ಅಥವಾ

ಒಟ್ಟು 18 ಕಡೆಗಳಲ್ಲಿ , 13 ವಚನಕಾರರು , 16 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಾಯವೆಂಬ ಕದಳಿಯನೆ ಹೊಕ್ಕು, ನೂನ ಕದಳಿಯ ದಾಂಟಿ, ಜೀವಪರಮರ ನೆಲೆಯನರಿದು, ಜನನಮರಣವ ಗೆದ್ದು, ಭವವ ದಾಂಟಿದಲ್ಲದೆ, ಘನವ ಕಾಣಬಾರದೆಂದರು ನಮ್ಮ ಅಪ್ಪಣ್ಣಪ್ರಿಯ ಚೆನ್ನಬಸವಣ್ಣ.
--------------
ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ
ಕಂಗಳ ಕಾಳಗ ನೋಟದ ಮಸಕ ಮಿಂಚಿನಗೊಂಚಲು ತಾಗಿದಂತಾದುದವ್ವಾ. ತಾರಕಿ ತಾರಕಿ ಸೂಸಿದಂತೆ, ಅರಗಿನ ಬಳ್ಳಿ ಹಬ್ಬಿದಂತವ್ವಾ. ಓರೆಕೋರೆ ಕೆಂಪಾದವವ್ವಾ, ಆಳುಗಳಿನ್ನಾರೋ? ಐದು ರೂಹನೊಂದು ಮಾಡಿ, ಕಾದಿ ಗೆದ್ದು ಸೋತು ಹೊರಹೊಂಟುಹೋದನವ್ವಾ, ಮಹಾಲಿಂಗ ಗಜೇಶ್ವರ ಕಂಗಳ ಕಾಳಗದ ಮಾಸಾಳು.
--------------
ಗಜೇಶ ಮಸಣಯ್ಯ
ನಾರೀಕೇಳ ಹುಟ್ಟಿದ ಸುಜಲವ ಅಲ್ಲಿಗೆ ಎಯ್ದಿಸಿ ಎರೆದವರಿಲ್ಲ ಅದು ಬಲಿದು ಅಲ್ಲಿಯೇ ಅರತಾಗ ಬೇರೊಂದು ಕೊಂಡುದಿಲ್ಲ. ಅಪ್ಪುವರತು ತುಪ್ಪ ತನ್ನಲ್ಲಿಯೆ ಒದಗಿದಂತೆ ನಿಶ್ಚೆ ೈಸಿದ ಮನ ವಸ್ತುವಿನಲ್ಲಿ ಕೂಡಿ ಕಾಯದ ಕರಂಡದಲ್ಲಿ ಕರಣಂಗಳರತು ಜೀವ ಕೆಟ್ಟು ಪರಮನಾದಂತೆ. ಈ ಭೇದವನರಿದು ಕಾಲನ ಗೆದ್ದು ಕಾಲಾಂತಕ ಬ್ಥೀಮೇಶ್ವರಲಿಂಗವು ತಾನಾದನು.
--------------
ಡಕ್ಕೆಯ ಬೊಮ್ಮಣ್ಣ
ಗುದ್ದಾ[ಡಿ] ರತ್ನವ ಕದ್ದು ಒಯ್ಯಬಲ್ಲಡೆ ಭಕ್ತನೆಂಬೆ. ಮುದ್ದುಳ್ಳನ್ನವ ಮೆದ್ದಬಲ್ಲಡೆ ಮಹೇಶನೆಂಬೆ. ಜಿದದಿನ ಭಕ್ತಿಯ ಗೆದ್ದು ಒಯ್ದಡೆ, ಕಪಿಲಸಿದ್ಧಮಲ್ಲನ ಮನೆಯ ಮುದ್ದುಕುಮಾರನೆಂಬೆ ನೋಡಾ, ಮಡಿವಾಳ ಮಾಚಣ್ಣನೆ.
