ಅಥವಾ

ಒಟ್ಟು 20 ಕಡೆಗಳಲ್ಲಿ , 14 ವಚನಕಾರರು , 18 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪೂರ್ವಜನ್ಮದಲ್ಲಿ ಮಾಡಿದ ಕರ್ಮ, ಈಗಿನ ಜನ್ಮದಲ್ಲಿ ಭೋಗಿಸಲಿಕ್ಕೀಡಾಯಿತ್ತು. ಈಗ ಮಾಡಿದ ಕರ್ಮ, ಮುಂದಕ್ಕೆ ಬಿತ್ತಿದ ಬೆಳೆಯನುಂಬಂತೆ ಬರ್ಪುದು ತಪ್ಪದು. ಈ ಕರ್ಮವುಳ್ಳನ್ನಕ್ಕ ಆರಿಗಾದರೂ ಬಳಲಿಕೆ ಬಿಡದು. ಈ ಕರ್ಮ ಹರಿದಂದಿಗೆ ನಿಮ್ಮ ಕಾಂಬರು ಕಾಣಾ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ.
--------------
ಸ್ವತಂತ್ರ ಸಿದ್ಧಲಿಂಗ
ವೇದ ಯೋನಿಯ ಹಂಗು. ಶಾಸ್ತ್ರ ಯೋನಿಯ ಹಂಗು. ಪುರಾಣ ಯೋನಿಯ ಹಂಗು. ಆಗಮ ಯೋನಿಯ ಹಂಗು. ನಾದದಿಂದ ಉದಿಸಿದವು ಶ್ರೋತ್ರದ ಹಂಗು. ಹೇಳುವುದು ವೆಜ್ಜ, ಕೇಳುವುದು ವೆಜ್ಜ, ತಾ ಹಿಂದೆ ಬಂದುದು ವೆಜ್ಜ, ಈಗ ನಿಂದು ಮಾಡುವುದು ವೆಜ್ಜ. ಇಂತೀ ವೆಜ್ಜದಜ್ಜೆಯ ಗುದ್ದಿನಲ್ಲಿ ಬಿದ್ದವರಿಗೆ ನಿರ್ಧರವಿಲ್ಲ ಆತುರವೈರಿ ಮಾರೇಶ್ವರಾ.
--------------
ನಗೆಯ ಮಾರಿತಂದೆ
ಎಲಾ, ಶೈವ ವೀರಶೈವ ಎಂಬುವವು ಉಭಯ ಮತಗಳುಂಟು. ಅವು ಎಂತೆಂದಡೆ, ಸ್ಥಾಪ್ಯಲಿಂಗವ ಪೂಜೆಮಾಡುವುದೇ ಶೈವ; ಗುರುವು ಕೊಟ್ಟ ಇಷ್ಟಲಿಂಗವ ಪೂಜೆಮಾಡುವುದೇ ವೀರಶೈವ. ಅದರೊಳಗೆ ಲಿಪ್ತವಾಗಿರ್ಪರೇ ಭಕ್ತರು, ನೀವು ಕೇಳಿರಯ್ಯಾ : ಸ್ಥಾಪ್ಯಲಿಂಗವ ಪೂಜಿಸಿದ ಕರ ಪೋಗಿ ಪರಸ್ತ್ರೀಯರ ಕುಚಂಗಳ ಪಿಡಿಯಬಹುದೆ ? ಈಗ ಯತಿಯ ನುಡಿದ ಜಿಹ್ವೆ ಪೋಗಿ ಪರಸ್ತ್ರೀಯರ ಅಧರಪಾನ ಮಾಡಬಹುದೆ ? ಮಹಾಮಂತ್ರವ ಕೇಳಿದ ಕರ್ಣ ಪೋಗಿ ಪರತಂತ್ರವ ಕೇಳಬಹುದೆ ? ಲಿಂಗಪೂಜಕರ ಅಂಗ ಪೋಗಿ ಪರರಂಗವನಪ್ಪಬಹುದೆ ? ಇವನು ಶೈವ ಭಕ್ತನಲ್ಲಾ ! ಶೈವನಾಗಲಿ ವೀರಶೈವನಾಗಲಿ ಏಕಲಿಂಗನಿಷ್ಠಾಪರನಾಗಿ, ಅಷ್ಟಮದಂಗಳೊಳ್ದಳಗೊಂಡು ಸಂಹರಿಸಿ, ಪಂಚಕ್ಲೇಶ ದುರಿತ ದುರ್ಗುಣಗಳ ಕಳೆದುಳಿದು, ಆರು ಚಕ್ರವ ಹತ್ತಿ ಮೀರಿದ ಸ್ಥಲದೊಳಗಿಪ್ಪ ಲಿಂಗಮಂ ಪೂಜಿಸಿ, ಮೋಕ್ಷಮಂ ಪಡೆದಡೆ, ವೀರಶೈವನೆಂದು ನಮೋ ಎಂಬುವೆನಯ್ಯಾ ಬರಿದೆ ವೀರಶೈವನೆಂದು ತಿರುಗುವ ಮೂಳ ಹೊಲೆಯರ ಮುಖವ ನೋಡಲಾಗದು ಕಾಣಾ ಕೂಡಲಾದಿ ಚನ್ನಸಂಗಮದೇವಾ.
