ಅಥವಾ
(247) (109) (40) (3) (37) (5) (0) (0) (43) (7) (8) (33) (6) (0) ಅಂ (63) ಅಃ (63) (196) (4) (38) (10) (0) (8) (0) (42) (0) (0) (0) (0) (1) (0) (0) (87) (0) (16) (13) (104) (70) (0) (63) (53) (93) (9) (14) (0) (29) (30) (30) (2) (78) (81) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಶ್ವೇತ ಪೀತ ಕಪೋತ ಹರಿತ ಕೃಷ್ಣ ಮಾಂಜಿಷ್ಟವೆಂಬ ಷಡುವರ್ಣವೆಂದೆನ್ನ. ಉಂಡು ಉಪವಾಸಿ ಬಳಸಿ ಬ್ರಹ್ಮಚಾರಿಯೆಂದೆನ್ನ. ಲಿಂಗವಿಂತುಟೆನ್ನ, ಲಿಂಗೈಕ್ಯವ ನುಡಿಯ. ಅಭಂಗನ ನಿಲವ ಭಂಗಿತರೆತ್ತ ಬಲ್ಲರು ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಶಬ್ದಿಯಾದಾತ ತರುಗಳ ಹೋತ, ನಿಶ್ಶಬ್ದಿಯಾದಾತ ಪಾಷಾಣವ ಹೋತ. ಕೋಪಿಯಾದಾತ ಅಗ್ನಿಯ ಹೋತ, ಶಾಂತನಾದಾತ ಜಲವ ಹೋತ. ಬಲ್ಲೆನೆಂಬಾತ ಇಲ್ಲವೆಯ ಹೋತ, ಅರಿಯೆನೆಂಬಾತ ಪಶುವ ಹೋತ. ಇದು ಕಾರಣ_ಅರಿಯೆನೆನ್ನದೆ ಬಲ್ಲೆನೆನ್ನದೆ ಅರುಹಿನ ಕುರುಹನಳಿದುಳಿದು ಗುಹೇಶ್ವರನೆಂಬ ಲಿಂಗವ ಹೋತವರನಾರನೂ ಕಾಣೆ.
--------------
ಅಲ್ಲಮಪ್ರಭುದೇವರು
ಶರಣಂಗೆ ಉತ್ಪತ್ಯವಿಲ್ಲಾಗಿ ಸ್ಥಿತಿಯಿಲ್ಲ, ಸ್ಥಿತಿಯಿಲ್ಲವಾಗಿ ಲಯವಿಲ್ಲ, ಲಯವಿಲ್ಲವಾಗಿ ದೇಹನಾಮ ಪ್ರವರ್ತನೆಯಿಲ್ಲ, ಇವಾವುದೂ ಇಲ್ಲದ ಕಾರಣ, ಗುಹೇಶ್ವರಯ್ಯಾ, ನಿಮ್ಮ ಶರಣ ಬಚ್ಚಬರಿಯ ಬೆಳಗು.
--------------
ಅಲ್ಲಮಪ್ರಭುದೇವರು
ಶೂಲದ ಮೇಲಣ ತಲೆಯ ವೈಭೋಗವನಾರು ಬಯಸಿದಡೆಲ್ಲಿಯದು ? ಉಂಬಡೆ ಒಡಲಿಲ್ಲ ಲಿಂಗಾರ್ಚನೆಯಿಲ್ಲ, ಅಂಗಭೋಗಕ್ಕೆ ಕರಚರಣಂಗಳಿಲ್ಲ. ಅಂಗವಿಲ್ಲೆಂಬ ಮಾತು ನಿಮಗೇಕೆ ? ಸುಡು, ಭಂಗ. ಲಿಂಗ ನಿರಾಳ ಗುಹೇಶ್ವರಾ !
--------------
ಅಲ್ಲಮಪ್ರಭುದೇವರು
ಶ್ವೇತ ಪೀತ ಕಪೋತ ಹರಿತ ಕೃಷ್ಣ ಮಾಣಿಕವೆಂಬ ಆರು ವರ್ಣ. ಅದಕ್ಕೆ ಬ್ರಹ್ಮ ವಿಷ್ಣು ರುದ್ರ ಈಶ್ವರ ಸದಾಶಿವ ಶ್ರೀಗುರು_ಎಂಬ ಆದು ಅಧಿದೇವತೆ, ಈ ಭೇದವನೆಲ್ಲ ತಿಳಿದು ನೋಡಿ, ಉನ್ಮನಿಯ ಜ್ಯೋತಿಯ ಬ್ರಹ್ಮರಂಧ್ರದ ಸಹಸ್ರದಳ ಪದ್ಮದ ಅಮೃತಬಿಂದುವಿನೊಳಗಣ ಪ್ರಾಣವೆ ರೂಪಾಗಿ, ಪ್ರಾಣಲಿಂಗದಲ್ಲಿ ಒಡಗೂಡಬಲ್ಲ ಗುಹೇಶ್ವರಾ ನಿಮ್ಮ ಶರಣ.
--------------
ಅಲ್ಲಮಪ್ರಭುದೇವರು
ಶಿವ, ಗುರುವೆಂದು ಬಲ್ಲಾತನೆ ಗುರು. ಶಿವ, ಲಿಂಗವೆಂದು ಬಲ್ಲಾತನೆ ಗುರು. ಶಿವ, ಜಂಗಮವೆಂದು ಬಲ್ಲಾತನೆ ಗುರು. ಶಿವ, ಪ್ರಸಾದವೆಂದು ಬಲ್ಲಾತನೆ ಗುರು. ಶಿವ, ಆಚಾರವೆಂದು ಬಲ್ಲಾತನೆ ಗುರು._ ಇಂತೀ ಪಂಚವಿಧವೆ ಪಂಚಬ್ರಹ್ಮವೆಂದರಿದ ಮಹಾ ಮಹಿಮ ಸಂಗನಬಸವಣ್ಣನು, ಎನಗೆಯೂ ಗುರು, ನಿನಗೆಯೂ ಗುರು, ಜಗವೆಲ್ಲಕ್ಕೆಯೂ ಗುರು ಕಾಣಾ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಶಿವಶಕ್ತಿ ಸಂಪುಟವೆಂಬುದೆಂತು ಹೇಳಿರಣ್ಣಾ; ಶಿವನೆ ಚೈತನ್ಯಾತ್ಮಕನು, ಶಕ್ತಿಯೆ ಚಿತ್ತು. ಇಂತು_ಚೈತನ್ಯಾತ್ಮಕನೆ ಚಿತ್‍ಸ್ವರೂಪನೆಂದರಿಯ ಬಲ್ಲಡೆ ಆತನೆ ಶರಣ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಶಿಶು ತಾಯ ಮೊಲೆವಾಲನೊಸೆದುಂಡು ತೃಪ್ತನಾಗಿ ಹೆಸರ ಬೆಸಗೊಂಬಡದು ಉಪಮೆಗೆ ಸಾಧ್ಯವಿಲ್ಲಯ್ಯಾ. ಕಣ್ಣಾಲಿ ಕಪ್ಪ ನುಂಗಿ ಸಣ್ಣ ಬಣ್ಣಗಳುಡಿಗೆನಯಫ ಬಣ್ಣದೊಳಗಣ ಭ್ರಮೆ ಇನ್ನಾರಿಗಳವಡದು. ಬಣ್ಣ ಸಮುಚ್ಚಯವಾಗಿ ಬಣ್ಣ ಬಗೆಯನೆ ನುಂಗಿ ಗುಹೇಶ್ವರನೆಂಬ ನಿಲವ ನಿಜದ ನಿಷ್ಪತ್ತಿ ನುಂಗಿತ್ತು.
