ಅಥವಾ

ಒಟ್ಟು 90 ಕಡೆಗಳಲ್ಲಿ , 41 ವಚನಕಾರರು , 85 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ವಂಚಿಸುವ ಸತಿ ಸುತ ಬಂಧು ಮೊದಲಾದ ಲೋಕವ ನಂಬಿ, ನಿರ್ವಂಚಕರಪ್ಪ ಗುರು ಲಿಂಗ ಜಂಗಮರ ವಂಚಿಸಿ ನರಕಕ್ಕಿಳಿವರನೇನೆಂಬೆನಯ್ಯಾ ? ಅಕಟಕಟಾ, ಈ ಹೀಂಗೆ ಶಿವಾಚಾರ ? ಈ ಹೀಂಗೆ ಭೃತ್ಯಾಚಾರ ? ಭಕ್ತಿ ಮುಕ್ತಿಯನರಿಯದೆ ಹೋದರು. ತನು ಮನ ಧನ ಕೆಟ್ಟುಹೋಹುದೆಂಬ ಯುಕ್ತಿಯನರಿಯಿರಿ. ಇದನರಿದು, ವಂಚಿಸುವವರನೆ ವಂಚಿಸಿ ನಿರ್ವಂಚಕರಾಗಿ ಗುರು ಲಿಂಗ ಜಂಗಮಕ್ಕೆ ದಾಸೋಹವ ಮಾಡಲು ತನು ಕೆಡದು, ಮನ ಕೆಡದು, ಧನ ಕೆಡದು. ಮುಕ್ತಿಯುಂಟು ಭಕ್ತಿಯುಂಟು, ಇದು ಸತ್ಯ ಶಿವ ಬಲ್ಲ, ಶಿವನಾಣೆ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಪುರುಷನಿಂದ ಸತಿ ಹಿರಿಯಳಾದರೂ ಆಗಲಿ, ಹಸೆಹಂದರವನಿಕ್ಕಿ ಮದುವೆಯ ಮಾಡಿದ ಮೇಲೆ ಪುರುಷನಿಂದ ಕಿರಿಯಳು ನೋಡಾ. ಗುರುವಿಗಿಂದ ಶಿಷ್ಯ ಅರುಹುಳ್ಳಾತನಾದರೂ ಆಗಲಿ, ಶಿಷ್ಯನ ಭಾವಕ್ಕೆ ಗುರು ಅದ್ಥಿಕ ನೋಡಾ. ನಾನರುಹುಳ್ಳಾತ, ಗುರುವಿಗರುಹುವಿಲ್ಲೆಂದು ಜರೆದು ನುಡಿವ ನುಡಿ ಅಂಗದೊಳು ಹೊಳೆದರೆ ಕುಂಬ್ಥಿನಿಯ ಪಾಪದೊಳಿಕ್ಕುವ ನಮ್ಮ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಹಾವಡಿಗನು ಮೂಕೊರತಿಯು: ತನ್ನ ಕೈಯಲ್ಲಿ ಹಾವು, ಮಗನ ಮದುವೆಗೆ ಶಕುನವ ನೋಡಹೋಹಾಗ ಇದಿರಲೊಬ್ಬ ಮೂಕೊರತಿಯ ಹಾವಡಿಗನ ಕಂಡು, ಶಕುನ ಹೊಲ್ಲೆಂಬ ಚದುರನ ನೋಡಾ. ತನ್ನ ಸತಿ ಮೂಕೊರತಿ, ತನ್ನ ಕೈಯಲ್ಲಿ ಹಾವು, ತಾನು ಮೂಕೊರೆಯ. ತನ್ನ ಬ್ಥಿನ್ನವನರಿಯದೆ ಅನ್ಯರನೆಂಬ ಕುನ್ನಿಯನೇನೆಂಬೆ ಕೂಡಲಸಂಗಮದೇವಾ 105
--------------
ಬಸವಣ್ಣ
ಸತಿಯ ಗುಣವ ಪತಿ ನೋಡಬೇಕಲ್ಲದೆ ಪತಿಯ ಗುಣವ ಸತಿ ನೋಡಬಹುದೆ ಎಂಬರು. ಸತಿಯಿಂದ ಬಂದ ಸೋಂಕು ಪತಿಗೆ ಕೇಡಲ್ಲವೆ? ಪತಿಯಿಂದ ಬಂದ ಸೋಂಕು ಸತಿಯ ಕೇಡಲ್ಲವೆ? ಒಂದಂಗದ ಕಣ್ಣು ಉಭಯದಲ್ಲಿ ಒಂದು ಹಿಂಗಲಿಕ್ಕೆ ಭಂಗವಾರಿಗೆಂಬುದ ತಿಳಿದಲ್ಲಿಯೆ ಕಾಲಾಂತಕ ಬ್ಥೀಮೇಶ್ವರಲಿಂಗಕ್ಕೆ ಸಲೆ ಸಂದಿತ್ತು.