--------------
ಕೂಡಲಸಂಗಮೇಶ್ವರ
ಮಹಾಂಧಕಾರದಲ್ಲಿ ಸಂದಿಲ್ಲದೆ, ಹೊಂದಿ ಹೊಂದಿ ಬಾಹಾಗ, ಬಂದುದ ಬಲ್ಲೆಯಾ ? ಈಗ ಮಾಡುವ ಮಾಟದ ಅಂದವ ಬಲ್ಲೆಯಾ ? ನಿಸ್ಸಂಗವ ಮಾಡುವ ಲಿಂಗದ ಪುಂಗವ ಬಲ್ಲೆಯಾ ? ಇದಕ್ಕೆ ಸಾರಂದಗಾರಿಕೆಯ ಮಾ[ತೇಕೆ?] ಅಂದು ನೀ ಬಂದ ಬೆಂಬಳಿಯ ಕಂಬಳಿಯಲ್ಲದೆ ಲಿಂಗ[ವೆ], ನಿಃಕಳಂಕ ಮಲ್ಲಿಕಾರ್ಜುನ.
--------------
ಮೋಳಿಗೆ ಮಾರಯ್ಯ
ಧರೆಯ ಮೇಲೆ ನಿಂದು ಹೊಡೆವಡಿಸಿಕೊಂಬ ದೈವದ ಕುರುಹು ಎಲ್ಲಿ ಇದ್ದಿತ್ತು ಹೇಳಿರಣ್ಣಾ ? ಶರೀರದ ಮೇಲೆ ಕಟ್ಟಿ, ಕರ ಚರಣಾದಿ ಅವಯವಂಗಳು ಮುಂತಾದ ಹಲವು ಪರಿಭ್ರಮಣದಿಂದ ಪೂಜಿಸಿಕೊಂಬುದು, ಅದಾವ ಲಿಂಗವಣ್ಣಾ ? ಸರ್ವರೆಲ್ಲರ ಕೈಯಲ್ಲಿ, ಇದು ವಸ್ತು ಅಲ್ಲ, ಅಹುದೆಂದು ಗೆಲ್ಲ ಸೋಲಕ್ಕೆ ಹೋರುವುದು, ಅದಾವ ವಸ್ತುವಿನ ಕುರುಹಣ್ಣಾ ? ಇಂತೀ ಸ್ಥಾವರ ಚರ ಅರಿವಿನ ಕುರುಹೆಂಬುದೊಂದು ಸೆರಗ ತೋರಾ ? ಅದು ನುಡಿವಡೆ ಸಮಯಕ್ಕೆ ದೂರ. ಅದು ಮುನ್ನವೆ ಅರಿದರಿವ ಈಗ ಕುರುಹಿಡುವಲ್ಲಿ, ಅದು ಪರಿಭ್ರಮಣ ಭ್ರಾಂತಿ. ಇಂತೀ ಕರ್ಮಕಾಂಡ, ಇಂತಿವನರಿದು ಬೆರೆದೆನೆಂಬ ಜ್ಞಾನಕಾಂಡ. ಸುಮುದ್ರಿತವಾಗಿ, ಆ ಸುಮುದ್ರೆಯಲ್ಲಿ ಸೂತಕ ನಿಂದು, ಅದೇತಕ್ಕೂ ಒಡಲಿಲ್ಲದಿಪ್ಪುದು, ಕಾಮಧೂಮ ಧೂಳೇಶ್ವರ ತಾನು ತಾನೆ.
--------------
ಮಾದಾರ ಧೂಳಯ್ಯ
ಆಗ ಆದುದು ತಾನೆ ಇಕೊ ಈಗ ಆದುದು ತಾನೆ ಕೂಗಿ ಹೇಳಿದುದು ತಾನೆ ತಲೆದೂಗಿ ಕೇಳುವುದು ತಾನೆ | ಪಲ್ಲ | ಬೀಜ ಬಿತ್ತಾಯಿತು ಆ ಬೀಜವೇ ವೃಕ್ಷವಾಯಿತು ಬೀಜ ಫಲವಾಯಿತು ಬೀಜ ಬೀಜವೇ ರಸವಾಯಿತು. ರಸವೆ ಊಟವಾಯಿತು ಆ ರಸವೇ ತಾಟಾಯಿತು ಆ ರಸವೇ ನೋಟಾಯಿತು ರಸವೇ ಕೂಟಾಯಿತು. ಕೂಟೇ ಹೆಣ್ಣಾಯಿತು ಆ ಕೂಟೇ ಗಂಡಾಯಿತು ಕೂಟೇ ಪಿಂಡಾಯಿತು ಆ ಕೂಟೇ ಆಶಾಯಿತು. ಆಶೆ ದೋಷವಾಯಿತು ಆಶೆ ಪಾಶವಾಯಿತು ಆ ಆಶೆ ಘಾಸ್ಯಾಯಿತು ಆಶೆ ಆಶೆ ನಾಶಾಯಿತು. ನಾಶ ನಾನಾಯಿತು ಆ ನಾಶ ನೀನಾಯಿತು ನಾಶ ತಾನಾಯಿತು ನಾಶ ನಾಶ ಮಹಾಂತಾಯಿತು.
