ಅಥವಾ

ಒಟ್ಟು 10 ಕಡೆಗಳಲ್ಲಿ , 7 ವಚನಕಾರರು , 10 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮನವೆಂದಡೆ ಮರವೆಗೆ ಒಳಗುಮಾಡಿತ್ತು. ತನುವೆಂದಡೆ ತಾಮಸಕ್ಕೊಳಗುಮಾಡಿತ್ತು. ಧನವೆಂದಡೆ ಆಶೆಯೆಂಬ ಪಾಶಕ್ಕೊಳಗುಮಾಡಿತ್ತು. ಇವೀಸು ಮಾಯಾಪಾಶವೆಂದು ಬಿಟ್ಟು ಹುಟ್ಟನರಿದು, ಬಟ್ಟಬಯಲಲ್ಲಿ ನಿಂದು, ಚಿತ್ತನಿರ್ಮಲನಾಗಿ ನೋಡಿ ಕಂಡ ಶರಣಂಗೆ ತನುವೆ ಗುರುವಾಯಿತ್ತು. ಮನವೆ ಘನವಾಯಿತ್ತು, ಧನವೆ ಜಂಗಮವಾಯಿತ್ತು. ಈ ತ್ರಿವಿಧವನು ತ್ರಿವಿಧಕಿತ್ತು, ತಾ ಬಯಲದೇಹಿಯಾದನಯ್ಯಾ ಆ ಮಹಾಶರಣನು. ಇದರ ನೆಲೆಯನರಿಯದೆ, ಆ ಮನದ ಬೆಂಬಳಿಗೊಂಡಾಡಿದವರೆಲ್ಲ ನರಗುರಿಗಳಾದರಯ್ಯಾ, ಅಪ್ಪಣ್ಣಪ್ರಿಯ ಚೆನ್ನಬಸವಣ್ಣ.
--------------
ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ
ಆದಿ ಅನಾದಿಯೆಂಬವು ನಾದಕ್ಕೆ ಬಾರದ ಮುನ್ನ, ಶೂನ್ಯ ನಿಃಶ್ಶೂನ್ಯ ಸುರಾಳವೆಂಬವು ಸುಳುಹುದೋರದ ಮುನ್ನ, ಬೆಳಗು ಕತ್ತಲೆಯಿಲ್ಲದ ಮುನ್ನ, ಅಳಿವು ಉಳಿವು ಸುಳುವು ಸೂತ್ರ ಜಂತ್ರ ಜಡ ಅಜಡವಿಲ್ಲದ ಮುನ್ನ, ಕಡೆ ನಡು ಮೊದಲಿಲ್ಲದ ಅಡಿಯಲಾಧಾರ ಹಿಡಿವರೆ ರೂಹಿಲ್ಲದ ಮುನ್ನ, ಒಡೆಯನಿಲ್ಲ ಬಂಟನಿಲ್ಲ ನಡೆಯಿಲ್ಲ ನುಡಿಯಿಲ್ಲ ಬೆಡಗಿಲ್ಲ ಒಡಲಿಲ್ಲದ ಮುನ್ನ, ಪೃಥ್ವಿ, ಅಪ್ಪು, ತೇಜ, ವಾಯು, ಆಕಾಶ, ಚಂದ್ರ, ಸೂರ್ಯರು ತಲೆದೋರದ ಮುನ್ನ, ದೇವನಿಲ್ಲ ಭಕ್ತನಿಲ್ಲದ ಮುನ್ನ, ನೀನು ನಾನುಯಿಲ್ಲದ ಮುನ್ನ, ಆಕಾರ ನಿರಾಕಾರವೇನೂಯಿಲ್ಲದ ಮುನ್ನ, ತಾನು ತಾನೆಂಬ ತಲ್ಲಣವಿಲ್ಲದಂದು, ಆ ಬಟ್ಟಬಯಲ ಬ್ರಹ್ಮವೆ ಘಟ್ಟಿಯಾದ ಘನವೆಂತೆಂದಡೆ: ನಿಮ್ಮನುವ ನೀವರಿದ ಘನಮಹಿಮರು ತಿಳಿದು ನೋಡಿರಣ್ಣ. ಆ ಬಟ್ಟಬಯಲೆಂದಡಾರು ಬಸವ, ಆ ಬಸವನೆಂದಡಾರು ಬಟ್ಟಬಯಲು. ಆ ಬ್ರಹ್ಮನೆಂದಡಾರು ಬಸವ, ಬಸವನೆಂದಡಾರು ಬ್ರಹ್ಮ. ಅಂತಪ್ಪ ಬಸವನ ಆ ಮೂಲವ ಬಲ್ಲವರು ನೀವು ಕೇಳಿರಣ್ಣ. ಬಸವ ಎಂಬ ಮೂರಕ್ಷರವೆ ಮೂಲಪ್ರಣವ. ಅದೆಂತೆಂದಡೆ:ಬಯೆಂಬುದೆ ಚಿನ್ನಾದ ಆಕಾರವಾಯಿತ್ತು, ಸಯೆಂಬುದೆ ಚಿದ್ಬಿಂದುವಾಯಿತ್ತು, ಮತ್ತಂ ಬಯೆಂಬುದೆ ಅಕಾರವಾಯಿತ್ತು, ಸ ಎಂಬುದೆ ಉಕಾರವಾಯಿತ್ತು. ವಾ ಯೆಂಬುದೆ ಚಿತ್ಕಳೆಯಾಯಿತ್ತು. ಮತ್ತಂ ಬಯೆಂಬುದೆ ಆಕಾರವಾಯಿತ್ತು, ಸ ಎಂಬುದೆ ಉಕಾರವಾಯಿತ್ತು. ವಾಯೆಂಬುದೆ ಮಕರವಾಯಿತ್ತು. ಮತ್ತೆ ಬಯೆಂಬುದೆ ನಾದವಾಯಿತ್ತು, ಸಯೆಂಬುದೆ ಬಿಂದುವಾಯಿತ್ತು, ವಾಯೆಂಬುದೆ ಕಳೆಯಾಯಿತ್ತು. ಮತ್ತೆ ಬ ಎಂಬುದೆ ಗುರುವಾಯಿತ್ತು, ಸಯೆಂಬುದೆ ಅಂಗವಾಯಿತ್ತು, ವಾ ಎಂಬುದೆ ಜಂಗಮವಾಯಿತ್ತು. ಬ ಎಂಬ ನಾದವೆತ್ತಲು, ಸ ಎಂಬ ಬಿಂದು ಕೂಡಲು, ವಾಯೆಂಬ ಕಳೆ ಬೆರೆಯಲು, ಗೋಳಕಾಕಾರವಾಗಿ ಆದಿಪ್ರಣಮವೆನಿಸಿತ್ತು. ಆದಿಪ್ರಣಮ, ಅನಾದಿಪ್ರಣಮ, ಅಂತ್ಯಪ್ರಣಮವೆಂಬವು ನಮ್ಮ ಬಸವಣ್ಣನ ಸ್ಥೂಲ ಸೂಕ್ಷ್ಮ ಕಾರಣ ಕಾಣಿರೆ. ಇಂತಪ್ಪ ಬಸವಣ್ಣ ಬಯಲಬ್ರಹ್ಮವನೆ ಮೆಯಿದು, ಮೆಲುಕಿರಿದು ಗೋಮಯವಿಕ್ಕಲು ಪೃಥ್ವಿಯಾಯಿತ್ತು. ಇಂತಪ್ಪ ಬಸವಣ್ಣ ಜಲವ ಬಿಡಲು ಅಪ್ಪುಮಯವಾಯಿತ್ತು. ಇಂತಪ್ಪ ಬಸವಣ್ಣನ ತೇಜವೆ ಅಗ್ನಿಯಾಯಿತ್ತು. ಇಂತಪ್ಪ ಬಸವಣ್ಣನ ಉಚ್ಛ್ವಾಸ ನಿಶ್ವಾಸವೆ ವಾಯುವಾಯಿತ್ತು. ಇಂತಪ್ಪ ಬಸವಣ್ಣನ ಶಬ್ದವೆ ಆಕಾಶವಾಯಿತ್ತು. ಇಂತಪ್ಪ ಬಸವಣ್ಣನ ಕಂಗಳ ಬೆಳಗೆ ಚಂದ್ರ ಸೂರ್ಯರಾದರು. ಇಂತಪ್ಪ ಬಸವಣ್ಣನ ಬುದ್ಧಿಯೆ ಆತ್ಮವೆನಿಸಿ, ಅಷ್ಟತನುಮೂರ್ತಿಯೆ ತನುವೆನಿಸಿ, ಪಿಂಡ ಬ್ರಹ್ಮಾಂಡ ಕೋಟ್ಯಾನುಕೋಟಿ ಅಂಡಪಿಂಡಾಂಡಂಗಳಿಗೆ ಒಡಲಾಗಿ, ಅಡಿಮುಡಿಗೆ ತಾನೆ ಆದಿಯಾಗಿ, ಸರ್ವವೂ ನಮ್ಮ ಬಸವಣ್ಣನ ಒಡಲಲ್ಲಿ ಹುಟ್ಟುತ್ತ ಬೆಳೆಯುತ್ತ ಅಳಿವುತಿಪ್ಪವು ಕಾಣಿರೆ. ಇಂತಪ್ಪ ಸಕಲಪ್ರಾಣಿಗಳಿಗೆ ನಮ್ಮ ಬಸವಣ್ಣನ ಗೋಮಯದಲ್ಲಿ ಹುಟ್ಟಿದ ಪೃಥ್ವಿಯೆ ಪದಾರ್ಥವೆ ಆದಿಜಲದಿಂದ ಹುಟ್ಟಿದ ಉದಕವೆ ಸಾರ. ತೇಜದಿಂದ ಹುಟ್ಟಿದ ಅಗ್ನಿಯೆ ಕಳೆ. ಉಚ್ಛ್ವಾಸ ನಿಶ್ವಾಸದಿಂದ ಹುಟ್ಟಿದ ಚಂದ್ರಸೂರ್ಯರೇ ಅರಿವು ಮರವೆ. ಬುದ್ಧಿಯಿಂದ ಹುಟ್ಟಿದ ಆತ್ಮನೆ ಚೈತನ್ಯಾತ್ಮ. ಇಂತೀ ಸರ್ವಪ್ರಾಣಿಗಳಿಗೆ ನಮ್ಮ ಬಸವಣ್ಣನೆ ಆದಿ ಕಾಣಿರೇ. ಆದಿಯಲ್ಲಿ ಹುಟ್ಟಿ, ಮಧ್ಯದಲ್ಲಿ ಬೆಳೆದು, ಅಂತ್ಯದಲ್ಲಿ ಲಯವನೆಯ್ದಿದರೆ, ಮತ್ತೆ ನಿಲ್ಲುವದಕ್ಕೆ ನಮ್ಮ ಬಸವಣ್ಣನೆ ಆದಿ ಕಾಣಿರೆ. ಇಂತೀ ಒಳ ಹೊರಗೆ ಕೈಕೊಂಬರೆ, ದೇವರು ಬೇರೊಬ್ಬರುಂಟಾದರೆ ಬಲ್ಲರೆ ನೀವು ಹೇಳಿ ತೋರಿರೆ. ಅಲ್ಲದಿರ್ದರೆ ನಿಮ್ಮ ವೇದಾಗಮಶಾಸ್ತ್ರಪುರಾಣಗಳ ಕೈಯಲ್ಲಿ ಹೇಳಿಸಿರೆ. ಇಂತೀ ಅನಾದಿಸಂಸಿದ್ಧ ಬಟ್ಟಬಯಲಬ್ರಹ್ಮವೆ ಬಸವನೆಂಬುದಂ ಕಾಣುತಿರ್ದು ಕೇಳುತಿರ್ದು ಹೇಳುತಿರ್ದು ಅರಿದಿರ್ದು, ಮತ್ತೆ ಕೀಳುದೈವಂಗಳನಾರಾಧಿಸಿ ಅರ್ಚನೆ ಪೂಜೆಯ ಹಲವು ಚಂದದಲ್ಲಿ ಮಾಡಿ, ಹಲವು ಜಾತಿ ಹಲವುದರುಶನವೆನಿಸಿಕೊಂಡುಸ ಹೊಲಬುದಪ್ಪಿದಿರಿ, ಹುಲುಮನುಜರಿರಾ. ಇನ್ನಾದರೂ ಅರಿದು ನೆನದು ಬದುಕಿ, ನಮ್ಮ ಬಸವಪ್ರಿಯ ಕೂಡಲ[ಚೆನ್ನ]ಸಂಗಮದೇವನ ಶ್ರೀಪಾದಪದ್ಮವ.
