ಅಥವಾ

ಒಟ್ಟು 159 ಕಡೆಗಳಲ್ಲಿ , 49 ವಚನಕಾರರು , 143 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶಿವಶಿವಾ, ಮತ್ತೊಂದು ಪರಿಯ ಪೇಳ್ವೆ. ಅದೆಂತೆಂದಡೆ: ಈ ಲೋಕದೊಳಗೆ ಗುರುವೆಂಬಾತನು ಭಕ್ತರಿಗೆ ದೀಕ್ಷೆಯ ಮಾಡಿ ಪೂರ್ವಜನ್ಮವಳಿದು ಪುನರ್ಜಾತನ ಮಾಡಿದೆವೆಂಬರು. ಜಂಗಮಲಿಂಗಿಗಳಿಗೆ ಚರಂತಿಹಿರಿಯರು ಗುರುವೆಂಬಾತನು ಉಭಯರು ಕೂಡಿ, ಅಯ್ಯತನ ಮಾಡಿದೆವು ಎಂಬರು. ಅವರೇನು ಪೂರ್ವದಲ್ಲಿ ಕಪ್ಪಾಗಿದ್ದರೆ ? ಈಗೇನು ಕೆಂಪಗಾದರೆ ? ಅವರೇನು ಪೂರ್ವದಲ್ಲಿ ಬಿಳುಪಾಗಿದ್ದರೆ ? ಈಗೇನು ಕಪ್ಪಾದರೆ ? ಎಲಾ ದಡ್ಡಪ್ರಾಣಿಗಳಿರಾ, ಇದೇನು ವೀರಶೈವಮಾರ್ಗವಲ್ಲ; ಇದು ಶೈವಮಾರ್ಗ. ಇನ್ನು ವೀರಶೈವಮಾರ್ಗದಾಚಾರವ ಬಲ್ಲರೆ ಹೇಳಿರಿ, ಅರಿಯದಿದ್ದರೆ ಕೇಳಿರಿ. ಆರೂರವರ ಉಲುಹ ಮಾಣಿಸಿ, ಮೂರೂರವರ ಮೂಲಿಗೆ ಹಾಕಿ, ಬೇರೊಂದೂರವರ ತೋರಬಲ್ಲರೆ ವೀರಶೈವರೆಂಬೆ. ಆರು ಮಂದಿಯನಟ್ಟಿ, ಮೂರು ಮಂದಿಯ ಕುಟ್ಟಿ, ಬಟ್ಟಬಯಲಿನ ಘಟ್ಟಿಯ ತೋರಬಲ್ಲರೆ ವೀರಶೈವರೆಂಬೆ. ಆರು ಬಟ್ಟೆಯನೇ ಮೆಟ್ಟಿ, ಮೂರು ಬಟ್ಟೆಯನೇ ದಾಂಟಿ, ಮೇಲುಬಟ್ಟೆಯಲ್ಲಿ ನಿಂದು ನಿಟಿಲಲೋಚನನ ತೋರಬಲ್ಲರೆ ವೀರಶೈವರೆಂಬೆ. ಆರು ಬಾಗಿಲ ಹಾಕಿ, ಮೂರು ಬಾಗಿಲ ಮುಚ್ಚಿ, ಇನ್ನೊಂದು ಕದವ ತೆಗೆದು ತೋರಬಲ್ಲರೆ ವೀರಶೈವರೆಂಬೆ. ಇಂತೀ ಕ್ರಮವನರಿದು ದೀಕ್ಷೆಯ ಮಾಡಬಲ್ಲರೆ ಗುರುವೆಂಬೆ, ಇಲ್ಲದಿದ್ದರೆ ನರಗುರಿಗಳೆಂಬೆ. ಈ ಭೇದವ ತಿಳಿದು ಅಯ್ಯತನ ಮಾಡಬಲ್ಲರೆ ಚರಮೂರ್ತಿಗಳೆಂಬೆ. ಇಲ್ಲದಿದ್ದರೆ ಮತಿಭ್ರಷ್ಟ ಮರುಳಮಾನವರೆಂಬೆ. ಇಂತೀ ವಿಚಾರವನು ಅರಿಯದೆ ದೀಕ್ಷೆಯ ಮಾಡಬೇಕೆಂಬವರ, ಇಂತೀ ಭೇದವ ತಿಳಿಯದೆ ದೀಕ್ಷೆ ಪಡೆಯಬೇಕೆಂಬವರ, ಈ ಉಭಯಭ್ರಷ್ಟ ಹೊಲೆಮಾದಿಗರ ಅಘೋರನರಕದಲ್ಲಿಕ್ಕೆಂದ ಕಾಣಾ ವೀರಾದ್ಥಿವೀರ ನಿಮ್ಮ ಶರಣ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಆವಾವ ಭಾವದಲ್ಲಿ ಮಾಡಿ ಕೂಡಿಹೆನೆಂಬವರ ಬಾಗಿಲ ತೋರಯ್ಯಾ. ತನುವನೊಪ್ಪಿಸಿದವರ, ಮನವನೊಪ್ಪಿಸಿದವರ, ಧನವನೊಪ್ಪಿಸಿದವರ ಬಾಗಿಲ ತೋರಯ್ಯಾ. ಇವೆಲ್ಲವನೊಪ್ಪಿಸಿ ಜಂಗಮವೆನ್ನವರೆನ್ನವರೆಂಬವರ ಕೆರಹ ಹೊತ್ತಿರಿಸೆನ್ನನು, ಕೂಡಲಸಂಗಮದೇವಾ. 363
--------------
ಬಸವಣ್ಣ
ಅನ್ನದಾನಿ, ವಸ್ತ್ರದಾನಿ, ಹಿರಣ್ಯದಾನಿಗಳ ಮನೆಯ ಬಾಗಿಲ ಕಾದಿಪ್ಪರಯ್ಯಾ ಬಹುವಿಧದ ವೇಷಧಾರಿಗಳು. ``ವಯೋವೃದ್ಧಾಸ್ತಪೋವೃದ್ಧಾ ವೇದವೃದ್ಧಾ ಬಹುಶ್ರುತಾಃ ಸರ್ವೇ ತೇ ದಾನಿವೃದ್ಧಸ್ಯ ದ್ವಾರೇ ತಿಷ್ಠಂತಿ ಕಿಂಕರಾಃ _ಎಂದುದಾಗಿ ದೈನ್ಯವ ಬಿಟ್ಟಿಪ್ಪ ನಿರಾಭಾರಿಯ ತೋರಿ ಬದುಕಿಸಾ ಕೂಡಲಚೆನ್ನಸಂಗಮದೇವಾ
--------------
ಚನ್ನಬಸವಣ್ಣ
ಸದ್‍ಭಕ್ತರೇ ಎನ್ನ ತಂದೆ ತಾಯಿಗಳಯ್ಯ. ಸದ್‍ಭಕ್ತರೇ ಎನ್ನ ಬಂಧು ಬಳಗವಯ್ಯ. ಸದ್‍ಭಕ್ತರೇ ತಮ್ಮ ಒಕ್ಕುಮಿಕ್ಕುದನಿಕ್ಕಿ ಸಲಹಿದರಾಗಿ ಅಖಂಡೇಶ್ವರಾ, ನಾ ನಿಮ್ಮ ಕಡೆಯ ಬಾಗಿಲ ಕಾಯ್ವುದಕೆ ಯೋಗ್ಯನಾದೆನಯ್ಯ.
--------------
ಷಣ್ಮುಖಸ್ವಾಮಿ
ಹೊರವೇಷದ ವಿಭೂತಿರುದ್ರಾಕ್ಷಿಯನಳವಡಿಸಿಕೊಂಡು ವೇದಶಾಸ್ತ್ರ ಪುರಾಣ, ಪುರಾತರ ವಚನದ ಬಹುಪಠಕರು, ಅನ್ನದಾನ, (ಹೊನ್ನದಾನ), ವಸ್ತ್ರದಾನವನೀವನ ಬಾಗಿಲ ಮುಂದೆ ಮಣ್ಣಪುತ್ಥಳಿಯಂತಿಹರು ನಿತ್ಯನೇಮದ ಹಿರಿಯರು. ``ವಯೋವೃದ್ಧಾಸ್ತಪೋವೃದ್ಧಾ ವೇದವೃದ್ಧಾ ಬಹುಶ್ರುತಾಃ ಇತ್ಯೇತೇ ಧನವೃದ್ಧಸ್ಯ ದ್ವಾರೇ ತಿಷ್ಠಂತಿ ಕಿಂಕರಾಃ ಎಂಬ ಶ್ರುತಿ ದಿಟವಾಯಿತ್ತು. ಆ ಎಲ್ಲಾ ಅರಿವು?್ಳವರು ಲಕ್ಷ್ಮಿಯ ದ್ವಾರಪಾಲಕರಾದರು. ಅರಿವಿಂಗೆ ಇದು ವಿಧಿಯೆ ? ಕೂಡಲ ಚೆನ್ನಸಂಗಯ್ಯಾ ನೀ ಮಾಡಿದ ಮರಹು !