--------------
ಸಿದ್ಧರಾಮೇಶ್ವರ
ತಟ್ಟು ಕುಂಚ ಕಮಂಡಲಂಗಳೆಂಬ ಲೋಚು ಮುಟ್ಟಿಯ ಹಿಡಿದು, ಭೂತಕಾಯವಾಗಿ ತಿರುಗುವ ಆತನನರಿಯದ ಬೌದ್ಧಕಾರಿಗಳು ಕೇಳಿರೊ. ಜಾಗ್ರಸ್ವಪ್ನಸುಷುಪ್ತಿಯಲ್ಲಿ ತಟ್ಟುಗೆಡೆಯದ ತಟ್ಟಲ್ಲದೆ ಹಾಸಿಕೆಯಲ್ಲ. ಮನ ಬುದ್ಧಿ ಚಿತ್ತ ಅಹಂಕಾರ ಎಂಬಿವು ಕೂಡಿ, ಸುಚಿತ್ತವೆಂಬರಿವು ಹಿಂಗದ ಕೋಲಿನಲ್ಲಿ ಕಟ್ಟಿ, ಮೂರಂಗವ ತೊಡೆವುದು ಕುಂಚ. ಹುಟ್ಟುವ ಅಂಡ, ಜನಿಸುವ ಯೋನಿ, ಮರಣದ ಮರವೆಯೆಂಬೀ ಗುಣವ ಅರಿತು, ಕೀಳುವುದು ಮಂಡೆಯ ಲೋಚು. ಹಿಂಗರಿತು ಕರಿಗೊಂಡು, ಭವವಿರೋಧವಂ ಗೆದ್ದು, ಅಘನಾಶನನ ಅಂಗದ ಮೇಲೆ ಇಂಬಿಟ್ಟು, ಹೆರೆಹಿಂಗದ ಸಂಗವೆ ತಾನಾಗಿ, ಆತ ಮಂಗಳಮಯ ಗುರುಮೂರ್ತಿ, ಎನ್ನಂಗದ ಗೂಡಿನ ಗುಮ್ಮಟನೊಡೆಯ ಅಗಮ್ಯೇಶ್ವರಲಿಂಗ.
--------------
ಮನುಮುನಿ ಗುಮ್ಮಟದೇವ
ಕತ್ತಿಯ ಕಟ್ಟಿ ಗದ್ರ್ದಿಸಿ ಕಾಳಗದೊಳು ಕುಳಿಯ ಗೆದ್ದು ಪ್ರಾಣವ ತುಂಬಿ ಕೈಲಾಸಕಟ್ಟುವ ಕೂಳಿಯ ಮರುಳಶಂಕರದೇವರಿಗೆ ಬಿಟ್ಟಮಂಡೆಯ ಗಂಗಾಧರದೇವರಿಗೆ ಪಟ್ಟವ ತೊರದು ಗಂಡನ ಜರದ ಅಕ್ಕಮಹಾದೇವಿಗೆ ನಿಷೆ* ನಿರ್ವಾಣ ಬೋಳೇಶ್ವರದೇವರಿಗೆ ಶರಣು ಶರಣಾರ್ಥಿ ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ ಶಿವಸಾಕ್ಷಿಯಾಗಿ.
--------------
ಕುಷ್ಟಗಿ ಕರಿಬಸವೇಶ್ವರ
ಎವೆಯ ಮುಚ್ಚಿ, ಕಣ್ಣು ತೆರೆಯಬೇಕು. ಶರೀರವ ಗೆದ್ದು, ಜ್ಞಾನವನರಿಯಬೇಕು. ಜ್ಞಾನವ ಮರೆದು, ವಿಜ್ಞಾನ ಸುಜ್ಞಾನದಲ್ಲಿ ನಿಂದು, ಚಿದ್ಘನದಲ್ಲಿ ಚಿಚ್ಛಕ್ತಿಯ ಕೂಡಿ, ಚಿಚ್ಛಕ್ತಿ ನಷ್ಟವಾಗಿ ವಸ್ತುಲೇಪ. ದೃಕ್ಕಿಂಗೆ ಅಗೋಚರವಾಗಿ, ತತ್ವಮಸಿಯೆಂಬ ಭಿತ್ತಿಯ ಭಾವವಿತ್ತಲೆ, ಅತ್ತಲರಿ, ಬಂಕೇಶ್ವರಲಿಂಗವ.
--------------
ಸುಂಕದ ಬಂಕಣ್ಣ
ಜಗದೊಳಗೆ ಹುಟ್ಟಿದವರೆಲ್ಲ ಹಗರಣಿಗರಾಗಿ ಹುಟ್ಟಿದರಲ್ಲದೆ, ಜಗವ ಗೆಲ್ಲಲರಿಯದೆ, ನಗೆಗೆಡೆಯಾಗಿ ಹೋದರು. ಎಮ್ಮ ಶರಣರು ಅಂತಲ್ಲ ಕೇಳಿರಣ್ಣಾ. ಜಗದಲ್ಲಿಯೇ ಹುಟ್ಟಿ, ಜಗದಲ್ಲಿಯೇ ಬೆಳೆದು, ಜಗದಂತೆ ಇದು, ಈ ಜಗವ ಗೆದ್ದು ಹೋಗುವರು. ನಿಗಮಶಾಸ್ತ್ರ ಸಾಕ್ಷಿಯಾಗಿ, ಚೆನ್ನಮಲ್ಲೇಶ್ವರ ನಿನಗಾಯಿತ್ತಯ್ಯಾ. ಅಂತಪ್ಪ ಚೆನ್ನಮಲ್ಲೇಶ್ವರನ ಪಾದವಡಿದು, ಅವರು ಹೋದ ಹಾದಿಗೊಂಡು ಹೋಗುವನಲ್ಲದೆ, ಈ ಮೇದಿನಿಯೊಳಗೆ ಕಾಮಕಾಲಾದಿಗಳ ಬಲೆಯೊಳಗೆ ಸಿಕ್ಕಿಬಿದ್ದು ಹೋದೆನಾದರೆ, ನಿಮ್ಮ ಪಾದಕ್ಕೆ ಅಂದೇ ದೂರವಯ್ಯಾ. ಬಸವಪ್ರಿಯ ಕೂಡಲಚೆನ್ನಬಸವಣ್ಣಾ.
--------------
ಹಡಪದ ಅಪ್ಪಣ್ಣ
ರಂಡೆಮುಂಡೆಯ ಮಗ ರಾಜಕುಮಾರ ಗಗನದಲ್ಲಿ ಪುಟ್ಟಿ, ಭೂಮಿಯಲ್ಲಿ ಬಂದು, ಆ ಭೂಮಿಯ ರಾಜನಲ್ಲಿ ಯುದ್ಭವ ಮಾಡಿ, ಆನೆಯ ಹಲ್ಲು ಕಿತ್ತು, ಕುಂಭವನೊಡೆದು, ಕುದುರೆಯ ಕಾಲ ಮುರಿದು, ನಾಯಿಯ ನಾಲಿಗೆ ಕಿತ್ತು, ಬೆಕ್ಕಿನ ಕಣ್ಣು ಕಳೆದು ಉಣ್ಣದೆ ಉಪವಾಸ ಮಾಡದೆ ಯುದ್ಧದಿಂ ತ್ರಿಲೋಕದ ರಾಜರ ಗೆದ್ದು, ತ್ರಿಲೋಕದ ರಾಜರಲ್ಲಿ ಸತ್ತು ನಿಂದಿತ್ತು. ಈ ಭೇದವ - ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವಿನ ಶರಣರು ಬಲ್ಲರಲ್ಲದೆ ಮಿಕ್ಕಿನ ಜೀವಾತ್ಮರು ಅರಿಯರು.
--------------
ಕಾಡಸಿದ್ಧೇಶ್ವರ
ಪಿಂಡಾಂಡದ ಮೇಲೊಂದು ತುಂಬಿದ ಭಾಂಡೆಯ ಕಂಡೆನಯ್ಯ. ಪಿಂಡಾಂಡವ ಹೊದ್ದದೆ ಅಖಂಡಮಯವಾಗಿದೆ ನೋಡಾ. ಆ ಭಾಂಡವಯೆನ್ನ ಮಂಡೆಯ ಮೇಲೆ ಹೊತ್ತಿಪ್ಪೆನಯ್ಯ. ಮೂಲಜ್ಞಾನಾಗ್ನಿಯೆದ್ದು ಮೇಲಣ ಕಮಲವ ತಾಗಲು ಕಮಲದೊಳಗಣ ಕೊಡ ಕೊಡದೊಳಗಣ ಉದಕ ಉಕ್ಕಿ ಶರೀರದ ಮೇಲೊಗಲು ಪಿಂಡ ಕರಗಿ ಅಖಂಡಮಯನಾದೆನು. ಅಮೃತ ಬಿಂದುವ ಸೇವಿಸಿ ನಿತ್ಯಾನಿತ್ಯವ ಗೆದ್ದು ನಿರ್ಮಲ ನಿರಾವರಣನಾದೆನು. ಸೀಮೆಯ ಮೀರಿ ನಿಸ್ಸೀಮನಾದೆನು. ಪರಮ ನಿರಂಜನನನೊಡಗೂಡಿ ಮಾಯಾರಂಜನೆಯಳಿದು ನಿರಂಜನನಾಗಿದ್ದೆನು ಕಾಣಾ. ಸಮಸ್ತ ವಿಶ್ವಪ್ರಪಂಚಿಗೆ ಹೊರಗಾಗಿ ನಿಃಪ್ರಪಂಚ ನಿರ್ಲೇಪನಾಗಿರ್ದೆನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಹಾಕಿದ ಮುಂಡಿಗೆಯ ಎತ್ತುವರಿಲ್ಲ. ಎತ್ತಿದ ಮುಂಡಿಗೆಯ ದೃಷ್ಟದಲ್ಲಿ , ಶ್ರುತದಲ್ಲಿ ಗೆದ್ದು , ಇಸಕೊಂಬವರಿಲ್ಲ . ಈ ಉಭಯದ ಗೊತ್ತನರಿಯದೆ ಕೆಟ್ಟರು, ನಾವು ಭಕ್ತ ಜಂಗಮರೆಂಬುವರೆಲ್ಲ . ಅದಂತಿರಲಿ. ನಾನು ನೀನು ಎಂಬುಭಯದ ಗೊತ್ತನರಿದು, ದೃಷ್ಟದಲ್ಲಿ ಶ್ರುತದಲ್ಲಿ ಗೆದ್ದು ಕೊಟ್ಟು, ನ್ಯಾಯದಲ್ಲಿ ಜಗವನೊಡಂಬಡಿಸಿ ಕೊಟ್ಟು, ಆ ಸಿಕ್ಕಿಹೋಗುವ ಮುಂಡಿಗೆಯ ಎತ್ತಿಕೊಂಡು, ಸುತ್ತಿ ನೋಡಿದರೆ ಬಟ್ಟಬಯಲಾಗಿರ್ದಿತ್ತು . ಆ ಬಟ್ಟಬಯಲ ದಿಟ್ಟಿಸಿ ನೋಡಲು, ನೆಟ್ಟಗೆ ಹೋಗುತ್ತಿದೆ . ಹೋಗಹೋಗುತ್ತ ನೋಡಿದರೆ, ನಾ ಎತ್ತ ಹೋದೆನೆಂದರಿಯೆನಯ್ಯಾ, ಬಸವಪ್ರಿಯ ಕೂಡಲಚೆನ್ನಬಸವಣ್ಣ.
--------------
ಹಡಪದ ಅಪ್ಪಣ್ಣ
ಬ್ರಹ್ಮಾಂಡದಲ್ಲಿ ಹುಟ್ಟಿದವರೆಲ್ಲ ಭವಬಂಧನಕ್ಕೊಳಗಾದರಯ್ಯಾ. ನಿಮ್ಮ ನಂಬದ ಸದ್ಭಕ್ತ ಮಹೇಶ್ವರರು ಭವಬಂಧನವನೆ ಹಿಂಗಿ, ಮರಣಭಯವ ಗೆದ್ದು, ಕರಣಂಗಳ ಸುಟ್ಟು, ಹರಿಮನವ ನಿಲಿಸಿ, ಅನಲಪವನಗುಣವರತು, ಜನನಮರಣವಿರಹಿತವಾದ ಶರಣರ ಭವಭಾರಿಗಳೆತ್ತ ಬಲ್ಲರು ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ ?
