ಅಥವಾ

ಒಟ್ಟು 60 ಕಡೆಗಳಲ್ಲಿ , 23 ವಚನಕಾರರು , 50 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹಿರಿಯ ಅಡವಿಯ ಕಲ್ಲಗವಿಯ ಗಹ್ವರದೊಳಗೆ ಬಿದಿರಲಳಿಗೆಯಲಗ್ಘವಣಿಯ ತಂದು, ದೇವದಾರಿಯ ಗಂಧವ ತೇದು, ತಾವರೆಯ ನೆಯ್ದಿಲ ಹೂವನೆ ತಂದು, ಲಿಂಗವ ಸಿಂಗಾರವ ಮಾಡಿ, ನೋಡುವದೆಂದು ದೊರಕೊಂಬುವುದೊ ಎನಗೆ ? ಸಕಳೇಶ್ವರದೇವಾ, ಮುಂದಿನ ವರವನೊಲ್ಲೆ. ಇಂದು ಎನಗಿದು ಪರಮಸುಖವು.
--------------
ಸಕಳೇಶ ಮಾದರಸ
ತಿಲದ ಮರೆಯ ತೈಲವ ಅರೆದು ಕಾಬಂತೆ ಚಂದನದ ಮರೆಯ ಗಂಧವ ಬಂಧಿಸಿ ಕಾಬಂತೆ [ಶೃಂ]ಗಿಯ ನಾದವ ಖಂಡಿಸಿ ಅರಿವಂತೆ ಇಷ್ಟಜ್ಞಾನವನರಿವುದಕ್ಕೆ ಇದೇ ದೃಷ್ಟ. ಏಣಾಂಕಧರ ಸೋಮೇಶ್ವರಲಿಂಗದಲ್ಲಿ ಪ್ರಾಣಲಿಂಗಿಯ ಸ್ಥಲ.
--------------
ಬಿಬ್ಬಿ ಬಾಚಯ್ಯ
ಆಕಾಶ ಆಕಾರವಾಗಿ ತೋರಿಯಡಗುವನ್ನಬರ, ಬಯಲು ಬೆಳಗ ನುಂಗಿ, ಒಳಗಾಗಹನ್ನಬರ, ವಾಯು ಗಂಧವ ಕೂಡುವನ್ನಬರ, ಕಾಯದ ಇಷ್ಟವ ಜೀವವರಿವನ್ನಬರ, ಆವ ಭಾವವನೂ ಆಡಿ ಭಾವಜ್ಞರೆನಿಸಿಕೊಂಬರಲ್ಲದೆ ಭಾವದ ಸೂತಕವುಳ್ಳನ್ನಕ್ಕ, ಜೀವ ಆವಾವ ಭಾವಂಗಳಲ್ಲಿ ಬಹುದು ತಪ್ಪದು. ಇದಕ್ಕೆ ಎನಗಿನ್ನಾವುದು ಬಟ್ಟೆ, ಕಾಮಧೂಮ ಧೂಳೇಶ್ವರಾ.
--------------
ಮಾದಾರ ಧೂಳಯ್ಯ
ಇನ್ನೀ ಲಿಂಗಮುಖಕ್ಕೆ ಅರ್ಪಿಸುವ ಅವಧಾನವಾವುದೆಂದೊಡೆ: ಪೃಥ್ವಿಯೇ ಅಂಗವಾದ ಭಕ್ತನು ಸುಚಿತ್ತವೆಂಬ ಹಸ್ತದಿಂದ ಆಚಾರಲಿಂಗಕ್ಕೆ ಘ್ರಾಣವೆಂಬ ಮುಖದಲ್ಲಿ ಗಂಧವ ಸಮರ್ಪಣವ ಮಾಡಿ ಆಚಾರಲಿಂಗದ ಪ್ರಸನ್ನ ಪ್ರಸಾದವ ಸ್ವೀಕರಿಸುತ್ತಿಪ್ಪನಯ್ಯ. ಜಲವೇ ಅಂಗವಾದ ಮಾಹೇಶ್ವರನು ಸುಬುದ್ಧಿಯೆಂಬ ಹಸ್ತದಿಂದ ಗುರುಲಿಂಗಕ್ಕೆ ಜಿಹ್ವೆಯೆಂಬ ಮುಖದಲ್ಲಿ ರಸವನು ಸಮರ್ಪಣವ ಮಾಡಿ ಗುರುಲಿಂಗದ ಪ್ರಸನ್ನ ಪ್ರಸಾದವ ಸ್ವೀಕರಿಸುತ್ತಿಪ್ಪನಯ್ಯ. ಅಗ್ನಿಯೇ ಅಂಗವಾದ ಪ್ರಸಾದಿಯು ನಿರಹಂಕಾರವೆಂಬ ಹಸ್ತದಿಂದ ಶಿವಲಿಂಗಕ್ಕೆ ನೇತ್ರವೆಂಬ ಮುಖದಲ್ಲಿ ರೂಪವ ಸಮರ್ಪಣವ ಮಾಡಿ ಶಿವಲಿಂಗದ ಪ್ರಸನ್ನ ಪ್ರಸಾದವ ಸ್ವೀಕರಿಸುತ್ತಿಪ್ಪನಯ್ಯ. ವಾಯುವೇ ಅಂಗವಾದ ಪ್ರಾಣಲಿಂಗಿಯು ಸುಮನವೆಂಬ ಹಸ್ತದಿಂದ ಜಂಗಮಲಿಂಗಕ್ಕೆ ತ್ವಕ್ಕೆಂಬ ಮುಖದಲ್ಲಿ ಸ್ಪರ್ಶನ ಸಮರ್ಪಣವಮಾಡಿ ಜಂಗಮಲಿಂಗದ ಪ್ರಸನ್ನ ಪ್ರಸಾದವ ಸ್ವೀಕರಿಸುತ್ತಿಪ್ಪನಯ್ಯ. ಆಕಾಶವೇ ಅಂಗವಾದ ಶರಣನು ಸುಜ್ಞಾನವೆಂಬ ಹಸ್ತದಿಂದ ಪ್ರಸಾದಲಿಂಗಕ್ಕೆ ಶ್ರೋತ್ರವೆಂಬ ಮುಖದಲ್ಲಿ ಶಬ್ದವ ಸಮರ್ಪಣವ ಮಾಡಿ ಪ್ರಸಾದಲಿಂಗದ ಪ್ರಸನ್ನ ಪ್ರಸಾದವ ಸ್ವೀಕರಿಸುತ್ತಿಪ್ಪನಯ್ಯ. ಆತ್ಮನೇ ಅಂಗವಾದ ಐಕ್ಯನು ಸದ್ಭಾವವೆಂಬ ಹಸ್ತದಿಂದ ಮಹಾಲಿಂಗಕ್ಕೆ ಮನೆವೆಂಬ ಮುಖದಲ್ಲಿ ತೃಪ್ತಿಯ ಸಮರ್ಪಣವ ಮಾಡಿ ಮಹಾಲಿಂಗದ ಪ್ರಸನ್ನ ಪ್ರಸಾದವ ಸ್ವೀಕರಿಸುತ್ತಿಪ್ಪನಯ್ಯ. ಈ ಅರ್ಪಿತ ಅವಧಾನದ ಭೇದವನರಿದು ಭೋಗಿಸುವ ಭೋಗವಲ್ಲವು ಲಿಂಗಭೋಗ ಪ್ರಸಾದ, ಅಂಗಭೋಗ ಅನರ್ಪಿತ; ಅನಪಿರ್ತವೇ ಕರ್ಮದ ತವರುಮನೆ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವನೊಮ್ಮೆಯೂ ಮುಟ್ಟವು.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಮಹಾಜ್ಞಾನ ಗುರುವಿನಲ್ಲಿ ಸ್ವಾಯತವಾಯಿತ್ತು, ಸುಜ್ಞಾನ ಶಿಷ್ಯನಲ್ಲಿ ಸ್ವಾಯತವಾಯಿತ್ತು; ಜ್ಞಾನ ಲಿಂಗದಲ್ಲಿ ಸ್ವಾಯತವಾಯಿತ್ತು.