪುಚ್ಚವಿಲ್ಲ, ಗುಡಿಯೊಡೆಯ ಗುಮ್ಮಟನಾಥನ ಅಗಮ್ಯೇಶ್ವರಲಿಂಗದಲ್ಲಿ ಐಕ್ಯವಾದ ಶರಣಂಗೆ.
--------------
ಮನುಮುನಿ ಗುಮ್ಮಟದೇವ
ಸಜ್ಜನವೆಂಬ ಮಾರ್ಗದಲ್ಲಿ ಒಬ್ಬ ಬಾಲೆಯು ನಿಂದು ನಿಜವ ತೋರುತಿರ್ಪಳು ನೋಡಾ. ಆ ನಿಜವ ಈ ಜನಂಗಳೇನು ಬಲ್ಲರಯ್ಯ ? ಅಜ ಹರಿ ಸುರ ನಾರದ ಮೊದಲಾದವರಿಗೆ ಅಗೋಚರವೆನಿಸಿತ್ತು ನೋಡಾ. ಸ್ವಜ್ಞಾನಿಯಾದ ಶರಣನು ಆ ನಿಜವ ನೋಡಬಲ್ಲನಯ್ಯಾ. ಆ ಬಾಲೆಯ ಅಂಗವ ಕೂಡಬಲ್ಲನಯ್ಯ. ಆ ಸಜ್ಜನವೆಂಬ ಮಾರ್ಗವ ಹತ್ತಬಲ್ಲನಯ್ಯ. ಇಂತಪ್ಪ ಶರಣಂಗೆ ನಮೋ ನಮೋ ಎನುತಿರ್ದೆ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ರೂಪಿನ ದರ್ಪಣವ ಹಿಡಿದು, ತನ್ನಯ ರೂಪ ನೋಡಿದಲ್ಲಿ, ನಿಹಿತದ ಇರವಾಯಿತ್ತು. ಆ ರೂಪ ಕಂಡ ನಿರೂಪಿನ ದೃಷ್ಟಿ, ಅದರೊಳಗೆ ಕೂರ್ತು ತೋರುವ ಬೆಳಗಿನ ಮರೆ. ಉಭಯವ ಹಿಡಿದು ನೋಡುವ ಘಟಪಟನ್ಯಾಯ, ಉಪದೃಷ್ಟಭೇದ. ಹಿಡಿದ ಇಷ್ಟಾಚರಣೆ ಕುರುಹಿನ ಲಕ್ಷಣ. ಪಡಿಬ್ಥಿನ್ನ ಭೇದವಿಲ್ಲದೆ ತೋರಿ ತೋರದಿಪ್ಪ ಉಭಯ ಅಂಗವು ನೀನೆ, ಸಗರದ ಬೊಮ್ಮನೊಡೆಯ ತನುಮನ [ಸಂಗ]ಮೇಶ್ವರಲಿಂಗದಲ್ಲಿ ಲೇಪವಾದ ಶರಣಂಗೆ.
--------------
ಸಗರದ ಬೊಮ್ಮಣ್ಣ
ಲಿಂಗಮುದ್ರೆಯ ಕ್ಷೇತ್ರದೊಳಗೊಂದು ಬಾಳೆಯ ಬನವಿಪ್ಪುದು. ಆ ಬನಕೊಂದು ಏಳು ಸೋಪಾನದ ಬಾವಿಯಿಪ್ಪುದು. ಆ ಬಾವಿಯ ಉದಕವನು ಎತ್ತುವ ಮನುಜರಿಲ್ಲದೆ, ಸತ್ವಕೈಯಿಂದೆತ್ತಿ ಸುತ್ತಲಿಕ್ಕೆ ಸೂಸದೆ ನಿವೇದಿಸಿಕೊಂಡರೆ ನಿತ್ಯ ಫಲವು ಸವಿಚಿತ್ರವಾಗಿಪ್ಪುದು. ಒಡೆಯ ಬಂಟರ ನಡೆಯಲ್ಲದೆ ನೋಡಿರೆ ಪರಿಣಾಮಪರವಲ್ಲ ಗುರುನಿರಂಜನ ಚನ್ನಬಸವಲಿಂಗಾ ನಿಮ್ಮ ಶರಣಂಗೆ.
--------------
ದೇಶಿಕೇಂದ್ರ ಸಂಗನಬಸವಯ್ಯ
ಅಷ್ಟಮಿ ನವಮಿ ಎಂಬ ಕಲ್ಪಿತವೇಕೋ ಶರಣಂಗೆ ತಪ್ಪಿತ್ತು ಗಣಪದವಿ, ಲಿಂಗಕ್ಕೆ ದೂರ. ಒಬ್ಬರಿಗಾಳಾಗಿ, ಒಬ್ಬರನೋಲೈಸುವ ನಿರ್ಬುದ್ಧಿಮನುಜರನೇನೆಂಬೆ, ಕೂಡಲಸಂಗಮದೇವಾ !
--------------
ಬಸವಣ್ಣ
ನೀರ ನೆಳಲನೆ ಕಡಿದು, ಮೇರುವೆಂಬುದ ನುಂಗಿ, ಶಾರದೆಯೆಂಬವಳ ಬಾಯ ಕಟ್ಟಿ, ಕಾರ ಮೇಘದ ಬೆಳಸ ನೀರ ಹರಿ ನುಂಗಲು ದಾರಿ ಮೃತ್ಯುವ ನುಂಗಿ ನಗುತ್ತಿದ್ದಿತು. ನಾರಿಯ ಬೆನ್ನ ಮೇಲೆ ಗಂಡ ಬಂದು ಕುಳ್ಳಿರಲು, ನೀರ ಹೊಳೆಯವರೆಲ್ಲರ ಕೊಡನೊಡೆದವು. ಕಾರೆಯ ಮುಳ್ಳೆರ್ದು ಕಲಿಗಳನಟ್ಟಿ ಸದೆವಾಗ, ಸೋರುಮುಡಿಯಾಕೆ ಗೊರವನ ನೆರೆದಳು. ಬಳ್ಳು ಆನೆಯ ನುಂಗಿ, ಹೊಳೆ (ಒಳ್ಳೆ ?) ಸಮುದ್ರವ ಕುಡಿದು, ಕುಳ್ಳಿರ್ದ ಶಿಶು ಹಲಬರನೆಯ್ದೆ ನುಂಗಿ, ಅತ್ತೆ ಅಳಿಯನ ಕೂಡಿ ಕೋಡಗವ ಹಡೆದಲ್ಲಿ, ಹತ್ತಿರಿರ್ದ ಹಾವಾಡಿಗನನು ಅದು ನುಂಗಿತ್ತು! ಕಪ್ಪೆ ಸರ್ಪನ ಹಿಡಿದು ಒತ್ತಿ ನುಂಗುವಾಗ, ಕಪ್ಪೆಯ ಕೊರಳಲ್ಲಿ ಬಿಳಿದು ಕೆಂಪಡರಲು, ನಿಶ್ಚಿಂತವಾಯಿತ್ತು ಗುಹೇಶ್ವರನ ಶರಣಂಗೆ, ಕಟ್ಟಿದಿರ ಕರ್ಪುರದ ಜ್ಯೋತಿಯಂತೆ!
--------------
ಅಲ್ಲಮಪ್ರಭುದೇವರು
ಇನ್ನಷ್ಟು ... -->