ಅಥವಾ
(247) (109) (40) (3) (37) (5) (0) (0) (43) (7) (8) (33) (6) (0) ಅಂ (63) ಅಃ (63) (196) (4) (38) (10) (0) (8) (0) (42) (0) (0) (0) (0) (1) (0) (0) (87) (0) (16) (13) (104) (70) (0) (63) (53) (93) (9) (14) (0) (29) (30) (30) (2) (78) (81) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಜ್ಞಾನದ ಉಬ್ಬು ಕೊಬ್ಬಿನಲ್ಲಿ ನುಡಿವುತ್ತಿಪ್ಪರೆಲ್ಲರ (ಉಲಿವುತ್ತಿಪ್ಪರೆಲ್ಲರ ?); ನಾಮ ನಾಸ್ತಿಯಾಗದು, ತನುಗುಣ ನಾಸ್ತಿಯಾಗದು, ಕರಣಾದಿಗುಣಂಗಳು ನಾಸ್ತಿಯಾಗವು, ಕರಸ್ಥಲವು ನಾಸ್ತಿಯಾಗದು. ಇದೆತ್ತಣ ಉಲುಹೊ ಗುಹೇಶ್ವರಾ ?
--------------
ಅಲ್ಲಮಪ್ರಭುದೇವರು
ಜಾನು ಜಂಗೆಯಲ್ಲಿ ಹುಟ್ಟಿ ಜಂಗಮವೆನಿಸಿಕೊಳಬಹುದೆ ? ಆಠಾವು ಹಿಂಗಿದಡೆ ಭಂಗಿತನು ಕಂಡಾ. ಅಂತರಂಗದಲೊದಗೂದನರಿಯರು ಗುಹೇಶ್ವರನೆಂಬುದು ಮೀರಿದ ಘನವು
--------------
ಅಲ್ಲಮಪ್ರಭುದೇವರು
ಜಾಲಗಾರನ ಕಾಲು ಮುಳ್ಳು ತಾಗಿ ನೊಂದಿತ್ತೆಂಬಂತೆ, ಸೂನೆಗಾರನ ಮನೆಯಲ್ಲಿ ಹೆಣ ಹೋಗಿ ಅಳುವಂತೆ, ಕನ್ನಗಳ್ಳನ ಮನೆಯಲ್ಲಿ ಬಟ್ಟಲು ಹೋಗಿ ಮರಗುವಂತೆ,_ ಠಕ್ಕನ ಪೂಜೆಗೆ ಮೆಚ್ಚುವನೆ ನಮ್ಮ ಗುಹೇಶ್ವರನು?
--------------
ಅಲ್ಲಮಪ್ರಭುದೇವರು
ಜ್ಞಾನಚಕ್ರ: ಪರಮ ತತ್ವ ಪರಮಜ್ಞಾನ ಪರಮಾರ್ಥ ಪರಾಪರ ವಾಙ್ಮನಕ್ಕಗೋಚರ ಶಬ್ದಗಂಭೀರ ಉಪಮಾತೀತ, ಉನ್ನತ ಪರಶಿವ, ಜ್ಞಾನಜ್ಯೋತಿ ಸುಜ್ಞಾನದ ಪ್ರಭೆಯ ಬೆಳಗಿನೊಳಗೆ ಸುಳಿದಾಡುವ ಪರಮಾನಂದದ ಮಹಾಮಹಿಮಂಗೆ, ಶಿವಜ್ಞಾನವೆ ಶೃಂಗಾರ, ಮಹಾಬೆಳಗೆ ವಿಭೂತಿ, ಪಂಚಬ್ರಹ್ಮವೆ ದರ್ಶನ ಗಗನಸ್ಥಾನವೆ ಕಂಥೆ, ಆಕಾಶವೆ ಟೊಪ್ಪರ, ಅಜಾಂಡ_ಬ್ರಹ್ಮಾಂಡವೆ ಕರ್ಣಕುಂಡಲ, ಆದಿ ಆಧಾರವೆ ಕಕ್ಷಪಾಳ ಅನಾಹತವೆ ಒಡ್ಯಾಣ, ಅದ್ವೈತವೆ ಯೋಗವಟ್ಟಿಗೆ, ಅಗಮ್ಯವೆ ಯೋಗವಾವುಗೆ, ಅಚಳಿತವೆ ಖರ್ಪರ, ಅಪ್ರಾಮಣವೆ ಲಾಕುಳ, ಅವಿಚಾರವೆ ಸುಳುಹು, ಅಕಲ್ಪಿತವೆ ಭಿಕ್ಷೆ, ಕೊಂಡುದೆ ಗಮನ, ನಿಂದುದೆ ನಿವಾಸ,_ ನಿಶ್ಚಿಂತವೆಂಬ ಆಶ್ರಮದಲ್ಲಿ ನಿರಾಕುಳವೆಂಬ ಸಿಂಹಾಸನವನಿಕ್ಕಿ; ಗಗನಗಂಭೀರದ ಬಾವಿಯೊಳಗೆ ಅಗೋಚರದ ಅಗ್ಘಣಿಯ ತಂದು ಮಹಾಘನಪ್ರಾಣಲಿಂಗಕ್ಕೆ ಮಂಗಳದ ಬೆಳಗಿನಲ್ಲಿ ಮಜ್ಜನಕ್ಕೆರೆದು; ಬಿಂದ್ವಾಕಾಶವೆ ಗಂಧ, ಮಹದಾಕಾಶವೆ ಅಕ್ಷತೆ, ಪರಾಪರವೆ ಪತ್ರೆಪುಷ್ಪ, ನಿರ್ಮಳವೆ ಲಿಂಗಾರ್ಚನೆ, ಮಹಾಪ್ರಕಾಶವೆ ಪೂಜೆ, ನಿತ್ಯನಿರಂಜನವೆ ಧೂಪದೀಪಾರತಿ, ಸಕಲ ಭುವನಾದಿಭುವನಂಗಳೆ ಸಯದಾನ, ಆಚಾರವೆ ಅರ್ಪಿತ, ಮಹತ್ವವೆ ಸಿತಾಳ, ಅಖಂಡಿತವೆ ಅಡಕೆ, ಏಕೋಭಾವವೆ ಎಲೆ, ಶುದ್ಧಶಿವಾಚಾರವೆ ಸುಣ್ಣ_ ವಿವೇಕ ವಿಚಾರದಿಂದ ವೀಳೆಯವನವಧರಿಸೂದು. ಮಹಾಲಿಂಗದ ಪರಿಣಾಮವೆ ಪ್ರಸಾದ, ಸಮ್ಯಕ್ ಜ್ಞಾನವೆ ಸಂತೋಷ. ಸಹಜ ನಿರಾಭಾರಿಗಳ ಮೇಳದಿಂದ, ನಿಸ್ಸೀಮದ ನಿಭ್ರಾಂತಿನ ಸುಸಂಗದಲ್ಲಿ_ ನಿರಾಶಾಪದವೆ ಅನುಕೂಲ, ನಿಶ್ಶಬ್ದವೆ ಅನುಭಾವ, ಅನುಪಮದ ನಿಶ್ಶೂನ್ಯವೆ ವಿಶ್ರಾಮ, ನಿರಾಕಾರವೆ ಗಮನ. ನಿರಂತರ ಪಾತಾಳ ಊಧ್ರ್ವದ ಪವನ;_ತ್ರಿಭುವನಗಿರಿಯೆಂಬ ಪರ್ವತವನೇರಿ, ಕಾಯವೆಂಬ ಕದಳಿಯ ಹೊಕ್ಕು ಸುಳಿದಾಡುವ ಪರಮಾನಂದದ ಮಹಾಮಹಿಮಂಗೆ; ಇಹಲೋಕವೇನು ? ಪರಲೋಕವೇನು ?_ ಅಲ್ಲಿಂದತ್ತ ಆಗಮ್ಯ ನಿರಾಳ ಪರಮಜ್ಞಾನದ ಸಿದ್ಧಿ ಮಹಾಲಿಂಗದ ಬೆಳಗು, ಗುಹೇಶ್ವರಾ, ನಿಮ್ಮ ನಿಜವನರಿದ ಮಹಾಮಹಿಮ ಶರಣಂಗೆ, ನಮೋ ನಮೋ ಎಂಬೆನು.
