ಅಥವಾ

ಒಟ್ಟು 42 ಕಡೆಗಳಲ್ಲಿ , 24 ವಚನಕಾರರು , 38 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶಿಲೆಯೊಳಗಣ ಭೇದದಿಂದ ಒಲವರವಾಯಿತ್ತು. ಹಲವು ಕಡಹಿನಲ್ಲಿ ತೆಪ್ಪವನಿಕ್ಕಿದಡೆ, ಹೊಳೆ ಒಂದೆ, ಹಾದಿಯ ಹೊಲಬು ಬೇರಲ್ಲದೆ, ಧರೆ ಸಲಿಲ ಪಾವಕ ಇವು ಬೇರೆ ದೇವರ ಒಲವರವುಂಟೆ ? ಧರೆ ಎಲ್ಲರಿಗೂ ಆಧಾರ, ಸಲಿಲ ಎಲ್ಲಕ್ಕೂ ಆಪ್ಯಾಯನ ಭೇದ, ಪಾವಕ ಸರ್ವಮಯರಿಗೆ ದಗ್ಧ. ಸರ್ವಮಯ ಪೂಜಿತ ದೈವದ ಆಧಾರ, ನೀನಲ್ಲದೆ ಬೇರೆಯಿಲ್ಲ, ಗುಡಿಯ ಗುಮ್ಮಟನೊಡೆಯ ಅಗಮ್ಯೇಶ್ವರಲಿಂಗವೆ.
--------------
ಮನುಮುನಿ ಗುಮ್ಮಟದೇವ
ಕಣ್ಣಿಲ್ಲದಾತ ಕಾಣಬಲ್ಲನೆ ಅಯ್ಯ? ಕಿವಿಯಿಲ್ಲದಾತ ಕೇಳಬಲ್ಲನೇನಯ್ಯ? ಮೂಗಿಲ್ಲದ ಮೂಕಾರ್ತಿ ವಾಸಿಸಬಲ್ಲನೆ ಅಯ್ಯ? ನಾಲಿಗೆಯಿಲ್ಲದವ ರುಚಿಸಬಲ್ಲನೆ ನೋಡಯ್ಯ? ಕೈಯಿಲ್ಲದ ಮೋಟ ಹಿಡಿಯಬಲ್ಲನೆ? ಕಾಲಿಲ್ಲದ ಹೆಳವ ನಡೆಯಬಲ್ಲನೆ ಅಯ್ಯ? ಹಂದೆ ಶೌರ್ಯದ ಕುರುಹ ಬಲ್ಲನೆ? ನಪುಂಸಕ ವ್ಯವಹರಿಸಬಲ್ಲನೆ ಅಯ್ಯ? ತಮ್ಮ ತಾವರಿಯದ ಅಜ್ಞಾನಿಗಳು, ಗುರು ಗುರುವೆಂದು ಅನ್ಯರಿಗೆ ಉಪದೇಶವ ಕೊಟ್ಟು ಅರುಹಿನ ಆಚರಣೆಯ ಹೇಳಿ ಸತ್ಪಥದ ಆಚರಣೆಯ ಹೇಳಿ ತಮ್ಮ ಹಾದಿಯ ತಾವರಿಯರು; ತಾವಿನ್ನಾರಿಗೆ ಹಾದಿಯ ತೋರಿಹರಯ್ಯ? ಆ ಭೂಭಾರಿಗಳು ಗುರು ಗುರುವೆಂಬುದಕ್ಕೆ ನಾಚರು ನೋಡಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಹೊಳೆಯಲ್ಲಿ ನಿಂದಿರ್ದು ಹಾದಿಯ ಕೇಳಿದಡೆ, ತಡಿಮಡುವ ಹೇಳಿದಡೆ ಅದು ಕೆಡುಗುಡಿತನವೆ? ಎನ್ನ ಬಿಡುವರು ಬಿಡಲಿ, ಇದ ನಡಸಿಯಲ್ಲದೆ ಬಿಡೆ, ಬಡಮತವಲ್ಲ. ಎನ್ನ ಒಡಗೂಡಿಕೊ, ಆತುರವೈರಿ ಮಾರೇಶ್ವರಾ.
