ಅಥವಾ

ಒಟ್ಟು 100 ಕಡೆಗಳಲ್ಲಿ , 37 ವಚನಕಾರರು , 93 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಾಮುಕಗೆ ದುರ್ಜನಗೆ ಕಪಟಿಗೆ ಹೇಮಚೋರಗೆ ಕಾರುಕ ಸಮ್ಮಗಾರಗೆ ಆವ ಭಾವದ ವ್ರತವ ಮಾಡಲಿಕ್ಕೆ, ಅವ ಭಾವಿಸಿ ನಡೆಯಬಲ್ಲನೆ? ಕಾಗೆಗೆ ರಸಾನ್ನ ಮುಂದಿರಲಿಕೆ, ಹರಿವ ಕೀಟಕಂಗೆ ಸರಿವುದಲ್ಲದೆ ಮತ್ತೆ ಅದು ಸವಿಯಸಾರವ ಬಲ್ಲುದೆ? ಇಂತೀ ಇವು ತಮ್ಮ ಜಾತಿಯ ಲಕ್ಷಣವ ಕೊಂದಡೂ ಬಿಡವಾಗಿ, ವ್ರತಾಚಾರವ ಸಂಬಂದ್ಥಿಸುವಲ್ಲಿ ಶರಣರೆಲ್ಲರ ಕೂಡಿ, ಈ ಗುಣ ಅಹುದು ಅಲ್ಲ ಎಂದು ಹೇಳಿ, ಜಾತಿವರ್ಗದ ಗುಣವ ನೀಕರಿಸಿ ಬಿಡಿಸಿ, ಸುಜಾತಿಯ ಅರಸಿನ ಪಟ್ಟವಂ ಕಟ್ಟಿ ಶರಣರೆಲ್ಲರು ನಿಹಿತಾಚಾರದಲ್ಲಿ ಸಹಭೋಜನವಂ ಮಾಡಿ ಇಂತೀ ಗುಣನಿಹಿತವ್ರತ ಅಜಾತನ ಒಲುಮೆ, ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದ ನಿಹಿತದ ಶೀಲದ ನೇಮ.
--------------
ಅಕ್ಕಮ್ಮ
ಮಡುವಿನೊಳು ನಿಂದು ಹರಿವ ನೀರ ಮುಟ್ಟಿ ಬೇರೊಬ್ಬನ ಕೂಡ ಹಾದರವ ಮಾಡುವಳ ಕಂಡು, ಬಯಲೊಳಗೆ ನಿಂದು ಎಲ್ಲಗಳು ಅಹುದೆಂದು ಕೆಟ್ಟ ಕಣ್ಣಿನಿಂದ ಜರಿಯುತಿರ್ದನೊಬ್ಬ ಸುಳ್ಳ. ಗಾಳಿ ಮೊಟ್ಟೆಯ ಕಟ್ಟಿ ಕಾಳೋರಗನ ಹೆಡೆಯನೆತ್ತಿ ಮನೆ ಮನೆ ತಿರಿದುಂಡು ಹೋಗಿ ಬರುವನೊಬ್ಬ ಭ್ರಾಂತ. ಹೆಂಗಸು ಗಂಡಸು ಕಷ್ಟಿಗನು ಇವರ ಕಂಡು ನಗುತ ಮಾಡಿಕೊಂಡಿರ್ದ ಗುರುನಿರಂಜನ ಚನ್ನಬಸವಲಿಂಗದಲ್ಲಿ ಅಬ್ಥಿನ್ನ ಭಕ್ತ.