--------------
ಡಕ್ಕೆಯ ಬೊಮ್ಮಣ್ಣ
ತಾಯಿಯಿಲ್ಲದ ಶಿಶುವಿಂಗೆ, ಶಿಶುವಿಲ್ಲದ ತಾಯಿ ಮೊಲೆಯನೂಡಿದಳು. ಮೊಲೆವಾಲನುಂಡ ಶಿಶು ತಾಯ ತಕ್ಕೈಸಿದಡೆ ತಾಯಿ ಆ ಶಿಶುವಿಂಗೆ ಸತಿಯಾದಳಲ್ಲಾ ! ಸತಿಯ ಸಂಗದ ಸುಖವ ಪತಿಯಿಲ್ಲ (ಯಿಂ?)ದರಿದಲ್ಲಿ ಸತಿ ಪತಿ ಎಂಬೆರಡೂ ಅಳಿಯಿತ್ತು ನೋಡಾ ! ಈ ನಿಜದ ನಿರ್ಣಯವ ಎನಗೆ ತೋರಿದ ಗುಹೇಶ್ವರನ ಶರಣ ಮಡಿವಳ ಮಾಚಿತಂದೆಗಳ ಪಾದಕ್ಕೆ ನಮೋ ನಮೋ ಎನುತಿರ್ದೆನು.
--------------
ಅಲ್ಲಮಪ್ರಭುದೇವರು
ಭಕ್ತರಾಗಿದ್ದವರು ಭಕ್ತರ ವಿರಕ್ತರ ಮಿಥ್ಯದಿಂದ ನುಡಿವುದು ಸತ್ಯವಲ್ಲ. ಮಿಥ್ಯವನಳಿದು ಸತ್ಯವ ಕುರಿತು ಭಕ್ತ ಜಂಗಮಕ್ಕೆ ತತ್ತ್ವದ ಬಟ್ಟೆಯ ಹೇಳಿದಲ್ಲಿ ನಿತ್ಯ ಅನಿತ್ಯವ ತಿಳಿಯಬೇಕು. ಇದು ಸುಚಿತ್ತದ ಭಾವ. ತನ್ನ ವಂಶ ಕೆಟ್ಟಡೆ ತನಗಲ್ಲದೆ ಅನ್ಯರಿಗಿಲ್ಲ. ಇದು ಕಾರಣದಲ್ಲಿ ತನ್ನಂಗದ ಗಾಯದ ನೋವು ತನಗೆ ಅನ್ಯ ಬ್ಥಿನ್ನವಿಲ್ಲದೆ ತೋರುವವೊಲು ಇದು ನನ್ನಿಯ ನುಡಿದೆ ನೈಸಲ್ಲದೆ ಸಮರಸದ ಸನ್ನರ್ಧನಲ್ಲ. ನೀವಾಡಿಸುವ ಯಂತ್ರದ ತಂತ್ರವಲ್ಲದೆ ಸ್ವತಂತ್ರಿಯಲ್ಲ. ಎನಗೆ ಇದಿರನಾಡೆ ನಾ ಮಾಡುವ ಭಕ್ತಿ ಸತ್ಯ ಸುಚಿತ್ತದ ನಿತ್ಯವಲ್ಲ. ಮೊತ್ತದ ಕರಣಂಗಳ ನಡುವೆ ಸಿಕ್ಕಿ ಮತ್ತನಾಗಿ ಬಿದ್ದವಂಗೆ ವಸ್ತುವಿನ ಬಟ್ಟೆಯ ತೋರಿ ಮುಕ್ತಿಪಥದಲ್ಲಿ ನಿಲುವ ನಿಚ್ಚಣಿಕೆಯನಿಕ್ಕಿ ತೋರಿದ ಭಕ್ತ ದೇಹಿಕ ನಿಜಪದ ತತ್ವ ಸ್ವರೂಪ. ಸಕಲ ಜೀವದ ಆಧಾರ, ಸಕಲಮಯ ಅಖಿಳ ಬ್ರಹ್ಮಾಂಡ ಕರಂಡ ತಮರಿಪು ಕೋದಂಡ, ಶಕ್ತಿಮಯ ಚಂಡಿಕಾ ಕಿರಣದಶ ಉದಕಭರಿತ, ಭಕ್ತಿಭಂಡಾರಿ ಬಸವೇಶ್ವರನ ನಿಜತತ್ವದ್ವಯ ಪಾದಂಗಳಿಗೆ ಮಂಡಿತಮಯನಾಗೆರಗಿದೆ ಸಂದೇಹವೆಂಬ ಕರಂಡವ ಬಂದ ಪ್ರಮಥರ ಸತಿ ಸಂದ ಪ್ರಮಥರ ಡಿಂಗರಿಗ ಗುಪ್ತಮಂಚನ ನಿತ್ಯನೇಮ ಸಂದಿತ್ತು. ವೀರದಾಸನ ದಾಸೋಹ ಸೋಹಂ ಎನುತಿದ್ದಿತ್ತು. ನಾರಾಯಣ ನಯನ ಪೂಜಿತಪದಾಂಬುಜ ವಿಮಲ ಕಮಲ ಸುಲಲಿತ ರಾಮೇಶ್ವರಲಿಂಗ ಎನ್ನೊಳಗಾದಾ.