- ಇಂತು ಜ್ಞಾನ ಸುಜ್ಞಾನ ಮಹಾಜ್ಞಾನವೆಂಬವು, ಜಂಗಮ ಲಿಂಗದಲ್ಲಿ ಸ್ವಾಯತವಾಗಿಪ್ಪುವಾಗಿ! - ಅದು ಕಾರಣ, ಲಿಂಗಕ್ಕೆ ಮಜ್ಜನಕ್ಕೆರೆಯಲಾಗದು; ಅದೇನು ಕಾರಣವೆಂದಡೆ- ಗಮನಿಸಿ ಬಂದ ಜಂಗಮಲಿಂಗವು ಪಾದಾರ್ಚನೆಯ ಮಾಡಿ[ಕೊಂಬು]ದಾಗಿ. ಲಿಂಗಕ್ಕೆ ವಸ್ತ್ರವ ಕೊಡಲಾಗದು, ಅದೇನು ಕಾರಣವೆಂದಡೆ- ಚರವೆಂಬ ಜಂಗಮಲಿಂಗವು ವಸ್ತ್ರಾಲಂಕಾರವ ಮಾಡಿಕೊಳ್ಳ[ಬಲ್ಲು]ದಾಗಿ. ಲಿಂಗಕ್ಕೆ ಗಂಧವ ಪೂಸಲಾಗದು, ಅದೇನು ಕಾರಣವೆಂದಡೆ- ಚರವೆಂಬ ಜಂಗಮಲಿಂಗವು ಗಂಧವ ಲೇಪಿಸಿಕೊಳ್ಳ[ಬಲ್ಲು]ದಾಗಿ ಲಿಂಗಕ್ಕೆ ಅಕ್ಷತೆಯ ಕೊಡಲಾಗದು, ಅದೇನು ಕಾರಣವೆಂದಡೆ- ಚರವೆಂಬ ಜಂಗಮವು ಲಲಾಟದಲ್ಲಿ ಧರಿಸಿಕೊಳ್ಳ[ಬಲ್ಲು]ದಾಗಿ. ಲಿಂಗಕ್ಕೆ ಪುಷ್ಪವ ಕೊಡಲಾಗದು, ಅದೇನು ಕಾರಣವೆಂದಡೆ - ಚರವೆಂಬ ಜಂಗಮಲಿಂಗವು, ತಮ್ಮ ಸಿರಿಮುಡಿಯಲ್ಲಿ ತುರುಬಿಕೊಳ್ಳ[ಬಲ್ಲು]ದಾಗಿ. ಲಿಂಗಕ್ಕೆ ಧೂಪಾರತಿಯ ಕೊಡಲಾಗದು, ಅದೇನು ಕಾರಣವೆಂದಡೆ- ಚರವೆಂಬ ಜಂಗಮಲಿಂಗವು, ನಾಸಿಕದಲ್ಲಿ ಪರಮಳವ ಕೊಳ್ಳ[ಬಲ್ಲು]ದಾಗಿ. ಲಿಂಗಕ್ಕೆ ದೀಪಾರತಿಯ ಬೆಳಗಲಾಗದು, ಅದೇನು ಕಾರಣವೆಂದಡೆ - ಚರವೆಂಬ ಜಂಗಮಲಿಂಗವು, ದೃಷ್ಟಿಯಲ್ಲಿ ನೋಡಿ ಪರಿಣಾಮಿಸ[ಬಲ್ಲು]ದಾಗಿ. ಲಿಂಗಕ್ಕೆ ನೈವೇದ್ಯವ ಕೊಡಲಾಗದು, ಅದೇನು ಕಾರಣವೆಂದಡೆ - ಚರವೆಂಬ ಜಂಗಮಲಿಂಗವು ಜಿಹ್ವೆಯಲ್ಲಿ ಸಕಲರುಚಿಗಳ ರುಚಿಸ[ಬಲ್ಲು]ದಾಗಿ. ಲಿಂಗಕ್ಕೆ ಹಸ್ತಮಜ್ಜನಕ್ಕೆ ಸಿತಾಳವ ನೀಡಲಾಗದು, ಅದೇನು ಕಾರಣವೆಂದಡೆ- ಚರವೆಂಬ ಜಂಗಮಲಿಂಗವು, ಹಸ್ತಮಜ್ಜನವ ಮಾಡಿಕೊಳ್ಳ[ಬಲ್ಲು]ದಾಗಿ. ಲಿಂಗಕ್ಕೆ ತಾಂಬೂಲವನರ್ಪಿಸಲಾಗದು, ಅದೇನು ಕಾರಣವೆಂದಡೆ- ಚರವೆಂಬ ಜಂಗಮಲಿಂಗವು, ಶ್ರೀಮುಖದಲ್ಲಿ ತಾಂಬೂಲವನರ್ಪಿಸಿಕೊಳ್ಳ[ಬಲ್ಲು]ದಾಗಿ. ಲಿಂಗಕ್ಕೆ ಸುಖಾಸನವನಿಕ್ಕಲಾಗದು, ಅದೇನು ಕಾರಣವೆಂದಡೆ- ಚರವೆಂಬ ಜಂಗಮಲಿಂಗವು ಸುಖಾಸನದಲ್ಲಿ ಕುಳ್ಳಿರ[ಬಲ್ಲು]ದಾಗಿ. ಲಿಂಗಕ್ಕೆ ಸ್ತೋತ್ರ, ಮಂತ್ರ, ಗೀತ, ವಾದ್ಯ, ನೃತ್ಯಂಗಳನಾಗಿಸಲಾಗದು, ಅದೇನು ಕಾರಣವೆಂದಡೆ- ಚರವೆಂಬ ಜಂಗಮಲಿಂಗವು ನೇತ್ರ ಶ್ರೋತ್ರ ಹಸ್ತಂಗಳಿಂದ ಸ್ತೋತ್ರ ಮಂತ್ರ ವಾದ್ಯ ನೃತ್ಯಂಗಳ ಕೇಳಿ ನೋಡಿ ತಣಿದು ಪರಿಣಾಮಿಸ[ಬಲ್ಲು]ದಾಗಿ. ಲಿಂಗಕ್ಕೆ ಭೂಷಣಲಂಕಾರವ ಮಾಡಲಾಗದು, ಅದೇನು ಕಾರಣವೆಂದಡೆ- ಚರವೆಂಬ ಜಂಗಮಲಿಂಗವು ಕರ ಶಿರ ಚರಣಾದ್ಯವಯವಂಗಳಲ್ಲಿ ಆಭರಣಂಗಳನಲಂಕರಿಸ[ಬಲ್ಲು]ದಾಗಿ. ಲಿಂಗಕ್ಕೆ ವಾಹನಂಗಳನರ್ಪಿಸಲಾಗದು, ಅದೇನು ಕಾರಣವೆಂದಡೆ- ಚರವೆಂಬ ಜಂಗಮಲಿಂಗವು ವಾಹನಂಗಳ ಮೇಲೆ ಕುಳಿತು ಚಲಿಸ[ಬಲ್ಲು]ದಾಗಿ. ಇಂತೀ ಹದಿನಾರು ತೆರದ ಭಕ್ತಿಯನು ಚರಲಿಂಗವೆಂಬ ಜಂಗಮಲಿಂಗಕ್ಕೆ ದಾಸೋಹವ ಮಾಡಿ ಪ್ರಸಾದವ ಕೊಂಬ ಭಕ್ತಂಗೆ ಗುರುವುಂಟು, ಲಿಂಗವುಂಟು ಜಂಗಮವುಂಟು, ಪಾದೋದಕ ಪ್ರಸಾದವುಂಟು. ಆಚಾರವುಂಟು ಸದ್ಭಕ್ತಿಯುಂಟು. ಇಂತೀ ಎಲ್ಲವನು ಜಂಗಮಕ್ಕೆ ದಾಸೋಹವ ಮಾಡದೆ ತನ್ನ ಗುರುವಿಗೂ ಲಿಂಗಕ್ಕೂ ಆರು ಕೆಲಂಬರು ಭಕ್ತಿಯ ಮಾಡುವರು ಅವರಿಗೆ ಗುರುವಿಲ್ಲ ಲಿಂಗವಿಲ್ಲ ಜಂಗಮವಿಲ್ಲ ಪಾದೋದಕ ಪ್ರಸಾದವಿಲ್ಲ. ಇಂತೀ ಪಂಚಾಚಾರವಿಲ್ಲವಾಗಿ ಅವರು ವ್ರತಗೇಡಿಗಳು. ಅವರ ಮುಖವ ನೋಡಲಾಗದು, ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ತ್ರಿವಿಧ ಕ್ರೀಯಿಂದ ಭೇದವನರಿತು ಮಾಡುವುದು ಭಕ್ತಿಸ್ಥಲ. ಚತುರ್ವಿಧ ಫಲಪ್ರಾಪ್ತಿಯ ಅನುಭವಿಸದೆ ನಿಶ್ಚಯ ವಸ್ತುವ ಕಾಬುದು ಮಾಹೇಶ್ವರಸ್ಥಲ. ಪಂಚೇಂದ್ರಿಯಂಗಳಲ್ಲಿ ಸಂಚಿತದಲ್ಲಿ ಬಂದುದನರಿದು ಲಿಂಗಾರ್ಪಿತದಿಂದ ಕೊಂಬುದು ಪ್ರಸಾದಿಸ್ಥಲದಂಗದ ಇರವು. ಷಡಾಧಾರಂಗಳಿಂದ ಸುಳಿದ ಸೂಕ್ಷ ್ಮದ ಆತ್ಮನ ನೆಲೆಯನರಿದು ಕೂಡುವ ಕೂಟ ಪ್ರಾಣಲಿಂಗಿಸ್ಥಲದ ಇರವು. ಸುಖದುಃಖವೆಂಬ ಉಭಯವನಳಿದು. ಬೆರಗು ನಿಬ್ಬೆರಗಾದುದು ಶರಣಸ್ಥಲದ ಇರವು. ಸುಗಂಧ ಗಂಧವ ಅಗ್ನಿಯಲ್ಲಿ ಸಂಬಂಧಿಸಿ ಅಂಗ ಅಗ್ನಿಯೊಳಡಗಿ ಗಂಧ ಧೂಮದಲ್ಲಿ ತಲೆದೋರಿ ಧೂಮ ಹಿಂಗೆ ಆ ಗಂಧ ಅಲ್ಲಿಯೇ ಅಡಗಿದಂತೆ ನಿಂದುದುಐಕ್ಯಸ್ಥಲ. ಇಂತೀ ಷಡುಸ್ಥಲ ತ್ರಿಕರಣ ಶುದ್ಧಾತ್ಮಂಗಲ್ಲದೆ ಸಾಧ್ಯವಲ್ಲನೋಡಾ! ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗೆ ಮಧುಕೇಶ್ವರನು.