--------------
ದೇಶಿಕೇಂದ್ರ ಸಂಗನಬಸವಯ್ಯ
ಅಗ್ನಿಗೆ ಮೈಯೆಲ್ಲ ಮುಖ, ಬಲಕೆ ಮೈಯೆಲ್ಲ ಕಾಲು. ಆತ್ಮದೇಹಿಂಗೆ ದಶವಾಯುಗಳ ಮುಖದಲ್ಲಿ ಹರಿವ ಕರಣೇಂದ್ರಿಯಂಗಳೆಲ್ಲ ಮುಖ ಕಾಲಾಗಿ ಚರಿಸುತಿಪ್ಪವು. ತನುವೆಂಬ ಕೊಟಾರದೊಳು ಚರಿಸಿದರೇನು ? ಅವಕೆ ಬೆಸಸೆ ಎನ್ನ ಸ್ವತಂತ್ರವಲ್ಲ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಮನವೆ ಮಾರುತನ ಒಡಗೂಡಿರ್ದು, ತನುವೆ ವಿಕಾರದೊಳಗಿರ್ದು, ಮನವೆಂತು ಕಂಡಿತ್ತೆಂಬಿರಿ ? ಎಲೆ ಅಣ್ಣಗಳಿರಾ, ಘನವೆಂತಿಪ್ಪುದೆಂದರೆ, ಈ ತನುವ ಮರೆದು, ಹರಿವ ಮನವ ಲಿಂಗದಲಿ ನಿಲಿಸಿ, ಈ ಜನಿತಕ್ಕೆ ನಾನಿನ್ನಾರೆಂದು ತ್ರಿಕಾಲದಲ್ಲಿಯೂ ಎಮ್ಮ ಶರಣರಿಗೆ ನೆನೆವನೆ ನಿತ್ಯನು, ಬಸವಪ್ರಿಯ ಕೂಡಲಚೆನ್ನಬಸವಣ್ಣಾ.
--------------
ಹಡಪದ ಅಪ್ಪಣ್ಣ
ಸುತ್ತಿಸುತ್ತಿ ಬಂದಡಿಲ್ಲ, ಲಕ್ಷ ಗಂಗೆಯ ಮಿಂದಡಿಲ್ಲ. ತುಟ್ಟ ತುದಿಯ ಮೇರುಗಿರಿಯ ಮೆಟ್ಟಿ ಕೂಗಿದಡಿಲ್ಲ. ನಿತ್ಯನೇಮದಿಂದ ತನುವ ಮುಟ್ಟಿಕೊಂಡಡಿಲ್ಲ. ನಿಚ್ಚಕ್ಕಿನ ಗಮನವಂದಂದಿಗೆ; ಅತ್ತಲಿತ್ತ ಹರಿವ ಮನವ ಚಿತ್ರದಲಿ ನಿಲಿಸಬಲ್ಲಡೆ ಬಚ್ಚಬರಿಯ ಬೆಳಗು ಗುಹೇಶ್ವರನೆಂಬ ಲಿಂಗವು.
--------------
ಅಲ್ಲಮಪ್ರಭುದೇವರು
ಹರಿನಯನವ ಚರಣಕಮಲದಲ್ಲಿ ಧರಿಸಿ, ಶಿರಮಕುಟದಲ್ಲಿ ಹರಿವ ಗಂಗೆಯ ತಾಳಿ, ಅಸುರರ ಶಿರಗಳ ಕೊರಳ ಹಾರವ ಮಾಡಿ, ಅಜಶಿರಪಾತ್ರೆಯ ಕರಮಧ್ಯದೊಳಗಿರಿಸಿ, ಗಜಚರ್ಮಾಂಬರ ಭುಜಗಭೂಷಣನೆನಿಸಿ, ತ್ರಿಜಗವ ಪಾಲಿಸುತ್ತ ಬಂದಿರಯ್ಯ ಎನ್ನ ಕರಸ್ಥಲಕ್ಕೆ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಕೃಷಿಯ ಮಾಡಿ ಉಣ್ಣದೆ ಹಸಿವು ಹರಿವ ಪರಿ ಇನ್ನೆಂತೊ? ಕರ್ಮಯೋಗವ ಮಾಡದೆ ನಿರ್ಮಲ ಸುಚಿತ್ತವನರಿವ ಪರಿ ಇನ್ನೆಂತೊ? ಬೇಯದ ಅಶನವನುಂಬ ತಾವಾವುದು ಕಪಿಲಸಿದ್ಧಮಲ್ಲಿಕಾರ್ಜುನಲಿಂಗಕ್ಕೆ?
