ಅಥವಾ

ಒಟ್ಟು 160 ಕಡೆಗಳಲ್ಲಿ , 37 ವಚನಕಾರರು , 111 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಂಚಗಾರನ ಕೈಯ ಮೈಣವಿದ್ದಡೆ, ನಾನೆಂತು ಉಪಮಿಸುವೆ ? ಅದರ ಸಂಚವ ಕಂಚಗಾರನೆ ಬಲ್ಲ. ಸಂಚಿತಕರ್ಮ ಪ್ರಾರಬ್ಧವೆಂಬಿವ ಮುಂದಕ್ಕೆ ನಾನೇನ ಬಲ್ಲೆ. ಹಿಂಗಿದ್ದ ದೇಹದ ಸಂಚವನರಿಯೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಪೃಥ್ವಿ, ಅಪ್ಪು, ಅಗ್ನಿ, ವಾಯು, ಆಕಾಶ, ಚಂದ್ರ, ಸೂರ್ಯ, ಸೋಮ, ಮಂಗಳ, ಬುಧ, ಬೃಹಸ್ಪತಿ, ಶುಕ್ರ, ಶನಿ ಇವು ಮೊದಲಾದ ಪಂಚತತ್ವ ನವಗ್ರಹಂಗಳಿಲ್ಲದಂದಿನ, ನಕ್ಷತ್ರಂಗಳಿಲ್ಲದಂದಿನ, ಸಪ್ತ ಸಮುದ್ರಂಗಳಿಲ್ಲದಂದಿನ, ಸಪ್ತಕುಲ ಪರ್ವತಂಗಳು ಇಲ್ಲದಂದಿನ, ಸಪ್ತಮುನಿವರ್ಗಂಗು ಇಲ್ಲದಂದಿನ, ಹರಿಬ್ರಹ್ಮ, ಕಾಲಕರ್ಮ, ದಕ್ಷಾದಿಗಳಿಲ್ಲದಂದಿನ ರುದ್ರಕೋಟಿ, ಸದಾಶಿವನಿಲ್ಲದಂದಿನ, ಏನೂ ಏನೂ ಇಲ್ಲದಂದಿನ, ಶೂನ್ಯ ನಿಶ್ಶೂನ್ಯಕ್ಕೆ ನಿಲ್ಕುದ ಮಹಾಘನವ ನಾನು ಬಲ್ಲೆ, ತಾನು ಬಲ್ಲೆನೆಂದು ನುಡಿವ ಹೀನಮನುಜರ ಕೂಗಾಟ, ಬೇಟಕ್ಕೆ ನಾಯಿ ಬೊಗಳಿದಂತಾಯಿತ್ತು. ಆ ತುಟ್ಟತುದಿಯಲ್ಲಿಪ್ಪ ಘನವ ಮುಟ್ಟಿ ಹಿಡಿದುಬಂದ ಶರಣರು ಬಲ್ಲರಲ್ಲದೆ, ಬಹುವಾಕ್ಕು ಜಾಲವ ಕಲಿತಕೊಂಡು, ಗಟ್ಟಿತನದಲ್ಲಿ ಬೊಗಳಿಯಾಡುವ ಮಿಟ್ಟೆಯ ಭಂಡರೆತ್ತ ಬಲ್ಲರು ನಮ್ಮ ಶರಣರ ಸುದ್ದಿಯ, ಬಸವಪ್ರಿಯ ಕೂಡಲಚೆನ್ನಬಸವಣ್ಣ ?
--------------
ಹಡಪದ ಅಪ್ಪಣ್ಣ
ಶರಣರಿಗೆ ಭವವುಂಟೆಂದು ಮತ್ರ್ಯದಲ್ಲಿ ಹುಟ್ಟಿದ ಭವಭಾರಿಗಳು ನುಡಿದಾಡುವರು. ತಮ್ಮ ಹುಟ್ಟ ತಾವರಿಯರು, ತಾವು ಮುಂದೆ ಹೊಂದುವದನರಿಯರು. ಇವರು ಬಂದ ಬಂದ ಭವಕ್ಕೆ ಕಡೆಮೊದಲಿಲ್ಲ . ಇಂತಪ್ಪ ಸಂದೇಹಿಗಳು ನಮ್ಮ ಶರಣರ ಹುಟ್ಟ ಬಲ್ಲೆನೆನಬಹುದೆ ? ತನ್ನ ನರಿದವನಲ್ಲದೆ ಇದಿರನರಿಯರು. ಈ ಉದರಪೋಷಕರೆಲ್ಲರೂ ಇದ ಬಲ್ಲೆನೆಂಬುದು ಹುಸಿ. ಇದ ಬಲ್ಲವರು ಬಲ್ಲರಲ್ಲದೆ, ಸೊಲ್ಲಿಗಭೇದ್ಯನ ನಾನೆತ್ತ ಬಲ್ಲೆ ? ಎನ್ನ ಗುರು ಚೆನ್ನಮಲ್ಲೇಶ್ವರನೇ ಬಲ್ಲ . ಇನ್ನು ನಮ್ಮ ಬಸವಪ್ರಿಯ ಕೂಡಲಚೆನ್ನಬಸವಣ್ಣನೆ ಬಲ್ಲ .
