ಅಥವಾ

ಒಟ್ಟು 39 ಕಡೆಗಳಲ್ಲಿ , 24 ವಚನಕಾರರು , 38 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಪ್ಪುವಿನ ಸಂಯೋಗದಿಂದ ಮೃತ್ತಿಕೆ ಮಡಕೆಯಾಗಿ, ಮತ್ತೆ ಅಪ್ಪುವಿನೊಡಗೂಡಿ ತುಂಬಲಿಕ್ಕಾಗಿ, ಮತ್ತಾ ಅಪ್ಪುವಿನ ದ್ರವಕ್ಕೆ ಮೃತ್ತಿಕೆ ಕರಗಿದುದಿಲ್ಲ. ಅದೇತಕ್ಕೆ ? ಅನಲ ಮುಟ್ಟಿದ ದೆಸೆಯಿಂದ. ಅದು ಕಾರಣ, ಇಂತೀ ವಸ್ತುವಿನ ದೆಸೆಯಿಂದ ಸತ್ಕ್ರಿಯಾಮಾರ್ಗಂಗಳು ಭವದ ತೊಟ್ಟುಬಿಟ್ಟವು. ಇಂತೀ ದೃಷ್ಟವನರಿದು ಸರ್ವಕ್ರೀಗಳೆಲ್ಲವೂ ವಸ್ತುವ ಮುಟ್ಟಲಿಕ್ಕಾಗಿ ಪೂರ್ವಗುಣ ತನ್ನಷ್ಟವಾಯಿತ್ತು, ಭೋಗಬಂಕೇಶ್ವರಲಿಂಗವನರಿದ ಕಾರಣ.
--------------
ಶ್ರೀ ಮುಕ್ತಿರಾಮೇಶ್ವರ
ಆತ್ಮ ತೇಜದಿಂದ ಹೋರುವ ಮಿಥ್ಯಾಭಾವಿಗೆ ನಿಜತತ್ವದ ಮಾತೇಕೆ? ವೇದ ಶಾಸ್ತ್ರ ಪುರಾಣ ಆಗಮಂಗಳಲ್ಲಿ ಬಲ್ಲವರಾದಡೆ ವಾದಕ್ಕೆ ಹೋರಿಹೆನೆಂಬ ಸಾಧನವೇಕೆ? ಇಷ್ಟನರಿವುದಕ್ಕೆ ದೃಷ್ಟ ಕುಸುಮ ಗಂಧದ ತೆರದಂತೆ; ಅನಲ ಅನಿಲನ ತೆರದಂತೆ; ಕ್ಷೀರ ನೀರಿನ ತೆರದಂತೆ; ಅದು ತನ್ನಲ್ಲಿಯೆ ಬೀರುವ ವಾಸನೆ. ನಾರಾಯಣಪ್ರಿಯ ರಾಮನಾಥನಲ್ಲಿ ಐಕ್ಯಾನುಭಾವಿಯಾದ ಶರಣ.
--------------
ಗುಪ್ತ ಮಂಚಣ್ಣ
ನಾನಾ ಭಾವದ ವ್ರತಂಗಳನರಿವಲ್ಲಿ ಎಚ್ಚರಿಕೆ ವ್ಯವಧಾನ ಮುಂತಾಗಿ ತಟ್ಟು-ಮುಟ್ಟು ತಾಗು-ಸೋಂಕುಗಳಲ್ಲಿ ಎಚ್ಚರಿಕೆ ಗುಂದದೆ, ನಡೆವಲ್ಲಿ, ಒಂದ ಕುರಿತು ನುಡಿವಲ್ಲಿ, ಲಕ್ಷಿಸಿ ಅರಿವಲ್ಲಿ ಧರೆ ಜಲ ಅನಲ ಅನಿಲಂಗಳಲ್ಲಿ ದೃಕ್ಕು ದೃಶ್ಯ ಏಕವಾಗಿ ವರ್ತಿಸಿ ನಡೆವುದು ಖಂಡಿತನ ವ್ರತ. ಆತ ಸಂದೇಹವಿಲ್ಲದ ನಿರಂಗ ಏಲೇಶ್ವರಲಿಂಗವು ತಾನೆ.
