ಅಥವಾ
(247) (109) (40) (3) (37) (5) (0) (0) (43) (7) (8) (33) (6) (0) ಅಂ (63) ಅಃ (63) (196) (4) (38) (10) (0) (8) (0) (42) (0) (0) (0) (0) (1) (0) (0) (87) (0) (16) (13) (104) (70) (0) (63) (53) (93) (9) (14) (0) (29) (30) (30) (2) (78) (81) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಆಳುದ್ದಿಯದೊಂದು ಬಾವಿ ಆಕಾಶದ ಮೇಲೆ ಹುಟ್ಟಿತ್ತು ನೋಡಾ ! ಆ ಬಾವಿಯ ನೀರನೊಂದು ಮೃಗ ಬಂದು ಕುಡಿಯಿತ್ತು. ಕುಡಿಯ ಬಂದ ಮೃಗವು ಆ ನೀರೊಳಗೆ ಮುಳಿಗಿದಡೆ ಉರಿಯ ಬಾಣದಲೆಚ್ಚು ತೆಗೆದೆ ನೋಡಾ ! ಒಂದೆ ಬಾಣದಲ್ಲಿ ಸತ್ತ ಮೃಗವು, ಮುಂದಣ ಹೆಜ್ಜೆಯನಿಕ್ಕಿತ್ತ ಕಂಡೆ ! ಅಂಗೈಯೊಳಗೊಂದು ಕಂಗಳು ಮೂಡಿ, ಸಂಗದ ಸುಖವು ದಿಟವಾಯಿತ್ತು ! ಲಿಂಗಪ್ರಾಣವೆಂಬುದರ ನಿರ್ಣಯವನು ಇಂದು ಕಂಡೆನು ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಆರುಸ್ಥಲದಲ್ಲಿ ಅರಿತಿಹೆನೆಂದು ಸಹಭೋಜನದಲ್ಲಿ ಉಂಬ ಅಣ್ಣಗಳು ನೀವು ಕೇಳಿರೊ ! ಅಂಗದ ಮೇಲೆ ಲಿಂಗಸಂಬಂಧಿಯಾದಡೇನಯ್ಯ, ಆ ಲಿಂಗವ ತನ್ನ ಪ್ರಾಣಕ್ಕೆ ಅವಧರಿಸದನ್ನಕ್ಕ ! ಆ ಇಷ್ಟಲಿಂಗಕ್ಕೆ ಅಷ್ಟವಿಧಾರ್ಚನೆ ಷೋಡಶೋಪಚಾರ ಬಾಹ್ಯಕ್ರೀಯ ಮಾಡಿದಡೇನಯ್ಯ ನೈಷ್ಠೆಇಲ್ಲದನ್ನಕ್ಕ ಅಷ್ಟಮದಂಗಳ ನಷ್ಟವಮಾಡಿ ಪಂಚೇಂದ್ರಿಯಂಗಳ ಲಿಂಗಮುಖವ ಮಾಡಿ ದೇಹೇಂದ್ರಿಯ ಮನ ಪ್ರಾಣಾದಿಗಳ ಪ್ರಕೃತಿಯನಳಿದು ! ಇಷ್ಟ ಪ್ರಾಣ ಭಾವವೆಂಬ ತ್ರಿವಿಧ ಲಿಂಗಕ್ಕೆ ರೂಪು ರುಚಿ ತೃಪ್ತಿಯನೀವ ವರ್ಮಾದಿವರ್ಮಂಗಳ ಭೇದವನರಿಯದೆ ! ಕರಸ್ಥಲದಲ್ಲಿ ಲಿಂಗವಿಡಿದು ಸಹಭೋಜನವೆಂದು ಒಂದಾಗಿ ಉಂಡು ತಮ್ಮ ಒಡಲ ಹೊರೆವ ಲಿಂಗದ್ರೋಹಿಗಳ ನೋಡಿ ನಗುತ್ತಿರ್ದೆನಯ್ಯಾ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಆಡುತಾಡುತ ಬಂದ ಕೋಡಗ, ಜಪವ ಮಾಡುವ ತಪಸಿಯ ನುಂಗಿತ್ತಲ್ಲಾ ! ಬೇಡ ಬೇಡೆಂದಿತ್ತು, ಮುಂದಣ ಕೇರಿಯ ಮೊಲನೊಂದು ! ಮುಂದಣ ಮೊಲನ ಹಿಂದಣ ಕೋಡಗವ ಕಂಬಳಿ ನುಂಗಿತ್ತು ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಆವ ಜಾತಿಯಾದಡೂ ಆಗಲಿ; ಪುರಾತನ ಚಾರಿತ್ರದಲ್ಲಿ ನಡೆದು, ಗುರುಲಿಂಗಜಂಗಮಕ್ಕೆ ಅರ್ಥಪ್ರಾಣಾಭಿಮಾನಮಂ ಕೊಟ್ಟು, ಅಹಂಕಾರವಳಿದಿಹಂತಹ ಮಹಾತ್ಮರ ಬಾಯ ತಂಬುಲವ ಮೆಲುವೆ, ಬೀಳುಡಿಗೆಯ ಹೊದಿವೆ. ಅವರ ಪಾದರಕ್ಷೆಗಳೆರಡನೂ, ಮಂಡೆಯ ಮೇಲೆ ಹೊತ್ತುಕೊಂಡು ಬದುಕುವೆನಯ್ಯಾ. ಆ ಗಣಂಗಳ ದಾಸನ ದಾಸ ನಾನು, ಜನ್ಮ ಜನ್ಮದಲ್ಲಿ ಆಗುವೆ ಕಾಣಾ ಗುಹೇಶ್ವರಾ
--------------
ಅಲ್ಲಮಪ್ರಭುದೇವರು
ಆಚಾರವರಿಯದೆ, ವಿಭವವಳಿಯದೆ, ಕೋಪವಡಗದೆ ತಾಪ ಮುರಿಯದೆ, ಬರಿದೆ ಭಕ್ತರಾದೆವೆಂದು ಬೆಬ್ಬನೆ ಬೆರೆಯುವ ಕೇಡಿಂಗೆ ನಾನು ಮರುಗುವೆ ಕಾಣಾ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಆದಿಯನರಿಯರು ಅನಾದಿಯನರಿಯರು, ಒಂದರೊಳಗಿಪ್ಪ ಎರಡನರಿಯರು, ಎರಡರೊಳಗಿಪ್ಪ ಮೂರರ ಕೀಲನರಿಯರು, ಮೂರರ ಸಂದು ಆರಾದುದನರಿಯರು. ಆರೆಂದು ನುಡಿವ ಗಾರು ಮಾತು ತಾನಲ್ಲ ಗುಹೇಶ್ವರ[ನ] ನಿಲವನರಿದಡೆ, _ಒಂದೂ ಇಲ್ಲ. ಅರಿಯದಿರ್ದಡೆ ಬಹುಮುಖವಯ್ಯಾ.
--------------
ಅಲ್ಲಮಪ್ರಭುದೇವರು
ಆಗ ಹುಟ್ಟಿ ಬೇಗ ಸಾವ ಕಾಯಗೊಂಡ ಮಾನವಾ, ನೀ ದೇವರೆನಿಸಿಕೊಂಬುದೊಂದು ಆವುದಂತರ ಹೇಳಾ ? ದೇವರು ಸಾವಡೆ, ದೇವರಿಗೂ ಸಾವರಿಗೂ ಆವುದಂತರ ಹೇಳಾ ? ದೇವರಿಗೆ ದೇವಲೋಕ, ಮಾನವರಿಗೆ ಮತ್ರ್ಯಲೋಕ, ಗುಹೇಶ್ವರ ಅಲ್ಲಯ್ಯಂಗೆ ಇನ್ನಾವ ಲೋಕವೂ ಇಲ್ಲ.
--------------
ಅಲ್ಲಮಪ್ರಭುದೇವರು
ಆಯಿತ್ತೆ ಉದಯಮಾನ, ಹೋಯಿತ್ತೆ ಅಸ್ತಮಾನ. ಅಳಿದವಲ್ಲಾ ನೀರಲಾದ ನಿರ್ಮಿತಂಗಳೆಲ್ಲವು ! ಕತ್ತಲೆಗವಿಯಿತ್ತು ಮೂರು ಲೋಕದೊಳಗೆ. ಇದರಚ್ಚುಗವೇನು ಹೇಳಾ ಗುಹೇಶ್ವರಾ ?