--------------
ಅಲ್ಲಮಪ್ರಭುದೇವರು
ಜಗದಗಲದಲ್ಲಿ ಹಬ್ಬಿದ ಬಲೆ, ಯುಗಜುಗಕ್ಕೆ ತೆಗೆಯದು ನೋಡಾ ! [ಅದು] ಬಗೆಯಲ್ಲಿ ಭ್ರಮೆಗೊಳ್ಳದು;_ತನ್ನ ಇರವಿನ ಪರಿ ಇಂತುಟಾಗಿ ! ಜಗದ ಪ್ರಾಣಿಗಳುಲಿದುಲಿದು ಮರಳಿ ಮತ್ತಲ್ಲಿಯೆ ಬೀಳಲು; ಬಲೆಯ ನೇಣು ಬಗ್ಗುರಿಯ ಕೈಯಲಿರಲು,_ ಬಲೆಯ ನೇಣ ಕಣ್ಣಿ ಕಳಚಿ, ಲಿಂಗಕ್ಕೆ ಪ್ರಾಣ ಶರಣೆನ್ನುತ್ತವೆ ನಿಂದು, ಒಡಲುಪಾಧಿಯನರಿಯದೆ ಬೆಳಗಿನಲ್ಲಿ ನಿಂದು, ಬೇಡಿದವರಿಗೆ ಅಣಿಮಾದಿ ಗುಣಂಗಳನಿತ್ತು, ಮನೋಮಧ್ಯದಲ್ಲಿ ನಿಲಿಸಿ ನೆನೆವುತ್ತಿರ್ದು ಸುಖಿಯಾದ; ಪ್ರಾಣನಾಥನ ಕಾಯ ಶೂನ್ಯಲಿಂಗಕ್ಕೆ, ಪ್ರಾಣಶೂನ್ಯಶರಣ. ಗುಹೇಶ್ವರಲಿಂಗವ ಬೆರಸಿ ಬೇರಿಲ್ಲ.
--------------
ಅಲ್ಲಮಪ್ರಭುದೇವರು
ಜ್ಞಾನದುದಯವೇ ಭಕ್ತ, ಜ್ಞಾನದ ಶೂನ್ಯವೇ ಐಕ್ಯ. ಇಂತೀ ಜ್ಞಾನದಾದ್ಯಂತವನರಿವರಿವೆ ಸರ್ವಜ್ಞನಾದ ಈಶ್ವರ ನೋಡಾ. ಅದೆಂತೆಂದಡೆ: ``ಚಿದೋದಯಶ್ಚ ಸದ್ಭಕ್ತೋ ಚಿತ್ಯೂನ್ಯಂಚೈಕ್ಯಮೇವ ಚ ಉಭಯೋರೈಕ್ಯ ವಿಜ್ಞೇಯಾತ್ಸರ್ವಜ್ಞಮೀಶ್ವರಃ'' (?) ಎಂದುದಾಗಿ ಇಂತೀ ಷಟ್ಸ್ಥಲದೊಳಗಾದ್ಯಂತವಡಗಿಹ ಭೇದವ ನೀ ನಲ್ಲದನ್ಯರೆತ್ತ ಬಲ್ಲರು ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಜವನ ಕದ್ದ ಕಳ್ಳನು ಆಗಲಿ ಮಿಕ್ಕು ಹೋದಡೆ, ಅಗಲಕ್ಕೆ ಹಬ್ಬಿತ್ತು ಅಲ್ಲಲ್ಲಿ ನೋಡಲು. ಶರಣರ ಸಂಗವನರಸುವರೆಲಾ ್ಲಅಲ್ಲಲ್ಲಿ ನೋಡಿರೆ ! ಸಾಧಕರೆಲ್ಲರೂ ಸಾಧಿಸ ಹೋಗಿ, ಅಭೇದ್ಯವನರಿಯದೆ ಕೆಟ್ಟರು ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಜಗದ ಕರ್ತನ ಕೈಯಲ್ಲಿ ಹಿಡಿದುಕೊಂಡು ಮನೆಮನೆ ತಪ್ಪದೆ ತಿರುಗುವ ತುಡುಗುಣಿಯಂತೆ ಕಾಡಲಾಗದು ಭಕ್ತನ, ಬೇಡಲಾಗದು ಭವಿಯ. ಕಾಡಿ ಬೇಡಿ ನೀವು ಒಲಿಸಿಕೊಂಡಡೆ, ಬೇಂಟೆಯ ಶ್ವಾನ ಮೊಲಕ್ಕೆ ಬಾಯಿದೆರೆದಂತೆ ಗುಹೇಶ್ವರಾ
--------------
ಅಲ್ಲಮಪ್ರಭುದೇವರು
ಜಂಗಮದಿಂಗಿತಾಕಾರವ ನೋಡಿ ಲಿಂಗವೆಂದರಿದ ಭಕ್ತರು ಮನ ಮನ ಬೆರಸಿದಡೆ, ಕೂರ್ಮದ ಶಿಶುವಿನ ಸ್ನೇಹದಂತೆ ಮುನ್ನವೆ ತೆರಹಿಲ್ಲದಿರಬೇಕು ನೋಡಾ. ಬಂದ ಬರವನರಿಯದೆ ನಿಂದ ನಿಲವ ನೋಡದೆ ಕೆಮ್ಮನೆ ಅಹಂಕಾರವ ಹೊತ್ತಿಪ್ಪವರ ನಮ್ಮ ಗುಹೇಶ್ವರಲಿಂಗನು ಒಲ್ಲ ಕಾಣಾ.
--------------
ಅಲ್ಲಮಪ್ರಭುದೇವರು
ಜೀವತಾಮಸದ ಮಾಯದ ಬಲೆಯ ಭ್ರಾಂತಿಂಗೆ ಸೋಲುವ ಶರೀರ ! ಸಂಸಾರ ಸಂಗವ ಭೇದಿಸಿ ನೋಡುವಡೆ ದೂರ, ಚಿಂತೆಯನೆ ಗೆಲಿದು ಸುಳಿದಡೆ, ಗುಹೇಶ್ವರನೆಂದರಿದ ಶರಣಸಾರಾಯನು.
--------------
ಅಲ್ಲಮಪ್ರಭುದೇವರು
ಜಗತ್ತಿನ ಹೊಲೆಯನೆಲ್ಲವನು ಉದಕ ಕೊಳುವುದು, ಆ ಉದಕದ ಹೊಲೆಯ ಕಳೆದಲ್ಲದೆ ಲಿಂಗಕ್ಕೆ ಮಜ್ಜನಕ್ಕೆರೆವ ಲಿಂಗದ್ರೋಹಿಗಳ ಮಾತಕೇಳಲಾಗದು. ಮೇಘಬಿಂದುವಿನಿಂದಾದ ಉದಕ, ಸೂರ್ಯನ ಮುಖದಿಂದಾಗಿ ದ್ರವ್ಯ, ಅಗ್ನಿಯ ಮುಖದಿಂದಾದ ಪಾಕ_ಇಂತಿವರ ಪೂರ್ವಾಶ್ರಯವ ಕಳೆದಲ್ಲದೆ ಭಕ್ತ ಮಾಹೇಶ್ವರರೂ ಶೀಲಪರರೂ ಮೊದಲಾದ ನಾನಾ ವ್ರತಿಗಳು ಲಿಂಗಕ್ಕೆ ಮಜ್ಜನವ ಮಾಡಲಾಗದು, ಅರ್ಪಿಸಲಾಗದು, ಅದೆಂತೆಂದಡೆ: ಉದಕದ ಪೂರ್ವಾಶ್ರಯವನು, ದ್ರವ್ಯದ ಪೂರ್ವಾಶ್ರಯವನು, ಕಳೆದಲ್ಲದೆ ಲಿಂಗಕ್ಕೆ ಅರ್ಪಿಸಬಾರದು. ಇಂತೀ ತ್ರಿವಿಧದ ಪೂರ್ವಾಶ್ರಯವ ಕಳೆವ ಪರಿಯೆಂತೆಂದಡೆ: ಉದಕದ ಪೂರ್ವಾಶ್ರಯವ ಮಂತ್ರಯುಕ್ತವಾಗಿ ಜಂಗಮದ ಪಾದೋದಕದಿಂದ ಕಳೆದು ಪಾಕಪ್ರಯತ್ನವ ಮಾಡುವುದು. ದ್ರವ್ಯದ ಪೂರ್ವಾಶ್ರಯ ಜಂಗಮದ ಹಸ್ತ ಪರುಷದಿಂದ ಹೋದುದಾಗಿ ಅಗ್ನಿಯಲಾದ ಪಾಕದ ಪೂರ್ವಾಶ್ರಯವು ಜಂಗಮದ ಪ್ರಸಾದದಿಂದ ಹೋಯಿತ್ತು. ಈ ಶಿವನ ವಾಕ್ಯಗಳನರಿದು, ಮತ್ತೆ ಜಂಗಮದ ಪಾದೋದಕದಿಂದ ಪಾಕಪ್ರಯತ್ನವ ಮಾಡಲಾಗದು, ಲಿಂಗಕ್ಕೆ ಮಜ್ಜನಕ್ಕೆರೆಯಲಾಗದೆಂಬ ಶೈವ ಬೌದ್ಧ ಚಾರ್ವಾಕ ಚಾಂಡಾಲ ಶಿವದ್ರೋಹಿಯ ಮಾತಕೇಳಿ, ಬಿಟ್ಟನಾದರೆ,_ಅವ ವ್ರತಭ್ರಷ್ಟ ಅವನ ಮುಖವ ನೋಡಲಾಗದು. ಸಾಕ್ಷಿ:``ಸರ್ವಾಚಾರಪರಿಭ್ರಷ್ಟಃ ಶಿವಾಚಾರೇನ ಶುಧ್ಯತಿ ಶಿವಾಚಾರ ಪರಿಭ್ರಷ್ಟಃ ರೌರವಂ ನರಕಂ ವ್ರಜೇತ್''_ ಇಂತೆಂದುದಾಗಿ, ಸಮಸ್ತವಾದ ವ್ರತಂಗಳಲ್ಲಿ ಭ್ರಷ್ಟರಾದವರ ಶಿವಾಚಾರದಲ್ಲಿ ಶುದ್ಧನ ಮಾಡಬಹುದು, ಶಿವಾಚಾರದಲ್ಲಿ ಭ್ರಷ್ಟರಾದವರಿಗೆ ರೌರವ ನರಕ ತಪ್ಪದು. ಅವಗೆ ಪ್ರಾಯಶ್ಚಿತ್ತವಿಲ್ಲಾಗಿ ಅವನ ಮುಖವ ನೋಡಲಾಗದು, ಮತ್ತಂ ``ವ್ರತಭ್ರಷ್ಟಮುಖಂ ದೃಷ್ಟ್ವಾಶ್ವಾನಸೂಕರವಾಯಸಂ ಅಶುದ್ಧಸ್ಯ ತಥಾದೃಷ್ಟಂ ದೂರತಃ ಪರಿವರ್ಜಯೇತ್''_ಇಂತೆಂದುದಾಗಿ, ವ್ರತಶೀಲಗಳಲ್ಲಿ ನಿರುತನಾದ ಶಿವಶರಣನು ಪಥದಲ್ಲಿ ಆಚಾರಭ್ರಷ್ಟನ ಕಂಡಡೆ ಮುಖವ ನೋಡಿದಡೆ ನಾಯ ಕಂಡಂತೆ ಸೂತಕನ ಕಂಡಂತೆ ಕಾಗೆಯ ಕಂಡಂತೆ ಹೇಸಿಗೆಯ ಕಂಡಂತೆ ತೊಲಗುವುದು. ಆ ವ್ರತವ ಬಿಡಿಸಿದವನು, ಅವನ ಮಾತ ಕೇಳಿ ಬಿಟ್ಟವನು ಇಬ್ಬರಿಗೂ ಗುರುಲಿಂಗಜಂಗಮ ಪಾದೋದಕ ಪ್ರಸಾದಕ್ಕೆ ಹೊರಗಾಗಿ ಅನಂತಕಾಲ ನರಕವನೈದುವರು. ಆ ಪಾಪಿಗಳ ಮುಖವ ನೋಡಲಾಗದು, ನುಡಿಸಲಾಗದು ವ್ರತನಿಷ್ಠೆಯುಳ್ಳವರು ಕಾಣಾ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಜಾತಿಜಂಗಮ ಒಂದು ಕೋಟಾನುಕೋಟಿ, ನೀತಿಜಂಗಮ ಒಂದು ಕೋಟಾನುಕೋಟಿ, ಸಿದ್ಧಜಂಗಮ ಒಂದು ಕೋಟಾನುಕೋಟಿ, ಜ್ಞಾನಜಂಗಮ ತ್ರೈಲೋಕ ದುರ್ಲಭ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಜಗತ್‍ಸೃಷ್ಟನಹ ಅಜನ ಕೊಂಬು ಮುರಿಯಿತ್ತು. ಧರೆಯ ಚಂದ್ರಸೂರ್ಯರಿಬ್ಬರೂ ನೆಲಕ್ಕೆ ಬಿದ್ದರಲ್ಲಾ ! ಉದಯ ನಿಂದಡೆ ಅಸ್ತಮಾನವಹುದು. ಊರು ಬೆಂದು ಉಲುಹಳಿದುದು. _ಇದೇನು ಸೋಜಿಗವೊ ! ದೇವ ಸತ್ತ ದೇವಿ ಕೆಟ್ಟಳು, ಆನು ಬದುಕಿದೆನು ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಜ್ಯೋತಿಯೊಳಗಣ ಕರ್ಪುರಕ್ಕೆ, ಅಪ್ಪುವಿನ ಕೈಯಲಿಪ್ಪ ಉಪ್ಪಿಂಗೆ, ಶ್ರೀಗುರುವಿನ ಹಸ್ತದೊಳಗಿಪ್ಪ ಶಿಷ್ಯಂಗೆ_ಈ ಮೂರಕ್ಕೆಯೂ ಬೇರೆ ಕ್ರಿಯಾವರ್ತನೆಯುಂಟೆ ಗುಹೇಶ್ವರಾ ?
--------------
ಅಲ್ಲಮಪ್ರಭುದೇವರು
ಜಗದಗಲದ ಮಂಟಪಕ್ಕೆ, ಮುಗಿಲಗಲದ ಮೇಲುಕಟ್ಟಿನಲ್ಲಿ ಚಿತ್ರ [ವಿಚಿತ್ರ]Àವ ನೋಡುತ್ತ ನೋಡುತ್ತ; ಧ್ಯಾನವಿಶ್ರಾಮದಲ್ಲಿ ದಿಟದಿಟವೆಂಬುದೊಂದು ದರುಶನವ ನೋಡುತ್ತ ನೋಡುತ್ತ, ಗಗನಗಂಭೀರದಲ್ಲಿ ಉದಯವಾಯಿತ್ತ ಕಂಡೆ ! ಗುಹೇಶ್ವರನೆಂಬ ಲಿಂಗವು ತಾನೆಯಾಗಿ
--------------
ಅಲ್ಲಮಪ್ರಭುದೇವರು
ಜೀವವಿಲ್ಲದ ಹೆಣನ ಹಿಡಿದಾಡುವರಯ್ಯಾ. ಪ್ರತಿಯಿಲ್ಲದಪ್ರತಿಗೆ ಪ್ರತಿಯ ಮಾಡುವರಯ್ಯಾ. ಶಿರವಿಲ್ಲದ ಮುಂಡಕ್ಕೆ ಸೇಸೆಯನಿಕ್ಕುವರಯ್ಯಾ_ಗುಹೇಶ್ವರ.