--------------
ಅಲ್ಲಮಪ್ರಭುದೇವರು
ಶಿಷ್ಯನ ಮುಖದಿಂದಾದ ಗುರುವಿಂಗೆ ಶಿಷ್ಯನ ಪ್ರಸಾದ. [ಶಿಷ್ಯ]ಪ್ರಸಾದ ಗುರುವಿಂಗಲ್ಲದೆ ಗುರುವಿನ ಪ್ರಸಾದ ಶಿಷ್ಯಂಗಿಲ್ಲ ! ಇದು ಕಾರಣ,_ಗುರುವೆ ಓಗರ, ಓಗರವೆ ಅರ್ಪಿತ. ಪ್ರಸಾದ ಪ್ರಸಾದವೆಂದು ಉಂಡುಂಡು ಸವೆದರಲ್ಲಾ ! ಸುಡು ಸುಡು, ಶಬ್ದಸೂತಕರ ಕೈಯಲ್ಲಿ, ಸ್ಥಾವರ ವಿಧಿವಶವಾಯಿತ್ತು ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಶ್ರೀಮನ್ಮನದ ಕೊನೆಯಿಂದ ನೆನೆದ ನೆನಹು ಜನನ ಮರಣ ನಿಲಿಸಿತ್ತು. ಜ್ಞಾನಜ್ಯೋತಿಯ ಉದಯ, ಭಾನುಕೋಟಿಯ ಮೀರಿ ಸ್ವಾನುಭಾವದುದಯ, ಜ್ಞಾನಶೂನ್ಯದೊಳಡಗಿದ ಭೇದವನು ಏನೆಂಬೆನು ನೋಡಾ ಗುಹೇಶ್ವರಾ ?
--------------
ಅಲ್ಲಮಪ್ರಭುದೇವರು
ಶಬ್ದ ಸೂತಕವೆಂಬರು, ಶಬ್ದ ಸೂತಕ ಉಂಟೆ, ತನ್ನಯ ಸಂದೇಹವಲ್ಲದೆ ? ಗಾಳಿಗೆ ಧೂಳು ಲೇಪವಪ್ಪುದೆ ? ಗುಹೇಶ್ವರಲಿಂಗಕ್ಕೆ ಆ ಭಾವವಿಲ್ಲ ಸಂಗನಬಸವಣ್ಣಾ !
--------------
ಅಲ್ಲಮಪ್ರಭುದೇವರು
ಶರಣು ಶರಣಾರ್ಥಿ ಎಲೆ ತಾಯೆ,_ ಧರೆಯಾಕಾಶ ಮನೆಗಟ್ಟದಂದು ಹರಿವ ಅನಿಲ ಅಗ್ನಿ ಜಲ ಮೊಳೆದೋರದಂದು ಹುಟ್ಟಿದಳೆಮ್ಮವ್ವೆ ! ಅದಕ್ಕೆ ಮುನ್ನವೆ ಹುಟ್ಟದೆ ಬೆಳೆದನೆಮ್ಮಯ್ಯ. ಈ ಇಬ್ಬರ ಬಸಿರಲ್ಲಿ ಬಂದೆ ನಾನು ! ಎಮ್ಮ(ನ್ನ?) ತಂಗಿಯರೈವರು ಮೊರೆಗೆಟ್ಟು ಹೆಂಡಿರಾದರೆನಗೆ ! ಕಾಮಬಾಣ ತಾಗದೆ ಅವರ ಸಂಗವ ಮಾಡಿದೆನು. ನಾ ನಿಮ್ಮ ಭಾವ ಅಲ್ಲಯ್ಯನು, ನೀನೆನಗೆ ನಗೆವೆಣ್ಣು ನಮ್ಮ ಗುಹೇಶ್ವರನ ಕೈವಿಡಿದು ಪರಮಸುಖಿಯಾಗಿ, ಕಳವಳದ ಕಂದೆರವೆಯೇನು ಹೇಳಾ ?