--------------
ಚನ್ನಬಸವಣ್ಣ
ಮುಖದಂತರದ ಬಾಗಿಲ ಮುಂದೆ ಸುಖ ತೃಪ್ತಿಯ ನಿಜದವತಾರವನರಿದು ನಿರ್ಮಲಾಕಾರವ ತಿಳಿದೆನಯ್ಯ. ತಿಳುಹಿನ ತಿಳುಹ ತಿಳಿದು ಬೆಳವಿಗೆಯ ಸುಖವನರಿದು ಬದುಕಿದೆನಯ್ಯ ಸಂಗಯ್ಯ.
--------------
ನೀಲಮ್ಮ
ಒಂಬತ್ತು ಬಾಗಿಲ ಮನೆಯೊಳಗೆ ತುಂಬಿಕೊಂಡಿಪ್ಪ ಮಹಾಲಿಂಗವ ಕಂಡೆನಯ್ಯ. ಆ ಲಿಂಗದ ಸಂಗದಿಂದ ನಾನುನೀನೆಂಬುದ ಮರೆದು ಅವಿರಳಸ್ವಾನುಭಾವಸಿದ್ಧಾಂತವನರಿತು ನಿರಂಜನದೇಶಕೆ ಹೋಗಿ ನಿರವಯವನೈದಿದ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಅಗಳೂ ಲೋಗರ ಮನೆಯ ಬಾಗಿಲ ಕಾಯ್ದುಕೊಂಡಿಪ್ಪವು ಕೆಲವು ದೈವಂಗಳು. ಹೋಗೆಂದಡೆ ಹೋಗವು, ನಾಯಿಗಿಂದ ಕರಕಷ್ಟ ಕೆಲವು ದೈವಂಗಳು. ಲೋಗರ ಬೇಡಿಕೊಂಡುಂಬ ದೈವಂಗಳು ತಾವೇನ ಕೊಡುವವು ಕೂಡಲಸಂಗಮದೇವಾ
--------------
ಬಸವಣ್ಣ
ಜಂಗಮ ಜಂಗಮವೆಂದು ನುಡಿದು, ಜಗದ ಹಂಗಿಗರಾಗಿ ಇರಲಾಗದು. ಜಗದ ಕರ್ತನ ಕೈಯಲ್ಲಿ ಹಿಡಿದುಕೊಂಡು ಜಂಗುಳಿಗಳ ಬಾಗಿಲ ಕಾಯಲಾಗದು. ಜಂಗಮದ ಸುಳುಹು ಎಂತಿರಬೇಕೆಂದರೆ, ತನ್ನ ನಂಬಿದ ಸಜ್ಜನರ ಸದ್ಭಕ್ತರಲ್ಲಿಗೆ ಲಿಂಗವಾಗಿ ಗಮಿಸಿ, ತಾ ಕಂಡ ಲಿಂಗಾಂಗವನು ಅಲ್ಲಿಯೇ ನಿಕ್ಷೇಪಿಸಿ, ತಾ ನಿರ್ಗಮನಿಯಾಗಿ ಸುಳಿಯಬಲ್ಲರೆ, ಜಂಗಮಲಿಂಗವದು ಇಂತಲ್ಲದೆ ಕಂಡವರ ಕಾಡಿ ಬೇಡಿಕೊಟ್ಟರೆ ಕೊಂಡಾಡಿ, ಕೊಡದಿದ್ದಡೆ ಜರಿದು, ತಾಗು ನಿರೋಧಕ್ಕೆ ಗುರಿಯಾಗಿ ನೋವುತ್ತ, ಬೇವುತ್ತ ಧಾವತಿಗೊಂಬ ಗಾವಿಲರ ಎಂತು ಜಂಗಮವೆಂಬೆ, ಬಸವಪ್ರಿಯ ಕೂಡಲಚೆನ್ನಬಸವಣ್ಣಾ?