--------------
ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ
ಮಂಡಲದೊಳಿರ್ದು ಪರಸಮಯವ ಗೆದ್ದು, ಕೈಲಾಸದೊಳಿದ್ದ ಶರಣರ ಕೊಂಡಾಡಿ ಕುಣಿಕುಣಿದಾಡಿ ಸುಖದೊಳು ಮುಳುಗಾಡಿ ಬಾಳುವ ಭಕ್ತರು ನೀವು ಕೇಳಿರೊ. ಖಂಡೇಂದುಧರನು ಕದ್ದು ಮರೆಹೊಕ್ಕರೆ ಕೊಡದೆ ಮಡದಿ ಮಕ್ಕಳು ಮಂಡೆಯ ಹಂಗಿಲ್ಲದೆ ಸೂಲಕೆ ಬಿದ್ದು ಚಿಗುರಿಸಿ ಮೆರದರು ನಮ್ಮ ಗುಂಡಬ್ರಹ್ಮಯ್ಯಗಳಿಗೆ ಶರಣು ಶರಣಾರ್ಥಿ ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ ಶಿವಸಾಕ್ಷಿಯಾಗಿ.
--------------
ಕುಷ್ಟಗಿ ಕರಿಬಸವೇಶ್ವರ
ಹೋತನ ಕೊಯ್ದು, ಕುರಿಯ ಸುಲಿದು, ಮರಿಯ ಕೊರಳನೊತ್ತಿ , ಕಾವಲ ಕುನ್ನಿಯ ಕೆಡಹಿ, ತೋಳನ ಕುಲವ ಗೆದ್ದು, ಕುರುಬನ ಕುರುಹಿನ ಕುಲವಡಗಿ, ನೆರೆ ಅರಿವಿನ ಕುಲದಲ್ಲಿ ಅಡಗಬೇಕು, ವೀರಬೀರೇಶ್ವರಲಿಂಗವನರಿದ ಶರಣ.
--------------
ವೀರ ಗೊಲ್ಲಾಳ/ಕಾಟಕೋಟ
ಆದಿಯಾಧಾರವಿಲ್ಲದಂದು, ಕಳೆಮೊಳೆದೋರದಂದು, ಕಾಮನಿಃಕಾಮವಿಲ್ಲದಂದು, ವೀರವಿತರಣವಿಲ್ಲದಂದು, ಯುಗಜುಗವಿಲ್ಲದಂದು, ಪಿಂಡಾಂಡ ಬ್ರಹ್ಮಾಂಡವಿಲ್ಲದಂದು, ಏನೂ ಏನೂ ಇಲ್ಲದಂದು, ಎಲ್ಲಾ ಮೂರ್ತಿಗಳು ನೆಲೆಗೊಳ್ಳದಂದು, ಅಂದು ಏನೆಂದು ಅರಿಯದಿರ್ಪ ನಮ್ಮ ಬಸವಯ್ಯನು. ಒಂದು ಗುಣವನೊಂದು ಅಕ್ಷರಕ್ಕೆ ತಂದಾತ ನಮ್ಮ ಬಸವಯ್ಯನು. ಆ ಅಕ್ಷರವ ರೂಪಮಾಡಿ, ತ್ರಯಾಕ್ಷರದಲ್ಲಿ ಕಳೆಯ ಸಂಬಂಧಿಸಿದಾತ ನಮ್ಮ ಬಸವಯ್ಯನು. ಆ ಕಳೆಯ ಮೂರು ತೆರನ ಮಾಡಿ, ಪೃಥ್ವಿ ಅಪ್ಪು ತೇಜ ವಾಯು ಆಕಾಶ ಎಂಬ ಪಂಚತತ್ವವೆ ಪಂಚವದನವಾಗಿ, ಆ ಪಂಚವದನವೇ ಪಂಚೀಕೃತವನೆಯ್ದಿ, ಜಗದಾದಿ ಸೃಷ್ಟಿಯನನುಮಾಡುವುದಕ್ಕೆ ಕರ್ತನಾದ ನಮ್ಮ ಬಸವಯ್ಯನು. ಆ ಸೃಷ್ಟಿಯ ಮುಖವ ಕಂಡು ಸೃಜಿಸಲು ಪುಟ್ಟಿದರು ಪಂಚಶಕ್ತಿಯರು. ಆ ಪಂಚಶಕ್ತಿಯರಿಗೆ ಪಂಚಮೂರ್ತಿಯರ ಕೈಗೊಳಿಸಿದಾತ ನಮ್ಮ ಬಸವಯ್ಯನು. ಆ ಪಂಚಮೂರ್ತಿಗಳಿಂದುತ್ಪತ್ಯವಾದ ಲೋಕವ ನೋಡಲೆಂದು, ಕೈಲಾಸವನೆ ಕಲ್ಯಾಣವ ಮಾಡಿದಾತ ನಮ್ಮ ಬಸವಯ್ಯನು. ಆ ಕೈಲಾಸವೇ ಕಲ್ಯಾಣವಾಗಲಾ ಕಲ್ಯಾಣಕ್ಕೆ- ಪ್ರಮಥಗಣಂಗಳ, ರುದ್ರಗಣಂಗಳ, ಅಮರಗಣಂಗಳ, ಪುರಾತನಗಣಂಗಳ, ಪುಣ್ಯಗಣಂಗಳ, ಮಹಾಗಣಂಗಳ, ಮುಖ್ಯಗಣಂಗಳ, ಮಹಾಲಿಂಗೈಕ್ಯಸಂಪನ್ನರಂ, ಭಕ್ತ ಮಾಹೇಶ್ವರ ಪ್ರಸಾದಿ ಪ್ರಾಣಲಿಂಗಿ ಶರಣ ಐಕ್ಯರೆಂಬ ಆಚಾರಾದಿ ಮಹಾಲಿಂಗಸಂಪನ್ನರಂ, ಷಟ್‍ಸ್ಥಲಪ್ರಸಾದಪ್ರಸನ್ನರೂಪರಂ, ಆದಿಮುಕ್ತರಂ, ಅನಾದಿಮುಕ್ತರಂ, ಅಜಾತರಂ, ಅಪ್ರಮಾಣರಂ, ಅನಿಮಿಷಲಿಂಗನಿರೀಕ್ಷಣರಂ, ತ್ರಿವಿಧವಿದೂರರಂ, ತ್ರಿವಿಧಲಿಂಗಾಂಗಮೂರ್ತಿಗಳಂ, ಅರ್ಪಿತಸಂಯೋಗರಂ, ಆಗಮವಿದರಂ, ಅನಾದಿಪರಶಿವಮೂರ್ತಿಗಳಂ, ಏಕಲಿಂಗನಿಷ್ಠಾಪರರುಮಪ್ಪ ಮಹಾಪ್ರಮಥಗಣಂಗಳಂ ತಂದು ನೆರಹಿದಾತ ನಮ್ಮ ಬಸವಯ್ಯನು. ಮರ್ತ್ಯಲೋಕವನೆ ಮಹಾಪ್ರಮಥರ ಬಿಡಾರವ ಮಾಡಿದಾತ ನಮ್ಮ ಬಸವಯ್ಯನು. ಆದಿಯಸೃಷ್ಟಿಯನನಾದಿಯಸೃಷ್ಟಿಗೆ ತಂದು, ಅನಾದಿಸೃಷ್ಟಿಯನಾದಿಸೃಷ್ಟಿಗೆ ತಂದು, ಅಜಾತನಬೀಡನಂಗದಲ್ಲಿ ನೆರಹಿದಾತ ನಮ್ಮ ಬಸವಯ್ಯನು. ಭಾವವಿಲ್ಲದ ಭ್ರಮೆಯ ಭ್ರಮೆಗೊಳಿಸಿ ಭಾವಕ್ಕೆ ತಂದಾತ ನಮ್ಮ ಬಸವಯ್ಯನು. ಬಯಲನೊಂದು ರೂಪಮಾಡಿ ಬಣ್ಣಕ್ಕೆ ತಂದು, ಆ ಬಣ್ಣವ ನಿಜದಲ್ಲಿ ನಿಲಿಸಿದಾತ ನಮ್ಮ ಬಸವಯ್ಯನು. ಲಕ್ಷದ ಮೇಲೆ ತೊಂಬತ್ತಾರುಸಾವಿರ ಜಂಗಮಕ್ಕೆ ಇಚ್ಫೆಯನರಿದು ಅರ್ಪಿತವ ಮಾಡಿದಾತ ನಮ್ಮ ಬಸವಯ್ಯನು. ಅಂಗಸಂಗಿಗಳನಂತರಿಗೆ ಅಂಗನೆಯರ ಅನುಭವವ ನಡಸಿದಾತ ನಮ್ಮ ಬಸವಯ್ಯನು. ಮೂವತ್ತಾರುಸಾವಿರ ಮಾಹೇಶ್ವರರಿಗೆ ಮುಖಮೂರ್ತಿಯಾಗಿ, ಅರ್ಪಿತಪ್ರಸಾದವನನುಭವಿಸಿದಾತ ನಮ್ಮ ಬಸವಯ್ಯನು. ಹನ್ನೆರಡುಸಾವಿರ ರಾಣಿಯರ ಅಂಗವನರ್ಪಿತಪ್ರಸಾದಿಗಳ ಮಾಡಿದಾತ ನಮ್ಮ ಬಸವಯ್ಯನು. ಎಂಬತ್ತೆಂಟುಪವಾಡಮಂ ಗೆದ್ದು ಮುನ್ನೂರರುವತ್ತು ಸತ್ತ ಪ್ರಾಣವನೆತ್ತಿ ಮೆರೆದು ಪರಸಮಯವನಳಿದಾತ ನಮ್ಮ ಬಸವಯ್ಯನು. ಇಪ್ಪತ್ತೈದುಸಾವಿರ ಚಾರ್ವಾಕರಂ ನೆಗ್ಗಿಲೊತ್ತಿ, ಅಪ್ರತಿಮ ಶಿವಗಣಂಗಳ ಮಹಾತ್ಮೆಯಂ ಮೆರೆದಾತ ನಮ್ಮ ಬಸವಯ್ಯನು. ಪ್ರಣವದ ಬೀಜವ ಬಿತ್ತಿ, ಪಂಚಾಕ್ಷರಿಯಬೆಳೆಯ ಬೆಳೆದು, ಪರಮಪ್ರಸಾದವನೊಂದು ರೂಪಮಾಡಿ ಮೆರೆದು, ಭಕ್ತಿಫಲವನುಂಡಾತ ನಮ್ಮ ಬಸವಯ್ಯನು. ಚೆನ್ನಬಸವನೆಂಬ ಪ್ರಸಾದಿಯ ಪಡೆದು, ಅನುಭವಮಂಟಪವನನುಮಾಡಿ, ಅನುಭವಮೂರ್ತಿಯಾದ ನಮ್ಮ ಬಸವಯ್ಯನು. ಅರಿವ ಸಂಪಾದಿಸಿ ಆಚಾರವನಂಗಂಗೊಳಿಸಿ, ಏಳುನೂರೆಪ್ಪತ್ತು ಅಮರಗಣಂಗಳ ಅನುಭವಮೂರ್ತಿಗಳ ಮಾಡಿದಾತ ನಮ್ಮ ಬಸವಯ್ಯನು. ಆ ಅನುಭವದಲ್ಲಿ ಐಕ್ಯಪ್ರಸಾದವನಂಗಂಗೊಂಡು, ಮಂತ್ರ ನಿರ್ಮಂತ್ರವಾದಾತ ನಮ್ಮ ಬಸವಯ್ಯನು. ಭಕ್ತಿಸ್ಥಲವನಳಿದು ಭಾವವಡಗಿ ಬಟ್ಟಬಯಲ ಕೂಡಿ, ಸಂಗಯ್ಯನಲ್ಲಿ ಸ್ವಯಲಿಂಗಿಯಾದ ನಮ್ಮ ಬಸವಯ್ಯನು.
--------------
ನೀಲಮ್ಮ
ಇನ್ನಷ್ಟು ... -->