ಅಥವಾ

ಒಟ್ಟು 16 ಕಡೆಗಳಲ್ಲಿ , 12 ವಚನಕಾರರು , 16 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಧರೆಯಗಲದ ಹುಲ್ಲೆ ಹರಿದು ಮೇಯಿತ್ತ ಕಂಡೆ. ಬಲೆಯ ಬೀಸುವ ಗಂಡರಾರೂ ಇಲ್ಲ, ಹರಿದು ಹಿಡಿದಹೆನೆಂದಡೆ ತಲೆ ಕಾಣಬರುತ್ತಲಿದೆ. ಶಿರವ ಹಿಡಿದೆಹೆನೆಂಬವರಿನ್ನಾರೂ ಇಲ್ಲ. ಹರಿದಾಡುವ ಹುಲ್ಲೆಯ ಕಂಡು ಹಲವು ಬೇಳಾರ (ಬೆಳ್ಳಾರ?)ವ ಬಿಟ್ಟು, ಬೇಟೆಕಾರ ಬಲೆಯ ಬೀಸಿದಡೆ ಹುಲ್ಲೆಯಂಜಿ ಹೋಯಿತ್ತು. ಮರುಳುದಲೆಯಲ್ಲಿ ಹುಲ್ಲೆಯನೆಸೆದಯಬೇಕೆಂದು ಸರಳ ಬಿಟ್ಟು ಬಾಣವನೊಂದು ಕೈಯಲ್ಲಿ ಹಿಡಿದು (ಹಿಡಿವಡೆ?) ಹಳ್ಳಕೊಳ್ಳವ ದಾಂಟಿ ಗಟ್ಟಬೆಟ್ಟವ ಕಳೆದು ಅತ್ತ ಬಯಲ ಮರನ ತಾ ಮೊರೆಗೊಂಡಿತ್ತು. ಹತ್ತೆ ಸಾರಿದ ಮೃಗವ ತಾನೆಚ್ಚಡೆ ನಾರಿ ಹರಿದು ಬಿಲ್ಲು ಮುರಿದು ಹುಲ್ಲೆ ಸತ್ತಿತ್ತು. ಅದ ಕಿಚ್ಚಿಲ್ಲದ ನಾಡಿಗೊಯ್ದು ಸುಟ್ಟು ಬಾಣಸವ ಮಾಡಲು ಸತ್ತ ಹುಲ್ಲೆ ಕರಗಿ ಶಬ (ಸಬ?) ಉಳಿಯಿತ್ತು. ಗುಹೇಶ್ವರಾ ನಿಮ್ಮ ಶರಣ ಕಟ್ಟಿದಿರ ಬಾಣಸದ ಮನೆಗೆ ಬಂದನು.
--------------
ಅಲ್ಲಮಪ್ರಭುದೇವರು
ಪ್ರಸಾದವ ಪಡೆದವರೆಂದು ಬದ್ಧಸಂಕಲ್ಪ ದುರ್ವರ್ತನೆಗಳನೇನೆಂಬೆನಯ್ಯಾ! ಗಣಸಮೂಹದಲ್ಲಿ ಸೌಖ್ಯವಿಲ್ಲೆಂದು ಚಿಕ್ಕ ಬಟ್ಟಲಲ್ಲರ್ಪಿಸಿಕೊಂಡು, ಪೂರ್ವ ಬಳಗಗೂಡಿ ಹಂದಿ ನಾಯಿಯಂತೆ ಒಗೆದಾಡಿ ತಿಂಬುವ ಬೆಂದ ನರಕಿಗಳಿಗೆ ಪ್ರಸಾದವೆಲ್ಲಿ ಹುದಯ್ಯಾ? ಪ್ರಸಾದಿ ಒಮ್ಮೆ ಪ್ರಸಾದವ ಸೇವಿಸಿ, ಒಮ್ಮೆ ಉಚ್ಛಿಷ್ಟಕೂಳ ಸೇವಿಸುವನೆ? ಛೀ ಅದೇತರ ನಡೆನುಡಿ ಅತ್ತ ಹೋಗಿ, ನಮ್ಮ ಗುರುನಿರಂಜನ ಚನ್ನಬಸವಲಿಂಗಶರಣರ ತಿಂಥಿಣಿಯ ಸೋಂಕದೆ.