--------------
ನಗೆಯ ಮಾರಿತಂದೆ
ಮನ ಮಲೆಯ ಮಂದಿರದಲ್ಲಿ, ಹೊಲಬಿನ ಹಾದಿಯ ತಪ್ಪಿದರೆಲ್ಲರು. ಕಾಯವೆಂಬ ಪಟ್ಟಣ ಜೀವಸುಪಾಯವೆಂಬ ಪಥ. ಪಯಣದಲ್ಲಿ ಹೊಲಬುದಪ್ಪಿ, ವಿಷಯವೆಂಬ ಗಹನದಲ್ಲಿ ಬಳಸಿ ಆಡುತ್ತಿದ್ದಾರೆ. ಎನಗಿನ್ನು ಅಸುವಿನ ಪಥವ ಹೇಳು, ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಾ.
--------------
ಸಗರದ ಬೊಮ್ಮಣ್ಣ
ಎನ್ನಂತರಂಗದೊಳಗೆ ಅರಿವಾಗಿ, ಎನ್ನ ಬಹಿರಂಗದೊಳಗೆ ಆಚಾರವಾಗಿ ನೀನೆಡೆಗೊಂಡು, ಎನ್ನ ಮನದೊಳಗೆ ಘನ ನೆನಹಾಗಿ ಮೂರ್ತಿಗೊಂಡು, ಗುರುಸ್ಥಲ ಲಿಂಗಸ್ಥಲ ಜಂಗಮಸ್ಥಲ ಪ್ರಸಾದಿಸ್ಥಲವೆಂಬ ಚತುರ್ವಿಧವನೂ ಎನಗೆ ಸ್ವಾಯತವ ಮಾಡಿ ತೋರಿ, ಪ್ರಾಣಲಿಂಗವೆಂಬ ಹಾದಿಯ ಸೆರಗ ತೋರಿಸಿ, ಎಲ್ಲಾ ಅಸಂಖ್ಯಾತರನೂ ಪಾವನವ ಮಾಡಿದಿರಾಗಿ- ಕೂಡಲಸಂಗಮದೇವಾ, ನಿಮ್ಮಿಂದ ಸಕಲ ಸನುಮತವ ನಾನರಿದೆನಲ್ಲದೆ, ಎನ್ನಿಂದ ನೀನಾದೆ ಎಂಬುದ ನಿಮ್ಮ ಪ್ರಮಥರು ಮೆಚ್ಚರು ನೋಡಯ್ಯಾ.
--------------
ಬಸವಣ್ಣ
ಕಲ್ಲುದೇವರ ನಂಬಿದವರೆಲ್ಲ ಕಲಿಯುಗದ ಕತ್ತಲೆಯೊಳಗಾಗಿ ಕತ್ತೆಗಳಾಗಿ ಹೋದರು. ಅದೇನು ಕಾರಣವೆಂದರೆ: ತಮ್ಮ ದೇವರು ಇಕ್ಕಿದ ಓಗರವನುಣ್ಣಲೊಲ್ಲದೆ, ಒಡನೆ ಮಾತಾಡದು. ಗುಡಿಯ ಕಲ್ಲು ಮೇಲೆ ಬಿದ್ದರೆ ಒಡೆದು ಹಾಳಾಗಿ ಹೋಗುತ್ತದೆ. ಇಂತಪ್ಪ ಕಲ್ಲ ಪೂಜಿಸಿ, ಸಲ್ಲದೆ ಹೋದರು. ಅದಂತಿರಲಿ, ಮಣ್ಣ ದೇವರು ಎಂದು