--------------
ಹಡಪದ ಅಪ್ಪಣ್ಣ
ಯುಗ ಜುಗವ ಬಲ್ಲೆನೆಂಬವರು, ನಿಚ್ಚಕ್ಕೆ ನಿಚ್ಚ ಬಪ್ಪ ಚಿಕ್ಕುಟು ಸಾವನರಿಯರು. ಬಾಯ ಬಾಗಿಲ [ಉಲುಹು], ತಲೆಹೊಲದ ಹುಲ್ಲೊಣಗಿತ್ತು. ನಿಮ್ಮನುವಿನಲ್ಲಿರ್ದೆ ಕಾಣಾ ಗುಹೇಶ್ವರಾ
--------------
ಅಲ್ಲಮಪ್ರಭುದೇವರು
ಅಯ್ಯಾ, ನಾನು ಊರ ಮರೆದು ಆಡ ಹೋದಡೆ, ಒಕ್ಕಲು ಹೆಚ್ಚಿ ಸೊಕ್ಕಾಟ ಘನವಾಯಿತ್ತು. ಇದ ಕಂಡು ಊರ ಹೊಕ್ಕೆ, ಸ್ಥಾನದಲ್ಲಿ ನಿಂದೆ, ಒಂಬತ್ತು ಬಾಗಿಲ ಕದವನಿಕ್ಕಿದೆ. ಆ ಜ್ಞಾನಾಗ್ನಿಯ ಹೊತ್ತಿಸಲು, ಉರಿ ಎದ್ದಿತ್ತು, ಉಷ್ಣ ಊರ್ದ್ವಕ್ಕೇರಿತ್ತು. ತಲೆಯೆತ್ತಿ ನೋಡಲು, ಒಕ್ಕಲು ಓಡಿತ್ತು, ಊರು ಬಯಲಾಯಿತ್ತು. ಆ ಬಯಲನೆ ನೋಡಿ, ನಿರಾಳದೊಳಗಾಡಿ ಮಹಾಬೆಳಗನೆ ಕೂಡಿ, ಸುಖಿಯಾದರಯ್ಯಾ ನಮ್ಮ ಅಪ್ಪಣ್ಣಪ್ರಿಯ ಚೆನ್ನಬಸವಣ್ಣನ ಶರಣರು.
--------------
ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ
ಆದಿ ಅಪಾನದಲ್ಲಿ ಸೋಪಾನವಿಡಿದು ನಿಂದು ತಾಪತ್ರಯಂಗಳನಳಿದು ಸೊಂಪಾಗಿ ಲಿಂಗದೊಳಗಿಪ್ಪ ಬಾಗಿಲ ದಾಂಟಿ ಗಪ್ಪಾದನು ನೋಡಾ ಸ್ವಯಂಜ್ಯೋತಿಲಿಂಗದಲ್ಲಿ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಗ್ರಾಮಮಧ್ಯದ ಧವಳಾರದೊಳಗೆ ಎಂಟು ಕಂಬ, ಒಂಬತ್ತು ಬಾಗಿಲ ಶಿವಾಲ್ಯವಿರುತಿರಲು, ಮಧ್ಯಸ್ಥಾನದಲ್ಲಿದ್ದ ಸ್ವಯಂಭುನಾಥನನೇನೆಂದರಿಯರಲ್ಲಾ. ಕಲ್ಲಿನಾಥನ ಪೂಜಿಸಿ ಸ್ವಯಂಭುನಾಥನನೊಲ್ಲದೆ ಎಲ್ಲರೂ ಮರುಳಾದರು ನೋಡಾ. ಮೆಲ್ಲ ಮೆಲ್ಲನೆ ಸ್ವಯಂಭುನಾಥನು ತನ್ನ ತಪ್ಪಿಸಿಕೊಂಡು, ಕಲ್ಲಿನಾಥನ ತೋರಿದ. ಶಿವಾಲ್ಯದೊಳಗಣ ಮಧ್ಯಸ್ಥಾನವನರಿದು ಗರ್ಭಗೃಹವ ಹೊಕ್ಕಡೆ ಕಲ್ಲಿನಾಥ ನಾಸ್ತಿ. ಕೂಡಲಚೆನ್ನಸಂಗನೆಂಬ ಸ್ವಯಂಭು ಇರುತ್ತಿರಲು ಎತ್ತಲೆಂದರಿಯರಲ್ಲಾ.