--------------
ಗುಪ್ತ ಮಂಚಣ್ಣ
ಅಯ್ಯ, ಪರಮ ಪತಿವ್ರತೆಗೆ ಹರಗಣ ಸಾಕ್ಷಿಯಾಗಿ ಕಂಕಣದ ಕಟ್ಟಿದ ಪುರುಷಂಗೆ ತನ್ನ ತನುಮನವ ಮೀಸಲ ಮಾಡಿ, ತನ್ನ ಪಿತ-ಮಾತೆ-ಪುತ್ರ-ಮಿತ್ರರ ಸಂಗವ ಸೋಂಕದೆ, ಅವರೊಡವೆಗಿಚ್ಛೈಸಿ ನಡೆನುಡಿಗಳಾಲಿಸದೆ, ತನ್ನ ರಮಣನ ದ್ರವ್ಯಾಭರಣವ ಹಾರೈಸಿ, ಆತನ ನುಡಿಯೆ ಮಹಾಪ್ರಸಾದವೆಂದು ಪ್ರತಿನುಡಿಯ ನುಡಿಯದೆ, ಸರ್ವಾವಸ್ಥೆಯಲ್ಲಿ ಆ ರಮಣನ ರತಿಸಂಯೋಗಾನುಸಂಧಾನದಿಂದ ಎರಡಳಿದಿರುವ ಸತ್ಯಾಂಗನೆಯಂತೆ ಶ್ರೀ ಗುರುವಿನ ಕರಗರ್ಭಮಧ್ಯದಲ್ಲಿ ಜನಿತವಾದ ಲಿಂಗಭಕ್ತಗಣ ಸತಿ ಸುತ ಪಿತ ಮಾತೆ ಬಂಧು ಬಳಗ ಒಡಹುಟ್ಟಿದವರು ಮೊದಲಾಗಿ ಪರಶಿವಲಿಂಗ ಜಂಗಮತೀರ್ಥಪ್ರಸಾದ ಮಂತ್ರದಲ್ಲಿ ಮುಳುಗಿ, ಲೋಕದ ಶೈವಮಾರ್ಗಿಗಳಂತೆ ಹಲವು ಕ್ಷೇತ್ರ, ಹಲವು ತೀರ್ಥ, ಹಲವು ನೇಮ ವ್ರತಗಳಿಗೆ ಅಡಿಯಿಡದೆ ವಾಚಕ-ಮಾನಸ-ಕಾಯಕ ಮೊದಲಾದ ಸಮಸ್ತತತ್ವಂಗಳ ಸ್ವಪಾಕವ ಮಾಡಿ ನಿಷ್ಕಳಂಕ ಪರಶಿವಲಿಂಗಜಂಗಮಕ್ಕೆ ಸಮರ್ಪಿಸಿ, ಅವರೊಕ್ಕುಮಿಕ್ಕ ಹರುಷಾನಂದ ಮಹಾಪ್ರಸಾದದಲ್ಲಿ ಸಂತೃಪ್ತನಾಗಿ, ಇಷ್ಟಲಿಂಗಬಾಹ್ಯವಾದ ಜಡಶೈವ ನಡೆನುಡಿಗಳ ಆಲಿಸದಿಪ್ಪುದೆ ಏಕಾಗ್ರಚಿತ್ತದೀಕ್ಷೆ. ಇಂತುಟೆಂದು ಶ್ರೀಗುರು ನಿಷ್ಕಳಂಕ ಟ್ಸ್ಥಲನಾಯಕ ಚನ್ನಬಸವರಾಜೇಂದ್ರನು ನಿರ್ಲಜ್ಜಶಾಂತಲಿಂಗದೇಶಿಕೋತ್ತಮಂಗೆ ನಿರೂಪಮಂ ಕೊಡುತಿರ್ದರು ನೋಡ ಸಂಗನಬಸವೇಶ್ವರ.