--------------
ಸಂಗಮೇಶ್ವರದ ಅಪ್ಪಣ್ಣ
ನಮ್ಮಂತುವ ತಿಳಿದು, ನೋಡಿದರೆ ಹೇಳಿಹೆನು. ಅದೆಂತೆಂದರೆ, ಮೇಲು ಕೀಳಾಯಿತ್ತು, ಕೀಳು ಮೇಲಾಯಿತ್ತು. ನಿರಾಳ ಆಳವಾಯಿತ್ತು, ಆಳ ನಿರಾಳವಾಯಿತ್ತು. ಉತ್ತರ ಪೂರ್ವವಾಯಿತ್ತು, ಪೂರ್ವ ಉತ್ತರವಾಯಿತ್ತು, ಗುರುವು ಶಿಷ್ಯನಾಯಿತ್ತು, ಶಿಷ್ಯ ಗುರುವಾಯಿತ್ತು. ಅರ್ಪಿತ ಅನರ್ಪಿತವಾಯಿತ್ತು, ಅನರ್ಪಿತ ಅರ್ಪಿತವಾಯಿತ್ತು, ಇಂತಪ್ಪ ಘನವ ವೇಧಿಸಿ ನುಡಿಯಬಲ್ಲರೆ, ಆತನೆ ಭಕ್ತ, ಮಹೇಶ್ವರ, ಪ್ರಸಾದಿ, ಪ್ರಾಣ. ನಡೆದುದೆ ಬಟ್ಟೆ, ನುಡಿದುದೆ ತತ್ವ. ಇಂತಪ್ಪ ಸರ್ವಾಂಗ ಪ್ರಸಾದಿಯ ಪ್ರಸಾದವ ಕೊಂಡು, ಸರ್ವಾಂಗ ಶುದ್ಧವಾಯಿತ್ತು. ನಾ ನಿಮ್ಮ ಪಾದದೊಳು ನಿರ್ಮುಕ್ತನಾಗಿ ಏನೂ ಇಲ್ಲದಂತಾದೆನಯ್ಯಾ, ಬಸವಪ್ರಿಯ ಕೂಡಲಚೆನ್ನಬಸವಣ್ಣಾ .
--------------
ಹಡಪದ ಅಪ್ಪಣ್ಣ
ಗುರು ಮುಟ್ಟಿ ಗುರುವಾಯಿತ್ತು, ಲಿಂಗಮುಟ್ಟಿ ಲಿಂಗವಾಯಿತ್ತು, ಜಂಗಮ ಮುಟ್ಟಿ ಜಂಗಮವಾಯಿತ್ತು, ಪ್ರಸಾದ ಮುಟ್ಟಿ ಪ್ರಸಾದವಾಯಿತ್ತು, ಪ್ರಸಾದ ಪರವಸ್ತು, ಪರದಲ್ಲಿಪ್ಪುದಾಗಿ, ಇನ್ನು ಪ್ರಸಾದವ ಮುಟ್ಟಬೇಕೆಂಬವರ ಮುಖವ ನೋಡಲಾಗದು, ಕೂಡಲಚೆನ್ನಸಂಗಯ್ಯಾ.
--------------
ಚನ್ನಬಸವಣ್ಣ
ಭಾವದಲ್ಲಿ ಗಮನ, ಪ್ರಾಣದಲ್ಲಿ ಲೋಭ, ಜಿಹ್ವೆಯಲ್ಲಿ ರುಚಿ, ಶ್ರೋತ್ರದಲ್ಲಿ ಕುಶಬ್ದ, ನಾಸಿಕದಲ್ಲಿ ದುರ್ಗಂಧ, ನೋಟದಲ್ಲಿ ಕಾಮ, ಶಬ್ದದಲ್ಲಿ ವಿರೋಧ_ ಇಂಥ ಭವಿಯ ಕಳೆದು ಭಕ್ತನ ಮಾಡಿದ ಪರಿಯೆಂತೆಂದರೆ: ಕಾಮನ ಸುಟ್ಟ ವಿಭೂತಿಯೂ ಅಲ್ಲ, ಜವನ ಸುಟ್ಟ ವಿಭೂತಿಯೂ ಅಲ್ಲ, ತ್ರಿಪುರವ ಸುಟ್ಟ ವಿಭೂತಿಯೂ ಅಲ್ಲ, ಆದಿಯಾಧಾರ ವಿಲ್ಲದಂದಿನ [ಚಿದ್] ವಿಭೂತಿಯ ತಂದು ಪಟ್ಟವ ಕಟ್ಟಿದರೆ, ಭಾವಕ್ಕೆ ಗುರುವಾಯಿತ್ತು, ಪ್ರಾಣಕ್ಕೆ ಲಿಂಗವಾಯಿತ್ತು ಜಿಹ್ವೆಗೆ ಪ್ರಸಾದವಾಯಿತ್ತು, ಶ್ರೋತ್ರಕ್ಕೆ ಶಿವಮಂತ್ರವಾಯಿತ್ತು, ನಾಸಿಕಕ್ಕೆ ಸುಗಂಧವಾಯಿತ್ತು ನೋಟಕ್ಕೆ ಜಂಗಮವಾಯಿತ್ತು, ಶಬ್ದಕ್ಕೆ ಸಂಭಾಷಣೆಯಾಯಿತ್ತು_ ಇಂತೀ ಪೂರ್ವಗುಣಂಗಳೆಲ್ಲವ ಕಳೆದು ಸ್ವಸ್ಥಾನವಾಯಿತ್ತಾಗಿ ಕೂಡಲಚೆನ್ನಸಂಗಾ ನಿಮ್ಮ ಶರಣ ಸರ್ವಾಂಗಲಿಂಗಿಯಾದ.
