ಅಥವಾ

ಒಟ್ಟು 30 ಕಡೆಗಳಲ್ಲಿ , 17 ವಚನಕಾರರು , 27 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗುರುಕಾರುಣ್ಯವ ಪಡೆದು ಲಿಂಗದೊಳವಗ್ರಾಹಕನಾಗದೆ, ಅಂಗಲಿಂಗ, ಪ್ರಾಣಲಿಂಗ, ಆತ್ಮಲಿಂಗಸಂಬಂಧದ ವಿಚಾರವಿಲ್ಲದೆ ಬರಿಯ ಜ್ಞಾನಯೋಗವೆಂಬ ಶೂನ್ಯದನುಭಾವಿಗೆ ಗುರುಭಕ್ತಿ ಇಲ್ಲ, ಗುರುಭಕ್ತಿ ಇಲ್ಲವಾಗಿ ಲಿಂಗಭಕ್ತಿ ಇಲ್ಲ, ಲಿಂಗಭಕ್ತಿಯಿಲ್ಲವಾಗಿ ಜಂಗಮಭಕ್ತಿ ಇಲ್ಲ, ಜಂಗಮಭಕ್ತಿ ಇಲ್ಲವಾಗಿ ಪ್ರಸಾದವಿಲ್ಲ, ಪ್ರಸಾದಪ್ರಸನ್ನವಿಲ್ಲವಾಗಿ ಮೋಕ್ಷವಿಲ್ಲ. ಇದು ಕಾರಣ, ಸದ್ಗುರು ಸಿದ್ಧಸೋಮನಾಥನಲ್ಲಿ ಗುರುಕರಜಾತರಾದ ಲಿಂಗಾಂಗಸಂಬಂಧಿಗಳಪೂರ್ವವಯ್ಯಾ ಪ್ರಭುವೆ.
--------------
ಅಮುಗಿದೇವಯ್ಯ
ಹಿಂದೆ ಗುರುಭಕ್ತಿ ಲಿಂಗಪೂಜೆ ಜಂಗಮದಾಸೋಹವನರಿಯದ ಕಾರಣ ಮುಂದೆ ಹುಟ್ಟುಗುರುಡನಾಗಿ ಕುಂಟನಾಗಿ ಕುಬ್ಜನಾಗಿ ನಪುಂಸಕನಾಗಿ ದರಿದ್ರನಾಗಿ ಕುಲಹೀನನಾಗಿ ದೇಶಗೇಡಿಯಾಗಿ ಬಹುರೋಗಿಯಾಗಿ ಮಹಾದುಃಖವಂಬಡುತಿರ್ಪರು ನೋಡಾ ಅಖಂಡೇಶ್ವರಾ ನಿಮ್ಮನರಿಯದ ಮನುಜರು.
--------------
ಷಣ್ಮುಖಸ್ವಾಮಿ
ಆವ ಭಕ್ತಿ ಸನ್ಮಾರ್ಗದಲ್ಲಿ ನಡೆವಲ್ಲಿ ಭಕ್ತಂಗೆ ಗುರುಭಕ್ತಿ, ಮಾಹೇಶ್ವರಂಗೆ ಲಿಂಗಭಕ್ತಿ, ಪ್ರಸಾದಿಗೆ ಜಂಗಮಭಕ್ತಿ, ಪ್ರಾಣಲಿಂಗಿಗೆ ಸರ್ವ ಅವಧಾನ, ಶರಣಂಗೆ ಪರಿಪೂರ್ಣತ್ವ, ಐಕ್ಯಂಗೆ ಇಂತೀ ಐದು ಗುಣಲೇಪ. ಆರೆಂಬುದ ಮೀರಿ ತೋರಿದಲ್ಲಿ ಷಡುಸ್ಥಲ ಶುದ್ಧ ಸಂಗನಬಸವಣ್ಣಪ್ರಿಯ ಬ್ರಹ್ಮೇಶ್ವರಲಿಂಗದಾಟ.
