ಅಥವಾ

ಒಟ್ಟು 29 ಕಡೆಗಳಲ್ಲಿ , 12 ವಚನಕಾರರು , 20 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆರು ನೆಲೆ ಮಂಟಪದ ಕೋಣೆಯಲ್ಲಿ ಆರು ಜ್ಯೋತಿಯ ಮುಟ್ಟಿಸಿ ಆ ಜ್ಯೋತಿಯ ಬೆಳಗಿನಲ್ಲಿ ಆರು ಲಿಂಗವ ನಿರ್ಮಿಸಿ ಆರು ಲಿಂಗದ ಪ್ರತುಮೆಯಲ್ಲಿ ಆರು ಹಂತದ ಸೋಪಾನದಲ್ಲಿ ಮಹಾ ನಿರ್ಮಳವೆಂಬ ದುರ್ಗಮಂ ನಿರ್ಮಿಸಿ ಆ ದುರ್ಗದಲ್ಲಿ ಅರಸಂಗೆ ಕಾಲಿಲ್ಲದಾಕೆಯ ಮದುವೆಯ ಮಾಡಿ ತೂತಿಲ್ಲದ ಭೋಗಕ್ಕೆ ಕೂಡಿ ಬಿಂದುವಿಲ್ಲದೆ ಮಕ್ಕಳಾದ ಪರಿಯ ನೋಡಾ. ತೊಟ್ಟಿಲಿಲ್ಲದೆ ಹಾಸಿ ಮಲಗಿಸಿ ನಿದ್ರೆಗೆಯ್ಸಿದ ಶರಣನಾಚರಣೆಯನೆಂತೆಂಬೆನು. ಇದ ಕಂಡು ನಡೆಯಲರಿಯದೆ, ತಮ್ಮ ಮನ ಬಂದಂತೆ ನಡೆವರು. ಶಿವಯೋಗಕ್ಕೆ ದೂರವಾದರು ನೋಡಾ. ಹೊನ್ನ ಕಟ್ಟಿ ವಿರಕ್ತನು ಬ್ಥಿಕ್ಷೆಯೆನಲಾಗದು. ಭಕ್ತನ ಗೃಹವೆಂದು ಜಂಗಮವು ಹೋದಲ್ಲಿ ಆ ಭಕ್ತನು ಎದ್ದು ನಮಸ್ಕರಿಸಿ ತನ್ನಲ್ಲಿರ್ದ ಪದಾರ್ಥವಂ ತಾನು ಸಹವಾಗಿ ಶಿವಾರ್ಪಣವ ಮಾಡ[ಬ]ಹುದಲ್ಲದೆ. ಇದಲ್ಲದೆ, ಜಂಗಮವ ಬೇರೆ ಕುಳ್ಳಿರಿಸಿ ಉಂಡನಾದರೆ ಅವನಿಗೆ ದೀಕ್ಷೆಯ ಕೊಟ್ಟ ಗುರುವಿಗೆ ತನ್ನ ಮಾರ್ಗವ ಬಿಟ್ಟು ಶಿವಭಕ್ತನಾದರೆ ಮೋಕ್ಷವಿಲ್ಲವಾಗಿ. ಕೋಳಿ ಒಂದು ಕುಟುಕ ಕಂಡರೆ ತನ್ನ ಮರಿಗೆ ತೋರದುಳಿವುದೆ? ಕಾಗೆ ಒಂದಗುಳ ಕಂಡರೆ ತನ್ನ ಬಳಗವ ಕರೆಯದುಳಿವುದೆ? ಶಿವಭಕ್ತನಾಗಿ ತನ್ನ ಲಿಂಗವ ಪೂಜಿಸಿ ಜಂಗಮವ ಮರೆದವನಾದರೆ ಸತ್ತ ದನವಿಗೆ ನರಿ ಹೋದಂತಾಯಿತ್ತು. ಆ ನರಿ ಹೋದ ನೆನಹಿನಲ್ಲಿ ನಾಯಿ ಹೋದಂತಾಯಿತ್ತು. ಇಷ್ಟಕ್ಕಿಂದ ಕರಕಷ್ಟವೆ ಶಿವಭಕ್ತರು? ಷಟ್ಚಕ್ರದ ಭಾವದಲ್ಲಿವೊಪ್ಪಿರುವ ಶಿವಶರಣರು ತಮ್ಮ ನಡೆ ನುಡಿಗಳ ಬಿಡದೆ ನಡೆವುದು. ಅದ ಕಂಡು ಕಣ್ದೆರೆದು ನೋಡಿದೆನಯ್ಯ. ಆವ ವರ್ತನೆಯಲ್ಲಿ ತಾನಿದ್ದರೇನು? ಆವ ಭಾವ ಹೇಂಗಿದ್ದರೇನು? ನಮ್ಮಾಚರಣೆ ನಮಗೆ ಶುದ್ಧ. ಗುರು ಕಲ್ಪಿತನಾದರು ಅವನು ಹಿಂದೆ ಸಂಬಂಧವಾದ ಕಾರಣ, ಅವನಿಗೆ ಬಂಧ ದೊರಕುವದಲ್ಲದೆ ನನಗೆ ದೊರಕದೆಂದು ತಾನು ನಿಶ್ಚೆಸಿದರೆ ತನಗೆ ದೊರಕಬಲ್ಲದೆ? ತಾನು ಪೂರ್ವದಲ್ಲಿ ತಾ ಪಡದುದು ತನಗೆ ತಪ್ಪುವದೆ? ಪ್ರಾಣಿಹಿಂಸೆಯ ಮಾಡುವಾತನಾದರೆಯು ಅವನಿಗೆ ಕಲ್ಪಿತವೇತಕ್ಕೆ? ಹಿಂದೆ ಅವನು ಶಿವನಪ್ಪಣೆವಿಡಿದು ಬಂದ ಕಾರಣ ಅವನಿಗೆ ಬಂದಿತಲ್ಲದೆ ಗಗನದ ಮಂಟಪದ ಮೇಲೆ ಊಧ್ರ್ವಮುಖದ ಗದ್ದುಗೆಯ ಮಾಡಿ ಮಹಾಪ್ರಕಾಶವೆಂಬ ಬೆಳಗಂ ತೋರಿ ಓಂಕಾರವೆಂಬ ಲಿಂಗವ ಮೂರ್ತಮಾಡಿಸಿ ಅದಕ್ಕೆ ಸದ್ಭಾವವೆಂಬ ಪುಷ್ಪವ ತಂದು ಜ್ಞಾನಪ್ರಕಾಶವೆಂಬ ಜ್ಯೋತಿಯಂ ಪೊತ್ತಿಸಿ ಸದ್ಭಕ್ತಿಯೆಂಬ ನೈವೇದ್ಯಮಂ ಮಾಡಿ ನಿರ್ಮಳವೆಂಬ ಪೂಜಾರಿಯಾಗಿರ್ಪನು. ಇದನರಿಯದೆ ತಮ್ಮ ಮನ ಬಂದಂತೆ ಇಪ್ಪವರ ಲಿಂಗಹೋದವನಾದರು ಅವನ ಕಣ್ಣಲ್ಲಿ ಕಂಡು ಅವನಷ್ಟಕ್ಕಲ್ಲದೆ ಅನ್ಯರ ಗೃಹವ ಬಿಡಲೇತಕ್ಕೇ? ಪಾಪವ ಮಾಡಿದನಾರು ಅವನ ಗೃಹಕ್ಕಲ್ಲದೆ ಅವನೊಂದಿಗೆ ಬೆರಸಿದವನಾದರು ಅವನಿಗೆ ಪಾಪ ಸಂಭವಿಸುವುದುಂಟೇ? ಇದ ಸಂಕಲ್ಪವ ಮಾಡಿ ಬಿಡಲೇತಕ್ಕೆ? ಒರ್ವಾನೊಬ್ಬನು ಭವಿಯ ಒಡನಾಡಲು ಅವನ ಪಾಪವು ಅವನಲ್ಲಿಪ್ಪುದಲ್ಲದೆ ಮಿಕ್ಕಿನ ಗೃಹಕ್ಕೆ ಸಂಬಂಧವೇನು? `ಮಾಡಿದವರನಲ್ಲದೆ ಮಿಕ್ಕಿನವರ ಸಂಕಲ್ಪವ ಮಾಡಲಾಗದು'ಯೆಂಬುದು ಗುರುವಚನ. ಹೆಣ್ಣು ಬಿಂದು ಸಂಬಂಧವಾಗಲು ಆ ಭೋಗಕ್ಕೆ ಶರಣನು ಅದನು ಮನದಲ್ಲಿ ಕಂಡು ಸಂತೋಷವಾಗಿಪ್ಪ. ಇಂತೀ ಭಾವಶುದ್ಧವುಳ್ಳಾತನು ಮತ್ರ್ಯಲೋಕಕ್ಕೆ ಮರಳಿ ಬಾರನೆಂಬುದು. ಶರಣ ಸಕಲವಿದ್ಯವ ಕಲಿತು ಫಲವೇನು? ನಿಂದ್ಯನೆ ದೊರಕೊಂಡಮೇಲೆ? ಹುಣ್ಣು ಹುಗಳು ಕೋಷ್ಠವಾಗಿರಲು, ಅವರ ಕಂಡು ಜರಿಯಲಾರದೆಂಬುದೆನ್ನ ಭಾಷೆ. ಇಂದ್ರಿಯಸುಖಕ್ಕೆ ಹೋಗಿ ಬಿದ್ದು ಶಿವಮಾಡಿದರಾಯಿತ್ತೆಂಬ ಅವಿಚಾರದ ನುಡಿಯ ಕೇಳಲಾಗದು. ತನ್ನ ಮನವು ಶುದ್ಧವಾದ ಮೇಲೆ, ಸಕಲ ಸುಖಂಗಳು ತನಗುಂಟಲ್ಲದೆ, ಜ್ಞಾನಿಗೆ ಕತ್ತಲೆಯಿಲ್ಲ. ಅಜ್ಞಾನಿಗೆ ಪಾಪವಿಲ್ಲ. ಇದನರಿದು, ಮುಂದುಗೊಂಡು ತಿರುಗುವ, ಅಣ್ಣಗಳ ಕಂಡು, ನಗುತಿರ್ಪರು ನಿಮ್ಮ ಶರಣರು, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ.
--------------
ಸ್ವತಂತ್ರ ಸಿದ್ಧಲಿಂಗ
[ಶ್ರೂೀತ್ರೇಂ]ದ್ರಿಯದ ಶ್ರುತದ ಅನುಭಾವವುಳ್ಳನಕ ಗುರುವಚನ ಕೇಳಿದೆನೆಂದು ಎಂತೆನಬಹುದು ? ನೇತ್ರೇಂದ್ರಿಯದ ನೋಟದ ಅನುಭಾವವುಳ್ಳನಕ ಲಿಂಗವ ಭಾವಿಸಿದೆನೆಂದು ಎಂತೆನಬಹುದು ? ನಾಸಿಕೇಂದ್ರಿಯದ ಪರಿಮಳ ವಾಸನೆಯನುಭಾವವುಳ್ಳನಕ ಲಿಂಗದಲ್ಲಿ ಪರಿಮಳವ ವೇಧಿಸಿದೆನೆಂದು ಎಂತೆನಬಹುದು ? ಜಿಹ್ವೇಂದ್ರಿಯದ ರುಚಿಯ ರುಚಿಸುವನುಭಾವವುಳ್ಳನಕ ಪ್ರಸಾದವ ಸೇವಿಸಿದೆನೆಂದು ಎಂತೆನಬಹುದಯ್ಯ ? ಸ್ಪರ್ಶೇಂದ್ರಿಯದ ಸೋಂಕಿನ ಸುಖದ ಅನುಭಾವವುಳ್ಳನಕ ಲಿಂಗೈಕ್ಯನಾದೆನೆಂದು ಎಂತೆನಬಹುದು ? ಇವೆಲ್ಲವನು ಪರಿಚ್ಛೇದಿಸಿ ಭಾವನಿರ್ಭಾವಾಗದನಕ ಕೂಡಲಚೆನ್ನಸಂಗಯ್ಯನಳಿಶರಣರ ಮನದಲ್ಲಿ ನೆಲೆಗೊಳ್ಳನಾಗಿ ಅವರೆಂತು ಪ್ರಾಣಲಿಂಗಿಗಳೆಂಬೆನು ?