--------------
ಏಲೇಶ್ವರ ಕೇತಯ್ಯ
ವ್ಯಸನವುಳ್ಳನ್ನಕ್ಕ ಪ್ರಸಾದಿಯಲ್ಲ . ವಿಷಯವುಳ್ಳನ್ನಕ್ಕ ಪಾದೋದಕಸಂಬಂಧಿಯಲ್ಲ . ಭಾವವುಳ್ಳನ್ನಕ್ಕ ಭವವಿರಹಿತನಲ್ಲ , ಬಯಕೆಯುಳ್ಳನ್ನಕ್ಕ ಐಕ್ಯನಲ್ಲ . ಇಂತೀ ಐಕ್ಯಸ್ಥಲವೆಲ್ಲರಿಗೆಲ್ಲಿಯದೊ ? ಐಕ್ಯನಾದರೆ ಅನ್ನಪಾನಾದಿಗಳ ಇಚ್ಛೆ ನಿಂದು, ಅನಲ, ಪವನನ ಗುಣ ಕೆಟ್ಟು, ಆಕಾಶದ ಗುಣವರತು, ಆತ್ಮನೊಳು ಬೆರೆದವರ ಐಕ್ಯರೆಂಬೆ. ಆತ್ಮ ಅನಾತ್ಮನೊಳು ಅಡಗಿದರೆ ನಿರವಯಲನೆಂಬೆ. ಇಂತಪ್ಪ ಶರಣ ಬಯಲು ಬಯಲಾಗಿಪ್ಪನಲ್ಲದೆ, ವಿವರಿಸಿ ನೋಡಿದರೆ ಏನೆಂದರಿಯಬಾರದು, ಬಸವಪ್ರಿಯ ಕೂಡಲಚೆನ್ನಬಸವಣ್ಣಾ .
--------------
ಹಡಪದ ಅಪ್ಪಣ್ಣ
ಬಯಲೊಳಗಣ ಬಣ್ಣದಂತೆ, ನೀರಿನೊಳಗಣ ಸಾರದಂತೆ, ಅನಲ ಅನಿಲನ ಸಂಗದಿಂದ ಲಯವಾದ ಸಾಕಾರದಂತೆಯಿಪ್ಪಾತನಿರವು ಎಂತಿದ್ದಿತ್ತು, ಅಂತೆ ಇರಬಲ್ಲಡೆ ಆತ್ಮಯೋಗಸಂಬಂಧ. ಈ ಸಂಬಂಧದ ಸಮೂಹ ನಿಂದಲ್ಲಿ, ಕಂಡೆಹೆ, ಕಾಣಿಸಿಕೊಂಡೆಹೆನೆಂಬ ದಂದುಗ ನಿಂದಿತ್ತು, ಕಾಮಧೂಮ ಧೂಳೇಶ್ವರಾ.
--------------
ಮಾದಾರ ಧೂಳಯ್ಯ
ಭಕ್ತನ ಭಕ್ತಿ, ಮಹೇಶ್ವರನ ಮಾಹೇಶ, ಪ್ರಸಾದಿಯ ಪ್ರಸಾದಿ, ಪ್ರಾಣಲಿಂಗಿಯ ಪ್ರಾಣಲಿಂಗಿ, ಶರಣನ ಶರಣ, ಐಕ್ಯನ ಐಕ್ಯವೆಂಬಲ್ಲಿ ದೃಷ್ಟವಾವುದು ಹೇಳಿರಣ್ಣಾ ? ಘಟ ಬಿದ್ದಲ್ಲಿ ಆತ್ಮನೆಲ್ಲಿ ಅಡಗಿತ್ತು ಎಂಬುದನರಿದಲ್ಲಿ, ಭಕ್ತನ ಭಕ್ತಸ್ಥಲ. ಕೆಚ್ಚಲ ಕೊಯಿದು ಹಿಕ್ಕಿದಲ್ಲಿ ಅಮೃತವಿಪ್ಪೆಡೆಯ ಬಲ್ಲಡೆ, ಮಹೇಶ್ವರನ ಮಾಹೇಶ್ವರಸ್ಥಲ. ಇಂಗಳ ಕೆಡಿಸಿ ನಂದಿದಲ್ಲಿ ಆ ವಹ್ನಿಯ ಅಂಗವೆಲ್ಲಿ ಅಡಗಿತ್ತು