ಅಥವಾ

ಒಟ್ಟು 47 ಕಡೆಗಳಲ್ಲಿ , 21 ವಚನಕಾರರು , 39 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಉಪಮೆ ಉಪಮಿಸಲರಿಯದೆ ಉಪಮಾತೀತವೆನುತ್ತಿದ್ದಿತ್ತು. ಅರಿವು, ಅರಿವಿನ ಮರೆಯಲ್ಲಿರ್ದುದನರಿಯಲರಿಯದೆ, ಪರಾಪರವೆಂದು ನುಡಿಯುತ್ತಿದ್ದಿತ್ತು. ಧ್ಯಾನ ಧ್ಯಾನಿಸಲರಿಯದೆ, ಧ್ಯಾನರೂಪಾತೀತನೆಂದು, ತದ್ಧ್ಯಾನಗೊಂಡಿತ್ತು. ಜ್ಞಾತೃ ಜ್ಞಾನ ಜ್ಞೇಯಕ್ಕೆ ಇನ್ನಾವ ಜ್ಞಾನವೊ? ವೇದವಿಜ್ಞಾನವೆಂದುದಾಗಿ, `ತತ್ತ್ವಮಸಿ' ವಾಕ್ಯಂಗಳೆಲ್ಲವೂ ಹುಸಿಯಾಗಿ ಹೋದವು. ಸಚ್ಚಿದಾನಂದವೆಂದುದಾಗಿ ದ್ವೈತಾದ್ವೈತಿಗಳೆಲ್ಲ ಸಂಹಾರವಾಗಿ ಹೋದರು. ಬಂದೂ ಬಾರದ, ನಿಂದ ನಿರಾಳ ಗುಹೇಶ್ವರ.
--------------
ಅಲ್ಲಮಪ್ರಭುದೇವರು
ಹಿಂದಣ ಭವವನೊರಸಿ, ಮುಂದಣ ಜನನಕರ್ಮವ ಸಂಹರಿಸಿ ಮಲ ಮಾಯೆಯ ಶಿಕ್ಷಿಸಿ, ಎನ್ನ ರಕ್ಷಿಸಿದಿರಯ್ಯಾ ಗುರುವೆ. ಕಬ್ಬುನದ ಗಿರಿಯ ಪರುಷರಸ ಸೋಂಕಿದಂತೆ ಸೌರಾಷ್ಟ್ರ ಸೋಮೇಶ್ವರನೆಂಬ ಗುರು ಸೋಂಕಲು ಎನ್ನ ಅವಗುಣಂಗಳರತು ಹೋದವು.
--------------
ಆದಯ್ಯ
ಒಬ್ಬ ಸಹಜಗಳ್ಳನು ನಿಟಿಲಮುಂದಳ ಚಾವಡಿಯಲ್ಲಿ ನಿಂದು ರಾಜಿಸುತಿಪ್ಪನು ನೋಡಾ! ಆ ಕಳ್ಳನ ಹೆಜ್ಜೆಯ ಒಬ್ಬ ತಳವಾರ ಎತ್ತಿ ನೋಡಲು ಹೆಜ್ಜೆ ಹೋದವು. ಅಂಗಲಿಂಗಸಂಗಸಮರಸವೆಂಬ ಲಿಂಗದ ಗುಡಿಯಲ್ಲಿ ಅಡಗಿಪ್ಪವಯ್ಯ. ಆ ತಳವಾರನು ಹೆಜ್ಜೆಯನೆತ್ತಿ ಆ ಕಳ್ಳನ ಹೆಜ್ಜೆಯ ಹಿಡಿದ ಭೇದವ ನಿಮ್ಮ ಶರಣರೆ ಬಲ್ಲರಲ್ಲದೆ ಉಳಿದವರೆತ್ತ ಬಲ್ಲರಯ್ಯ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಒಂದು ಹುತ್ತಕ್ಕೆ ಒಂಬತ್ತು ಬಾಗಿಲು. ಒಂದು ಸರ್ಪ ಒಂಬತ್ತು ಬಾಗಿಲಲ್ಲಿಯೂ ನೋಡುತ್ತಿಪ್ಪುದು. ಒಂಬತ್ತು ಬಾಗಿಲಿಗೆ ಕದವನಿಕ್ಕಿ, ಒಂದು ಬಾಗಿಲ ಅಗುಳಿ ದಾರವಂದವನಿಕ್ಕಿ ಬಲಿಯಲು, ತಿರುಗುವುದಕ್ಕೆ ಠಾವ ಕಾಣದೆ, ಇರುವುದಕ್ಕೆ ಇಂಬ ಕಾಣದೆ, ನಿಲುವುದಕ್ಕೆ ಎಡೆಯ ಕಾಣದೆ, ಉರಿ ಎದ್ದು ಊರ್ದ್ವಕ್ಕೇರಲು, ಶರಧಿ ಬತ್ತಿತ್ತು, ಅಲ್ಲಿದ್ದ ಖಗಮೃಗವೆಲ್ಲ ದಹನವಾದವು. ಸರೋವರವೆಲ್ಲ ಉರಿದು ಹೋದವು, ಕತ್ತಲೆ ಹರಿಯಿತ್ತು. ಮುಂದೆ ದಿಟ್ಟಿಸಿ ನೋಡುವನ್ನಕ್ಕ ಇಟ್ಟೆಡೆಯ ಬಾಗಿಲು ಸಿಕ್ಕಿತ್ತು. ಆ ಇಟ್ಟೆಡೆಯ ಬಾಗಿಲ ಹೊಕ್ಕು ಹೊಡೆಕರಿಸಿ, ಪಶ್ಚಿಮದ ಕದವ ತೆಗೆದು, ಬಟ್ಟ ಬಯಲಲ್ಲಿ ನಿಂದು ನಾನೆತ್ತ ಹೋದೆಹೆನೆಂದರಿಯೆನಯ್ಯಾ ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ.
--------------
ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ
ಪರಶಿವತತ್ವದ ಸ್ವರೂಪವ ಬಲ್ಲೆವೆಂಬಿರಿ, ನಿಮ್ಮ ಬಲ್ಲತನವ ಪೇಳಿರಯ್ಯಾ. ಆಗಮ ಪುರುಷರಿರಾ, ನಿಮ್ಮಾಗಮಂಗಳು ನಮ್ಮ ಶಿವನ ನಿಲುಕಡೆಯನರಿಯದೆ, ಅರಸಿ ಅರಸಿ ಆಸತ್ತು ಬಳಲಿ ಹೋದವು ಕೇಳಿರಯ್ಯಾ. ವೇದಪುರುಷರಿರಾ, ನಿಮ್ಮ ವೇದಂಗಳು ವೇದಿಸಲರಿಯದೆ ನಾಯಾಗಿ ಬೊಗಳಿ, ಬೆಂಡಾಗಿ ಹೋದವು ಕೇಳಿರಯ್ಯಾ. ಪುರಾಣಪುರುಷರಿರಾ, ನಿಮ್ಮ ಪುರಾಣಂಗಳು ಪೂರೈಸಿ ಪರಶಿವನ ಕಾಣದೆ ವೀರಶೈವ ಪುಂಡ್ರಮಸ್ತಕದಿಂದ ಮಥನಿಸಿ ಹೋದವು ಕೇಳಿರಯ್ಯಾ. ಶಾಸ್ತ್ರಸಂದ್ಥಿಗಳರಿರಾನಿಮ್ಮಶಾಸ್ತ್ರ ಸಾದ್ಥಿಸಿ ನಮ್ಮ ಪರಶಿವನ ನಿಲುಕಡೆಯ ಕಾಣದೆ ಒರಲಿ ಒರಲಿ ಹೋದವು ಕೇಳಿರಯ್ಯಾ. ತರ್ಕ ತಂತ್ರಗಳ ಕಲಿತು ಹೇಳುವರೆಲ್ಲ ಟಗರು, ಕೋಣ, ಹುಂಜಿನಂತೆ ಹೋರಾಡಿ ಮಥನದಿಂದ ಹೊಡೆದಾಡಿ ಪರಶಿವನ ಕಾಣದೆ ಸತ್ತು ಹೋದರಲ್ಲಾ ! ಇಂತೀ ವೇದ ಶಾಸ್ತ್ರಗಮ ಪುರಾಣ ತರ್ಕ ತಂತ್ರಗಳು ಶಿವನ ನಿಲುಕಡೆಯನೆಂದಿಗೂ ಅರಿಯವು. ಇಂತಿವನೆಲ್ಲವನು ನೋಡಿ ಶಿವನ ಕೂಡಬೇಕೆಂಬಣ್ಣಗಳು ಮುನ್ನವೆ ಅರಿಯರು, ಅದೇನು ಕಾರಣವೆಂದಡೆ- ಪ್ರಸೂತವಾಗದ ಮುನ್ನ ಶಿಶು ಬಯಸಿದರುಂಟೆ ? ಹಸಿಯಿಲ್ಲದ ಭೂಮಿಯಲ್ಲಿ ಬೀಜವ ಬಿತ್ತಿ ಫಲವ ಬಯಸಿದರುಂಟೆ ? ಈ ದೃಷ್ಟಾಂತದಂತೆ ತಿಳಿದು ಇಂತೀ ಎಲ್ಲವನು ವಿಸರ್ಜಿಸಿ ಕಳೆವುದು ಶಿವಜ್ಞಾನ. ಅಂತಪ್ಪ ಶಿವಜ್ಞಾನದ ನಿಲವು ಕರಸ್ಥಳದ ಇಷ್ಟಲಿಂಗ. ಆ ಇಷ್ಟಲಿಂಗಬ್ರಹ್ಮದ ನಿಜವು ತಾನೆಂದು ತಿಳಿದು ಶಿಶುಕಂಡ ಕನಸಿನಂತೆ, ಮೂಕ ಸಕ್ಕರಿಮೆದ್ದಂತೆ ಇರ್ದರಯ್ಯಾ ನಿಮ್ಮ ಶರಣರು ಎಂದನಯ್ಯಾ ನಿಮ್ಮ ಶರಣ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಸಪ್ತದ್ರವ್ಯಂಗಳು ಎಡೆಯಿಲ್ಲದೆ ಹೋದುವು. ಅಷ್ಟಮದಂಗಳು ನಷ್ಟವಾದುವು. ಅರಿಷಡ್ವರ್ಗದುರವಣಿ ತರಹರಿಸಲಾರದೆ ಹೋದವು. ಪಂಚೇಂದ್ರಿಯಂಗಳ ವಂಚನೆ ಬರತವು. ಕರ್ಮೇಂದ್ರಿಯಂಗಳ ವ್ಯಾಪಾರ ನಿಂದವು. ಕಾಮನ ಬಾಣ ಬತ್ತಳಿಕೆಯಲ್ಲಿ ಹಾಯ್ದುವು. ಕಾಲನ ಅಧಿಕಾರ ನಿಂದಿತ್ತು ಮಾಯೆ ಮುಂದುಗೆಟ್ಟು ಮುಖವಿಡಲಮ್ಮದೆ ಹೋಯಿತ್ತು. ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ, ನಿಮ್ಮ ಶರಣರ ಮುಂದೆ.
--------------
ಸ್ವತಂತ್ರ ಸಿದ್ಧಲಿಂಗ
ನೇಮವೆಂದೇನು ? ನಿತ್ಯವೆಂದೇನು ? ಆಗಮವೆಂದೇನು ? ಆಚಾರವೆಂದೇನು ? ಲಿಂಗಜಂಗಮದ ಕುಳವೊಂದೇ ಎಂದು ಸಂಪಾದಿಸಲ[ರಿಯ]ದೆ ನಾಲ್ಕು ಯುಗಂಗಳು ಇಂತೆ ಹೋದವು. ಕಂಡು ಹೇಳರು, ತಂದು ತೋರರು, ಅವರು ಮಹಂತರೇ ? ಕೂಡಲಚೆನ್ನಸಂಗಮದೇವ ಸುಲಭವಾಗಿ ಶರಣಸನ್ನಿಹಿತ ಲಿಂಗವು.
--------------
ಚನ್ನಬಸವಣ್ಣ
ವಿರತಿ ವಿರತಿಯೆಂದು ವಿರತಿಯ ಹೊಲಬನರಿಯದೆ ಹಂಬಲಿಸಿ ಹಲಬುತಿಪ್ಪರಣ್ಣ. ಕಠಿಣ ಪದಾರ್ಥವ ಸವಿದೊಡೆ ವಿರತಿಯೆ? ಕಠಿಣ ಪದಾರ್ಥವನೊಲ್ಲೆನೆಂದು ಕಳೆದೊಡೆ ವಿರತಿಯೆ? ವೃಕ್ಷದಡಿಯ ಫಲಂಗಳನೆತ್ತಿ ಮೆದ್ದೊಡೆ ವಿರತಿಯೆ? ಬಿದ್ದ ಫಲಂಗಳ ಮುಟ್ಟೆನೆಂದು ಭಾಷೆಯ ಮಾಡಿದೊಡೆ ವಿರತಿಯೆ? ಕ್ರೀಯೆಲ್ಲಿ ಮುಳುಗಿದೊಡೆ ವಿರತಿಯೆ? ನಿಷ್ಕಿ ್ರೀಯ ಮಾಡಿದೊಡೆ ವಿರತಿಯೆ? ಮೌನಗೊಂಡಡೆ ವಿರತಿಯೆ? ನಿರ್ಮೌನವಾದಡೆ ವಿರತಿಯೆ? ಕ್ರೀಯನಾಚರಿಸಿ, ಅರಿವಿನಮಾತ ಬಣ್ಣವಿಟ್ಟು ನುಡಿದರೆ ವಿರತಿಯೆ? ಇಂತಿವೆಲ್ಲವು ವಿರತಿಯ ನೆಲೆಯನರಿಯದೆ ತಲೆಬಾಲಗೆಟ್ಟು ಹೋದವು. ಇನ್ನು, ಮುಕ್ತಿಪಥವ ತೋರುವ ವಿರತಿಯ ಬಗೆಯಾವುದೆಂದರೆ- ಷಟ್ಸ ್ಥಲಕ್ಕೆ ಒಪ್ಪವಿಟ್ಟು ಎತ್ತಿದ ಮಾರ್ಗವನಿಳುಪದೆ ಹಿಡಿದ ವ್ರತನೇಮಂಗಳಲ್ಲಿ ನೈಷೆ*ಯಾಗಿ ಈಷಣತ್ರಯಂಗಳ ಘಾಸಿಮಾಡಿ ಬಹಿರಂಗಮದಂಗಳ ಬಾಯ ಸೀಳಿ ಅಂತರಂಗಮದಂಗಳ ಸಂತೋಷಮಂ ಕೆಡಿಸಿ ಅಷ್ಟಮೂರ್ತಿ ಅಷ್ಟಮದಂಗಳ ನಷ್ಟವ ಮಾಡಿ ಎಂಟೆರಡುದಿಕ್ಕಿನಲ್ಲಿ ಹರಿವ ದಶವಾಯುಗಳ ಗಂಟಲ ಮುರಿದು ಸುಗುಣ ದುರ್ಗುಣಂಗಳ ನಗೆಗೊಳಗುಮಾಡಿ ನವನಾಳಂಗಳ ಮುಂಬಾಗಿಲಲ್ಲಿ ನವಲಿಂಗಂಗಳ ಸಿಂಗರಿಸಿ ತನು ಮನವ ಸೋಂಕಿದ ಸಾಕಾರ ನಿರಾಕಾರವೆಂಬ ಪದಾರ್ಥಂಗಳ ವಂಚಿಸದೆ ಆಯಾಯ ಲಿಂಗಂಗಳಿಗೆ ತೃಪ್ತಿಯಂ ಮಾಡಿ ನಡೆವಲ್ಲಿ ನುಡಿವಲ್ಲಿ ಮಂತ್ರಂಗಳಲ್ಲಿ ಮೈಮರೆದಿರದೆ ಆಚಾರಾದಿ ಮಹಾಲಿಂಗಗಳ ಷಡುವರ್ಣದ ಬೆಳಗಂ ಧ್ಯಾನ ಮೌನದಲ್ಲಿಯೇ ಕಣ್ಣಿಲ್ಲದೆ ಕಂಡು ಗಂಗೆ ಯಮುನೆ ಸರಸ್ವತಿಯೆಂಬ ಮೂರು ಗಂಗೆ ಕೂಡಿದ ಮಧ್ಯವೀಗ ಸಂಗಮಕ್ಷೇತ್ರ. ಆ ಸಂಗಮಕ್ಷೇತ್ರದ ರತ್ನಮಂಟಪದಲ್ಲಿ ನೆಲೆಸಿಪ್ಪ ತೋಂಟದ ಅಲ್ಲಮನೆಂಬ ಪರಬ್ರಹ್ಮದ ಬೆಳಗಿನ ಪ್ರಭೆಯ ಮೊತ್ತಮಂ ಕಂಡು ಆ ತೋಂಟದ ಅಲ್ಲಮನೆಂಬ ಪರಬ್ರಹ್ಮದ ದಿವ್ಯ ಶ್ರೀಚರಣಮಂ ಭಾವಪುಷ್ಪಂಗಳೆಂಬ ಜಾಜಿ ಮಲ್ಲಿಗೆ ಕೆಂದಾವರೆಯಲ್ಲಿ ಪೂಜೆಯಂ ಮಾಡಿ ಜೀವನ್ಮುಕ್ತಿಯಾದುದೀಗ ನಿಜ ವಿರಕ್ತಿ. ಇಂತಪ್ಪ ವಿರಕ್ತಿಯನಳವಡಿಸಿಕೊಳ್ಳದೆ ಮಾತಿಂಗೆ ಮಾತು ಕೊಟ್ಟು ಮತಿಮರುಳಾಗಿಪ್ಪವರಿಗಂಜಿ ನಾನು ಶರಣೆಂಬೆನಯ್ಯಾ, ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ.
--------------
ಘನಲಿಂಗಿದೇವ
ಹುಸಿಯೆಂಬ ಅಲಗಿಂಗೆ ಒಡಲೆ ಗುರಿಯಾಯಿತ್ತು ಏನೆಂಬೆನೇನೆಂಬೆ ವಿಧಿ ಮಾಡಿತ್ತ. ಸಮೆದ ಮಾಡಿಗಳು ನೆಲೆಗೊಳ್ಳದೆ ಹೋದವು. ಮಹಾಲಿಂಗ ತ್ರಿಪುರಾಂತಕನ ಶರಣರೆ ಎನ್ನೊಡೆಯರೆಂದರಿಯದೆ ಇದ್ದ ಕಾರಣ ತೆರಹು ಮರಹಿನಲ್ಲಿ ತಾವೆಡೆಗೊಂಡವು.
--------------
ಕಿನ್ನರಿ ಬ್ರಹ್ಮಯ್ಯ
ಧ್ಯಾನದಲ್ಲಿ ಕುಳ್ಳಿರ್ದು, ಜ್ಞಾನದಲ್ಲಿ ನೋಡಿ, ಮೌನ ಮುಗ್ಧವ ಮಾಡಿ, ಸ್ವಾನುಭಾವದಿಂದರಿದು, ಮತ್ತೇನೇನು ಹೊದ್ದಲೀಯದೆ, ತಾನು ತಾನಾಗಿ, ಜ್ಞಾನಕ್ಕತೀತನಾಗಿ, ಧ್ಯಾನ ಧಾರಣ ಸಮಾಧಿಯ ಮೆಟ್ಟಿ ನಿಂದ ನಿಜಲಿಂಗೈಕ್ಯಂಗೆ ನಮೋ ನಮೋ ಎಂಬೆ. ಇಂದೆನ್ನ ಭವ ನಷ್ಟವಾಗಿ ಹೋದವು ಕಾಣಾ, ಬಸವಪ್ರಿಯ ಕೂಡಲಚೆನ್ನ ಬಸವಣ್ಣಾ.