ಪೂಜಿಸಿ, ಮಜ್ಜನಕ್ಕೆ ನೀಡಲಮ್ಮದೆ, ಲಜ್ಜೆಗೆಟ್ಟು ನಾಯಾಗಿ ಬೊಗುಳಿ ಹೋದರು. ಆದಂತಿರಲಿ, ಮರನ ದೇವರೆಂದು ಪೂಜಿಸಿ ಧೂಪ ದೀಪವ ಮುಂದಿಡಲಮ್ಮರು. ಅದೊಂದು ವ್ಯಾಪಾರಕ್ಕೊಳಗಾಗಿ, ತಾಪತ್ರಯಕ್ಕೆ ಸಿಲ್ಕಿ ಪಾಪಿಗಳಾಗಿ ಸತ್ತುಹೋದರು. ಸಲ್ಲದು ಶಿವನಲ್ಲಿ. ಎಮ್ಮ ಭಕ್ತರಿಗೆ ಈ ಪರಿಯಲ್ಲ ಕೇಳಿರಣ್ಣಾ. ಇದೆಲ್ಲ ಪಾಪಿಗಳ ಹಾಗೆ, ಎನ್ನ ದೇವ ನಡೆವ, ನುಡಿವ, ಇಕ್ಕಿದರುಂಬ, ಕೊಟ್ಟರೆ ತಕ್ಕೊಂಬ, ಪೂಜಿಸಿದರೆ ಪೂಜೆಗೊಂಬ, ಅನೇಕ ಪೂಜೆಯಲ್ಲಿ. ತನ್ನ ನಂಬಿದ ಭಕ್ತರಿಗೆ-ಬುದ್ಧಿಯ ಹೇಳುವ, ಶುದ್ಧಾತ್ಮನ ತೋರುವ. ತಾ ಮುದಿನಲ್ಲಿ ಸಜ್ಜನ ಸದ್ಭಕ್ತರಲ್ಲಿ ಇದ್ದೂ ಇಲ್ಲದಂತಿಪ್ಪ. ಪ್ರಸಿದ್ಧ ಜಂಗಮಲಿಂಗವ ಪೂಜಿಸಿ, ಸ್ವಯಲಿಂಗಿಗಳಾದರು ಎಮ್ಮ ಶರಣರು. ಅವರು ಹೋದ ಹಾದಿಯ ನೋಡಿದರೆ, ಎನಗೊಂದು ಹಾದಿ ಸಿಕ್ಕಿತ್ತು. ಆ ಹಾದಿಗೊಂಡು ಹೋಗಿ ಅವರ ಪಾದವಕಂಡು, ಕೆಟ್ಟು ಬಟ್ಟಬಯಲಾದೆ ನಯ್ಯಾ, ಬಸವಪ್ರಿಯ ಕೂಡಲಚೆನ್ನಬಸವಣ್ಣಾ.
--------------
ಹಡಪದ ಅಪ್ಪಣ್ಣ
ಹಾದಿಯ ತೋರಿದವರೆಲ್ಲರು ಭಯಕ್ಕೆ ನಿರ್ಭಯವಂತರಾಗಬಲ್ಲರೆ ? ವೇದ ಶಾಸ್ತ್ರ ಪುರಾಣ ಆಗಮಂಗಳ ಹೇಳುವರೆಲ್ಲರು ವೇದಿಸಬಲ್ಲರೆ ನಿಜತತ್ವವ ? ಹಂದಿಯ ಶೃಂಗಾರ, ಪೂಷನ ಕಠಿಣದಂದ, ಅರಿವಿಲ್ಲದವನ ಸಂಗ, ಇಂತಿವರ ಬಿಡುಮುಡಿಯನರಿ. ಗುಡಿಯ ಗುಮ್ಮಟನಾಥನ ಒಡೆಯ ಅಗಮ್ಯೇಶ್ವರಲಿಂಗದಲ್ಲಿ, ಎಡೆಬಿಡುವಿಲ್ಲದೆ ಒಡಗೂಡು.
