ಅಥವಾ

ಒಟ್ಟು 12 ಕಡೆಗಳಲ್ಲಿ , 9 ವಚನಕಾರರು , 12 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇನ್ನು ನಿರ್ಮಲಾವಸ್ಥೆಯ ದರ್ಶನವ ಮಾಡುವಾಗ ಪಂಚಲಿಂಗಗಳನು ದರ್ಶನವ ಮಾಡುವುದು. ಅದೆಂತೆಂದಡೆ : ಅಣವ, ಮಾಯೆ, ಕಾರ್ಮಿಕ, ಮಹಾಮಾಯೆ, ತಿರೋಧಾನಮಲ. ಆಣವಮಲವಾವುದು ? ಶಿವನ ನೆನೆಯಲೀಸದಿಹುದು. ಮಾಯೆಯಾವುದು ? ತನು ಕರಣ ಭುವನಭೋಗಂಗಳ ಬಯಸುತ್ತಿಹುದು, ಕಾರ್ಮಿಕವಾವುದು ? ಪುಣ್ಯಪಾಪಂಗಳೆಂದು ಹೆಸರಾಗಿ ಸುಖದುಃಖಂಗಳಾಗಿಹುದು. ಮಹಾಮಾಯೆ ಯಾವುದು ? ಪಂಚಕರ್ತನು ರೂಪಾದಿ ದೇಹಾಗಿ ಪ್ರಪಂಚಗಳ ಪ್ರೇರಿಸಿಕೊಂಡಿಹುದು. ತಿರೋಧಾನಮಲವಾವುದು ? ಮರಳಿ ಮಾಯಾಭೋಗದಲ್ಲಿ ಬಿದ್ದು ಹೊರಳಾಡಿಸುತ್ತಿಹುದು. ಈ ಪ್ರಕಾರದಲ್ಲಿ ಪಂಚಮಲಂಗಳನು ಅರಿವುದು ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಅಂಗ ಮನ ಪ್ರಾಣಂಗಳೆಂಬಲ್ಲಿ ಘನಲಿಂಗವಿಪ್ಪೆಡೆ ಯಾವುದು ? ಪಂಕಕ್ಕೆ ಜಲ ಒಳಗೋ, ಹೊರಗೋ ? ಅಂಗಕ್ಕೂ ಮನಸ್ಸಿಂಗೂ ಆತ್ಮಂಗೂ ಲಿಂಗವ ಹಿಂಗಿ ಅರಿವ ಠಾವಿನ್ನಾವುದು ? ಬೀಜದೊಳಗಾದ ವೃಕ್ಷ, ವೃಕ್ಷದೊಳಗಾದ ಬೀಜ ಈ ಉಭಯವ ಮೀರಿ ಬೆಳೆವ ಠಾವಿನ್ನಾವುದೊ ? ಮೊನೆಗೂಡಿಯೆ ಗ್ರಹಿಸುವ ಅಲಗಿನ ತೆರದಂತೆ ಅದು ಲಿಂಗಾಂಗಸಂಯೋಗಸಂಬಂಧ ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗದಲ್ಲಿ.
--------------
ಪ್ರಸಾದಿ ಭೋಗಣ್ಣ
ಸಮಯವಿರೋಧವಾದೀತೆಂದು ಪಾದಾರ್ಚನೆಯ ಮಾಡುವರಯ್ಯಾ. ಲಿಂಗಜಂಗಮಕ್ಕೆ ಪಾದವಾವುದು ? ಅರ್ಚನೆ ಯಾವುದು ? ಎಂಬ ತುದಿ ಮೊದಲನರಿಯರು. ಉದಾಸೀನದಿಂದ ಪಾದಾರ್ಚನೆಯ ಮಾಡಿ, ಪಾದೋದಕ ಧರಿಸಿದಡೆ ಅದೇ ಪ್ರಳಯಕಾಲಜಲ. ವರ್ಮವನರಿದು ಕೊಂಡಡೆ ತನ್ನ ಭವಕ್ಕೆ ಪ್ರಳಯಕಾಲಜಲ ! ಈ ಉಭಯವ ಭೇದಿಸಿ ಸಂಸಾರಮಲಿನವ ತೊಳೆವಡೆ ಕೂಡಲಚೆನ್ನಸಂಗಾ ಈ ಅನುವ ನಿಮ್ಮ ಶರಣ ಬಲ್ಲ.
--------------
ಚನ್ನಬಸವಣ್ಣ
ಹೇರನೊಪ್ಪಿಸಿದವಂಗೆ ಸುಂಕವ ಬೇಡಿ ಗಾರುಮಾಡಲೇತಕ್ಕೆ ? ಮೊದಲು ತ್ರಿವಿಧವ ಎನಗೆಂದು ಕೊಟ್ಟು ಮತ್ತೆ ; ನೀ ಬೇಡಿದಡೆ ನಿನಗಿತ್ತ ಮತ್ತೆ , ಎನ್ನಡಿಯ ನೋಡುವ ಬಿಡುಮುಡಿ ಯಾವುದು ? ನಿನಗೆ ಶಿವಲೆಂಕ ಹಾಕಿದ ಮುಂಡಿಗೆಯ ನೀನೆತ್ತಲಮ್ಮದೆ, ಎನ್ನ ಕೈಯೊಳಗಾದೆಯಲ್ಲಾ , ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವೆ.
--------------
ಶಿವಲೆಂಕ ಮಂಚಣ್ಣ
ತೀರ್ಥ ಯಾತ್ರೆ ಲಿಂಗದರುಶನಕ್ಕೆ ಹೋಗಿ, ಕರ್ಮವ ಹಿಂಗಿಸಿಕೊಂಡೆನೆಂಬ ಭಂಗಿತರ ಮಾತ ಕೇಳಲಾಗದು. ಅದೇನು ಕಾರಣವೆಂದರೆ, ತೀರ್ಥವಾವುದು, ಯಾತ್ರೆ ಯಾವುದು, ಲಿಂಗವಾವುದು, ಬಲ್ಲರೆ ನೀವು ಹೇಳಿರೆ. ಮಹಾಘನ ಗುರುಪಾದತೀರ್ಥದಿಂದ ವೆಗ್ಗಳ ತೀರ್ಥ ಉಂಟೆ ? ಜಗತ್ಪಾವನ ಜಂಗಮ ದರುಶನದಿಂದ ಬೇರೆ ಯಾತ್ರೆ ಉಂಟೆ? ಇಂಗಿತವನರಿದ ಬಳಿಕ ತನ್ನ ಅಂಗದ ಮೇಲಿರ್ಪ ಲಿಂಗವಲ್ಲದೆ ಬೇರೆ ಲಿಂಗ ಉಂಟೆ ? ಇದನರಿಯದೆ ಇನ್ನು ತೀರ್ಥಯಾತ್ರೆ ಲಿಂಗ ದರುಶನ ಉಂಟೆಂಬ ಅಂಗಹೀನರ ಮುಖವ ನೋಡಲಾಗದು, ಬಸವಪ್ರಿಯ ಕೂಡಲಚೆನ್ನಬಸವಣ್ಣ.
--------------
ಹಡಪದ ಅಪ್ಪಣ್ಣ
ಜಾಗ್ರದಲ್ಲಿಯ ಸುಷುಪ್ತಿ ಯಾವುದು ? ಪುರುಷ ಪ್ರಾಣವಾಯು ಚಿತ್ತದೊಡನೆ ಕೂಡಿ ಅವರ ಕಂಡ ಠಾವ ಹೇಳುವುದು ಜಾಗ್ರದಲ್ಲಿಯ ಸುಷುಪ್ತಿ ನೋಡಾ ಅಪ್ರಮಾಣಕೂಡಲಸಂಗಮದೇವಾ. || 665 ||
--------------
ಬಾಲಸಂಗಯ್ಯ ಅಪ್ರಮಾಣ ದೇವ
ಅಟ್ಟ ಉಪ್ಪಿನ ಕಷ್ಟವಾವುದು ? ಅಡದ ಉಪ್ಪಿನ ಲೇಸಾವುದು ? ಬಿಟ್ಟ ಸಪ್ಪೆಯ ಭಕ್ತಿ ಯಾವುದು ? ಮೂತ್ರನಾಳದ ಘಾತಿ ಬಿಡದು. ಇವರು ಮಾಡುವ ನೇಮ, ತಾ ಕೊಂಡಂತೆ ಕಲಿದೇವರದೇವಾ
--------------
ಮಡಿವಾಳ ಮಾಚಿದೇವ
ಸ್ಥೂಲ ಸೂಕ್ಷ ್ಮ ಕಾರಣನೆಂದೆಂಬರಲ್ಲಾ ನಿನ್ನನು. ಅದರ ಹಿಂದು ಮುಂದನರಿಯರು:ಬಂದ ಹಾಂಗೆ ನುಡಿವರು. ಸ್ಥೂಲಕ್ಕೆ ನೆಲೆ ಯಾವುದು, ಹೇಳಿಹೆ ಕೇಳಿರಾ ಮನುಜರಿರಾ. ಸ್ಥೂಲವದು ಅನೇಕ ಬ್ರಹ್ಮಾಂಡಗಳ ಮೀರಿಪ್ಪುದು; ಅದು ಸ್ಥೂಲವೆ? ಅಲ್ಲ, ಹಾಂಗಿರಲಿ. ಶ್ರೀ ಗುರುಸ್ವಾಮಿ ವಿಸ್ತಾರ ವಿಸ್ತಾರ ವಿಸ್ತಾರವೆಂದು ಕೊಟ್ಟ ಲಿಂಗವೀಗ ಸ್ಥೂಲ. ಆ ಲಿಂಗವು ಸಕಲ ವ್ಯಾಪ್ತಿಯ ತನ್ನೊಳಗೆ ಇಂಬಿಟ್ಟುಕೊಂಡ ಕಾರಣ ಸೂಕ್ಷ ್ಮವಾದ. ಶಿಷ್ಯಕಾರಣ ಪರಶಿವಮೂರ್ತಿಯಾದ ಕಾರಣ ಕಾರಣವಾದ. ಎಲೆ ಗುರುವೆ, ಲಿಂಗವೆ, ಜಂಗಮವೆ, ನೀವು ಒಂದಾದ ಭೇದವ ಲೋಕದ ಜಡರೆತ್ತ ಬಲ್ಲರು? ಬಸವಣ್ಣ ಬಲ್ಲ. ಆ ಬಸವಣ್ಣ ಅವ್ವೆಯ ಮನೋನಾಥ. ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ, ಬಸವಣ್ಣನ ಪ್ರಸಾದವ ಕೊಂಡು ಭವಂ ನಾಸ್ತಿಯಾಗಿ ಬದುಕಿದೆನು.
