ಅಥವಾ

ಒಟ್ಟು 26 ಕಡೆಗಳಲ್ಲಿ , 13 ವಚನಕಾರರು , 26 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಭಿನ್ನದೈವವುಳ್ಳ ಭಕ್ತನ ಮನೆಯ ಆರೋಗಣೆ ಅನ್ಯಾಹಾರವಯ್ಯಾ ನಂಬಿಗೆಯಿಲ್ಲದ ಭಕ್ತನ ಮನೆಯ ಆರೋಗಣೆ ಸಂದೇಹದ ಕೂಳು. ಕೊಟ್ಟು ಕೊಂಡು ನೀಡಿ ಮಾಡಿ, ಹಮ್ಮು ನುಡಿವ ಭಕ್ತನ ಮನೆಯ ಆರೋಗಣೆ ಕಾರದ ಕೂಳು ನಿಮ್ಮ ನಂಬಿದ ಸದ್ಭಕ್ತರ ಮನೆಯ ಆರೋಗಣೆ ಲಿಂಗಾರ್ಪಿತವಯ್ಯಾ. ಅದೆಂತೆಂದಡೆ: ಸದಾಚಾರ ಶಿವಾಚಾರ ಲಿಂಗಾಚಾರ ಗಣಾಚಾರ ಭೃತ್ಯಾಚಾರ ಸತ್ಕಾಯಕದಿಂದ ಬಂದುದಾಗಿ ಭಕ್ತಿಪದಾರ್ಥವಯ್ಯಾ ಕೂಡಲಚೆನ್ನಸಂಗಮದೇವಾ
--------------
ಚನ್ನಬಸವಣ್ಣ
ತನುವೆಂಬುದು ನಿಮ್ಮ ನಿಜವ ಕಾಣಲೀಯದು. ಮನವೆಂಬುದು ನಿಮ್ಮ ದಿಟವ ಕಾಣಲೀಯದು. ಹಮ್ಮು ಬಿಮ್ಮು ಅನೃತ ಆಸತ್ಯ ಅವಿದ್ಯ ಈ ಪಂಚವಿಷಯ ಅಜ್ಞಾನಭಾವಕ್ಕೆ ಮೂಲವಯ್ಯಾ. ಅರಿವು ನಿನ್ನೊಡಲಾಗಿ ಮರವೆಯ ಮರೆದೆನೆಂಬುದು ಮಿಥ್ಯ ತಿಳಿದಳಿದುಳಿದ ಬಚ್ಚಬರಿಯರಿವು ಸಚ್ಚಿದಾನಂದ ಸ್ವರೂಪ ನೀನೆ, ಸಿಮ್ಮಲಿಗೆಯ ಚೆನ್ನರಾಮ.
--------------
ಚಂದಿಮರಸ
ಆ ಪರಶಿವನ ನಿರ್ಬಯಲವೇ ಮಹಾಬಯಲು, ಚಿದ್ಬಯಲು, ಬಯಲು ಮೂರಾದರೂ ಒಂದೇ. ಚಿನ್ನಾದ ಚಿದ್ಬಿಂದು ಚಿತ್ಕಳೆ, ನಾದ, ಬಿಂದು, ಕಳೆ ಆರಾದರೂ ಒಂದೇ. ಆರು ಮೂರು ಒಂಬತ್ತಾದರೂ ಒಂದೇ. ಒಂದು ಒಂಬತ್ತಾಗಿ, ಆ ನಿರ್ಬಯಲು ತಾನೆ ಹಲವಾಗಿತ್ತು. ಈ ಹಲವಾದರೂ ನಿರ್ಬೈಲೊಂದೇ, ಒಂದೇ ಎಂದರೆ ಒಂದೂ ಇಲ್ಲಾ. ನಿರ್ಬೈಲಿಗೆ ನಾಮ ಉಂಟೇ ? ರೂಪ ಉಂಟೇ ? ಕ್ರೀಯ ಉಂಟೇ ? ನಿರ್ಬೈಲೇ ನಿರ್ಬೈಲೆಂಬುದು ಇದು ಎಲ್ಲಿ ಇದೇ ನಿರ್ಬೈಲು. ಮತ್ತೆ ತಾ ನಿರ್ಬೈಲ ರೂಪಾದರೂ, ಆ ರೂಪ ತಾ ನಿರ್ಬೈಲಲ್ಲವೇ ? ತಾ ಕೂಡಲಿಕ್ಕೆ ಠಾವು ಬ್ಯಾರುಂಟೇ ? ಗಂಧ ರುಚಿ ರೂಪ ಸ್ಪರ್ಶ ಶಬ್ದ ತೃಪ್ತಿ ಇವು ತನ್ನ ತಾನಲ್ಲವೇ ? ಇದ್ದದ್ದು ತಾನೇ ಇಲ್ಲದ್ದು ತಾನೇ, ಹ್ಯಾಂಗಾದರೂ ತಾನೇ ನಿರ್ಬೈಲು. ಇದನರಿಯದೇ ಪೂರ್ವಪುಣ್ಯದಿಂದೆ ಮಾನವ ಜನ್ಮವ ತಾಳಿ, ಅಜ್ಞಾನವಳಿದು ಸುಜ್ಞಾನಿಯಾಗಿ, ಸುಜ್ಞಾನದಿಂದ ಸಾಧುರ ಸಂಗವ ಮಾಡಿ, ಗುರುಕರುಣವ ಪಡೆದು ಲಿಂಗವ ಪೂಜಿಸಿ, ಜಂಗಮಾರಾಧನೆಯ ಮಾಡಿ, ಪಾದೋದಕ ಸಲ್ಲಿಸಿ, ಪ್ರಸಾದವನುಂಡು, ವಿಭೂತಿಯ ಧರಿಸಿ, ರುದ್ರಾಕ್ಷಿಯ ಶೃಂಗರಿಸಿ, ಮಂತ್ರವನೋದಿ, ಯಂತ್ರವ ಕಟ್ಟಿ, ತಂತ್ರವ ತಿಳಿದು, ಸ್ವತಂತ್ರಸಿದ್ಧಲಿಂಗನಾದ ಮೇಲೆ ತನ್ನೊಳಗೆ ತಾನೇ ವಿಚಾರಿಸಿ, ಮತ ಒಂದಾದ ಮತಿಜ್ಞಾನ, ಸ್ತುತಿ ನಿಂದ್ಯ ಒಂದಾದ ತತ್ವಜ್ಞಾನ, ಸರ್ವವೂ ಒಂದಾದ ಸಮ್ಯಜ್ಞಾನ, ಅಂಗ ಒಂದಾದ ತತ್ವಜ್ಞಾನ, ಆ ಪ್ರಾಣ ಒಂದಾದ ಆತ್ಮಜ್ಞಾನ, ಕತ್ತಲೆ ಬೆಳಗು ಒಂದಾದ ಮಹಾಜ್ಞಾನ, ನಿಸ್ಸೀಮವಾದ ಅಖಂಡಜ್ಞಾನ, ಶಬ್ದಮುಗ್ಧವಾದುದ್ದೇ ಸ್ವಯಂಭುಬ್ರಹ್ಮಜ್ಞಾನ, ಅರವಾದದ್ದು ಅರವು, ಮರವಾದದ್ದು ಮರವು. ಈ ಮರವಾದದ್ದು ಮರವಾಗದೆ ಮರವು ಮರಳಿ ಅರವಾಗಿ, ಎಚ್ಚರಗೊಂಡು ಇಚ್ಛೆ ಉಳಿದರೆ ಅದೇ ಭವಮರವು, ಮರವಾಗಿ ಮರವು ಮರವಾದರೆ, ಸಾವಿಗೆ ಸಾವಾಗಿ ಸಾವು ಸತ್ತಿತ್ತು. ಮರವಿನ ಮರವೇ ಸಾವಿನ ಸಾವು; ಸಾವೆಂಬುದೇ ಮಾಯೆ. ಮಾಯೆಯೆಂಬುದೇ ಮರಗಿ, ಮರಗಿಯೆಂಬುದೇ ದುರಗಿ, ದುರಗಿಯೆಂಬುದೇ ಶಕ್ತಿ , ಶಕ್ತಿಯೆಂಬುದೇ ಅಂಗ, ಅಂಗವೆಂಬುದೇ ಲಿಂಗ, ಲಿಂಗವೆಂಬುದೇ ಮನ, ಮನವೆಂಬುದೇ ಘನ, ಘನವೆಂಬುದೇ ಗುರು, ಗುರುವೆಂಬುದೇ ಪರ, ಪರವೆಂಬುದೇ ತಾನು, ತಾನುಯೆಂಬುದೇ ಬೈಲು, ಬೈಲೆಂಬುದೇ ಮುಕ್ತಿ, ಮುಕ್ತಿಯೆಂಬುದೇ ಏನೋ ಏನೋ ಎಂಬುದೇ ಮಾತು, ಮಾತುಯೆಂಬುದೇ ವಚನ, ವಚನಯೆಂಬುದೇ ಅಕ್ಷರ, ಅಕ್ಷರಯೆಂಬುದೇ ಮಂತ್ರ, ಮಂತ್ರಯೆಂಬುದೇ ಪ್ರಣವ, ಪ್ರಣವಯೆಂಬುದೇ ನಾದ, ನಾದಯೆಂಬುದೇನಾದುದೇ ಹೇಳಲಿಕ್ಕೆ ನಿರ್ಬೈಲು. ನಿರ್ಬೈಲೇ ಸುಳ್ಳು, ಈ ಸುಳ್ಳು ಖರೇ ಮಾಡದೆ ಹರಿ ಅಜ ಇಂದ್ರಾದಿ ಮನು ಮುನಿ ನರ ನಾಗ ಸುರ ಸಿದ್ಧ ಸಾಧ್ಯರು, ರುದ್ರ ಈಶ್ವರ ಸದಾಶಿವ ಮಹಾದೇವರು ಮತ್ತೆ ಮಾದೇವರು, ಅಷ್ಟಾಂಗಯೋಗಿಗಳು, ಅಷ್ಟಾವರಣ ನಿಷೆ*ಯುಳ್ಳವರು, ಮಹಾನುಭಾವಿಗಳು, ನಿಜಜ್ಞಾನಿಗಳು, ಮಹಾ ಅರವಿಗಳು, ಸುಳ್ಳು ಸುಳ್ಳು ಮಾಡಿ, ಸುಳ್ಳು ಬ್ಯಾರೆ, ಖರೆಬ್ಯಾರೆ, ಬ್ರಹ್ಮವು ಬ್ಯಾರೆ, ಹಮ್ಮು ಬ್ಯಾರೆ, ಬ್ರಹ್ಮಾಂಡ ಬ್ಯಾರೆ, ಪಿಂಡಾಂಡ ಬ್ಯಾರೆ, ಕಾಯ ಬ್ಯಾರೆ, ಕರಣ ಬ್ಯಾರೆ, ಆತ್ಮ ಬ್ಯಾರೆ, ಪರಮಾತ್ಮ ಬ್ಯಾರೆ, ಭವ ಬ್ಯಾರೆ, ಶಿವ ಬ್ಯಾರೆ, ಬೆಳಗು ಬ್ಯಾರೆ, ಕತ್ತಲು ಬ್ಯಾರೆ, ಪುಣ್ಯ ಬ್ಯಾರೆ, ಪಾಪ ಬ್ಯಾರೆ, ಸತ್ಕರ್ಮ ಬ್ಯಾರೆ, ದುಷ್ಕರ್ಮ ಬ್ಯಾರೆ, ಅಜ್ಞಾನ ಬ್ಯಾರೆ, ಸುಜ್ಞಾನ ಬ್ಯಾರೆ, ಹೆಣ್ಣು ಬ್ಯಾರೆ, ಗಂಡು ಬ್ಯಾರೆ, ಸ್ವರ್ಗ ಬ್ಯಾರೆ, ನರಕ ಬ್ಯಾರೆ, ಸಾವು ಬ್ಯಾರೆ, ಜೀವ ಬ್ಯಾರೆ, ಗುರು ಬ್ಯಾರೆ, ಶಿಷ್ಯ ಬ್ಯಾರೆ, ಮಹಾಂತ ಬ್ಯಾರೆ, ಮಡಿವಾಳ ಬ್ಯಾರೆ, ಮೃತ್ಯು ಬ್ಯಾರೆ, ಮಾತು ಬ್ಯಾರೆ, ಭಕ್ತಿ ಬ್ಯಾರೆ, ಮುಕ್ತಿ ಬ್ಯಾರೆ, ನಾವು ಬ್ಯಾರೆ, ನೀವು ಬ್ಯಾರೆ, ತಾ ಬ್ಯಾರೆ ಬ್ಯಾರೆಯೆಂದು ತಾ ಬ್ಯಾರ್ಯಾಗಿ ಸುಳ್ಳು ಖರೇ ಮಾಡದ, ತುಪ್ಪ ಹಾಲುವ ಮಾಡದೇ ಹಾಲು ತುಪ್ಪವ ಮಾಡಿದಂತೆ ತಾವು ಸುಳ್ಳಾಗದೆ ಸುಳ್ಳು ಸುಳ್ಳೆಂದು ಸುಳ್ಳು ಜೊಳ್ಳಾದರೋ ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ.