--------------
ಮಡಿವಾಳಪ್ಪ / ಕಡಕೋಳ ಮಡಿವಾಳಪ್ಪ
ಮುನ್ನ ಸತ್ತವರ ಕೇಳಿ, ಈಗ ಸತ್ತವರ ಕಂಡು, ನಾನು ಸತ್ತೆಹೆನೆಂಬುದ ತಾನರಿದ ಮತ್ತೆ, ಇದಿರ ನೋವನರಿಯಬೇಡವೆ ? ಇದಿರ ನೋವನರಿದವಂಗೆ ನಿಜಭಾವದಲ್ಲಿ ತಪ್ಪದೆ ಇಪ್ಪುದು, ಅವ ತಾನು ತಾನೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಮುನ್ನ ಗಳಿಸಿದವರೊಡವೆಯ ಈಗ ಕಂಡು ಮತ್ತೆ ಇನ್ನಾರಿಗೆ ಇರಿಸಿದೆ? ಅದಂದಿಗೆ ಮಳೆ ಬೆಳೆ ತಾನಿದ್ದಂದಿಗೂ ತಪ್ಪದು. ಇದನರಿದು ಕಲ್ಯಾಣದ ತ್ರಿಪುರಾಂತಕ ಲಿಂಗದಲ್ಲಿ ಗಾವುದಿ ಮಾಚಯ್ಯ ಹೇಳಿದುದ ದಿಟವೆನ್ನಿರಣ್ಣಾ.
--------------
ಗಾವುದಿ ಮಾಚಯ್ಯ
ಸ್ಥಲವಿಟ್ಟು ನಡೆಯಬೇಕೆಂಬರು, ಸ್ಥಲವಿಟ್ಟು ನುಡಿಯಬೇಕೆಂಬರು. ಸ್ಥಲದ ನೆಲೆಯನಾರೂ ಅರಿಯರು. ಕಾಯಸ್ಥಲ, ಕರಸ್ಥಲ, ಭಾವಸ್ಥಲವನರಿದು, ಆ ಕಾಯಸ್ಥಲ ಕರಸ್ಥಲ ಭಾವಸ್ಥಲದಲ್ಲಿ ಕೂಡಿ ನಿಲಿಸುವದೆ ಸ್ಥಲ. ಇದನರಿಯದೆ, ಹಿಂದಕ್ಕೆ ನುಡಿದವರ ಮಾತು ಕಲಿತುಕೊಂಡು, ಈಗ ನುಡಿವವರ ಮಾತ ಮೆಚ್ಚುವರೆ ನಮ್ಮ ಶರಣರು ? ಅದಂತಿರಲಿ. ಇನ್ನು ನೇಮವಾವುದು ಎಂದರೆ, ಗುರುಲಿಂಗಜಂಗಮದ ಪಾದೋದಕ ಪ್ರಸಾದವನರಿದು, ಅಂಗೀಕರಿಸಿ, ತನ್ನ ತನುವನೆ ಪ್ರಸಾದವ ಮಾಡುವದೀಗ ನೆಲೆ. ಈ ಸ್ಥಲದ ನೆಲೆಯ ಬಲ್ಲವರಿಗೆ ನಮೋ ನಮೋ ಎಂಬೆ. ಇದನರಿಯದೆ ಬರಿಯ ನುಡಿಯ ನುಡಿವವರ ಕಂಡರೆ ಛೀ ಎಂಬೆನು, ಬಸವಪ್ರಿಯ ಕೂಡಲಚೆನ್ನಬಸವಣ್ಣಾ.