--------------
ತುರುಗಾಹಿ ರಾಮಣ್ಣ
ನವನಾಳಂಗಳ ಬಲಿದು ಶಿವಧ್ಯಾನದಲ್ಲಿ ಕುಳ್ಳಿರ್ದು ಭಾವದ ದೃಕ್ಕಿನಿಂದ ನವಲಿಂಗಗಳ ನೋಡಿ ಪೂಜಿಸಿ, ಕದಡುವ ಭೇದವೆಂತೆಂದೊಡೆ : ಆಧಾರಚಕ್ರವೆಂಬ ರಂಗಮಂಟಪದಲ್ಲಿ ಮೂರ್ತಿಗೊಂಡಿರ್ದ ಆಚಾರಲಿಂಗಕ್ಕೆ ಶಿವಾನಂದ ಜಲದಿಂ ಮಜ್ಜನಕ್ಕೆರೆದು ಪೃಥ್ವಿ ನಿವೃತ್ತಿಯಾದ ಗಂಧವ ಧರಿಸಿ, ಚಿತ್ತ ಸುಚಿತ್ತವಾದ ಅಕ್ಷತೆಯನಿಟ್ಟು, ಅಲ್ಲಿಯ ಚತುರ್ದಳಂಗಳನೆ ಪುಷ್ಪದ ಮಾಲೆಯೆಂದು ಧರಿಸಿ, ಅಲ್ಲಿಯ ಕಮಲಸದ್ವಾಸನೆಯ ಧೂಪವ ಬೀಸಿ, ಅಲ್ಲಿಯ ಪೀತವರ್ಣವನೆ ಕರ್ಪುರದ ಜ್ಯೋತಿಯೆಂದು ಬೆಳಗಿ, ಅಲ್ಲಿಯ ಜಾಗ್ರಾವಸ್ಥೆಯೆಂಬ ನವೀನ ವಸ್ತ್ರವ ಹೊದಿಸಿ, ನಿಷ್ಕಾಮವೆಂಬ ಆಭರಣವ ತೊಡಿಸಿ, ಸುಗಂಧವೆಂಬ ನೈವೇದ್ಯವನರ್ಪಿಸಿ, ಶ್ರದ್ಧೆಯೆಂಬ ತಾಂಬೂಲವನಿತ್ತು, ಇಂತು ಆಚಾರಲಿಂಗದ ಅಷ್ಟವಿಧಾರ್ಚನೆಯ ಮಾಡಿ, ಕೋಟಿಸೂರ್ಯಪ್ರಭೆಯಂತೆ ಬೆಳಗುವ ಆಚಾರಲಿಂಗವನು ಕಂಗಳು ತುಂಬಿ ನೋಡಿ ಮನದಲ್ಲಿ ಸಂತೋಷಂಗೊಂಡು ಆ ಆಚಾರಲಿಂಗದ ಪೂಜೆಯ ನಿರ್ಮಾಲ್ಯವ ಮಾಡದೆ ಓಂ ನಂ ನಂ ನಂ ನಂ ನಂ ನಂ ಎಂಬ ನಕಾರಷಡ್ವಿಧಮಂತ್ರಂಗಳಿಂದೆ ನಮಸ್ಕರಿಸಿ, ಆ ಆಚಾರಲಿಂಗವನು ಕೂಡಿ ಎರಡಳಿದು ಅಲ್ಲಿಂದ ಮುಂದಕ್ಕೆ ಹೋಗಿ, ಸ್ವಾಧಿಷಾ*ನಚಕ್ರವೆಂಬ ರಂಗಮಂಟಪದಲ್ಲಿ ಮೂರ್ತಿಗೊಂಡಿರ್ದ ಗುರುಲಿಂಗಕ್ಕೆ ಪರಿಣಾಮವೆಂಬ ಜಲದಿಂ ಮಜ್ಜನಕ್ಕೆರೆದು, ಅಪ್ಪು ನಿವೃತ್ತಿಯಾದ ಗಂಧವ ಧರಿಸಿ ಬುದ್ಧಿ ಸುಬುದ್ಧಿಯಾದ ಅಕ್ಷತೆಯನಿಟ್ಟು ಅಲ್ಲಿಯ ಷಡುದಳಂಗಳನೆ ಪುಷ್ಪದ ಮಾಲೆಯೆಂದು ಧರಿಸಿ, ಅಲ್ಲಿಯ ಕಮಲ ಸದ್ವಾಸನೆಯ ಧೂಪವ ಬೀಸಿ, ಅಲ್ಲಿಯ ನೀಲವರ್ಣವನೆ ಕರ್ಪುರದ ಜ್ಯೋತಿಯೆಂದು ಬೆಳಗಿ ಅಲ್ಲಿಯ ಸ್ವಪ್ನಾವಸ್ಥೆಯೆಂಬ ವಸ್ತ್ರವ ಹೊದಿಸಿ ನಿಃಕ್ರೋಧವೆಂಬ ಆಭರಣವ ತೊಡಿಸಿ ಸುರುಚಿಯೆಂಬ ನೈವೇದ್ಯವನರ್ಪಿಸಿ, ನಿಷೆ*ಯೆಂಬ ತಾಂಬೂಲವನಿತ್ತು, ಇಂತು ಗುರುಲಿಂಗದ ಅಷ್ಟವಿಧಾರ್ಚನೆಯ ಮಾಡಿ, ಕೋಟಿಸೂರ್ಯಪ್ರಭೆಯಂತೆ ಬೆಳಗುವ ಗುರುಲಿಂಗವನು ಕಂಗಳು ತುಂಬಿ ನೋಡಿ ಮನದಲ್ಲಿ ಸಂತೋಷಂಗೊಂಡು ಆ ಗುರುಲಿಂಗದ ಪೂಜೆಯ ನಿರ್ಮಾಲ್ಯವ ಮಾಡದೆ, ಓಂ ಮಂ ಮಂ ಮಂ ಮಂ ಮಂ ಮಂ ಎಂಬ ಮಕಾರಷಡ್ವಿಧಮಂತ್ರಂಗಳಿಂದೆ ನಮಸ್ಕರಿಸಿ, ಆ ಗುರುಲಿಂಗವನು ಕೂಡಿ ಎರಡಳಿದು ಅಲ್ಲಿಂದ ಮುಂದಕ್ಕೆ ಹೋಗಿ ಮಣಿಪೂರಕವೆಂಬ ರಂಗಮಂಟಪದಲ್ಲಿ ಮೂರ್ತಿಗೊಂಡಿರ್ದ ಶಿವಲಿಂಗಕ್ಕೆ ಪರಮಾನಂದವೆಂಬ ಜಲದಿಂ ಮಜ್ಜನಕ್ಕೆರೆದು, ಅಗ್ನಿನಿವೃತ್ತಿಯಾದ ಗಂಧವ ಧರಿಸಿ ಅಹಂಕಾರ ನಿರಹಂಕಾರವಾದ ಅಕ್ಷತೆಯನಿಟ್ಟು ಅಲ್ಲಿಯ ದಶದಳಂಗಳನೆ ಪುಷ್ಪದಮಾಲೆಯೆಂದು ಧರಿಸಿ ಅಲ್ಲಿ ಕಮಲ ಸದ್ವಾಸನೆಯ ಧೂಪವ ಬೀಸಿ ಅಲ್ಲಿಯ ಕೆಂಪುವರ್ಣವನೆ ಕರ್ಪುರದ ಜ್ಯೋತಿಯೆಂದು ಬೆಳಗಿ ಅಲ್ಲಿಯ ಸುಷುಪ್ತಾವಸ್ಥೆಯೆಂಬ ವಸ್ತ್ರವ ಹೊದಿಸಿ ನಿರ್ಲೋಭವೆಂಬ ಆಭರಣವ ತೊಡಿಸಿ ಸುರೂಪವೆಂಬ ನೈವೇದ್ಯವನರ್ಪಿಸಿ ಸಾವಧಾನವೆಂಬ ತಾಂಬೂಲವನಿತ್ತು, ಇಂತು ಶಿವಲಿಂಗದ ಅಷ್ಟವಿಧಾರ್ಚನೆಯ ಮಾಡಿ ಕೋಟಿಸೂರ್ಯಪ್ರಭೆಯಂತೆ ಬೆಳಗುವ ಶಿವಲಿಂಗವನು ಕಂಗಳು ತುಂಬಿ ನೋಡಿ ಮನದಲ್ಲಿ ಸಂತಸಂಗೊಂಡು ಆ ಶಿವಲಿಂಗದ ಪೂಜೆಯ ನಿರ್ಮಾಲ್ಯಮಂ ಮಾಡದೆ, ಓಂ ಶಿಂ ಶಿಂ ಶಿಂ ಶಿಂ ಶಿಂ ಶಿಂ ಎಂಬ ಶಿಕಾರಷಡ್ವಿಧಮಂತ್ರಂಗಳಿಂದೆ ನಮಸ್ಕರಿಸಿ, ಆ ಶಿವಲಿಂಗವನು ಕೂಡಿ ಎಡರಳಿದು, ಅಲ್ಲಿಂದ ಮುಂದಕ್ಕೆ ಹೋಗಿ ಅನಾಹತಚಕ್ರವೆಂಬ ರಂಗಮಂಟಪದಲ್ಲಿ ಮೂರ್ತಿಗೊಂಡಿರ್ದ ಜಂಗಮಲಿಂಗಕ್ಕೆ ಶಾಂತಿಯೆಂಬ ಜಲದಿಂ ಮಜ್ಜನಕ್ಕೆರೆದು ವಾಯುನಿವೃತ್ತಿಯಾದ ಗಂಧವ ಧರಿಸಿ ಮನ ಸುಮನವಾದ ಅಕ್ಷತೆಯನಿಟ್ಟು ಅಲ್ಲಿಯ ದ್ವಾದಶದಳಂಗಳನೆ ಪುಷ್ಪದ ಮಾಲೆಯೆಂದು ಧರಿಸಿ, ಅಲ್ಲಿಯ ಕಮಲ ಸದ್ವಾಸನೆಯ ಧೂಪವ ಬೀಸಿ ಅಲ್ಲಿಯ ಮಾಂಜಿಷ್ಟವರ್ಣವನೆ ಕರ್ಪುರದಜ್ಯೋತಿಯೆಂದು ಬೆಳಗಿ, ಅಲ್ಲಿಯ ತೂರ್ಯಾವಸ್ಥೆಯೆಂಬ ವಸ್ತ್ರವ ಹೊದಿಸಿ ನಿರ್ಮೋಹವೆಂಬ ಆಭರಣವ ತೊಡಿಸಿ ಸುಸ್ಪರ್ಶನವೆಂಬ ನೈವೇದ್ಯವನರ್ಪಿಸಿ ಅನುಭಾವವೆಂಬ ತಾಂಬೂಲವನಿತ್ತು ಇಂತು ಜಂಗಮಲಿಂಗಕ್ಕೆ ಅಷ್ಟವಿಧಾರ್ಚನೆಯ ಮಾಡಿ, ಕೋಟಿಸೂರ್ಯಪ್ರಭೆಯಂತೆ ಬೆಳಗುವ ಜಂಗಮಲಿಂಗವನು ಕಂಗಳು ತುಂಬಿ ನೋಡಿ ಮನದಲ್ಲಿ ಸಂತೋಷಂಗೊಂಡು ಆ ಜಂಗಮಲಿಂಗದ ಪೂಜೆಯ ನಿರ್ಮಾಲ್ಯವ ಮಾಡದೆ ಓಂ ವಾಂ ವಾಂ ವಾಂ ವಾಂ ವಾಂ ವಾಂ ಎಂಬ ವಕಾರಷಡ್ವಿಧಮಂತ್ರಂಗಳಿಂದೆ ನಮಸ್ಕರಿಸಿ, ಆ ಜಂಗಮಲಿಂಗವನು ಕೂಡಿ ಎರಡಳಿದು, ಅಲ್ಲಿಂದ ಮುಂದಕ್ಕೆ ಹೋಗಿ ವಿಶುದ್ಧಿಚಕ್ರವೆಂಬ ರಂಗಮಂಟಪದಲ್ಲಿ ಮೂರ್ತಿಗೊಂಡಿರ್ದ ಪ್ರಸಾದಲಿಂಗಕ್ಕೆ ಕ್ಷಮೆಯೆಂಬ ಜಲದಿಂ ಮಜ್ಜನಕ್ಕೆರೆದು ಗಗನನಿವೃತ್ತಿಯಾದ ಗಂಧವ ಧರಿಸಿ, ಜ್ಞಾನ ಸುಜ್ಞಾನವಾದ ಅಕ್ಷತೆಯನಿಟ್ಟು, ಅಲ್ಲಿಯ ಷೋಡಶದಳಂಗಳನೆ ಪುಷ್ಪದ ಮಾಲೆಯೆಂದು ಧರಿಸಿ, ಅಲ್ಲಿಯ ಕಮಲಸದ್ವಾಸನೆಯ ಧೂಪವ ಬೀಸಿ, ಅಲ್ಲಿಯ ಕೃಷ್ಣವರ್ಣವನೆ ಕರ್ಪುರದ ಜ್ಯೋತಿಯೆಂದು ಬೆಳಗಿ, ಅಲ್ಲಿಯ ತೂರ್ಯಾತೀತಾವಸ್ಥೆಯೆಂಬ ವಸ್ತ್ರವ ಹೊದಿಸಿ ನಿರ್ಮದವೆಂಬ ಆಭರಣವ ತೊಡಿಸಿ ಸುಶಬ್ದವೆಂಬ ನೈವೇದ್ಯವನರ್ಪಿಸಿ ಆನಂದವೆಂಬ ತಾಂಬೂಲವನಿತ್ತು, ಇಂತು ಪ್ರಸಾದಲಿಂಗದ ಅಷ್ಟವಿಧಾರ್ಚನೆಯ ಮಾಡಿ ಕೋಟಿ ಸೂರ್ಯಪ್ರಭೆಯಂತೆ ಬೆಳಗುವ ಪ್ರಸಾದಲಿಂಗವನು ಕಂಗಳು ತುಂಬಿ ನೋಡಿ ಮನದಲ್ಲಿ ಸಂತೋಷಂಗೊಂಡು ಆ ಪ್ರಸಾದಲಿಂಗದ ಪೂಜೆಯ ನಿರ್ಮಾಲ್ಯವ ಮಾಡದೆ ಓಂ ಯಂ ಯಂ ಯಂ ಯಂ ಯಂ ಯಂ ಎಂಬ ಯಕಾರಷಡ್ವಿಧಮಂತ್ರಂಗಳಿಂದೆ ನಮಸ್ಕರಿಸಿ, ಆ ಪ್ರಸಾದಲಿಂಗವನು ಕೂಡಿ ಎರಡಳಿದು, ಅಲ್ಲಿಂದ ಮುಂದಕ್ಕೆ ಹೋಗಿ ಆಜ್ಞಾಚಕ್ರವೆಂಬ ರಂಗಮಂಟಪದಲ್ಲಿ ಮೂರ್ತಿಗೊಂಡಿರ್ದ ಮಹಾಲಿಂಗಕ್ಕೆ ಸಂತೋಷವೆಂಬ ಜಲದಿಂ ಮಜ್ಜನಕ್ಕೆರೆದು ಆತ್ಮನಿವೃತ್ತಿಯಾದ ಗಂಧವ ಧರಿಸಿ, ಭಾವ ಸದ್ಭಾವವಾದ ಅಕ್ಷತೆಯನಿಟ್ಟು, ಅಲ್ಲಿಯ ದ್ವಿದಳಂಗಳನೆ ಪುಷ್ಪದಮಾಲೆಯೆಂದು ಧರಿಸಿ, ಅಲ್ಲಿಯ ಕಮಲಸದ್ವಾಸನೆಯ ಧೂಪವ ಬೀಸಿ ಅಲ್ಲಿಯ ಮಾಣಿಕ್ಯವರ್ಣವನೆ ಕರ್ಪುರದಜ್ಯೋತಿಯೆಂದು ಬೆಳಗಿ, ಅಲ್ಲಿಯ ನಿರಾವಸ್ಥೆಯೆಂಬ ವಸ್ತ್ರವ ಹೊದಿಸಿ ನಿರ್ಮಲವೆಂಬ ಆಭರಣವ ತೊಡಿಸಿ ಸುತೃಪ್ತಿಯೆಂಬ ನೈವೇದ್ಯವನರ್ಪಿಸಿ ಸಮರಸವೆಂಬ ತಾಂಬೂಲವನಿತ್ತು, ಇಂತು ಮಹಾಲಿಂಗದ ಅಷ್ಟವಿಧಾರ್ಚನೆಯ ಮಾಡಿ ಕೋಟಿಸೂರ್ಯಪ್ರಭೆಯಂತೆ ಬೆಳಗುವ ಮಹಾಲಿಂಗವನು ಕಂಗಳು ತುಂಬಿ ನೋಡಿ ಮನದಲ್ಲಿ ಸಂತೋಷಂಗೊಂಡು ಆ ಮಹಾಲಿಂಗದ ಪೂಜೆಯ ನಿರ್ಮಾಲ್ಯವ ಮಾಡದೆ, ಓಂ ಒಂ ಒಂ ಒಂ ಒಂ ಒಂ ಒಂ ಎಂಬ ಓಂಕಾರಷಡ್ವಿಧಮಂತ್ರಂಗಳಿಂದೆ ನಮಸ್ಕರಿಸಿ, ಆ ಮಹಾಲಿಂಗವನು ಕೂಡಿ ಎರಡಳಿದು ಅಲ್ಲಿಂದ ಮುಂದಕ್ಕೆ ಹೋಗಿ ಬ್ರಹ್ಮರಂಧ್ರವೆಂಬ ಸಹಸ್ರದಳಮಂಟಪದಲ್ಲಿ ಮೂರ್ತಿಗೊಂಡಿರ್ದ ನಿಷ್ಕಳಲಿಂಗಕ್ಕೆ ಅನುಪಮವೆಂಬ ಜಲದಿಂ ಮಜ್ಜನಕ್ಕೆರೆದು ಅನಾದಿಯೆಂಬ ಗಂಧವ ಧರಿಸಿ, ಅಗಮ್ಯವೆಂಬ ಅಕ್ಷತೆಯನಿಟ್ಟು ಅವಿರಳವೆಂಬ ಪುಷ್ಪದ ಮಾಲೆಯ ಧರಿಸಿ, ಅಪ್ರಮಾಣವೆಂಬ ಧೂಪವ ಬೀಸಿ ಅಖಂಡವೆಂಬ ಜ್ಯೋತಿಯ ಬೆಳಗಿ ಸತ್ಯವೆಂಬ ವಸ್ತ್ರವ ಹೊದಿಸಿ ಸದಾನಂದವೆಂಬ ಆಭರಣವ ತೊಡಿಸಿ ನಿತ್ಯವೆಂಬ ನೈವೇದ್ಯವನರ್ಪಿಸಿ ನಿರುಪಮವೆಂಬ ತಾಂಬೂಲವನಿತ್ತು, ಇಂತು ನಿಷ್ಕಲಲಿಂಗದ ಅಷ್ಟವಿಧಾರ್ಚನೆಯ ಮಾಡಿ ಅನಂತಕೋಟಿಸೂರ್ಯಪ್ರಭೆಯಂತೆ ಬೆಳಗುವ ನಿಷ್ಕಲಲಿಂಗವನು ಕಂಗಳು ತುಂಬಿ ನೋಡಿ ಮನದಲ್ಲಿ ಸಂತೋಷಂಗೊಂಡು ಆ ನಿಷ್ಕಲಲಿಂಗದ ಪೂಜೆಯ ನಿರ್ಮಾಲ್ಯವ ಮಾಡದೆ ಅಗಣಿತವೆಂಬ ನಮಸ್ಕಾರಮಂ ಮಾಡಿ, ಆ ನಿಷ್ಕಲಲಿಂಗವನು ಕೂಡಿ ಎರಡಳಿದು, ಅಲ್ಲಿಂದ ಮುಂದಕ್ಕೆ ಹೋಗಿ ಶಿಖಾಚಕ್ರವೆಂಬ ತ್ರಿದಳಮಂಟಪದಲ್ಲಿ ಮೂರ್ತಿಗೊಂಡಿರ್ದ ಶೂನ್ಯಲಿಂಗಕ್ಕೆ ನಿರ್ಭಾವವೆಂಬ ಜಲದಿಂ ಮಜ್ಜನಕ್ಕೆರೆದು, ನಿರ್ಜಾತವೆಂಬ ಗಂಧವ ಧರಿಸಿ ನಿರ್ಜಡವೆಂಬ ಅಕ್ಷತೆಯನಿಟ್ಟು ನಿಧ್ರ್ವಂದ್ವವೆಂಬ ಪುಷ್ಪದಮಾಲೆಯ ಧರಿಸಿ ನಿರ್ಲಜ್ಜೆಯೆಂಬ ಧೂಪವ ಬೀಸಿ ನಿರಾಭಾರವೆಂಬ ಜ್ಯೋತಿಯ ಬೆಳಗಿ ನಿರಾಮಯವೆಂಬ ವಸ್ತ್ರವ ಹೊದಿಸಿ ನಿಸ್ಪೃಹವೆಂಬ ಆಭರಣವ ತೊಡಸಿ ನಿರಾಳವೆಂಬ ನೈವೇದ್ಯವನರ್ಪಿಸಿ ನಿರಾಲಂಬವೆಂಬ ತಾಂಬೂಲವನಿತ್ತು, ಇಂತು ಶೂನ್ಯಲಿಂಗದ ಅಷ್ಟವಿಧಾರ್ಚನೆಯಂ ಮಾಡಿ, ಅಗಣಿತ ಕೋಟಿಸೂರ್ಯ ಪ್ರಭೆಯಂತೆ ಬೆಳಗುವ ಶೂನ್ಯಲಿಂಗವನು ಕಂಗಳು ತುಂಬಿ ನೋಡಿ ಮನದಲ್ಲಿ ಸಂತೋಷಂಗೊಂಡು ಆ ಶೂನ್ಯಲಿಂಗದ ಪೂಜೆಯ ನಿರ್ಮಾಲ್ಯವ ಮಾಡದೆ ನಿರ್ಭೇದ್ಯವೆಂಬ ನಮಸ್ಕಾರಮಂ ಮಾಡಿ ಆ ಶೂನ್ಯಲಿಂಗವನು ಕೂಡಿ ಎರಡಳಿದು, ಅಲ್ಲಿಂದ ಮುಂದಕ್ಕೆ ಹೋಗಿ, ಪಶ್ಚಿಮಚಕ್ರವೆಂಬ ಏಕದಳಮಂಟಪದಲ್ಲಿ ಮೂರ್ತಿಗೊಂಡಿರ್ದ ನಿರಂಜನಲಿಂಗಕ್ಕೆ ನಿರ್ನಾಮವೆಂಬ ಜಲದಿಂ ಮಜ್ಜನಕ್ಕೆರೆದು ನಿಷ್ಕಾರಣವೆಂಬ ಗಂಧವ ಧರಿಸಿ ನಿಃಸಂಗವೆಂಬ ಅಕ್ಷತೆಯನಿಟ್ಟು ನಿಸ್ಸಾರವೆಂಬ ಪುಷ್ಪವ ಧರಿಸಿ ನಿರುಪಾಧಿಕವೆಂಬ ಧೂಪವ ಬೀಸಿ ನಿಷ್ಕಳೆಯೆಂಬ ಜ್ಯೋತಿಯ ಬೆಳಗಿ ನಿಶ್ಚಲವೆಂಬ ವಸ್ತ್ರವ ಹೊದಿಸಿ ನಿರ್ವಾಸನೆಯೆಂಬ ಆಭರಣವ ತೊಡಿಸಿ ನಿಃಶೂನ್ಯವೆಂಬ ನೈವೇದ್ಯವನರ್ಪಿಸಿ ನಿರವಯವೆಂಬ ತಾಂಬೂಲವನಿತ್ತು, ಇಂತು ನಿರಂಜನಲಿಂಗದ ಅಷ್ಟವಿಧಾರ್ಚನೆಯ ಮಾಡಿ ತೆರಹಿಲ್ಲದೆ ಬೆಳಗಿನ ಮಹಾಬೆಳಗನೊಳಕೊಂಡು ಬೆಳಗುವ ನಿರಂಜನಲಿಂಗವನು ಕಂಗಳು ತುಂಬಿ ನೋಡಿ, ಮನದಲ್ಲಿ ಸಂತೋಷಂಗೊಂಡು ಆ ನಿರಂಜನಲಿಂಗದ ಪೂಜೆಯ ನಿರ್ಮಾಲ್ಯವ ಮಾಡದೆ, ನಿಃಶಬ್ದವೆಂಬ ನಮಸ್ಕಾರಮಂ ಮಾಡಿ ಆ ನಿರಂಜನಲಿಂಗವನು ಕೂಡಿ ಎರಡಳಿದು ಅಲ್ಲಿಂದ ಮುಂದೆ ನೋಡಲು ಬಚ್ಚಬರಿಯ ಬಯಲಿರ್ಪುದ ಕಂಡು ಆ ಬಯಲೆ ತನ್ನ ನಿಜನಿವಾಸವೆಂದು ತಿಳಿದು ಆ ನಿಜವಾಸದಲ್ಲಿ ತಾ ನಿಂದು ತನ್ನಿಂದ ಕೆಳಗಣ ನವಚಕ್ರಂಗಳಲ್ಲಿರ್ದ ನವಲಿಂಗಗಳ ಪೂಜೆಯ ನಿರಂತರದಲ್ಲಿ ಮಾಡುವ ಶಿವಯೋಗಿಗೆ ಭವಬಂಧನವಿಲ್ಲ. ಆ ಭವಬಂಧನವಿಲ್ಲವಾಗಿ ಜೀವಕಲ್ಪಿತವು ಮುನ್ನವೇ ಇಲ್ಲ. ಆ ಜೀವಕಲ್ಪಿತವಿಲ್ಲವಾಗಿ ಆತನು ಪರಿಪೂರ್ಣನಾಗಿ ಪರಾತ್ಪರನಾಗಿ ಪರಶಿವಬ್ರಹ್ಮವೇ ಆಗಿ ಇರ್ಪನಯ್ಯಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ತ್ರಿವಿಧ ಕ್ರೀಯಿಂದ ಭೇದವನರಿತು ಮಾಡುವುದು ಭಕ್ತಿಸ್ಥಲ. ಚತುರ್ವಿಧ ಫಲಪ್ರಾಪ್ತಿಯ ಅನುಭವಿಸದೆ ನಿಶ್ಚಯ ವಸ್ತುವ ಕಾಬುದು ಮಾಹೇಶ್ವರಸ್ಥಲ. ಪಂಚೇಂದ್ರಿಯಂಗಳಲ್ಲಿ ಸಂಚಿತದಲ್ಲಿ ಬಂದುದನರಿದು ಲಿಂಗಾರ್ಪಿತದಿಂದ ಕೊಂಬುದು ಪ್ರಸಾದಿಸ್ಥಲದಂಗದ ಇರವು. ಷಡಾಧಾರಂಗಳಿಂದ ಸುಳಿದ ಸೂಕ್ಷ ್ಮದ ಆತ್ಮನ ನೆಲೆಯನರಿದು ಕೂಡುವ ಕೂಟ ಪ್ರಾಣಲಿಂಗಿಸ್ಥಲದ ಇರವು. ಸುಖದುಃಖವೆಂಬ ಉಭಯವನಳಿದು. ಬೆರಗು ನಿಬ್ಬೆರಗಾದುದು ಶರಣಸ್ಥಲದ ಇರವು. ಸುಗಂಧ ಗಂಧವ ಅಗ್ನಿಯಲ್ಲಿ ಸಂಬಂಧಿಸಿ ಅಂಗ ಅಗ್ನಿಯೊಳಡಗಿ ಗಂಧ ಧೂಮದಲ್ಲಿ ತಲೆದೋರಿ ಧೂಮ ಹಿಂಗೆ ಆ ಗಂಧ ಅಲ್ಲಿಯೇ ಅಡಗಿದಂತೆ ನಿಂದುದುಐಕ್ಯಸ್ಥಲ. ಇಂತೀ ಷಡುಸ್ಥಲ ತ್ರಿಕರಣ ಶುದ್ಧಾತ್ಮಂಗಲ್ಲದೆ ಸಾಧ್ಯವಲ್ಲನೋಡಾ! ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗೆ ಮಧುಕೇಶ್ವರನು. || 44 ||
--------------
ದಾಸೋಹದ ಸಂಗಣ್ಣ
ಅಯ್ಯ ದರ್ಪಣಾಕೃತಿ, ಯಕಾರಪ್ರಣಮ, ಪ್ರಣವನಾಮ, ವಿಶುದ್ಧಿಚಕ್ರ, ಕಪೊತವರ್ಣ, ಶರಣಸ್ಥಲ, ಆನಂದತನು, ಸುಜ್ಞಾನಹಸ್ತ, ಪ್ರಸಾದಲಿಂಗ, ಶ್ರೋತ್ರವೆಂಬ ಮುಖ, ಆನಂದಭಕ್ತಿ, ಸುಶಬ್ದಪದಾರ್ಥ, ಸುಶಬ್ದ ಪ್ರಸಾದ, ಸದಾಶಿವ ಪೂಜಾರಿ, ಸದಾಶಿವನಧಿದೇವತೆ, ಶಿವಸಾದಾಖ್ಯ, ಪರಿಪೂರ್ಣವೆಂಬ ಲಕ್ಷಣ, ಅನಾದಿವತುವೆಂಬ ಸಂಜ್ಞೆ, ಊಧ್ರ್ವದಿಕ್ಕು, ಅಜಪೆವೇದ, ಆಕಾಶವೆ ಅಂಗ, ಶುದ್ದಾತ್ಮ, ಪರಾಶಕ್ತಿ, ಶಾಂತ್ಯತೀತಕಲೆ- ಇಂತು ಇಪ್ಪತ್ತುನಾಲ್ಕು ಸಕೀಲಂಗಳನೊಳಕೊಂಡು, ಎನ್ನ ವಿಶುದ್ಧಿಚಕ್ರವೆಂಬ ಐಮುಕ್ತಿಕ್ಷೇತ್ರದಲ್ಲಿ ಮೂರ್ತಿಗೊಂಡಿರ್ದ ಈಳನಾಸ್ವರೂಪವಾದ ಪ್ರಸಾದಲಿಂಗವೆ ವಿಶ್ವನಾಥಲಿಂಗವೆಂದು ಭಾವತ್ರಯವ ಮಡಿಮಾಡಿ, ಕ್ಷಮೆಯೆಂಬ ಜಲದಿಂ ಮಜ್ಜನಕ್ಕೆರೆದು, ಗಗನನಿವೃತ್ತಿಯಾದ ಗಂಧವ ಧರಿಸಿ, ಜ್ಞಾನ ಸುಜ್ಞಾನವಾದದಕ್ಷತೆಯನಿಟ್ಟು, ಅಲ್ಲಿಹ ಷೋಡಶದಳಂಗಳನೆ ಪುಷ್ಪದಮಾಲೆಯೆಂದು ಧರಿಸಿ, ಅಲ್ಲಿಹ ಕಮಲಸದ್ವಾಸನೆಯ ಧೂಪವ ಬೀಸಿ, ಅಲ್ಲಿಹ ಕಪೋತವರ್ಣವೆ ಕರ್ಪೂರದ ಜ್ಯೋತಿಯೆಂದು ಬೆಳಗಿ, ಅಲ್ಲಿಹ ತುರ್ಯಾತೀತಾವಸ್ಥೆಯೆಂಬ ನವೀನವಸ್ತ್ರವ ಹೊದ್ದಿಸಿ, ನಿರ್ಮದವೆಂಬಾಭರಣವ ತೊಡಿಸಿ, ಸುಶಬ್ಧವೆಂಬ ನೈವೇದ್ಯವನರ್ಪಿಸಿ, ಆನಂದವೆಂಬ ತಾಂಬೂಲನವಿತ್ತು, ಇಂತು ಪ್ರಸಾದಲಿಂಗಕ್ಕೆ ಅಷ್ಟವಿಧಾರ್ಚನೆಯಂ ಮಾಡಿ ಕೋಟಿಸೂರ್ಯನ ಪ್ರಭೆಯಂತೆ ಬೆಳಗುವ ಪ್ರಸಾದಲಿಂಗವನ್ನು ಕಂಗಳು ತುಂಬಿ ನೋಡಿ, ಮನದಲ್ಲಿ ಸಂತೋಷಗೊಂಡು ಆ ಪ್ರಸಾದಲಿಂಗದ ಪೂಜೆಯ ಸಮಾಪ್ತವ ಮಾಡಿ, ಓಂ ಯಂ ಯಂ ಯಂ ಯಂ ಯಂ ಯಂ ಎಂಬ ಯಕಾರ ಷಟ್ವಿಧ ಮಂತ್ರಗಳಿಂದೆ ನಮಸ್ಕರಿಸಿ, ಆ ಪ್ರಸಾದಲಿಂಗವೆ ತಾನೆಂದರಿದು ಕೂಡಿ ಎರಡಳಿದು ನಿರ್ಮೋಹಿಯಾಗಿ ಆಚರಿಸಬಲ್ಲಾತನೆ ಆನಂದಭಕ್ತಿಯುಳ್ಳ ಶಿವಶರಣ ನೋಡ ಸಂಗನಬಸವೇಶ್ವರ.