--------------
ಮಡಿವಾಳಪ್ಪ / ಕಡಕೋಳ ಮಡಿವಾಳಪ್ಪ
ಸಂಸಾರದಲ್ಲಿ ಹುಟ್ಟಿ ಮತ್ತೊಂದ ಬಯಸಲೇಕಯ್ಯಾ ನಗುವುದು ನುಡಿವುದು ಶಿವಭಕ್ತರೊಡನೆ. ಸುಮ್ಮಾನ ಹಮ್ಮು ಬಿಮ್ಮಾಗಿರಲೇಕಯ್ಯಾ ಅಭ್ಯಾಸೇನ ವಿಹೀನಸ್ಯ ತಸ್ಯ ಜನ್ಮ ನಿರರ್ಥಕಂ ಗುರುಣಾಪಿ ಸಮಂ ಹಾಸ್ಯಂ ಕರ್ತವ್ಯಂ ಕುಟಿಲಂ ವಿನಾ ನಮ್ಮ ಕೂಡಲಸಂಗನ ಶರಣರೊಡನೆ ಮನದೆರೆದು ಮಾತನಾಡುವುದಯ್ಯಾ. 242
--------------
ಬಸವಣ್ಣ
ಮನ ಕತ್ತಲೆ, ತನು ಹಮ್ಮು, ನೆನಹು ಮರವೆ, ಇವರೊಳಗೆ ಇದ್ದು ಘನವ ಕಂಡೆಹೆನೆಂಬ ಅಣ್ಣಗಳಿರಾ, ನೀವು ಕೇಳಿರೊ. ಘನವ ಕಾಂಬುದಕ್ಕೆ ಮನವೆಂತಾಗಬೇಕೆಂದಡೆ, ಅಕ್ಕಿಯ ಥಳಿಸಿದಂತೆ, ಹಲ್ಲ ಸುಲಿದಂತೆ, ಕನ್ನಡಿಯ ನೋಡಿದಂತೆ, ಮನ ನಿರ್ಮಲವಾದಲ್ಲದೆ ಘನವ ಕಾಣಬಾರದು ನಮ್ಮ ಅಪ್ಪಣ್ಣಪ್ರಿಯ ಚೆನ್ನಬಸವಣ್ಣ.
--------------
ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ
ಸಂಕಲ್ಪ ವಿಕಲ್ಪವೆಂಬ ಉದಯಾಸ್ತಮಾನಗಳಿಗೆ ದೂರವಾದ ಶಿವಶರಣರ ಅಕುಲಜರೆಂದು ಗಳಹುತಿಪ್ಪರು ನೋಡಾ ಈ ಮರುಳ ವಿಪ್ರರು ತಾವು ಮಾತಂಗಿಯ ಗರ್ಭಸಂಭವ ಜೇಷ*ಪುತ್ರರೆಂಬುದನರಿಯದೆ. ನಮ್ಮ ಶಿವಭಕ್ತರು ಅಂತಹ ಕುಲ ಇಂತಹ ಕುಲದವರೆಂದು ನಿಂದಿಸಿ ನುಡಿವ ವಿಪ್ರಹೊಲೆಯರು ನೀವು ಕೇಳಿ ಭೋ ಅದೆಂತೆಂದಡೆ_ ಸ್ತ್ರೀವಾದಪುರುಷಃ ಷಂಡಶ್ಚಂಡಾಲೋ ದ್ವಿಜವಂಶಜಃ ನಜಾತಿಭೇದೋ ಲಿಂಗಾರ್ಚೇ ರುದ್ರಗಣಾಃ ಸ್ಮೃತಾಃ ಇಂತೆಂಬ ಪುರಾಣವಾಕ್ಯವನರಿದು ನಮ್ಮ ಶಿವಭಕ್ತನು ಹೊಲೆಯ ಮಾದಿಗ ಕಬ್ಬಿಲ ಕಮ್ಮಾರ ಕಂಚುಗಾರ ಅಕ್ಕಸಾಲೆ ಕುಂಬಾರ ಅಗಸ ನಾವಿಂದ ಜೇಡ ಬೇಡನೆಂದು ನುಡಿಯುತಿಪ್ಪರು. ನಿಮ್ಮ ಉತ್ತಮ ಸತ್ಕುಲಂಗಳ ನಾವು ಎತ್ತಿ ನುಡಿಯಬಹುದೇ ಮಾರ್ಕಂಡೇಯ ಮಾದಿಗನೆಂದು ಸಾಂಖ್ಯ ಶ್ವಪಚನೆಂದು ಕಾಶ್ಯಪ ಕಮ್ಮಾರನೆಂದು ರೋಮಜ ಕಂಚುಗಾರನೆಂದು