ಅಥವಾ

ಒಟ್ಟು 11 ಕಡೆಗಳಲ್ಲಿ , 10 ವಚನಕಾರರು , 11 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಘನದ ವೇದಿಸಿದ ಮನ, ಮನವ ವೇದಿಸಿದ ಇಂದ್ರಿಯಂಗಳು, ಇಂದ್ರಿಯಂಗಳ ವೇದಿಸಿದ ತನು, ತನುವ ವೇದಿಸಿದ ಪ್ರಸಾದ, ಪ್ರಸಾದವ ವೇದಿಸಿದ ಪರಿಣಾಮ, ಪರಿಣಾಮವ ವೇದಿಸಿದ ತೃಪ್ತಿ, ತೃಪ್ತಿಯ ವೇದಿಸಿದ ಇಷ್ಟಲಿಂಗ, ಇಷ್ಟಲಿಂಗವ ವೇದಿಸಿದ ಜ್ಞಾನ, ಜ್ಞಾನವ ವೇದಿಸಿದ ನಿರ್ಮಲ ಶಿವಕ್ರಿಯೆ, ನಿರ್ಮಲ ಶಿವಕ್ರಿಯೆ[ಯ] ವೇದಿಸಿದ ಶರಣಂಗೆ ಇನ್ನು ವೇದ್ಯರುಂಟೆ, ಮಹಾಲಿಂಗ ಕಲ್ಲೇಶ್ವರಾ ?
--------------
ಹಾವಿನಹಾಳ ಕಲ್ಲಯ್ಯ
ಎನ್ನನುಭಾವದ ಗಮ್ಯವೆ, ಎನ್ನರುಹಿನ ವಿಶ್ರಾಮವೆ, ಎನ್ನ ಭಾವದ ಬಯಕೆಯೆ, ಎನ್ನ ನಿಜದ ನಿಲವೆ, ಎನ್ನ ಪರಿಣಾಮದ ಮೇರುವೆ, ಎನ್ನ ಘನದ ನಿಲವೆ, ನಿಮ್ಮ ಸುಳುಹು ಎತ್ತಲಡಗಿತ್ತೊ ನಿಮ್ಮ ನಾಮ ನಿರ್ನಾಮವಾಯಿತ್ತೆ ಎಲೆ ಪರಮಗುರುವೆ ಕೂಡಲಸಂಗಯ್ಯನಲ್ಲಿ ಉರಿಯುಂಡಕರ್ಪುರದಂತಾದೆಯಲ್ಲಾ, ಪ್ರಭುವೆ
--------------
ಬಸವಣ್ಣ
ಏನೆಂದೆನ್ನಬಹುದಯ್ಯ ?ಎಂತೆಂದೆನ್ನಬಹುದಯ್ಯ ? ಈ ಘನದ ವಿಚಾರವ ? ಈ ಘನದಲ್ಲಿ ಇಹಪರದ ಸುಖವ ಕಂಡು ಕೊಡುವೆನೆಂದು ಹೋದರೆ ಆ ಲಿಂಗವೆನ್ನ ಕರದೊಳಗೆ ತಾನೆಯಡಗಿತ್ತು. ನಾನಡಗಿ ನನ್ನ ವಿಚಾರವ ತಿಳಿಯಲು ನಾನು ಬದುಕಿದೆನಯ್ಯ ಸಂಗಯ್ಯ.