--------------
ಬಾಹೂರ ಬೊಮ್ಮಣ್ಣ
ಶ್ರೀಗುರುವಿನ ಸಂದರ್ಶನಕ್ಕೆ ಹೋದಲ್ಲಿ ಮೂರ್ತಿಧ್ಯಾನದಿಂದ ಮಹಾಪ್ರಸಂಗವ ಮಹಾಪ್ರಸಾದವೆಂದು ಕೈಕೊಂಡು, ಆ ಗುಣ ಗುರುಭಕ್ತಿ ಸಾಧನ, ಶಿವಲಿಂಗ ಪೂಜೆಯ ಮಾಡುವಲ್ಲಿ ಪರಾಕು ಪರಿಭ್ರಮಣ ಪ್ರಕೃತಿಭಾವ ಪಗುಡಿ ಪರಿಹಾಸಕರ ವಾಗ್ವಾದಿಗಳ ಕೂಡದೆ ಕಂಗಳಲ್ಲಿ ಹೆರೆಹಿಂಗದೆ, ಭಾವದಲ್ಲಿ ಬೈಚಿಟ್ಟುಕೊಂಡು ಹೆರೆಹಿಂಗದಿರವು ಶಿವಲಿಂಗಪೂಜಕನ ಭಾವ ಜಂಗಮ ಸೇವೆಯ ಮಾಡುವಲ್ಲಿ ಇಷ್ಟ ಕಾಮ್ಯ ಮೋಕ್ಷಂಗಳನರಿತು ಆಶನ ವಿಷಯ ರೋಷ ಆಸಕರನರಿತು ವರ್ಮಕ್ಕೆ ವರ್ಮ, ಧರ್ಮಕ್ಕೆ ಮುಕ್ತಿ, ವೈಭವಕ್ಕೆ ಖ್ಯಾತಿ ಲಾಭಂಗಳನರಿತು ಮಾಡಿದ ದ್ರವ್ಯ ಕೇಡಿಲ್ಲದಂತೆ ಅಡಗಿಪ್ಪುದು ಜಂಗಮಭಕ್ತಿ; ಇಂತೀ ತ್ರಿವಿಧಭಕ್ತಿಯಲ್ಲಿ ನಿರತ ಸ್ವಯ ಸನ್ನದ್ಧನಾಗಿಪ್ಪ ಭಕ್ತನ ಪಾದದ್ವಯವೆ, ಗೋಪತಿನಾಥ ವಿಶ್ವೇಶ್ವರಲಿಂಗವಿಪ್ಪ ಸಜ್ಜಾಗೃಹ.
--------------
ತುರುಗಾಹಿ ರಾಮಣ್ಣ
ಪರಧನವ ಹಿಡಿಯದೆ, ಪರಸ್ತ್ರೀಯರ ಮುಟ್ಟದೆ, ಪರದೈವವ ಪೂಜಿಸದೆ, ಪರಹಿಂಸೆಯ ಮಾಡದೆ, ಪರಲೋಕದ ಫಲಪದವ ಬಯಸದೆ, ಪರನಿಂದೆಯ ಕೇಳದೆ, ಗರ್ವಾಹಂಕಾರದಲ್ಲಿ ಬೆರೆಯದೆ, ಕರಣಾದಿ ಗುಣಂಗಳಲ್ಲಿ ಹರಿಯದೆ, ಗುರುಭಕ್ತಿ ಲಿಂಗಪೂಜೆ ಜಂಗಮದಾಸೋಹವ ಮರೆಯದೆ, ಸತ್ಯಸದಾಚಾರವ ತೊರೆಯದೆ, ಸರ್ವಾಚಾರಸಂಪನ್ನನಾದ ಮಹಾತ್ಮನೆ ಅನಾದಿಗುರುಪಟ್ಟಕ್ಕೆ ಯೋಗ್ಯನು. ಆ ಮಹಾತ್ಮನೆ ಪರಮಘನಲಿಂಗದೇವರೆಂಬೆನು ಆ ಮಹಾತ್ಮನೆ ಭವಕೆ ಘನವಾದ ಮಹಾಘನ ಪರಶಿವಮೂರ್ತಿಯೆಂಬೆನಯ್ಯಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ದಶಪಂಚಮಾಯಾಟಲನುರುಹಿ, ಪಂಚಾಚಾರವೇ ಪ್ರಾಣವಾಗಿ, ಕಾಯದ ಕರ್ಮಕತ್ತಲೆಯ ಪರಿಸಿ, ಅಷ್ಟಾವರಣವೇ ಅಂಗವಾಗಿ, ಗುರುಭಕ್ತಿ, ಲಿಂಗಪೂಜೆ ಜಂಗಮದಾಸೋಹವೆ ಮಹಾನುಭಾವವಾದ ಘನಮಹಿಮನೆ, ಮಹಾಮಹೇಶ್ವರ ಕಾಣಾ ಗುರುನಿರಂಜನ ಚನ್ನಬಸವಲಿಂಗ.