--------------
ಸಿದ್ಧರಾಮೇಶ್ವರ
ಎತ್ತು ನಿಮ್ಮ ದಾನ; ಬಿತ್ತು ನಿಮ್ಮ ದಾನ. ಸುತ್ತಿ ಹರಿವ ಸಾಗರವೆಲ್ಲ ನಿಮ್ಮ ದಾನ. ನಿಮ್ಮ ದಾನವನುಂಡು ಅನ್ಯರ ಹೊಗಳುವ ಕುನ್ನಿಗಳನೇನೆಂಬೆ ಹೇಳ? ರಾಮನಾಥ.
--------------
ಜೇಡರ ದಾಸಿಮಯ್ಯ
ತನುವ ಕರಗಿಸಿ, ಹರಿವ ಮನವ ನಿಲಿಸಿ, ಅಂಗಗುಣವ ಅಳಿದು, ಲಿಂಗಗುಣವ ನಿಲಿಸಿ, ಭಾವವಳಿದು, ಬಯಕೆ ಸವೆದು, ಮಹಾದೇವನಾದ ಶರಣರ ಜಗದ ಮಾನವರೆತ್ತ ಬಲ್ಲರು, ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ ?
--------------
ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ
ಪ್ರಥಮ ಕಾಲದಲ್ಲಿ ನಿರಾಲಂಬಿಯಾಗಿರ್ದಿರಯ್ಯಾ ದ್ವಿತೀಯ ಕಾಲದಲ್ಲಿ ತೇಜೋಮೂರ್ತಿಯಾಗಿದ್ದಿರಯ್ಯಾ. ತೃತೀಯ ಕಾಲದಲ್ಲಿ ನಾದಮೂರ್ತಿಯಾಗಿರ್ದಿರಯ್ಯಾ. ಚತುರ್ಥ ಕಾಲದಲ್ಲಿ ಚೈತನ್ಯರೂಪ ತಾಳಿರ್ದಿರಯ್ಯಾ. ಪಂಚಮ ಕಾಲದಲ್ಲಿ ಧರ್ಮಮೂರ್ತಿಯಾಗಿರ್ದಿರಯ್ಯಾ. ಷಷ* ಕಾಲದಲ್ಲಿ ಪರಮಪುರುಷಾರ್ಥಸಾಧನವಾಗಿ, ತ್ರಿವಿಧಭಕ್ತಿಗೆ ನೀವೇ ಕಾರಣವಾಗಿ ಬಂದಿರಿ ಪ್ರಮಥರು ಸಹಿತ, ಮುಟ್ಟಿ ಪ್ರಾಣಲಿಂಗದ ಹರಿವ ತೋರಿಸಬೇಕೆಂಬ ನಿಮಿತ್ತ. ಬೆಸನವಿಡಿದು ನಿಮ್ಮ ಕರುಣದ ಶಿಶುವಾಗಿ ಹುಟ್ಟಿದೆ ನಿಮ್ಮ ಕರಸ್ಥಲದಲ್ಲಿ ಕೂಡಲಚೆನ್ನಸಂಗಮದೇವಾ ನಿಮ್ಮ ಮಹಿಮೆಗೆ ನಮೋ ನಮೋ ಎನುತಿರ್ದೆನು
--------------
ಚನ್ನಬಸವಣ್ಣ
ಉಭಯವ ನೆಮ್ಮಿ ಹರಿವ ನದಿಯಂತೆ, ಮಾಡುವ ಕ್ರೀ, ಅರಿವ ಚಿತ್ತ. ಈ ಉಭಯದ ನೆಮ್ಮುಗೆಯಲ್ಲಿ ಭಾವಿಸಿ ಅರಿವ ಚಿತ್ತ, ಅಂಗದ ಮುಟ್ಟನರಿತು ನಿಜಸಂಗದ ನೆಲೆಯಲ್ಲಿ ನಿಂದು, ಉಭಯ ನಿರಂಗವಾದಲ್ಲಿ, ಪ್ರಾಣಲಿಂಗಸಂಬಂಧ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಕಡುಜಲಕ್ಕೆ (ಹರಿವ ಜಲಕ್ಕೆ ?) ಇದಿರಾಗಿ ಹರಿವ ಸ್ವಾಮಿಯ ಬರವ ಕಂಡು, ಬಿಡದೆ ಬೆಂಬತ್ತಿಸುವ ಪರಿಯ ನೋಡಾ. ನಡೆ ನುಡಿ ಚೈತನ್ಯ ಒಡಲನೊಂದನು ಮಾಡಿ ಬಿಡದೆ ವೇಧಿಸುವ ಬೆಡಗ ಕಂಡೆನಯ್ಯಾ ! ಕಡೆಗೆ ಸೂಸದ ದೃಷ್ಟಿ, ಹಿಡಿದು ತೊಲಗದ ಹಸ್ತ, ಬೇಡ ಬೇಡ ತನಗೆನ್ನದ ಸಜ್ಜನ ಮಡದಿ, ತನ್ನ ಗಂಡನ ಅಡಗಿ ಕೂಡುವ ಭೇದ !_ ನಡುವಿರುಳು ಕೂಡಿ ನಿಮಿರೆ ಬೆಳಗಾಯಿತ್ತು. ಮಾಡಿ ನೀಡುವನ ಕಂಡು ನಾಡು ಬೀಡೆಲ್ಲ ನೆರೆದು ಕೊಡ ಕೈಯಲ್ಲಿ ಕೊಟ್ಟಡೆ ತೃಪ್ತರಾಗಿ, ಮಾಡುವರು ಹರಸುವರು ನೋಡುವರು ಮನದಣಿಯೆ ಕೊಡುವರು ಕೋಟಿ, ಸಹಜ ಒಂದೆ ಎಂದು ! ಜೋಡ ತೊಡದಾತನ ಮೈಯಲ್ಲಿ, ಕೂಡೆ ಘಾಯವಿಲ್ಲದುದ ಕಂಡು, ನೋಡಿರೆ ಮಸೆ ಮುಟ್ಟದ ಮಹಾಂತನ ! ಬೇಡುವೆನು ಕರುಣವನು, ಪಾದ [ವ]ನೊಸಲಲ್ಲಿ ಸೂಡುವೆನು ಗುಹೇಶ್ವರನ ಶರಣ ಬಸವಣ್ಣಂಗೆ ನಮೋ ನಮೋ ಎಂಬೆನು.
--------------
ಅಲ್ಲಮಪ್ರಭುದೇವರು
ಪರಧನ-ಪರಸತಿ-ಪರನಿಂದೆಗಳಿರೆ ಮುಂದೆ ನರಕವು ಎಂದು ಗುರುವಾಕ್ಯ ಸಾರುತ್ತಿದೆ. ಪರಧನ-ಪರಸತಿ-ಪರಭೂಮಿಗಳುಪಿ ಹತವಾಗಿ ಹೋದ ದುರ್ಯೋಧನ. ಹರಿವ ನದಿಯ ಮಿಂದು ಗೋದಾನ ಮಾಡುವ ನರಕಿಗಳ ನುಡಿಯ ಕೇಳಲಾಗದು. ಹದಿನಾಲ್ಕು ಲೋಕಕ್ಕೆ ಕರ್ತೃ ಶಿವನೊಬ್ಬನೇ ಎಂದು ಶ್ರುತಿಗಳು ಪೊಗಳುತ್ತಿಹವು. ಅರತ ದೇವರ ಪೂಜೆಯ ಮಾಡಿ, ಇಷ್ಟಲಿಂಗವ ಮರೆವ ಮೂಳ ಹೊಲೆಯರಿಗೆ ಮುಕ್ತಿ ಆಗದೆಂದಾತ ನಮ್ಮ ಅಂಬಿಗರ ಚೌಡಯ್ಯ ನಿಜಶರಣನು.