--------------
ನೀಲಮ್ಮ
ಜಗದೊಳಗೆ ಹುಟ್ಟಿ ಜಗದಪ್ರಪಂಚ ಹಿಂಗಿ, ಜಂಗಮದೊಳಗಾಡುತ್ತ, ಲಿಂಗದೊಳಗೆ ನೋಡುತ್ತ, ಅಂಗನೆಯರ ಸಂಗವ ಮಾಡಿಹೆನೆಂಬಿರಿ. ಅದೆಂತೆಂದಡೆ, ನೋಟಕಿಲ್ಲದ ಘನದ ಕೂಟವ ಕೂಡುವ ಪರಿಯೆಂತಯ್ಯಾ ? ರೂಪಿಲ್ಲದುದ ರೂಪಿಗೆತರುವ ಪರಿಯೆಂತಯ್ಯಾ ? ಹೇಳಬಾರದ ಘನವ ಕೇಳುವ ಪರಿಯೆಂತಯ್ಯಾ ? ಅತ್ಯತಿಷ್ಠದ್ದಶಾಂಗುಲಂ ಎಂಬ ವಸ್ತು ಹಿಡಿದಡೆ ಹಿಡಿಗಿಲ್ಲ, ನುಡಿದಡೆ ನುಡಿಗಿಲ್ಲ. ಒಡಲೊಳಗಿಲ್ಲ; ಹೊರಗಿಲ್ಲ, ಒಳಗಿಲ್ಲ. ವಾಚಾತೀತ ಮನೋತೀತ ಭಾವಾತೀತವಾಗಿದ್ದ ವಸ್ತು ತನ್ನೊಳಗೆ ತಾನೆ ತನ್ಮಯವಾಗಿ ಇರುವುದ ತಿಳಿಯಲರಿಯದೆ ಭಿನ್ನವಿಟ್ಟರಸುವಿರಿ. ಅದೆಂತೆಂದಡೆ : ಪುಷ್ಪಪರಿಮಳದಂತೆ, ತುಪ್ಪಕಂಪಿನಂತೆ, ಅಲೆನೀರಿನಂತೆ, ಕಣ್ಣುಕಪ್ಪಿನಂತೆ, ಚಿನ್ನಬಣ್ಣದಂತೆ, ಸಿಪ್ಪೆಹಣ್ಣಿನಂತೆ, ಒಪ್ಪಚಿತ್ರದಂತೆ, ಕರ್ಪೂರ ಜ್ಯೋತಿಯೊಳಡಗಿದಂತೆ ನೆನಹು ನಿಷ್ಪತ್ತಿಯಾದ ಶರಣ ಅಪ್ಪಣ್ಣಪ್ರಿಯ ಚೆನ್ನಬಸವಣ್ಣ ತಾನೆ ನೋಡಾ.
--------------
ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ
ಕೃತಯುಗದಲ್ಲಿ ನೀನು ಸ್ಕಂದನೆಂಬ ಗಣೇಶ್ವರನಾಗಿರ್ದುದ ಬಲ್ಲೆ ನಾನು. ತ್ರೇತಾಯುಗದಲ್ಲಿ ನೀನು ನೀಲಲೋಹಿತನೆಂಬ ಗಣೇಶ್ವರನಾಗಿರ್ದುದ ಬಲ್ಲೆ ನಾನು. ದ್ವಾಪರದಲ್ಲಿ ನೀನು ವೃಷಭನೆಂಬ ಗಣೇಶ್ವರನಾಗಿರ್ದುದ ಬಲ್ಲೆ ನಾನು. ಕಲಿಯುಗದಲ್ಲಿ ನೀನು ಬಸವನೆಂಬ ಗಣೇಶ್ವರನಾಗಿ, ಸರ್ವಾಚಾರ ಸಂಪನ್ನನಾಗಿ, ಭಕ್ತಿಜ್ಞಾನವ ಕಂದೆರವೆಯ ಮಾಡಿ, ಶಿವಾಚಾರದ ಘನದ ಬೆಳವಿಗೆಯ ಮಾಡಿ, ಶಿವಭಕ್ತಿಯ ಧ್ವಜವನೆತ್ತಿಸಿ ಮರ್ತ್ಯಲೋಕದೊಳಗೆ ಹರಹಿದ ಭೇದವ ಭೇದಿಸಿ ನೋಡಿ ಆನು ಅರಿದೆ. ಗುಹೇಶ್ವರ ಸಾಕ್ಷಿಯಾಗಿ ನಿನ್ನ ಮಹಾತ್ಮೆಗೆ ನಮೋ ನಮೋ ಎನುತಿರ್ದೆನು ಕಾಣಾ ಸಂಗನಬಸವಣ್ಣಾ.
--------------
ಅಲ್ಲಮಪ್ರಭುದೇವರು
ಘಟವನೊಡದು ಬಯಲ ನೋಡಲದೇಕೆ? ಘಟದೊಳಗಿಪ್ಪುದೆ ಬಯಲೆಂದರಿದಡೆ ಸಾಲದೆ? ಪಟವ ಹರಿದು ತಂತುವ ನೋಡಲದೇಕೆ? ಆ ಪಟವೆ ತಂತುವೆಂದರಿದಡೆ ಸಾಲದೆ? ಕಟಕವ ಮುರಿದು ಕಾಂಚನವ ನೋಡಲದೇಕೆ? ಆ ಕಟಕವೆ ಕಾಂಚನವೆಂದರಿದಡೆ ಸಾಲದೆ? ತನ್ನನಳಿದು ಘನದ ನೋಡಲದೇಕೆ? ತಾನೆ ಘನವೆಂದರಿದಡೆ ಸಾಲದೆ? ಹೇಳಾ! ರಾಮನಾಥ.