--------------
ಗುರುಸಿದ್ಧದೇವರು
ಉರಿಯ ಸೀರೆಯನುಟ್ಟು, ಕಡೆಸೆರಗ ಬಿಡುಬೀಸಿ, ಮಡದಿ ತನ್ನ ಕೆಳದಿಯರನೊಡಗೊಂಡು ಆಡುತ್ತಿರೆ, ಪತಿ ಬಂದು ಮುಡಿಯ ಹಿಡಿದು ಸೀರೆಯನುಗಿಯೆ, ಮಡದಿಯೊಡಗೂಡುತ್ತಿರೆ; ಸಮರಸದಲ್ಲಿ ಸತಿಯಳಿದು ಪತಿಯಾಗಿ, ಪತಿಯಳಿದು ನಿಃಪತಿಯಾಗಿ, ಸತಿ ಪತಿ ನಿಃಪತಿ- ಎಂಬ ತ್ರಿವಿಧವು ಏಕಾರ್ಥವಾದ ಕೂಡಲಚೆನ್ನಸಂಗಯ್ಯನಲ್ಲಿ, ಬಸವಣ್ಣನ ಪಾದಕ್ಕೆ ನಮೋ ನಮೋ ಎನುತಿರ್ದೆನು
--------------
ಚನ್ನಬಸವಣ್ಣ
ಕಾಯವ ಬಿಟ್ಟು ಜೀವವಸ್ತುವಿನಲ್ಲಿ ಕೂಡಬೇಕೆಂಬರು. ಕಾಯ ಅರಿವಿಂಗೆ ಹೊರಗೆ. ಕಾಯ ಜೀವವೆರಡೂ ಕೂಡಿ ಕಂಡ ಜ್ಞಾನರತ್ನದ ರತಿ ಬೇರೆ. ಆ ಘಟವ ಬೇರೆ ಬ್ಥಿನ್ನವ ಮಾಡಿ, ರತ್ನ ಮಾರುವ ಪರಿ ಇನ್ನೆಂತೊ ? ಇಷ್ಟದ ರೂಪ ಹಾಕಿ, ಮತ್ತೆ ಲಿಂಗಪೂಜಕನೆಂತಪ್ಪನೊ ? ಅಂಗದ ಕೂಟ, ಮನದ ವಿಶ್ರಾಂತಿ ಉಭಯವ ಬೇರೆ ಮಾಡದಿರಯ್ಯಾ. ಪತಿ ಹೋಹಲ್ಲಿ ಸತಿ ಉಳಿದಡೆ, ಅದು ಅಪಮಾನದ ಕೇಡೆಂಬರು. ನಿನ್ನಯ ನೆನಹ ಹೊತ್ತಿದ್ದ ಘಟ ಮಣ್ಣಿಗೀಡಾಗಲೇಕೆ ? ಚೆನ್ನಬಂಕೇಶ್ವರಲಿಂಗಾ, ನಿನ್ನಲ್ಲಿಯೆ ಗ್ರಹಿಸಿಕೊಳ್ಳಯ್ಯಾ, ನಿನ್ನ ಧರ್ಮ.
--------------
ಸುಂಕದ ಬಂಕಣ್ಣ
ಬಯ್ಚಿಟ್ಟ ಬಯ್ಕೆಯ ಒಡೆಯ ಬೇಡಿದಡೆ ಕೊಡದಿರ್ದಡೆ ಸ್ವಾಮಿದ್ರೋಹಿಕೆಯಲ್ಲವೆ? ಅಟ್ಟ ಅಡಿಗೆಯ ಪತಿಗಿಕ್ಕದ ಸತಿ ಉಂಡಡೆ ನೆಟ್ಟನೆ ಕಳ್ಳೆಯಲ್ಲವೆ? ಕೊಟ್ಟಾತ ಒಡವೆಯ ಬೇಡಿದಡೆ ಕಟ್ಟಿ ಹೋರುವ ಕಷ್ಟಜೀವಿಗೇಕೆ ತ್ರಿವಿಧಭಕ್ತಿ, ಸಜ್ಜನಯುಕ್ತಿ? ಇಂತೀ ಸಜ್ಜನಗಳ್ಳರ ಬಲ್ಲನಾಗಿ ಸದಾಶಿವಮೂರ್ತಿಲಿಂಗವು ಒಲ್ಲನು.