--------------
ಚನ್ನಬಸವಣ್ಣ
ಸೂರ್ಯನ ಬೆಳಗಿಂಗೆ ಕೊಳ್ಳಿಯ ಬೆಳಗ ಹಿಡಿಯಲುಂಟೇ ಮರುಳೆ? ತನ್ನ ಮುಖವ ತಾ ಬಲ್ಲವಂಗೆ ಕನ್ನಡಿಯ ಹಿಡಿದು ನೋಡಲುಂಟೇ ಹೇಳಾ. ತನ್ನ ಸುಳುಹಿನ ಸೂಕ್ಷ ್ಮವ ತಾನರಿದ ಸ್ವಯಜ್ಞಾನಿಗೆ ಇನ್ನಾವ ಆಗಮಬೋಧೆಯೇಕೆ ಹೇಳ? ಆಗಮಶಿಕ್ಷೆಯೆಂಬುದು, ಲೋಗರಿಗಲ್ಲದೆ, ಆದಿಯಲ್ಲಿ ಶಿವಬೀಜವಾದ ಮಹಾಮಹಿಮರಿಗುಂಟೇ? ಸ್ವಾನುಭಾವಜ್ಞಾನ ಎಲ್ಲರಿಗೂ ಇಲ್ಲವಲ್ಲ. ಇಲ್ಲದಿರ್ದಡೆ ಮಾಣಲಿ, ಅದಕ್ಕೇನು ಕೊರತೆಯಿಲ್ಲ. ಮತಾಂತರ ಶಾಸ್ತ್ರಾಗಮಂಗಳ ಮುಟ್ಟಲಾಗದು. ಅದೇನು ಕಾರಣವೆಂದಡೆ: ಅವರಂಗದ ಮೇಲೆ ಗುರು ಲಿಂಗ ಜಂಗಮ ಪಾದೋದಕ ಪ್ರಸಾದವಿಲ್ಲದ ಕಾರಣ. ಆ ಆಗಮದಲ್ಲಿ ಜಂಗಮಪ್ರಸಾದವ ಲಿಂಗಕ್ಕರ್ಪಿಸಿ, ಕೊಟ್ಟು ಕೊಳಬೇಕೆಂಬ ಪ್ರಮಾಣವ ಹೇಳವಾಗಿ. ಛಿಃ, ಅವೆಲ್ಲಿಯ ಆಗಮ, ಅವು ಅಂಗಲಿಂಗ ಸಂಬಂಧಿಗಳಿಗೆ ಮತವೇ? ಅಲ್ಲ. ಸದ್ಗುರುವಿನ ವಚನ ಪ್ರಮಾಣೇ? ಅಲ್ಲ. ಗುರುವಚನ ಪ್ರಮಾಣವಲ್ಲದ ಮಾರ್ಗವ ಹಿಡಿದು ಆಚರಿಸುವರೆಲ್ಲರು ಗುರುದ್ರೋಹಿಗಳು. ಎಲೆ ಶಿವನೇ, ನೀ ಸಾಕ್ಷಿಯಾಗಿ ಅಂಗಲಿಂಗ ಸಂಬಂಧಿಗಳಿಗೆ ಪರಮ ವೀರಶೈವಾಗಮವೇ ಪ್ರಮಾಣು. ಪುರಾತನರ ಮಹಾವಾಕ್ಯವೇ ಪ್ರಮಾಣು. ಉಳಿದುವೆಲ್ಲ ಹುಸಿ ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಮುನ್ನ ಪರಸತಿ ಪಾರ್ವತಿಯೆಂದು ನಡೆಸಿತ್ತು ನುಡಿಸಿತ್ತು ಗುರುವಚನ. ಬಳಿಕ ಎನ್ನ ಶರಣಸತಿಯೆಂದು ನಡೆಸಿತ್ತು ನುಡಿಸಿತ್ತು ಗುರುವಚನ. ಇನ್ನು ಸತಿಯರೆಲ್ಲಾ ಗುರುಸತಿಯರೆಂದು ನಡೆಸಿತ್ತು ನುಡಿಸಿತ್ತು ಗುರುವಚನ. ನಡೆದುದು ತಪ್ಪದೆ ನುಡಿದುದು ಹುಸಿಯದೆ ನಡೆಸಿತ್ತು ನುಡಿಸಿತ್ತು ಗುರುವಚನ. ಅಚ್ಚಿಗವಿಲ್ಲದೆ ಮಚ್ಚಿದ ಮನವನು ನಿಶ್ಚಿಂತ ಮಾಡಿತ್ತು ಗುರುವಚನ. ಶಂಭು ಸೋಮನಾಥಲಿಂಗ ಸಂಗ ಸುಸಂಗವ ಮಾಡಿತ್ತು ಗುರುವಚನ.