--------------
ಅಲ್ಲಮಪ್ರಭುದೇವರು
ಆರು ದರುಶನ ಅನಾಚಾರವ ನಡೆದವು, ಸುರೆಯ ಕುಡಿದವು, ಮಾಂಸವ ತಿಂದವು. ಆರು ದರುಶನಕ್ಕೆ ಅನಾಚಾರವಾದುದೆಂದು ನಾನು ಗುರುವಾದೆ ಕಾಣಾ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಆಧಾರ ಸ್ವಾದ್ಥಿಷ್ಠಾನ ಮಣಿಪೂರಕಸ್ಥಾನವರಿಯರು. ಅಷ್ಟದಳ ಕಮಲದಲ್ಲಿ ಸೂಕ್ಮ ನಾಳವೈದುವದೆ? ಇನ್ನೇನನರಿವರಾರೊ? ಬೇರೆ ಮತ್ತೆ ಅರಿಯಲುಂಟೆ ಹೇಳಾ? ಸಹಸ್ರದಳಕಮಲದ ಬ್ರಹ್ಮರಂಧ್ರದಲ್ಲಿಪ್ಪ ಅಮೃತಸ್ವರವನರಿದು, ಹಿಡಿದುಕೊಂಬುದು, ಅರಿದು!_ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಆದಿಯ ಲಿಂಗ ನಿನ್ನಿಂದ ಎನಗಾಯಿತ್ತು. ಅನಾದಿಯ ಜ್ಞಾನ ನಿನ್ನ ನೆನೆದಡೆ ಎನಗಾಯಿತ್ತು. ನಿನ್ನ ಕೃಪೆಯಿಂದ ಪ್ರಾಣ ಲಿಂಗವೆಂದರಿದೆನೆಂಬುದ, ನಿಮ್ಮ ಪ್ರಮಥರೆ ಬಲ್ಲರು. ಗುಹೇಶ್ವರ ಸಾಕ್ಷಿಯಾಗಿ, ಸಂಗನಬಸವಣ್ಣ ನಿನ್ನ ಪ್ರಸಾದದ ಶಿಶು ನಾನು ನೋಡಯ್ಯಾ.
--------------
ಅಲ್ಲಮಪ್ರಭುದೇವರು
ಆಧಾರಲಿಂಗ ಕುಂಡಲಿವಿಡಿದು; ಹೃದಯಕಮಲದಲ್ಲಿ ಬ್ರಹ್ಮ, ನಾಳದಲ್ಲಿ ವಿಷ್ಣು, ನಾಳಾಗ್ರದಲ್ಲಿ ರುದ್ರ, ಭ್ರೂಮಧ್ಯದ ಮೇಲೆ ಈಶ್ವರನು, ಬ್ರಹ್ಮರಂಧ್ರದ ಮೇಲೆ ಸದಾಶಿವನು. ಶಿಖಾಗ್ರದಲ್ಲಿ ಸರ್ವಗತ ಶಿವನು._ ಆದಿ ಅನಾದಿಯಿಲ್ಲದಂದು ಗುಹೇಶ್ವರಲಿಂಗ ನಿರಾಳನು.
--------------
ಅಲ್ಲಮಪ್ರಭುದೇವರು
ಆದಿ ಅನಾದಿ ಸಂಗದಿಂದಾದವನಲ್ಲ. ಸಂಗಸುಖದೊಳಗಿರ್ದವನಲ್ಲ. ಇಬ್ಬರ ಸಂಗದಿಂದಾದವನಲ್ಲ. ರವಿ ಶಶಿಯ ಬೆಳಗಿನಿಂದ ಬೆಳೆದವನಲ್ಲ. ನಾದ ಬಿಂದು ಕಳೆ ಹುಟ್ಟದ ಮುನ್ನ ಅಲ್ಲಿಂದತ್ತತ್ತ ಗುಹೇಶ್ವರಾ ನಿಮ್ಮ ಶರಣ
--------------
ಅಲ್ಲಮಪ್ರಭುದೇವರು