--------------
ಮನುಮುನಿ ಗುಮ್ಮಟದೇವ
ನಾನೊಂದೂರಿಗೆ ಹಾದಿಯ ಕೇಳಿಕೊಂಡು ಹೋಗುತ್ತಿರಲಾಗಿ, ಮುಂದೆ ಅರಣ್ಯದೊಳಗೆ ಮೂರುಬಟ್ಟೆಯಾಯಿತ್ತು. ಎರಡು ಪಥವ ಬಿಟ್ಟು, ಒಂದು ಪಥವ ಹಿಡಿದು ಬರಲಾಗಿ, ಮುಂದೆ ಮೂರು ಬಟ್ಟೆಯೂ ಒಂದಾದವು. ಆ ಮೂರು ಬಟ್ಟೆ ಕೂಡಿದ ಬಳಿಯಲೊಂದು ಬೆಟ್ಟ ಹುಟ್ಟಿತ್ತು. ಆ ಬೆಟ್ಟವ ಏರಬಾರದು, ಇಳಿಯಬಾರದು. ಆ ಬೆಟ್ಟವ ಬಿಟ್ಟು ಹೋದಡೆ ಎನಗೆ ಪಥವಿಲ್ಲಾಯೆಂದು ಸುತ್ತಿಸುತ್ತಿ ನೋಡುತ್ತಿರಲಾಗಿ, ಆರು ಮೆಟ್ಟಿನದೊಂದು ಏಣಿ ಹಾಕಿರುವುದ ಕಂಡೆ. ಆ ಏಣಿಯ ಮೆಟ್ಟಿ ಮೆಟ್ಟಿ, ಆ ಬೆಟ್ಟದ ತುಟ್ಟತುದಿಯನೇರಿ ನೋಡಲಾಗಿ, ಬಟ್ಟಬಯಲಾಗಿದ್ದಿತು. ಆ ಬಟ್ಟಬಯಲೊಳಗೆ ಹತ್ತಿ ಹೋಗುತ್ತಿರಲಾಗಿ, ನಾನೆತ್ತ ಹೋದೆನೆಂದರಿಯೆನಯ್ಯಾ, ಬಸವಪ್ರಿಯ ಕೂಡಲಚೆನ್ನಸಂಗಮದೇವಾ.
--------------
ಸಂಗಮೇಶ್ವರದ ಅಪ್ಪಣ್ಣ
ಘಟದಲ್ಲಿ ಆತ್ಮ ದಿಟಕರಿಸಿ ಇಹಾಗ ತನ್ನ ಮಠವಾವುದೆಂದರಿ. ಘಟವಳಿದು ಮಠ ತುಂಬಿ ಹೋಹಾಗ ದಿಟದ ಸುದ್ದಿಯನರಿ. ಪಥಪಯಣದಿ ಹಾದಿಯ ಕಾಣು, ಆತುರವೈರಿ ಮಾರೇಶ್ವರಾ.
--------------
ನಗೆಯ ಮಾರಿತಂದೆ
ಅಂಗದಲ್ಲಿ ಲಿಂಗ ವೇಧಿಸಿ ಪ್ರಾಣಕ್ಕೆ ಸಂಬಂಧವ ಮಾಡಬೇಕೆಂಬಲ್ಲಿ, ಅಂಗಕ್ಕೂ ಪ್ರಾಣಕ್ಕೂ ಲಿಂಗ ವೇಧಿಸುವುದಕ್ಕೆ ಹಾದಿಯ ಹೊಲಬು ಅದಾವ ಠಾವಿನಲ್ಲಿ ವೇಧಿಸುವುದು ಹೇಳಯ್ಯಾ ? ಆ ಅಂಗ ನೀರಬಾಗಿಲ ನೆಲನೆ ? ಮೆಳೆಯ ಸವರಿನ ಹಾದಿಯೆ ? ಹೋಹ ಹೊಲಬಿನ ಪಥವೆ ? ಈ ಅಪ್ರಮಾಣವಪ್ಪ ಲಿಂಗವ ಚಿತ್ತದ ಭೇದದಿಂದರಿತು ಆತ್ಮನ ದೃಷ್ಟದಲ್ಲಿ ಲಕ್ಷಿಸಿ, ಇದಿರಿಟ್ಟು, ಕರದ ಇಷ್ಟದಲ್ಲಿ ನಿರೀಕ್ಷಣೆಯಿಂದ ನಿಜವಸ್ತುವ ನಿಕ್ಷೇಪಿಸಿ ಬೈಚಿಟ್ಟಲ್ಲಿ ಅಂಗಕ್ಕೂ ಪ್ರಾಣಕ್ಕೂ ಬೇರೆಡೆ ಲಿಂಗವಿಪ್ಪುದೆರಡಿಲ್ಲ. ಇದು ಕ್ರಿಯಾಲೇಪಸ್ಥಲ ಇದು ಸದ್ಭಾವ ಸಂಬಂಧ, ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನನಲ್ಲಿ.