--------------
ಅಲ್ಲಮಪ್ರಭುದೇವರು
ಜೀವಕ್ಕೆ ಜೀವವೇ ಆಧಾರ ಜೀವತಪ್ಪಿಸಿ ಜೀವಿಸಬಾರದು. ``ಪೃಥ್ವೀಬೀಜಂ ತಥಾ ಮಾಂಸಂ ಅಪ್‍ದ್ರವ್ಯಂ ಸುರಾಮಯಂ ಆತ್ಮಾ ಜೀವಸಮಾಯುಕ್ತಂ ಜೀವೋ ಜೀವೇನ ಭಕ್ಷಯೇತ್ ಎಂದುದಾಗಿ ಅಹಿಂಸಾ ಪರಮೋಧರ್ಮವೆಂಬ ಶ್ರಾವಕರನು ಕಾಣೆ. ಲಿಂಗಾರ್ಪಿತವಾದುದೆಲ್ಲ ಶುದ್ಧ; ಉಳಿದುದೆಲ್ಲ ಜೀವನ್ಮಯ ಕಾಣಾ, ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಜಂಬೂದ್ವೀಪದ ವ್ಯವಹಾರಿ ಖಂಡ ಭಂಡವ ತುಂಬಿ ಕುಂಭಿನಿಯುದರದ ಮೇಲೆ ಪಸರವನಿಕ್ಕಿದ. ಉಷ್ಣ ತೃಷ್ಣೆ ಘನವಾಗಿ, ಕಡಲೇಳು ಸಮುದ್ರವ ಕುಡಿದು ನೀರಡಿಸಿದಾತ ಅರಲುಗೊಂಡು ಬೆರಗಾದ. ಶಿಶು ತಾಯ ಹೆಣನ ಹೊತ್ತುಕೊಂಡು ಹೆಸರ ಹೇಳುತ್ತೈದಾನೆ ! ಗುಹೇಶ್ವರನೆಂಬ ನಿಲವ ವಸುಧೆಯಾಕೃತಿ ನುಂಗಿತ್ತು.
--------------
ಅಲ್ಲಮಪ್ರಭುದೇವರು
ಜಂಗಮವೆ ಹೊರಗಿರಲು ಲಿಂಗಾರ್ಚನೆ ಏವುದಯ್ಯಾ ? ಪ್ರಾಣನ ಹೊರಗಿರಿಸಿ ಎಡೆಯಾಡುವ ದೇಹವುಂಟೆ ? ಶರಣರು ಬಂದು ಬಾಗಿಲಲ್ಲಿ ನಿಂದಿರಲು ತನ್ನ ತಾ ಮರೆದಿಪ್ಪವರ ಕಂಡಡೆ ನಮ್ಮ ಗುಹೇಶ್ವರಲಿಂಗ ಒಡೆಯ ಹಾಯ್ಕದೆ ಮಾಣ್ಬನೆ ?
--------------
ಅಲ್ಲಮಪ್ರಭುದೇವರು
ಜಲ ಕೂರ್ಮ ಗಜ ಫಣಿಯ ಮೇಲೆ ಧರೆ ವಿಸ್ತರಿಸಿ ನಿಲ್ಲದಂದು, ಗಗನವಿಲ್ಲದಂದು ಪವನನ ಸುಳುಹು ಇಲ್ಲದಂದು, ಅಗ್ನಿಗೆ ಕಳೆ ಮೊಳೆದೋರದಂದು, ತರು ಗಿರಿ ತೃಣಕಾಷಾ*ದಿಗಳಿಲ್ಲದಂದು, ಯುಗಜುಗ ಮಿಗಿಲೆನಿಸಿದ ಹದಿನಾಲ್ಕು ಭುವನ ನೆಲೆಗೊಳ್ಳದಂದು, ನಿಜವನರಿದಿಹೆನೆಂಬ ತ್ರಿಜಗಾಧಿಪತಿಗಳಿಲ್ಲದಂದು_ ತೋರುವ ಬೀರುವ ಪರಿ ಇಲ್ಲದಂದು, ಆ ಭಾವದಲ್ಲಿ ಭರಿತ ಅಗಮ್ಯ ಗುಹೇಶ್ವರ ನಿರಾಳವು !
--------------
ಅಲ್ಲಮಪ್ರಭುದೇವರು
ಜಲವಿಲ್ಲದ ಕೆರೆ, ಫಲವಿಲ್ಲದ ಬನ, ಭಕ್ತನಿಲ್ಲದ ಗ್ರಾಮ ಸುಡುಗಾಡಯ್ಯಾ, ಅಲ್ಲಿ ಶಿವನಿಲ್ಲ, ಪ್ರೇತಜಡಾರಣ್ಯದಲ್ಲಿ ಹೋಗಬಹುದೆ ಗುಹೇಶ್ವರಾ ?