--------------
ಹಡಪದ ಅಪ್ಪಣ್ಣ
ಎಸುವರ ಬಲ್ಲೆ; ಎಚ್ಚ ಬಾಣ ತಿರುಗಿ ಬಪ್ಪಂತೆ ಎಸುವರ ಕಾಣೆ. ಪೂಜಿಸುವವರ ಬಲ್ಲೆ ಪೂಜಿಸಿದ ಲಿಂಗ ಅಭಿಮುಖವಾಗಿ ಸರ್ವಾಂಗದಲ್ಲಿ ವೇಧಿಸುವರ ಕಾಣೆ. ನುಡಿಗೆ ನಡೆ, ಆ ನಡೆಗೆ ನುಡಿ ಉಭಯವ ವೇಧಿಸುವರ ಕಾಣೆ. ಈ ಉಭಯವು ಸಿದ್ಧಿಯಾಗಿ ಸಿದ್ಧಾಂತವಾದಲ್ಲಿ ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನನು ಕ್ರೀಜ್ಞಾನ ನಿರುತವಾದವಂಗಲ್ಲದೆ ಸಾಧ್ಯವಿಲ್ಲ.
--------------
ಮೋಳಿಗೆ ಮಹಾದೇವಿ
ಅಂಗವದಾರದು? ಲಿಂಗವದಾರದು? ಸಂಗವದಾರದು ? ಸಮರಸವ ದಾರದು? ಸಂದೇಹದಿಂದ ಮುಂದುಗಾಣದೆ ಒಂದೊಂದ ಕಲ್ಪಿಸಿಕೊಂಡು ಬಂದಿರಲ್ಲಾ ಭವ ಭವದಲ್ಲಿ. ಅಂಗವೆ ಗುರು, ಲಿಂಗವೆ ಪ್ರಾಣ, ಸಂಗವೆ ಜಂಗಮ, ಸಮರಸವೆ ಪ್ರಸಾದ. ಈ ಚತುರ್ವಿಧವು ಒಂದಂಗ. ಈ ಚತುರ್ವಿಧವ ಶ್ರುತಿ ಸ್ಮೃತಿಗಳರಿಯವು, ನಿಮ್ಮ ಶರಣಬಲ್ಲ. ಆ ಶರಣನೆ ಶಿವನವಾ. ಬಸವಪ್ರಿಯ ಕೂಡಲಚೆನ್ನಸಂಗಮದೇವಾ, ನಿನ್ನ ನೀನೆ ಬಲ್ಲೆ.
--------------
ಹಡಪದ ಅಪ್ಪಣ್ಣ
ಇಹಪರದ ಪರಿಯನು ಅಯ್ಯಾ ನೀನೇ ಬಲ್ಲೆ. ನಿನ್ನ ಶರಣನು ಬಲ್ಲ ಪ್ರಭುರಾಯನು. ಆತನನುಮತದಿಂ ಮಾಯೆಯ ಗೆಲುವ ಪರಿಯ ನೀನೆನಗೆ ಕಲಿಸುವುದು ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಮನ ಮನವ ಬೆರೆಸಿ, ಸ್ನೇಹ ಬಲಿದ ಬಳಿಕ, ನಿನ್ನ ನೆನವುತ್ತಿಪ್ಪೆ ನಾನು, ನನ್ನ ನೆನೆವುತ್ತಿಪ್ಪೆ ನೀನು. ನನಗೂ ನಿನಗೂ ಏನೂ ಹೊರೆಯಿಲ್ಲ. ಇದ ನೀ ಬಲ್ಲೆ, ನಾ ಬಲ್ಲೆ, ನಿನ್ನನಗಲದಿಪ್ಪೆ ನಾನು, ನನ್ನನಗಲದಿಪ್ಪೆ ನೀನು, ಚಿನ್ನ ಬಣ್ಣದಂತೆ ಇಪ್ಪೆವಾಗಿ ಇನ್ನು ಬ್ಥಿನ್ನವುಂಟೇ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ.