--------------
ಅಲ್ಲಮಪ್ರಭುದೇವರು
ಶಿಲೆಯೊಳಗಣ ಪಾವಕನಂತೆ ಉದಕದೊಳಗಣ ಪ್ರತಿಬಿಂಬದಂತೆ, ಬೀಜದೊಳಗಣ ವೃಕ್ಷದಂತೆ ಶಬ್ದದೊಳಗಣ ನಿಶ್ಶಬ್ದದಂತೆ, ಗುಹೇಶ್ವರಾ ನಿಮ್ಮ ಶರಣಸಂಬಂಧ
--------------
ಅಲ್ಲಮಪ್ರಭುದೇವರು
ಶಂಕಿನಿನಾಡಿಯ ಸಪುರನಾಳದೊಳಗಣ ಸಣ್ಣ ಬಣ್ಣದ ಹೊಲಬ ಅಣ್ಣಗಳೆತ್ತ ಬಲ್ಲರು ? ಲಿಂಗದ ಹಂಗಿನ ಪ್ರಾಣ, ಪ್ರಾಣದ ಹಂಗಿನ ದೇಹ, ದೇಹದ ಹಂಗಿನ ಲಿಂಗವ, ಲಿಂಗವೆಂದು ಪೂಜಿಸಲು;_ ಆಳಿನಾಳಿನ ಕೀಳಾಳು ಪಟ್ಟಕ್ಕೆ ಸಲುವನೆ ? ಗುಹೇಶ್ವರನೆಂಬ ಸಹಜದ ನಿಲವು ಸಂತೆಯ ಪಸರಕ್ಕೆ ಬಂದಡೆ ನಾಚಿತ್ತೆನ್ನ ಮನವು !
--------------
ಅಲ್ಲಮಪ್ರಭುದೇವರು
ಶೀಲ ಶೀಲವೆಂದೇನೊ, ತನುಮನಧನವೆಂಬ ತ್ರಿಪುರವಿರಲು ? ಆ ತ್ರಿಪುರಸಂಹಾರವ ಮಾಡಿ ಭಸ್ಮಾಂಗಿಯಾದಲ್ಲದೆ ಶೀಲವಿಲ್ಲ ಕಾಣಾ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಶಬ್ದವೆಂಬೆನೆ? ಶ್ರೋತ್ರದೆಂಜಲು. ಸ್ಪರ್ಶವೆಂಬೆನೆ ತ್ವಕ್ಕಿನೆಂಜಲು. ರೂಪೆಂಬೆನೆ ? ನೇತ್ರದೆಂಜಲು. ರುಚಿಯೆಂಬೆನೆ? ಜಿಹ್ವೆಯೆಂಜಲು. ಪರಿಮಳವೆಂಬೆನೆ ? ಘ್ರಾಣದೆಂಜಲು. ನಾನೆಂಬೆನೆ? ಅರಿವಿನೆಂಜಲು. ಎಂಜಲೆಂಬ ಭಿನ್ನವಳಿದ, ಬೆಳಗಿನೊಳಗಣ ಬೆಳಗು ಗುಹೇಶ್ವರನೆಂಬ ಲಿಂಗವು.
--------------
ಅಲ್ಲಮಪ್ರಭುದೇವರು
ಶಬ್ದ ಸ್ಪರ್ಶ ರೂಪು ರಸ ಗಂಧ, ಪಂಚ ಇಂದ್ರಿಯ, ಸಪ್ತಧಾತು ಅಷ್ಟಮದದಿಂದ ಮುಂದುಗಾಣದವರು ನೀವು ಕೇಳಿರೆ; ಲಿಂಗದ ವಾರ್ತೆಯ ವಚನದಲ್ಲಿ ರಚನೆಯ ಮಾಡುವ (ವಿ?) ರಯ್ಯಾ, ಸಂಸಾರದ ಮಚ್ಚು ಬಿಡದನ್ನಕ್ಕ, ಸೂಕ್ಷ್ಮ ಶಿವಪಥವು ಸಾಧ್ಯವಾಗದು. ಗುಹೇಶ್ವರಲಿಂಗದಲ್ಲಿ ವಾಕು ಪಾಕವಾದಡೇನೊ, ಮನ ಪಾಕವಾಗದನ್ನಕ್ಕ ?
