ಅಥವಾ

ಒಟ್ಟು 30 ಕಡೆಗಳಲ್ಲಿ , 15 ವಚನಕಾರರು , 27 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಲೆಯ ಮನೆಯೊಳಗಣ ಕಿಚ್ಚು ಅಲೆದಾಡದ ಮುನ್ನ, ಊರ ಮುಂದೆ ನಾಲ್ವರು ಸತ್ತು ಒಳಗೆ ಬೇವುದ ಕಂಡೆ. ಊರು ಬೆಂದು, ಕಿಚ್ಚಿನ ಊನ್ಯವ ಕೇಳಬಂದ ರಕ್ಷಿ, ಹುಲಿಯನೇರಿಕೊಂಡು ಕಳೆದುಳಿದುದಕ್ಕೆ ತಾನೊಡತಿಯಾಗಿ ಊರುಂಬಳಿಯನುಂಬುದ ಕಂಡೆ. ಅತ್ತುದೊಂದಲ್ಲದೆ ಹೆಣ ಬಂದು ಕಚ್ಚದಿದೇನು ಚೋದ್ಯದ ದುಃಖ ಹೇಳಾ ! ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಅಂತರಂಗದನುವ ಬಹಿರಂಗಕ್ಕೆ ಬೆರಸಿತಂದು ಹಿಡಿ ಹಿಡಿದು ನಡೆವುದೊಂದು ಕಡುಜಾಣದಾಗು, ಈ ಕುರುಹಿನೊಳು ನಿಂದು ಹೊರಗಣನೆರವಿಯ ಗುದ್ದಾಟಕ್ಕೆ ಸೆರೆಸೂರೆಹೋಯಿತ್ತು ಒಳಗಣ ಒಡವೆ ಊರು ಹಾಳಾದಲ್ಲಿ ಕ್ಷೇತ್ರದ ಸುಖವಾರಿಗೆ ? ಗುರುನಿರಂಜನ ಚನ್ನಬಸವಲಿಂಗ ಒಳಹೊರಗೆ ತನ್ನ ತಾ ನೋಡುತಾಡುತಿರ್ಪನು.
--------------
ದೇಶಿಕೇಂದ್ರ ಸಂಗನಬಸವಯ್ಯ
ಮಣ್ಣ ತುಳಿದು ಮಡಿಕೆಯ ಮಾಡಿ ಆವಿಗೆಯನೊಟ್ಟಿ ಸುಡುವಲ್ಲಿ, ಅಗ್ನಿ ಸುಟ್ಟು ಮಡಿಕೆ ಉಳಿಯಿತ್ತು, ಹರವಿಯ ಉಪಚಾರುಳ್ಳವಂಗೆಕೊಟ್ಟು. ಉಪಚಾರಿಲ್ಲದವನ ಕೊಂದು, ಗುಡುಮಿಯ ಉಪಚಾರ ಇಲ್ಲದವಂಗೆ ಕೊಟ್ಟು ಉಪಚಾರುಳ್ಳವನ ಕೊಂದು, ಕಿಡಿಕಿಯ ಕುಲಗೇಡಿಗೆ ಕೊಟ್ಟು, ಭವಗೇಡಿಯ ಕೊಂದು, ಮೂರೆರಡು ಮಡಕಿಯ ಆರೂರವರಿಗೆ ಕೊಟ್ಟು ಈರಾರು ಈರೆಂಟು ಕೊಂದು, ಉಳಿದ ಮಡಕಿಯ ಊರೆಲ್ಲ ಮಾರಲು, ಊರು ಸುಟ್ಟು ಜನರೆಲ್ಲ ಸತ್ತು, ಸತ್ತವರ ಹೊತ್ತು ಸತ್ತು ಕಾಯಕವ ಮಾಡುತ್ತಿರ್ಪರು ನೋಡೆಂದನಯ್ಯಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಗೇಣಗಲದ ಹಳ್ಳ ಕುಡಿಯಿತ್ತು ಸಪ್ತಸಮುದ್ರದುದಕವ. ಗಾವುದ ಹಾದಿಯ ಊರು ಭುವನ ಹದಿನಾಲ್ಕು ಲೋಕವ ನುಂಗಿತ್ತು. ಮನೆಯೊಳಗಣ ಒರಳು ಜಂಬೂದ್ವೀಪ ನವಖಂಡ ಪೃಥ್ವಿಯ ನುಂಗಿತ್ತು. ನುಂಗಿದ ಮುಚ್ಚಳಿಗೆ ತೆರಹಿಲ್ಲದೆ ಮತ್ತೆ ಆ ಮನೆಯ ನುಂಗಿತ್ತು. ಇಂತೀ ಒಳಗಾದವನೆಲ್ಲ ಪತಂಗ ನುಂಗಿತ್ತು. ನುಂಗಿದ ಪತಂಗ ಹಿಂಗಿಯಾಡುತ್ತಿದ್ದಿತ್ತು. ಕಂಡಿತ್ತು ಬೆಂಕಿಯ ಬೆಳಗ, ಬಂದು ಸುಖಿಸಿಹೆನೆಂದು ಹೊಂದಿ ಹೋಯಿತ್ತು. ಇದರಂದವ ತಿಳಿ, ಲಿಂಗೈಕ್ಯನಾದಡೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಜಗತ್‍ಸೃಷ್ಟನಹ ಅಜನ ಕೊಂಬು ಮುರಿಯಿತ್ತು. ಧರೆಯ ಚಂದ್ರಸೂರ್ಯರಿಬ್ಬರೂ ನೆಲಕ್ಕೆ ಬಿದ್ದರಲ್ಲಾ ! ಉದಯ ನಿಂದಡೆ ಅಸ್ತಮಾನವಹುದು. ಊರು ಬೆಂದು ಉಲುಹಳಿದುದು. _ಇದೇನು ಸೋಜಿಗವೊ ! ದೇವ ಸತ್ತ ದೇವಿ ಕೆಟ್ಟಳು, ಆನು ಬದುಕಿದೆನು ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಅಯ್ಯಾ, ನಾನು ಊರ ಮರೆದು ಆಡ ಹೋದಡೆ, ಒಕ್ಕಲು ಹೆಚ್ಚಿ ಸೊಕ್ಕಾಟ ಘನವಾಯಿತ್ತು. ಇದ ಕಂಡು ಊರ ಹೊಕ್ಕೆ, ಸ್ಥಾನದಲ್ಲಿ ನಿಂದೆ, ಒಂಬತ್ತು ಬಾಗಿಲ ಕದವನಿಕ್ಕಿದೆ. ಆ ಜ್ಞಾನಾಗ್ನಿಯ ಹೊತ್ತಿಸಲು, ಉರಿ ಎದ್ದಿತ್ತು, ಉಷ್ಣ ಊರ್ದ್ವಕ್ಕೇರಿತ್ತು. ತಲೆಯೆತ್ತಿ ನೋಡಲು, ಒಕ್ಕಲು ಓಡಿತ್ತು, ಊರು ಬಯಲಾಯಿತ್ತು. ಆ ಬಯಲನೆ ನೋಡಿ, ನಿರಾಳದೊಳಗಾಡಿ ಮಹಾಬೆಳಗನೆ ಕೂಡಿ, ಸುಖಿಯಾದರಯ್ಯಾ ನಮ್ಮ ಅಪ್ಪಣ್ಣಪ್ರಿಯ ಚೆನ್ನಬಸವಣ್ಣನ ಶರಣರು.
--------------
ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ
ಊರ ಮೇಲೆ ಊರ ಕಂಡೆ, ನೀರ ಮೇಲೆ ನೀರ ಕಂಡೆ. ಮರನ ಮೇಲೆ ಮರನ ಕಂಡೆ, ಗಿರಿಯ ಮೇಲೆ ಗಿರಿಯ ಕಂಡೆ. ಉರಿಯ ಮೇಲೆ ಉರಿಯ ಕಂಡೆ. ಈ ಭಾರವ ತಾಳಲಾರದೆ, ಆ ಉರಿಯೆ ಎದ್ದು ಊರು ಬೆಂದಿತ್ತು, ನೀರು ಬೆಂದಿತ್ತು, ಮರನು ಬೆಂದಿತ್ತು, ಗಿರಿಯು ಬೆಂದಿತ್ತು. ಆ ಉರಿ ಉಳಿಯಿತ್ತು, ಆ ಉರಿಯನೆರದು ಸಿರಿಯ ಸೆಳದು ಪರಮಸುಖಪರಿಣಾಮದೊಳೋಲಾಡುತ್ತ , ನಿಮ್ಮ ಬರವನೆ ಹಾರುತಿರ್ದೆನಯ್ಯಾ, ಬಸವಪ್ರಿಯ ಕೂಡಲಚೆನ್ನಬಸವಣ್ಣಾ.
--------------
ಹಡಪದ ಅಪ್ಪಣ್ಣ
ಮುಂದೆ ಮಾಡಿದ ಕರ್ಮ ಬೆನ್ನಟ್ಟಿ ಬರುವಾಗ, ಅದಕಿನ್ನು ದೇವರ ಹರಕೆಯೆಂದು ನುಡಿಯಲೇಕೆ ? ಭ್ರಷ್ಟರಿರಾ ಕೇಳಿರೌ. ಮಾನವನಾಗಿ ಹುಟ್ಟಿ, ಕೊರಳಲ್ಲಿ ಕವಡಿಯ ಕಟ್ಟಿ, ಶ್ವಾನನಾಗಿ ಬೊಗಳುವುದು ಮುನ್ನಿನ ಕರ್ಮದ ದೆಸೆಯಲ್ಲದೆ, ವಗ್ಗನ ಕರೆತಂದು, ಮೈಲಾರನ ಹರಕೆ ಮುಟ್ಟಿತೆಂದು ನೀಡುವವನೊಬ್ಬ ಹಳೆನಾಯಿ. ಮೈಲಾರನ ಪೂಜಿಸುವರೆಲ್ಲ ನಾಯಾಗಿ ಹುಟ್ಟುವುದು ತಪ್ಪದು. ಉಟ್ಟುದ ಬಿಟ್ಟು ಅರಣ್ಯವಾಸಿಯ ಕಂಡರೆ ಬತ್ತಲೆ ಐದನೆ ಲಜ್ಜೆಭಂಡನೆಂದು ನುಡಿವರು. ಯೋನಿಯ ತೆರೆದು, ಬತ್ತಲೆಯಾಗಿ, ಚಿಕ್ಕದು ದೊಡ್ಡದು, ಹೆಣ್ಣು ಗಂಡು ಊರು ರಾಜ್ಯವೆಲ್ಲ ನೋಡುವಂದದಿ ನಡೆವರು. ನಡೆದು ನಮ್ಮ ಮಲ್ಲಾರಿಯ ಹರಕೆ ಮುಟ್ಟಿತೆಂದು ನುಡಿವ ಖೊಟ್ಟಿಗಳು ಇದು ತಮ್ಮ ಪೂರ್ವದ ಕರ್ಮವೆಂದರಿಯರು ನೋಡಾ. ಕಬ್ಬಿಣವಂಕಿಯ ತಮ್ಮ ತನುವಿಗೆ ಸಿಕ್ಕಿಸಿಕೊಂಡು ಪಾಶದಲ್ಲಿ ಹಳಿಗೆ ಕಟ್ಟಿ, ಅಂತರದಲ್ಲಿ ತಿರುವಿ, ಸಿಡಿಯೆಂದಾಡಿ, ಉಡುಚು ಮಾರಿ ಮಸಣಿಯೆಂಬ ಕೇತು ಭೂತ ದೈವವ ಪೂಜೆಮಾಡುವವರೆಲ್ಲ ಪ್ರೇತ ಭೂತಗಳಾಗಿ ಹುಟ್ಟುವದು ತಪ್ಪದು ನೋಡಾ. ಗುರುಲಿಂಗಜಂಗಮ ನಿಂದಿಸುವ ನಾಲಗೆ[ಗೆ] ಶಸ್ತ್ರವನೂರಿಸುವ, ಗುರುಲಿಂಗಜಂಗಮಕೆರಗದೆ ಪರದೈವಕೆರಗುವನ ತಲೆಯೊಳು ಬೆಂಕಿಯ ಹೊರಿಸುವ, ಶಿವನರಿಯಬಾರದೆ ? ಗುರುಲಿಂಗಜಂಗಮಕಡಿಯಿಡದೆ, ಪರದೈವಕಡಿಯಿಡುವನ ಕಾಲಿಂಗೆ ಕೆಂಡವನಿಕ್ಕುವ ಶಿವನರಿಯಬಾರದೆ ? ಇದು ನಮ್ಮ ದೇವರ ಹರಕೆ, ಅಗ್ನಿಗೊಂಡ ಗುಗ್ಗುಳ ಶಸ್ತ್ರವೆಂದು ನುಡಿವರು. ಚಿಮಿಕಿ ಡೆಂಕಣಿ ಕಿಚ್ಚಿನಕೊಂಡ ಇರಿವ ಶಸ್ತ್ರಕದ ಮಿಟ್ಟಿಗೆ ಇಂತಿವು ಮುಖ್ಯವಾದ ನಾನಾ ಬಾಧನೆಗಳೆಲ್ಲ ಯಮನಲ್ಲುಂಟು. ಯಮನಲ್ಲುಂಟಾದ ದೃಷ್ಟಾಂತವ ಮತ್ರ್ಯದಲ್ಲುಂಟು ಮಾಡಿಕೊಂಡು ಬಾಧನೆಗೆ ಸಿಲ್ಕಿ, ದೇವರ ಹರಕೆಯು ಮುಟ್ಟಿತೆಂದು ನುಡಿವ ಅಜ್ಞಾನಿ ಹೊಲೆಯರ ಕಂಡು ನನ್ನೊಳು ನಾ ಬೆರಗಾಗುತ್ತಿದ್ದೆನಯ್ಯಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಹೊರಗೆ ನೋಡಿದರೆ ಬಯಲು, ಒಳಗೆ ನೋಡಿದರೆ ಬಯಲು, ಊರೊಳಗೆ ಆವು ಇಲ್ಲ, ಕೇರಿಯೊಳಗೆ ಕರುವು ಇಲ್ಲ. ಊರು ಕೇರಿಗಳ ನುಂಗಿತ್ತು ಒಂದು ಇರುಹೆ. ಇರುಹೆ ಹೋಯಿತ್ತು ತಾನು ತಾನಾದಲ್ಲಿಗೆ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಊರ ಮೇಗಡೆಯಲೊಂದು ನರಿ ಕೂಗಿಡಲು ಹರಡಿದ್ದವರೆಲ್ಲ ನೆರೆದು, ಇದೆಲ್ಲಿಯ ಕೂಗೆಂದು ವಿಚಾರಿಸಹೋದರೆ, ನೆರದವರನೆಲ್ಲರ ನರಿ ನುಂಗಲು, ಊರು ಹಾಳಾಯಿತ್ತು. ಹಾಳೂರೊಳಗಿದ್ದರಸು, ಪರಿವಾರವನರಸಲೆಂದು ಹೋದರೆ, ಆ ಅರಸನ ನುಂಗಿತ್ತು. ಆ ಅರಸನ ವಾಹನವ ನುಂಗಿ, ತನಗಾರೂ ಸರಿಯಿಲ್ಲವೆಂದು ಮೂರು ಮೊನೆಯ ಗಿರಿಯನೇರಿ ಬಟ್ಟಬಯಲಾಯಿತ್ತು, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ.
--------------
ಸ್ವತಂತ್ರ ಸಿದ್ಧಲಿಂಗ
ಶ್ರೀಗುರುಕರುಣಕಟಾಕ್ಷದೊಳ್ ಚಿದ್ಘನಲಿಂಗ ಅಂಗಸಂಬಂಧದಾಚರಣೆಯ ಸರ್ವಾಚಾರಸಂಪದವೆಂಬ ಪರಮಾಮೃತಮಂ ಸವಿದುಂಡುಪವಾಸಿ ಬಳಸಿಬ್ರಹ್ಮವಾಗಿ, ಪರಮಪಾತಕವೆಂಬ ಕಾಲ ಕಾಯ ಮಾಯಾಪಾಶ ಭವಸಾಗರವ ದಾಂಟಿ, ದೃಢಚಿತ್ತಿನೊಳ್ ನಿಂದ ನಿತ್ಯಸುಖಿಗಳು, ತಮ್ಮ ನಡೆ ನುಡಿ ತಮಗೆ ಸ್ವಯವಾಗಿ, ಸತ್ಯಶುದ್ಧದಿಂದ ಹಸ್ತಪಾದವ ದುಡಿಸಿ, ಮಾಡುಂಬ ಭಕ್ತನಾಗಲೀ, ಬೇಡುಂಬ ಮಹೇಶನಾಗಲೀ, ಅಂಗವಿಕಾರದ ಕಾಮ ಕ್ರೋಧ ಲೋಭ ಮೋಹ ಮದ ಮತ್ಸರವೆಂಬ ಅವಲಕ್ಷಣಮಂ ಜರಿದು ಮರೆದು ನಿರಾಸತ್ವದಿಂದ, ದೇಹಮೋಹಮನ್ನಳಿದುಳಿದು, ಅಪರಾಧ ಪ್ರಾಣಿಗಳಾಗಲಿ, ನಿರಪರಾಧ ಪ್ರಾಣಿಗಳಾಗಲಿ, ಕೊಲ್ಲದಿರ್ಪುದೆ ಧರ್ಮ, ಗಂಧ ರಸ ಮೊದಲಾದ ಪರದ್ರವ್ಯ ಒಲ್ಲದಿಪ್ಪುದೆ ಶೀಲ, ಗುರುಹಿರಿಯರುಗಳಿಗೆ ಪ್ರತಿ ಉತ್ತರವ ಕೊಡದಿಪ್ಪುದೆ ವ್ರತ, ಕ್ಷುತ್ತು ಪಿಪಾಸಾದಿಗಳಿಗೆ ಅಳುಕದಿಪ್ಪುದೆ ನೇಮ, ಕುಲಾದಿ ಅಷ್ಟಮದಗಳಿಗೆಳಸದಿಪ್ಪುದೆ ನಿತ್ಯ. ಇಂತೆಸೆವ ಪಂಚಪರುಷವ ಬಾಹ್ಯಾಂತರಂಗದಲ್ಲಿ ಪರಿಪೂರ್ಣಭಾವದಿಂದ ತುಂಬಿತುಳುಕಾಡುತ, ಶ್ರಿಗುರುಲಿಂಗಜಂಗಮದ ಷಟ್ಸಾ ್ಥನದಲ್ಲಿ ಷಡ್ವಿಧಲಿಂಗ ಮಂತ್ರಪ್ರಣಮಂಗಳು ಸಂಬಂಧವಾಗಿಪ್ಪುದ ಶ್ರುತಿಗುರುಸ್ವಾನುಭಾವದಿಂದರಿದು, ತನ್ನ ಬಳಿವಿಡಿದು ಬಂದ ಸುಪದಾರ್ಥವ ಆ ಗುರುಚರಪರಕ್ಕೆ ಪುಷ್ಪ ಮೊದಲಾದ ಸುಗಂಧವ ಪವಿತ್ರಮುಖದಿಂದ ನಿವೇದಿಸಿದಲ್ಲಿ ಆಚಾರಲಿಂಗಕ್ಕೆ ಸಮರ್ಪಣೆಯಾಗಿಪ್ಪುದು. ಹಣ್ಣು ಮೊದಲಾದ ಸುರಸದ್ರವ್ಯವ ಸುಪವಿತ್ರಗಳಿಂದ ಸುಪವಿತ್ರಮುಖದೊಳ್ ಸಮರ್ಪಿಸಿದಲ್ಲಿ ಗುರುಲಿಂಗಕ್ಕೆ ಸಮರ್ಪಣೆಯಾಗಿಪ್ಪುದು. ಪೀತ ಶ್ವೇತ ಮೊದಲಾದ ಸಮಸ್ತ ಚಿತ್ರವಿಚಿತ್ರಂಗಳ ಸ್ವರೂಪವನು ಮಹಾಜ್ಞಾನಸೂತ್ರವಿಡಿದು ಯೋಗ್ಯವೆನಿಸಿ ನಿವೇದಿಸಿದಲ್ಲಿ ಶಿವಲಿಂಗಕ್ಕೆ ಸಮರ್ಪಣೆಯಾಗಿರ್ಪುದು. ಕೌಪ ಕಟಿಸೂತ್ರ ಮೊದಲಾದ ವಸ್ತ್ರಾಭರಣಗಳ ಯೋಗ್ಯವೆನಿಸಿ ತಟ್ಟುವ ಮುಟ್ಟುವ ಶೀತುಷ್ಣಾದಿ ಸತ್ಕ್ರಿಯವಿಡಿದು ಸಮರ್ಪಿಸಿದಲ್ಲಿ ಚರಲಿಂಗಕ್ಕೆ ಸಮರ್ಪಣೆಯಾಗಿರ್ಪುದು. ಶಿವಾನುಭಾವಪ್ರಸಂಗ ಘಂಟೆ ತಂತಿ ಚರ್ಮ ಮೊದಲಾದ ಸುಶಬ್ದಂಗಳ ಸತ್ಯಶುದ್ಧ ತ್ರಿಕರಣವಿಡಿದು ಪವಿತ್ರತೆಯಿಂದ ನಿವೇದಿಸಿದಲ್ಲಿ ಪ್ರಸಾದಲಿಂಗಕ್ಕೆ ಸಮರ್ಪಣೆಯಾಗಿರ್ಪುದು. ಈ ಸಕಲ ಸಂತೋಷವಾದ ಮತ್ತೆ ಹೊನ್ನು ಹೆಣ್ಣುಗಳ ಗಣಸಾಕ್ಷಿಯಾಗಿ, ಸತ್ಯಸಾವಧಾನದಿಂದೆ ಧಾರೆಯನೆರೆದು, ಶಿವದೀಕ್ಷೋಪದೇಶಗಳಿಂದ ಸುಪವಿತ್ರವೆಂದೆನಿಸಿ ನಿವೇದಿಸಿದಲ್ಲಿ ಮಹಾಲಿಂಗಕ್ಕೆ ಸಮರ್ಪಣೆಯಾಗಿರ್ಪುದು. ಈ ಪ್ರಕಾರದಿಂದ ಸತ್ಯಶುದ್ಧಕಾಯಕದೊಳು ತನಗುಳ್ಳ ಸುಪದಾರ್ಥದ್ರವ್ಯವ ನಿಜೇಷ್ಟಾರ್ಪಣ ಪರದಿಂದೆ ಲಿಂಗಾರ್ಪಣವ ಸಮರ್ಪಿಸಬಲ್ಲಾತನೆ ಷಟ್‍ಸ್ಥಲಭಕ್ತ ಮಹೇಶ್ವರರೆಂಬೆನು. ಈ ಷಡ್ವಿಧ ದ್ರವ್ಯಪದಾರ್ಥಂಗಳು ದೊರೆಯದಿದ್ದರೆ ಮೂಲಚಿತ್ತ ಮೊದಲಾದ ಅಂಗ ಮನ ಪ್ರಾಣ ಇಂದ್ರಿಯ ಕರಣ ವಿಷಯಂಗಳ ಆ ಶ್ರೀಗುರುವಿಂಗೆ ಜಂಗಮದ ಸೊಮ್ಮುಸಂಬಂಧದಲ್ಲಿ ನಿಲಿಸುವುದೆ ಸರ್ವಾಂಗಲಿಂಗಾರ್ಪಣವಾಗಿರ್ಪುದು. ಇದರೊಳಗೆ ತನು ನೋಯದೆ, ಮನ ಕರಗದೆ, ಭಾವ ಬಳಲಿಸದೆ, ಅತಿ ಸುಯಿಧಾನದಿಂದ ನಿಃಕಳಂಕ ಪರಶಿವ ಪಾದೋದಕ ಪ್ರಸಾದ ಮಂತ್ರದ ಪರಶಿವತತ್ವದಲ್ಲಿ ಪರಿಪೂರ್ಣರಾಗಿರ್ಪುದೆ ಅನಾದಿಪ್ರಮಥಗಣಮಾರ್ಗವು. ಇಂತೆಸೆವ ಸಚ್ಚಿದಾನಂದದ ಪರಮಾನುಭಾವ ಸನ್ಮಾರ್ಗವನುಳಿದು