ಎಂಬುದನರಿದಲ್ಲಿ, ಪ್ರಸಾದಿಯ ಪ್ರಸಾದಿಸ್ಥಲ. ರತ್ನದ ಶಿಲೆ ಒಡೆದು ಪುಡಿಯಾದಲ್ಲಿ ರತಿಯೆಲ್ಲಿ ಅಡಗಿತ್ತು ಎಂಬುದನರಿದಲ್ಲಿ, ಪ್ರಾಣಲಿಂಗಿಯ ಪ್ರಾಣಲಿಂಗಿಸ್ಥಲ. ವಾಸನೆಯ ಕುಸುಮವ ಹೊಸೆದು ವಾಸನೆ ಹೋಗಿ, ಆ ಸುವಾಸನೆ ಅಡಗಿತ್ತೆಂಬುದನರಿದಲ್ಲಿ, ಶರಣನ ಶರಣಸ್ಥಲ. ಅನಲ ಆಹುತಿಗೊಂಡು ಬೇವಲ್ಲಿ ಆ ಭಾವವ ಭಾವಿಸಬಲ್ಲಡೆ, ಐಕ್ಯನ ಐಕ್ಯಸ್ಥಲ. ಇಂತೀ ಆರು ಸ್ಥಲದ ಭೇದವನರಿತು, ಮೂರು ಆರಾದ ಉಭಯವ ಕಂಡು, ಇಂತೀ ಆರರೊಳಗೆ ಆರಾದ ಭೇದವ ಭಾವಿಸಿ ತಿಳಿದು, ಮುಕುರದೊಳಗಣ ಬಿಂಬವ ಪ್ರತಿಬಿಂಬಿಸಿ ಕಾಬುದು, ಒಂದೋ, ಎರಡೋ ? ಎಂಬುದ ತಿಳಿದಲ್ಲಿ, ಸರ್ವಸ್ಥಲ ಸಂಪೂರ್ಣ. ಆತ ಸರ್ವಾಂಗಲಿಂಗಿ ಐಕ್ಯಾನುಭಾವಿ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಶೀಲ ವ್ರತ ನೇಮ ನಿತ್ಯವ ಹಿಡಿದು ಬಿಡುವ ಕಳ್ಳುಗುಡಿಗಳಿರಾ ನೀವು ಕೇಳಿರೊ. ಹಿಡಿದು ಬಿಡಲಿಕ್ಕೆ ವಿಶ್ವಕರ್ಮನ ಕೈಯ ಇಕ್ಕುಳವೆ ವ್ರತ ? ಬ್ರಹ್ಮಪಿಶಾಚಿಯೆ ಹಿಡಿದು ಬಿಡಲಿಕ್ಕೆ ವ್ರತ ? ರವಿ ಶಶಿಯ ಗ್ರಹಣವೆ ಹಿಡಿದು ಬಿಡಲಿಕ್ಕೆ ವ್ರತ ? ಕಲೆವಿದಿಯೆ ಹಿಡಿದುಬಿಡಲಿಕ್ಕೆ ವ್ರತ ? ಇದಲ್ಲ ನಿಲ್ಲು ನಿಲ್ಲು ಮಾಣು. ಹಿಡಿಯಬೇಕಾದರೆ ಸರ್ಪ ವೃಶ್ಚಿಕ ಅನಲ ಅಸಿಯಾದರೆಯು ಹಿಡಿದಹರೆ ಹಿಡಿಯಬೇಕು, ದೃಢಭಕ್ತಿಯಿದಲ್ಲಾ. ಕಳ್ಳುಗುಡಿ ಕುಡಿದು ಕುಣಿಕುಣಿದಾಡಿ ಬಿಡುವ ಹಾಗೆ ಬಿಡುವ ತುಡುಗುಣಿ ಹೊಲೆಯರ ಮುಖವ ನೋಡಬಾರದು ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ ಶಿವಸಾಕ್ಷಿಯಾಗಿ.
--------------
ಕುಷ್ಟಗಿ ಕರಿಬಸವೇಶ್ವರ
ಜಲ ಅನಲ ಮಣ್ಣು ಕೂಡಿ ಬಲಿದ ಮತ್ತೆ ಜಲ ಅನಲನಿಗುಂಟೆ ? ಕ್ರೀವ್ಯಾಪಾರ ಜ್ಞಾನವ ಕೂಡಿದ ಮತ್ತೆ ಪ್ರಳಯ ಉಂಟೆ ? ಹಾಕಿದೆ ಮುಂಡಿಗೆಯ, ಶಿವನಾಣೆ, ನಿಃಕಳಂಕ ಮಲ್ಲಿಕಾರ್ಜುನನಲ್ಲಿ ಸತ್ಯವಂತರೆತ್ತಿರಣ್ಣಾ.
--------------
ಮೋಳಿಗೆ ಮಾರಯ್ಯ
ಪೃಥ್ವಿಯ ಗುಣವ ಅಪ್ಪು ನುಂಗಿತ್ತಾಗಿ, ಪೃಥ್ವಿಯ ಗುಣವಿಲ್ಲ. ಅಪ್ಪುವಿನ ಗುಣವ ಅನಲ ನುಂಗಿತ್ತಾಗಿ, ಅಪ್ಪುವಿನ ಗುಣವಿಲ್ಲ. ಅನಲನ ಗುಣವ ಅನಿಲ ನುಂಗಿತ್ತಾಗಿ, ಅನಲನ ಗುಣವಿಲ್ಲ. ಅನಿಲನ ಗುಣವ ಆಕಾಶ ನುಂಗಿತ್ತಾಗಿ, ಆನಿಲನ ಗುಣವಿಲ್ಲ ಅನಿಲನ ಗುಣವ ತನ್ನನೆ ನುಂಗಿತ್ತಾಗಿ, ಆಕಾಶದ ಗುಣವಿಲ್ಲ. ಆಕಾಶದ ಗುಣವ ತನ್ನ ತನ್ನನೆ ನುಂಗಿತ್ತಾಗಿ, ಆಕಾಶದ ಗುಣವಿಲ್ಲ. ಇದು ಕಾರಣ, ಐದರ ಗುಣದಲ್ಲಿ ಅರ್ಪಿಸಿ, ಮುಕ್ತಿಯ ಕಂಡೆಹೆನೆಂಬ ನಿಷೆ* ನಿನಗೆಲ್ಲಿಯದೊ? ಹೊಯ್ದಿರಿಸಿದ ಹೊಯ್ಗಲದಂತೆ ಭೋಗಿಸಿಹೆನೆಂದಡೆ ಕರ್ತೃತ್ವವಿಲ್ಲ. ದರುಶನವ ಹೊತ್ತು ಹೊತ್ತು ತಿರುಗುವುದಕ್ಕಲ್ಲದೆ, ಜ್ಞಾನಕ್ಕೆ ಸಂಬಂಧಿಗಳಲ್ಲ. ಐದರ ಗುಣವಡಗಿ, ಮೂರರ ಗುಣ ಮುಗಿದು, ಆರರ ಗುಣ ಹಾರಿ, ಎಂಟರ ಗುಣದ [ನೆ]ಂಟತನವ ಬಂಧಿಸಿ, ತೋರುವುದಕ್ಕೆ ಮುನ್ನವೆ ಮನ ಜಾರಿ ನಿಂದ ಮತ್ತೆ ಮೀರಲಿಲ್ಲವಾಗಿ, ಸ್ವಯ ಚರ ಪರ ತ್ರಿವಿಧವನರಿದು ಹೊರಗಾಗಿ, ಮೂರು ಮಾಟದ ಬೆಡಗನರಿದು ವಿಚಾರಿಸದೆ, ಉದರ ಘಾತಕತನಕ್ಕೆ ಹೊಟ್ಟೆಹೊರಕರೆಲ್ಲ ಜಂಗಮವೆ ? ಅಂತಲ್ಲ, ನಿಲ್ಲಿರಣ್ಣಾ. ನೀವೆ ಲಿಂಗ ಜಂಗಮವಾಗಬಲ್ಲಡೆ ನಾನೆಂಬುದ ವಿಚಾರಿಸಿಕೊಳ್ಳಿರಣ್ಣಾ. ನೀವು ಪೂಜೆಯ ಮಾಡಿಸಿಕೊಂಬುದಕ್ಕೆ ವಿವರ: ಪೂಜೆಯ ಮಾಡುವ ಭಕ್ತಂಗೆ, ಭಾರಣೆಯ ವಿದ್ಯವ ಹೊತ್ತ ವಿಧಾತೃನಂತಿರಬೇಕು. ಜಲವ ನಂಬಿದ ಜಲಚರದಂತಿರಬೇಕು, ಆಡುವ ಪಶುವಿನ ಲಾಗಿನಂತಿರಬೇಕು. ಇಂತಿವನೆಲ್ಲವಂ ಕಳೆದುಳಿದು, ಆ ಚರಲಿಂಗಮೂರ್ತಿ ತಾನಾಗಿ ನಿಂದಾತನೆ ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಧರೆಯಾಕಾಶವಿಲ್ಲದಂದು, ಅನಲ ಪವನ ಜಲ ಕೂರ್ಮರಿಲ್ಲದಂದು, ಚಂದ್ರಸೂರ್ಯರೆಂಬವರು ಕಳೆದೋರದಂದು, ಆತ್ಮಸ್ಥಲ ಅನುಭಾವಕ್ಕೆ ಬಾರದಂದು, ನಿತ್ಯನಿಜಲಿಂಗವ ಬಲ್ಲರಾರಯ್ಯ ನೀವಲ್ಲದೆ ? ಮಹಾಘನಕ್ಕೆ ಘನವಾಹನವಾಗಿ, ಅಗಮ್ಯಸ್ಥಾನದಲ್ಲಿ ನಿಂದು ಭರಿತರಾಗಿರಬಲ್ಲರಾರಯ್ಯಾ ನೀವಲ್ಲದೆ ? ನಿಮ್ಮ ಒಕ್ಕು ಮಿಕ್ಕ ಶೇಷಪ್ರಸಾದದ ಕಾರುಣ್ಯದ ಶಿಶುವಾಗಿ ಒಡಲೊಳಗೆ ಇದ್ದಲ್ಲಿ ವಿಭೂತಿ ಪಟ್ಟವ ಕಟ್ಟಿ, ಹಸ್ತಮಸ್ತಕಸಂಯೋಗವ ಮಾಡಿ ಎನ್ನನುಳುಹಿದರಾರಯ್ಯ ನೀವಲ್ಲದೆ ? ಕೂಡಲಚೆನ್ನಸಂಗಮದೇವರ ಸಾಕ್ಷಿಯಾಗಿ ನಾನು ನಿಮ್ಮ ಕರುಣದ ಕಂದನೆಂಬುದ ಮೂರುಲೋಕ ಬಲ್ಲುದು ಕಾಣಾ ಸಂಗನಬಸವಣ್ಣ.
--------------
ಚನ್ನಬಸವಣ್ಣ
ಧರೆ ಜಲ ಅನಲ ಅನಿಲ ಇವು ಮುಂತಾದುವಕ್ಕೆ ಅಳಿವುದಕ್ಕೆ ಉಳಿವುದಕ್ಕೆ ಆತ್ಮಭೇದವಾವುದು ? ಶ್ರುತಿ ಮುಂತಾದ ತರ್ಕಂಗಳಿಂದ ಹೊತ್ತು ಹೋರಿಹೆನೆಂದಡೆ ರಥದ ಕೀಲಿನಂತೆ ಮಾತಿಗೆ ಮಾತುಂಟು. ಪೃಥ್ವಿಯ ಮೇಲಣ ನದಿ ತಟಾಕ ಅಪ್ಪುಮಯವೆಲ್ಲವು ಸಿಂಧುವಿನ ತಪ್ಪಲಿಗೆ ಎಯ್ದುವಂತೆ ಇದು ವಸ್ತುಮಯದ ಹಾಹೆ. ಈ ಗುಣ ಏಕವಸ್ತುವಿನ ನಿಜ. ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗವಲ್ಲದಿಲ್ಲಾ ಎಂಬ ಮುಂಡಿಗೆ.
--------------
ಪ್ರಸಾದಿ ಭೋಗಣ್ಣ
ಅಪ್ಪುಮಯ ಬಲಿದು, ಜಗ ಸಾಕಾರವಾಗಿ ನಿಂದಲ್ಲಿ, ಧರೆ ಸಲಿಲ ಅನಲ ಕುರುಹಾಗಿ ನಿಂತಿತ್ತು. ಅವು ನಿಳಯಾಂತವಾಗಿ ವಾಯು ಘಟಿಸಿತ್ತು. ಇಂತಿವು ಪಂಚಬ್ರಹ್ಮಮೂರ್ತಿ ಐಘಟವಾಯಿತ್ತು, ಇಂತಿವು ಪ್ರಳಯಕ್ಕೊಳಗೆಂದು ಹೊರಗಾಗಿ ನಿಂದ, ಐಘಟದೂರ ರಾಮೇಶ್ವರಲಿಂಗ.
--------------
ಮೆರೆಮಿಂಡಯ್ಯ
ಚಂದ್ರಕಾಂತದ ಶಿಲೆಯಲ್ಲಿ ಬಿಂದುವಿದ್ದಡೆ ಹಿಂಡಿ ಹಿಳಿದಡೆ ಬಂದುದುಂಟೆ ಆ ಬಿಂದು ? ವರುಣ ಶಿಲೆಯಲ್ಲಿ ಉರುಹಿ ನೋಡಲಿಕ್ಕೆ ಉರಿದುದುಂಟೆ ಅನಲ ? ಅವು ತಮ್ಮ ಒಲವರದ ಸಾಮ್ಯಕ್ಕಲ್ಲದೆ ಫಲಿಸುವುದಿಲ್ಲ. ಇಂತೀ ತೆರದಂತೆ ಕ್ರೀ ಜ್ಞಾನ ಎಲ್ಲವ ಬಲ್ಲೆನೆಂದು ಅಡ್ಡವಾಯ್ದು ಅಲ್ಲಲ್ಲಿ ನುಡಿದಡೆ ನಿಜವಸ್ತು ಸಲ್ಲೀಲೆಯಲ್ಲಿಪ್ಪನೆ ? ಶ್ರದ್ಧೆ ಸನ್ಮಾರ್ಗಿಗಳಲ್ಲಿಯಲ್ಲದೆ ಗೆಲ್ಲಗೂಳಿಗಳಲ್ಲಿಯಿಲ್ಲ. ಸಂಗನಬಸವಣ್ಣ ಸಾಕ್ಷಿಯಾಗಿ ಬ್ರಹ್ಮೇಶ್ವರಲಿಂಗವು ಅವರಲ್ಲಿ ಇಲ್ಲವಾಗಿ
--------------
ಬಾಹೂರ ಬೊಮ್ಮಣ್ಣ
ಶ್ರೀಗುರು ಶಿಷ್ಯಂಗೆ ಕರುಣದಿಂದ ಉಪದೇಶವ ಮಾಡಬೇಕೆಂದು ಬಂದು, ಮೂರ್ತಿಗೊಂಡು, ಆ ಶಿಷ್ಯನ ಪೂರ್ವಜನ್ಮವಂ ಕಳೆದು, ಪುನಜಾರ್ತನೆಂದೆನಿಸಿ, ಹಸ್ತಮಸ್ತಕಸಂಯೋಗವಂ ಮಾಡಿ, ವಿಭೂತಿಯ ಪಟ್ಟಮಂ ಕಟ್ಟಿ, ಕಿವಿಯಲ್ಲ ಕರ್ಣಮಂತ್ರಮಂ ಹೇಳಿ, ಮಾಂಸಪಿಂಡವಂ ಕಳೆದು, ಮಂತ್ರಪಿಂಡವಂ ಮಾಡಿ, ಸರ್ವಾಂಗದವಗುಣವಂ ಕಳೆದು, ಆ ಶಿಷ್ಯಂಗೆ ಉಪದೇಶವ ಮಾಡಿದ ಪರಿಯೆಂತೆಂದಡೆ: ಆದಿಲಿಂಗ ಅನಾದಿಲಿಂಗ ಪರುಷಲಿಂಗ ಅಮೃತಲಿಂಗ ಅಗೋಚರಲಿಂಗ ಅಪ್ರತಿಮಲಿಂಗ ಅನಾಮಯಲಿಂಗ ಅಭೇದ್ಯಭೇದಕಲಿಂಗ, ಅಸಾಧ್ಯಸಾಧಕಲಿಂಗ, ಇಂತಪ್ಪ ಲಿಂಗಾಕಿಂತವ ಕೊಂಡು, ಒಂದು ಇಷ್ಟಲಿಂಗವಂ ಮಾಡಿ, ಆ ಶಿಷ್ಯನ ಹಸ್ತದಲ್ಲಿ ನಿಕ್ಷೇಪವಂ ಮಾಡಿದನು ಮಹಾಶ್ರೀಗುರು. ಆ ಲಿಂಗ ಬಂದು, ಆ ಶಿಷ್ಯನ ಅಂಗವ ಸೋಂಕವ ಮುನ್ನವೆ, ಆ ಲಿಂಗ ಆ ಶಿಷ್ಯನನವಗ್ರಹಿಸಿತ್ತಯ್ಯ. ಆ ಶಿಷ್ಯನು ಆ ಗುರುವಿನ ಹಸ್ತದಲ್ಲಿ ಉಪದೇಶವಾಗದ ಮುನ್ನವೆ, ಆ ಶ್ರೀಗುರುವನು ಆ ಶಿಷ್ಯನವಗಹ್ರಿಸಿಕೊಂಡ ನೋಡಿರಯ್ಯಾ. ಅಂಗಸಂಗಿಗಳು ಹೋಗಿ ಲಿಂಗಂಸಂಗಿಗಳ ಸಂಗವ ಮಾಡಿಹೆನೆಂದು ಹೋದಡೆ, ಅಂಗಸಂಗಿಗಳ ಲಿಂಗಸಂಗಿಗಳು ಅವಗ್ರಹಿಸಿಕೊಂಡರು ನೋಡಿರಯ್ಯಾ. ಪರಿಮಳವುಳ್ಳ ಪುಷ್ಪಕ್ಕೆ ತುಂಬಿ ಬಂದು, ಪರಿಮಳವ ಕೊಂಡೆಹೆನೆಂದು ಹೋದಡೆ, ಆ ಪರಿಮಳವುಳ್ಳ ಪುಷ್ಪ ಆ ತುಂಬಿಯನವಗ್ರಹಿಸಿಕೊಂಡಿತ್ತು ನೋಡಿರಯ್ಯಾ. ಅನಲ ಸಂಗವ ವಾಯು ಮಾಡಿಹೆನೆಂದು ಹೋದಡೆ, ಆ ಅನಲನು ವಾಯುವನವಗ್ರಹಿಸಿಕೊಂಡಿತ್ತು ನೋಡಿರಯ್ಯಾ. ರೂಪು ದರ್ಪಣವ ರೂಹಿಸಿಹೆನೆಂದು ಹೋದಡೆ, ಆ ದರ್ಪಣ ಆ ರೂಪನವಗ್ರಹಿಸಿಕೊಂಡಿತ್ತು ನೋಡಿರಯ್ಯಾ. ಕಂಗಳು ಕರಸ್ಥಲದ ಲಿಂಗವ ನೋಡಿಹೆನೆಂದು ಹೋದಡೆ ಆ ಕರಸ್ಥಲದ ಲಿಂಗ ಆ ಕಂಗಳ ನುಂಗಿದ ಪರಿಯ ನೋಡಿರಯ್ಯಾ. ಸರ್ವಾಂಗಸಾಹಿತ್ಯ ಮಹಾಲಿಂಗೈಕ್ಯರ ಸಂಗವ, ನಾನು ಮಾಡಿಹೆನೆಂದು ಹೋದಡೆ, ಉರಿಯುಂಡ ಕರ್ಪುರದಂತೆ ಎನ್ನನವಗ್ರಹಿಸಿಕೊಂಡರು ಕಾಣಾ, ಶುದ್ಧ ಸಿದ್ಧ ಪ್ರಸಿದ್ಧ ಪ್ರಸನ್ನ ಪ್ರಭುವೆ ಶಾಂತಚೆನ್ನಮಲ್ಲಿಕಾರ್ಜುನದೇವಯ್ಯಾ, ನಿಮ್ಮ ಶರಣರ ನಾನು ನಂಬಿ ಕೆಟ್ಟು, ಬಟ್ಟಬಯಲಾಗಿ ಹೋದೆನಯ್ಯಾ, ನಿಮ್ಮ ಧರ್ಮ ನಿಮ್ಮ ಧರ್ಮ ನಿಮ್ಮ ಧರ್ಮ ನಿಮ್ಮ ಧರ್ಮ.