ಆಯತವಾಯಿತ್ತು ಅನುಭಾವ, ಸ್ವಾಯತವಾಯಿತ್ತು ಶಿವಜ್ಞಾನ, ಸಮಾಧಾನವಾಯಿತ್ತು ಸದಾಚಾರ._ ಇಂತೀ ತ್ರಿವಿಧವು ಏಕಾರ್ಥವಾಗಿ, ಅರುಹಿನ ಹೃದಯ ಕಂದೆರೆದು, ಅನಂತಲೋಕಾಲೋಕದ ಅಸಂಖ್ಯಾತ ಮಹಾಗಣಂಗಳೆಲ್ಲರು ಲಿಂಗಭಾವದಲ್ಲಿ ಭರಿತರಾಗಿ, ಗಗನಸಿದ್ಧಾಂತದಿಂದ ಉಪದೇಶಕ್ಕೆ ಬಂದು ಭಕ್ತಿರಾಜ್ಯವನೆ ಹೊಕ್ಕು, ನಿಜಲಿಂಗಸುಕ್ಷೇತ್ರವನೆ ಕಂಡು, ಅಮೃತಸರೋವರದೊಳಗಣ ವಿವೇಕವೃಕ್ಷ ಪಲ್ಲವಿಸಲು ವಿರಕ್ತಿಯೆಂಬ ಪುಷ್ಪ ವಿಕಸಿತವಾಗಲು, ಪರಮಾನಂದವೆಂಬ ಮಠದೊಳಗೆ, ಪರಿಣಾಮ ಪಶ್ಚಿಮಜ್ಯೋತಿಯ ಬೆಳಗಿನಲ್ಲಿ ಪರುಷದ ಸಿಂಹಾಸನವನಿಕ್ಕಿ ಪ್ರಾಣಲಿಂಗ ಮೂರ್ತಿಗೊಂಡಿರಲು, ದಕ್ಷಿಣವ ದಾಂಟಿ ಉತ್ತರಾಬ್ಧಿಯಲ್ಲಿ ನಿಂದು ಅಖಂಡ ಪರಿಪೂರ್ಣಪೂಜೆಯ ಮಾಡುವವರಿಗೆ ನಮೋನಮೋ ಎಂಬೆ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಆದಿ ಅನಾದಿ ಎಂಬೆರಡರ ಮೂಲವನೆತ್ತಿ ತೋರಿದನಯ್ಯಾ ಬಸವಣ್ಣನು. ಆದಿ ಲಿಂಗ ಅನಾದಿ ಜಂಗಮವೆಂಬ (ಶರಣನೆಂಬ?) ಭೇದವ, ವಿವರಿಸಿ ತೋರಿದನಯ್ಯಾ ಬಸವಣ್ಣನು. ಕಾಯದ ಜೀವದ ಸಂಬಂಧವ, ಅಸಂಬಂಧವ ಮಾಡಿ ತೋರಿದನಯ್ಯಾ ಬಸವಣ್ಣನು. ಎನ್ನ ಆದಿ ಅನಾದಿಯನು ಬಸವಣ್ಣನಿಂದರಿದು ಗುಹೇಶ್ವರಲಿಂಗದಲ್ಲಿ ಸುಖಿಯಾದೆನು ಕಾಣಾ ಚನ್ನಬಸವಣ್ಣ.
--------------
ಅಲ್ಲಮಪ್ರಭುದೇವರು
ಆದಿಯಾಧಾರ ತನುಗುಣವುಳ್ಳನ್ನಕ್ಕರ ಸಮತೆಯೆಂಬುದೇನೊ ? ಕಾಲಕಲ್ಪಿತ ಉಪಾಧಿಯುಳ್ಳನ್ನಕ್ಕರ ಶೀಲವೆಂಬುದು ಭಂಗ. ಕಾಮವೆಂಬುದರ ಬೆಂಬಳಿಯ ಕೂಸಿನ ಹುಸಿಯೆ ತಾನೆಂದು ತಿಳಿಯದನ್ನಕ್ಕರ, ಗುಹೇಶ್ವರಾ ನಿಮ್ಮ ನಾಮಕ್ಕೆ ನಾಚದವರನೇನೆಂಬೆನು ?
--------------
ಅಲ್ಲಮಪ್ರಭುದೇವರು
ಆಚಾರವೆ ಲಿಂಗ, ಆ ಆಚಾದರಿವೆ ಜಂಗಮ ಅಂಗವೆ ಲಿಂಗ, ಚೈತನ್ಯವೆ ಜಂಗಮ ಆ ಜಂಗಮದ ಸೇವೆಯೆ ಲಿಂಗ, ಕೈಕೊಂಬುದೆ ಜಂಗಮ. ನಮ್ಮ ಗುಹೇಶ್ವರನ ಶರಣರು ಮಚ್ಚುವಂತೆ, ಮಡಿವಾಳನ ಕಾಯಕದಂತೆ, ನಿರೂಪಿಸಿದ ಚನ್ನಬಸವಣ್ಣನ ಕರುಣದಲ್ಲಿ ಬದುಕಾ ಚಂದಯ್ಯಾ.