--------------
ಹಡಪದ ಅಪ್ಪಣ್ಣ
ಕೃತಯುಗ, ತ್ರೇತಾಯುಗ, ದ್ವಾಪರಯುಗ, ಕಲಿಯುಗಂಗಳು ಭವರಾಟಳದಲ್ಲಿ ತಿರುಗುತ್ತಿಪ್ಪಲ್ಲಿ ಅನಂತ ಕೋಟ್ಯನುಕೋಟಿ ಯುಗಂಗಳು ಮಡಿದುಹೋದವು, ಅನಂತ ಜಲಪ್ರಳಯಂಗಳು ಸುರಿದು ಹೋದವು. ಹದಿನಾಲ್ಕು ಲೋಕಂಗಳೆಂಬ ಅನಂತಕೋಟಿ ಬ್ರಹ್ಮಾಂಡಗಳೆಲ್ಲ ಲಯವಾಗಿ ಹೋದವು. ಇದರೊಳಗೆ ಆವ ಲೋಕದಲ್ಲಿ ಆವ ಯುಗದಲ್ಲಿ ಪ್ರಾಣಲಿಂಗ, ಲಿಂಗಪ್ರಾಣವೆಂಬ ಭೇದವನರುಹಿದವರಾರು ಹೇಳಾ ಗಂಗೆ ಗೌರೀವಲ್ಲಭರು ಮೊದಲಾದ ಅನಂತಕೋಟಿ ರುದ್ರಾದಿಗಳೆಲ್ಲರೂ ಪ್ರಾಣಲಿಂಗಸಂಬಂಧದ ಹೊಲಬನರಿಯದೆ ಅಣಿಮಾದಿ ಚತುರ್ವಿಧ ಫಲಪ್ರಾಪ್ತಿಗೆ ಒಳಗಾದರು. ಶಿವಾಚಾರದ ವಿಚಾರವನರಿಯದೆ ಜಗವು ಕೆಟ್ಟುಹೋಹುದೆಂದು ಪರಮಪುರುಷಾರ್ಥಕಾರಣವಾಗಿ ಮತ್ರ್ಯದಲ್ಲಿ ಅವತರಿಸಿ,ಗುರುಲಿಂಗಜಂಗಮಪಾದೋದಕಪ್ರಸಾದವೆಂಬ ಪಂಚಾಚಾರಸ್ಥಲವ ನೆಲೆಗೊಳಿಸಿ, ಷಡುಸ್ಥಲವೆಂಬ ಮಹಾನುಭಾವಮಂ ಕರತಳಾಮಳಕವಾಗಿ ಸ್ಥಿತಗೊಳಿಸಿ, ಪ್ರಾಣಲಿಂಗ, ಲಿಂಗಪ್ರಾಣವೆಂಬ ಭೇದವನೆನಗೆ ತಿಳುಹಿ, ಎನ್ನ ಭ್ರಾಂತಿಸೂತಕವ ಬಿಡಿಸಿ, ಲಿಂಗೈಕ್ಯವೆಂಬುದೆನಗೆ ತೋರಿದೆಯಾಗಿ ನಿನ್ನಿಂದಲಾನು ಸಂಗನಬಸವಣ್ಣನೆಂಬ ಹೆಸರುವಡೆದನು. ಕೂಡಲಸಂಗಮದೇವರು ಸಾಕ್ಷಿಯಾಗಿ ಎನಗೆ ನೀನು ಪರಮಾರಾಧ್ಯ ಕಾಣಾ, ಚೆನ್ನಬಸವಣ್ಣಾ.
--------------
ಬಸವಣ್ಣ
ಹಸಿವು ತೃಷೆಯಾದಿಗಳು ಎನ್ನೊಳಗಾದ ಬಳಿಕ, ವಿಷಯ ವಿಕಾರವೆನ್ನನಿರಿಸಿ ಹೋದವು ಕಾಣಾ ತಂದೆ. ಅದೇ ಕಾರಣ ನೀವು ಅರಸಿಕೊಂಡು ಬಂದಿರಣ್ಣ. ನೀವು ಅರಸುವ ಅರಕೆ - ಎನ್ನೊಳಗಾಯಿತ್ತು. ಎನ್ನ ದೇವ ಚೆನ್ನಮಲ್ಲಿಕಾರ್ಜುನ ತನ್ನೊಳಗೆನ್ನನಿಂಬಿಟ್ಟುಕೊಂಡನಾಗಿ ಇನ್ನು ನಿನ್ನ ತಂದೆ ತಾಯಿತನವನೊಲ್ಲೆ ನಾನು.