--------------
ಚನ್ನಬಸವಣ್ಣ
ಬ್ರಹ್ಮವಿಷ್ಣುರುದ್ರಾದಿಗಳಿಲ್ಲದಂದು, ಈಶ್ವರಸದಾಶಿವ ಪರಶಿವರಿಲ್ಲದಂದು, ನಾದಬಿಂದುಕಲಾತೀತವಿಲ್ಲದಂದು, ಇಂತಿರ್ದ ಬ್ರಹ್ಮವು ತಾನೇ ನೋಡಾ! ಆ ಬ್ರಹ್ಮದ ಚಿದ್ವಿಲಾಸದಿಂದ ಒಬ್ಬ ಶಿವನಾದ. ಆ ಶಿವನಿಂಗೆ ವದನ ಒಂದು, ನಯನ ಮೂರು, ಹಸ್ತ ಆರು, ಮೂವತ್ತಾರು ಪಾದಂಗಳು. ಒಂಬತ್ತು ಬಾಗಿಲ ಮನೆಯೊಳಗೆ ಸುಳಿದಾಡುವ ಗಾರುಡಿಗನು. ಕಡೆಯ ಬಾಗಿಲ ಮುಂದೆ ನಿಂದು ನಾಗಸ್ವರದ ನಾದವ ಮಾಡಲು ಆ ನಾಗಸ್ವರವ ಕೇಳಿ ನಾಭಿಮಂಡಲದಿಂದ ಎದ್ದ ಸರ್ಪನು, ಸಪ್ತೇಳು ಸಾಗರಂಗಳ ದಾಂಟಿ, ಅಷ್ಟಕುಲಪರ್ವತಂಗಳ ದಾಂಟಿ, ಚತುರ್ದಶ ಭುವನಂಗಳ ಮೀರಿ ನಿಂದ. ಸರ್ಪನ ತಲೆಯ ಮೇಲೆ ಒಂದು ರತ್ನವಿಹುದು ನೋಡಾ! ಆ ರತ್ನದ ಬೆಳಗಿನೊಳಗೆ ಅನಂತಕೋಟಿ ಸೋಮಸೂರ್ಯರ ಬೆಳಗು ನೋಡಾ! ಒಂದು ಶಿವಾಲಯಕ್ಕೆ ಆರು ಕಂಬ, ಮೂರು ಮೇರುವೆ, ನಿಃಶೂನ್ಯವೆಂಬ ಕಳಸವನಿಕ್ಕಿ ಆ ಶಿವಾಲಯವ ನಿಜಬ್ರಹ್ಮಲಿಂಗವು ಕಾಯ್ದುಕೊಂಡಿರ್ಪುದು ನೋಡಾ! ಇದೇನು ವಿಚಿತ್ರವೆಂದು ನಿಶ್ಚಿಂತ ನಿರಾಳವಾಸಿಯಾದನಯ್ಯ ನಿಮ್ಮ ಶರಣನು ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಉಪಾಧಿ ಉಳ್ಳನ್ನಕ್ಕ ಗುರುವಲ್ಲ, ವೇಷವ ಹೊತ್ತು ಬಾಗಿಲ ಕಾಯುವನ್ನಕ್ಕ ಜಂಗಮವಲ್ಲ, ಶಕ್ತಿಸಮೇತವುಳ್ಳನ್ನಕ್ಕ ಲಿಂಗವಸ್ತುವಲ್ಲ. ಅದೆಂತೆಂದಡೆ: ಏತರಲ್ಲಿದ್ದಡೂ ಅಹಿಶರೀರವ ಬಲಿದು ತದ್ರೂಪ ಹಾಕಿದಂತಿರಬೇಕು. ಇದು ಅರಿವಿನ ಒಡಲು, ಸದಾಶಿವಮೂರ್ತಿಲಿಂಗದ ಇರವು.
--------------
ಅರಿವಿನ ಮಾರಿತಂದೆ
ಇನ್ನಷ್ಟು ... -->