--------------
ಹಡಪದ ಅಪ್ಪಣ್ಣ
ಎನಗಾದ ಮಹಾಪದವನರಿಯದೆ ನಾನು ಬಳಲಿದೆನಯ್ಯಾ, ಎನ್ನ ಪದವ ಈಗ ಅರಿದೆನು, ಬಳಲಿಕೆ ಹೋಯಿತ್ತು ಪರಿಣಾಮವಾಯಿತ್ತು. ಶಿವ ಶಿವಾ, ಶಿವನೆ ಕರ್ತನು, ನಾನು ಭೃತ್ಯನು ಮಿಕ್ಕುವೆಲ್ಲಾ ಮಿಥ್ಯವೆಂದರಿದು ಈ ಮಹಾಜ್ಞಾನಪದಕ್ಕೆ ಈ ಘನತರಸುಖಕ್ಕೆ ಈ ಮಹಾಪರಿಣಾಮಕ್ಕೆ ಇನ್ನಾವುದೂ ಸರಿಯಲ್ಲ. ಉಪಮಾತೀತ ವಾಙ್ಮನೋತೀತ ನೀನೆ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಶ್ರೀಗುರುಕರಜಾತರೆನಿಸಿ, ನಿಜಮೋಕ್ಷಾಪೇಕ್ಷನೆನಿಸಿ, ಸ್ವಯಚರಪರ ಭಕ್ತಗಣಾರಾಧ್ಯರ ಅರ್ಚನೆ ಪೂಜನೆ ಮಾಡಿ, ದಾಸೋಹಂಭಾವದಿಂದ ಪರತರಬ್ರಹ್ಮಪರಿಪೂರ್ಣಾನಂದವಸ್ತುವೆಂದು ಸಮರಸಾಚರಣೆಯಿಂದ ಹತ್ತುಹನ್ನೊಂದು ಕೊಟ್ಟು ಕೊಂಡ ಮೇಲೆ, ಸಂಕಲ್ಪಭಾವ ತಥ್ಯಮಿಥ್ಯಗಳಿಂದ ಆಸೆ ಆಮಿಷದ ಪಾಶಬದ್ಧ ಜಡಜೀವಿಗಳ ಹುಸಿಮಾತನಾಲಿಸಿ, ವಿವೇಕತಪ್ಪಿ, ನಸುಗುನ್ನಿಕಾಯಂತೆ ಮೋರೆಯಾಗಿ, ತುಮುರೆಕಾಷ*ದಂತೆ ನುಡಿಯಾಗಿ, ವಾರೆನೋಟಗಳಿಂದ ಸಮರಸವನುಳಿದು, ಭಿನ್ನಭಾವದಿಂದ ಕುಂದುನಿಂದ್ಯವ ನುಡಿವುದೊಂದು ದುರಾಚಾರ. ನುಡಿಸೂಸಿದ ಮೇಲೆ ಒಬ್ಬರೊಬ್ಬರು ಅವಿಚಾರಿಗಳಾಗಿ, ಬಾಜಾರಕ್ಕೆ ನಿಂತು, ತನಗಿಂದ ಸ್ವಲ್ಪ ಮನುಷ್ಯರನಾಶ್ರಯಿಸಿ, ಪಂಥಪರಾಕ್ರಮಿಗಳಿಂದ ತಥ್ಯಮಿಥ್ಯವ ನುಡಿದು, ಅರ್ಚನಾರ್ಪಣಗಳ ತೊರೆದು, ದೋಷಾರ್ಥಿಯಾಗಿ ವರ್ತಿಸುವುದೊಂದು ದುರಾಚಾರ. ಭಕ್ತಗಣಂಗಳು ವಾರಬಡ್ಡಿಗಳ ಕೊಟ್ಟು ಕೊಂಡು ವ್ಯವಹರಿಸಿ, ಈಷಣತ್ರಯದ ಅಂಗವಿಷಯದಿಂದ ದ್ರವ್ಯವ್ಯಾಪಾರಿಯಾಗಿ, ದುರಾತ್ಮರಂತೆ ಬಾಜಾರಕ್ಕೆ ಬಿದ್ದು ಕಠಿಣನುಡಿಗಳ ಬಳಸುವುದೊಂದು ದುರಾಚಾರ. ಹೊನ್ನು ಹೆಣ್ಣು ಮಣ್ಣು ಧಾನ್ಯ ವಸ್ತ್ರಗಳಿಗೆ ಹೊಣೆ ಜಾವಿೂನುಗಳಾಗಿ ಅಸನ ವಸನದಿಚ್ಛೆಗೆ ಮಿತಿದಪ್ಪಿದಲ್ಲಿ , ಸಾಕ್ಷಿ ವಾದಕ್ಕೆ ನಿಂತು, ಆಡಬಾರದ ಮಾತನಾಡುವುದೊಂದು ದುರಾಚಾರ. ಗುರುಹಿರಿಯ ಪಿತ-ಮಾತೆಗಳಿಗೆ ತಾ ಗಳಿಸಿದ ದ್ರವ್ಯವ ವಂಚಿಸಿ, ಇದ್ದೂ ಇಲ್ಲಯೆಂದು ಹುಸಿನುಡಿಯ ನುಡಿವುದೊಂದು ದುರಾಚಾರ. ಗುರುಚರಲಿಂಗಮೂರ್ತಿಗಳು ಹಸಿವಿಗನ್ನ, ಶೀತಕ್ಕೆ ವಸ್ತ್ರ, ಪಾದಕ್ಕೆ ವಾಹನವಾದುದ ಬೇಡಿದಲ್ಲಿ ತನಗೆ ತ್ರಾಣಿದ್ದು ಅವರಿಗೆ ಈಗ ದೊರೆಯದೆಂದು ಪ್ರಪಂಚನುಡಿಯ ನುಡಿವುದೊಂದು ದುರಾಚಾರ. ಈ ದುರಾಚಾರ ಹುಸಿನುಡಿಗಳನಳಿದುಳಿದು, ಭ್ರಾಂತುಭ್ರಮೆಗಳ ನೀಗಿ, ತನ್ನ ನಡೆನುಡಿಗಳು ತನಗೆ ಪ್ರಮಾಣವಾಗಿ, ನಿರ್ವಂಚಕತನದಿಂದ ಶ್ರುತಿಗುರುಸ್ವಾನುಭಾವವಿಡಿದು, ತಥ್ಯಮಿಥ್ಯವನಡಿಮೆಟ್ಟಿ, ಕಿಂಕರಭಾವದೊಳು ಗುರುಹಿರಿಯರ ಪ್ರಮಾದವಶದಿಂದ ಪ್ರಮಥಗಣಮಾರ್ಗವ ಬಿಟ್ಟಾಚರಿಸುವದ ಪರಶಿವಲಿಂಗಮೂರ್ತಿ ಹರಗಣಸಾಕ್ಷಿಯಾಗಿ ತಾನು ಕಂಡಲ್ಲಿ , ಅವರನಾಚರಿಸದಾಚಾರದ ಸ್ಥೂಲಸೂಕ್ಷ್ಮವಾದೊಡೆ ಹರಗಣಂಗಳೊಡನೆ ಅವರಿಗೆ ಶರಣುಹೊಕ್ಕು, ಹರಗುರುವಾಕ್ಯಪ್ರಮಾಣವಾಗಿ ಮೃದುತರ ನುಡಿಗಳಿಂದ ತಾವು ಅವರೊಡನೆ ಏಕಭಾವದಿಂದ ಕ್ರಿಯಾಲೀಲೆಯ ಸಮಾಪ್ತವ ಮಾಡುವುದು. ಇದಕ್ಕೆ ಮೀರಿ ಸ್ಥೂಲವಾದೊಡೆ ಮೌನಧ್ಯಾನದಿಂದ ಪರಶಿವಲಿಂಗಸಾಕ್ಷಿಯಾಗಿ, ಹರಗಣಕ್ಕೊಪ್ಪಿಸಿ, ಹತ್ತು ಹನ್ನೊಂದರ ಸಮರಸಾನುಭಾವವ ತ್ಯಜಿಸಿ, ಆಪ್ಯಾಯನಕ್ಕನ್ನ, ಸೀತಕ್ಕೆ ವಸ್ತ್ರ, ಲಾಂಛನಕ್ಕೆ ಶರಣೆಂದು ಬಯಲಿಗೆ ಬೀಳದೆ ಸುಮ್ಮನಿರ್ಪುದೆ ಪ್ರಮಥಗಣಮಾರ್ಗವು. ಈ ಸನ್ಮಾರ್ಗವನುಳಿದು ಕಿರಾತರಂತೆ ಹುಸಿಶಬ್ದ, ಹೊಲೆಶಬ್ದ , ಹೇಸಿಕೆಶಬ್ದ, ವಾಕರಿಕೆಶಬ್ದ, ಬಾಂಡಿಕಶಬ್ದ, ನೀಚರನುಡಿ, ಷಂಡರಮಾತು, ಕಳ್ಳರನುಡಿ, ಜಾರರನುಡಿ, ಜೂಜುಗಾರರನುಡಿ, ಆಟಕಾರರನುಡಿ, ಬೇಟೆಗಾರರನುಡಿ, ಕುಲಛಲಗಾರರನುಡಿ, ಲಾಹರಿಗಾರರನುಡಿ, ಅಶನಘಾತಕರನುಡಿ, ಲಂಚಗಾರರನುಡಿ, ರಿಣಪಾತಕರನುಡಿ, ಮೋಸಗಾರರನುಡಿ, ಭ್ರಾಂತರನುಡಿ, ಕೋಪಿಗರನುಡಿ, ಆಚಾರಹೀನ ನಡೆಗೆಟ್ಟರನುಡಿ, ಬಳ್ಳದತುದಿಹೀನ ಶಬ್ದದಂತೆ ತುಂಟ ತುಡುಗುಣಿ ಹಲವು ಮಾತುಗಳ ಬಳಕೆಯುಳ್ಳುದೆ ಚತುರ್ಥಪಾತಕವು. ಇದಕ್ಕೆ ಹರವಾಕ್ಯ ಸಾಕ್ಷಿ : ``ಕುಶಬ್ದಂ ಹೀನಶಬ್ದಂ ಚ ಚಾಂಡಾಲಃ ಶ್ವಪಚೋýಪಿ ವಾ | ಹೀನಶಬ್ದಸ್ಯ ಪಾಪಾಚ್ಚ ನರಕೇ ಕಾಲಮಕ್ಷಯಂ || ಅನೃತಂ ಚಾಪಶಬ್ದಂ ಚ ನಿಂದಕೋ ಗುರುತಲ್ಪಗಃ | ಗಣಾದಿವಾದದೂಷ್ಯಶ್ಚ ವೇಶ್ಯಾಪುತ್ರಸ್ತಥೈವ ಚ || ಪರನಿಂದಾವಂದನಾಶ್ಚ ಲಿಂಗಸಂಗಿವಿವರ್ಜಿತಂ | ಪ್ರಮಾದಂ ಕುರುತೇ ವಾಣ್ಯಾ ಮೋಕ್ಷೋ ನಾಸ್ತಿ ಮಹೇಶ್ವರಿ || ಅನ್ಯದೋಷೇಣ ನಿಂದ್ಯಮಾಸ್ತು ಸ್ವದೋಷಗುಪ್ತಪಾತಕಃ | ಗುರುಭ್ರಷ್ಟಸ್ಯ ಚಾಂಡಾಲೋ ರೌರವಂ ನರಕಂ ವ್ರಜೇತ್ ||'' ಇಂತೆಂದುದಾಗಿ, ಪರಮಾರಾಧ್ಯ ಶ್ರೀಗುರುಕಟಾಕ್ಷೆಯಿಂದ ತನ್ನ ತಾನರಿದು, ಈ ಲಿಂಗಾಂಗಸಂಗಸಂಬಂಧದಾಚರಣೆಯ ಸುಖವು ಏನು ತಪಸ್ಸಿನ ಫಲವೋಯೆಂದರಿದು ಮರೆದರೆ ಇನ್ನೀ ನಿಜಮೋಕ್ಷವು ದೊರೆಯದೆಂದು ಗುರುಹಿಯರ ನಡೆನುಡಿಗಳಾಲಿಸಿ, ನಡೆನುಡಿಭಿನ್ನವಾಗದಂತೆ ಚತುರ್ಥಪರಮದ್ರೋಹದ ಪಾತಕಮಂ ನಿರಸನಂಗೈದು ನಿಜಪರಶಿವಘನಕ್ಕೆ ಘನವೆನಿಸಿರ್ಪುದು ಕಾಣಾ ನಿರವಯಪ್ರಭು ಮಹಾಂತ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ.
--------------
ಮೂರುಸಾವಿರ ಮುಕ್ತಿಮುನಿ
ಅಯ್ಯಾ, `ಬ್ರಹ್ಮಲಿಖಿತವೇ ದೊಡ್ಡಿತ್ತು' ಎಂದು ಪೇಳುವಿರಿ, 'ಬ್ರಹ್ಮಲಿಖಿತಕ್ಕೆ [ಇದಿರು] ಯಾರಾರು ಇಲ್ಲ' ವೆಂದು ಹೇಳುವಿರಿ, ನೀವು ಕೇಳಿರಯ್ಯಾ: ಇಂಥ ಬ್ರಹ್ಮಲಿಖಿತವ ಗೆದ್ದವರು ನಮ್ಮ ಶಿವಗಣಾಧೀಶ್ವರರಲ್ಲದೆ ಮಿಕ್ಕಿನವರು ಗೆದ್ದದ್ದು ಇಲ್ಲಾ ಕಾಣಿರಯ್ಯಾ! ಅದು ಎಂತೆಂದಡೆ: ಎಲೆ, ಬ್ರಹ್ಮನು ಶಿವನಂ ಕಾಣಲರಿಯದೆ ತತ್ತ್ವಸಾರವ ತಿಳಿಯಲರಿಯದೆ ಶಿರವ ಭೇದಿಸಿಕೊಂಡ. ಇಂಥ ಬ್ರಹ್ಮಮುಖವಾದ ವೇದಗಳು ರಥಕ್ಕೆ ವಾಜಿಯಾಗಿ ಹೋದವು. ಇಂಥಾತ್ಮನು ತತ್ತ್ವಸಾರವ ತಿಳಿಯದೆ, ಅರಿಯದೆ, ನಿಜವಸ್ತುವಾದ ಲಿಂಗಮಂ ಮರೆದು, ಶಿರವ ಭೇದಿಸಿಕೊಂಡ. ಅವ ನಮ್ಮ ಪ್ರಮಥ ಗಣಾಧೀಶ್ವರರಿಗೆ ಅದೃಷ್ಟವ ಬರೆವುದಕ್ಕೆ ಕಾರಣಕರ್ತನೆ ? ಅಥವಾ ಆ ಕ್ಷಣ ಮಾತ್ರದಲ್ಲಿ ಪುತ್ರಜನನವಾದ ಕಾಲದಲ್ಲಿಯು ಬ್ರಹ್ಮನ ಬರ [ಹ ಹೋ]ಹಾಗಾಗಲಿಯೆಂದು, ಮಹಾಗುರುವು ಬಂದು ತ್ರಿಪುಂಡ್ರವಾದ ಮೂರು ಬೆರಳಿಂದ ಬ್ರಹ್ಮಲಿಖಿತವಂ ದಟ್ಟಿಸಿ ಪಣೆಗಿಟ್ಟು, ಮಾಂಸಪಿಂಡವಂ ಪೋಗಿ[ಸಿ] ಮಂತ್ರಪಿಂಡವ ಮಾಡುವರಲ್ಲದೆ ಮಿಕ್ಕವರಿಂದಾಗದು ಕಾಣಿರಯ್ಯಾ. ಆ ಪ್ರಮಥ ಗಣಾಧೀಶ್ವರರು ನಡೆದರೆಂದು ಈಗ ಮನುಜರು 'ನಾನೂ ನಡೆದೇನು' 'ನೀನೂ ನಡೆದೇನು' ಎಂದು ತಿರುಗುವ ಮೂಳ ಹೊಲೆಯರ ಮುಖವ ನೋಡಲಾಗದು ಕಾಣಾ ಕೂಡಲಾದಿ ಚನ್ನಸಂಗಮದೇವಾ.