--------------
ಅರಿವಿನ ಮಾರಿತಂದೆ
ಗಂಡನಿಲ್ಲದ ಸತಿ ಯೋನಿಯಿಲ್ಲದೆ ಮಕ್ಕಳ ಹಡೆದು ನಾಲಗೆಯಲ್ಲದ ಬಾಯಲ್ಲಿ ಜೋಗುಳವಾಡುತ್ತೈದಾಳೆ. ತೊಟ್ಟಿಲಿಲ್ಲದೆ ನೇಣು ಹೊರತೆಯಾಗಿ ಗಂಟಕಟ್ಟಿ, [ಮೊಗ]ವಿಲ್ಲದೆ ಶಿಶು ಅಳುತ್ತದೆ. ಅದಕ್ಕೆ ಮೊಲೆಯಿಲ್ಲದ ಹಾಲು ಬೇಕು, ಸದಾಶಿವಮೂರ್ತಿಲಿಂಗವನರಿತಲ್ಲದಾಗದು.
--------------
ಅರಿವಿನ ಮಾರಿತಂದೆ
ಒಡೆಯರ ಕಟ್ಟಳೆಯಾದ ಮತ್ತೆ, ಒಡಗೂಡಿ ಸಹಪಂಙÂ್ತಯಲ್ಲಿ ಮೃಡಶರಣನ ಪ್ರಸಾದವ ಕೊಳಲೊಲ್ಲದೆ, ತುಡುಗುಣಿನಾಯಂತೆ ತೊಗಲಗಡಿಗೆಯ ತುಂಬುವ, ಗುರುಪಾತಕರಿಗೆಲ್ಲಿಯದೊ ಒಡೆಯರ ಕಟ್ಟಳೆ? ಒಡೆಯನ ನಿರೀಕ್ಷಣೆಯಲ್ಲಿ ಸರಿಗದ್ದುಗೆಯನೊಲ್ಲದೆ, ಒಡೆಯಂಗೆ ಮನೋಹರವಾಗಿ ಸಡಗರಿಸಿ ಸಮರ್ಪಿಸಿದ ಮತ್ತೆ, ತನ್ನೊಳಗಿಪ್ಪ ಆತ್ಮಂಗೆ ತೃಪ್ತಿ, ಕೂರ್ಮನ ಶಿಶುವಿನ ಸ್ನೇಹದಂತೆ. ಹೀಂಗಲ್ಲದೆ ಭಕ್ತಿ ಸಲ್ಲ. ಎನಗೆ ಪರಸೇವೆ ಪರಾಙ್ಮುಖವೆಂದು, ಒಡೆಯರಿಗೆ ಎಡೆಮಾಡೆಂದು ಎನಗೆ ತಳುವೆಂದಡೆ, ಒಪ್ಪುವರೆ ನಿಜಶರಣರು? ಸತಿ ಕೋಣೆಯಲ್ಲಿದ್ದು, ಪತಿ ನಡುಮನೆಯಲ್ಲಿದ್ದಡೆ ರತಿಕೂಟವುಂಟೆ? ಇದರ ಗಸಣೆಗಂಜಿ, ವಿಶೇಷವನರಿಯದ ಪಶುಗಳಿಗೆಲ್ಲಿಯೂ, [ಐಕ್ಯಾನುಭಾವ], ನಿಃಕಳಂಕ ಮಲ್ಲಿಕಾರ್ಜುನಾ?
--------------
ಮೋಳಿಗೆ ಮಾರಯ್ಯ
ಸತಿ ಭಕ್ತೆಯಾದಡೆ ಹೊಲೆಗಂಜಲಾಗದು, ಪತಿ ಭಕ್ತನಾದೆಡೆ ಕುಲಕಂಜಲಾಗದು. ಸತಿ_ಪತಿಯೆಂಬ ಅಂಗಸುಖ ಹಿಂಗಿ, ಲಿಂಗವೇ ಪತಿಯಾದ ಬಳಿಕ ಸತಿಗೆ ಪತಿಯುಂಟೆ? ಪತಿಗೆ ಸತಿಯುಂಟೆ? ಹಾಲುಂಡು ಮೇಲುಂಬರೆ ಗುಹೇಶ್ವರಾ?