--------------
ಚನ್ನಬಸವಣ್ಣ
ಇನ್ನು ಗುರುಕರುಣಸ್ಥಲವದೆಂತೆಂದಡೆ : ನಾನಾ ಭವದಲ್ಲಿ ಬಂದ ಭವಿಯಂ ಕಳದು ಭಕ್ತನ ಮಾಡಿದ ಕ್ರಮವೆಂತೆಂದಡೆ ; `ಅಗ್ನಿರಿತಿ ಭಸ್ಮ ವಾಯುರಿತಿ ಭಸ್ಮ'ವೆಂಬ ವಿಭೂತಿಯಿಲ್ಲದಂದು. `ಜಲಮಿತಿ ಭಸ್ಮ ಸ್ಥಲಮಿತಿ ಭಸ್ಮ'ವೆಂಬ ವಿಭೂತಿಯಿಲ್ಲದಂದು. `ವ್ಯೋಮೇತಿ ಭಸ್ಮ ಸೋಮೇತಿ ಭಸ್ಮ'ವೆಂಬ ವಿಭೂತಿಯಿಲ್ಲದಂದು. `ಸೂರ್ಯೇತಿ ಭಸ್ಮ ಆತ್ಮೇತಿ ಭಸ್ಮ'ವೆಂಬ ವಿಭೂತಿಯಿಲ್ಲದಂದು. `ಅನಾದಿಶಾಶ್ವತಂ ನಿತ್ಯಂ ಚೈತನ್ಯಂ ಚಿತ್ಸ್ವರೂಪಕಂ ಚಿದಂಗಂ ವೃಷಭಾಕಾರಂ' ಆಗಿಹ ಚಿದ್ಭಸ್ಮವ ತಂದು ವಿಭೂತಿಯ ಪಟ್ಟವಂ ಕಟ್ಟಿದರೆ ಭಾವಭ್ರಮೆಯಳಿದು ಭಾವ ಗುರುವಾಯಿತ್ತು. ಕಾಯಗುಣವಳಿದು ಕಾಯ ಲಿಂಗವಾಯಿತ್ತು. ಪ್ರಾಣಗುಣವಳಿದು ಪ್ರಾಣ ಲಿಂಗವಾಯಿತ್ತು. ಮನವಿಕಾರವಳಿದು ಮನ ಲಿಂಗವಾಯಿತ್ತು. ಘ್ರಾಣಕ್ಕೆ ಸುವಾಸನೆಯನರಿವ ಆಚಾರಲಿಂಗವಾಯಿತ್ತು. ಜಿಹ್ವೆಗೆ ಪ್ರಸಾದಭೋಗವನರಿವ ಗುರುಲಿಂಗವಾಯಿತ್ತು. ಶ್ರೋತ್ರಕ್ಕೆ ಷಡಾಕ್ಷರಮಂತ್ರವನರಿವ ಪ್ರಸಾದಲಿಂಗವಾಯಿತ್ತು. ನೋಟಕ್ಕೆ ಘನಚೈತನ್ಯವಾದ ಶಿವಲಿಂಗವಾಯಿತ್ತು. ಶಬ್ದಕ್ಕೆ ಸರ್ವಲಿಂಗಾನುಭಾವಿಯಾಯಿತ್ತು. ಇಂತು ಪೂರ್ವಗುಣವಳಿದು ಪುನರ್ಜಾತನಾದ ಮಹಾಶರಣನು ಸರ್ವಾಂಗಲಿಂಗಿ ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಬಸವಣ್ಣ ಮಾಡಲಿಕೆ ಗುರುವಾಯಿತ್ತು. ಬಸವಣ್ಣ ಮಾಡಲಿಕೆ ಲಿಂಗವಾಯಿತ್ತು. ಬಸವಣ್ಣ ಮಾಡಲಿಕೆ ಜಂಗಮವಾಯಿತ್ತು. ಬಸವಣ್ಣ ಮಾಡಲಿಕೆ ಪ್ರಸಾದವಾಯಿತ್ತು. ಬಸವಣ್ಣ ಮಾಡಲಿಕೆ ಈರೇಳುಲೋಕವಾಯಿತ್ತು. ಬಸವಣ್ಣನಿಂದಾದ ಕಲಿದೇವಯ್ಯ.
