ಅಥವಾ

ಒಟ್ಟು 78 ಕಡೆಗಳಲ್ಲಿ , 26 ವಚನಕಾರರು , 45 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತನುವ ಕೊಟ್ಟು ತನು ಬಯಲಾಯಿತ್ತು, ಮನವ ಕೊಟ್ಟು ಮನ ಬಯಲಾಯಿತ್ತು, ಧನವ ಕೊಟ್ಟು ಧನ ಬಯಲಾಯಿತ್ತು, ಈ ತ್ರಿವಿಧವನು ಕೊಟ್ಟು ಕೂಡಲಚೆನ್ನಸಂಗಯ್ಯನಲ್ಲಿ ಬಸವಣ್ಣಂಗೆ ಬಯಲಸಮಾಧಿಯಾಯಿತ್ತು.
--------------
ಚನ್ನಬಸವಣ್ಣ
ಸರ್ವಮಯ ಲಿಂಗಾಂಕಿತಸೀಮೆಯಾಗಬೇಕೆಂಬಲ್ಲಿ ಆ ಘನವ ತಿಳಿದು ತನ್ನ ತಾನೆ ವಿಚಾರಿಸಿಕೊಂಬಲ್ಲಿ ಸ್ಥೂಲತನುವಿನಲ್ಲಿ ಕಾಬ ಕಾಣಿಕೆ ದೃಷ್ಟವಾಗಿ ಲಿಂಗಾಂಕಿತ. ಸೂಕ್ಷ್ಮತನುವಿನಲ್ಲಿ ಕಾಬ ಕಾಣಿಕೆ ಎಚ್ಚತ್ತಲ್ಲಿ ಬಯಲಾಯಿತ್ತು ಲಿಂಗಾಂಕಿತ. ಕಾರಣದಲ್ಲಿ ಪ್ರಮಾಣಿಸುವುದಕ್ಕೆ ಲಿಂಗಾಂಕಿತಕ್ಕೆ ಒಡಲಾವುದು ? ಇದ ನಾನರಿಯೆ, ನೀವೆ ಬಲ್ಲಿರಿ. ಜಾಗ್ರ, ಸ್ವಪ್ನ, ಸುಷುಪ್ತಿಗಳಲ್ಲಿ ಕಾಬ ಲಿಂಗಾಂಕಿತದ ಭೇದ ನೇಮವಾವುದು ? ಜಾಗ್ರದಲ್ಲಿ ತೋರುವ ನಿಜ ಸ್ವಪ್ನಕ್ಕೊಡಲಾಗಿ, ಸ್ವಪ್ನದಲ್ಲಿ ತೋರುವ ನಿಜ ಸುಷುಪ್ತಿಗೊಡಲಾಗಿ, ಉಭಯದಲ್ಲಿ ಕೂಡಿದ ಕೂಟ ತನ್ಮಯಲಿಂಗಾಂಕಿತವಾಯಿತ್ತು. ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದಲ್ಲಿ ಲೇಪವಾಗಿ.
--------------
ಅಕ್ಕಮ್ಮ
ಹೋಗುತ್ತ ಹೋಗುತ್ತ ಹೊಟ್ಟೆಯಡಿಯಾಯಿತ್ತು; ಬಟ್ಟಬಯಲಾಯಿತ್ತು. ತುಟ್ಟತುದಿಯನೇರಿ ತೂರ್ಯಾತೀತನಾಗಿ, ಇಷ್ಟ ಪ್ರಾಣ ಭಾವ ಬಯಲಾಯಿತ್ತು. ಬಯಲಲ್ಲಿ ನಿಂದುಕೊಂಡು ನೋಡುತ್ತಿರಲು, ಬ್ರಹ್ಮವೆಯಾಯಿತ್ತು, ಕರ್ಮ ಕಡೆಗೋಡಿತ್ತು. ಅರಿವರತು ಮರಹು ನಷ್ಟವಾಯಿತ್ತು. ತೆರನಳಿದು ನಿರಿಗೆ ನಿಃಪತಿಯಾಗಿ ಮಿರುಗುವ ದೃಷ್ಟಿಯಲ್ಲಿ ನೋಡುತ್ತಿರಲು, ನೋಟ ತ್ರಾಟಕವ ದಾಂಟಿ ಕೂಟದಲ್ಲಿ ಕೂಡಿ, ಬೆರಸಿ ಬೇರಾಗದಿಪ್ಪ ಶರಣ ಅಪ್ಪಣ್ಣಪ್ರಿಯ ಚೆನ್ನಬಸವಣ್ಣ ತಾನೆ ನೋಡಾ.
--------------
ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ
ಬಸವಣ್ಣನ ನೆನೆದೆನ್ನ ತನು ಬಯಲಾಯಿತ್ತು. ಬಸವಣ್ಣನ ನೆನೆದೆನ್ನ ಮನ ಬಯಲಾಯಿತ್ತು. ಬಸವಣ್ಣನ ನೆನೆದೆನ್ನ ಭಾವ ಬಯಲಾಯಿತ್ತು. ಕಲಿದೇವಯ್ಯ ನಿಮ್ಮ ಶರಣ, ಮಹಾಮಹಿಮ ಸಂಗನಬಸವಣ್ಣನ ನೆನೆನೆನೆದು, ಎನ್ನ ಸರ್ವಾಂಗ ಲಿಂಗವಾಯಿತ್ತೆಂದರಿದೆನಯ್ಯಾ.
--------------
ಮಡಿವಾಳ ಮಾಚಿದೇವ
ತನ್ನಿಂದ ತಾನುದಿಸಿದ ಬಿಂದುವಿನಿಂದಾಗಿ ನಿಂದುದೊಂದು ಬಿಂದು. ಬಿಂದು ಬೇರಾಗಿ ಬೆರಸಿಕೊಂಡಲ್ಲಿ ಬಿಂದು ಬಿಚ್ಚಿ ಹಿಂದು ಮುಂದು ನಿಲಿಸಿದರೆ ಬಂಧ ಆಗ ಬಯಲಾಯಿತ್ತು. ತಂದೆಯು ನೋಡಿ ಕಂದನ ಕೈವಿಡಿದಲ್ಲಿ ಮುಂದುಗಂಡೆನು ಮೂದೇವರರಿಯದ ಬೇಹಾರವನು. ಕೊಡಲಿಲ್ಲ ಕೊಳಲಿಲ್ಲದ ಸಡಗರ ಸ್ವಯವಾದಲ್ಲಿ ಸತಿಭಾವತಪ್ಪಿ ಗುರುನಿರಂಜನ ಚನ್ನಬಸವಲಿಂಗಕಂಗವಾಗಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ಉದಯಬಿಂದು ರೂಪಾಯಿತ್ತು. ಅಂತರಬಿಂದು ನಿರೂಪಾಯಿತ್ತು. ಊಧ್ರ್ವಬಿಂದು ನಿಶ್ಶೂನ್ಯವಾಯಿತ್ತು. ತ್ರಿವಿಧಲಿಂಗವ ಕೂಡಿ ಬಯಲಾಯಿತ್ತು. ಗುಹೇಶ್ವರಲಿಂಗದಲ್ಲಿ.
--------------
ಅಲ್ಲಮಪ್ರಭುದೇವರು
ಒಳ್ಳೆಯತನಕ್ಕೆ ಉಪದೇಶವಾಗಿ ಕಳ್ಳತನವೆರೆದು ಕಡೆಗೆ ವಂಚನೆಯುಳ್ಳರೆ ಆಚಾರವಲಸಿತ್ತು. ಕರ್ಮಕವಿಯಿತ್ತು, ಯುಕ್ತಿಗೆಟ್ಟಿತ್ತು, ಅವಿದ್ಯಾಶಕ್ತಿ ಅಟ್ಟಿಕೊಂಡಿತ್ತು, ಭಕ್ತಿ ಬಯಲಾಯಿತ್ತು, ನಿರಯಮಾರ್ಗವಾವರಿಸಿ ಬಂಧನವನುಣಿಸಿತ್ತು ಗುರುನಿರಂಜನ ಚನ್ನಬಸವಲಿಂಗವನುಳಿದ ಆ ಭಂಗಗೇಡಿಗಳಿಗೆ.
--------------
ದೇಶಿಕೇಂದ್ರ ಸಂಗನಬಸವಯ್ಯ
ಕಿಗ್ಗೊಂಬಿನ ಕಪಿ ಅಗ್ಗೊಂಬಿನ ಕಪಿಯನಣಕಿಸಲು ಕಿಗ್ಗೊಂಬಿನ ಕಪಿ ಅದೇ ಕೊಂಬಿಗೆ ಬಿದ್ದಿತ್ತು, ಅಗ್ಗೊಂಬಿನ ಕಪಿ ಆಕಾಶಕ್ಕೆದ್ದಿತ್ತು. ಬಿದ್ದ ಕಪಿ ಬಯಲಾಯಿತ್ತು, ಎದ್ದ ಕಪಿ ನಿರ್ವಯಲಾಯಿತ್ತು. ಸೌರಾಷ್ಟ್ರ ಸೋಮೇಶ್ವರನೆಂಬ ನಾಮ ನಿರ್ನಾಮವಾಯಿತ್ತು.
--------------
ಆದಯ್ಯ
ಎನ್ನ ಭಕ್ತಿ, ಬಸವಣ್ಣನಲ್ಲಿ ಬಯಲಾಯಿತ್ತು. ಎನ್ನ ಜ್ಞಾನ, ಚೆನ್ನಬಸವಣ್ಣನಲ್ಲಿ ಬಯಲಾಯಿತ್ತು. ಎನ್ನ ವೈರಾಗ್ಯ, ಪ್ರಭುದೇವರಲ್ಲಿ ಬಯಲಾಯಿತ್ತು. ಇಂತೀ ಮೂವರು ಒಬ್ಬರೊಂದ ಬಯಲಮಾಡಿದರಾಗಿ, ಗವರೇಶ್ವರಲಿಂಗದಲ್ಲಿ ನಿಶ್ಚಿಂತವಾಯಿತ್ತು.
--------------
ಮೇದರ ಕೇತಯ್ಯ
ತನುವೆಂಬ ಹುತ್ತಕ್ಕೆ ಮನವೆಂಬ ಸರ್ಪ ಆವರಿಸಿ, ಹೆಡೆಯೆತ್ತಿ ಆಡುತ್ತಿರಲು, ಆ ಸರ್ಪನ ಕಂಡು, ನಾ ಹೆದರಿಕೊಂಡು, ಗುರುಕರುಣವೆಂಬ ಪರುಷವ ತಂದು ಮುಟ್ಟಿಸಲು, ನೋಟ ನಿಂದಿತ್ತು, ಹೆಡೆ ಅಡಗಿತ್ತು, ಹಾವು ಬಯಲಾಯಿತ್ತು. ಆ ಗುರುಕರುಣವೆಂಬ ಪರುಷವೆ ನಿಂದಿತ್ತು. ನಿಂದ ಪರುಷವನೆ ಕೊಂಡು ನಿಜದಲ್ಲಿ ನಿರ್ವಯಲಾಗುವ ಶರಣರ ಪಾದವ ನಂಬಿ ಕೆಟ್ಟು ಬಟ್ಟಬಯಲಾದೆನಯ್ಯಾ, ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ.
--------------
ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ
ಅಯ್ಯಾ, ನಾನು ಊರ ಮರೆದು ಆಡ ಹೋದಡೆ, ಒಕ್ಕಲು ಹೆಚ್ಚಿ ಸೊಕ್ಕಾಟ ಘನವಾಯಿತ್ತು. ಇದ ಕಂಡು ಊರ ಹೊಕ್ಕೆ, ಸ್ಥಾನದಲ್ಲಿ ನಿಂದೆ, ಒಂಬತ್ತು ಬಾಗಿಲ ಕದವನಿಕ್ಕಿದೆ. ಆ ಜ್ಞಾನಾಗ್ನಿಯ ಹೊತ್ತಿಸಲು, ಉರಿ ಎದ್ದಿತ್ತು, ಉಷ್ಣ ಊರ್ದ್ವಕ್ಕೇರಿತ್ತು. ತಲೆಯೆತ್ತಿ ನೋಡಲು, ಒಕ್ಕಲು ಓಡಿತ್ತು, ಊರು ಬಯಲಾಯಿತ್ತು. ಆ ಬಯಲನೆ ನೋಡಿ, ನಿರಾಳದೊಳಗಾಡಿ ಮಹಾಬೆಳಗನೆ ಕೂಡಿ, ಸುಖಿಯಾದರಯ್ಯಾ ನಮ್ಮ ಅಪ್ಪಣ್ಣಪ್ರಿಯ ಚೆನ್ನಬಸವಣ್ಣನ ಶರಣರು.