--------------
ಜೋದರ ಮಾಯಣ್ಣ
ಭಕ್ತಿಯಿಲ್ಲದೆ ಗುರುಪೂಜೆಯ ಅನಂತಕಾಲ ಮಾಡಿದರೂ ವ್ಯರ್ಥವೆಂದಿತ್ತು ಗುರುವಚನ. ಭಕ್ತಿಯಿಲ್ಲದೆ ಧ್ಯಾನ ಮೌನ ಗಂಗಾಸ್ನಾನ ಜಪತಪ ನೇಮ-ನಿತ್ಯ ವ್ಯರ್ಥವೆಂದಿತ್ತು ಗುರುವಚನ. ಜಂಗಮತೃಪ್ತಿಯಿಲ್ಲದೆ ಲಿಂಗಕೆ ಪುಷ್ಪ ಪತ್ರಿಯನೇರಿಸಿ ಫಲವೇನು ? ಲಿಂಗಕ್ಕೆ ಜಂಗಮವೆ ಬಾಯಿಯೆಂದಿತ್ತು ಗುರುವಚನ. ವೃಕ್ಷಕ್ಕೆ ಭೂಮಿ ಬಾಯಿಯೆಂದು ನೀರನೆಸಿದರೆ ಮೇಲೆ ಪಲ್ಲವಿಸಿತ್ತು ನೋಡಾ ! ಸ್ಥಾವರಕ್ಕೆ ಜಂಗಮವೆ ಬಾಯಿಯೆಂದು ಪಡಿಪದಾರ್ಥವ ನೀಡಿದರೆ ಶಿವಂಗೆ ತೃಪ್ತಿಯೆಂದಿತ್ತು ರಹಸ್ಯ. ಸಾಕ್ಷಿ : ``ವೃಕ್ಷಸ್ಯ ವದನಂ ಭೂಮಿಃ ಸ್ಥಾವರಸ್ಯತು ಜಂಗಮಃ || ಮಮ ತೃಪ್ತಿರುಮಾದೇವಿ ಉಭಯೋರ್ಲಿಂಗ ಜಂಗಮತಾ ||'' ಎಂದುದಾಗಿ, ``ಸ್ಥಾವರಾರ್ಪಿತನೈವೇದ್ಯಾತ್ ನ ತೃಪ್ತಿರ್ಮಮ ಪಾರ್ವತಿ | ಜಂಗಮಾರ್ಪಿತ ನೈವೇದ್ಯಾತ್ ಮಮ ತೃಪ್ತಿಶ್ಚ ಸರ್ವಥಾ | ಎಂದುದಾಗಿ, ಈ ಶ್ರುತ ದೃಷ್ಟ ಅನುಮಾನವ ಕಂಡು, ಮಾಡುವಾತನೆ ಸದ್ಭಕ್ತನು ಕಾಣಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಶರಣ, ನಿಚ್ಚನಿಚ್ಚ ಪೂಜಿಸುವಂಗೆ ಇದಕ್ಕಿದೆ ದೃಷ್ಟದೀವಿಗೆ- ಪಾದೋದಕ; ಕೋಶಪಾನವಲ್ಲದೆ ಏನೂ ಇಲ್ಲವಯ್ಯಾ. ಮಜ್ಜನಕ್ಕೆರೆವುದು ಲಿಂಗ; ಕರಸ್ಥಲದಿಬ್ಯ. ಗುರುವಚನ; ಭಾಷಾಪತ್ರ ಶಿವಕರದಲ್ಲಿ. ಸತ್ಯದಿಂದ ನಡೆವಂಗೆ ನಿತ್ಯನೇಮವಾಗಿ ಸಲಿಸುವನಲ್ಲದೆ ಹುಸಿವಂಗೆ ಮಡಿಲ ಕಿಚ್ಚಾಗಿ ಸುಡುವ. ಲಿಂಗವ ಪೂಜಿಸಿ ಮರಳಿ ಅನ್ಯಾಯಕ್ಕೆರಗಿದಡೆ ಕೂಡಲಸಂಗಮದೇವನವರ ಹಲ್ಲ ಕಳೆವ.
