ಅಥವಾ

ಒಟ್ಟು 21 ಕಡೆಗಳಲ್ಲಿ , 10 ವಚನಕಾರರು , 21 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಜೀವತಾಮಸದ ಮಾಯದ ಬಲೆಯ ಭ್ರಾಂತಿಂಗೆ ಸೋಲುವ ಶರೀರ ! ಸಂಸಾರ ಸಂಗವ ಭೇದಿಸಿ ನೋಡುವಡೆ ದೂರ, ಚಿಂತೆಯನೆ ಗೆಲಿದು ಸುಳಿದಡೆ, ಗುಹೇಶ್ವರನೆಂದರಿದ ಶರಣಸಾರಾಯನು.
--------------
ಅಲ್ಲಮಪ್ರಭುದೇವರು
ಇವಳ (ಅವಳ?) ನೋಟವೆನ್ನ ಮತ್ರ್ಯಕ್ಕೆ ತಂದಿತ್ತಯ್ಯಾ. ಇವಳ ಕೂಟ ಸವಿಯನವಗಡಿಸಿ ಕಾಡಿತ್ತಯ್ಯಾ. ಇವಳ ಬೇಟದ ಬೇರ ಹರಿದಲ್ಲಿ ತ್ರಿಪುರ ಹಾಳಾದುದ ಕಂಡೆನು. ಉರಿಯ ಮೇಲೆ ಉರಿ ಎರಗಿದಡೆ ತಂಪು ಮೂಡಿತ್ತ ಕಂಡೆನು. ಕರಿಯ ಬೇಡನ ಕಸ್ತುರಿಯ ಮೃಗ ನುಂಗಿದಡೆ ಹಿರಿಯ ಹೆಂಡತಿ ಓಲೆಗಳೆದುದ ಕಂಡೆನು. ಕಾರಿರುಳ ಕೋಟೆಯಲಿ ಕಲಿಯ ಕಾಳೆಗವ ಗೆಲಿದು ಹೂಳಿರ್ದ ನಿಧಾನವ ಕಂಡೆನು ಕಾಣಾ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಚೌದಳ ಷಡುದಳ ದಶದಳ ದ್ವಾದಶದಳ ಷೋಡಶದಳ ದ್ವಿದಳ, ಒಳಹೊರಗಣ ಸ್ಥಳಕುಳವನರಿದು, ಬೆಳಗುವ ಬೆಳಗ, ಹೊಳೆವ ಪ್ರಭೆ ಪ್ರಜ್ವಲಿಸಿ ಕಳವಳವಳಿದು, ಕಾಯದ ಕದಳಿಯ ಗೆಲಿದು, ಕರಗಿ ಒಂದಾದ ಶರಣನೆ ಹರನು, ಒಸವಪ್ರಿಯ ಕೂಡಲಸಂಗಮದೇವ ಪ್ರಭುವೆ.
--------------
ಹಡಪದ ಅಪ್ಪಣ್ಣ
ಒಂದೆ ಭಾವದಿಂದ ಗುರುಲಿಂಗಾರ್ಚನೆ ಪೂಜೆಯಂ ಮಾಡಿ, ಹಿಂದಣ ಭವಜನ್ಮ ದಂದುಗವನೆ ಗೆಲಿದು, ಶಿವನ ಸಲುಸಂದ ಪ್ರಮಥರ ಸರಿಯೆನಿಸಿಕೊಂಬುದು ಸಾಮಾನ್ಯವಲ್ಲ. ಕಂದನ ಶಿವಗರ್ಪಿತವ ಮಾಡಿ, ಸಿರಿಯಾಳಸೆಟ್ಟಿ ಕೈಲಾಸ ಕಾಬುದು ಸಂದೇಹವಾಗಿಹುದೆಂದ. ಹೃದಯದ ಅಂಧಕಾರ ಹರಿಯಲೆಂದು, ಗುರುದೇವನು ಬೆಳಗ ತೋರಿದ. ಹಿಂದಣ ಸೂತಕ ತೊಳೆಯಲೆಂದು ನಿಂದರೂ ಮಾಯಾಬಂಧನದಲ್ಲಿ ಸಿಲ್ಕಿ, ಗುರುವಿಂಗೆ ವಂದನೆಯ ಮಾಡದೆ, ಶಿವಗತಿಗೆ ಸಂದೆನೆಂಬ ಸ್ವಾಮಿದ್ರೋಹಿಗಳಿಗೆ ಎಂದೂ ಗತಿಯಿಲ್ಲವೆಂದ, ಕಲಿದೇವರದೇವಯ್ಯ.
--------------
ಮಡಿವಾಳ ಮಾಚಿದೇವ
ಆವಾವ ಭಾಷಾಂಗವ ತೊಟ್ಟರೂ ಆ ಭಾಷಾಂಗಕ್ಕೆ ತಕ್ಕ ಗತಿ ಭಾಷೆಯಿರಬೇಕು. ಶಿವಲಾಂಛನಧಾರಿಯಾದಡೆ, ಆ ಲಾಂಛನಕ್ಕೆ ತಕ್ಕ ನಡೆ ನುಡಿ ಇರಬೇಕು. ಅದೆಂತೆಂದಡೆ: ಕಾಯದ ಕಳವಳವ ಗೆಲಿದು, ಮಾಯಾಪ್ರಪಂಚ ಮಿಥ್ಯವೆಂದರಿದು, ಕ್ಷಮೆ ದಮೆ ಶಾಂತಿ ದಯೆ ಜ್ಞಾನ ವೈರಾಗ್ಯ ಮುಂತಾಗಿ ಸುಳಿಯಬೇಕು. ಲಿಂಗಮೋಹಿಯಾಗಿದ್ದಲ್ಲದೆ, ಉಳಿದ ಉದ್ದೇಶದ ಸುಳುಹೆಲ್ಲಾ ಬಿರುಗಾಳಿಯ ಸುಳುಹಯ್ಯಾ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ.
--------------
ಸ್ವತಂತ್ರ ಸಿದ್ಧಲಿಂಗ
ಮುಚ್ಚಿ ಮೂದಲಿಸಿ ಮೊನೆಗೆಡಿಸುವ ಮಾಯಾಪ್ರಪಂಚಿನ ಬಲೆಗೆ ಸಿಲುಕದೆ ನಾನು ಧ್ಯಾನ ಮೌನ ಉಪಾವಸ್ಥೆಯಿಂದ ಷಟ್‍ಕೋಣೆಯ ಸುವರ್ಣದ್ವೀಪದ ಅರಸಿನ ಬಲವಿಡಿದು ಪಂಚವಿಂಶತಿತತ್ವಂಗಳೆಂಬ ಮಾಯಾಸುಭಟರ ಸ[ೂ]ಡಕೊಂದು ಪಂಚಬ್ರಹ್ಮವೇ ಪಂಚಭೂತಂಗಳಾಗಿ ತನುವಿಡಿದು ಲಿಂಗನಿಷೆ*ಯಿಂದ ಓಂಕಾರಸ್ವರೂಪವಾಗಿ ಅಹಂಕರಿಸದೆ ದಾಸೋಹಂಭಾವದಿಂದ ತ್ರಿಕೂಟಪರ್ವತಕ್ಕೆ ಪಶ್ಚಿಮದಿಕ್ಕಿನಲ್ಲಿ ಅನಂತ ಕಾರ್ಮುಗಿಲ ಮಿಂಚಿನಂತೆ [ತೋರುತ್ತಿಪ್ಪು]ದೀಗ ಶಾಂಭವದ್ವೀಪ. ಆ ಶಾಂಭವದ್ವೀಪದಲ್ಲಿ ನೆಲಸಿರ್ಪ ನಿರವಯಲ ಬೆಳ್ದಿಂಗಲ ಬೀಜಮಂ ನಾನು ಕಂಡು ಕಂಬನಿದುಂಬಿ ನಮಸ್ಕಾರಮಂ ಮಾಡಿದ ಘನದಿಂದ ಬ್ರಹ್ಮ ವಿಷ್ಣು ರುದ್ರ ಇಂತೀ ಮೂವರಂ ಕೆಡೆಮೆಟ್ಟಿ ಜನನ ಮರಣಂಗಳಂ ಗೆಲಿದು ನಾನು ಹುಟ್ಟುಗೆಟ್ಟೆನಯ್ಯಾ, ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ.