--------------
ಮೋಳಿಗೆ ಮಹಾದೇವಿ
ನರಸುರಾದಿಗಳೆಲ್ಲರು ನಿಮ್ಮ ಹೊರೆಯೊಳಗಿದ್ದರು, ಮನು ಮುನಿ ಯತಿ ವ್ರತಿಗಳೆಲ್ಲರು ನಿಮ್ಮ ತೋಹಿನೊಳಗಿದ್ದರು. ಗಂಗೆವಾಳುಕರೆಲ್ಲರು ನಿಮ್ಮ ಮಡಿಯೊಳಗಿದ್ದರು. ಗಂಗೆ ಗೌರೀವಲ್ಲಭರೆಲ್ಲರು, ಚತುರ್ಮುಖ, ಪಂಚಮುಖ, ಷಣ್ಮಖ, ದಶಮುಖರೆಲ್ಲರು ನಿಮ್ಮ ಮಡಿಯ ಗಳಿಗೆಯೊಳಗಿದ್ದರು. ಲೋಕಾದಿ ಲೋಕವೆಲ್ಲವು ನಿಮ್ಮ ಕುಕ್ಷಿಯೊಳಗು. ಕೂಡಲಚೆನ್ನಸಂಗಮದೇವರು ಸಾಕ್ಷಿಯಾಗಿ, ನಿಮ್ಮ ನಿರಾಳದ ಪ್ರಸಾದದಿಂದ ನಿರವಯಲ ಹಾದಿಯ ಕಂಡೆನಲ್ಲದೆ, ನಿಮ್ಮಿಂದಲಾನು ಘನವೆ ಮಡಿವಾಳ ಮಾಚಯ್ಯಾ ?
--------------
ಚನ್ನಬಸವಣ್ಣ
ಭಕ್ತಿ ಜ್ಞಾನ ವೈರಾಗ್ಯವೆಂದು ಹೆಸರಿಟ್ಟು ನುಡಿವ ಅಣ್ಣಗಳು ನೀವು ಕೇಳಿರೊ. ಪವನದ ಉತ್ಪತ್ಯದಲ್ಲಿದ್ದ ಮೂಲವನರಿದು ಆ ನಾಲ್ಕು ಪವನ ಒಂದುಗೂಡಿ ಪೃಥ್ವಿಯ ಗುಣವನರಿಯಬಲ್ಲರೆ ಭಕ್ತಯೆಂದೆನಿಸಬಹುದು. ಎಂಟಸಳ ಕಮಲದಲ್ಲಿ ಮೆಟ್ಟಿ ಆಡುವ ಹಂಸನ ಸ್ಥಳವನರಿಯದೆ ಪಟ್ಟಗಟ್ಟಿದರಸನ ಸಂದರುಶನವ ಮಾಡಬಲ್ಲರೆ ಜ್ಞಾನಿಯೆಂದೆಸಬಹುದು. ಮಾರ್ಗ ಇಲ್ಲದೆ ಹಾದಿಯ ನಡದು ಇಪ್ಪತ್ತೊಂದುಮಣಿಯ ಯಜ್ಜನಮಾಡಿ ಪೋಣಿಸಿ ಸುಮಾರ್ಗದಲ್ಲಿ ಬೆರಸ್ಯಾಡುತಿರ್ದ ತ್ರಿವಿಧಮಣಿಯ ಮೇರುವೆಯಂ ಕಟ್ಟಿ ಜಪವ ಮಾಡಬಲ್ಲರೆ, ಜಪವು ಬಲಿದು ಸ್ಥೂಲಕರ್ಮವೆಂಬ ಜಾಡ್ಯವನಳಿದುದು ವೈರಾಗ್ಯವಲ್ಲದೆ, ಇಂತೀ ಭೇದಂಗಳನರಿಯದೆ ಕುಲುಮದ, ಧನಮದ, ವಿದ್ಯಾಮದ, ಪ್ರಾಯಮದವೆಂಬ ಮದಂಗಳೊಳು ಮುಳುಗಿ ಕ್ರೋಧ, ಇಂದ್ರಿಯ ಕಪಟ, ವ್ಯಸನದಲ್ಲಿ ವೈರಾಗ್ಯವೆಂದೆನಿಸುವ ದ್ರೋಹಿಗಳಿಗೆ ನೋಡಿ ನಗುತಿರ್ದ ನಮ್ಮ ಗೊಹೇಶ್ವರಪ್ರಿಯ ನಿರಾಳಲಿಂಗ.
