ಅಥವಾ

ಒಟ್ಟು 9 ಕಡೆಗಳಲ್ಲಿ , 9 ವಚನಕಾರರು , 9 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸತ್ಯ ಸದಾಚಾರ ಸಮ್ಯಜ್ಞಾನವೆಂಬುವು ಮೂರು. ನಾಮವೊಂದೇ ರೂಪವೊಂದೇ ಕ್ರೀವೊಂದೇ ಕಾಯವೊಂದೇ ಕರಣವೊಂದೇ ಆತ್ಮವೊಂದೇ ಪರಮಾತ್ಮವೊಂದೇ ನೀರು ಗಟ್ಟಿಗೊಂಡ ಆಣೆಕಲ್ಲು ನೀರೇ ಆಯಿತಲ್ಲದೇ ಕಲ್ಲಾಗಲಿಲ್ಲಾ. ಇದರಂತೆ ಶರಣ ಒಳಹೊರಗೆಂಬ ಸಂಶಯ ಅಳಿದು ಸರ್ವವೂ ತಾನೆಂಬ ಸತ್ಯವೇ ಸತ್ಯವಾಗಿಹನು. ಇದೇ ಸತ್ಯ ಸತ್ಯವೆಂದು ಮಹತ್ವ ತೋರಿದರೆ ಸತ್ಯವೇ ಅಲ್ಲಾ, ಆ ಮಹತ್ವವು ತನಗನ್ಯವೇ ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ ?
--------------
ಮಡಿವಾಳಪ್ಪ / ಕಡಕೋಳ ಮಡಿವಾಳಪ್ಪ
ಒಳಗೆ ಕೂಡಿ ಹೊರಗೆ ಮರೆದಿರ್ಪೆನಯ್ಯಾ. ಹೊರಗೆ ಕೂಡಿ ಒಳಗೆ ಮರೆದಿರ್ಪೆನಯ್ಯಾ. ಒಳಹೊರಗೆಂಬ ಸಂದು ಸಂಶಯವನಳಿದು ತೆರಹಿಲ್ಲದೆ ನಿಮ್ಮೊಳಗೆ ಏನೇನು ಅರಿಯದಂತಿರ್ದೆನಯ್ಯಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಸಕಲವ ಪೂಜಿಸಿಹೆನೆಂಬವಂಗೆ, ಸಕಲವನು ಲಿಂಗದಲ್ಲಿಯೇ ಪೂಜಿಸಬೇಕು. ನಿಷ್ಕಲವ ಪೂಜಿಸಿಹೆನೆಂಬವಂಗೆ, ನಿಷ್ಕಲವನು ಲಿಂಗದಲ್ಲಿಯೇ ಪೂಜಿಸಬೇಕು. ಅದೆಂತೆಂದಡೆ: ಸಕಲನಿಷ್ಕಲಾತ್ಮನು, ಸಕಲನಿಷ್ಕಲಾತೀತನು ಲಿಂಗಾರ್ಚನೆಯಿಂದ ಪರ ಒಂದು ಇಲ್ಲಾಗಿ ಒಳಹೊರಗೆಂಬ ಭಾವ ಅಳಿದುಳಿದ ಶರಣನ ಅಂತರಂಗಬಹಿರಂಗಭರಿತನಾಗಿಹನು ಶಿವನು, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಹೆಡತಲೆಯ ಮಾತ ಬಲ್ಲಡೆ ಪ್ರಸಾದಿ. ನಡುನೆತ್ತಿಯ ಮರ್ಮವನರಿದಡೆ ಪ್ರಸಾದಿ. ಕಂಗಳ ಮೊಲೆ ಕೂರ್ಮನ ಆಪ್ಯಾಯನವ ಬಲ್ಲಡೆ ಪ್ರಸಾದಿ. ಅಂಗೇಂದ್ರಿಯವನೊಂದು ಮುಖವ ಮಾಡಬಲ್ಲಡೆ ಪ್ರಸಾದಿ. ನಿರಂಜನ ಜಂಗಮನನಾರೋಗಿಸಬಲ್ಲಡೆ ಪ್ರಸಾದಿ. ನಿರಾಲಂಬ ಪ್ರಣವಮನುಚ್ಚರಿಸಬಲ್ಲಡೆ ಪ್ರಸಾದಿ. ಹ್ರೀಂ ಶಕ್ತ್ಯಾರೂಢನಾದ ಚರಪಾದಾಂಬುವ ಹ್ರೈಂಶಕ್ತಿ ಬದ್ಧನಾದ ಲಿಂಗಕ್ಕೆ ಶಾಂತಿಯ ಮಾಡಬಲ್ಲಡೆ ಪ್ರಸಾದಿ. ಆಧಾರ ಬ್ರಹ್ಮದೊಳಗೆ ಅಡಗಿದ ಅಕ್ಷರವ ನೋಡಿ ಓದಬಲ್ಲಡೆ ಪ್ರಸಾದಿ. ಭಾವವ ಕ್ರೀಯಲ್ಲಿ ತಂದು ಭಾವದಲ್ಲಿ ನೆಲೆಗೊಳಿಸಬಲ್ಲಡೆ ಪ್ರಸಾದಿ. ಒಳಹೊರಗೆಂಬ ಭಾವಗೆಟ್ಟು ಸುಳುಹಿನ ಪ್ರಸಾದದ ಕಳೆವೆಳಗ ನುಂಗಿದ ಲಿಂಗಕ್ಕೆ ಅರ್ಪಿಸಿ ಸುಖಿಸಬಲ್ಲಡೆ ಪ್ರಸಾದಿ. ಸ್ಥಾವರವ ಜಂಗಮದೊಳಡಗಿಸಿ ಜಂಗಮವ ಸ್ಥಾವರವ ಮಾಡಬಲ್ಲಡೆ ಪ್ರಸಾದಿ. ಇದು ಕಾರಣ ನಿಜಗುಣನೆಂಬ ಮಹಾಜಂಗಮ ನಿಜಾನಂದವೆಂಬ ಒಕ್ಕುಮಿಕ್ಕ ಘನಪ್ರಸಾದವ ಕೊಟ್ಟನಾಗಿ ಸಿಮ್ಮಲಿಗೆಯ ಚೆನ್ನರಾಮನೆಂಬ ಲಿಂಗವೆನ್ನ ಹಿಂಗದಾಲಿಂಗಿಸಿದನಾಗಿ ಪ್ರಸಾದಿಯಾದೆ.
--------------
ಚಂದಿಮರಸ
ಕರಚರಣಾದಿ ದೇಹಂಗಳಲ್ಲಿ ಹೊಕ್ಕು, ಒಳಗಡಗಿ, ಹೊರಗಣ ಬಾಹ್ಯವ ಹಿಡಿವುದದೇನೋ ? ಹೊರಗಣ ಅರ್ಪಿತವ ಒಳಗೆ ಕೊಟ್ಟು, ಅರ್ಪಿಸುವುದದೇನೋ ? ಆ ಒಳಗು ಹೊರಗೆಂಬ ಉಭಯವ ತಿಳಿದಲ್ಲಿ, ಅನಲಂಗೆ ಕೀಳು ಮೇಲೆಂಬುದುಂಟೆ ? ನೆರೆ ಅರಿದ ಆತ್ಮಂಗೆ, ಒಳಹೊರಗೆಂಬ ಉಭಯದ ಸೂತಕವಿಲ್ಲ, ಕಾಮಧೂಮ ಧೂಳೇಶ್ವರಾ.