--------------
ದೇಶಿಕೇಂದ್ರ ಸಂಗನಬಸವಯ್ಯ
ಕುದುರೆ- ಸತ್ತಿಗೆಯವರ ಕಂಡಡೆ ಹೊರಳಿಬಿದ್ದು ಕಾಲಹಿಡಿವರು, ಬಡಭಕ್ತರು ಬಂದಡೆ `ಎಡೆುಲ್ಲ, ಅತ್ತ ಸನ್ನಿ' ಎಂಬರು. ಎನ್ನೊಡೆಯ ಕೂಡಲಸಂಗಯ್ಯನವರ ತಡಗೆಡಹಿ ಮೂಗ ಕೊಯ್ಯದೆ ಮಾಬನೆ 414
--------------
ಬಸವಣ್ಣ
ವಜ್ರದ ಮನೆಯೊಳಗಿರ್ದು, ಗೊರಲೆ ಮುಟ್ಟಿತೆಂಬ ಸಂದೇಹವೇಕೆ ? ಭದ್ರಗಜ ಮೇಲೆ ಬರುತಿರ್ದು ಕೆಳಗಿರ್ದ ಗುಜ್ಜನಾಯಿ ಮುಟ್ಟಿತೆಂಬ ಸಂದೇಹವೇಕೆ ? ಸಂಜೀವನ ಕೈಯ ಸಾರಿರ್ದು ಇಂದಿಗೆ ನಾಳಿಗೆಂಬ ಸಂದೇಹವೇಕೆ ? ಸಜ್ಜನ ಸದ್ಭಕ್ತರ ಸಂಗದೊಳಗಿರ್ದು, ಸತ್ತೆನೋ, ಬದುಕಿದೆನೋ ಎಂಬ ಸಂದೇಹವೇಕೆ ? ಹತ್ತರಡಿಯ ಬಿದ್ದ ಹಾವು ಸಾಯದೆಂದು ಗಾದೆಯ ಮಾತ ನುಡಿವರು. ನಿತ್ಯರಪ್ಪ ಶರಣರ ಸಂಗದೊಳಗಿರ್ದು, ಮತ್ತೊಂದು ಉಂಟೆಂದು ಭಾವಿಸಿ ನೋಡುವ ಕತ್ತೆಮನುಜರ ಅತ್ತ ಹೊದ್ದದೆ, ಇತ್ತಲೆ ನಿಂದು ನಾಚಿ ನಗುತಿರ್ದ, ನಮ್ಮ ಬಸವಪ್ರಿಯ ಕೂಡಲಚೆನ್ನಬಸವಣ್ಣ .
--------------
ಹಡಪದ ಅಪ್ಪಣ್ಣ
ತಲೆಯಿಲ್ಲದ ಪುರುಷನಿಗೆ ಕಾಲಿಲ್ಲದ ಸ್ತ್ರೀ. ಕುಲಗೇಡಿ ಗಂಡಗೆ ಅನಾಚಾರಿ ಹೆಂಡತಿ. ಇಬ್ಬರ ಸಂಗದಿಂದುತ್ಪತ್ಯವಿಲ್ಲದ ಒಂದು ಶಿಶುವು ಹುಟ್ಟಿ, ಒಡಹುಟ್ಟಿದ ಬಂಧುಗಳ ಕೊಂದು, ತಂದಿತಾಯಿಯ ಹತವ ಮಾಡಿ, ಸತ್ತವರ ನುಂಗಿ, ಬದುಕಿದವರ ಹೊತ್ತು ಇತ್ತ ಮರದು, ಅತ್ತ ಹರಿದು, ಸತ್ತು ಕಾಯಕವ ಮಾಡುತಿರ್ದುದು ಶಿಶು. ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಹೊತ್ತಾರೆಯಿಂದ ಅಸ್ತಮಯ ತನಕ ಸುತ್ತಿರ್ದ ಮಾಯಾಪ್ರಪಂಚನೆ ಅಳೆವುತ್ತ ಸುರುವುತ್ತಲುರ್ದು, ಕತ್ತಲೆಯಾದರೆ, ಕಾಳುವಿಷಯದೊಳಗೆ ಮುಳುಗುತ್ತ , ಸತ್ತು ಹುಟ್ಟುತ್ತ , ಮತ್ತೆ ಬೆಳಗಾಗಿರ್ದು, ನಾನು ತತ್ವವ ಬಲ್ಲೆನೆಂದು ನುಡಿವ ಕತ್ತಲೆಮನುಜರ ಅತ್ತ ಹೊದ್ದದೆ, ಇತ್ತಲೆ ನಿಂದು ನಾಚಿ ನಗುತಿರ್ದ ನಮ್ಮ ಬಸವಪ್ರಿಯ ಕೂಡಲಚೆನ್ನಬಸವಣ್ಣ .