--------------
ಅಲ್ಲಮಪ್ರಭುದೇವರು
ಆದಿಯಾಧಾರವುಳ್ಳನ್ನಕ್ಕರ ಉಪಚಾರ, ಎರಡೂ ಒಂದಾದಡೆ ಶಿವಾಚಾರ. ಆ ಶಿವಾಚಾರ ಸಯವಾದಡೆ ಬ್ರಹ್ಮಾಚಾರ, ಗುಹೇಶ್ವರನನರಿದಡೆ ಅನಾಚಾರ !
--------------
ಅಲ್ಲಮಪ್ರಭುದೇವರು
ಆದ್ಯರಲ್ಲ ವೇದ್ಯರಲ್ಲ ಸಾಧ್ಯರಲ್ಲದ ಹಿರಿಯರ ನೋಡಾ. ತನುವಿಕಾರ ಮನವಿಕಾರ ಇಂದ್ರಿಯವಿಕಾರದ ಹಿರಿಯರ ನೋಡಾ. ಶಿವಚಿಂತೆ ಶಿವಜ್ಞಾನಿಗಳ ಕಂಡಡೆ, ಆಳವಾಡಿ ನುಡಿವರು, ಗುಹೇಶ್ವರನರಿಯದ ಕರ್ಮಿಗಳು.
--------------
ಅಲ್ಲಮಪ್ರಭುದೇವರು
ಆಗಮಪುರುಷರಿರಾ, ನಿಮ್ಮ ಆಗಮ ವಾಯವಾಗಿ ಹೋಯಿತ್ತಲ್ಲಾ. ವಿದ್ಯಾಪುರುಷರಿರಾ ನಿಮ್ಮ ವಿದ್ಯೆ ಅವಿದ್ಯೆಯಾಗಿ ಹೋದಲ್ಲಿ, ಬರುಮುಖರಾಗಿ ಇದ್ದಿರಲ್ಲಾ. ವೇದಪುರುಷರಿರಾ ನಿಮ್ಮ ವೇದ ಹೊಲಬುದಪ್ಪಿ ಹೋದಲ್ಲಿ, ವೇದವೇ ದೈವವೆಂದು ಕೆಟ್ಟಿರಲ್ಲಾ. ಪುರಾಣಪುರುಷರಿರಾ ನಿಮ್ಮ ಪುರಾಣ ವಿಚಾರಭ್ರಷ್ಟವಾಗಿ ಹೋದಲ್ಲಿ, ನೀವು ಒಡನೆ ಭ್ರಷ್ಟರಾಗಿ ಹೋದಿರಲ್ಲಾ. ಶಾಸ್ತ್ರಪುರುಷರಿರಾ, ನಿಮ್ಮ ಶಾಸ್ತ್ರದ ಮಹಾಪಥ ಹೊನಲಲ್ಲಿ ಹೋದಲ್ಲಿ ಭಕ್ತದೇಹಿಕದೇವನೆಂದರಿಯದೆ ಕೆಟ್ಟಿರಲ್ಲಾ. `ಯತ್ರ ಶಿವಸ್ತತ್ರ ಮಾಹೇಶ್ವರ'ನೆಂದು ಹೇಳಿತ್ತು ಮುನ್ನ, ಅಂತು ಭಕ್ತ, ನಿತ್ಯ ಸತ್ಯ ಸನ್ನಹಿತ ಗುಹೇಶ್ವರಾ_ನಿಮ್ಮ ಶರಣ.
--------------
ಅಲ್ಲಮಪ್ರಭುದೇವರು
ಆ ಮಾತು, ಈ ಮಾತು, ಹೋ ಮಾತು_ಎಲ್ಲವೂ ನೆರೆದು ಹೋಯಿತ್ತಲ್ಲಾ ಭಕ್ತಿ ನೀರಲ್ಲಿ ನೆರೆದು ಜಲವ ಕೂಡಿ ಹೋಯಿತ್ತಲ್ಲಾ. ಸಾವನ್ನಕ್ಕ [ಸರಸ] ಉಂಟೇ ಗುಹೇಶ್ವರಾ?