--------------
ಸ್ವತಂತ್ರ ಸಿದ್ಧಲಿಂಗ
ಎನ್ನ ಆದಿಯನೆತ್ತುವೆನೆ ? ಅದ ನೀನೆ ಬಲ್ಲೆ, ಘನಗಂಬ್ಥೀರದಲ್ಲಿ ಹುಟ್ಟಿದನೆಂಬುದ. ಎನ್ನ ಅನಾದಿಯನೆತ್ತಿ ಹೇಳಿ ತೋರುವೆನೆ ? ಅದು ನೀನೆ ಬಲ್ಲೆ, ಎನಗೆ ಕಾಯವಿಲ್ಲೆಂಬುದ. ಬಸವಣ್ಣನ ಕಾರಣ ಮತ್ರ್ಯಕ್ಕೆ ಬಂದಡೆ ಒಡಲುಪಾದ್ಥಿಯೆಂಬುದಿಲ್ಲ ನೋಡಾ. ಒಡಲೆ ಬಸವಣ್ಣ, ಪ್ರಾಣವೆ ಚೆನ್ನಬಸವಣ್ಣ, ಎನ್ನ ಮಹಾಜ್ಞಾನವೇ ನೀವು ನೋಡಾ. ಇಂತು ಎರಡಿಲ್ಲದಿಪ್ಪಲ್ಲಿ, ನುಡಿಯಡಗಿದ ಪರಿಯ, ನಿಮ್ಮ ಶರಣ ಬಸವಣ್ಣ ಬಲ್ಲ ಕಾಣಾ, ಕಲಿದೇವರದೇವ.
--------------
ಮಡಿವಾಳ ಮಾಚಿದೇವ
ಬಂದ ಪದಾರ್ಥವ ಸವಿದು ಚಪ್ಪರಿದು, ಆಹಾ ಲಿಂಗಕ್ಕೆ ಅರ್ಪಿತವಾಯಿತ್ತೆಂದು ಕಂಗಳ ಮುಚ್ಚಿ, ಅಂಗವ ತೂಗಿ, ಮಹಾಲಿಂಗವೆ ನೀನೇ ಬಲ್ಲೆ ಎಂದು ಕಂಡವರು ಕೇಳುವಂತೆ, ಹಿಂಗದ ಲಿಂಗಾಂಗಿ ಇವನೆಂದು ವಂದಿಸಿಕೊಳ್ಳಬೇಕೆಂದು, ಅಂದಗಾರಿಕೆಯಲ್ಲಿ ನಡೆವ ಭಂಡರಿಗೆಲ್ಲಿಯದೊ ಲಿಂಗಾರ್ಪಿತ ? ಲಿಂಗಕ್ಕೆ ಸಂದ ಸವಿಯ, ಹಿಂದೆ ಮುಂದೆ ಇದ್ದವರು ಕೇಳುವಂತೆ ಲಿಂಗಾರ್ಪಿತವುಂಟೆ ? ಭ್ರಮರ ಕೊಂಡ ಕುಸುಮದಂತೆ, ವರುಣ ಕೊಂಡ ಕಿರಣದಂತೆ, ವಾರಿ ಕೊಂಡ ಸಾರದಂತೆ, ತನ್ನಲ್ಲಿಯೇ ಲೇಪ ಅರ್ಪಿತ ಅವಧಾನಿಗೆ. ಹೀಂಗಲ್ಲದೆ ಕೀಲಿನೊಳಗಿಪ್ಪ ಕೀಲಿಗನಂತೆ, ಇನ್ನಾರಿಗೆ ಹೇಳುವೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಹೂಸಲಿಲ್ಲದ ಗೋಡೆ, ಲೇಸಿಲ್ಲದವನ ಮಾಟ, ಕಂಗಳ ಸೂತಕ ಹರಿಯದವನ ಅಂಗದ ಕೂಟ, ಅದೆಂದಿಗೆ ನಿಜವಪ್ಪುದು. ಶುದ್ಧ ಸಿದ್ಧ ಪ್ರಸಿದ್ಧ ಪ್ರಸನ್ನ ಕಪಿಲಸಿದ್ಧಮಲ್ಲಿಕಾರ್ಜುನಂಗದಲ್ಲಿ ಪ್ರಭುವೆ ನೀನೆ ಬಲ್ಲೆ.