--------------
ಘನಲಿಂಗಿದೇವ
ಕಾಶಿಯಲ್ಲಿ ಗೋವಧೆಯ ಮಾಡಿ ಗುರುಕರುಣವ ಪಡೆದು ಪರವನರಿಯಬಲ್ಲಾತನೇ ಯೋಗಿ. ತ್ರಿವೇಣಿಸಂಗಮದಲ್ಲಿ ಮಂಡೋದರಿಯ ಕೊಂದು, ಮನನ ತ್ರಾಣಮಂತ್ರವನನುಸಂಧಾನಿಸಬಲ್ಲಾತನೇ ಯೋಗಿ. ಶ್ರೀಶೈಲದಲ್ಲಿ ಶಿವಸ್ತುತಿಯ ಕೇಳಿ, ಹಯವ ಹತಮಾಡಿ, ಮನವಳಿದಿರಬಲ್ಲಾತನೇ ಯೋಗಿ. ಪ್ರಯಾಗದಲ್ಲಿ ಉರಗನ ಕೊಂದು, ಘಣಾಮಣಿಯ ಸೆಳೆದುಕೊಂಡು, ಆ ಮಣಿಯ ಬೆಳಗಿನೊಳಗೆ ಸುಳಿದಾಡಬಲ್ಲಾತನೇ ಯೋಗಿ. ಕೇದಾರದಲ್ಲಿ ಮತ್ಸ ್ಯವ ಕೊಂದು, ಮರಣವ ಗೆಲಿದು, ಪರಮ ಪದದಲ್ಲಿರಬಲ್ಲಾತನೇ ಯೋಗಿ. ಇಂತೀ ಪುಣ್ಯಕ್ಷೇತ್ರಂಗಳಲ್ಲಿ ಮಾಡಬಾರದುದ ಮಾಡಿ, ನೋಡಬಾರದುದ ನೋಡಿ, ಕೇಳಬಾರದುದ ಕೇಳಿ, ಶಿವನೊಲಿಸಿ ಶಿವನೊಳಗಾದರು ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ ನಿಮ್ಮ ಶರಣರು.
--------------
ಸ್ವತಂತ್ರ ಸಿದ್ಧಲಿಂಗ
ಜಂಗಮ ಜಂಗಮವೆಂಬ ಭಂಗಿತರ ಮುಖವ ನೋಡಲಾಗದು. ಅದೇನು ಕಾರಣವೆಂದಡೆ_ನಿರಾಳಜಂಗಮವನರಿಯದೆ ನಾನೆ ಜಂಗಮವೆಂಬರು. ಗ್ರಂಥ ``ಜಕಾರಂ ಜನನಂ ನಾಸ್ತಿ ಗಕಾರಂ ಗಮನವರ್ಜಿತಂ ಮಕಾರಂ ಮರಣಂ ನಾಸ್ತಿ ಏತದ್ಭವ್ಜೇಂಗಮಂ _ ಎಂದುದಾಗಿ, ಇಂತಪ್ಪ ನಿರ್ದೇಹಿ ಜಂಗಮವ ಕರ-ಮನ-ಭಾವದಲ್ಲಿ ಆರಾಧಿಸಿ ಜನನ ಮರಣಂಗಳ ಗೆಲಿದು ಕರ್ಪುರದ ಜ್ಯೋತಿಯಂತೆ ಇರಬಲ್ಲಡೆ ಆ ಮಹಾತ್ಮನೆ ತ್ರೈಜಗದೊಡೆಯನೆಂಬೆ, ಆ ಮಹಾತ್ಮನೆ ವಿಶ್ವಪರಿಪೂರ್ಣನೆಂಬೆನು ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಕಾಯವೆಂಬ ಮಹಾಕದಳಿಯ ಗೆಲಬಲ್ಲವರನಾರನೂ ಕಾಣೆ_ ಸಂಸಾರವೆಂಬ ಸಪ್ತಸಮುದ್ರ ಬಳಸಿ ಬಂದಿಪ್ಪವು. ಭವವೆಂಬ ಮಹಾರಣ್ಯದೊಳು, ಪಂಚೇಂದ್ರಿಯವೆಂಬ ವಿಷದ ಮಳೆ ಸುರುವುತ್ತಿಪ್ಪುದು. ಕೋಪವೆಂಬ ಪರ್ಬುಲಿ ಮೊರೆವುತ್ತಿಪ್ಪುದು. ಅಷ್ಟಮದವೆಂಬ ಮದಗಜಂಗಳು ಬೀದಿವರಿಯುತ್ತಿಪ್ಪುವು. ಕಾಮವೆಂಬ ಕೆಂಡದ ಮಳೆ-ಅಡಿಯಿಡಬಾರದು. ಮತ್ಸರವೆಂಬ ಮಹಾಸರ್ಪಂಗಳು ಕಿಡಿಯನುಗುಳುತ್ತಿಪ್ಪವು. ಆಸೆಯೆಂಬ ಪಾಪಿಯ ಕೂಸು ಹಿಸಿಹಿಸಿದು ತಿನ್ನುತ್ತಿಪ್ಪುದು. ತಾಪತ್ರಯವೆಂಬ ಮೂರಂಬಿನಸೋನೆ ಸುರಿವುತ್ತಿಪ್ಪುದು. ಅಹಂಕಾರವೆಂಬ ಗಿರಿಗಳು ಅಡ್ಡ ಬಿದ್ದಿಪ್ಪವು. ಪಂಚಭೂತಗಳೆಂಬ ಭೂತಂಗಳ ಭಯ-ದಿಟ್ಟಿಸಬಾರದು. ಮಾಯೆಯೆಂಬ ರಕ್ಕಸಿ ಹಸಿಯ ತಿನುತಿಪ್ಪಳು ವಿಷಯವೆಂಬ ಕೂಪ_ಬಳಸಬಾರದು. ಮೋಹವೆಂಬ ಬಳ್ಳಿ_ಕಾಲ ಕುತ್ತಬಾರದು. ಲೋಭವೆಂಬ ಮಸೆದಡಾಯುಧ_ಒರೆ ಉಚ್ಚಬಾರದು. ಇಂತಪ್ಪ ಕದಳಿಯ ಹೊಗಲರಿಯದೆ ದೇವದಾನವ ಮಾನವರೆಲ್ಲರೂ, ಮತಿಗೆಟ್ಟು ಮರುಳಾಗಿ ಹೆರೆದೆಗೆದು ಓಡಿದರು. ಅಂಗಾಲ ಕಣ್ಣವರು ಮೈಯೆಲ್ಲ ಕಣ್ಣವರು ತಲೆಬಾಲಗೆಟ್ಟರು. ನಾನು ಈ ಕದಳಿಯ ಹೊಕ್ಕು ಹೊಯ್ದಾಡಿ, ಮುಳ್ಳು ಮಸೆ ಮುಟ್ಟದೆ ಕಳಿವರಿದು, ಗೆಲಿದು, ಉತ್ತರಿಸಿ; ಗುಹೇಶ್ವರನೆಂಬ ಲಿಂಗದ ನಿಜಸಮಾಧಿಯಲ್ಲಿ ನಿಂದು, ಪರವಶನಾಗಿ ನಿರಾಳಕ್ಕೆ ನಿರಾಳವಾಗಿದ್ದೆನಯ್ಯಾ !
--------------
ಅಲ್ಲಮಪ್ರಭುದೇವರು
ಆಜ್ಞಾಚಕ್ರದ ದ್ವಿದಳ ಪದ್ಮದಲ್ಲಿ ಅವಿರಳ ಸುಜ್ಞಾನ ಪೀಠದೊಳಗೆ ಅಮೃತಮಯ ಲಿಂಗವ ಕಂಡೆನು ನೋಡಾ. ಆ ಲಿಂಗ ಸಂಗದಿಂದ ಉತ್ಪತ್ತಿ ಸ್ಥಿತಿ ಪ್ರಳಯವ ಗೆಲಿದು ನಿತ್ಯ ನಿರಂಜನ ಪ್ರಸಿದ್ಧ ಪ್ರಸಾದಿಯಾದೆನು ಕಾಣಾ. ಆ ಪ್ರಸಿದ್ಧ ಪ್ರಸಾದವೆ ಒಂದೆರಡಾಗಿ ಎರಡು ಮೂರಾಗಿ ಮೂರು ಆರಾಗಿ ಆರು ಮೂವತ್ತಾರಾಗಿ ಮೂವತ್ತಾರು ಇನ್ನೂರಹದಿನಾರಾಗಿ ಆ ಇನ್ನೂರ ಹದಿನಾರರ ಬೆಳಗು ಪಿಂಡಾಂಡದಲ್ಲಿ ಪರಿಪೂರ್ಣವಾಗಿ ಸದಾ ಸನ್ನಿಹಿತವಾಗಿಪ್ಪುದು. ನಿಮ್ಮ ಶರಣ ಸಂಗನ ಬಸವಣ್ಣ ಮೊದಲಾದ ಪ್ರಮಥರಿಗೆ ಸಾಧ್ಯವಲ್ಲದೆ ಅಜ ಹರಿ ಸುರ ಮನು ಮುನಿಗಳಿಗೆ ಅಗಮ್ಯ ಅಗೋಚರ ಅಪ್ರಮಾಣ ಅಸಾಧ್ಯ ನೋಡಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಕಲ್ಯಾಣವರಿಯೆ ಕಟಕವರಿಯೆ ಬೇಂಟೆಯನಾಡುತ್ತಿದ್ದೆ. ಎನ್ನ ಕೈ ನೋಡಿ ಭೋ ಕಲಿ ವೀರ ಸುಭಟರು. ಎನ್ನ ಕೈ ನೋಡಿ ಭೋ ಅರುಹಿರಿಯರು. ಕಾದಿ ಗೆಲಿದು ಗುಹೇಶ್ವರಲಿಂಗದಲ್ಲಿಗೆ ತಲೆವರಿಗೆಯನಿಕ್ಕಿ ಬಂದೆ, ಎನ್ನ ಕೈ ನೋಡಿ ಭೋ.
--------------
ಅಲ್ಲಮಪ್ರಭುದೇವರು
ರವಿಯ ಕಾಳಗವ ಗೆಲಿದು, ಒಂಬತ್ತು ಬಾಗಿಲ ಮುರಿದು, ಅಷ್ಟಧವಳಾರಮಂ ಸುಟ್ಟು, ಮೇಲುಪ್ಪರಿಗೆಯ ಮೆಟ್ಟಿ, ಅಲ್ಲಅಹುದು, ಉಂಟುಇಲ್ಲ, ಬೇಕುಬೇಡೆಂಬ ಆರರಿತಾತನೆ ಗುರು ತಾನೆ ಬೇರಿಲ್ಲ. ದ್ವಯಕಮಳದಲ್ಲಿ ಉದಯವಾದ ಚೆನ್ನಮಲ್ಲಿಕಾರ್ಜುನಯ್ಯಾ ನಿಮ್ಮ ಶರಣ ಸಂಗನಬಸವಣ್ಣನ ಶ್ರೀಪಾದಕ್ಕೆ ನಮೋ ನಮೋ ಎನುತಿರ್ದೆನು.
--------------
ಅಕ್ಕಮಹಾದೇವಿ
ವೀರದನುಜರೆಲ್ಲಾ ಧಾರುಣಿಯೆಂಬುದರೊಳಗೆ ಸಾಗರವಾಗಿದ್ದುದನಾರೂ ಅರಿಯರಲ್ಲಾ, ದ್ವಾರಾವತಿಯಪುರದೊಳಗೆ ಪರವು ಬಂದಿದ್ದಡೆ ಶರೀರಸಂಬಂಧವ ಮಾಡಲರಿಯರಲ್ಲಾ. ಕರಗಸವ ಕಳೆದುಕೊಂಡು, ಪರಶುರಾಮನ ಗೆಲಿದು, ಸುರರೊಳಗೆ ಸುಳಿದಾಡಲರಿಯರಲ್ಲಾ. ವಾರುಧಿಯ ಸೇರಿಕೊಂಡು, ಮರಣವೆಂಬುದ ನಿಲಿಸಿ, ತ್ರಿಪುರವ ಮೂರ್ತಿಗೊಳಿಸಲರಿಯರಲ್ಲಾ. ಮೇರುವೆಂಬುದ ಹೊಕ್ಕು ನೂರೆಂಟನೆಣಿಸಿಕೊಂಡು ನಿರಾಕಾರದಲಡಗುವರಿನ್ನಾರು ಹೇಳಾ ಸಾಸಿರದ ಮೇಲೆ ನೂರೆಂಬತ್ತೆಂಟು ರಾಶಿ ಪರುಷವೇಧಿಗಳಾಗಲರಿಯರಲ್ಲಾ. ಕೂಡಲಸಂಗನ ಶರಣರ ಸಂಬಂಧವು ಪ್ರಭುವಿಂಗಲ್ಲದೆ ಮತ್ತಾರಿಗೆಯೂ ಅಳವಡದು.