--------------
ಹಡಪದ ಅಪ್ಪಣ್ಣ
ಕಾಮವನುರುಹಿ ಕಾಮಿಯಾಗಿ ಕಾಮತರಹರವಾದ. ಕ್ರೋಧವನುರುಹಿ ಕ್ರೋಧಿಯಾಗಿ ಕ್ರೋಧತರಹರವಾದ. ಲೋಭವನುರುಹಿ ಲೋಭಿಯಾಗಿ ಲೋಭತರಹರವಾದ. ಮೋಹವನುರುಹಿ ಮೋಹಿಯಾಗಿ ಮೋಹತರಹರವಾದ. ಮದವನುರುಹಿ ಮದಯುಕ್ತನಾಗಿ ಮದತರಹರವಾದ. ಮತ್ಸರವನುರುಹಿ ಮತ್ಸರನಾಗಿ ಮತ್ಸರತರಹರವಾದ. ನಿಜೈಕ್ಯಂಗೆ ಅರಿಷಡ್ವರ್ಗಂಗಳ ಸ್ಥಾಪಿಸಿ ನುಡಿವ ಮಿಥ್ಯ ಭಂಡರಿಗೆ ಅತ್ತ ವೈತರಣಿಯಿಂಬುಗೊಟ್ಟಿಹುದು ಗುರುನಿರಂಜನ ಚನ್ನಬಸವಲಿಂಗಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಒಳಗೊಂದು ಬೆಳಗುವ ಜ್ಯೋತಿಯಂತಪ್ಪ ವಿಚಾರವಿದೇನೊ ! ಅತ್ತ ಹೊದ್ದದು ತನ್ನ ತಾನು, ಇತ್ತ ಹೊದ್ದದು ಬಾಹ್ಯವಿಚಾರವ. ವಿಚಾರಿಸುವ ವಿಚಾರ ತಾನಾಗಿದ್ದುದನರಿಯದು. ಹೊದ್ದುವ ಕಾಳಿಕೆ ಇಲ್ಲಿ ಹೊದ್ದದು, ನಿಸ್ಸಂದೇಹ. ಇಲ್ಲಿ ಹೊದ್ದಿಯೂ ಹೊದ್ದದೆ ಇದ್ದಿತ್ತು ತುದಿಯಿಲ್ಲ ಮೊದಲಿಲ್ಲ ತುದಿ ಮೊದಲೆರಡೂ ಕೂಡಿಕೊಂಡು ನಡುವೆ ಅಂತರಾತ್ಮವಾಗಿದ್ದಿತ್ತು. ಜೀವಗುಣವಳಿದು, ಪರಮಾತ್ಮನ ಮುಂದೆ ಪ್ರತಿಬಿಂಬವಾಗಿದ್ದಲ್ಲಿ ಸಂಧಾನವನರಸುತ್ತಿದ್ದೆ ಕಾಣಾ, ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ನೋಡುವ ಕಣ್ಣ ಕನ್ನಡಿ ನುಂಗಿದ ಮತ್ತೆ ನೋಡಿ ನೋಡಿಸಿಕೊಂಬವರಿನ್ನಾರು ಹೇಳಾ. ಉಂಬ ಬಾಯಿ ಆಡುವ ಮಡಕೆಯಾದಲ್ಲಿ ಬಡಿಸುವರಿನ್ನಾರು ಹೇಳಾ. ನಿಮ್ಮೊಳಗಾದಲ್ಲಿ ಪೂಜಿಸುವರಿನ್ನಾರು ಹೇಳಾ. ನೀನೆನ್ನೊಳಗಾದಲ್ಲಿ ನಾನಿದಿರಿಟ್ಟು ಮುಟ್ಟುವಠಾವ ತೋರಾ. ನಾ ನಿನ್ನವನಾಗಿ ಇತ್ತ, ನೀನು ಎನ್ನವನಾಗಿ ಅತ್ತ, ನನಗೂ ನಿನಗೂ ಮಮತೆ ಬಿಡದಾಗಿ ನಾನು ನೀನು ತತ್ತು ಗೊತ್ತಿನ ಲಕ್ಷಿತರು. ಇದು ಭಕ್ತಿ ವಿಶ್ವಾಸ ಭೇದ, ಸದ್ಯೋಜಾತಲಿಂಗವ ಕೂಡಬೇಕಾದ ಕಾರಣ.
--------------
ಅವಸರದ ರೇಕಣ್ಣ
ಅತ್ತ ಬರುವ ಹಾದರಗಿತ್ತಿ, ಕೊಂತದ ಗೊರವಿತಿ, ಬಟ್ಟೆಯ ಬಸವಿ, ಚಾಮರಗಿತ್ತಿ, ಸಂತೆಯ ಸೂಳೆ, ಕವುಚವನರಿಯದ ಹಲುಗಿತ್ತಿಯರ ಸಂಗವ ಮಾಡುವ ಪಂಚಮಹಾಪಾತಕರ ಮುಖವ ನೋಡಲಾಗದು ಕಾಣಾ ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ ಶಿವಸಾಕ್ಷಿಯಾಗಿ.
--------------
ಕುಷ್ಟಗಿ ಕರಿಬಸವೇಶ್ವರ
ಅಮರಾವತಿಯ ಪಟ್ಟಣದೊಳಗೆ, ದೇವೇಂದ್ರನಾಳುವ ನಂದನವನವಯ್ಯಾ. ಅತ್ತ ಸಾರಲೆ ಕಾಮಯ್ಯಾ, ಮೋಹವೆ ನಿನಗೆ? ಲೋಕಾದಿಲೋಕವೆಲ್ಲವ ಮರುಳು ಮಾಡಿದೆ. ಕಾಮಾ, ಗುಹೇಶ್ವರಲಿಂಗವನರಿಯೊ.
--------------
ಅಲ್ಲಮಪ್ರಭುದೇವರು
ಎತ್ತೆತ್ತ ನೋಡಿದಡೆ ಅತ್ತತ್ತ ಬಸವನೆಂಬ ಬಳ್ಳಿ. ಎತ್ತಿ ನೋಡಿದಡೆ ಲಿಂಗವೆಂಬ ಗೊಂಚಲು. ಒತ್ತಿ ಹಿಂಡಿದಡೆ ಭಕ್ತಿಯೆಂಬ ರಸವಯ್ಯಾ. ಆಯತ ಬಸವಣ್ಣನಿಂದ, ಸ್ವಾಯತ ಬಸವಣ್ಣನಿಂದ. ಸನ್ನಹಿತವು ಬಸವಣ್ಣನಿಂದ, ಗುರು ಬಸವಣ್ಣನಿಂದ, ಲಿಂಗ ಬಸವಣ್ಣನಿಂದ. ಜಂಗಮ ಬಸವಣ್ಣನಿಂದ. ಪಾದೋದಕ ಬಸವಣ್ಣನಿಂದ, ಪ್ರಸಾದ ಬಸವಣ್ಣನಿಂದ. ಅತ್ತ ಬಲ್ಲಡೆ ನೀವು ಕೇಳಿರೆ, ಇತ್ತ ಬಲ್ಲಡೆ ನೀವು ಕೇಳಿರೆ. ಬಸವಾ ಬಸವಾ ಬಸವಾ ಎಂದು ಮಜ್ಜನಕ್ಕೆರೆಯದವನ ಭಕ್ತಿ, ಶೂನ್ಯ ಕಾಣಾ, ಕಲಿದೇವರದೇವಾ.