--------------
ಬಸವಣ್ಣ
ಕೇಳಿರೆ ಕೇಳಿರೆ ಶಿವವಚನ, ಗುರುವಚನ. ಪುರಾತರ ವಚನಾನುಭವ ಕೇಳಿ ಬದುಕಿರಯ್ಯಾ. ಕೇಳಿದ ಸದ್ಭಕ್ತರೆಲ್ಲರು ಕೃತಾರ್ಥರಪ್ಪರು. ತನು ಕರಗಿ, ಮನ ಕೊರಗಿ, ಭಾವ ಬೆಚ್ಚದೊ ! ಅಹಂಕಾರವಳಿದು, ಶರಣರ ಅನುಭಾವವ ಕೇಳಿದಡೆ, ಅದೇ ಮುಕ್ತಿ ನೋಡಿರೆ, ಇಂತಲ್ಲದೆ ಮನೋವ್ಯಾಕುಲನಾಗಿ, ತನುಮುಟ್ಟಿ ಕೇಳಿದಡೆ, ಉಪದೇಶವೆಂತು ಸಲುವುದಯ್ಯಾ ? ಎಂತಳವಡುವುದಯ್ಯಾ ? ಮಹಾಲಿಂಗ ಕಲ್ಲೇಶ್ವರಾ, ಗುರುವಚನ ಪರಾಙ್ಮುಖಂಗೆ ಎಂದೆಂದೂ ಭವ ಹಿಂಗದು ನೋಡಾ.
--------------
ಹಾವಿನಹಾಳ ಕಲ್ಲಯ್ಯ
ಎಲ್ಲಿಕ್ಕೆಯ ಎಣ್ಣೆ, ಎಲ್ಲಿಕ್ಕೆಯ ಬತ್ತಿ, ಎಲ್ಲಿಕ್ಕೆಯ ಲಿಂಗವ ಪೂಜಿಸುವರು ನೀವು ಕೇಳಿರೆ : ಅಂಗ ಲಿಂಗವೆಂಬೆನೆ ? ಹಿಂಗದು ಮನದ ಭವಿತನ. ಪ್ರಾಣ ಲಿಂಗವೆಂಬೆನೆ ? ಭಾವದಲ್ಲಿ ಜಂಗಮವನರಿಯರು. ಗುರುವಚನ ಸಾರಾಯಸಂಪನ್ನರೆಂಬೆನೆ ? ಷಟ್ಕರ್ಮ (ಷಡಕ್ಷರ?) ಮಂತ್ರ ವಿರೋಧಿಗಳು. ಇದು ಕಾರಣ ಕೂಡಲಚೆನ್ನಸಂಗಯ್ಯಾ ತಾಯ ಮಾರಿ ತೊತ್ತ ಕೊಂಬರನೇನೆಂಬೆ.
--------------
ಚನ್ನಬಸವಣ್ಣ
ದ್ವಯಲಿಂಗವೆಂಬರು; ದ್ವಯಲಿಂಗವಿಲ್ಲದವಳೆಂದರಿಯರು. ಪ್ರಸಾದಿಯೆಂದೆಂಬರೆನ್ನ; ಪ್ರಸಾದದ ಹಂಗಿಲ್ಲದವಳೆಂದರಿಯರೆನ್ನ. ಗುರುವಚನ ರಚನೆಯನರಿದು ನಿಃಪ್ರಪಂಚಿಯಾನಾದೆನಯ್ಯ ಸಂಗಯ್ಯ.
--------------
ನೀಲಮ್ಮ
ಅರ್ಧನಾರಿಯಾಗಿದ್ದ ಉಮಾದೇವಿ ಬೇರೆ ಮತ್ತೊಬ್ಬರೊಡನುಂಬಳೆ? ಗಂಡಂಗೆ ತೆರಹಿಲ್ಲದ ವಧು ಪರಿವಿರೋಧಿಯಾಗಿ, ಬೇರೆ ಮತ್ತೊಬ್ಬರೊಡನುಂಬ ಪರಿಯೆಂತೊ? ಮನ ಪುನರ್ಜಾತನಾಗಿ, ಪ್ರಾಣಲಿಂಗ ಪ್ರಸಾದಿಯಾದ ಪ್ರಸಾದಿಗ್ರಾಹಕ ಪ್ರಸಾದಿ, ಇದರೊಡನೆ ಭುಂಜಿಸುವ ಪರಿಯಿನ್ನೆಂತೊ? ಒಂದಾಗಿ ಭೋಜನವ ಮಾಡಿದಲ್ಲಿ, ಸಜ್ಜನಸ್ಥಲ ಬೆಂದಿತ್ತು, ಗುರುವಚನ ನೊಂದಿತ್ತು, ಜಂಗಮ ನಾಚಿತ್ತು, ಪ್ರಸಾದ ಹೇಸಿತ್ತು, ಅವಧಾನವಡಗಿತ್ತು, ಭಕ್ತಿ ಮೀಸಲಳಿದು ಬೀಸರವೋಯಿತ್ತು, ಪ್ರದೀಪಿಕೆ : ಭಕ್ತೋಭಕ್ತಸ್ಯ ಸಂಯೋಗಾನ್ನ ಭುಂಜಿಯಾತ್ಮವಾನ್ ಸಃ| ತಥಾಪಿ ಭುಂಜನಾದ್ದೇವಿ ಪ್ರಸಾದತ್ರಯನಾಶನಂ|| ಇಂತೆಂದುದಾಗಿ, ಇದು ಕಾರಣ, ಒಂದೆನಲಮ್ಮೆ ಬೇರೆನಲಮ್ಮೆ. ನಿಮ್ಮ ಶರಣರೊಕ್ಕುದ ಕೊಂಬೆ ಕಾಣಾ, ಮಹಾಲಿಂಗ ಕಲ್ಲೇಶ್ವರಾ.
--------------
ಹಾವಿನಹಾಳ ಕಲ್ಲಯ್ಯ
ಲೋಕಮೆಚ್ಚೆ ನಡೆವರಯ್ಯ, ಲೋಕಮೆಚ್ಚೆ ನುಡಿವರಯ್ಯ. ಲೋಕಮೆಚ್ಚೆ ನಡೆಯೆ ಹೋಯಿತ್ತೆನ್ನ ಶಿವಾಚಾರ. ಲೋಕಮೆಚ್ಚೆ ನುಡಿಯೆ ಹೋಯಿತ್ತೆನ್ನ ಶಿವಜ್ಞಾನ. ಲೌಕಿಕವರ್ತನ ನಾಯಕನರಕವೆಂದಿತ್ತು ಗುರುವಚನ. ಇದು ಕಾರಣ ಲಿಂಗ ಮೆಚ್ಚೆ ನಡವೆ; ಲಿಂಗ ಮೆಚ್ಚೆ ನುಡಿವೆ ಲಿಂಗ ಲಿಂಗವೆಂಬ ಲಿಂಗಭ್ರಾಂತನಾಗಿ ವರ್ತಿಸುವೆನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಕಂಗಳ ಮಣಿಯ ಬೆಳಗಿನೊಳು, ಈರೇಳು ಭುವನದ ಶೃಂಗಾರವಡಗಿತ್ತು. ಆರೂ ಅರಿಯರಲ್ಲಾ. ಅತಿ ಶೃಂಗಾರದೊಳಗಣ ಗಂಧವನೊಂದು ಘ್ರಾಣ ನುಂಗಿತ್ತು. ಘ್ರಾಣದೊಳಗಣ ಗಂಧವ ಪ್ರಾಣ ನುಂಗಿತ್ತು. ಪ್ರಾಣದೊಳಗಣ ಗಂಧದ ಭಾವ ನುಂಗಿತ್ತು. ಭಾವದೊಳಗಣ ಗಂಧದ ಬಯಲು ನುಂಗಿತ್ತು. ಬಯಲೊಳಗಣ ಗಂಧವ ಮಹಾಬಯಲ ಕೂಡಿದ ಲಿಂಗೈಕ್ಯಂಗೆ ಭವಬಂಧನವಿಲ್ಲೆಂದಿತ್ತು ಗುರುವಚನ, ಬಸವಪ್ರಿಯ ಕೂಡಲಚೆನ್ನಬಸವಣ್ಣಾ.