--------------
ಜೇಡರ ದಾಸಿಮಯ್ಯ
ಲಿಂಗದಿಂದ ಕಂಡೆಹೆನೆಂಬುದು, ಮನದ ಸೂತಕ. ಮನದಿಂದ ಅರಿದೆಹೆನೆಂಬುದು, ಅರಿವಿನ ಸೂತಕ. ಅರಿವಿನಿಂದ ಅರಿದೆಹೆನೆಂಬುದು, ಮಹತ್ತಪ್ಪ ಘನದ ಸೂತಕ. ಕಾಯದಿಂದ ಕರ್ಮವ ಮಾಡಿ, ಲಿಂಗವನರಿದೆಹೆನೆಂಬುದು ಭಾವದ ಭ್ರಮೆ. ಭ್ರಮೆಯಳಿದು, ಅರಿವನರಿದೆಹೆನೆಂಬುದು ಉಭಯದ ಬೀಜ. ಬೀಜ ನಷ್ಟವಾಗಿ, ಅಂಕುರ ಮಳೆದೋರದೆ, ಶಂಕೆಯೆಂಬ ಸಂದೇಹ ನಂದಿದಲ್ಲಿ, ಅದೇ ನಿಸ್ಸಂಗದ ಇರವೆಂದೆ, ಕಾಮಧೂಮ ಧೂಳೇಶ್ವರಾ.
--------------
ಮಾದಾರ ಧೂಳಯ್ಯ
ಘನದ ಮೇಲೊಂದು ಇರುವೆಯ ಕಂಡೆನಯ್ಯ. ಆ ಇರುವೆಯೊಳಗೊಬ್ಬ ಭಾಮಿನಿಯ ಕಂಡೆನಯ್ಯ. ಆ ಭಾಮಿನಿಯ ಸಂಗದಿಂದ ಒಬ್ಬ ಬೇಂಟೆಕಾರ ಹುಟ್ಟಿ, ಇಪ್ಪತ್ತೈದು ಗ್ರಾಮಂಗಳ ಕಾಯ್ದುಕೊಂಡಿರ್ಪನು ನೋಡಾ ! ಆ ಬೇಂಟೆಕಾರನ ಬಯಲು ನುಂಗಿತ್ತು ನೋಡಾ ! ಆ ಭಾಮಿನಿಯ ನಿರ್ವಯಲು ನುಂಗಿತ್ತು ನೋಡಾ ! ಅಂಗವಿಲ್ಲದ ಬಾಲೆಯು ಇದೇನು ವಿಚಿತ್ರವೆಂದು ನೋಡುತಿರ್ಪಳಯ್ಯ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಮನವೆಂಬ ಘನದ ತಲೆಬಾಗಿಲಲ್ಲಿ ಸದಾಸನ್ನಹಿತನಾಗಿಪ್ಪೆ ಎಲೆ ಅಯ್ಯಾ. ಸಕಲ ಪದಾರ್ಥಂಗಳು ನಿಮ್ಮ ಮುಟ್ಟಿ ಬಹವಲ್ಲದೆ, ನಿಮ್ಮ ಮುಟ್ಟದೆ ಬಾರವೆಂಬ ಎನ್ನ ಮನದ ನಿಷೆ*ಗೆ ನೀನೆ ಒಡೆಯ ಕೂಡಲಚೆನ್ನಸಂಗಯ್ಯಾ.