ಸರ್ವಾಚಾರಸಂಪನ್ನ ಬಾಹ್ಯರಾದ ಕಿರಾತರಂತೆ, ಭಂಗಿ ಗಾಂಜಿ ಗುಡಾಕು ತಂಬಾಕದ ಚಿಲುಮೆ ಕಡ್ಡಿ ಹುಡಿ ನಾಸಿಬುಕುಣಿಯೆಂದು ಭುಂಜಿಸಿ, ಹುಚ್ಚನಾಯಿ ಎಲುವ ಕಚ್ಚಿದಂತೆ, ದಿವರಾತ್ರಿಗಳಲ್ಲಿ ಪಾದೋದಕಪ್ರಸಾದದ್ವಾರವಾಗಿ ಪರಿಶೋಭಿಸುವಂತೆ ಪರಶಿವ ಪ್ರಾಣಲಿಂಗದ ಭೋಗಾಂಗದಲ್ಲಿಟ್ಟುಕೊಂಡು, ಭ್ರಾಂತು ಭೋಗಿಗಳಾಗಿ, ನಿಜಗೆಟ್ಟು, ತಮ್ಮ ತಾವರಿಯದೆ, ಪಿಶಾಚಿಮಾನವರಂತೆ ಇಂದ್ರಾದಿ ಹರಿಸುರಬ್ರಹ್ಮಾದಿಗಳು ಹೊಡೆದಾಡಿದ ಕರ್ಮದೋಕುಳಿಯಲ್ಲಿ ಬಿದ್ದೊದ್ದಾಡಿ ತೊಳಲುವ, ವನಿತಾದಿ ಆಸೆ, ಭೋಗದ ಆಸೆ ಪಾಶದೋಕುಳಿಯೆಂದರಿದು ಮರೆದು ನರಗುರಿಗಳಾಗಿ, ಬಾಯಿಗೆ ಬಾಯಿ ಹಚ್ಚಿ ಬೊಗಳಾಡುವುದೊಂದು ದುರಾಚಾರ. ರಾಜರಿಗೆ ರೊಕ್ಕವ ಕೊಟ್ಟು, ಯಂತ್ರ ಮಂತ್ರ ತಂತ್ರಗಳಿಂದೋಲೈಸಿ, ಮಲತ್ರಯವಿದೂರರೆಂದು ಪತ್ರ ಉತ್ರಗಳಲ್ಲಿ ಹೆಮ್ಮೆ ಹಿರಿತನಕ್ಕೆ ಬಿದ್ದು, ಅಂದಿನವರೆ ಇಂದಿನವರೆಂದು ಒಪ್ಪವಿಟ್ಟು, ನುಡಿನಡೆಹೀನರಾಗಿ, ಬಿಟ್ಟಿಮಲವನುಸರಿಸಿ, ತಥ್ಯ ಮಿಥ್ಯ ತಾಗುದ್ವೇಷಗಳಿಂದೆ ದಿವರಾತ್ರಿಗಳಲ್ಲಿ ತ್ರಿವಿಧವಸ್ಥೆಗಳ ಕಳೆದು, ಒಬ್ಬರೊಬ್ಬರು ಹೊಡೆದಾಡುವುದೊಂದು ದುರಾಚಾರ. ಇಂತಲ್ಲದೆ, ಮಿಲಂಚರಾಕ್ಷಸರ ಅರವತ್ತುನಾಲ್ಕು ವಿದ್ಯೆ ಬತ್ತೀಸಾಯುಧಗಳ ಕಟ್ಟಿ, ತಳ್ಳಿತಗಾದಿಗಳಿಂದ ಹೊಲ ಗದ್ದೆ ಬಣಮೆಗಳ ಸುಟ್ಟು, ಅನಂತ ಹಿಂಸೆಗಳ ಮಾಡಿ, ಊರು ಕೇರಿ ಪೇಟೆ ಪಟ್ಟಣಗಳ ಸುಲಿದು, ಹಾದಿ ಬೀದಿಯ ಬಡಿದು, ಮತ್ತೆ ನಾಚಿಕೆಯಿಲ್ಲದೆ ನಾವು ವೀರಶೈವಘನದ ಭಕ್ತಮಹೇಶ್ವರರೆಂದು, ನಡೆಗೆಟ್ಟು ನುಡಿಯ ನುಡಿವುದೊಂದು ಅತಿಕಠಿಣವಾದ ದುರಾಚಾರವು. ವಿಭೂತಿ ರುದ್ರಾಕ್ಷಿ ಗುಣತ್ರಯಗಳಳಿದುಳಿದ ಶಿವಲಾಂಛನ ಮುದ್ರಾಧರ್ಮಗಳ ಹೊದೆದು, ಜಡೆ ಮಕುಟಗಳ ಬಿಟ್ಟು, ಕೌಪ ಕಟಿಸೂತ್ರವ ಧರಿಸಿ, ನಿಜಮೋಕ್ಷಪದವನರಿಯದೆ, ಅರ್ಥೇಷಣ ಪುತ್ರೇಷಣ ಧಾರೇಷಣ ಈಷಣತ್ರಯದ ಮೋಹಾಭಿರತಿಯಿಂದ, ಅಂತಜ್ರ್ಞಾನ ಬಹಿಕ್ರ್ರಿಯಾಚಾರವ ಮೆರೆದು, ಕಾಲತ್ರಯ ಕಾಮತ್ರಯ ಕರ್ಮತ್ರಯ ದೋಷತ್ರಯ ಪಾಪತ್ರಯ ರೋಗತ್ರಯ ಅಜ್ಞಾನತ್ರಯ ಅನಾಚಾರತ್ರಯ ಮೊದಲಾದ ಭವಪಾಶದಲ್ಲಿ ಮುಳುಗುಪ್ಪಿಯಾಗಿ ಭರಿಸುವಂಥಾದ್ದೆ ಐದನೆಯ ಪಾತಕವು. ಇದಕ್ಕೆ ಹರನಿರೂಪ ಸಾಕ್ಷಿ : ``ತಸ್ಕರಂ ಪರದಾರಂಚ ಅನ್ಯದೈವಮುಪಾಸನಂ | ಅನೃತಂ ಇಂದಕಶ್ಚೆ ೈವ ತಸ್ಯ ಚಾಂಡಾಲವಂಶಜಃ || ಪರಾರ್ಥಹಿಂಸಕಶ್ಚೈವ ಭಕ್ತದ್ರೋಹೀ ಚ ನಿಂದಕಃ | ಪ್ರಾಣಘಾತಕದೇಹಾನಾಂ ತಸ್ಮಾತ್‍ಚಾಂಡಾಲವಂಶಜಃ || ಅಲ್ಪಜೀವೀ ಭವಪ್ರಾಣೀ ಅಲ್ಪಭೋಗನಿರರ್ಥಕಃ | ಅಲ್ಪಾಶ್ರಯಂ ನ ಕರ್ತವ್ಯಂ ಮಹದಾಶ್ರಯಃ || ಅಜ್ಞಾನಾಚ್ಚ ಕೃತಂ ಪಾಪಂ ಸುಜ್ಞಾನಾಚ್ಚ ವಿನಶ್ಯತಿ | ಸುಜ್ಞಾನಾಚ್ಚ ಕೃತಾತ್ ಪಾಪಾತ್ ರೌರವಂ ನರಕಂ ವ್ರಜೇತ್ ||'' ಎಂದುದಾಗಿ, ಪರಿಪೂರ್ಣ ಶ್ರೀಗುರುಮಾರ್ಗಾಚಾರ ನಡೆನುಡಿಯಿಂದಾಚರಿಸಿ, ನಿಜಮುಕ್ತಿಮಂದಿರವ ಸೇರಬೇಕೆಂಬ ಸದ್ಭಕ್ತಮಹೇಶ್ವರರು ಸತ್ತುಚಿತ್ತಾನಂದ ನಿತ್ಯಪರಿಪೂರ್ಣತ್ವವನೈದಿ, ಪರಮಪಾತಕಂಗಳಿಗೆ ಮಹಾಜ್ಞಾನಾಯುಧವ ಹಿಡಿದು, ನಿತ್ಯ ನಿತ್ಯ ಇತರೇತರ ದುಶ್ಚಾಷ್ಟಿ ಬಿಟ್ಟು ಘನಲಿಂಗಾಂಗಸಮರಸಮನೋಲ್ಲಾಸ ಸದ್ಭಕ್ತಿ ಜ್ಞಾನವೈರಾಗ್ಯ ನಿಜನಿಷಾ*ಪರತ್ವಮಂ ಸಾಧಿಸಿ, ತಮ್ಮ ತಾವರಿತವರೆ ಪರಶಿವಯೋಗಾನಂದಭರಿತರೆಂಬೆ ಕಾಣಾ ನಿರವಯಪ್ರಭು ಮಹಾಂತ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ.
