ಅಥವಾ
(2) (5) (1) (2) (4) (0) (0) (0) (5) (0) (1) (0) (0) (0) ಅಂ (0) ಅಃ (0) (25) (0) (4) (0) (0) (1) (0) (2) (0) (0) (0) (0) (1) (0) (0) (4) (0) (0) (0) (7) (2) (0) (9) (2) (5) (1) (1) (0) (4) (4) (0) (0) (4) (3) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಆದಿ ಮಧ್ಯ ಅವಸಾನ ಉಚಿತದ ಸಾವಧಾನವ ಎಚ್ಚರಿಕೆಯಲ್ಲಿ ಅಸು ಅಡರುವಾಗ ದೆಸೆದಿಕ್ಕಿನಲ್ಲಿ ಕುಚಿತ್ತ ಭಾವವಿಲ್ಲದೆ ಅಂತರಿಕ್ಷ ಸುಮಾನತೆಯಲ್ಲಿ, ದ್ವಾರದಲ್ಲಿ ನೀರೆಯ್ದುವಂತೆ, ಸ್ಫಟಲದಲ್ಲಿ ಪನ್ನಗ ಹೋಹಂತೆ, ಕುಸುಮದಲ್ಲಿ ಗಂಧ ಸಂಚಾರದಲ್ಲಿ ಸಂಗವ ಮಾಡಿದಂತೆ, ಮಿಂಚಿನಲ್ಲಿ ತೋರಿದ ಕುಡಿವೆಳಗಿನ ಗೊಂಚಲ ಸಂಚಲದಂತೆ, ಅಂಚೆ ಸೇವಿಸುವ ಪಯ ಉದಕದ ಹಿಂಚುಮುಂಚನರಿದಂತಿರಬೇಕು. ಸಂಚಿತ ಆಗಾಮಿ ಪ್ರಾರಬ್ಧಕ್ಕೆ ಹೊರಗಾದ ಮಹಂತನ ಐಕ್ಯದಿರವು. ಕಂಚಿನ ನಾದ ಸಂಚಾರ ಮುಂಚಿದಲ್ಲಿಯೆ ಲಯ ನಾರಾಯಣಪ್ರಿಯ ರಾಮನಾಥಾ.
--------------
ಗುಪ್ತ ಮಂಚಣ್ಣ
ಆಡು ತೋಳನ ಮುರಿದಾಗ, ಮೊಲ ನಾಯ ಕಚ್ಚಿತ್ತು. ಕಚ್ಚುವುದ ಕಂಡು ಹದ್ದು ಹಾರಲಾಗಿ ಆ ಹದ್ದ ಹಾವು ಕಚ್ಚಿ ಸತ್ತಿತ್ತು; ವಿಷವೇರಿ ಹೋಯಿತ್ತು ಗಾರುಡ. ನಾರಾಯಣಪ್ರಿಯ ರಾಮನಾಥನಲ್ಲಿ ಐಕ್ಯಾನುಭಾವಿಯಾದ ಶರಣಂಗೆ.
--------------
ಗುಪ್ತ ಮಂಚಣ್ಣ
ಆತ್ಮ ತೇಜದಿಂದ ಹೋರುವ ಮಿಥ್ಯಾಭಾವಿಗೆ ನಿಜತತ್ವದ ಮಾತೇಕೆ? ವೇದ ಶಾಸ್ತ್ರ ಪುರಾಣ ಆಗಮಂಗಳಲ್ಲಿ ಬಲ್ಲವರಾದಡೆ ವಾದಕ್ಕೆ ಹೋರಿಹೆನೆಂಬ ಸಾಧನವೇಕೆ? ಇಷ್ಟನರಿವುದಕ್ಕೆ ದೃಷ್ಟ ಕುಸುಮ ಗಂಧದ ತೆರದಂತೆ; ಅನಲ ಅನಿಲನ ತೆರದಂತೆ; ಕ್ಷೀರ ನೀರಿನ ತೆರದಂತೆ; ಅದು ತನ್ನಲ್ಲಿಯೆ ಬೀರುವ ವಾಸನೆ. ನಾರಾಯಣಪ್ರಿಯ ರಾಮನಾಥನಲ್ಲಿ ಐಕ್ಯಾನುಭಾವಿಯಾದ ಶರಣ.
--------------
ಗುಪ್ತ ಮಂಚಣ್ಣ
ಆನು ನಾಮದ ದಾಸನಲ್ಲದೆ ದಾಸೋಹದ ದಾಸನಲ್ಲಯ್ಯ. ಆನು ಹರಿಭಕ್ತನಲ್ಲದೆ ಶಿವಭಕ್ತನಲ್ಲಯ್ಯ. ಎನಗೆ ಶಿವಭಕ್ತಿ ನೆಲೆಗೊಳ್ಳದಯ್ಯ. ನೀನೆ ಎನಗೆ ಕೃಪೆಮಾಡಾ ನಾರಾಯಣಪ್ರಿಯ ರಾಮನಾಥಾ.
--------------
ಗುಪ್ತ ಮಂಚಣ್ಣ
ಆನರಿದ ಭಕ್ತಿತ್ರಯ ಎಂತುಟೆಂದಡೆ: ತ್ರಿವಿಧ ಲಿಂಗ, ತ್ರಿವಿಧ ಗುರು, ತ್ರಿವಿಧ ಜಂಗಮ ತ್ರಿವಿಧ ಪಾದೋದಕ, ತ್ರಿವಿಧ ಪ್ರಸಾದ, ತ್ರಿವಿಧ ಆತ್ಮ; ತ್ರಿವಿಧ ಬುದ್ಧಿಯಲ್ಲಿ ತ್ರಿವಿಧ ಅರ್ಪಿತ ತ್ರಿವಿಧ ಅವಧಾನಂಗಳಿಂದ ತ್ರಿವಿಧ ಭೇದೋಪಭೇದಗಳಲ್ಲಿ ಎಚ್ಚತ್ತು, ತ್ರಿವಿಧ ಗುಣದಲ್ಲಿ ತ್ರಿವಿಧವನರಿತು, ತ್ರಿವಿಧ ಗುಣದಲ್ಲಿ ತ್ರಿವಿಧವ ಮರೆದು, ಅರಿದೆ ಮರೆದೆನೆಂಬ ಈ ಉಭಯ ನಷ್ಟವಾಗಿ ನಿಂದುದೆ ಸಾತ್ವಿಕ ಭಕ್ತಿ, ಸಜ್ಜನ ಯುಕ್ತಿ, ನಾರಾಯಣಪ್ರಿಯ ರಾಮನಾಥಾ.
--------------
ಗುಪ್ತ ಮಂಚಣ್ಣ