ಅಗಸ್ತ್ಯ ಕಬ್ಬಿಲನೆಂದು ನಾರದ ಅಗಸನೆಂದು ವ್ಯಾಸ ಬೇಡನೆಂದು ವಶಿಷ* ಡೊಂಬನೆಂದು ದುರ್ವಾಸ ಮಚ್ಚಿಗನೆಂದು ಕೌಂಡಿಲ್ಯ ನಾವಿಂದನೆಂದು ಅದೆಂತೆಂದಡೆ ವಾಸಿಷ*ದಲ್ಲಿ_ ವಾಲ್ಮಿಕೀ ಚ ವಶಿಷ*ಶ್ಚ ಗಾಗ್ರ್ಯಮಾಂಡವ್ಯಗೌತಮಾಃ ಪೂರ್ವಾಶ್ರಯೇ ಕನಿಷಾ*ಸ್ಯುರ್ದೀಕ್ಷಯಾ ಸ್ವರ್ಗಗಾಮಿನಃ ಎಂದುದಾಗಿ ಇದನರಿದು ಮರೆದಿರಿ ನಿಮ್ಮ ಕುಲವನು ಇನ್ನು ನಿಮ್ಮ ಕುಲದಲ್ಲಿ ಹಿರಿಯರುಳ್ಳರೆ ನೀವು ಹೇಳಿ ಭೋ ನಿಮ್ಮ ಗೋತ್ರವ ನೋಡಿ ನಿಮ್ಮ ಹಮ್ಮು ಬಿಡಿ ಭೋ ಎಮ್ಮ ಸದ್ಭಕ್ತರೇ ಕುಲಜರು. ಇದ ನಂಬಿದಿರ್ದಡೆ ಓದಿ ನೋಡಿರಣ್ಣಾ ನಿಮ್ಮ ವೇದವರ್ಗಂಗಳೊಳಗೆ ಅದೆಂತೆಂದಡೆ ಅಥರ್ವವೇದದಲ್ಲಿ_ ಮಾತಂಗೀ ರೇಣುಕಾ ಗರ್ಭಸಂಭವಾತ್ ಇತಿ ಕಾರುಣ್ಯಂ ಮೇಧಾವೀ ರುದ್ರಾಕ್ಷಿಣಾ ಲಿಂಗಧಾರಣಸ್ಯ ಪ್ರಸಾದಂ ಸ್ವೀಕುರ್ವನ್ ಋಷೀಣಾಂ ವರ್ಣಶ್ರೇಷೊ*ೀs ಘೋರ ಋಷಿಃ ಸಂಕರ್ಷಣಾತ್ ಇತ್ಯಾದಿ ವೇದ ವಚನ ಶ್ರುತಿಮಾರ್ಗೇಷು ಎಂದುದಾಗಿ ಮತ್ತಂ ವಾಯವೀಯಸಂಹಿತಾಯಾವಮ್_ ಬಾಹ್ಮಣೋ ವಾಪಿ ಚಾಂಡಾಲೋ ದುರ್ಗುಣಃ ಸುಗುಣೋsಪಿ ವಾ ಭಸ್ಮ ರುದ್ರಾಕ್ಷಕಕಂಠೂೀ ವಾ ದೇಹಾಂತೇ ಸ ಶಿವಂ ವ್ರಜೇತ್ ಎಂದುದಾಗಿ ಮತ್ತಂ ಶಿವರಹಸ್ಯದಲ್ಲಿ_ ಗ್ರಾಮೇಣ ಮಲಿನಂ ತೋಯಂ ಯಥಾ ಸಾಗರಸಂಗತವರಿï ಶಿವಸಂಸ್ಕಾರಸಂಪನ್ನೆ ಜಾತಿಭೇದಂ ನ ಕಾರಯೇತ್ ಎಂದುದಾಗಿ ಇವರೆಲ್ಲರ ವರ್ಣಂಗಳು ಲಿಂಗಧಾರಣೆಯಿಂದ ಮರೆಸಿಹೋದವು ಕೇಳಿರಣ್ಣಾ. ಇಂತಪ್ಪ ಋಷಿ ಜನಂಗಳೆಲ್ಲ ಶ್ರೀಗುರುವಿನ ಕಾರುಣ್ಯವಂ ಪಡೆದು ವಿಭೂತಿ ರುದ್ರಾಕ್ಷಿಯಂ ಧರಿಸಿ ಶಿವಲಿಂಗಾರ್ಚನೆಯಂ ಮಾಡಿ ಪಾದತೀರ್ಥ ಪ್ರಸಾದವಂ ಕೊಂಡು ಉತ್ತಮ ವರ್ಣಶ್ರೇಷ*ರಾದರು ಕಾಣಿರೇ ಇದು ಕಾರಣ ನಮ್ಮ ಕೂಡಲಚೆನ್ನಸಂಗಯ್ಯನ ಅರಿದು ಪೂಜಿಸುವಾತನೇ ಉತ್ತಮ ಸದ್ಭಕ್ತ ಬ್ರಾಹ್ಮಣನು. ಅರಿಯದವನೀಗಲೇ ಕೆಟ್ಟ ಹೊಲೆಯ ಕಾಣಿರಣ್ಣಾ.
