ಅಥವಾ

ಒಟ್ಟು 18 ಕಡೆಗಳಲ್ಲಿ , 14 ವಚನಕಾರರು , 17 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದಾನಿಯಾದಡೇನು? ಅವನ ಬೇಡಿದಲ್ಲದೆ ಅರಿಯಬಾರದು. ರಣರಂಗ ದ್ಥೀರನಾದಡೇನು ? ಅಲಗು ಅಲಗು ಹಳಚಿದಲ್ಲದೆ ಅರಿಯಬಾರದು. ಗೆಳೆಯನಾದಡೇನು ? ಅಗಲಿದಲ್ಲದೆ ಅರಿಯಬಾರದು. ಹೇಮವಾದಡೇನು ? ಒರೆಗಲ್ಲುಯಿಲ್ಲದೆ ಅರಿಯಬಾರದು. ನಿನ್ನನರಿದೆಹೆನೆಂದಡೆ : ಸಂಸಾರ ಸಾಗರವ ದಾಟಿದಲ್ಲದೆ ಅರಿಯಬಾರದು ಕಾಣಾ ಗೊಹೇಶ್ವರಪ್ರಿಯ ನಿರಾಳಲಿಂಗ.
--------------
ಗುಹೇಶ್ವರಯ್ಯ
ಆಯುಧವೈನೂರಿದ್ದರೇನು, ರಣರಂಗದಲ್ಲಿ ಹಗೆಯ ಗೆಲುವುದು ಒಂದೇ ಅಲಗು. ಏನನೋದಿ ಏನಕೇಳಿದರೇನು, ತಾನಾರೆಂಬುದನರಿಯದನ್ನಕ್ಕ? ತಾನಾರೆಂಬುದನರಿದ ಬಳಿಕ ನೀನಾನೆಂಬುದಿಲ್ಲ. ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನು ತಾನೆಯಾಗಿಹನು.
--------------
ಸ್ವತಂತ್ರ ಸಿದ್ಧಲಿಂಗ
ಅಡಿಗಡಿಗೆ ದೇವರಾಣೆ, ಅಡಿಗಡಿಗೆ ಭಕ್ತರಾಣೆ, ಅಡಿಗಡಿಗೆ ಗುರುವಿನಾಣೆ ಎಂಬ ವಚನವೆ ಹೊಲ್ಲ ! ಮುಂದೆ ಪಥಕ್ಕೆ ಸಲ್ಲರು. ಆದಿಯಿಂದ ಬಂದ ವಚನವೆಂದು ಶರಣರ ಕೂಡೆ ಸರಸವಾಡಿದಡೆ, ನಗುತಲಿರಿದುಕೊಂಡಡೆ ಅಲಗು ನೆಡದಿಹುದೆ ಕೂಡಲಸಂಗಮದೇವಾ
--------------
ಬಸವಣ್ಣ
ಶಕ್ತಿ ಸಾಧನೆಯ ಸಾದ್ಥಿಸಿ, ಆನೆ ಸೇನೆ ತಳತಂತ್ರ ಮಾರ್ಬಲ ಅಲಗು ಈಟೆಯ ಮೊನೆ ಹಿಡಿದು ಕಾದುವರುಂಟೆ ? ಮಂತ್ರಿ ಮನ್ನೆಯ ಬಂಟರೆಲ್ಲರು ರಣದೊಳಗೆ ಕಾದಿ ಗೆಲ್ವರಲ್ಲದೆ. ಮಾಯಾಪಾಶವೆಂಬ ರಾಕ್ಷಿ, ಕರಣಗುಣವೆಂಬ ಭೂತಗಳ ಕೂಡಿಕೊಂಡು, ಭೂಮಂಡಲ ಹತಮಾಡುತ, ತಿಂದು ತೇಗುತ ಬರುತಿದೆ. ಮಾಯಾರಣ್ಯವ ಕಾದಿ ಗೆಲುವರನಾರನೂ ಕಾಣೆ ಎನ್ನಾಳ್ದ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಕರ್ಪುರದ ಹಣತೆಯಲ್ಲಿ ಬತ್ತಿಯ ಹಾಕಿ ಉರುಹಬಹುದೆ? ಕಿಚ್ಚಿನ ಮಧ್ಯದಲ್ಲಿ ನಿಂದು ಕೆಟ್ಟಿತ್ತೆಂದು ಹುಲ್ಲ ಸೊಪ್ಪ ಹಾಕಿ ಹೊತ್ತಿಸಬಹುದೆ? ಅಲಗು ಕ್ರೂರವಾಯಿತ್ತೆಂದು ತನ್ನೊಡಲನಿರಿದು ಅಲಗಿನ ಕ್ರೂರ ಸುಲಲಿತವೆನ್ನಬಹುದೆ? ಆ ಗುಣ ಅಲ್ಲಲ್ಲಿಗೆ ದೃಷ್ಟ. ಇದು ನಿಶ್ಚಯ ನಿಜ ಲಿಂಗಾಂಗಿಗೆ ಅರಿವಿನ ಭೇದ. ಕಾಲಕರ್ಮವಿರಹಿತ ತ್ರಿಪುರಾಂತಕಲಿಂಗದವನ ತೆರ.
--------------
ಶಂಕರದಾಸಿಮಯ್ಯ
ಒಂದು ಧನುವಿಂಗೆ ಮೂರಂಬ ಹಿಡಿದೆ. ಒಂದು ಬಾಣದ ಬಿಡಲಾಗಿ ಪದ್ಮೋದ್ಭವನ ಸೃಷ್ಟಿಯ ಕಟ್ಟಿತ್ತು. ಮತ್ತೊಂದು ಬಾಣವ ಬಿಡಲಾಗಿ ಪದ್ಮನಾಭನ ಹೆಡಗಯ್ಯ ಕಟ್ಟಿತ್ತು. ಕಡೆಯ ಬಾಣ ರುದ್ರನ ಹಣೆಯನೊಡೆದು ಅಲಗು ಮುರಿಯಿತ್ತು; ಗರಿ ಜಾರಿತ್ತು; ನಾರಿಯ ಹೂಡುವ ಹಿಳುಕು ಹೋಳಾಯಿತ್ತು; ಗೊಹೇಶ್ವರನ ಶರಣ ಅಲ್ಲಮ ಹಿಡಿದ ಬಿಲ್ಲುಮುರಿಯಿತ್ತು.
--------------
ಗಾಣದ ಕಣ್ಣಪ್ಪ
ಒಂದು ಧನುವಿಂಗೆ ಮೂರಂಬ ಹಿಡಿದೆ. ಒಂದು ಬಾಣವ ಬಿಡಲಾಗಿ ಪದ್ಮೋದ್ಭವನ ಸೃಷ್ಟಿಯ ಕಟ್ಟಿತ್ತು, ಮತ್ತೊಂದು ಬಾಣವ ಬಿಡಲಾಗಿ ಪದ್ಮೋದ್ಭವನ ಹೆಡಗಯ್ಯ ಕಟ್ಟಿತ್ತು. ಕಡೆಯ ಬಾಣವು ರುದ್ರನ ಹಣೆಯನೊಡೆದು ಅಲಗು ಮುರಿಯಿತ್ತು. ನಾರಿ ಜಾರಿತ್ತು, ನಾರಿಯ ಹೂಳುವ ಹಿಳಿಕು ಹೋಳಾಯಿತ್ತು. ಗುಹೇಶ್ವರನ ಶರಣ ಅಲ್ಲಮ ಹಿಡಿದ ಬಿಲ್ಲು ಮುರಿಯಿತ್ತು.
--------------
ಅಲ್ಲಮಪ್ರಭುದೇವರು
ಶಿವಂ ಪರಾತ್ಪರಂ ಸೂಕ್ಷ್ಮಂ ನಿತ್ಯಂ ಸರ್ವಗತಾವ್ಯಯಮ್ ಅನಿಂದಿತಮ£õ್ಞಪಮ್ಯಮಪ್ರಮೇಯಮನಾಮಯಮ್ ಎಂದು ವೇದಾಗಮಗಳು ಹೇಳಿದ ಹಾಗೆ ಶಿವಶಿವಾ ಹರಹರಾ ಎಂದೆನ್ನದೆ ಭೃಗು ಶಾಪದಿಂದ ಭವಕ್ಕೆ ಬಂದು ಸತ್ತು ಕೆಟ್ಟು ಹೋದ. ದಶರಥರಾಯನು ನಾಚಿಕೆಯಿಲ್ಲದೆ ರಾಮ ರಾಮ ಎಂದು ನೆನೆದರೂ, ಆ ರಾಮ, ರಾವಣನ ಕೊಂದ ಬ್ರಹ್ಮಹತ್ಯಾದೋಷಕ್ಕೆ ಅನೇಕ ಶಿವಲಿಂಗಗಳ ಪ್ರತಿಷೆ*ಯ ಮಾಡಿ ಪೂಜಿಸಿದ. ಹರಿಯು ಆ ಮಹಾಲಿಂಗವ ನೆನೆವುದಕ್ಕೆ ನಾಲಗೆ ಮೂಗ ನಂಜುತ್ತ ಇಹನು. ಕೃಷ್ಣನ ಅಂಗಾಲಕಣ್ಣ ಬೇಡನೆಚ್ಚು ಕೊಂದನೆಂದರೆ, ನಾಚದೆ ಪರಿಣಮಿಸುತ್ತಿಹರು. ನಾರಸಿಂಹನವತಾರವ ಶರಭರುದ್ರ ತೀರ್ಚಿಸಿದನೆಂದರೆ ಉರಿದೇಳುತ್ತಿಹರು. ಗೋವಳರೊಡನುಂಡಯೆಂದರೆ ಪರಿಣಮಿಸಿ ಸಂತೋಷವಹರು. ಆ ಹರಿ ರಾಮೇಶ್ವರದೇವರ ಪ್ರಸಾದವ ಕೊಂಡನೆಂದರೆ ಅವಮಾನಿಸುತ್ತಿಹರು. ಸತ್ತು ಕೆಟ್ಟು ಹುಟ್ಟಿದ ಅಜ್ಞಾನಿ ವಸುದೇವನ ಮಗ ಹರಿಯೆಂದರೆ ನಲಿದುಬ್ಬುವರು. ಆ ಹರಿ ಮಹಾದೇವನ ಮಗನೆಂದರೆ ಸಿಡಿಮಿಡಿಗೊಂಬರು. ಹಲವು ಗಂಡರ ನೆರೆದ ಕುಂತಿಯ ಕಾಲಿಗೆ ಹರಿ ಎರಗಿದನೆಂದರೆ ನಲಿದುಬ್ಬಿ ಕೊಂಡಾಡುವರು. ಆ ಹರಿ ಕಾಮಿತಫಲದಾಯ[ಕ]ನಾದ ಶಿವನ ಶ್ರೀಪಾದಕ್ಕೆ ನಯನಕಮಲಮನರ್ಪಿಸಿ ಚಕ್ರಮಂ ಪಿಡಿದನೆಂದರೆ ಚಿಂತಿಸಿ [ಕರ]ಕರಸುತ್ತಿಹರು. ದ್ವಾರವತಿ ನೀರಿಲಿ ನೆರೆದಾಗ, ಕೃಷ್ಣನ ಹದಿನಾರುಸಾವಿರ ಸ್ತ್ರೀಯರಂ ಹೊಲೆಬೇಡರು ಸೆರೆಯನೊಯ್ದುದಕ್ಕಾಗಿ ಹೀನಜಾತಿಯ ಬಸುರಲ್ಲಿ ಉತ್ತಮಸ್ತ್ರೀಯರು ಹುಟ್ಟುವರೆಂದು ನಲಿದಾಡುವರು. ಮಹಾಲಕ್ಷ್ಮಿ ಸರ್ವರೊಡೆಯ ಶಿವನ ದಾಸಿಯೆಂದರೆ ಅಲಗು ತಾಕಿದಂತೆ ನೋವುತಿಹರು. ಶಿವಲಿಂಗವ ತಪಧ್ಯಾನದಿಂದರ್ಚಿಸಿ ಪೂಜಿಸಿ ಪಡೆದರು ಏಕಾದಶರುದ್ರರಾದಿಯಾದ ರುದ್ರಗಣಂಗಳು. ಬ್ರಹ್ಮವಿಷ್ಣುರುಗಳು ಇಂದ್ರಾದಿ ದಿಕ್ಪಾಲರು ರವಿಚಂದ್ರಾದಿಗಳು ಶಿವನ ಪೂಜಿಸಿ ಕಾಮಿತಫಲಪದವಿಯ ಪಡೆದರಯ್ಯ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.
--------------
ಉರಿಲಿಂಗಪೆದ್ದಿ
ಅಲಗು ಮೊನೆಧಾರೆ ಕಟ್ಟುಳ್ಳವ ರಣಕ್ಕಂಜುವನೆ ? ಮಲತ್ರಯದೂರ ಹಲವ ಕೆಲವರ ಒಲವರಕ್ಕೆ ಸಿಕ್ಕುವನೆ ? ವಿರಳವೆಂಬುದ ಕಂಡು, ಅವಿರಳವೆಂಬುದನರಿತು, ಶ್ರುತದೃಷ್ಟ ಅನುಮಾನಂಗಳ ಕಳೆದುಳಿದ ಮತ್ತೆ, ಅರ್ಚಿಸಿ, ಪೂಜಿಸಿ ಕಂಡೆಹೆನೆಂಬುದು ಇತ್ತಲೆ ಉಳಿಯಿತ್ತು, ಕಾಮಧೂಮ ಧೂಳೇಶ್ವರನತ್ತಲೈದಾನೆ.
--------------
ಮಾದಾರ ಧೂಳಯ್ಯ
ನುಡಿದ ನುಡಿಯೆಲ್ಲವು ಮಹಾಪ್ರಸಂಗವಾದ ಮತ್ತೆ ಲೆಕ್ಕವಿಲ್ಲದ ವೇದ, ಸಂಖ್ಯೆಯಿಲ್ಲದ ಶಾಸ್ತ್ರ, ಕಡೆ ನಡು ಮೊದಲಿಲ್ಲದ ಪುರಾಣವನೋದಲೇತಕ್ಕೆ ? ಅಲಗು ಮರೆ ಉಳ್ಳವಂಗೆ ಶಸ್ತ್ರದ ಭಯವೇತಕ್ಕೆ ? ಬಾಣದ ತೊಗಲುಳ್ಳವಂಗೆ ಅಂಬಿನ ಘಾಯವೇತಕ್ಕೆ ? ಶಬ್ದಮುಗ್ಧವಾದವಂಗೆ ಇಚ್ಫೆಯ ನುಡಿದು ಕುಚಿತ್ತನಾಗಲೇಕೆ ? ಅದು ತನ್ನ ಸ್ವಯದಿಂದ ಅಲ್ಲ ಅಹುದೆಂಬುದಕ್ಕೆ ದೃಷ್ಟವಾಯಿತ್ತು. ಬೆಳಗಿನ ಮುಖದಿಂದ ಬೆಳಗಿನ ಕಳೆಯನರಿವಂತೆ ನಿನ್ನಿಂದ ನೀನೇ ತಿಳಿ, ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನನ ಭಿನ್ನಭಾವವಿಲ್ಲದೆ
--------------
ಮೋಳಿಗೆ ಮಹಾದೇವಿ
ಬತ್ತೀಸಾಯುಧದಲಿ ಅಭ್ಯಾಸವ ಮಾಡಿದಡೇನು ಹಗೆಯ ಕೊಲುವಡೆ, ಒಂದಲಗು ಸಾಲದೆ ಲಿಂಗವ ಗೆಲುವಡೆ, `ಶರಣಸತಿ ಲಿಂಗವತಿಯೆಂಬಲಗು ಸಾಲದೆ ಎನಗೆ ನಿನಗೆ ಜಂಗಮಪ್ರಸಾದವೆಂಬ ಅಲಗು ಸಾಲದೆ ಕೂಡಲಸಂಗಮದೇವಾ.
--------------
ಬಸವಣ್ಣ
ಎನ್ನ ಬಹುರೂಪಕ್ಕೆ ಸೂತ್ರಧಾರಿಯಾದ ಬಸವಣ್ಣ. ನಾದವನರ್ಪಿಸಿದಲ್ಲಿ ಅರ್ಪಿತಗೊಂಡಾತ ಬಸವಣ್ಣ. ನಾ ಹೆಂಡಿರನರ್ಪಿಸುವಲ್ಲಿ ಅರ್ಪಿತಗೊಂಡಾತ ಬಸವಿದೇವ. ಎನ್ನ ಧನ ಕೆಟ್ಟಿತ್ತು ಬಸವನಿಂದ, ಮನ ಕೆಟ್ಟಿತ್ತು ಬಸವನಿಂದ. ಎನ್ನ ಗೋತ್ರ ನಿವಾರಣವಾಯಿತ್ತು ಬಸವನಿಂದ. [ವೇಳವಾಳಿ] ನಾ ಹೆಣ್ಣನರ್ಪಿತ ಮಾಡಿದಲ್ಲಿ ಒಪ್ಪುಗೊಂಡಾತ ಬಸವಣ್ಣ. ಕಡುಗಲಿ ತಮ್ಮನನಿರಿಯಲು ಮುರಿಯಿತ್ತು ಅಲಗು ಬಸವನಿಂದ. ಎನ್ನೊಡಲಲಿರ್ದ ಏಳು ಮಾನಿಸಸ್ತ್ರೀಯರು ಏಳಲಾರದೆ ಹೋದರು ಬಸವನಿಂದ. ನಾ ಕೆಟ್ಟೆ ಕಾಣಾ, ರೇಕಣ್ಣಪ್ರಿಯನಾಗಿನಾಥಾ ಬಸವನಿಂದ ಬದುಕಿತೀ ಲೋಕವೆಲ್ಲಾ.