--------------
ಗುರುಸಿದ್ಧದೇವರು
ಸುಗಂಧದ ಅಂಗವಿದ್ದು ಕರಂಡದಲ್ಲಿ ಬಂಧಿಸಲಿಕ್ಕಾಗಿ, ಗಂಧ ನಿಂದಿತ್ತಲ್ಲದೆ, ವಾಯುವಿನ ಕೈಯ ಗಂಧವ ಕರಂಡದಲ್ಲಿ ಕೂಡಿ ಮುಚ್ಚಲಿಕ್ಕೆ ನಿಂದುದುಂಟೆ ಆ ಸುವಾಸನೆ? ಈ ಗುಣ ಲಿಂಗಾಂಗಿಯ ಸಂಗದ ಇರವು. ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು. || 96 ||
--------------
ದಾಸೋಹದ ಸಂಗಣ್ಣ
ಕತ್ತೆ, ಕರ್ಪುರವ ಬಲ್ಲುದೆ ? ನಾಗ, ನಾಣ್ಣುಡಿಯ ಬಲ್ಲುದೆ ? ನಾಯಿ, ಸುಭಕ್ಷ್ಯವ ಬಲ್ಲದೆ ? ಮಕ್ಷಿಕ, ಗಂಧವ ಬಲ್ಲುದೆ ? ಹುಟ್ಟುಗೊಡ್ಡು, ಮಕ್ಕಳ ಗರ್ಭವ ಬಲ್ಲುದೆ ? ಜಗದಲ್ಲಿ ಹೊತ್ತುಹೊರುವ ಮಿಥ್ಯವಂತರಿಗೆ ತತ್ವದ ಶುದ್ಧಿಯ ಹೇಳಿದಡೆ, ನಿತ್ಯರುದ್ರನಾದಡೂ ತಪ್ಪದು ನರಕ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ನಾಲಗೆಯ ಹಿಡಿದು ನುಡಿಯಬಹುದೆ ಅಯ್ಯಾ ? ಕೈ ಸಿಕ್ಕಿದಲ್ಲಿ ಓಡಬಹುದೆ ಅಯ್ಯಾ ? ಕ್ರೀಯ ಮರೆದು ಅರಿವನರಿಯಬಹುದೆ ಅಯ್ಯಾ ? ಕುಸುಮವ ಬಿಟ್ಟು ಗಂಧವ ಮುಡಿಯಬಹುದೆ ಅಯ್ಯಾ ? ಇಂತೀ ಉಭಯವನರಿತಡೆ ಪ್ರಾಣಲಿಂಗಯೋಗ, ಏಣಾಂಕಧರ ಸೋಮೇಶ್ವರಲಿಂಗದಲ್ಲಿ.
--------------
ಬಿಬ್ಬಿ ಬಾಚಯ್ಯ
ಅಯ್ಯ, ಜ್ಯೋತಿರಾಕೃತಿ, ಓಂಕಾರ ಪ್ರಣಮ, ಸಿಂಹನಾದ, ಆಜ್ಞಾಚಕ್ರ, ಮಾಣಿಕ್ಯವರ್ಣ, ಐಕ್ಯಸ್ಥಲ, ಶುದ್ಧತನು, ಸದ್ಭಾವಹಸ್ತ, ಮಹಾಲಿಂಗ ಹೃದಯವೆಂಬ ಮುಖ, ಸಮರಸಭಕ್ತಿ, ಸುತೃಪ್ತಿಪದಾರ್ಥ, ಸುತೃಪ್ತಿಪ್ರಸಾದ, ಮಹಾದೇವ ಪೂಜಾರಿ, ಮಹಾದೇವನಧಿದೇವತೆ, ಮಹಾಸಾದಾಖ್ಯ, ಅಖಂಡವೆಂಬ ಲಕ್ಷಣ, ಮಹವೆಂಬ ಸಂಜ್ಞೆ, ಪಾತಾಳದಿಕ್ಕು, ಗಾಯತ್ರಿವೇದ, ಆತ್ಮನೆ ಅಂಗ ಜ್ಞಾನಾತ್ಮ, ಚಿಚ್ಛಕ್ತಿ, ಶಾಂತ್ಯತೀತೋತ್ತರ ಕಲೆ ಇಂತು ಇಪ್ಪತ್ತುನಾಲ್ಕು ಸಕೀಲಂಗಳನೊಳಕೊಂಡು ಎನ್ನ ಆಜ್ಞಾಚಕ್ರವೆಂಬ ತ್ರಿಕೂಟಸಂಗಮಕ್ಷೇತ್ರದಲ್ಲಿ ಮೂರ್ತಿಗೊಂಡಿರ್ದ, ಬೋಧಾಸ್ವರೂಪವಾದ ಮಹಾಲಿಂಗವೆ ಸಂಗಮೇಶ್ವರಲಿಂಗವೆಂದು, ಅವಸ್ಥಾತ್ರಯವ ಮಡಿಮಾಡಿ, ಸಂತೋಷವೆಂಬ ಜಲದಿಂ ಮಜ್ಜನಕ್ಕೆರದು, ಆತ್ಮನಿವೃತ್ತಿಯಾದ ಗಂಧವ ಧರಿಸಿ, ಭಾವ ಸದ್ಭಾವವಾದದಕ್ಷತೆಯನಿಟ್ಟು, ಅಲ್ಲಿಹ ದ್ವಿದಳಂಗಳನೆ ಪುಷ್ಪದಮಾಲೆಯೆಂದು ಧರಿಸಿ, ಅಲ್ಲಿಹ ಕಮಲಸದ್ವಾಸನೆಯ ಧೂಪವ ಬೀಸಿ, ಅಲ್ಲಿಹ ಮಾಣಿಕ್ಯ ವರ್ಣವೆ ಕರ್ಪೂರದ ಜ್ಯೋತಿಯೆಂದು ಬೆಳಗಿ, ಅಲ್ಲಿಹ ನಿರಾವಸ್ಥೆಯೆಂಬ ನವೀನ ವಸ್ತ್ರವ ಹೊದ್ದಿಸಿ, ನಿರ್ಮಲವೆಂಬಾಭರಣವ ತೊಡಿಸಿ, ಸುತೃಪ್ತಿಯೆಂಬ ನೈವೇದ್ಯವನರ್ಪಿಸಿ, ಸಮರಸವೆಂಬ ತಾಂಬೂಲವನಿತ್ತು, ಇಂತು ಮಹಾಲಿಂಗಕ್ಕೆ ಅಷ್ಟವಿಧಾರ್ಚನೆಯಂ ಮಾಡಿ, ಕೋಟಿಸೂರ್ಯನ ಪ್ರಭೆಯಂತೆ ಬೆಳಗುವ ಮಹಾಲಿಂಗವನ್ನು ಕಂಗಳು ತುಂಬಿ ನೋಡಿ, ಮನದಲ್ಲಿ ಸಂತೋಷಗೊಂಡು, ಆ ಮಹಾಲಿಂಗದ ಪೂಜೆಯ ಸಮಾಪ್ತವ ಮಾಡಿ, ಓಂ ಓಂ ಓಂ ಓಂ ಓಂ ಓಂ ಎಂಬ ಓಂಕಾರ ಷಡ್ವಿಧಮಂತ್ರಂಗಳಿಂದೆ ನಮಸ್ಕರಿಸಿ, ಆ ಮಹಾಲಿಂಗವೆ ತಾನೆಂದರಿದು ಕೂಡಿ ಎರಡಳಿದು ನಿತ್ಯತೃಪ್ತನಾಗಿ ಆಚರಿಸಬಲ್ಲಾತನೆ ಸಮರಸಭಕ್ತಿಯನುಳ್ಳ ಲಿಂಗೈಕ್ಯ ನೋಡ ಸಂಗನಬಸವೇಶ್ವರ.