--------------
ಚನ್ನಬಸವಣ್ಣ
ಆನೆಂಬ ಹಮ್ಮು, ನೀನೆಂಬ ಚಿದಹಮ್ಮು, ಬೇರೆಂಬ ದಾಸೋಹಮ್ಮಳಿದ ಮತ್ತೆ ಆನೀನೆಂಬುದಿಲ್ಲ, ಅರಿವು ಮರವೆಯಿಲ್ಲ, ಬಂಧಮೋಕ್ಷವಿಲ್ಲ, ಪುಣ್ಯಪಾಪವಿಲ್ಲ, ಇಹಪರವಿಲ್ಲ. ಇಂತೀ ಚತುರ್ವಿಧಕ್ಕೊಳಗಲ್ಲದ ಹೊರಗಲ್ಲದ ಸೌರಾಷ್ಟ್ರ ಸೋಮೇಶ್ವರಲಿಂಗವನೇನೆನ್ನಬಹುದು?
--------------
ಆದಯ್ಯ
ಪರಬ್ರಹ್ಮನಿಂದ ಜೀವನಾಯಿತ್ತೆಂಬುವನೊಬ್ಬ ವಾದಿ. ಆತ್ಮನು ಪಶು, ಪಾಶಬದ್ಧನು, ಅನಾದಿಮಲಯುಕ್ತನೆಂಬುವನೊಬ್ಬ ವಾದಿ. ಇವರಿಬ್ಬರು ತರ್ಕಕ್ಕೆ ಸಿಲುಕಿ ದುಃಖಕ್ಕೊಳಗಾದರು. ಅದೆಂತೆಂದಡೆ:ಆತ್ಮನು ಅನಾದಿಮಲಸಂಬಂಧಿಯಾದಡೆ ಆತ್ಮನ ಸ್ವರೂಪ ಮಲಸ್ವರೂಪ ಬಲ್ಲಡೆ ನೀವು ಹೇಳಿರೋ. ಅರಿಯದಿರ್ದಡೆ ಕೇಳಿರೋ: ಪೃಥ್ವಿ ಅಪ್ಪು ಕೂಡಿ ಸ್ಥೂಲತನು, ವಾಯು ತೇಜ ಕೂಡಿ ಸೂಕ್ಷ್ಮತನು, ಅಂಬರ ಅಹಂಕಾರ ಕೂಡಿ ಕಾರಣತನು. ಈ ತನುತ್ರಯವಿಲ್ಲದಂದು, ಪಂಚತತ್ತ್ವಂಗಳ ಶಾಖೆ ತಲೆದೋರದಂದು, ಆದಿ-ಅನಾದಿ, ಸ್ವರೂಪು-ನಿರೂಪು, ಹಮ್ಮು-ಬಿಮ್ಮು, ಯುಗ-ಜುಗ, ಸುರಾಳ-ನಿರಾಳವಿಲ್ಲದಂದು, ಆತ್ಮನಲ್ಲಿ ಮಲ ಹುದುಗಿರ್ದ ಭೇದವ ತಿಳಿದು ರೂಹಿಸಿ ಹೇಳಬಲ್ಲಡೆ ಸಿದ್ಧಾಂತಿಯೆಂಬೆ, ಹಮ್ಮಿದ ಶಿವನೆ ಜೀವನು, ಹಮ್ಮಳಿದ ಜೀವನೆ ಶಿವನಾದಡೆ ಸೃಷ್ಟಿಸ್ಥಿತಿಸಂಹಾರಂಗಳೇಕಾದವು? ವಾಚ್ಯಾವಾಚ್ಯಂಗಳೇಕಾದವು? ಸ್ಥಾನಸ್ಥಾನಂಗಳೇಕಾದವು? ಪಕ್ಷಾಪಕ್ಷಂಗಳೇಕಾದವು? ದೇಹದೇಹಂಗಳೇಕಾದವು? ಆದಡಾಗಲಿ ಬ್ರಹ್ಮಕ್ಕೆ ತಥ್ಯ-ಮಿಥ್ಯ, ರಾಗ-ದ್ವೇಷ, ಹಮ್ಮು-ಬಿಮ್ಮು, ಮದ-ಮತ್ಸರ, ನಾ ನೀನೆಂಬ ಭ್ರಾಂತುಸೂತಕವುಂಟೆ? ಅದಲ್ಲ ನಿಲ್ಲು. ಬ್ರಹ್ಮಕ್ಕೆ ಹಮ್ಮು ಹೋಹ-ಬ್ರಹ್ಮ ಭೇದವ ತಿಳಿದು, ಸಂಕಲ್ಪ-ವಿಕಲ್ಪವಿಲ್ಲದೆ, ಸ್ತುತಿ-ನಿಂದೆಗಳನರಿಯದೆ, ಪಕ್ಷಾಪಕ್ಷಂಗಳನರಿದೆ, ಕಾಮ-ನಿಃಕಾಮವಿಲ್ಲದೆ, ಭೀತಿ-ನಿರ್ಭೀತಿಯಿಲ್ಲದೆ, ನಿರಂಗಸ್ವರೂಪನಾದಡೆ ವೇದಾಂತಿಯೆಂದೆ. ಈ ಉಭಯ ವಾದ ಹೊದ್ದರು ಶಿವಶರಣರು. ಆದಿ ಅನಾದಿಯಿಂದತ್ತಲಾದ ಶರಣಲಿಂಗಸಂಬಂಧವನರಿದರಾಗಿ ಅಭೇದ್ಯರಯ್ಯಾ. ಅದೆಂತೆಂದಡೆ: ಸತ್ತುವೆನಿಸಿ ಶಬ್ದನಿಃಶಬ್ದಕ್ಕೆ ಬಾರದ ನಿಶ್ಶೂನ್ಯ ಲಿಂಗವೆ ಪ್ರಾಣವಾಗಿ, ಚಿತ್ತುವೆನಿಸಿ ನಾಮನಿರ್ನಾಮಕ್ಕೆ ಬಾರದ ಸ್ವರೂಪು ನಿರೂಪವಲ್ಲದ ಶರಣನೆ ಅಂಗವಾಗಿ, ಈ ಉಭಯ ಸಂಪುಟದಿಂದ ಸಕಲನಿಷ್ಕಲವೆನಿಸಿತ್ತು. ಈ ಸಕಲ ನಿಷ್ಕಲತತ್ತ್ವವೆ ತನ್ನ ಶಕ್ತಿಸಮರಸಸಂಭಾಷಣೆಯಿಂದ ಲೀಲೆದೋರಲಾಗಿ ತಾನೆ ಗುರುವಾದ, ತಾನೆ ಶಿಷ್ಯನಾದ, ತಾನೆ ಲಿಂಗವಾದ, ತಾನೆ ಜಂಗಮವಾದ, ತಾನೆ ಮಂತ್ರವಾದ, ತಾನೆ ಪ್ರಸಾದವಾದ, ತಾನೆ ಸರ್ವಚೈತನ್ಯಾತ್ಮಕನಾದ. ಇಂಥಾ ಭೇದವ ತನ್ನಿಂದ ತಾನೆ ಅರಿದನಾಗಿ ವೇದಾಂತ ಸಿದ್ಧಾಂತವೆಂಬ ವಾಗ್ಜಾಲವ ನುಡಿಯನು. ತಾನೆ ಪರಿಪೂರ್ಣನಾಗಿ ತರ್ಕಕ್ಕತಕ್ರ್ಯನು, ಸಾಧ್ಯಕ್ಕಸಾಧ್ಯನು, ಭೇದ್ಯಕ್ಕಭೇದ್ಯನು, ಇದು ಕಾರಣ ದ್ವೈತಾದ್ವೈತವ ಮೀರಿನಿಂದ ನಿಜಸುಖಿ ನಿಮ್ಮ ಶರಣನಯ್ಯಾ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.