--------------
ಅಕ್ಕಮಹಾದೇವಿ
ಐದಾನೆಯ ಬೆನ್ನಲ್ಲಿ ಐದು ಒಂಟೆ ಹೋದವು, ಒಂಬತ್ತು ಸಾವಿರ ಕುದುರೆಯನು ಒಂದು ಎಳಗ ಎಯ್ದಿಸುತ್ತಿದ್ದಿತ್ತು. ಅರೆಮರುಳಾದವನ ನೆರೆ ಮರುಳಾದವ ಬಲ್ಲನೆ ? ಕುರುಬ ಕುರಿಯ ಹಾಲ ಕರೆದು ಒಲೆಯ ಮೇಲಿಕ್ಕೆ, ಇಕ್ಕಿದ ಹಾಲ ಬೆಕ್ಕು ಕುಡಿಯಿತ್ತು, ಬೆಣ್ಣೆಯ ಮುಂದಿಟ್ಟುಕೊಂಡಳುತಿರ್ದ ಕಾಣಾ ಗುಹೇಶ್ವರಾ
--------------
ಅಲ್ಲಮಪ್ರಭುದೇವರು
ಕಾಯದಲ್ಲಿ ಕಾಯ ಸವೆದು, ಪ್ರಾಣದಲ್ಲಿ ಪ್ರಾಣ ಸವೆದು_ನಿಶ್ಚಿಂತವಾದ ಬಳಿಕ ಹಸಿವು_ತೃಷೆಗಳೆಂಬವು ಅಳಿದು ಹೋದವು ನೋಡಾ. ಉಂಡಿಹೆನೆಂಬ ಬಯಕೆಯಿಲ್ಲ ಒಲ್ಲೆನೆಂಬ ವೈರಾಗ್ಯವಿಲ್ಲ. ಇದು ಸ್ವಾನುಭಾವತೃಪ್ತಿಯೊಳಡಗಿತ್ತು. ಇದು ಕಾರಣ_ನಮ್ಮ ಗುಹೇಶ್ವರಲಿಂಗಕ್ಕೆ ಆರೋಗಣೆ ಇಲ್ಲ ಕಾಣಾ ಸಂಗನಬಸವಣ್ಣಾ.
--------------
ಅಲ್ಲಮಪ್ರಭುದೇವರು
ಹಿಂದೆ ಅನಾದಿಕಾಲದಲ್ಲಿ ಲೆಕ್ಕವಿಲ್ಲದ ಯುಗಂಗಳು ಹೋದವು. ದ್ವಯಮುಖರು ಅದ್ವಯಮುಖರು ಸ್ವತಂತ್ರಮುಖರು ಸನ್ನಹಿತಮುಖರು ಉಗ್ರಮುಖರು ಉತ್ಪತ್ಯಕ್ಕೆ ಹೊರಗಾದ ಮುಖರು ಸ್ಥಿತಿಗತಿಯಿಂದರಿಯದ ಮುಖರು ಸರ್ವವಿಸ್ತೀರ್ಣದೊಳಗುಳ್ಳ ಮುಖರು ಅಷ್ಟತನುಮೂರ್ತಿ ಮೊದಲಾದ ಅನಂತಮೂರ್ತಿಗಳೆಲ್ಲ ದೇವಾರಾಧನೆ ಪೂಜಕರಾದರಲ್ಲದೆ ಭಕ್ತಮುಖರಲ್ಲ. ಸಂಸಾರ ಸಂಗದೊಳಗಿದ್ದವರಲ್ಲ. ಇಂಥ ಮುಖರೆಲ್ಲ ಅಂತಿರಲಿ. ಇಲ್ಲದ ನಿರವಯವ ಆಕಾರಕ್ಕೆ ತಂದು, ಜಂಗಮಲಿಂಗವೆನಿಸಿ ಸಾಹಿತ್ಯವ ಮಾಡಿದಾತ ಬಸವಣ್ಣನು. ಇದನರಿದು ಧನ್ಯನಾದೆನೆಂಬೀತ ಪರುಷದೊಳಗು. ಈ ಕ್ರಮವನರಿಯದೆ, ಅನಂತ ಮತವ ಹಿಡಿದು ಭೂಭಾರಕರಾದರು. ಅವರ ಮುಟ್ಟಿ, ಲಿಂಗಕ್ಕೆ ಕೊಟ್ಟು ಕೊಂಡಡೆ ಪ್ರಸಾದವಾಗದೆಂದು ಜಂಗಮಕ್ಕೆ ಅರ್ಪಿಸಿದ ನಿತ್ಯಪ್ರಸಾದವೆನಗೆ ಬಸವಣ್ಣನ ಪ್ರಸಾದ. ಆ ಬಸವಣ್ಣನ ಪ್ರಸಾದವೆ ಎನಗೂ ನಿನಗೂ ವಿಸ್ತಾರವಾಗಿತ್ತು ಕಾಣಾ, ಕಲಿದೇವಯ್ಯ.
--------------
ಮಡಿವಾಳ ಮಾಚಿದೇವ
ಇನ್ನಷ್ಟು ... -->