--------------
ಗುಹೇಶ್ವರಯ್ಯ
ಮತ್ರ್ಯಕ್ಕೆ ಸಂಗನಬಸವಣ್ಣ ಬಾಹಲ್ಲಿ, ಮೂರು ಮಹಾರತ್ನವ ಕಂಡು, ಒಂದ ಸಿರಿಯ ಕೈಯಲ್ಲಿ ಕೊಟ್ಟ, ಒಂದ ಗಿರಿಯ ಕೈಯಲ್ಲಿ ಕೊಟ್ಟ, ಒಂದ ಉರಿಯ ಕೈಯಲ್ಲಿ ಕೊಟ್ಟ. ಇಂತೀ ಮೂರು ರತ್ನಕ್ಕೆ ಲಯ ಈರೇಳುಲೋಕ ಹದಿನಾಲ್ಕುಭುವನವೆಲ್ಲವೂ ಆ ಮೂರು ರತ್ನದ ಬೆಳಗಿನಲ್ಲಿ, ತೊಳಗಿ ಆಡುತ್ತಿಪ್ಪವರ ನೋಡಾ. ಒಂದು ರತ್ನ ಬಂದ ಬೆಳಗು, ಒಂದು ರತ್ನ ಮಂದ ಬೆಳಗು, ಒಂದು ರತ್ನ ಸಂದೇಹ ಬೆಳಗು. ಇಂತೀ ರತ್ನವ ತಂದು, ಸಂಗನಬಸವಣ್ಣ ಸಂಗಮೇಶ್ವರದೇವರಲ್ಲಿ ಐಕ್ಯವಾದೆಹೆನೆಂದು ಹರ್ಷಂಬಡುತ್ತಿಹ. ಇದ ಕಂಡು, ಎನ್ನ ಮನಕ್ಕೆ ನಾಚಿಕೆಯಾಯಿತ್ತು. ವರ್ಮವನರಿಯದೆ ಇಕ್ಕಿ ಕೆಟ್ಟನೆಂದು, ತನ್ನ ಕಾಯ್ದು, ಇದಿರ ಕಾಯ್ದ ಶೂರನಂತಿರಬೇಕು. ತಾರಣದಲ್ಲಿ ನಿಂದು, ಅಂಜಿ ಹೋಗುತ್ತಿರ್ಪವರ ಕಂಡು, ಅಂಜದಿರೆಂದು ಹೇಳುವ ಧೀರನಂತಿರಬೇಕು. ಇಂತೀ ವರ್ಮವನರಿಯದೆ ಮಾಡಿ, ಧರ್ಮಕ್ಕೊಳಗಾದ ಬಸವಣ್ಣನ ಹಾದಿಯಂ ಬಿಡಿಸಿ, ಚೆನ್ನಬಸವಣ್ಣನ ಹಾದಿಯ ತೋರು ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಅಹೋ ನಿಲ್ಲಿ ನಿಲ್ಲಿ ವ್ಯಸನಗಳಿರಾ ! ಬಲ್ಲೆ ಬಲ್ಲೆ ನಿಮ್ಮ ಗುಣಂಗಳ. ಮಲ್ಲರ ಕಾಳಗದ ನಡುವಿನ ಶಿಶುವಿನಂತೆ, ಎನ್ನ ತುಳಿದೇನೆಂಬಿರಿ. ಬಿಲ್ಲು ಬಾಣದ ನಡುವಿನ ಹುಲಿಯಂತೆ ಎನ್ನ ನಿಲಿಸೇನೆಂಬಿರಿ. ಎಂದರೆ ನಿಮ್ಮ ಹವಣಿಕೆ ಬೇರೆ, ಎನ್ನ ಹವಣಿಕೆ ಬೇರೆ. ಅದು ಹೇಗೆಂದಡೆ : ಎನ್ನ ಹವಣಿಕೆ ಶಿವಜ್ಞಾನಾಗ್ನಿಯಿಂದ ನಿಮ್ಮನುರುವಿ ನಿವ್ರ್ಯಸನಿಯಾದೇನೆಂಬೆ ; ನಿಮ್ಮ ಹವಣಿಕೆ ಎನ್ನ ಸುಟ್ಟು ಸೂರೆಮಾಡುವೆನೆಂಬಿರಿಯೆಂದರೆ ನಿಮ್ಮದು ಅನ್ಯದ ಹಾದಿ, ಎನ್ನದು ಪುಣ್ಯದ ಹಾದಿ. ಎನ್ನ ನಿಮ್ಮ ಹಾದಿಯ ನಡುಮಧ್ಯದಲ್ಲಿಪ್ಪ ಮನೋಮೂರ್ತಿಮಹಾಲಿಂಗ ಮಾಡಿದಂತೆ ಆಗುವೆ, ಆಡಿಸಿದಂತೆ ಆಡುವೆ, ನಡೆಸಿದಂತೆ ನಡೆವೆ, ನುಡಿಸಿದಂತೆ ನುಡಿವೆ, ಕೆಡಸಿದಂತೆ ಕೆಡವೆನೈ ; ಇನ್ನಂಜೆ. Wವೈದ್ಯನಘೆ ನಂಬಿ ಸೇವಿಸಿದರೆ ವ್ಯಾಧಿ ಪರಿಹಾರವಾಗುವುದು ; ಮಂತ್ರವ ನಂಬಿ ಜಪಿಸಿದರೆ ಭೂತ ಪ್ರೇತಗಳ ಭಯ ಪರಿಹಾರ. ಹಡಗವ ನಂಬಿದವರು ಕಡಲವ ದಾಟುವರು. ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವಿನ ನಂಬಿದವರು ಭವಸಾಗರವ ದಾಟುವರು.
--------------
ಹೇಮಗಲ್ಲ ಹಂಪ
ಅಯ್ಯಾ, ಹಾದಿಯ ಮಾತಕೇಳಿ ಮೇದಿನಿಯಲ್ಲಿ ಉಳಿದರಯ್ಯಾ. ಮೇಗಣ ಮಾತಕೇಳಿ ಮೂಕರಾಗಿ ಮುಂದೆಕಾಣಲಿಲ್ಲವಯ್ಯಾ. ವಿದ್ಯಾಬುದ್ಧಿಯ ಕೇಳಿ ಆಗು ಹೋಗಿನೊಳಗಾದರಯ್ಯಾ. ಇದನರಿದು ನಾದಬಿಂದುಕಳೆಯ ಹೊಳೆವ ಕುಳಕ್ಕಿಟ್ಟು ಮರೆದು ಪರಿಣಾಮಿಯಾದೆ ಗುರುನಿರಂಜನ ಚನ್ನಬಸವಲಿಂಗಕ್ಕಂಗವಾಗಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ಇನ್ನಷ್ಟು ... -->