--------------
ಅಲ್ಲಮಪ್ರಭುದೇವರು
ಶರಣ, ಲಿಂಗಾರ್ಚನೆಯ ಮಾಡಲೆಂದು ಪುಷ್ಪಕ್ಕೆ ಕರವ ನೀಡಿದಡೆ, ಆ ಪುಷ್ಪ ನೋಡ ನೋಡ ಕರದೊಳಡಗಿತ್ತಲ್ಲಾ ! ಅದು ಓಗರದ ಗೊಬ್ಬರವ ನುಣ್ಣದು; ಕಾಮದ ಕಣ್ಣರಿಯದು, ನಿದ್ರೆಯ ಕಪ್ಪೊತ್ತದು. ಅದು ಅರುಣ ಚಂದ್ರ[ರ] ತೆರೆಯಲ್ಲಿ ಬೆಳೆಯದು. ಲಿಂಗವೇದಿಯಾಗಿ ಬೆಳೆದ ಪುಷ್ಪವನು ಗುಹೇಶ್ವರಾ ನಿಮ್ಮ ಶರಣನು ಪ್ರಾಣಲಿಂಗಕ್ಕೆ ಪೂಜೆಯ ಮಾಡಿದನು.
--------------
ಅಲ್ಲಮಪ್ರಭುದೇವರು
ಶೀಲಶೀಲವೆಂಬ [ನೀಲಿಗ]ವಾರ್ತೆಯ ಬೇಳುವೆ, ಬಾಲರಾಳಿಯಂತೆ ಆಳಿಗೊಂಡಿತ್ತು. ಹೇಳಲಿಲ್ಲ ಕೇಳಲಿಲ್ಲದ ವಳಾವಳಿಯ ಬರಿಯ ಶಬ್ದ, ಬಯಲ ಹೋರಟೆ ! ಅಂಗಸುಖಿಗಳಿಗೆ ಲಿಂಗವಿಲ್ಲಾಗಿ, ಗುಹೇಶ್ವರನೆಂಬ ಶೀಲವು ಸೀಮೆಯ ಮೀರಿ ಕಾಡಿತ್ತು
--------------
ಅಲ್ಲಮಪ್ರಭುದೇವರು
ಶಬ್ದ ಸಂಭ್ರಮದಲ್ಲಿ ಹಿಂದುಗಾಣರು ಮುಂದುಗಾಣರು, ತಮ್ಮ ತಾವರಿಯರು. ಇದು ಕಾರಣ_ಮೂರು ಲೋಕವೆಲ್ಲವು, ಬರುಸೂರೆವೋಯಿತ್ತು ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಶರಣನ ಒಡಲುಗೊಂಡ ಅಖಂಡಿತಲಿಂಗಕ್ಕೆ ಅರ್ಚನೆಯಿಲ್ಲ, ಶರಣನ ಒಡಲುಗೊಂಡ ಅಚಲಿತಲಿಂಗಕ್ಕೆ ಅರ್ಪಿತವಿಲ್ಲ, ಶರಣನ ಒಡಲುಗೊಂಡ ಅನುಪಮಲಿಂಗಕ್ಕೆ ಅವಧಾನವಿಲ್ಲ. ಅದೇನು ಕಾರಣವೆಂದಡೆ: ಶರಣನಿಂದಾದ ಆರ್ಚನೆ, ಶರಣನಿಂದಾದ ಅರ್ಪಿತ, ಶರಣನಿಂದಾದ ಅವಧಾನ. ಇದು ಕಾರಣ ಸಂದಳಿದು ಲಿಂಗವಾದ ಮತ್ತೆ ಆನಂದವಲ್ಲದೆ ಅಣುಮಾತ್ರ ಕ್ರೀಯಿಲ್ಲ ಕಾಣಾ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಶ್ವೇತನ ಕರೆಯಬಂದ ದೂತರು, ರಂಭೆಯ ಕಣ್ಣ ಮುಂದೆ ಅಲೆಯುತ್ತಿರಲು ಇನ್ನೇಕೆ ಮರವೆ ? ಇಹಕ್ಕೆ ದಿಟ ಪರಕ್ಕೆ ಪರಿಣಾಮ; ಪಯಣಕ್ಕೆ ನಿಶ್ಚಯ ಕಾಣಾ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಶರೀರ ಉಳ್ಳನ್ನಕ್ಕ ನೆಳಲಿಲ್ಲದಿರಬಾರದು, ಭೂಮಿಯುಳ್ಳನ್ನಕ್ಕ ಆಕಾಶವಿಲ್ಲದಿರಬಾರದು. ನಾನುಳ್ಳನ್ನಕ್ಕ ನೀನಿಲ್ಲದಿರಬಾರದು ಗುಹೇಶ್ವರಲಿಂಗವು ಶಕ್ತಿಗೆ ಒಳಗಾಯಿತ್ತಾಗಿ, ಬಚ್ಚಬರಿಯ ಬಯಲೆಂಬುದಕ್ಕೆ ಉಪಮಾನವಿಲ್ಲ.
--------------
ಅಲ್ಲಮಪ್ರಭುದೇವರು
ಶ್ರುತಿಯ ನಂಬದಿರೊ, ಶ್ರುತಿಯ ನಂಬದಿರೊ ಶ್ರುತಿತತಿಗಳು ಮುನ್ನವೆ ಶಿವನಡಿಯ ಕಾಣದೆ ಶ್ರುತಿ `ಚಕಿತಮಭಿದತ್ತೇ' ಎನುತ್ತ ಮುನ್ನವೆ ಅರಸಿ ತೊಳಲಿ ಬಳಲುತ್ತೈದಾವೆ. ಶ್ರುತಿ ಹೇಳಿದತ್ತ ಹರಿಹರಿದು ಬಳಲದಿರೊ, ಶೂನ್ಯಕ್ಕೆ ತಲೆವಾರನಿಕ್ಕದಿರೊ, ವಸ್ತು ಭ್ರೂಮಧ್ಯದಲುಂಟೆಂದು ನೆನೆಯದಿರೊ. ವಸ್ತು ಭ್ರೂಮಧ್ಯದಲುಂಟೆಂದು ಭ್ರಮಿಸದಿರೊ. ವಸ್ತು ಬ್ರಹ್ಮರಂಧ್ರದಲುಂಟೆಂದು ಹೊಲಬುಗೆಡದಿರೊ. ವಸ್ತುವ ಕಾಬಡೆ, ಎನ್ನ ಸದ್ಗುರು ಅನಿಮಿಷದೇವನಂತೆ ನಿನ್ನ ಕರಸ್ಥಲದಲ್ಲಿ ನಿಶ್ಚಯಿಸಿ, ವಸ್ತುನಿಶ್ಚಯವ ಕಂಡು ನಮ್ಮ ಗುಹೇಶ್ವರಲಿಂಗದಲ್ಲಿ ನಿಬ್ಬೆರಗಾಗೊ ಮರುಳೆ.
--------------
ಅಲ್ಲಮಪ್ರಭುದೇವರು
ಶ್ರೀಗುರುವನರಿಯಲೆ ಬೇಕು, ಶ್ರೀಗುರುವನರಿಯಲೆ ಬೇಕು. ಅಂತಲ್ಲದೆ ಸುಖವಿಲ್ಲಯ್ಯಾ, ಅಂತಲ್ಲದೆ ಸುಖವಿಲ್ಲಯ್ಯಾ. ಶ್ರೀಗುರುವನರಿದಲ್ಲದೆ ಇಹಪರಸುಖವನರಿಯಬಾರದು. ಅಂತಲ್ಲದೆ_ಶ್ರೀಗುರುವನು ಅರಿಯದವನೆ ಲಘು. ಶ್ರೀಗುರುವನು ಅರಿದಂಗೆ ಶ್ರೀಗುರು ಗುಹೇಶ್ವರ.
--------------
ಅಲ್ಲಮಪ್ರಭುದೇವರು

ಇನ್ನಷ್ಟು ...