--------------
ದೇಶಿಕೇಂದ್ರ ಸಂಗನಬಸವಯ್ಯ
ಅಂಗಲಿಂಗ ನಿಜಸಂಬಂಧವನ್ನುಳ್ಳ ನಿಜವೀರಶೈವ ಸಂಪನ್ನರಾದ ಭಕ್ತಜಂಗಮಕೆ ಗುರುವೊಂದು ಲಿಂಗವೊಂದು ಜಂಗಮವೊಂದು, ಪಾದೋದಕವೊಂದು, ಪ್ರಸಾದವೊಂದು ಸತ್ಯ ಸದಾಚಾರ ಸತ್ಕ್ರೀಸಮ್ಯಜ್ಞಾನಯುಕ್ತವಾದ ಸದ್‍ಭಕ್ತಿ ಒಂದಲ್ಲದೇ ಭಿನ್ನವುಂಟೆ ? ಇಲ್ಲವಾಗಿ. ಇದು ಕಾರಣ ಭಕ್ತ ಜಂಗಮಕ್ಕೆ ಸತ್ಯ ಸರ್ವಜ್ಞಾನಯುಕ್ತವಾದ ಗುರುಭಕ್ತಿ ಒಂದಲ್ಲದೇ ಭಿನ್ನವುಂಟೆ ? ಇಲ್ಲವಾಗಿ. ಇದು ಕಾರಣ ಭಕ್ತ ಜಂಗಮಕ್ಕೆ ಸತ್ಯ ಸರ್ವಜ್ಞಾನಯುಕ್ತವಾದ ಗುರುಭಕ್ತಿ ಲಿಂಗನಿಷಾ*ವಧಾನ ಜಂಗಮವಿಶ್ವಾಸ ಪ್ರಸಾದಪರಿಣತೆ ಭಕ್ತಾಚಾರವರ್ತನೆಯಿಂ ನಿಜಮುಕ್ತಿಯನೈದಲರಿಯದೆ ಅಜ್ಞಾನದಿಂದ ಅಹಂಕರಿಸಿ ಮುನ್ನ ತನ್ನ ಅನ್ವಯವಿಡಿದು ಬಂದ ನಿಜಗುರುವನನ್ಯವ ಮಾಡಿ ಭಿನ್ನವಿಟ್ಟು ಕರೆವ ಕುನ್ನಿಗಳು ನೀವು ಕೇಳಿರೋ ಗುರು ಭಿನ್ನವಾದಲ್ಲಿ ದೀಕ್ಷೆ ಭಿನ್ನ, ದೀಕ್ಷೆ ಭಿನ್ನವಾದಲ್ಲಿ ಲಿಂಗ ಭಿನ್ನ ಲಿಂಗ ಭಿನ್ನವಾದಲ್ಲಿ ಪೂಜೆ ಭಿನ್ನ, ಪೂಜೆ ಭಿನ್ನವಾದಲ್ಲಿ ಅರ್ಪಿತ ಪ್ರಸಾದ ಭಿನ್ನ ಅರ್ಪಿತ ಪ್ರಸಾದ ಭಿನ್ನವಾದಲ್ಲಿ ಅಂಗಲಿಂಗ ಸಂಬಧವನ್ನುಳ್ಳ ನಿಜವೀರಶೈವ ಷಡುಸ್ಥಲ ಆಚಾರಕ್ಕೆ ಹೊರಗಾಗಿ ನರಕಕ್ಕೆ ಇಳಿವ. ಗುರುವಾಕ್ಯವ ಮೀರಿ ಗುರುವನನ್ಯವ ಮಾಡಿ ಲಿಂಗವ ಭಿನ್ನವಿಟ್ಟು ಕಂಡು ಜಂಗಮದ ಜಾತಿವಿಡಿದು ನೇತಿಮಾಡಿ ಪ್ರಸಾದವ ಎಂಜಲೆಂದು ಅತಿಗಳೆದು ಗುರುಮಾರ್ಗವ ತಪ್ಪಿನಡೆದು ಗುರುಭಕ್ತಿ ಪರಾಙ್ಮುಖರಾದವರ ಭಕ್ತ ಜಂಗಮವೆಂದಾರಾಧಿಸಿ ಪ್ರಸಾದವ ಕೊಳಲಾಗದು ಸಲ್ಲದು ಕಾಣಾ ಕೂಡಲಚೆನ್ನಸಂಗಮದೇವ.
--------------
ಚನ್ನಬಸವಣ್ಣ
ವಿಶ್ವಾಸವನರಿತಲ್ಲಿ ಗುರುಭಕ್ತಿ. ಶ್ರದ್ಧೆ ಸನ್ಮಾರ್ಗಂಗಳಲ್ಲಿ ಪೂಜಿಸಿ ವೇಧಿಸುವುದು ಶಿವಲಿಂಗಭಕ್ತಿ. ಲಾಂಛನಕ್ಕೆ ನಮಸ್ಕಾರ, ಆಪ್ಯಾಯನಕ್ಕೆ ಅನ್ನ ಅರಿವಿನ ತೆರನನರಿತು ನೆರೆ ವಿಶ್ವಾಸ ಜಂಗಮಭಕ್ತಿ. ಇಂತೀ ಕ್ರೀಯಯಲ್ಲಿ ಮಾರ್ಗ, ಭಾವದಲ್ಲಿ ನೆಮ್ಮುಗೆ. ಇಂತೀ ಗುಣ ಕಾಯ ಜೀವದ ಭೇದ. ಕರ್ತೃಭೃತ್ಯಸಂಬಂಧ ಏಕವಾದುದು. ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗವು ತಾನಾದುದು.
--------------
ಪ್ರಸಾದಿ ಭೋಗಣ್ಣ
ಅರಿದು ಮಾಡುವುದು ಗುರುಭಕ್ತಿ, ಅರಿದು ಮಾಡುವುದು ಲಿಂಗಭಕ್ತಿ, ಅರಿದು ಮಾಡುವುದು ಜಂಗಮಭಕ್ತಿ. ಅರಿಕೆಯಿಂದ ಕಾಬುದು, ಸದಾಶಿವಮೂರ್ತಿಲಿಂಗವನರಿವುದಕ್ಕೆ.
--------------
ಅರಿವಿನ ಮಾರಿತಂದೆ
ಗುರುಲಿಂಗಜಂಗಮದ ಘನಪ್ರಸಾದವ ಪಡಕೊಂಡು, ಅಂಗವಿಕಾರಕ್ಕೆ ಭುಂಜಿಸುವ ಅವಿಚಾರಿಗಳ ವಿವರವೆಂತೆಂದಡೆ; ಆದಿಸ್ವಾದಿ ಅನಾಹತ ಹೃದಯ ದೀನಸ್ಥಿತಿಯ ತಿಳಿಯದೆ, ಆದಿ ಅನಾದಿಯ ಭೇದಿಸಲರಿಯದೆ, ಆದಿಪ್ರಸಿದ್ಧವಾದ ಪರಮಗುರುವಿನಲ್ಲಿ ಸಮಯದ ಹಂಗಿಂಗೆ ಗಡಣಿಸಿಕೊಂಡು, ಬಲಭಿಚಾರಿಗಳು ನುಗ್ಗಿಯ ಬೀಜ, ಮಾವಿನ ಬೀಜ, ದಂಟುದಡಿ ಮೊದಲಾದ ನಾನಾ ಕಠಣಂಗಳನು ಅಂಗವಿಕಾರಕ್ಕೆ ಭುಂಜಿಸುವ ಭಕ್ಷಿಸುವ ಭವಕರ್ಮಿಗಳು. ಅಂಗವಿಕಾರಕ್ಕೆ ಭೂತನಂತೆ ಒಟ್ಟಿಕೊಂಡು, ಕರಿ ಸೂಕರನಂತೆ ಅಗ್ನಿಯಲ್ಲಿ ಸುಡು ಎಂಬ ಲಿಂಗದ್ರೋಹಿಗೇಕೊ ಪ್ರಸಾದ ಅಂತಪ್ಪ ಪರಮಪಾತಕರಿಗೆ ಪಾದೋದಕ ಪ್ರಸಾದವ ಕೊಡಲಾಗದು. ಇಂತಪ್ಪ ಪ್ರಸಾದದಿಂದೊಗೆದ ಕಠಣವನು ಅಗ್ನಿಯಲ್ಲಿ ದಗ್ಧವ ಮಾಡಲಾಗದು. ಬೆಂಕಿಯಲ್ಲಿ ಸುಡು ಎಂಬುದಕ್ಕೆ ಕುರಿಯ ಹೋಮವೆ ಮಾತಂಗಿಯ ಮಕ್ಕಳ ಸಂತಾನವೆ ಸತ್ತರೆ ಸುಡಿಸಿಕೊಂಬ ಶ್ವಪಚ ಮಾತಂಗಿಯ ಮಕ್ಕಳ ಸಂತಾನವನೇನೆಂಬೆನಯ್ಯಾ ! ಆ ಶಿವನ ಪ್ರಸಾದವ ಸುಡುವರೆ ಸತ್ತ ಹಾರುವನ ಅಗ್ನಿಯಲ್ಲಿ ಸುಡು ಎಂಬ ದ್ರೋಹಿಗೇಕೊ ಪ್ರಸಾದ ಅರಿಯದುದೆಲ್ಲ ಜ್ಞಾನದೊಳು ಅರಿದು, ಅರುಹಿಸಿಕೊಂಡ ಬಳಿಕ ತಿಳಿದಾಚರಿಸುವುದು, ಭಕ್ತಿಜ್ಞಾನವೈರಾಗ್ಯವಿಡಿದಾಚರಿಸುವುದೆ ಗುರುಭಕ್ತಿ. ಇಂತಪ್ಪ ಗುರುಮಾರ್ಗಾಚಾರವಸಾಧ್ಯವೆಂಬವರಿಗೆ ಗುರುವಿಲ್ಲ, ಲಿಂಗವಿಲ್ಲ, ಜಂಗಮವಿಲ್ಲ, ಪಾದೋದಕವಿಲ್ಲ, ಪ್ರಸಾದವಿಲ್ಲ. ಆ ಪ್ರಸಾದವಿಲ್ಲದವಂಗೆ ಪಂಚಾಚಾರವಿಲ್ಲ, ಆ ಪಂಚಾಚಾರವಿಲ್ಲದವಂಗೆ ಪ್ರಸಾದವಿಲ್ಲ. ಇಂತಪ್ಪ ಪ್ರಸಾದವಿಲ್ಲದವಂಗೆ ಯುಕ್ತಿಯೆಂಬುದು ಎಂದೆಂದಿಗೂ ಇಲ್ಲ. ಅವಂಗೆ ಇಹವಿಲ್ಲ, ಪರಕ್ಕೆ ಸಲ್ಲನೆಂಬ ಗುರುವಚನವುಂಟು, ಪ್ರಭುವೆ ನಿಮ್ಮಾಣೆ, ಕೂಡಲಸಂಗಮದೇವಾ.
--------------
ಬಸವಣ್ಣ
ಸಕಲ ಗುರು, ಸಕಲ ನಿಃಕಲ ಜಂಗಮ, ನಿಃಕಲ ಲಿಂಗ ಇಂತೀ ತ್ರಿವಿಧಲಿಂಗಕ್ಕೆ ಮಾಡುವ ಭಕ್ತಿಯ ಕ್ರಮವೆಂತೆಂದೆಡೆ: ಲಿಂಗವು ಜಂಗಮವು ಗುರುವಿನಲ್ಲಿ ಉಂಟೆಂದು ತನು ಮನ ಧನವ ಸವೆದು ಮಾಡುವುದು ಗುರುಭಕ್ತಿ. ಗುರುವು ಜಂಗಮವು ಲಿಂಗದಲ್ಲಿ ಉಂಟೆಂದು ಮನ ಧನ ತನು ಮುಟ್ಟಿ ಮಾಡುವುದು ಲಿಂಗಭಕ್ತಿ. ಗುರುವು ಲಿಂಗವು ಜಂಗಮದಲ್ಲಿ ಉಂಟೆಂದು ಧನ ಮನ ತನುವ ಸವೆದು ಮಾಡುವುದು ಜಂಗಮಭಕ್ತಿ. ಈ ತ್ರಿವಿಧಲಿಂಗಕ್ಕೆ ತ್ರಿವಿಧ ಪ್ರಕಾರದಲ್ಲಿ ಮಾಡಿ ಕೂಡಿ ವಿರಾಜಿಸುವಾತನೆ ಶಿವಭಕ್ತನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಕಲ್ಲ ಬಿತ್ತಿ ನೀರನೆರೆದಲ್ಲಿ ಪಲ್ಲವಿಸುವುದೆ ದಿಟದ ಬೀಜದ ವೃಕ್ಷದಂತೆ ? ಶ್ರದ್ಧೆ ಸನ್ಮಾರ್ಗ ಭಕ್ತಿ ಇಲ್ಲದಲ್ಲಿ ಗುರುಭಕ್ತಿ, ಶಿವಲಿಂಗಪೂಜೆ, ಚರಸೇವೆ ತ್ರಿವಿಧ ಇತ್ತವೆ ಉಳಿಯಿತ್ತು. ಮತ್ತೆ ನಿಜವಸ್ತುವಿನ ಸುದ್ದಿ ನಿಮಗೆತ್ತಣದೊ ? ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನನಲ್ಲಿ ವಿಶ್ವಾಸಬೇಕು.
--------------
ಮೋಳಿಗೆ ಮಹಾದೇವಿ
-->