--------------
ಬಹುರೂಪಿ ಚೌಡಯ್ಯ
ಶ್ರೀಗುರು ಶಿಷ್ಯಂಗೆ ಮಂತ್ರಮೂರ್ತಿಯ ಕೊಡಬೇಕಾಗಿ, ಸೃಷ್ಟಿಯ ಮೇಗಣ ಕಣಿಯ ತಂದು ಇಷ್ಟಲಿಂಗವ ಮಾಡಿ, ಶಿಷ್ಯನ ತನುವಿನ ಮೇಲೆ ಅದ ಧರಿಸಿ, ಲಿಂಗ ಅವತಳವಾಯಿತ್ತೆಂದು, ಭೂಮಿ ಸಿಂಹಾಸನಗೊಂಡಿತ್ತೆಂದು ಸಮಾಧಿಯ ಹೊಗುವಿರಯ್ಯಾ. ಆ ಲಿಂಗ ಅವತಳವಾದಡೆ ಭೂಮಿ ತಾಳಬಲ್ಲುದೆ ? ಗರಡಿಯಲ್ಲಿ ಮುಟ್ಟಿ ಸಾಧನೆಯ ಮಾಡುವಲ್ಲಿ, ಆಳು ಬಿದ್ದಡೆ ಭಂಗವಲ್ಲದೆ ಅಲಗು ಬಿದ್ದಡೆ ಭಂಗವೆ ? _ಅಲಗ ತಕ್ಕೊಂಡು ಗರಡಿಯಲಿ ಸಾಧನೆಯ ಮಾಡುವುದು ಕರ್ತವ್ಯ ನೋಡಾ. ಆ ಲಿಂಗ ಹುಸಿಯಾದಡೇನು ? ಗುರುಲಿಂಗ ಹುಸಿಯಾದಡೇನು ? ಜಂಗಮಲಿಂಗ ಹುಸಿಯಾದಡೇನು ? ಪಾದತೀರ್ಥ ಹುಸಿಯೆ ? ಪಾದತೀರ್ಥ ಪ್ರಸಾದ ಹುಸಿಯಾದಡೇನು, ವಿಭೂತಿವೀಳ್ಯಕ್ಕೆ ಬಂದ ಗಣಂಗಳು ಹುಸಿಯೆ ?_ ಇಂತೀ ಷಡುಸ್ಥಲವ ತುಚ್ಛಮಾಡಿ, ಗುರೂಪದೇಶವ ಹೀನಮಾಡಿ ಸಮಾಧಿಯ ಹೊಕ್ಕೆನೆಂಬ ಪಾತಕರ ಮುಖವ ನೋಡಲಾಗದು ಕಾಣಾ ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ಗುರುವೆಂಬ ತೆತ್ತಿಗನು ಲಿಂಗವೆಂಬಲಗನು ಮನನಿಷ್ಠೆಯೆಂಬ ಕೈಯಲ್ಲಿ ಕೊಡಲು, ಕಾದಿದೆ ಗೆಲಿದೆ ಕಾಮನೆಂಬವನ, ಕ್ರೋಧಾದಿಗಳು ಕೆಟ್ಟು, ವಿಷಯಂಗಳೋಡಿದವು. ಅಲಗು ಎನ್ನೊಳು ನಟ್ಟು ಆನಳಿದ ಕಾರಣ ಚೆನ್ನಮಲ್ಲಿಕಾರ್ಜುನಲಿಂಗವ ಕರದಲ್ಲಿ ಹಿಡಿದೆ.
--------------
ಅಕ್ಕಮಹಾದೇವಿ
ಅಲಗಿನ ಮೊನೆ ಆಯದಲ್ಲಿ ಬಿದ್ದ ಮತ್ತೆ ನೆಲೆಗೊಳ್ಳಬಲ್ಲುದೆ ಪ್ರಾಣ? ಅರಿದು ಮಾಡುವ ಮಾಟ ಅನುಸರಣೆಯಾದಲ್ಲಿ ಅಲಗು ಜಾರಿ ಒರೆ ತಾಗಿದಂತೆ. ಭಕ್ತಿ ಬರುದೊರೆ ಹೋಯಿತು ಕಾಲಾಂತಕ ಭೀಮೇಶ್ವರಲಿಂಗಕ್ಕೆ ದೂರವಾಯಿತ್ತು.
--------------
ಡಕ್ಕೆಯ ಬೊಮ್ಮಣ್ಣ
ಇನ್ನಷ್ಟು ... -->