--------------
ಹಡಪದ ಅಪ್ಪಣ್ಣ
ಲಿಂಗಪ್ರಸಾದಿಗಳಲ್ಲದವರ ಸಂಗ ಭಂಗವೆಂದುದು ಗುರುವಚನ. ಲಿಂಗಪ್ರಸಾದಿಗಳಲ್ಲದವರ ಸಂಗಗ ಪಂಚಮಹಾಪಾತಕವೆಂದುದು ಲಿಂಗವಚನ. ಆಸನೇ ಶಯನೇ ಯಾನೇ ಸಂಪರ್ಕೇ ಸಹಭೋಜನೇ ಸಂಚರಂತಿ ಮಹಾಘೋರೇ ನರಕೇ ಕಾಲಮಕ್ಷಯಂ ಇಂತೆಂದುದಾಗಿ ಕೂಡಲಸಂಗಮದೇವಾ, ನಿಮ್ಮ ಶರಣರಿಗೆ ಶರಣೆಂದು ಶುದ್ಧನಯ್ಯಾ.
--------------
ಬಸವಣ್ಣ
ಅಯ್ಯಾ ನಿಮ್ಮ ಶರಣರು ಕರ್ಮಕಾಯರಲ್ಲ, ಜ್ಞಾನಕಾಯರು ನೋಡಯ್ಯ. ಅದೇನು ಕಾರಣವೆಂದಡೆ: ಭಕ್ತಿಕಾರಣ ಅವತರಿಸಿದರಾಗಿ. `ಭಕ್ತಕಾಯ ಮಮಕಾಯ' ವೆಂದುದು ಗುರುವಚನ. ದೇವಗೂ ಭಕ್ತಗೂ ಕಾಯ ಒಂದಾದ ಕಾರಣ, ಕರ್ಮರಹಿತರು ನಿಮ್ಮ ಶರಣರು, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ.
--------------
ಸ್ವತಂತ್ರ ಸಿದ್ಧಲಿಂಗ
ಅರ್ಪಿತ ರೌರವ ನರಕವೆಂದುದು ಗುರುವಚನ ಅನರ್ಪಿತ ರೌರವನರಕವೆಂದುದು ಗುರುವಚನ. ಭುಂಜನ ಮಾಡಿದ ರುಚಿಯು ಲಿಂಗಕ್ಕೆಂಬ ಕರ್ಮಿಯ ಮಾತ ಕೇಳಲಾಗದು, ತಾಗಿದ ಸುಖವು ಲಿಂಗಕ್ಕೆಂಬ ಗುರುದ್ರೋಹಿಯ ಮಾತ, ಕೇಳಲಾಗದು. ಸರ್ವಾವಸ್ಥಾಗತಾಃ ಪ್ರಾಣಾಃ ಭಾಜನಂ ಭೋಜನಂ ತಥಾ ಹಸ್ತಲಿಂಗೇ[s] ಪ್ರತಿಗ್ರಾಹ್ಯ ನರಕೇ ಕಾಲಮಕ್ಷಯಂ ಸಂಕಲ್ಪಂ ಚ ವಿಕಲ್ಪಂ ಚ ಭಾವಾಭಾವವಿವರ್ಜಿತಃ ನಾಸ್ತ್ಯೇಂದ್ರಿಯಾಂತಃಕರಣಂ ತೇನೈವ ಸಹಭೋಜನಂ ಎಂದುದಾಗಿ ಲಿಂಗಭಾಜನದಲ್ಲಿ ಸಹಭೋಜನವ ಮಾಡಿದರೆ ಇಹಪರವಿಲ್ಲೆಂದ ಕೂಡಲಚೆನ್ನಸಂಗಮದೇವ
--------------
ಚನ್ನಬಸವಣ್ಣ
ಇನ್ನಷ್ಟು ... -->