--------------
ಮಡಿವಾಳ ಮಾಚಿದೇವ
ಈರೇಳುಭುವನ ವಳಯ ಮಧ್ಯದಲ್ಲಿ, ಹುಟ್ಟಿದುದೊಂದು ಚಿತ್ರ. ಅದನೇನ ಹೇಳುವೆ? ಕಣ್ಣಿಂಗೆ ರೂಪಿಲ್ಲ. ಕೈಗೆ ಹಿಡಿಯಿಲ್ಲ. ನೆನೆವುದಕ್ಕೆ ಗೋಚರವಾಗಿ ನಿಂದು ಸುಳಿಯಿತ್ತು ನೋಡಾ. ಆ ಸುಳುಹಿನ ಮರೆಯಲ್ಲಿ ಬಂದು ಹಿಡಿಯಲಾಗಿ, ಕೂಸು ಸತ್ತು, ಅತ್ತ ನೀರಿನಲ್ಲಿ ಮುಕ್ತಿಯೆಂಬವಳು ಹುಟ್ಟಿದಳು. ಮುಕ್ತಿಯ ಬಸುರಲ್ಲಿ ಸತ್ತವರೆಲ್ಲ ಐದಾರೆ. ಹೊತ್ತುಹೋರಿ ಕರೆಯಲಾಗಿ, ನಿಚ್ಚಟದ ಅಲಗ ಹಿಡಿದು ಕುತ್ತಿದರಯ್ಯಾ, ಹೊಟ್ಟೆಯ ಹುರಿಯ. ಕುತ್ತಿದ ಬಾಯಲ್ಲಿ ಕೂಳ ಸುರಿದು, ಅವರೆಲ್ಲ ಉಂಟಾದರು. ಅವರಿಗಿನ್ನೆತ್ತಣ ಮುಕ್ತಿ, ನಿಃಕಳಂಕ ಮಲ್ಲಿಕಾರ್ಜುನಾ?
--------------
ಮೋಳಿಗೆ ಮಾರಯ್ಯ
ಭವಭಾರಿ ಬಂಡಿ ಎತ್ತಿನ ಕಣ್ಣಿ ಹರಿದ ಕಾರಣ ನಿನ್ನ ಅರಿವಿನ ಬೆಳಗು ಗುರಿ ತಾಗಿ ಬಿದ್ದಡೂ ಎತ್ತು ಅತ್ತ ಹೋಗಿಯೆ ಮರಳಿತು. ಆ ಹೆಜ್ಜೆಯನು ಏಕೆ ಇಕ್ಕರೊ ? ಎತ್ತ ಎತ್ತನೆ ಹೊತ್ತು ಮೀರಿ ಓಡಿತ್ತಾಗಿ ಹಿಂದೆ ಅರಸುವರಿಲ್ಲ. ರೇಕಣ್ಣಪ್ರಿಯ ನಾಗಿನಾಥನ ಗೊಗ್ಗನೆತ್ತಿಗೆ ಹಗ್ಗವಿಲ್ಲ.
--------------
ಬಹುರೂಪಿ ಚೌಡಯ್ಯ
ಶರೀರ ತಾ ಮುನ್ನ ಮರಹು, ಶರೀರ ಅವಧಾನ ತಾ ಮುನ್ನ ಮರಹು. ಮನ ತಾ ಮುನ್ನವೆ ಮರಹು. ಮನವೆಂಬ ಮರ್ಕಟನ ಮರವೆಯ ನೆನಹು ತಾ ಮುಂದೆ ಮರಹು. ಮನದಾಳಾಪನೆ ತಾ ಮುನ್ನವೆ ಮರಹು. ಮನಶರೀರ ಭಾವಂಗಳನರಿದು ನೋಡಾ, ತಿಳಿದು ನೋಡಾ ಎಚ್ಚೆತ್ತು ನೋಡಾ. ಸತ್ಯನಿತ್ಯ ಶಬ್ದನಿತ್ಯ ಊಧ್ರ್ವಮುಖದಲ್ಲಿ ಉತ್ಪತ್ಯವ ಮಾಡುವೆನೆಂದು, ಕರುಣೆ ನಿತ್ಯಸಿಂಹಾಸನದ ಮೇಲೆ ದಯವನೆ ಚರಣವ ಮಾಡಿ, ಮೂರ್ತಗೊಂಡು ಕಾರುಣ್ಯದಿಂ ನೋಡಿದ ಶಿವನು. ಉದಯಕಾಲ ವಿನೋದಕಾಲ ಶಿವನನು, ಮಹಾದಯವನು ಬೇಡುವ ಬನ್ನಿರಯ್ಯಾ. ಮನದಲ್ಲಿ ದಾಸೋಹ ಪರಿಪೂರ್ಣವಾಗಿ, ದಾಸೋಹವ ಬೇಡುವ ಬನ್ನಿರಯ್ಯಾ. ಸಂಸಾರಸಾಗರದೊಳದ್ದಿ ಹೋದರೆಂದು, ಮಾಯೆಯೆಂಬ ಕಾಲನು ಬಿನ್ನಹಂ ಮಾಡಿದನು. ಬ್ರಹ್ಮನರ್ಥ ವಿಷ್ಣುವರ್ಥ ರುದ್ರಾದಿಗಳರ್ಥ ವೇದಶಾಸ್ತ್ರಾಗಮಪುರಾಣಂಗಳರ್ಥ. ಸಪ್ತಕೋಟಿ ಮಹಾಮಂತ್ರಂಗಳರ್ಥ ದೇವಾದಿದೇವಂಗಳರ್ಥ. ವೇದಮಂತ್ರವಿಡಿದು ಪ್ರಾಣಘಾತಕರಾಗಿ ದ್ವಿಜರೆಲ್ಲ ಅದ್ದಿಹೋದರೆಂದು, ಮಾಯೆಯೆಂಬ ಕಾಲನು ಎಲ್ಲರ ಹಿಂದೆ ಇಕ್ಕಿಕೊಂಡು, ಶಿವಂಗೆ ಬನ್ನಹಂ ಮಾಡುವಲ್ಲಿ, ಗಣಂಗಳು ಅದ್ದಿಹೋದುದುಂಟೆಯೆಂದು, ನಂದಿಕೇಶ್ವರದೇವರು ಬೆಸಗೊಂಡರು. ಆ ನಿರೂಪಕ್ಕೆ ಮಾಯೆಯೆಂಬ ಕಾಲನು ಕರ್ಣವ ಮುಚ್ಚಿ, ಸ್ವಯಸ್ವಹಸ್ತಂಗಳಂ ಮುಗಿದು, ಹೀಗೆಂದು ನಿರೂಪವ ಕರುಣಿಸಿಕೊಡುವರೆ ದೇವಯೆಂದು, ಎನ್ನ ನಿರ್ಮಿಸಿದವರಾರು? ತ್ರಿಭುವನಂಗಳ ಮಾಡಿದವರಾರು? ಗಣಂಗಳದ್ದಿ ಹೋದುದುಂಟೆ ದೇವ? ಯಂತ್ರವಾಹಕ ನೀನು, ಸಕಲಪಾವಕ ನೀನು. ನಿತ್ಯಭಕ್ತರು ನಿತ್ಯರು, ನಿಮ್ಮ ಗಣಂಗಳು ದಯಾಪಾರಿಗಳು. ನಿಮ್ಮ ಶರಣರ ನೆನಹಿಂದ, ಸಮಸ್ತಲೋಕದವರುಗಳಿಗೆ ಚೈತನ್ಯಾತ್ಮವಹುದು. ಅವಧಾರವಧಾರೆಂದು ಬಿನ್ನಹಂ ಮಾಡಿ, ಮತ್ತೆ ಕಾಲನು ನಿತ್ಯ ಸಿಂಹಾಸನದ ಮೇಲೆ ಕುಳಿತಿರ್ದು, ಭಕ್ತಿನಿತ್ಯ ದಾಸೋಹವಂ ಮಾಡಲಿಕೆ ಕರ್ಮವೆಲ್ಲಿಯದು. ಮಹಾದಾನಿ ಕರುಣವಿಡಿದೆತ್ತಿದಿರೆನುತ ತಿರುಗಿದನು ತನ್ನವರು ಸಹಿತಿತ್ತ. ಅತ್ತ ಮಹಾಸಂಪಾದನೆಯಲ್ಲಿ ಶರಣ ಬಸವಣ್ಣನಿಗೆ ಶರಣೆನುತಿರ್ದೆ ಕಾಣಾ, ಕಲಿದೇವರದೇವ.
--------------
ಮಡಿವಾಳ ಮಾಚಿದೇವ
ಇನ್ನಷ್ಟು ... -->