--------------
ಅಲ್ಲಮಪ್ರಭುದೇವರು
ಹದ್ದ ನುಂಗಿದ ಕಾಗೆ ಬದ್ಧ ಭವಿ ನೋಡಾ. ಎದ್ದು ಹಾರಲು ಸಿದ್ಧರ ಗಾರುಡವೆಲ್ಲ ಬಿದ್ದೋಡಿವು ನೋಡಾ. ಬ್ರಹ್ಮಚರಿಯವೆಲ್ಲ ಭ್ರಮೆಗೊಂಡಿತ್ತು ನೋಡಾ. ತ್ರೆ ೈಜಗವೆಲ್ಲಾ ಮೂರ್ಛೆಗತರಾದರು ನೋಡಾ. ವೀರರು ದ್ಥೀರರು ವ್ರತಿಗಳು ಸಾಮಥ್ರ್ಯರೆಲ್ಲ ಮತಿಗೆಟ್ಟು ಮರುಳಾದರು ನೋಡಾ. ಸತಿ ಸುತರ ಕೂಟವನೊಲ್ಲೆನೆಂಬ ವಿರಕ್ತರೆಲ್ಲ ವಿಕಾರಗೊಂಡರು ನೋಡಾ. ಶಿವನಿರ್ಮಿತದಿಂದಾದ ಮಾಯವ ಪರಿಹರಿಸಿಹೆನೆಂದಡೆ, ಅಜ ಹರಿ ರುದ್ರಾದಿಗಳಿಗೆ ಅಸಾಧ್ಯ ನೋಡಾ. ಈ ಮಾಯಾ ಪ್ರಪಂಚ ಕಳೆವಡೆ ಪರಶಿವಜ್ಞಾನ ಮುಖದಿಂದ ಅಲ್ಲದೆ ಪರಿಹರವಾಗದು ನೋಡಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಕೃತಯುಕ ತ್ರೇತಾಯುಗ ದ್ವಾಪರಯುಗ ಕಲಿಯುಗಂಗಳಲ್ಲಿ ಬಸವನೆ ಭಕ್ತ, ಪ್ರಭುವೆ ಜಂಗಮವೆಂಬುದಕ್ಕೆ ಭಾವಭೇದವಿಲ್ಲವೆಂಬುದು ತಪ್ಪದು ನೋಡಯ್ಯಾ. ಕಲಿಯುಗದಲ್ಲಿ ಶಿವಭಕ್ತಿಯನು ಪ್ರಬಲವ ಮಾಡಬೇಕೆಂದು ಮತ್ರ್ಯಲೋಕಕ್ಕೆ ಇಳಿದು, ಶೈವಾಗಮಾಚಾರ್ಯ ಮಂಡಗೆಯ ಮಾದಿರಾಜನ ಸತಿ ಮಾದಾಂಬಿಕೆಯ ಗರ್ಭದಿಂದವತರಿಸಿದ. ಬಸವಣ್ಣನೆಂಬ ನಾಮಕರಣವಂ ಧರಿಸಿ, ಕೂಡಲಸಂಗಮದೇವರ ದಿವ್ಯ ಶ್ರೀಪಾದಪದ್ಮಾರಾಧಕನಾಗಿ, ಮತ್ರ್ಯಕ್ಕೆ ಪ್ರತಿಕೈಲಾಸವೆಂಬ ಕಲ್ಯಾಣಮಂ ಮಾಡಿ, ತನ್ನ ಪರೀಕ್ಷೆಗೆ ಬಿಜ್ಜಳನೆಂಬ ಒರೆಗಲ್ಲ ಮಾಡಿ, ಆ ಸದ್ಭಕ್ತಿ ಬಿನ್ನ[ಹ]ವನು ಒರೆದೊರೆದು ನೋಡುವ ಕೊಂಡೆಯ ಮಂಚಣ್ಣಗಳ ಪುಟ್ಟಿಸಿದ ಬಸವಣ್ಣ. ಕಪ್ಪಡಿಯ ಸಂಗಯ್ಯದೇವರ ಸ್ವಹಸ್ತದಿಂದಲುಪದೇಶಮಂ ಪಡೆದು ಸರ್ವಾಚಾರಸಂಪನ್ನನಾಗಿ ಇರುತ್ತಿರೆ, ಶಿವನಟ್ಟಿದ ನಿರೂಪಮಂ ಓದಿ, ಅರವತ್ತುಕೋಟಿ ವಸ್ತುವಂ ತೆಗೆಸಿ, ಬಿಜ್ಜಳಂಗೆ ದೃಷ್ಟಮಂ ತೋರಿ, ಶಿರಪ್ರಧಾನನಾಗಿ, ಶಿವಾಚಾರ ಶಿರೋಮಣಿಯಾಗಿ, ಏಳುನೂರಯೆಪ್ಪತ್ತು ಅಮರಗಣಂಗಳಿಗೆ ಪ್ರಥಮದಂಡನಾಯಕನಾಗಿ, ಗುರುಲಿಂಗಜಂಗಮಕ್ಕೆ ತನುಮನಧನವಂ ನಿವೇದಿಸಿ, ಅನವರತ ಶಿವಗಣ ತಿಂಥಿಣಿಯೊಳು ಓಡಾಡುತ್ತಿಪ್ಪ ಆ ಬಸವಣ್ಣ, ಲಕ್ಷದ ಮೇಲೆ ತೊಂಬತ್ತಾರು ಸಾವಿರ ಜಂಗಮದ ಪಾದೋದಕ ಪ್ರಸಾದದಲ್ಲಿ ನಿಯತನಾಗಿ, ಅವರವರ ನೇಮದಿಚ್ಫೆಗಳು ಸಲಿಸಿ, ಒಲಿದು ಮಾಡುವ ದಾಸೋಹದ ಪರಿಯೆಂತೆಂದಡೆ : ಹಾಲನೇಮದವರು ಹನ್ನೆರಡುಸಾವಿರ. ಘಟ್ಟಿವಾಲ ನೇಮದವರು ಹನ್ನೆರಡುಸಾವಿರ. ಪಂಚಾಮೃತಗಳ ಒಲಿದು ಲಿಂಗಕ್ಕೆ ಸಲಿಸುವ ನೇಮದವರು ಹನ್ನೆರಡುಸಾವಿರ. ಕಟ್ಟುಮೊಸರ ನೇಮದವರು ಹನ್ನೆರಡುಸಾವಿರ. ಘಟ್ಟಿದುಪ್ಪದ ನೇಮದವರು ಆರುಸಾವಿರ. ತಿಳಿದುಪ್ಪದ ನೇಮದವರು ಆರುಸಾವಿರ. ಚಿಲುಮೆಯಗ್ಘವಣಿಯ ನೇಮದವರು ಹನ್ನೆರಡುಸಾವಿರ. ಪರಡಿ ಸಜ್ಜಿಗೆಯ ನೇಮದವರು ಹನ್ನೆರಡುಸಾವಿರ ಕಟ್ಟುಮಂಡಗೆಯ ನೇಮದವರು ಹನ್ನೆರಡುಸಾವಿರ. ಎಣ್ಣೆಹೂರಿಗೆಯ ನೇಮದವರು ಹನ್ನೆರಡುಸಾವಿರ. ವಡೆ ಘಾರಿಗೆಯ ನೇಮದವರು ಹನ್ನೆರಡುಸಾವಿರ. ಹಾಲುಂಡೆ ಲಡ್ಡುಗೆಯ ನೇಮದವರು ಹನ್ನೆರಡುಸಾವಿರ. ತವರಾಜ ಸಕ್ಕರೆಯ ನೇಮದವರು ಹನ್ನೆರಡುಸಾವಿರ. ಷಡುರಸಾಯನದ ನೇಮದವರು ಹನ್ನೆರಡುಸಾವಿರ. ದ್ರಾಕ್ಷೆ ಮಾವು, ಖರ್ಜೂರ, ಹಲಸು, ದಾಳಿಂಬ ಇಕ್ಷುದಂಡ ಕದಳಿ ಮೊದಲಾದ ಫಲದ್ರವ್ಯಂಗಳ ನೇಮದವರು ಹನ್ನೆರಡುಸಾವಿರ. ಸಪ್ಪೆಯ ನೇಮದವರು ಹನ್ನೆರಡುಸಾವಿರ. ಸರ್ವದ್ರವ್ಯಂಗಳ ನೇಮದವರು ಹನ್ನೆರಡುಸಾವಿರ. ಸಮಯಾಚಾರ ಸಹಿತ ಲಿಂಗಾರ್ಚನೆ ಮಾಡುವ ನಿತ್ಯನೇಮಿಗಳು ಹದಿನಾರುಸಾವಿರ. ಇಂತು ಎಡೆಬಿಡುವಿಲ್ಲದೆ ಲಿಂಗಾರ್ಚನೆಯ ಮಾಡುವ ಜಂಗಮ ಲಕ್ಷದ ಮೇಲೆ ತೊಂಬತ್ತಾರು