--------------
ಕೂಡಲಸಂಗಮೇಶ್ವರ
ಕಲ್ಪಿತದಿಂ ಮಾಡುವ ಭಕ್ತ ನಿರ್ಧನಿಕನಾದರೆ ತನ್ನ ಕೈಯ ಧನವ ವೆಚ್ಚಿಸಿ, ಆ ಭಕ್ತನ ಕೂಡಿಕೊಂಡು ಲಿಂಗಾರ್ಚನೆಯ ಮಾಡಿ, ಅವರ ಮತ್ತೆ ದಾಸೋಹಕ್ಕೆ ನಿಲಿಸಿ, ತಾ ಕರ್ತನಾಗಿ ಪರಿಣಾಮಿಸಬಲ್ಲರೆ ಜಂಗಮ. ಅವರಿಗೆ ನಮೋ ನಮೋ [ಎಂಬೆ] ಅಂತಲ್ಲದೆ ಮುನ್ನ ಮಾಡಿದಿರಿ, ಈಗ ಮಾಡಿರೇನಿ ಭೋ ಎಂದು ಜರಿದು ಝಂಕಿಸಿ ಹೋಹರ ಜಂಗಮವೆಂಬೆನೆ ? ಎನ್ನೆನು. ಏನು ಕಾರಣವೆಂದರೆ_ ಆತ ಸೂನೆಗಾರ, ಆತ ದೋಷಾರ್ಥಿ, ಆತ ಭವಭಾರಿ ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ಎಲಾ, ದೇವರು ಹಿಡಿಯಿತೆಂಬೋ ನಾಯಿಮಗನೇ ನೀ ಕೇಳು : ಎಲಾ, ಹಿಂದಕ್ಕೆ ಅನಂತ ಋಷಿಗಳು ದೇವರ ಕುರಿತು ತಪಸ್ಸುಮಾಡಿ ದೇವರ ಕಾಣದೆ ಪೋದರು. ತ್ರಿಕಾಲದಲ್ಲಿ ಮಹಾಪುರುಷರು ಶಿವಪೂಜೆ ಅಂಗೀಕರಿಸಿ, ಕೋಟ್ಯಾಂತರ ದ್ರವ್ಯವನ್ನು ಜಂಗಮಕ್ಕೆ ನೀಡಿ, ಮಾಡಿ, ಸ್ವಪ್ನದಲ್ಲಿ ದೇವರ ಪಾದವ ಕಾಣದೆ ಹೋದರು. ಈಗಿನವರು ಮಹಾಮಲಿನವಾದ ಕಾಯಕೂಷ್ಣವೂಷ್ಣವು (?), ಬಿಷ್ಣದ (?) ದೇಹ, ಕನಿಷ್ಟದ ನಡತೆ, ಕಾರ್ಕೋಟಕ ಬುದ್ಧಿ ಕರ್ಮೇಂದ್ರಿಯಂಗಳಲ್ಲಿ ಹೊರಳಾಡುವ ಹೊಲೆಯ[ರಿ]ಂಗೆ ದೇವರೆಲ್ಲೈತೆಲಾ ? ಆದರೂ ಚಿಂತೆಯಿಲ್ಲ. ಎಲಾ, ಹನುಮಂತ ದೇವರು ಹಿಡೀತು ಎಂಬವನೇ ನೀ ಕೇಳು : ಹಿಂದಕ್ಕೆ ಹನುಮಂತದೇವರು ಸಂಜೀವನಕ್ಕೆ ಪೋಗಿ ಅರ್ಧಬೆಟ್ಟವನ್ನು ಕಿತ್ತುಕೊಂಡು ಬಂದಿರ್ದ. ಅಂಥ ಹನುಮಂತದೇವರು ನಿನ್ನ ದೇಹದಲ್ಲಿ ಇದ್ದ ಬಳಿಕ ಈಗ ಹನ್ನೆರಡು ಮಣವು ಕಲ್ಲನಾದರು ಎತ್ತಿ ನೆತ್ತಿಮೇಲೆ ಇಟ್ಟುಕೊಂಡರೆ ದೇವರೆನಬಹುದು ! ಎಲಾ, ವೀರಭದ್ರದೇವರು ಹಿಡೀತು ಎಂಬುವನೇ ನೀ ಕೇಳು : ಹಿಂದಕ್ಕೆ ವೀರಭದ್ರದೇವರು ಮುನ್ನೂರು ಮೂರು ಕೋಟಿ ರಾಕ್ಷಸರನ್ನು ಸಂಹರಿಸಿದ. ಅಂತಪ್ಪ ವೀರಭದ್ರದೇವರು ನಿನ್ನ ದೇಹದಲ್ಲಿ ಇದ್ದ ಬಳಿಕ ಕತ್ತಿ ಕಿತ್ತುಕೊಂಡು ಒಬ್ಬ ಇಬ್ಬರನಾದಡೆ ಸಂಹರಿಸಿದಡೆ ದೇವರೆನಬಹುದು! ಇದಂ ಬಿಟ್ಟು, ನೀನು ದೇವರುಹಿಡೀತು ಎಂದು ಕೂಗುವಾಗ, ಗಟ್ಟಿಯುಳ್ಳವ ಬಂದು ತೆಕ್ಕೆಯೊಳಗೆ ಪಿಡಿದರೆ, ತೆಕ್ಕೆಯೊಳಗೆ ಸೇರಿಕೊಂ[ಬೆಯ]ಲ್ಲದೆ ತೆಕ್ಕೆ ಬಿಡಿಸಿಕೊಂ[ಬ]ಸಾಮಥ್ರ್ಯ ನಿನಗಿಲ್ಲಾ ! ನಿಮಗೆ ಹಿಡಿವುದು ಪಿಶಾಚಿ, ಪಿಶಾಚಿ ವಡವದೇ (?) ಪಾದರಕ್ಷೆ ಇಂಥಾ ದೇವರ ಮಹಾತ್ಮೆಯಂ ತಿಳಿದು, [ತ]ಮ್ಮ ಸುಜ್ಞಾನವಂ, ಮರೆದು, 'ಇವರೇ ದೇವರೆ'ಂದು ಅಡ್ಡಬೀಳುವ ಮೂಳ ಹೊಲೆಯರ ಮುಖವ ನೋಡಲಾಗದು ಕಾಣೋ ಕೂಡಲಾದಿ ಚನ್ನಸಂಗಮದೇವಾ.
--------------
ಕೂಡಲಸಂಗಮೇಶ್ವರ
ಶರಣರೈಕ್ಯರೆಂದು ನುಡಿದಾಡುವರು, ಶರಣಸ್ಥಲವೆಂತಿರ್ಪುದೆಂದರಿಯರು. ಅನ್ನವನಿಕ್ಕಿದವರೆಲ್ಲ ಶರಣರೆ ? ಹೊನ್ನು ಕೊಟ್ಟವರೆಲ್ಲ ಶರಣರೆ ? ಹೆಣ್ಣುಕೊಟ್ಟವರೆಲ್ಲ ಶರಣರೆ ? ಮಣ್ಣುಕೊಟ್ಟವರೆಲ್ಲ ಶರಣರೆ ? ಅಲ್ಲಲ್ಲ ಅದಕ್ಕೆ ಪುಣ್ಯದಾ ಫಲವುಂಟು. ಅದಂತಿರಲಿ ಶರಣನಾದರೆ ತನ್ನ ಮರಣ ಬಾಧೆ ಗೆಲಿಯಬೇಕು. ಮರಣ ಬಾಧೆಯ ಗೆದ್ದ ಶರಣರು ಕಂಡನುವೆ ಅಂಗ ಮನ ಸುಸಂಗ. ಅವರು ಹಿಡಿದ ಧನವೆ ಪದಾರ್ಥ. ಇದೀಗ ನಮ್ಮ ಮುನ್ನಿನ ಶರಣರ ನಡೆನುಡಿ. ಇದನರಿಯದೆ ಈಗ ಮನೆ ಮನೆಗೆ ಶರಣರು, ತನತನಗೆ ಶರಣರು ಎಂದು ನುಡಿದಾಡುವರು. ಈ ಬಿನುಗರ ನುಡಿಯ ಮೆಚ್ಚುವನೆ ನಮ್ಮ ಅಪ್ಪಣ್ಣಪ್ರಿಯ ಚೆನ್ನಬಸವಣ್ಣ ?
--------------
ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ
ಇನ್ನಷ್ಟು ... -->