--------------
ಉರಿಲಿಂಗಪೆದ್ದಿ
ಲಿಂಗಸೌಖ್ಯದಲ್ಲಿ ಪರಿಪೂರ್ಣವಾದ ಶರಣನ ಅಂತರಂಗದಲ್ಲಿ ಕಾಮಮೋಹಾದಿಗಳುಂಟೇನಯ್ಯ? ಭ್ರಾಂತಿಸೂತಕ ಉಂಟೇನಯ್ಯ? ಹಮ್ಮು ಬಿಮ್ಮುಗಳುಂಟೇನಯ್ಯ ? ತಾಮಸ ತಮಂಧಗಳುಂಟೇನಯ್ಯ ? ಇಂತಿವಕ್ಕೆ ಸಿಲ್ಕದೆ ನಿತ್ಯನಿರಾಳಲಿಂಗದಲ್ಲಿ ಸುಖಿಯಾಗಿರ್ದನಯ್ಯ ನಿಮ್ಮ ಶರಣನು ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಬೇಡಲಿಲ್ಲದ ಭಕ್ತ ಮಾಡಲನುಗೈದಲ್ಲಿ ಗುರುಚರಣದ ಬರವನಂಗೈಸುವನಲ್ಲದೆ ರೂಪವನರಸ. ಬೆಳಗಿನೊಳಗಿರ್ದವನಾಗಿ ಗುಣಧರ್ಮವರ್ಮವನರಸ, ಹಮ್ಮು ಬಿಮ್ಮುಗಳ ಹವಣಿಲ್ಲವಾಗಿ, ಸಮ್ಮುಖ ಸ್ವಯವನರಸ ಗುರುನಿರಂಜನ ಚನ್ನಬಸವಲಿಂಗದ ಅಂಗವಾಗಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ಹೊತ್ತುಹೊತ್ತಿಗೆ ನಿತ್ಯರ ಸಂಗವ ಮಾಡಿ, ಕರ್ತೃವೆಂಬುದನರಿದೆ, ನಾ ಭೃತ್ಯನೆಂಬುದನರಿದೆ. ಸತ್ಯವೆಂಬುದನರಿದು, ಸದಾಚಾರವಿಡಿದು, ತುದಿ ಮೊದಲು ಕಡೆ ನಡುವೆ, ಆದಿ ಅನಾದಿಗೆ ನಿಲುಕದ ಘನವೇದ್ಯ ಲಿಂಗವ ಕಂಡೆ. ಆ ಲಿಂಗವ ಸೋಂಕಲೊಡನೆ ಲಿಂಗದಂತಾದೆ. ಜಂಗಮವ ಮುಟ್ಟಿ ಪೂಜಿಸಲೊಡನೆ ಜಂಗಮದಂತಾದೆ. ಪ್ರಸಾದವ ಕೊಳ್ಳಲಾಗಿ, ಆ ಪ್ರಸಾದದಂತಾದೆ. ಇನ್ನು ಪರವಿಲ್ಲವೆಂದು ಪ್ರಸಾದದಲ್ಲಿಯೆ ತಲ್ಲೀಯವಾದೆ. ಇದ ಬಲ್ಲವರು ನೀವು ಕೇಳಿ. ಎನ್ನ ಹಮ್ಮು ಬಿಮ್ಮು ಉಂಟೆನಬೇಡ. ಇದಕ್ಕೆ ದೃಷ್ಟವ ಹೇಳಿಹೆ ಕೇಳಿರಣ್ಣಾ ! ಕೀಡಿ ತುಂಬಿಯ ಸ್ನೇಹದ ಹಾಗೆ. ಶರಣನಾದರೆ ಜ್ಯೋತಿ ಜ್ಯೋತಿಯ ಮುಟ್ಟಿದ ಹಾಗೆ. ದರ್ಪಣ ದರ್ಪಣದೊಳಗೆ ಅಡಗಿದ ಹಾಗೆ. ಇದರೊಪ್ಪವ ಬಲ್ಲವರು ತಪ್ಪದೆ ಎನ್ನಂಗ, ಬಸವಪ್ರಿಯ ಕೂಡಲಚೆನ್ನಬಸವಣ್ಣ .
--------------
ಹಡಪದ ಅಪ್ಪಣ್ಣ
-->