--------------
ಸಿದ್ಧರಾಮೇಶ್ವರ
ಬಲ್ಲೆ ಬಲ್ಲೆ ನಿನ್ನ, ಜನನ ಮರಣಕ್ಕೆ ಹೊರಗಾದೆನೆಂಬುದ. ಬಲ್ಲೆ ಬಲ್ಲೆ ನಿನ್ನ, ಕಾಲಕಲ್ಪಿತಕ್ಕೆ ಹೊರಗಾದೆನೆಂಬುದ. ಬಲ್ಲೆ ಬಲ್ಲೆ, ನೀನು ಮಹಾನಿತ್ಯ ಮಂಗಳನೆಂಬುದ. ಬಲ್ಲೆ ಬಲ್ಲೆ, ನೀನು ಸತ್ಯಶುದ್ಧದೇವನೆಂಬುದ. ಬಲ್ಲೆ ಬಲ್ಲೆ, ನೀನು ಫಲಪದವ ಮೀರಿದನೆಂಬುದ. ಬಲ್ಲೆ ಬಲ್ಲೆ, ನೀನು ಉರುತರ ಲೋಕಪ್ರಕಾಶನೆಂಬುದ. ಬಲ್ಲೆ ಬಲ್ಲೆ, ನೀನು ಪರಿಭವಕ್ಕೆ ಬಾರನೆಂಬುದ. ಬಲ್ಲೆ ಬಲ್ಲೆ, ನೀನು ಕಾಲನ ಕಮ್ಮಟಕ್ಕೆ ಸಲ್ಲನೆಂಬುದ. ಎನ್ನ ಬಲ್ಲತನಕ್ಕೆ ಮಂಗಳವನೀಯೆ ಉತ್ತರ ದಕ್ಷಿಣ ಪೂರ್ವ ಪಶ್ಚಿಮವೆಂಬ ದ್ವಾರಂಗಳಲ್ಲಿ ತಪ್ಪದೆ ಬಪ್ಪಾಗ ಆನು ನಿನ್ನೊಡನೆ ಬಾರದೆ ಉಳಿದುದುಂಟೆ? ಆನೇನು ಭೇದವಾಗಿಪ್ಪೆನೆಲೆ ಅಯ್ಯಾ. ಸಂದು ಸವೆದು ಹಂಗು ಹರಿದು ಲೀಯ ಒಳಗಾಗಿದ್ದ ಎನ್ನ ನೋಡದೆ ಇಪ್ಪುದು ಅದಾವ ಗರುವತನ? ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಹಿಂದೆ ಪರೀಕ್ಷಿಸಿ ತಿಳಿದು ನೋಡುವಡೆ, ಪರಿಯಾಯ ಪರಿಯಾಯದಿಂದ ಬಂದಂಗವ ನೀ ಬಲ್ಲೆ ಬಸವಣ್ಣಾ. ನಾ ನೊಂದ ನೋವನು ನೀ ಬಲ್ಲೆ ಬಸವಣ್ಣಾ. ನಾನಂದು ಕಾಲನ ಕಮ್ಮಟಕ್ಕೆ ಗುರಿಯಾಗಿ ಇಪ್ಪಂದು ನೀನು ಶೂನ್ಯರುದ್ರನು ಬಸವಣ್ಣಾ. ನಾನಂದು ಹಲವು ಪರಿಯ ಬಹುರೂಪನಾಡುವಲ್ಲಿ ನೀನು ವಿಚಿತ್ರವಿನೋದನೆಂಬ ಗಣೇಶ್ವರನು ಬಸವಣ್ಣಾ, ಎನ್ನಾದ್ಯಂತವ ನೀ ಬಲ್ಲೆ. ಬಲ್ಲ ಕಾರಣ ಎನ್ನ ಪಾಲಿಸಿದೆ ಬಸವಣ್ಣಾ. ನೀ ಪಾಲಿಸಿದ ಗುಣದಿಂದ ಪಾವನನಾದೆನು ಬಸವಣ್ಣಾ; ಶುದ್ಧ ಸಿದ್ಧ ಪ್ರಸಿದ್ಧವನರಿದೆ ಬಸವಣ್ಣಾ. ಎಲೆ ಗುರುವೆ ಬಸವಣ್ಣಾ, ನೀ ಪಾಸಿದ ಗುಣದಿಂದ ಜೀವನ್ಮುಕ್ತನಾದೆ ಕಪಿಲಸಿದ್ಧಮಲ್ಲಿಕಾರ್ಜುನಯ್ಯನ ಕೂಡಿ, ನಿನ್ನವರಿಗೆಯೂ ನಿನಗೆಯೂ ಯೋಗ್ಯನಾದೆ ಬಸವಣ್ಣಾ.
--------------
ಸಿದ್ಧರಾಮೇಶ್ವರ
ಜಲದೊಳಗಣ ಮತ್ಸ್ಯ, ವನದೊಳಗಣ ಮರ್ಕಟ, ಆಕಾಶದ ಪಕ್ಷಿ, ಇವು ಕೂಡಿ ಮಾತನಾಡುವಲ್ಲಿ, ಶಬರ ಮತ್ಸ್ಯವ ನೋಡಿ, ಜೋಗಿ ವನಚರವ ಕಂಡು, ಅಂಟಿನ ಡೊಂಬ ಹಕ್ಕಿಯ ಕಂಡು, ಇಂತೀ ಮೂವರ ಹಡಹ ಕೆಡಿಸಿತ್ತು. ಕಾರಮಳೆ ಸೋನೆಯೆದ್ದು ಸುರಿಯಿತ್ತು. ಇಂತಿನ್ನಾರ ಕೇಳುವೆ ? ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವೆ ನೀನೆ ಬಲ್ಲೆ.
--------------
ಶಿವಲೆಂಕ ಮಂಚಣ್ಣ
ಉತ್ತರ ದಕ್ಷಿಣ ಪೂರ್ವ ಪಶ್ಚಿಮವೆಂಬ ದಿಕ್ಕಿನ ಹಂಗು ಹರಿದೆ. ನೀನುತ್ತರದಲ್ಲಿ ಓಂಕಾರ ಪ್ರದೀಪನಾಗಿ ಉತ್ತರದ್ವಾರದಲ್ಲಿ ಬಪ್ಪಾಗ ಆನೊಡನೆ ಬಂದೆ. ನೀನು ಅರಿತೂ ಅರಿಯದ ಹಾಂಗೆ ಇದ್ದೆ. ದಕ್ಷಿಣದ್ವಾರದಲ್ಲಿ ಜನಿತ ನಾಶವಾಗಿ ಬಪ್ಪಂದು ಆನೊಡನೆ ಬಂದು ನೀನರಿಯದಂತಿದ್ದೆ. ನೀನು ಪೂರ್ವದ್ವಾರದಲ್ಲಿ ಅಕ್ಷರದ್ವಯದ ವಾಹನವೇರಿಬಪ್ಪ್ಲ ಆನೊಡನೆ ಬಂದೆ. ನೀ ಪಶ್ಚಿಮದ್ವಾರದ್ಲ ಅವ್ವೆಯ ಮನದ ಕೊನೆಯ ಮೇಲೆ ಅವ್ಯಕ್ತಶೂನ್ಯವಾಗಿ ಬಪ್ಪಾಗ ಒಡನೆ ಬಂದೆ ಎಲೆ ಅಯ್ಯಾ. ಎನ್ನನು ಅನ್ಯಕ್ಕೊಪ್ಪಿಸುವ, ಎನ್ನನು ಶುದ್ಧ ನಾನು ನಿನ್ನವನಲ್ಲಾ. ಆನು ಬಂದ ಬರವ, ಇದ್ದ ಇರುವ ಆನರಿಯೆನಲ್ಲದೆ ನೀ ಬಲ್ಲೆ. ಅರಿದು ಕಾಡುವುದುಚಿತವೆ? ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಎಲ್ಲರು ಅಹುದೆಂಬುದು ಪ್ರಮಾಣವಲ್ಲ ಕಾಣಿಭೋ! ಎಲ್ಲರು ಅಲ್ಲ ಎಂಬುದು ಪ್ರಮಾಣವಲ್ಲ ಕಾಣಿಭೋ. ಅದೇನು ಕಾರಣವೆಂದರೆ: ಶಿವಶರಣರ ಹೃದಯದಂತಸ್ಥವನರಿಯರಾಗಿ, ಎನ್ನ ಅಹುದೆಂಬುದನು, ಅಲ್ಲ ಎಂಬುದನು ಮನ್ಮನೋಮೂರ್ತಿ ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ ನೀನೆ ಬಲ್ಲೆ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಇನ್ನಷ್ಟು ... -->