--------------
ಚನ್ನಬಸವಣ್ಣ
ರಾಜಯೋಗಿ ಶಿವಯೋಗಿಗಳೆಂದು ಹೆಸರಿಟ್ಟು ನುಡಿವರು. ಆ ಭಾವವನರಿಯದ ಉಪಭ್ರಾಂತರುಗಳ ಮಾತು ಸೊಗಸದಯ್ಯಾ. ಪುಚ್ಚಗುಂಡಾಟದ ಬಾಲರಂತಿರಲಿ, ಅನಬಹುದು ಸರ್ವಾಚಾರಸಂಪತ್ತಿನ ಲೋಲರಿಗೆ ರಾಜಯೋಗಿಗಳೆಂದು. ಅನಬಹುದು ಪರಿಪೂರ್ಣಜ್ಞಾನಾನಂದ ಸುಖಮುಖಲೋಲರಿಗೆ ಶಿವಯೋಗಿಗಳೆಂದು. ಈ ದ್ವಂದ್ವೈಶ್ವರ್ಯ ಕಾಣಿಸಿಕೊಳ್ಳದೆ ಮುಂದೇನರಿಯದ ಮಂದಮತಿಗಳ ಹಿಡಿದು ತಂದು ಕರ್ಮಕಟ್ಟಳೆಯಿಂದೆ ಕೂಡಿಸಿಕೊಂಡು ತಮ್ಮ ಅಹಂಭಾವನಿಮಿತ್ಯಕ್ಕೆ ಪರಮವಿರಾಗತಿಗಳೆಂದು ಹೇಳಿಸಿಕೊಂಬ ಕಣ್ಮನಭಾವದ ಕಲ್ಮಷವ ನೋಡಾ. ಹುಸಿಯಿಂದೆ ಹೊಡದಾಡಿ ಮಠ ಕ್ಷೇತ್ರವೆಂದು ಆಮಿಷ ಮೋಹದಲ್ಲಿ ಮುಳುಗಿ ಪೂರ್ವಪಕ್ಷಾಳಿಯ ಸಂಸಾರದುರ್ನಡತೆಯೊಳ್ನಿಂದು ಮೆರೆವ ಮಲತ್ರಯರತಿ ಮೆಚ್ಚಿರುವವರಿಗೆ ರಾಜಯೋಗಿಗಳೆನ್ನಬಹುದೆ ? ಜಿಹ್ವೋಚ್ಫಿಷ್ಟ, ಪ್ರಾಣಿಗಳಿರಾ ! ಕ್ರುದ್ಧಮೃಗದಂತೆ ತಿರುತಿರುಗಿ ಬಳಲಿ ಒಂದು ಸ್ಥಾನವಿಡಿದು ಪೂರ್ವದ ದುಸ್ಸಾರರತಿಯ ನೆನವಿನೊಳಿಟ್ಟು ವೇಷಜಾಣಿಕೆಯನರಿದು ಕಂಡು ಕಂಡು ಸೋಗು ತಾಳುವ ಕೀಳುಜಾತಿ ಕಿಲ್ಬಿಷಭರಿತರಿಗೆ ಶಿವಯೋಗಿಗಳೆನ್ನಬಹುದೆ ? ತನು ಮನ ಭಾವೋಚ್ಫಿಷ್ಟ ಪ್ರಾಣಿಗಳಿರಾ, ಇದು ಕಾರಣ, ಆಟದವರು, ನೋಟದವರು, ಕೂಟದವರು ಕೂಡಿಯೈದುವರು ಸಂಘಾತವನು. ಮತ್ತೆ ಗುರುನಿರಂಜನ ಚನ್ನಬಸವಲಿಂಗಸನ್ನಿಹಿತ ಶರಣರೆ ರಾಜಯೋಗಿ ಶಿವಯೋಗಿಗಳಲ್ಲದೆ ಮಿಕ್ಕ ಭವಭಾರಿಗಳ ತರಲಾಗದು ಘನದ ಮುಂದೆ.
--------------
ದೇಶಿಕೇಂದ್ರ ಸಂಗನಬಸವಯ್ಯ
ಅಂತರಂಗದಲ್ಲಿ ಪ್ರಭುದೇವರನೊಳಕೊಂಡ, ಬಹಿರಂಗದಲ್ಲಿ ಎನ್ನನೊಳಕೊಂಡ; ಈ ಉಭಯಸಂಗ ಮಧ್ಯದಲ್ಲಿ ನಿಜೈಕ್ಯನಾಗಿರ್ದನು. ಪ್ರಸಾದದಲ್ಲಿ ಪರಮಾನಂದ ಸುಖಿ; ಅರಿವಿನಲ್ಲಿ ಕುರುಹಳಿದ ಘನದ ನಿಲವು. ಕೂಡಲಚೆನ್ನಸಂಗಮದೇವಾ ಬಸವಣ್ಣನ ಪಾದಕ್ಕೆ ನಮೋ ನಮೋ ಎಂಬೆನು.
--------------
ಚನ್ನಬಸವಣ್ಣ
-->