--------------
ಗುರುಸಿದ್ಧದೇವರು
ಸಹಸ್ರದಳ ಕಮಲವ ಸೂಸದೆ ಮೇಲುಕಟ್ಟು ಕಟ್ಟಿ, ಭಾಸುರವೆಂಬ ಹೃದಯದ ಸಿಂಹಾಸನವಿಕ್ಕಿ, ಲೇಸಾಗಿ ಗುರುಸ್ವಾಮಿಯ ಮೂರ್ತಮಾಡಿಸಿ, ನಾಲ್ಕೆಸಳ ಪದ್ಮವ ಸಮ್ಮಾರ್ಜನೆಯ ಮಾಡಿ, ಆರೆಸಳ ಪದ್ಮವ ರಂಗವಾಲೆಯ ತುಂಬಿ, ಹತ್ತೆಸಳ ಪದ್ಮವ ಕರಕಮಲವಂ ಮಾಡಿ, ನಿರ್ಭಾವವೆಂಬ ಅಗ್ಗವಣಿಯಲ್ಲಿ ಮಜ್ಜನಕ್ಕೆರೆದು, ಚಿದ್ಬೆಳಗೆಂಬ ಚಿದ್ವಿಭೂತಿಯ ಧರಿಸಿ, ಶಾಂತಿಯೆಂಬ ಗಂಧವ ಧರಿಸಿ, ಚಿತ್ತನಿರ್ಮಲವೆಂಬ ಅಕ್ಷತೆಯನರ್ಪಿಸಿ, ಹೃತ್ಕಮಲವೆಂಬ ಅರಳಿದ ಪುಷ್ಪವ ಧರಿಸಿ, ಸುಗಂಧವೆಂಬ ಧೂಪವ ಬೀಸಿ, ಕಂಗಳೆ ದೀಪ, ಕರ್ಣವೆ ಗಂಟೆ, ನಾಸಿಕವೆ ಆಲವಟ್ಟಲು, ಜಿಹ್ವೆಯ ತಾಳ, ಪಾದವೆ ಪಾತ್ರದವರು, ಹಸ್ತವೆ ಸೇವಕರು, ನಿಶ್ಚಿಂತವೆಂಬ ಅಕ್ಕಿಯ ತಂದು, ಪಶ್ಚಿಮವೆಂಬೊರಳಿಗೆ ನೀಡಿ, ಏಕೋಭಾವವೆಂಬೊನಕೆಯ ಪಿಡಿದು ತಳಿಸಿ, ಸುಬುದ್ಭಿಯೆಂಬ ಮೊರದಲ್ಲಿ ಕೇರಿ, ತ್ರಿಕೂಟವೆಂಬ ಒಲೆಯ ಹೂಡಿ, ಕರಣಂಗಳೆಂಬ ಸೌದೆಯನಿಟ್ಟು, ಜ್ಞಾನಾಗ್ನಿಯನುರುಹಲು, ಒಮ್ಮನವೆಂಬ ಕಂದಲಿಗೆ ಆನಂದ ಜಲವೆಂಬಗ್ಗಣಿಯನೆತ್ತಿ, ನಿಶ್ಚಿಂತವೆಂಬಕ್ಕಿಯ ನೀಡಿ, ಸುಮ್ಮಾನವೆಂಬ ಹುಟ್ಟಿನಲ್ಲಿ ಉಕ್ಕಿರಿದು, ಮನ ಬುದ್ಧಿಯೆಂಬ ಚಿಬ್ಬಲುಮರದಟ್ಟೆಯನಿಕ್ಕಿ, ಅಹಂಕಾರವೆಂಬ ಭಾಜನದಲ್ಲಿ ಬಾಗಿ, ಜ್ಞಾತೃ ಜ್ಞಾನ ಜ್ಞೇಯವೆಂಬ ಅಡ್ಡಣಿಗೆಯನಿರಿಸಿ, ಮನವೆಂಬ ಹರಿವಾಣದಲ್ಲಿ ಗಡಣಿಸಿ, ಆನಂದವೆಂಬಮೃತವನಾರೋಗಣೆಯ ಮಾಡಿ, ನಿತ್ಯವೆಂಬಗ್ಗವಣಿಯಲ್ಲಿ ಹಸ್ತಪ್ರಕ್ಷಾಲನವ ಮಾಡಿಸಿ, ಸತ್ವರಜತಮವೆಂಬ ವೀಳೆಯವ ಕೊಟ್ಟು, ಅಂತಃಕರಣಚತುಷ್ಟಯವೆಂಬ ನಾಲ್ಕು ಕಾಲು ಮಾಡಿ, ಪೃಥ್ವಿ ಅಪ್ಪು ತೇಜ ವಾಯು ಆಕಾಶವೆಂಬ ಮಂಚವ ಹಾಸಿ, ನಾಸಿಕ ಜಿಹ್ವೆ ನೇತ್ರ ತ್ವಕ್ಕು ಶ್ರೋತ್ರ ಎಂಬ ಸುಪ್ಪತ್ತಿಗೆಯನು ಹಚ್ಚಡಿಸಿ, ಪ್ರಾಣ ಅಪಾನ ವ್ಯಾನ ಉದಾನ ಸಮಾನವೆಂಬ ಒರಗು ಇಕ್ಕಿ, ತತ್ವ ಪರತತ್ವವೆಂಬ ಹಸ್ತಕ್ಕೆ ಮೆತ್ತೆಯನಿಕ್ಕಿ, ಸುತ್ತಣ ಪರಿಚಾರಕರು, ಆನೆ ಕುದುರೆ ಅರಸು ಮನ್ನೆಯ ಪ್ರಧಾನಿಗಳು ಎತ್ತ ಹೋದರೆಂದು ಅತ್ತಿತ್ತ ನೋಡುತ್ತಿರಲು, ಊರು ಬಯಲಾಯಿತ್ತು, ಒಕ್ಕಲು ಓಡಿತ್ತು, ಮಕ್ಕಳ ಗಲಭೆ ನಿಂದಿತ್ತು, ಮಾತಿನ ಮಥನವಡಗಿತ್ತು. ಉತ್ತರದಲ್ಲಿ ವಸ್ತುವ ಕಂಡು ಓಲಗಂಗೊಟ್ಟಿರಲು, ಓಲಗದಲ್ಲಿ ಲೋಲುಪ್ತವನೆಯ್ದಿ ಆವಲ್ಲಿ ಹೋದನೆಂದರಿಯೆನಯ್ಯಾ. ಅಪ್ಪಣ್ಣಪ್ರಿಯ ಚೆನ್ನಬಸವಣ್ಣ ತಾನೆ ನೋಡಾ.
--------------
ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ
ಮರನನೇರದೆ ಹಣ್ಣು ಕೊಯ್ಯಬಹುದೆ? ಕುಸುಮವಿಲ್ಲದೆ ಗಂಧವ ಮುಡಿಯಬಹುದೆ? ಉಪದೃಷ್ಟವಿಲ್ಲದೆ ನಿಜದೃಷ್ಟವ ಕಾಣಬಹುದೆ? ಕ್ರೀಶ್ರದ್ಧೆಯಿಲ್ಲದೆ ತ್ರಿವಿಧಕರ್ತೃ ತನಗೆ ಸಾಧ್ಯವಪ್ಪುದೆ? ಇದು ಕಾರಣ ಗುರುವಿನಲ್ಲಿ ಸದ್ಭಾವ, ಲಿಂಗದಲ್ಲಿ ಮೂರ್ತಿಧ್ಯಾನ, ಜಂಗಮದಲ್ಲಿ ತ್ರಿವಿಧಮಲದೂರಸ್ಥನಾಗಿಪ್ಪುದು, ಸದ್ಭಕ್ತನಂಗ, ಚಿದ್ಘನವಸ್ತುವಿನ ಸಂಗ, ಸದ್ಯೋಜಾತಲಿಂಗಕ್ಕೆ ಸುಸಂಗ.
--------------
ಅವಸರದ ರೇಕಣ್ಣ
ಇನ್ನಷ್ಟು ... -->