--------------
ಮರುಳಶಂಕರದೇವ
ಹುತ್ತದಲ್ಲಿ ಕೈಯನಿಕ್ಕಿ ಸರ್ಪನ ತೆಗೆವಾಗ, ಸರ್ಪನ ಒಪ್ಪತಪ್ಪಿ, ಮತ್ತೆ ವಸ್ತುವಿನ ನೇವಳ ಆಭರಣವಹಲ್ಲಿ, ಅದಾರ ದೃಷ್ಟ ? ಮತ್ತೆ ನಿರ್ಧನಿಕ ವಿಶ್ವಾಸದಿಂದ ಬಸವಣ್ಣ ಮುಂತಾದ ಲಕ್ಷದ ಮೇಲೆ ತೊಂಬತ್ತಾರುಸಾವಿರ ಜಂಗಮಕ್ಕೆ ಕೃತ್ಯ ತಪ್ಪದೆ ಇಕ್ಕುವಾಗ ಅದಾರ ವಿಶ್ವಾಸ ಹೇಳಾ ? ನಾ ಹೊತ್ತ ಕಟ್ಟಿಗೆಯ ಸರಬು ಮತ್ತೆ ಸುವರ್ಣದಂಡವಾದಾಗ ಆದಾರ ನಿಶ್ಚಯದ ವಿಶ್ವಾಸ ? ಅವು ತಮ್ಮ ಚಿತ್ತದ ದೃಢತೆಯಿಂದ ಗುರುವಿಂಗೆ ತನುವೆಂದಲ್ಲಿ, ಕಂಡಲ್ಲಿಯೆ ಆತ್ಮತೇಜವಳಿದು ಹೊಡೆಗೆಡೆಯಬೇಕು. ಲಿಂಗಕ್ಕೆ ಮನ ಮುಟ್ಟಿ ಪೂಜೆಯ ಮಾಡುವಲ್ಲಿ, ರಾಜ ಚೋರ ಅನಲ ಅಹಿ ಮುಂತಾದ ಭಯಂಗಳಿಗೆ ತಲೆದೋರದಿರಬೇಕು. ಜಂಗಮಾರ್ಚನೆಯ ಮಾಡುವಲ್ಲಿ, ಅರ್ಥ ಪ್ರಾಣ ಅಪಮಾನಕ್ಕೆ ಕಟ್ಟುಮೆಟ್ಟದಿರಬೇಕು. ಇಂತೀ ತ್ರಿವಿಧ ವಿಶ್ವಾಸ ಭಕ್ತಂಗೆ ಮೂರುಸ್ಥಲ ಮುಂತಾಗಿ, ಆರುಸ್ಥಲವೊಳಗಾಗಿ ನೂರೊಂದುಸ್ಥಲ ವೇಧಿಸಿ ನಿಂದಲ್ಲಿ, ಅದು ಒಂದೆ ವಿಶ್ವಾಸದ ಒಡಲು. ಇದಕ್ಕೆ ಹಲವು ಮಾತನಾಡಿ, ನಾನಾಸ್ಥಲ ಉಂಟೆಂದು ಹಲಬುತ್ತಿರಲಿಲ್ಲ. ಇದು ನೆಲೆ, ವಸ್ತುವಿನ ಏಕಸ್ಥಲ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಇನ್ನಷ್ಟು ... -->