--------------
ಅಂಬಿಗರ ಚೌಡಯ್ಯ
ವಿರತಿ ವಿರತಿಯೆಂದು ವಿರತಿಯ ಹೊಲಬನರಿಯದೆ ಹಂಬಲಿಸಿ ಹಲಬುತಿಪ್ಪರಣ್ಣ. ಕಠಿಣ ಪದಾರ್ಥವ ಸವಿದೊಡೆ ವಿರತಿಯೆ? ಕಠಿಣ ಪದಾರ್ಥವನೊಲ್ಲೆನೆಂದು ಕಳೆದೊಡೆ ವಿರತಿಯೆ? ವೃಕ್ಷದಡಿಯ ಫಲಂಗಳನೆತ್ತಿ ಮೆದ್ದೊಡೆ ವಿರತಿಯೆ? ಬಿದ್ದ ಫಲಂಗಳ ಮುಟ್ಟೆನೆಂದು ಭಾಷೆಯ ಮಾಡಿದೊಡೆ ವಿರತಿಯೆ? ಕ್ರೀಯೆಲ್ಲಿ ಮುಳುಗಿದೊಡೆ ವಿರತಿಯೆ? ನಿಷ್ಕಿ ್ರೀಯ ಮಾಡಿದೊಡೆ ವಿರತಿಯೆ? ಮೌನಗೊಂಡಡೆ ವಿರತಿಯೆ? ನಿರ್ಮೌನವಾದಡೆ ವಿರತಿಯೆ? ಕ್ರೀಯನಾಚರಿಸಿ, ಅರಿವಿನಮಾತ ಬಣ್ಣವಿಟ್ಟು ನುಡಿದರೆ ವಿರತಿಯೆ? ಇಂತಿವೆಲ್ಲವು ವಿರತಿಯ ನೆಲೆಯನರಿಯದೆ ತಲೆಬಾಲಗೆಟ್ಟು ಹೋದವು. ಇನ್ನು, ಮುಕ್ತಿಪಥವ ತೋರುವ ವಿರತಿಯ ಬಗೆಯಾವುದೆಂದರೆ- ಷಟ್ಸ ್ಥಲಕ್ಕೆ ಒಪ್ಪವಿಟ್ಟು ಎತ್ತಿದ ಮಾರ್ಗವನಿಳುಪದೆ ಹಿಡಿದ ವ್ರತನೇಮಂಗಳಲ್ಲಿ ನೈಷೆ*ಯಾಗಿ ಈಷಣತ್ರಯಂಗಳ ಘಾಸಿಮಾಡಿ ಬಹಿರಂಗಮದಂಗಳ ಬಾಯ ಸೀಳಿ ಅಂತರಂಗಮದಂಗಳ ಸಂತೋಷಮಂ ಕೆಡಿಸಿ ಅಷ್ಟಮೂರ್ತಿ ಅಷ್ಟಮದಂಗಳ ನಷ್ಟವ ಮಾಡಿ ಎಂಟೆರಡುದಿಕ್ಕಿನಲ್ಲಿ ಹರಿವ ದಶವಾಯುಗಳ ಗಂಟಲ ಮುರಿದು ಸುಗುಣ ದುರ್ಗುಣಂಗಳ ನಗೆಗೊಳಗುಮಾಡಿ ನವನಾಳಂಗಳ ಮುಂಬಾಗಿಲಲ್ಲಿ ನವಲಿಂಗಂಗಳ ಸಿಂಗರಿಸಿ ತನು ಮನವ ಸೋಂಕಿದ ಸಾಕಾರ ನಿರಾಕಾರವೆಂಬ ಪದಾರ್ಥಂಗಳ ವಂಚಿಸದೆ ಆಯಾಯ ಲಿಂಗಂಗಳಿಗೆ ತೃಪ್ತಿಯಂ ಮಾಡಿ ನಡೆವಲ್ಲಿ ನುಡಿವಲ್ಲಿ ಮಂತ್ರಂಗಳಲ್ಲಿ ಮೈಮರೆದಿರದೆ ಆಚಾರಾದಿ ಮಹಾಲಿಂಗಗಳ ಷಡುವರ್ಣದ ಬೆಳಗಂ ಧ್ಯಾನ ಮೌನದಲ್ಲಿಯೇ ಕಣ್ಣಿಲ್ಲದೆ ಕಂಡು ಗಂಗೆ ಯಮುನೆ ಸರಸ್ವತಿಯೆಂಬ ಮೂರು ಗಂಗೆ ಕೂಡಿದ ಮಧ್ಯವೀಗ ಸಂಗಮಕ್ಷೇತ್ರ. ಆ ಸಂಗಮಕ್ಷೇತ್ರದ ರತ್ನಮಂಟಪದಲ್ಲಿ ನೆಲೆಸಿಪ್ಪ ತೋಂಟದ ಅಲ್ಲಮನೆಂಬ ಪರಬ್ರಹ್ಮದ ಬೆಳಗಿನ ಪ್ರಭೆಯ ಮೊತ್ತಮಂ ಕಂಡು ಆ ತೋಂಟದ ಅಲ್ಲಮನೆಂಬ ಪರಬ್ರಹ್ಮದ ದಿವ್ಯ ಶ್ರೀಚರಣಮಂ ಭಾವಪುಷ್ಪಂಗಳೆಂಬ ಜಾಜಿ ಮಲ್ಲಿಗೆ ಕೆಂದಾವರೆಯಲ್ಲಿ ಪೂಜೆಯಂ ಮಾಡಿ ಜೀವನ್ಮುಕ್ತಿಯಾದುದೀಗ ನಿಜ ವಿರಕ್ತಿ. ಇಂತಪ್ಪ ವಿರಕ್ತಿಯನಳವಡಿಸಿಕೊಳ್ಳದೆ ಮಾತಿಂಗೆ ಮಾತು ಕೊಟ್ಟು ಮತಿಮರುಳಾಗಿಪ್ಪವರಿಗಂಜಿ ನಾನು ಶರಣೆಂಬೆನಯ್ಯಾ, ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ.
--------------
ಘನಲಿಂಗಿದೇವ
ವೃಕ್ಷ ಎಲೆಗಳೆವುದಲ್ಲದೆ ತರುವಿನ ಸಲೆ ನೆಲೆ ಸಾರಗಳದು ಫಲಿಸುವುದುಂಟೆ ? ಅಂಗದಲ್ಲಿ ಸೋಂಕಿದ ಮರವೆಯ ಕಳೆಯಬಹುದಲ್ಲದೆ ಮನ ವಚನ ಕಾಯ ತ್ರಿಕರಣದಲ್ಲಿ ವೇಧಿಸಿದ ಮರವೆಯ ಹರಿವ ಪರಿಯಿನ್ನೆಂತೊ ? ಉರಿ ವೇಧಿಸಿದ ತರುವಿನಂತೆ ಅದಕ್ಕೆ ಪರಿಹರವಿಲ್ಲ. ಅರಿದು ಮಾಡುವ ದೋಷಕ್ಕೆ ಪಡಿಪುಚ್ಚವಿಲ್ಲ. ಆ ಭೇದವನರಿದು ಹರಿಯಬೇಕು ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗದಲ್ಲಿ.
--------------
ಪ್ರಸಾದಿ ಭೋಗಣ್ಣ
ಇನ್ನಷ್ಟು ... -->