--------------
ಅಲ್ಲಮಪ್ರಭುದೇವರು
ಜಂಗಮ ಘನವೆಂಬೆನೆ? ಬೇಡಿ ಕಿರಿದಾಯಿತ್ತು. ಲಿಂಗ ಘನವೆಂಬೆನೆ? ಕಲುಕುಟಿಗನ ಕೈಯಲ್ಲಿ ಮೂಡಿಸಿಕೊಂಡು ಕಿರಿದಾಯಿತ್ತು. ಭಕ್ತ ಘನವೆಂಬೆನೆ? ತನು_ಮನ_ಧನದಲ್ಲಿ ವಂಚಕನಾಗಿ ಕಿರಿದಾದ. _ಇಂತೀ ತ್ರಿವಿಧದಲ್ಲಿ ಪರಿಣಾಮವಿಲ್ಲ ಪರಮಾರ್ಥವಿಲ್ಲ. ಘನವ ಬಲ್ಲವರಾರೊ ಗುಹೇಶ್ವರಾ ?
--------------
ಅಲ್ಲಮಪ್ರಭುದೇವರು
ಜಂಗಮಸ್ಥಲಕ್ಕೆ ಲಕ್ಷಣವಾವುದೆಂದಡೆ ಹೇಳಿಹೆ ಕೇಳಿರಣ್ಣಾ : ಮೂರರ ಹೊಲಿಗೆಯ ಬಿಚ್ಚಿ ಆರ ಮಾಡಬೇಕು. ಆರರ ತಿರುಳ ತೆಗೆದು ಒಂದರೊಳಗೆ ನಿಲಿಸಬೇಕು, ಐದರ ಮುಸುಕನುಗಿದು, ಐದರ ಕಳೆಯ ಕೆಡಿಸಿ ಐದರ ನಿಲವನಡಗಿಸಿ, ಮೂರರ ಮುದ್ರೆಯನೊಡೆದು ನಾಲ್ಕರೊಳಗೆ ನಿಲ್ಲದೆ, ಮೂರು ಮುಖವು ಒಂದು ಭಾಗವಾಗಿ ಇರಬೇಕು ! ಈ ಭೇದವನರಿಯದೆ ಸುಳಿವರ ಕಂಡು ಬೆರಗಾದೆ ಕಾಣಾ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಜ್ಞಾನದಿಂದ ನಿಮ್ಮನರಿದಿಹೆನೆಂದಡೆ: ಅರಿವಿಂಗೆ ಬಂದಾಗಲೆ ಕುರುಹು. ಕುರುಹಿಂಗೆ ಕೇಡುಂಟು; ಜ್ಞಾನವೆಂಬುದೇನು ? ಮನೋಭೇದ ! ಇಂತಪ್ಪ ಜ್ಞಾನದ ಕೈಯಲ್ಲಿ, ಅರುಹಿಸಿಕೊಂಡಡೆ ನೀ ದೇವನಲ್ಲ, ಅರಿಯದಿದ್ದಡೆ ನಾ ಶರಣನಲ್ಲ. ನೀ ದೇವ, ನಾ ಶರಣನೆಂತಾದೆ ಹೇಳಾ ಗುಹೇಶ್ವರಾ ?
--------------
ಅಲ್ಲಮಪ್ರಭುದೇವರು
ಜಂಗಮವೆ ಲಿಂಗವೆಂದು ನಂಬಿದ ಭಕ್ತನ ಕಣ್ಣ ಮುಂದೆ [ಜಂಗಮ] ನಿಂದು ಹೋದಡೆ, ಹಿಂದೆ ಮಾಡಿದ ಭಕ್ತಿಯೆಲ್ಲವೂ ನೀರಲ್ಲಿ ನೆನೆಯಿತ್ತು ಮಂದಮತಿಯಾಗಿ ಕಂಡೂ ಕಡೆಗಣಿಸಿ ಹೋಹವನು ಅಂಗವಿಕಾರಿ ನೋಡಾ. ಮುಂದುವರಿದು ಅವನ ಮನೆಯ ಹೊಗುವ ಜಂಗಮಕ್ಕೆ ಭವ ಹಿಂಗದು. ನಮ್ಮ ಗುಹೇಶ್ವರಲಿಂಗವು ಅರಿದು ಬರುದೊರೆವೋದವರ ಒಲ್ಲನು ಹೋಗಾ ಮರುಳೆ.
--------------
ಅಲ್ಲಮಪ್ರಭುದೇವರು

ಇನ್ನಷ್ಟು ...