--------------
ಸಿದ್ಧರಾಮೇಶ್ವರ
ರಾಗ ರಚನೆಯ ಬಲ್ಲೆನೆಂಬ ವ್ಯಂಗಿಮನುಜರಿರಾ, ನೀವು ಕೇಳಿ : ರಾಗವಾವುದು, ರಚನೆಯಾವುದು ಬಲ್ಲರೆ ನೀವು ಹೇಳಿರೊ, ಕಾಮ ಕ್ರೋಧ ಲೋಭ ಮೋಹ ಮದ ಮತ್ಸರ. ಈ ರಾಗದ್ವೇಷವ ಹಿಡಿದು, ಕೂಗಿಡುವುದೆಲ್ಲವು ರಾಗವೆ? ವೇದಪುರಾಣಾಗಮಶಾಸ್ತ್ರವನೋದಿ ಕಂಡವರ ಬೋಧಿಸುವದೆಲ್ಲ ರಚನೆಯೆ? ಅಲ್ಲ. ಇನ್ನು ರಾಗವಾವುದು ಎಂದರೆ, ಝೇಂಕಾರದ ಪ್ರಣಮದ ನಾದವನರಿಯಬಲ್ಲರೆ ರಾಗ. ಇನ್ನು ರಚನೆ ಯಾವುದು ಎಂದರೆ, ಯೋಗಿ, ಜೋಗಿ, ಶ್ರವಣ, ಸನ್ಯಾಸಿ, ಕಾಳಾಮುಖಿ, ಪಾಶುಪತ ಷಡುದರ್ಶನಕ್ಕೆ ಶ್ರುತವ ತೋರಿ ನುಡಿದು, ದೃಷ್ಟವ ತೋರಿ ನಡೆದು, ಅಲ್ಲದಿರ್ದರೆ ನೀತಿಯ ತೋರಿ ಮರೆವುದೀಗ ರಚನೆ. ಇದನರಿಯದೆ ನಾನು ರಾಗ ರಚನೆಯ ಬಲ್ಲೆನೆಂದು ನುಡಿವ ಮೂಗುಹೋದ ಮೂಕೊರೆಯರ ಮೆಚ್ಚುವನೆ, ನಮ್ಮ ಬಸಪ್ರಿಯ ಕೂಡಲಚೆನ್ನಬಸವಣ್ಣ ?
--------------
ಹಡಪದ ಅಪ್ಪಣ್ಣ
ಸುಷುಪ್ತಿ ಯಾವುದು ? ವಚನಾದಿಗಳೈದು, ಶಬ್ದಾದಿಗಳೈದು, ಕರಣದಲ್ಲಿ ಚಿತ್ತವಲ್ಲದೆ ಮೂರು. ದಶವಾಯುಗಳಲ್ಲಿ ಪ್ರಾಣವಾಯುವಲ್ಲದೆ, ವಾಯು ಒಂಬತ್ತು. ಈ ಇಪ್ಪತ್ತುಮೂರು ಕರಣಂಗಳು ಕಂಠಸ್ಥಾನದಲ್ಲಿ ನಿಂದು ಚಿತ್ತವನು, ಪ್ರಾಣವಾಯುವನು, ಪುರುಷನನು ಈ ಮೂರು ಕರಣಂಗಳೊಡನೆ ಹೃದಯಸ್ಥಾನದಲ್ಲಿ ನಿಂದು, ಅನೇಕ ಚಿಂತನೆಯ ಮಾಡುವುದು, ಜಾಗ್ರದಲ್ಲಿ ನಿಂದರೆ ಹೇಳಲರಿಯದಿಪ್ಪುದು ಸುಷುಪ್ತಿ ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಅಷ್ಟತನುವಿನೊಳಗೊಂದು ತನುವಾಗಿ, ಜೀವಾತ್ಮನು ಪಾಶಬದ್ಧನು