--------------
ಮಡಿವಾಳ ಮಾಚಿದೇವ
ಅಪ್ಪು ಮೂಲಾಧಾರವಾಗಿ ಬೀಜದ ಮೇಲೆ ಬೀಳೆ, ಪೃಥ್ವಿ ಗರ್ಭ ಬೆಸನಾಯಿತ್ತು. ತ್ರಿವಿಧದ ಆದಿಯಿಂದ ಗುರುವಾಯಿತ್ತು, ತ್ರಿವಿಧದ ಭೇದದಿಂದ ಲಿಂಗವಾಯಿತ್ತು, ತ್ರಿವಿಧವನಳಿದು ಜಂಗಮವಾಯಿತ್ತು. ಜಂಗಮವಳಿದು, ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವು ಸ್ವಯಂಭುವಾಯಿತ್ತು.
--------------
ಶಿವಲೆಂಕ ಮಂಚಣ್ಣ
ಯದ್ಭಾವಂ ತದ್ಭವತಿಯೆಂಬ ಭಾವವುಂಟಾಗಿ ಗುರುವಾಯಿತ್ತು, ಯದ್ಭಾವಂ ತದ್ಭವತಿಯೆಂಬ ಭಾವವುಂಟಾಗಿ ಶಿಷ್ಯನಾದ. ಯದ್ಭಾವಂ ತದ್ಭವತಿಯೆಂಬ ಭಾವವುಂಟಾಗಿ ಲಿಂಗವಾಯಿತ್ತು, ಯದ್ಭಾವಂ ತದ್ಭವತಿಯೆಂಬ ಭಾವವುಂಟಾಗಿ ಭಕ್ತನಾದ. ಯದ್ಭಾವಂ ತದ್ಭವತಿಯೆಂಬ ಭಾವವುಂಟಾಗಿ ಪ್ರಸಾದವಾಯಿತ್ತು, ಯದ್ಭಾವಂ ತದ್ಭವತಿಯೆಂಬ ಭಾವವುಂಟಾಗಿ ಪ್ರಸಾದಿಯಾದ. ಯದ್ಭಾವಂ ತದ್ಭವತಿಯೆಂಬ ಭಾವವುಂಟಾಗಿ ಕೂಡಲಚೆನ್ನಸಂಗ ತಾನಾದ.
--------------
ಚನ್ನಬಸವಣ್ಣ
ಅರ್ಪಿತವೆಂದರೆ ಅನರ್ಪಿತವಾಯಿತ್ತು, ಅನರ್ಪಿತವೆಂದರೆ ಅರ್ಪಿತವಾಯಿತ್ತು. ಗುರುವೆಂದರೆ ಶಿಷ್ಯನಾಯಿತ್ತು, ಶಿಷ್ಯನೆಂದರೆ ಗುರುವಾಯಿತ್ತು. ಗುರುಶಿಷ್ಯ ಸಂಬಂಧ ಕ್ರೀ ಪ್ರತಿಭಾವವುಳ್ಳನ್ನಕ್ಕ, ಘನಲಿಂಗೈಕ್ಯವೆಲ್ಲಿಯದೊ ? ಕೂಡಲಚೆನ್ನಸಂಗಮದೇವಾ ?
--------------
ಚನ್ನಬಸವಣ್ಣ
-->