ಸಾವಿರ. ಆ ಬಸವಣ್ಣನ ಸಮಯಾಚಾರದಲ್ಲಿ ಕುಳ್ಳಿರ್ದು, ಲಿಂಗಾರ್ಚನೆಯ ಮಾಡುವ ಸಮಯಾಚಾರಿಗಳು ಮೂವತ್ತಾರು ಸಾವಿರ. ಅಂತು ಎರಡುಲಕ್ಷ ಮೂವತ್ತೆರಡು ಸಾವಿರ ಶಿವಗಣತಿಂಥಿಣಿಗೆ ಒಲಿದು ದಾಸೋಹಮಂ ಮಾಡುತ್ತ, ಪ್ರಸಾದ ಪಾದೋದಕದೊಳೋಲಾಡುತ್ತ, ಸುಖಸಂಕಧಾವಿನೋದದಿಂದ ಭಕ್ತಿಸಾಮ್ರಾಜ್ಯಂಗೆಯ್ವುತ್ತಿರಲು, ಶಿವಭಕ್ತಿಕುಲಕತಿಲಕ ಶಿವಭಕ್ತಿ ಶಿರೋಮಣಿಯೆಂಬ ಚೆನ್ನಬಸವಣ್ಣನವತರಿಸಿ ಶೈವಮಾರ್ಗಮಂ ಬಿಡಿಸಿ, ಪ್ರಾಣಲಿಂಗ ಸಂಬಂಧಮಂ ತೋರಿಸಿ, ಸರ್ವಾಂಗ ಶಿವಲಿಂಗ ಪ್ರಾಣಪ್ರಸಾದ ಭೋಗೋಪಭೋಗದ ಭೇದಮಂ ತೋರಿಸಿ, ದಾಸೋಹದ ನಿರ್ಣಯಮಂ ಬಣ್ಣವಿಟ್ಟು ಬೆಳಗಿ ತೋರಿ, ಪಾದೋದಕ ಪ್ರಸಾದಮಂ ಕೊಳ ಕಲಿಸಿ, ಗುರುಲಿಂಗಜಂಗಮದ ಘನಮಂ ತೋರಿಸಿ, ಶರಣಸತಿ ಲಿಂಗಪತಿಯೆಂಬುದಂ ಸಂಬಂಧಿಸಿ ತೋರಿ, ಭಕ್ತ ಮಾಹೇಶ್ವರ ಪ್ರಸಾದಿ ಪ್ರಾಣಲಿಂಗಿ ಶರಣೈಕ್ಯನೆಂಬ ಷಡುಸ್ಥಲಮಂ ಸರ್ವಾಂಗದೊಳು ಪ್ರತಿಷಿ*ಸಿ ತೋರಿ ಸಲಹಿದ ಚೆನ್ನಬಸವಣ್ಣನ ತನ್ನಲ್ಲಿ ಇಂಬಿಟ್ಟುಕೊಂಡು, ಅಚ್ಚಪ್ರಸಾದಿಯಾಗಿ ಸತ್ಯಪ್ರಸಾದಿಯಾಗಿ ಸಮಯಪ್ರಸಾದಿಯಾಗಿ, ಸಂತೋಷಪ್ರಸಾದಿಯಾಗಿ ಸರ್ವಾಂಗಪ್ರಸಾದಿಯಾಗಿ, ಸಮರಪ್ರಸಾದಿಯಾಗಿ, ನಿರ್ಣಯದಲ್ಲಿ ನಿಷ್ಪನ್ನನಾಗಿ, ನಿಜದಲ್ಲಿ ನಿವಾಸಿಯಾಗಿ, ನಿರಾಳಕ್ಕೆ ನಿರಾಳನಾಗಿ, ಘನದಲ್ಲಿ ಅಗಮ್ಯನಾಗಿ, ಅಖಂಡ ಪರಿಪೂರ್ಣನಾಗಿ, ಉಪಮೆಗೆ ಅನುಪಮನಾಗಿ, ವಾಙ್ಮನಕ್ಕಗೋಚರನಾಗಿ, ಭಾವ ನಿರ್ಭಾವವೆಂಬ ಬಗೆಯ ಬಣ್ಣಕ್ಕೆ ಅತ್ತತ್ತಲೆಂದೆನಿಸಿ ನಿಃಶೂನ್ಯನೆಂದೆನಿಸಿಪ್ಪ ಸಂಗನಬಸವಣ್ಣನ ತೊತ್ತಿನ ತೊತ್ತಿನ ಮರುದೊತ್ತಿನ ಮಗ ನಾನು ಕಾಣಾ ಪ್ರಭುವೆ, ಕಲಿದೇವರದೇವ.
--------------
ಮಡಿವಾಳ ಮಾಚಿದೇವ
ಇನ್ನಷ್ಟು ... -->