--------------
ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ
ಎಪ್ಪತ್ತೈದು ಸಾವಿರದಲ್ಲಿ ಇಪ್ಪತ್ತೊಂದು ಪ್ರಾಣ ಆ ಪ್ರಾಣದ ಮಧ್ಯದಲ್ಲಿ ಮನೋಹರಮೂರ್ತಿ ಇರವಿರಲು, ಆ ಇರದ ಸುಖವ ನೋಡ ಹೋದರೆ ನೋಡ ನೋಡಲು ಬಯಲಾಯಿತ್ತು ಸಂಗಯ್ಯ ಆ ರೂಪು.
--------------
ನೀಲಮ್ಮ
ತಾಳಮರದ ಮೇಲಣ ಕೋಡಗ, ತಾಳರಸವ ಕೊಂಡು ದೆಸೆದೆಸೆಯ ಶಾಖೆಗಳಿಗೆ ಲಂಘಿಸಿ, ಹರಿದಾಡುತ್ತಿದ್ದಿತು ನೋಡಾ. ಹರಿದಾಡುವ ಕೋಡಗವ ಹಿಡಿದು ಕಂಬದಲ್ಲಿ ಕಟ್ಟಿದರೆ, ಕಂಬದ ತುದಿಯ ಮಣಿಯನೇರಿ, ನಿಂದು ನೋಡುತ್ತಿದ್ದಿತ್ತು ನೋಡಾ. ಕಂಬ ಮುರಿದು ವಣಿ ಬಯಲಾಯಿತ್ತು, ಕೋಡಗವಳಿಯಿತ್ತು. ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ, ನಿಮ್ಮ ಶರಣನ ಮುಂದೆ.
--------------
ಸ್ವತಂತ್ರ ಸಿದ್ಧಲಿಂಗ
ಸಂಗನಬಸವಣ್ಣನ ಪಾದವ ಕಂಡೆನಾಗಿ ಎನ್ನ ಅಂಗ ನಾಸ್ತಿಯಾಯಿತ್ತು. ಚೆನ್ನಬಸವಣ್ಣನ ಪಾದವ ಕಂಡೆನಾಗಿ ಎನ್ನ ಪ್ರಾಣ ಬಯಲಾಯಿತ್ತು. ಪ್ರಭುವೆ, ನಿಮ್ಮ ಶ್ರೀಚರಣಕ್ಕೆ ಶರಣೆಂದೆನಾಗಿ ಎನಗೆ ಅರಿವು ಸ್ವಾಯತವಾಯಿತ್ತು. ಚೆನ್ನಮಲ್ಲಿಕಾರ್ಜುನಯ್ಯಾ, ನಿಮ್ಮ ಶರಣರ ಕರುಣವ ಪಡೆದೆನಾಗಿ ಎನಗಾವ ಜಂಜಡವೂ ಇಲ್ಲವಯ್ಯಾ ಪ್ರಭುವೆ.
--------------
ಅಕ್ಕಮಹಾದೇವಿ
ಎನಗೆ ಹರಿಯಿತ್ತು ತಮವೆಂಬ ಸಂಸಾರದ ಬಂಧನ. ಅಡಗಿಯೂ ಉಡುಗಿಯೂ ಕಂಡೆಹೆನೆಂದೆಂಬ ಸಂಶಯ. ಸಂಕಲ್ಪ ಸಂದೇಹ ಭ್ರಾಂತು ಭ್ರಮೆಯ ಭಾವಕ್ಕೆ ಬಯಲಾಯಿತ್ತು. ನಿತ್ಯನಿರಂಜನ ಪರಂಜ್ಯೋತಿ ಪ್ರಕಾಶವೆನಗೆ ತಲೆದೋರಿತ್ತು. ಶುದ್ಧಸಿದ್ಧ ಪ್ರಸಿದ್ಧ ಪ್ರಸನ್ನ ಪ್ರಭುವೆ ಶಾಂತಚೆನ್ನಮಲ್ಲಿಕಾರ್ಜುನ ದೇವಯ್ಯಾ, ಕಾಣಬಂದಿತ್ತು ಕಾಣಾ, ಪ್ರಭುದೇವರ ಕಾರುಣ್ಯ ಪ್ರಸಾದದಿಂದ ಬಸವಣ್ಣ.
--------------
ಮರುಳಶಂಕರದೇವ
ಇನ್ನಷ್ಟು ... -->