--------------
ಬಸವಣ್ಣ
ಒಂಟೆಯ ತಲೆಯಲ್ಲಿ ಎಂಟಾನೆ ಹುಟ್ಟಿದುದ ಕಂಡೆನಯ್ಯ. ಅದಕ್ಕೆ ನಂಟರು ಅರೇಳೆಂಟು ಹತ್ತು ನೋಡ. ಒಂಟೆಯ ತಲೆಯಲ್ಲಿ ಉರಿಲಿಂಗ ಹುಟ್ಟಲು ಎಂಟಾನೆ ಸತ್ತವು; ನಂಟರು ಕೈಬಿಟ್ಟರು. ಒಂಟೆಯ ತಲೆಯ ಮೆಟ್ಟಿ ನಿಂದು ಉರಿಯ ಪುರುಷನ ನೆರದು ಕಂಟಕಂಗಳ ಗೆಲಿದು ಸಂಸಾರಸಾಗರವ ದಾಂಟಿದೆನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಆತ್ಮಸ್ಥಿತಿ ಶಿವಯೋಗ ಸಂಬಂಧವ ಅರಿದೆನೆಂದಡೆ ಹೇಳಿರಣ್ಣ ಪೃಥ್ವಿ ಅಪ್ಪು ತೇಜ ವಾಯು ಆಕಾಶವೆಂಬ ಪಂಚತತ್ವದ ವಿವರಮಂ ಪೇಳ್ವೆ; ಅಸ್ಥಿ ಮಾಂಸ ಚರ್ಮ ರುಧಿರ ಶುಕ್ಲ ಮೇಧಸ್ಸು ಮಜ್ಜೆ ಎಂಬ ಸಪ್ತಧಾತುವಿನ ಇಹವು, ಶ್ರೋತ್ರ ನೇತ್ರ ಘ್ರಾಣ ಜಿಹ್ವೆ ತ್ವಕ್ಕು ಎಂಬ ಪಂಚಜ್ಞಾನೇಂದ್ರಿಯಂಗಳಿಂದ ಶರೀರವೆನಿಸಿಕೊಂಬುದು. ಶಬ್ದ ಸ್ಪರ್ಶ ರೂಪು ರಸ ಗಂಧವೆಂಬಿವು ಪಂಚೇಂದ್ರಿಯಗಳು, ವಾಕ್ಕು ಪಾಣಿ ಪಾದ ಪಾಯು ಗುಹ್ಯವೆಂಬ ಪಂಚಕರ್ಮೇಂದ್ರಿಯಂಗಳಿವರು ಪರಿಚಾರಕರು, ಇಡಾ ಪಿಂಗಲಾ ಸುಷುಮ್ನಾ ಗಾಂಧಾರಿ ಹಸ್ತಿಜಿಹ್ವಾ ಪೂಷಾ ಅಲಂಬು ಲಕುಹಾ ಪಯಸ್ವಿನಿ ಶಂಖಿನಿಯೆಂಬ ದಶನಾಡಿಗಳಂ ಭೇದಿಸುತ್ತಂ. ಪ್ರಾಣ ಅಪಾನ ವ್ಯಾನ ಉದಾನ ಸಮಾನ ನಾಗ ಕೂರ್ಮ ಕೃಕರ ದೇವದತ್ತ ಧನಂಜಯವೆಂಬ ದಶವಾಯುವಿನ ಸ್ಥಾನಂಗಳನರಿದು, ಆಧ್ಯಾತ್ಮಿಕ ಆಧಿದೈವಿಕ ಆದಿ¨sõ್ಞತಿಕವೆಂಬ ತಾಪತ್ರಯಂಗಳನರಿದು, ರಾಜಸ ತಾಮಸ ಸಾತ್ವಿಕವೆಂಬ ಗುಣತ್ರಯಂಗಳನಳಿದು, ಮನ ಬುದ್ಧಿ ಚಿತ್ತ ಅಹಂಕಾರವೆಂಬ ಅಂತಃಕರಣ ಚತುಷ್ಟಯಂಗಳು