--------------
ಮಾದಾರ ಧೂಳಯ್ಯ
ಒಳಗ ಶೋಧಿಸಿ ಹೊರಗ ಶುದ್ಧಯಿಸಿ; ಒಳಹೊರಗೆಂಬ ಉಭಯ ಶಂಕೆಯ ಕಳೆದು, ಸ್ಫಟಿಕದ ಶಲಾಕೆಯಂತೆ ತಳವೆಳಗು ಮಾಡಿ ಸುಕ್ಷೇತ್ರವನರಿದು ಬೀಜವ ಬಿತ್ತುವಂತೆ- ಶಿಷ್ಯನ ಸರ್ವ ಪ್ರಪಂಚ ನಿವೃತ್ತಿಯಂ ಮಾಡಿ ನಿಜೋಪದೇಶವನಿತ್ತು, ಆ ಶಿಷ್ಯನ ನಿಜದಾದಿಯನೈದಿಸುವನೀಗ ಜ್ಞಾನಗುರು. ಆ ಸಹಜ ಗುರುವೀಗ ಜಗದಾರಾಧ್ಯನು, ಅವನ ಶ್ರೀಪಾದಕ್ಕೆ ನಮೋ ನಮೋ ಎಂಬೆ ಕಾಣಾ ಚೆನ್ನಮಲ್ಲಿಕಾರ್ಜುನಾ.
--------------
ಅಕ್ಕಮಹಾದೇವಿ
ಅಂಗದ ಮೇಲೆ ಲಿಂಗಸಂಬಂಧವಾದ ಬಳಿಕ, ಪ್ರಾಣದ ಮೇಲೆ ಜ್ಞಾನ ನಿರ್ಧಾರವಾಯಿತ್ತು ನೋಡಾ. ಒಳಹೊರಗೆಂಬ ಉಭಯವು ಏಕಾರ್ಥವಾಯಿತ್ತು, ಗುಹೇಶ್ವರಾ ನಿಮ್ಮ ನೆನೆದೆನಾಗಿ.
--------------
ಅಲ್ಲಮಪ್ರಭುದೇವರು
ತೆಂಗಿನೊಳಗಣ ತಿರುಳು ಸೇವಿಸಬರ್ಪುದಲ್ಲದೆ ಹೊರಗಣ ಪರಟೆ ಸೇವಿಸಲು ಬಾರದು. ಚಾಂಡಾಲಂಗೆ ಜ್ಞಾನವಂಕುರಿಸಿದಡೆ ಆತನ ಅಂತರಂಗದ ವೃತ್ತಿಗೆ ಪೂಜ್ಯತೆಯಲ್ಲದೆ ಬಹಿರಂಗದ ತನುವಿಗೆ ಪೂಜ್ಯತೆಯಾಗದು. ಒಳಹೊರಗೆಂಬ ಭೇದವಿಲ್ಲದೆ ಸೇವಿಸಲುಚಿತವಪ್ಪಂತೆ ಶಿವಕುಲಪ್ರಸೂತಂಗೆ ಶಿವಜ್ಞಾನವಾಗಲು ಆತನ ತನುವೃತ್ತಿಗಳೆರಡೂ ಸೇವ್ಯವಾಗಿರ್ಪವು._ ಇಂತಿದು ಸಾಧಕರ ಸ್ಥಿತಿಯಯ್ಯಾ ಕೂಡಲಚೆನ್ನಸಂಗಮದೇವಾ
--------------
ಚನ್ನಬಸವಣ್ಣ
ಒಳಹೊರೆಗೆಂಬ ಉಭಯ ಸಂದೇಹದಿಂದ ಗುರುಶಿಷ್ಯರೆಂದು ನುಡಿದುಕೊಂಡು ನಡೆಯಬೇಕಾಯಿತಲ್ಲದೆ, ಒಳಹೊರಗೆಂಬ ಉಭಯಸಂದೇಹವಳಿದು ಜೀವ ಪರಮರೆಂದೆಂಬ ಉಭಯವು ಪರಮನೊಬ್ಬನೇಯೆಂದು ತಿಳಿದರೆ, ಗುರುವೇ ಶಿಷ್ಯ; ಶಿಷ್ಯನೇ ಗುರುವಾದುದನೇನೆಂಬೆನಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
-->