ಪಶುಪಾಗತಂತ್ರನು ಸ್ವತಂತ್ರವೆಲ್ಲಿಯದೊ ? ಸ್ವತಂತ್ರ ಶಿವನೊಬ್ಬನೆ ತನ್ನ ಇಚ್ಛಾಲೀಲೆಯಿಂದಾಡಿಸುವ ಘೋರಸಂಸಾರ ಭವವಾರಿಧಿಯೊಳಗೆ ರಾಟಾಳದ ಗುಂಡಿಗೆಯೊಳಗಣ ಜಲದ ತೆರದಿ ತುಂಬುತ್ತ ಕೆಡಹುತ್ತವಿರುಹವೈಸಲ್ಲದೆ ತೆರಹಿಲ್ಲ. ಪುಣ್ಯಪಾಪಂಗಳ ಮಾಡಿ ಸ್ವರ್ಗನರಕಂಗಳ ಭೋಗಿಸಿ ಪರತಂತ್ರವಲ್ಲದೆ ಸ್ವತಂತ್ರವೆಲ್ಲಿಯದೊ ? ಪುನರ್ಜನ್ಮ ಪುನರ್ಮೃತ್ಯುಃ ಪುನಃ ಕ್ಲೇಶಃ ಪುನಃ ಪುನಃ | ಸಗರಸ್ಥಘಟನ್ಯಾಯೋ ನ ಕದಾಚಿದವೈದೃಶಃ || ಎಂದುದಾಗಿ, ಜೀವಾತ್ಮಂಗೆ ಪರಮಾತ್ಮತ್ವ ಸಲ್ಲದಾಗಿ, ಅಷ್ಟತನುವಿನೊಳಗೊಂದು ತನು ಕಾಣಿಭೋ, ಎಲೆ ಅದ್ವೈತಿಗಳಿರಾ. ಹುಟ್ಟುಕುರುಡನು ತನ್ನ ಹಿರಿಯಯ್ಯ ಹೆತ್ತಪ್ಪಂಗೆ ಮುಖವೆಲ್ಲ ಕಣ್ಣೆಂದಡೆ, ತನಗಾದ ಸಿದ್ಧಿ ಯಾವುದು ? ಆದಿ ಸಿದ್ಧಾಂತ ವೇದಾಂತ ಶಾಸ್ತ್ರವನೋದಿ ಕೇಳಿ ಹೇಳಿದಡೆ, ತನಗೇನು ಸಿದ್ಧಿಯಾದುದೆಲೆ ಆತ್ಮತತ್ತ್ವವಾದಿಗಳಿರಾ ಹೇಳಿರೆ ? ಅಷ್ಟತನುಗಳೆಲ್ಲ ಪರತಂತ್ರವೆಂಬುದ ಶ್ರುತದೃಷ್ಟಾನುಮಾನಂಗಳಿಂ ನಿಮ್ಮ ತಿಳುಪುವದೆ ? ಆತ್ಮಾಂತರಾಣಿ ಪಶವಃ ಪರತಂತ್ರಭಾವಾತ್ಸತಸ್ವತಂತ್ರಃ ಪಶುಪತೇ ಪಸುಧೇಶ್ವರಸ್ವಂ | ಆತ್ಮಾನಮಾಷನಿಷದಾ ಪ್ರವದಂತ್ಯನೀಶ ಈಶಂ ಭವಂತ ಮುಖಯೋರುಭಯಂ ಸ್ವಭಾವಃ || ಇಂತೆಂದುದಾಗಿ, ಆತ್ಮಂಗೆ ಪಶುತ್ವವೆ ಸ್ವಭಾವ, ಶಿವಂಗೆ ಪತಿತ್ವವೆ ಸ್ವಭಾವ, ಇದು ಶ್ರುತ. ಇನ್ನು ದೃಷ್ಟವೆಂತೆನಲು, `ಜೀವಶ್ಶಿವಶಿವೋ ಜೀವಸ್ಯ ಜೀವಃ', ಜೀವನೆ ಶಿವನು, ಶಿವನೆ ಜೀವನು. ಬರಿದೆ ಶಿವನೆಂದು ನುಡಿವರು, ಮೇಲಣ ಪದಾರ್ಥವ ನುಡಿಯರು. `ಪಾಶಬದ್ಧೋ ಪಶುಪ್ರೋಕ್ತಃ ಪಾಶಮುಕ್ತಃ ಪರಶ್ಶಿವಃ' ಎಂಬ ಪದಾರ್ಥವ ನುಡಿಯರು. ಪಾಶಬದ್ಧ ಜೀವನರಾಗಿ ಪಶುವೆನಿಸುವನು ಪಾಶಮುಕ್ತನು. ಶಿವನಾಗಿ ಆ ಪಶುವಿಂಗೆ ಪರನಾದ ಶಿವನು ಪತಿಯೆನಿಸುವನು. `ಬ್ರಹ್ಮದ ಸರ್ವದೇವಃ ವೇಷವಃ'ಯೆಂಬ ಶ್ರುತ್ಯಾರ್ಥವನು ಪ್ರಮಾಣಿಸಿ, ಪಶುವೆ ಪತಿಯೆಂದು ನುಡಿವರು ಅನಭಿಜ್ಞರು. || ಶ್ರುತಿ || `ರುದ್ರಃ ಪಶುನಾಮಧಿಪತಿರಿತಃ' ಪಶುಗಳಿಗೆ ಶಿವನೆ ಒಡೆತನವುಳ್ಳ ತನ್ನಾಧೀನವುಳ್ಳ ಮಾಯಾಪಾಶದಿಂ ಕಟ್ಟಲು ಬಿಡಲು, ಶಿವನೆ ಪತಿಯೆಂಬ ತಾತ್ಪರ್ಯಾರ್ಥವ ನುಡಿಯರು. ಇದು ದೃಷ್ಟಾಂತ, ಇನ್ನು ಅನುಮಾನವೆಂತೆನಲು ಕೇಳಿರೆ. ಮಾನುಷಂಗೆ ಪ್ರಸನ್ನಭಕ್ತಿ ಪ್ರಸಾದವ ಕೃಪೆ ಮಾಡಲು, ಮಾನುಷ್ಯಂಗೆ ಕಾಮಿತ ನಿಃಕಾಮಿತ ಭಕ್ತಿಯಿಂದ ಭೋಗಮೋಕ್ಷವನೀವನಾ ಶಿವನು. ನರನೊಳಗಾಗಿ ನರಪತಿಯ ಸೇವೆಯ ಮಾಡುವಲ್ಲಿ, ನಿರುಪಾಧಿಕಸೇವೆಯಿಂದ ಅತಿಶಯ ಪದವನೀವನು. ಉಪಾಧಿಕಸೇವೆಯಿಂದ ಸಾಧಾರಣಪದವನೀವನು. ಇದೀಗ ಅನುಮಾನ ಕಂಡಿರೆ. ಇಂತೀ ಅಷ್ಟತನುಗಳೊಳಗಾದ ಸಮಸ್ತರು ಪಶುಗಳು. ಇವಕ್ಕೆ ಪತಿ ಶಿವನೆಂಬುದಕ್ಕೆ ಕೇಳಿರೆ. ಪೃಥಿವ್ಯಾಭವ ಅಪಾಂ ಶರ್ವ ಆಜ್ಞೇ ರುದ್ರಃ ವಾಯೋರ್ಭೀಮಃ | ಆಕಾಶ್ಶಾತ್ಯ ಮಹಾದೇವ ಸೂರ್ಯಸ್ಯೋಗ್ರಃ ಚಂದ್ರಸ್ಯ ಸೋಮಃ | ಆತ್ಮನಃ ಪಶುಪತಿರಿತಃ | ಎಂದೆನಲು, ಅಷ್ಟತನುಗಳು ಪಶುಗಳು, ಪತಿ ಶಿವನು ಕೇಳಿರೆ. ಇಂತೀ ಅಷ್ಟತನುಗಳು ಶಿವನಾಜ್ಞೆಯ ಮೀರಲರಿಯವೆಂಬುದಕ್ಕೆ ದೃಷ್ಟಾವಾರುಣಿಚೋಪನಿಷತ್ಸುಭೀಸ್ಮಾದ್ವಾತಃ ಪವತೇಶ್ಚಾಗ್ನಿಶ್ಚಭಿಷೋದೇತಿ ಸೂರ್ಯಃ ಭೀಷಾಂದ್ರರ ಮೃತ್ಯುರ್ಧಾವತಿ ಪಂಚಮಃ | ಇಂತಾಗಿ, ಆಕಾಶಃ ಪರಪರಮೇಶಸ್ಯ ಶಾಸನಾದೇವ ಸರ್ವದಾ ಪ್ರಾಣಾಪಾನಾದಿಭಿಶ್ಚಯ ಭೇದ್ಯದಂತಯಿರ್ಲಹಿರ್ಜಗತ್ ಭಿಬರ್ತಿ ಸರ್ವರೀ ಸರ್ವರೀ ಸರ್ವಸ್ಯ ಶಾಸನೇವ ಪ್ರಭಾಜನಾ || ಎಂದುದಾಗಿ, ಹವ್ಯಂ ವಹತಿ ದೇವಾನಾಂ ತವ್ಯಂ ತವ್ಯಾಶ ತಾಮಪಿ | ಪಾಕಾದ್ಯಂ ಚ ಕರೋತ್ಯಗ್ನಿಃ ಪರಮೇಶ್ವರ ಶಾಸನಾತ್ || ಸಂಜೀವನಾದ್ಯಂ ಸರ್ವಸ್ಯ ಕುರ್ವಂತ್ಯಾಪಸ್ತದಾಜ್ಞಯಾ | ವಿಶ್ವಂ ವಿಶ್ವಂಭರಾನ್ನಿತಂ ದತ್ತೇ ವಿಶ್ವೇಶ್ವರಾಜ್ಞಯಾ | ತ್ರಿಭಿಕಿ ತ್ರೈಜಗಭಿಬ್ರತೇಜೋಬಿರ್ವಿಷಮಾದದೇ | ವಿವಿಸ್ಸರ್ವಸ್ಯ ಸಭಾನು ದೇವದೇವಸ್ಯ ಶಾಸನಾತ್ | ಪುಷ್ಯತ್ಯೇಷದಿಜತಾನಿ ಭೂತಾ ನಿಹ್ಲಾದಯಂತ್ಯಪಿ | ದೇವೈಶ್ಯಪಿಯತೇ ಚಂದ್ರಶ್ಚಂದ್ರ ಭೂಷಣಂ ಶಾಸನಾತ್ | ತೇಸ್ಯಾಜ್ಞಾಂ ವಿನಾ ತೃಣಾಗ್ರಮಪಿ ನಚಲತಿ || ಇಂತೆಂದುದಾಗಿ, ಇದು ಕಾರಣ, ಆತ್ಮಸ್ವರ ಬಸವಪ್ರಿಯ ಕೂಡಲಚೆನ್ನಸಂಗಯ್ಯನೆಂದರಿಯರೆಲ್ಲರು. ಪಶುಗಳು ಪಾಶಬದ್ಧರೆಂದು ಎತ್ತಿ ತರ್ಜನಿಯವ ಉತ್ತರ ಕೊಡುವರುಳ್ಳರೆ ನುಡಿ ಭೋ.
--------------
ಸಂಗಮೇಶ್ವರದ ಅಪ್ಪಣ್ಣ
ನಾಮದ ರೂಪಿನಲ್ಲಿ ಅಡಗಿ ಹೊಯ್ದಡೆ ತೋರಿ, ಮತ್ತಾ ಶೂನ್ಯನಾದದಲ್ಲಿ ಅಡಗುವ ತೆರ, ಶರೀರದ ಆತ್ಮನ ಭೇದ, ಹೊಯ್ದಡೆಯ್ದಿ ಮತ್ತೆ ಪುದಿದುದ ಮುಟ್ಟಿ, ಇಂತೀ ಶರೀರದ ಅನ್ವಯ ಸಂಚವ ಬಿಟ್ಟು, ಕಾಬ ಆಗಾವುದು, ಬಿಡದಿದ್ದಡೆ ಚೇಗೆ ಯಾವುದು ? ಈ ಕಡೆ ನಡು ಮೊದಲ ಕೇಳಿಹರೆಂದಡಗಿದೆಯಾ ? ಅಲೇಖನಾದ ಶೂನ್ಯ ಕಲ್ಲಿನ ಮರೆಯಾದೆಯಲ್ಲಾ !
--------------
ವಚನಭಂಡಾರಿ ಶಾಂತರಸ
-->