--------------
ಮೂರುಸಾವಿರ ಮುಕ್ತಿಮುನಿ
ಶಿವಚಿಂತೆ ಶಿವಜ್ಞಾನವಿಲ್ಲದ ಮನುಜರು- ಸಗಣಕ್ಕೆ ಸಾಸಿರ ಹುಳು, ಹುಟ್ಟವೆ ದೇವಾ ಕಾಡ ಮೃಗವೊಂದಾಗಿರಲಾಗದೆ, ದೇವಾ ಊರ ಮೃಗವೊಂದಾಗಿರಲಾಗದೆ, ಹರನೆ ನಮ್ಮ ಕೂಡಲಸಂಗನ ಶರಣರಿಲ್ಲದ ಊರು, ದೇಶ_ ವನವಾಸ, ನರವಿಂಧ್ಯ ಕಾಣಿರಣ್ಣಾ. 156
--------------
ಬಸವಣ್ಣ
ಮೂರೊಲಿಯ ಬೆಂಕಿಯ ಹಚ್ಚಲೊಲ್ಲದೆ ಊರು ಸುಡದು. ಊರು ಸುಟ್ಟಲ್ಲದೆ ಕೇರಿಯವರು ಸಾಯರು. ಕೇರಿಯವರು ಸತ್ತಲ್ಲದೆ ಪರಿಜನರು ತಿರುಗರು. ಪರಿಜನರು ತಿರುಗಲಲ್ಲದೆ ಶ್ರದ್ಧೆ ನೆಲೆಗೊಳ್ಳದು. ಶ್ರದ್ಧೆ ನೆಲೆಗೊಂಡಲ್ಲದೆ ಗುರುನಿರಂಜನ ಚನ್ನಬಸವಲಿಂಗವನರಿಯಬಾರದು.
--------------
ದೇಶಿಕೇಂದ್ರ ಸಂಗನಬಸವಯ್ಯ
ನಾನೊಂದು ಹಾಳೂರಿಗೆ ಹೋಗುತ್ತಿರಲು, ಆ ಹಾಳೂರ ಹೊಕ್ಕಡೆ, ಅಲ್ಲಿ ನಾಯಿಗಳು ಅಟ್ಟಿಕೊಂಡು ಬಂದವು, ಹುಲಿ ಕರಡಿ ಅಡ್ಡಲಾದವು. ಇವ ಕಂಡು ನಾ ಹೆದರಿಕೊಂಡು ನನ್ನ ಕೈಗೊಂದು ಕಲ್ಲ ತೆಕ್ಕೊಂಡು ನೋಡುತ್ತ ಬರುತ್ತಿರಲು, ಆ ನಾಯಿಗಳು ಓಡಿಹೋದವು. ಹುಲಿ ಕರಡಿಗಳು ಅಲ್ಲಿಯೇ ಬಯಲಾದವು. ಆ ಊರು ನಿರ್ಮಲವಾಯಿತ್ತು. ಆ ನಿರ್ಮಲವಾದ ಊರ ಹೊಕ್ಕು ನೋಡಲು, ಆ ನೋಡುವ ನೋಟವು, ಆ ಊರನಾಳುವ ಅರಸು, ಆ ಊರು ಕೂಡಿ ಒಂದಾದವು. ಆ ಒಂದಾದುದನೆ ನೋಡಿ, ದ್ವಂದ್ವವನೆ ಹರಿದು, ನಿಮ್ಮ ಸಂಗಸುಖದೊಳಗೋಲಾಡಿ ಸುಖಿಯಾದೆನಯ್ಯಾ ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ.
--------------
ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ
ಕಟ್ಟರಸಿಲ್ಲದ ರಾಜ್ಯಕ್ಕೆ ಕಳ್ಳರ ಭಯ, ಒಕ್ಕಲಿಲ್ಲದ ಊರು ಹಾಳು, ಮಕ್ಕಳಿಲ್ಲದ ಮನೆ ಮಸಣವಟ್ಟಿಗೆಯೆಂಬ ಲೋಕದ ದೃಷ್ಟಾಂತದಂತೆ ಮುಕ್ಕಣ್ಣನರುಹಿಲ್ಲದವನ ಹೃದಯ ಕರ್ಕಸದ ವೀಧಿ, ರಕ್ಕಸರ ಹೊಳಲು ನೋಡಾ. ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಇನ್ನಷ್ಟು ... -->