ತಿಳಿದು, ಕಾಮ ಕ್ರೋಧ ಲೋಭ ಮೋಹ ಮದ ಮತ್ಸರವೆಂಬ ಅರಿಷಡ್ವರ್ಗಂಗಳ ಗೆಲಿದು, ಜಾಯತೆ ಅಸ್ತಿತೆ ವರ್ಧತೆ ಪರಿಣಮತೆ ಅಪಕ್ಷೀಯತೆ ವಿನಶ್ಯತೆ ಎಂಬ ಷಡ್ಬಾವ ವಿಕಾರಂಗಳಂ ಬಿಟ್ಟು, ಕ್ಷುತ್ತು ಪಿಪಾಸೆ ಶೋಕ ಮೋಹ ಜರೆ ಮರಣವೆಂಬ ಷಡೂರ್ಮಿಗಳ ವರ್ಮವ ತಿಳಿದು, ಜಾತಿ ವರ್ಣ ಆಶ್ರಮ ಕುಲ ಗೋತ್ರ ನಾಮವೆಂಬ ಷಡ್‍ಭ್ರಮೆಗಳಂ ತಟ್ಟಲೀಯದೆ. ಅನ್ನಮಯ ಪ್ರಾಣಮಯ ಮನೋಮಯ ಆನಂದಮಯವೆಂಬ ಪಂಚಕೋಶಂಗಳ ಸಂಬಂಧವನರಿದು, ಕುಲ ಛಲ ದಾನ ಯೌವನ ರೂಪು ರಾಜ್ಯ ವಿದ್ಯೆ ತಪವೆಂಬ ಅಷ್ಟಮದಂಗಳಂ ಕೆಡಿಸಿ, ಧರ್ಮ ಅರ್ಥ ಕಾಮ ಮೋಕ್ಷವೆಂಬ ಚತುರ್ವಿಧ ಪುರುಷಾರ್ಥಂಗಳಂ ಕೆಡಿಸಿ, ಸಾಲೋಕ್ಯ ಸಾಮೀಪ್ಯ ಸಾರೂಪ್ಯ ಸಾಯುಜ್ಯವೆಂಬ ಚತುರ್ವಿಧ ಮುಕ್ತಿಯ ಬಯಸದೆ, ಬ್ರಹ್ಮ ಕ್ಷತ್ರಿಯ ವೈಶ್ಯ ಶೂದ್ರರೆಂಬ ನಾಲ್ಕು ಜಾತಿಯಲ್ಲಿ ಭೇದವೆಂತೆಂದರಿದು ಆಧಾರ ಸ್ವಾಧಿಷಾ*ನ ಮಣಿಪೂರಕ ಅನಾಹತ ವಿಶುದ್ಧಿ ಆಜ್ಞಾ ಎಂಬ ಷಡುಚಕ್ರಂಗಳಂ ಭೇದಿಸಿ, ಕೃತಯುಗ ದ್ವಾಪರಯುಗ ಕಲಿಯುಗಂಗ?ಡಗಿ, ಪೃಥ್ವಿ ಸಲಿಲ ಪಾವಕ ಪವನ ಅಂಬರ ರವಿ ಶಶಿ ಆತ್ಮವೆಂಬ ಅಷ್ಟತನು ಮದಂಗಳ ಭೇದಾಭೇದಂಗಳ ಭೇದಿಸಿ, ಸ್ಥೂಲತನು ಸೂಕ್ಷ್ಮತನು ಕಾರಣತನು ಚಿದ್ರೂಪತನು ಚಿನ್ಮಯತನು ಆನಂದತನು ಅದ್ಭುತತನು ಶುದ್ಧತನುವೆಂಬ ಅಷ್ಟತನುವ ಏಕಾರ್ಥವಂ ಮಾಡಿ, ಕಪಿಲವರ್ಣ ನೀಲವರ್ಣ ಮಾಂಜಿಷ್ಟವರ್ಣ ಪೀತವರ್ಣ ಕಪ್ಪುವರ್ಣ ಗೌರವರ್ಣ ಶ್ವೇತವರ್ಣವೆಂಬ ಸಪ್ತಧಾತುಗಳ ಸ್ವಸ್ಥಾನವಂ ಮಾಡಿ, ಜಾಗ್ರ ಸ್ವಪ್ನ ಸುಷುಪ್ತಿ ಎಂಬ ಅವಸ್ಥಾತ್ರಯಂಗಳಂ ಮೀರಿ, ಜೀವಾತ್ಮ ಅಂತರಾತ್ಮ ಪರಮಾತ್ಮನೆಂಬೀ ಆತ್ಮತ್ರಯಂಗಳನೊಂದು ಮಾಡಿ, ಅಣಿಮಾ ಮಹಿಮಾ ಗರಿಮಾ ಲಘಿಮಾ ಪ್ರಾಪ್ತಿ ಪ್ರಾಕಾಮ್ಯ ವಶಿತ್ವ ಈಶತ್ವವೆಂಬ ಅಷ್ಟಸಿದ್ಧಿಗಳಂ ಬಿಟ್ಟು, ಅಂಜನಸಿದ್ಧಿ ಘುಟಿಕಾಸಿದ್ಧಿ ರಸಸಿದ್ಧಿ ತ್ರಿಕಾಲಜ್ಞಾನಸಿದ್ಧಿ ಎಂಬ ಅಷ್ಟಮಹಾಸಿದ್ಧಿಗಳಂ ತೃಣೀಕೃತಮಂ ಮಾಡಿಕೊಂಬುದು. ತನುವ್ಯಸನ ಮನವ್ಯಸನ ಧನವ್ಯಸನ ರಾಜ್ಯವ್ಯಸನ ವಿಶ್ವವ್ಯಸನ ಉತ್ಸಾಹವ್ಯಸನ ಸೇವಕವ್ಯಸನವೆಂಬ ಸಪ್ತವ್ಯಸನಂಗಳಂ ಬಿಟ್ಟು, ವಡಬಾಗ್ನಿ ಮಂದಾಗ್ನಿ ಉದರಾಗ್ನಿ ಶೋಕಾಗ್ನಿ ಕಾಮಾಗ್ನಿ ಎಂಬ ಪಂಚಾಗ್ನಿಯಂ ಕಳೆದು, ಶರೀರಾರ್ಥ ಪರಹಿತಾರ್ಥ ಯೋಗಾರ್ಥ ಪರಮಾರ್ಥ ತತ್ವಾರ್ಥಂಗಳಲ್ಲಿ ಅವಧಾನಿಯಾಗಿ, ಆಚಾರಲಿಂಗ ಗುರುಲಿಂಗ ಶಿವಲಿಂಗ ಜಂಗಮಲಿಂಗ ಪ್ರಸಾದಲಿಂಗ ಮಹಾಲಿಂಗವೆಂಬ ಷಡುಸ್ಥಲಂಗ?ಂ ಭೇದಿಸಿ, ದಾಸ ವೀರದಾಸ ಭೃತ್ಯ ವೀರಭೃತ್ಯ ಸಜ್ಜನಸಮಯಾಚಾರ ಸಕಲಾವಸ್ತೀಯರ್ಚನೆಯೆಂಬ ಷಡ್ವಿಧ ದಾಸೋಹದಿಂದ ನಿರಂತರ ತದ್ಗತವಾಗಿ. ಯಮ ನಿಯಮ ಆಸನ ಪ್ರಾಣಾಯಾಮ ಪ್ರತ್ಯಾಹಾರ ಧ್ಯಾನ ಧಾರಣ ಯೋಗ ಸಮಾಧಿ ಎಂಬ ಅಷ್ಟಾಂಗ ಯೋಗದಲ್ಲಿ ಮುಕ್ತವಾಗಿ, ಬಾಲ ಬೋಳ ಪಿಶಾಚ ರೂಪಿಗೆ ಬಾರದ ದೇಹಂಗಳನರಿದು ಅನಿತ್ಯವಂ ಬಿಡುವುದು. ಲಯಯೋಗವನರಿದು ಹಮ್ಮ ಬಿಡುವುದು. ಮಂತ್ರಯೋಗವನರಿದು ಆಸೆಯಂ ಬಿಡುವುದು. ಮರೀಚಿಕಾಜಲದಂತೆ ಬೆಳಗುವ ಶರಣ ಆತ ರಾಜಯೋಗಿ, ಆತಂಗೆ ನಮೋ ನಮೋ ಎಂಬೆನಯ್ಯಾ ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ಇನ್ನಷ್ಟು ... -->