--------------
ಅಲ್ಲಮಪ್ರಭುದೇವರು
ಆಧಾರದಲ್ಲಿ ಅಭವನು ಸ್ವಾಯತ, ಸ್ವಾದಿಷ್ಠಾನದಲ್ಲಿ ರುದ್ರನು ಸ್ವಾಯತ, ಮಣಿಪೂರಕದಲ್ಲಿ ಮೃಡನು ಸ್ವಾಯತ, ವಿಶುದ್ಧಿಯಲ್ಲಿ ಸದಾಶಿವನು ಸ್ವಾಯತ. ಆಜ್ಞಾಚಕ್ರದಲ್ಲಿ ಶಾಂತ್ಯಾತೀತನು ಸ್ವಾಯತ. ಗುಹೇಶ್ವರಲಿಂಗವು, ವ್ಯೋಮ ವ್ಯೋಮವ ಕೂಡಿದಂತೆ !
--------------
ಅಲ್ಲಮಪ್ರಭುದೇವರು
ಆದಿಯ ಮುಟ್ಟಿಬಂದ ಶರಣಂಗೆ ಬದ್ಧ(ಬಂಧ?)ವಿಲ್ಲಯ್ಯಾ. ಜನ್ಮಕೋಟಿ ಕ್ರೂರಕರ್ಮವ ಮಾಡಿದವಂಗೆ, ಸೋಂಕಿನ ಸೊಬಗ ಹೇಳಲಿ(ಲೇ?)ಕೆ ? ಅಂಗದಲ್ಲಿ ಲಿಂಗ ಸೋಂಕಿದ ಶರಣಂಗೆ, ಕಾಯದೊಳಗುಳ್ಳ ಕರಣಂಗಳು ಕಳಾಕುಳ ಕಳಾಭೇದವಯ್ಯಾ ಸುಖದ ಸೋಂಕಿನ ಸೊಬಗ, ಇನ್ನಾರಿಗೆಯೂ ಹೇಳಲಿಲ್ಲ ಗುಹೇಶ್ವರ.
--------------
ಅಲ್ಲಮಪ್ರಭುದೇವರು
ಆಕಾಶದಂತರಂಗದಲ್ಲಿ ತೋರುವ ಸಕಲ ವರ್ಣಂಗಳ ವರ್ಣಿಸುವರು, ನಿರವಯದ ನಿಲವನೆತ್ತ ಬಲ್ಲರು ? ಅರಿವನಾಶ್ರಯಿಸಿ ಮನವ ಮುಂದುಗೊಂಡು ನೆನಹಿಂಗೆ ಗುರಿಯಾದವರೆಲ್ಲರೂ ನಿರವಯದ ನಿಲವನೆತ್ತ ಬಲ್ಲರು ? ವರ್ಣನಾಮವಳಿಯದಾಗಿ. ಆಕಾಶದಂತರಂಗ ಬಹಿರಂಗವೆನಲಿಲ್ಲದ ನಿರವಯವು ! ಗುಹೇಶ್ವರನೆನಲಿಲ್ಲದ ನಿಲವಿಗೆ ಸೊಲ್ಲು ಸಲ್ಲುವುದೆ ?
--------------
ಅಲ್ಲಮಪ್ರಭುದೇವರು
ಆದಿ ಸ್ವಯಂಭುವಿಲ್ಲದ ಮುನ್ನ, ಸಂಗನಿಸ್ಸಂಗವಿಲ್ಲದ ಮುನ್ನ, ನಕ್ಷತ್ರಗ್ರಹಂಗಳಿಲ್ಲದ ಮುನ್ನ, ಯೋಗ ಕರಣಂಗಳಿಲ್ಲದ ಮುನ್ನ, ಖೇಚರ ಭೂಚರರಿಲ್ಲದ ಮುನ್ನ, ಆರಾರೂ ಇಲ್ಲದ ಮುನ್ನ, ಆಕಾಶ ಮಾರುತರಿಲ್ಲದ ಮುನ್ನ, ಅಂಬುಧಿ ಕಮಠರಿಲ್ಲದ ಮುನ್ನ_ ಹರಿಬ್ರಹ್ಮಾದಿಗಳಾರ ನಿಲವಿಲ್ಲದ ಮುನ್ನ ಹಿಮಕರದಿನಕರ ಸುಳುಹಿಲ್ಲದ ಮುನ್ನ_ ಹಿಂದಿಲ್ಲ ಮುಂದಿಲ್ಲ ಒಂದೂ ಇಲ್ಲದ ಮುನ್ನ, ಗುಹೇಶ್ವರನಿರ್ದ ತನ್ನ ತಾನರಿಯದಂತೆ
--------------
ಅಲ್ಲಮಪ್ರಭುದೇವರು

ಇನ್ನಷ್ಟು ...